অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಆರೋಗ್ಯವಂತ ತಾಯಿ ಮಗು

ಆರೋಗ್ಯವಂತ ತಾಯಿ ಮಗು

ನಮ್ಮ ದೇಶದಲ್ಲಿ ಒಂದು ವರ್ಷದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಹೆಂಗಸರು ಹೆರಿಗೆ ಸಮಯದಲ್ಲಿ ಸಾಯುತ್ತಿದ್ದಾರೆ. ಸಾಕಷ್ಟು ಪ್ರಮಾಣದಲ್ಲಿ ಗರ್ಭಿಣಿಯರು ಗರ್ಭಪಾತಕ್ಕೆ ಗುರಿಯಾಗುತ್ತಿದ್ದಾರೆ. ತಾಯಂದಿರ ಸಾವಿಗೆ ಹಲವಾರು ಕಾರಣಗಳುಂಟು. ಶೇ. ೯೦ ರಷ್ಟು ಮುಂಜಾಗ್ರತೆಯಿಂದ ತಡೆಗಟ್ಟಬಹುದು. ಅವುಗಳು ರಕ್ತಹೀನತೆ, ರಕ್ತಸ್ರಾವ, ಬಿಸಿಲಿನ ಸೋಂಕು, ಕಷ್ಟಕರ ಹೆರಿಗೆ ಅಸುರಕ್ಷಿತ ಕೃತಕ ಗರ್ಭಪಾತ, ಅನಕ್ಷರತೆ, ಸೇವೆಗಳ ಕೊರತೆ, ಒದಗಿಸಿದ ಸೇವೆಯನ್ನು ಪಡೆಯುವಲ್ಲಿ ನಿರಾಸಕ್ತಿ ಮುಂತಾದವುಗಳು. ಶೇ.೯೦ ರಷ್ಟು ಇಂತಹ ಸಾವುಗಳನ್ನು ಮುಂಜಾಗ್ರತೆಯಿಂದ ತಡೆಗಟ್ಟಬಹುದು. ನಮ್ಮ ದೇಶದಲ್ಲಿ ಒಂದು ವರ್ಷದಲ್ಲಿ ಜೀವಂತ ಜನನದಲ್ಲಿ ಬಹಳಷ್ಟು ಶಿಶುಗಳು ಮರಣ ಹೊಂದುತ್ತಿವೆ. ಇದಕ್ಕೆ ಮುಖ್ಯವಾದ ಕಾರಣಗಳೆಂದರೆ ದಿನ ತುಂಬದ ಹೆರಿಗೆ, ಕಡಿಮೆ ತೂಕದ ಹುಟ್ಟುವ ಮಕ್ಕಳು ಜನನ ಸಮಯದಲ್ಲಿ ಉಸಿರುಗಟ್ಟುವಿಕೆ, ಉಷ್ಣತೆಯನ್ನು ಬೇಗ ಕಳೆದುಕೊಳ್ಳುವುದು, ನವಜಾತ ಧನುರ್ವಾಯು ರೋಗ, ಅತಿಸಾರ ಭೇದಿ, ನ್ಯುಮೋನಿಯಾ, ಲಸಿಕೆಯಿಂದ ತಡೆಗಟ್ಟಬಹುದಾದ ಮಾರಕ ರೋಗಗಳು, ಅಪೌಷ್ಟಿಕತೆ ಮುಂತಾದವುಗಳ ಪಟ್ಟಿ ಮಾಡಬಹುದು.

ಅಪೌಷ್ಟಿಕ ಗರ್ಭಿಣಿಯರಿಗೆ ಕಡಿಮೆ ತೂಕದ ಮಕ್ಕಳು ಮತ್ತು ಅನಾರೋಗ್ಯ ಮಕ್ಕಳು ಜನಿಸುತ್ತವೆ. ಮಾಂಸ ಖಂಡಗಳು ಅಪೂರ್ಣವಾಗಿ ಬೆಳೆದು ದೇಹದಲ್ಲಿ ಕೊಬ್ಬಿನಾಂಶ ತುಂಬಾ ಕಡಿಮೆಯಾಗುವುದರ ಜೊತೆಗೆ ಮೂಳೆಗಳು ಸಂಪೂರ್ಣವಾಗಿ ರೂಪುಗೊಳ್ಳುವುದಿಲ್ಲ. ಗ್ರಂಥಿಗಳು ಸಮರ್ಪಕವಾಗಿ ಕೆಲಸ ಮಾಡದೆ ಉಷ್ಣತೆಯು ಸಮಸ್ಥಿತಿಯಲ್ಲಿರಲು ಸಾಧ್ಯವಾಗದೆ ಏರುಪೇರಾಗುವುದರಿಂದ ಮಗುವು ಹಾಲುಣ್ಣುವುದರಲ್ಲಿ ತುಂಬಾ ಕಷ್ಟ ಪಡುತ್ತದೆ ಹಾಗೂ ಜೀರ್ಣ ಕಾರ್ಯವು ನಿಧಾನಗತಿಯಲ್ಲಿರುವುದು. ಮಗುವು ಬಹಳ ನಿಷ್ಯಕ್ತಿಯಿಂದಿರುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಪ್ರಯುಕ್ತ ಯಾವುದಾದರೊಂದು ಸೋಂಕು ರೋಗಕ್ಕೆ ತುತ್ತಾಗುವ ಸಂಭವಗಳು ಬಹಳ ಹೆಚ್ಚು. ಹೆಚ್ಚಾಗಿ ಮಕ್ಕಳು ಕೆಮ್ಮು, ನೆಗಡಿ ಹಾಗೂ ವೈರಸ್ ಸೋಂಕಿಗೆ ತುತ್ತಾಗುತ್ತವೆ. ಹೀಗಾಗಿ ಮಕ್ಕಳು ಅಪೌಷ್ಟಿಕತೆಗೆ ಗುರಿಯಾಗುತ್ತವೆ.

ಅಪೌಷ್ಟಿಕತೆಯಿಂದ ತಾಯಿಯ ಮರಣ ಸಂಭವವುಂಟು. ಒಬ್ಬ ಗರ್ಭಿಣಿ ಅಪೌಷ್ಟಿಕತೆಯಿಂದಿದ್ದರೆ, ಹೇರಿಗೆಯಿಂದಾಗುವ ದಣಿವು ಮತ್ತು ಒತ್ತಡ ತಡೆದುಕೊಳ್ಳಲು ಕಷ್ಟವಾಗುವುದು. ಹಲವು ಸಂಧರ್ಭಗಳಲ್ಲಿ ಗರ್ಭಪಾತ ಮತ್ತು ನಿರ್ಜೀವ ಮಗು ಜನಿಸುವುದರಿಂದ ತಾಯಿ ದೈಹಿಕವಾಗಿ ನಿತ್ರಾಣವಾಗುತ್ತಾಳೆ. ಗರ್ಭಾವಸ್ಥೆಯಲ್ಲಿ  ರಕ್ತ ಹೀನತೆಯ  ಜೊತೆಗೆ ರಕ್ತಸ್ರಾವ ಉಂಟಾದರೆ, ತಾಯಿಯ ಮತ್ತು ಮಗುವಿನ ಜೀವಕ್ಕೆ ಅಪಾಯ ಒದಗುತ್ತದೆ. ರೋಗ ತಡೆಗಟ್ಟುವ ಶಕ್ತಿ ಕಡಿಮೆ ಇರುವುದರಿಂದ ತಾಯಿಯು ಸೋಂಕು ರೋಗಕ್ಕೆ ಒಳಗಾಗಿ ಕಾಯಿಲೆಯಿಂದ ನರಳುವಂತಾಗುತ್ತದೆ. ಗರ್ಭಿಣಿಯು  ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶ ಹೊಂದಿದ ಆಹಾರ ಸೇವಿಸದಿದ್ದಲ್ಲಿ, ಗರ್ಭಾಶಯದಲ್ಲಿ ಬೆಳೆಯುತ್ತಿರುವ ಮಗುವಿನ ಪೋಷಣೆ ಸರಿಯಾದ ರೀತಿಯಲ್ಲಾಗುವುದಿಲ್ಲ. ಇಂತಹ ಸಂಧರ್ಭಗಳಲ್ಲಿ ಮಗುವು ತನಗೆ ಬೇಕಾದ ಪೌಷ್ಟಿಕಾಂಶವನ್ನು ತಾಯಿಯ ದೇಹದಿಂದ ಪಡೆದುಕೊಳ್ಳುತ್ತದೆ. ಒಂದು ವೇಳೆ ತಾಯಿಯೇ ಅಪೌಷ್ಟಿಕತೆ ಹೊಂದಿದ್ದರೆ, ಗರ್ಭಾಶಯದಲ್ಲಿ ಭ್ರೂಣಕ್ಕೆ ಬೇಕಾಗುವ ಪೌಷ್ಟಿಕಾಂಶ ತಾಯಿಯ ದೇಹದಲ್ಲಿ ಇರುವುದಿಲ್ಲ. ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮಗಳನ್ನು ಬೀರುತ್ತವೆ. ತಾಯಿ ನಿತ್ರಾಣದಿಂದ ಬಳಲುತ್ತಾಳೆ. ಕಬ್ಬಿನಾಂಶದ ಕೊರತೆಯಿಂದ ರಕ್ತಹೀನತೆ ಉಂಟಾದರೆ ಕ್ಯಾಲ್ಸಿಯಂ ಲವನಾಂಶದ ಕೊರತೆಯಿಂದ ಮೂಳೆಗಳ ಬೆಳವಣಿಗೆಯಲ್ಲಿ ಕುಂಠಿತಗೊಳ್ಳುವುದು ಹಾಗೂ 'ಬಿ' ಅನ್ನಾಂಗದ ಕೊರತೆಯಿಂದ ಬಾಯಿ ಹುಣ್ಣು ಉಂಟಾಗುವುದು. ಅಪೌಷ್ಟಿಕತೆಗೆ ಹಲವಾರು ಕಾರಣಗಳಲ್ಲಿ ಆಹಾರದ ಲಭ್ಯತೆ ಇಲ್ಲದಿರುವಿಕೆಯು ಒಂದು. ಅತ್ಯಂತ ಬಡ ಕುಟುಂಬದ ಗರ್ಭಿಣಿಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಲಭ್ಯತೆ ಇಲ್ಲದಿರುವುದರಿಂದ ಅಪೌಷ್ಟಿಕತೆಗೆ ಗುರಿಯಾಗಬೇಕಾಗುವ ಪ್ರಸಂಗ ಒದಗುವುದುಂಟು. ಇಂತಹ ಸಂಧರ್ಭಗಳಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಶಿಕ್ಷಣ ನೀಡುವುದರ ಜೊತೆಗೆ ಬೇರೆ ಮೂಲಗಳಿಂದ ಆಹಾರ ಒದಗಿಸದೆ ಅನ್ಯ ಮಾರ್ಗವಿಲ್ಲ.

ಸಮತೋಲನ ಆಹಾರದ ಬಗ್ಗೆ ಹಾಗೂ ಪೌಷ್ಟಿಕಾಂಶಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದರಿಂದ ಅಪೌಷ್ಟಿಕತೆಗೆ ಗುರಿಯಾಗಬೇಕಾಗುವುದು. ಆದ್ದರಿಂದ ಗರ್ಭಿಣಿಯರಿಗೆ ಸಮತೋಲನ ಆಹಾರದ ಬಗ್ಗೆ ಹೆಚ್ಚಿನ ತಿಳುವಳಿಕೆ ಅವಶ್ಯಕ. ಒಬ್ಬ ಭಾರತೀಯ hennu ಪ್ರತಿ ದಿನ ಸರಾಸರಿ ೧೫೦೦ ಕ್ಯಾಲೋರಿ ಶಕ್ತಿಯುಳ್ಳ ಆಹಾರ ಸೇವನೆ ಮಾಡುತ್ತಾಳೆ. ಆದರೆ ಅವಳಿಗೆ ಬೇಕಾಗಿರುವ ಆಹಾರದ ಪ್ರಮಾಣವು ೨೫೦೦ ಕ್ಯಾಲೋರಿ ಶಕ್ತಿಯುಳ್ಳ ಆಹಾರ. ಇದರ ಜೊತೆಗೆ ಇತರೆ ಜೀವಸತ್ವಗಳು ಹಾಗೂ ಲವನಾಂಶಗಳು ಬೇಕಾಗುತ್ತವೆ ಮತ್ತು ಹಲವು ಆಹಾರದ ಬಹಿಷ್ಕಾರದಿಂದ ಅಪೌಷ್ಟಿಕತೆ ಉಂಟಾಗುವುದು. ಇಂಥ ಆಹಾರ ಬಹಿಷ್ಕಾರಗಳಿಂದ ಸಮತೋಲನ ಆಹಾರದ ಲಭ್ಯತೆಯನ್ನು ತಡೆಗಟ್ಟಿದನ್ತಾಗುವುದು. ಇದಕ್ಕೆ ಕಾರಣ, ಆಹಾರದ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ತಪ್ಪು ಕಲ್ಪನೆಗೆ ಒಳಗಾಗಿ ಅವುಗಳನ್ನು ಸ್ವೀಕರಿಸದೆ ತಿರಸ್ಕರಿಸುವುದುಂಟು. ಉದಾಹರಣೆಗೆ ಕೋಳಿಮೊಟ್ಟೆ, ಪರಂಗಿ ಹಣ್ಣು, ಇವುಗಳು ಉಷ್ಣ ಪದಾರ್ಥಗಳೆಂದು ಅವುಗಳನ್ನು ಸೇವಿಸಿದಲ್ಲಿ ಗರ್ಭಪಾತವಾಗುವುದೆಂದು ತಪ್ಪು ಕಲ್ಪನೆ ಮನೆ ಮಾಡಿಕೊಂಡಿದೆ. ಈ ಕಲ್ಪನೆಗಳಿಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಆದುದರಿಂದ ಒಂದು ವಿಷಯವನ್ನು ನಂಬುವುದಾಗಲಿ ಅಥವಾ ಬಿಡುವುದಾಗಲಿ, ಮೊದಲು ಅದರ ಬಗ್ಗೆ ವೈಜ್ಞಾನಿಕವಾಗಿ ಚಿಂತಿಸುವುದು ಅತಿ ಮುಖ್ಯ. ಮೊಟ್ಟೆಗಳಲ್ಲಿ ಹಾಗೂ ಮಾಂಸಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್ ಗಳಿದ್ದರೆ ಪರಂಗಿ ಹಣ್ಣಿನಲ್ಲಿ 'ಎ' ಜೀವಸತ್ವ ಹೇರಳ ಪ್ರಮಾಣದಲ್ಲಿದೆ. ಬಾಳೆ ಹಣ್ಣಿನ ಗಿಡವು ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಹೂ ಬಿಟ್ಟು ಒಂದು ಗೊನೆ ಬಿಡುವುದರಿಂದ ಬಾಳೆಹಣ್ಣನ್ನು ಗರ್ಭಿಣಿ ಸೇವಿಸಿದರೆ ಒಂದೇ ಒಂದು ಮಗು ಹುಟ್ಟುವುದೆಂಬ ಅಪನಂಬಿಕೆ ಜನರಲ್ಲಿ ಮನೆ ಮಾಡಿಕೊಂಡಿದೆ. ಇದು ಕೇವಲ ಮೂಡನಂಬಿಕೆ. ಆದರೆ ಬಾಳೆ ಹಣ್ಣಿನಲ್ಲಿ ಕ್ಯಾಲ್ಷಿಯಂ ಮತ್ತು ಕಬ್ಬಿಣ ಲವನಾಂಶಗಳು ಹೇರಳ ಪ್ರಮಾಣದಲ್ಲಿರುವುದರಿಂದ ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರಿಗೆ ಈ ಹಣ್ಣಿನ ಸೇವನೆಯು ಅತ್ಯವಶ್ಯಕ. ಹಲವು ಹಣ್ಣುಗಳು ಉಷ್ಣವಾದವುಗಳೆಂದು ವಿಂಗಡಿಸಿದರೆ ಮತ್ತೆ ಕೆಲವು ಹಣ್ಣುಗಳನ್ನು ಶೀತಗಳೆಂದು ವಿಂಗಡಿಸುವುದು ಅವೈಜ್ಞಾನಿಕ. ಉದಾಹರಣೆಗೆ ವಿಟಮಿನ್ 'ಎ' ಅನ್ನಾಂಗ ಹೇರಳವಾಗಿ ಒಳಗೊಂಡ ಹಲಸಿನ ಹಣ್ಣು ಹಾಗೂ ಕುಮ್ಬಳಕಾಯಿಗಳನ್ನು ಉಷ್ಣ ಪದಾರ್ಥಗಳೆಂದು ತಿಳಿದು ಗರ್ಭಿಣಿಯರು ಈ ಎರಡೂ ಹಣ್ಣುಗಳನ್ನು ಸೇವಿಸುವುದಿಲ್ಲ.

ಗರ್ಭಿಣಿಯರಿಗೆ ಸಮತೋಲ ಆಹಾರದ ಅವಶ್ಯಕತೆ ತುಂಬಾ ಇದೆ. ಗರ್ಭಿಣಿಯರು ಸಕಾಲಕ್ಕೆ ಬೇಕಾದಷ್ಟು ಪೌಷ್ಟಿಕ ಆಹಾರ ಸೇವಿಸದೇ ಅಲ್ಪ ಆಹಾರ ಸೇವಿಸುವುದರಿಂದ ಹುಟ್ಟುವ ಮಗು ಗಾತ್ರದಲ್ಲಿ ಚಿಕ್ಕದಿದ್ದು, ಹೆರಿಗೆ ಸುಲಭವಾಗುವುದೆಂಬ ಅಪನಂಬಿಕೆ ಗ್ರಾಮೀಣ ಮಹಿಳೆಯರಲ್ಲಿ ಬೇರೂರಿದೆ. ಇದು ತಪ್ಪು ಕಲ್ಪನೆ. ಪ್ರತಿ ತಾಯಿಯು ತಮಗೆ ಹುಟ್ಟುವ ಮಗುವು ಮುದ್ದಾಗಿದ್ದು ಆರೋಗ್ಯದಿಂದಿರಬೇಕೆಂಬ ಕನಸು ಕಾಣುತ್ತಾಳೆ. ಈ ಕನಸು ನನಸಾಗಬೇಕಾದರೆ, ಅವಳು ದಿನವೂ ಸಮತೋಲನ ಆಹಾರ ಸೇವಿಸಬೇಕು. ಒಂದು ವೇಳೆ ಈ ರೀತಿ ಮಾಡದಿದ್ದಲ್ಲಿ ಗರ್ಭದಲ್ಲಿ ಬೆಳೆಯುತ್ತಿರುವ ಮಗು ತನಗೆ ಬೇಕಾಗುವ ಪೋಷಕಾಂಶಗಳನ್ನು ತನ್ನ ತಾಯಿಯ ದೇಹದಿಂದ ಪಡೆದುಕೊಳ್ಳುವುದರಿಂದ ಅವಳು ಹಲವಾರು ವೈದ್ಯಕೀಯ ಸಮಸ್ಯೆಗಳಿಗೆ ಗುರಿಯಾಗಬೇಕಾಗುವುದು. ಆದುದರಿಂದ, ತಾಯಿಯು ಹೆಚ್ಚು ಆಹಾರ ಸೇವಿಸುವುದರ ಜೊತೆಗೆ ಅದು ವಿವಿಧ ತರಹದ ಆಹಾರವಾಗಿರಬೇಕು.ಗರ್ಭಿಣಿ ತೆಗೆದುಕೊಳ್ಳುವ ಆಹಾರದಲ್ಲಿ ದ್ವಿದಳ ಧಾನ್ಯ ಹಾಗೂ ಅವುಗಳ ಉತ್ಪನ್ನಗಳು, ಎಲ್ಲಾ ಋತುಗಳ ತರಕಾರಿಗಳು, ಹಣ್ಣು ಹಂಪಲುಗಳು ಮತ್ತು ಸೊಪ್ಪಿನ ತರಕಾರಿಗಳು ಸೇರಿರಬೇಕು. ಪ್ರತಿ ದಿನ ಒಂದು ಮೊಟ್ಟೆ ನೀಡಿದಲ್ಲಿ ಅತ್ಯುತ್ತಮ.ರಾಗಿಯಲ್ಲಿ ಕ್ಯಾಲ್ಷಿಯಂ, ಖನಿಜ ವಸ್ತು ಹೆಚ್ಚಿಗೆ ಇರುವುದು. ಗರ್ಭಿಣಿಯರಿಗೆ ಊಟದ ಜೊತೆಗೆ ಕಬ್ಬಿಣ ಮತ್ತು ಕ್ಯಾಲ್ಷಿಯಂ ಮಾತ್ರೆಗಳನ್ನು ಸೇವಿಸುವಂತೆ ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಗರ್ಭಾವಸ್ಥೆಯಲ್ಲಿದ್ದಾಗ ಸ್ವೀಕರಿಸಬೇಕಾದ ಸಮತೋಲನ ಆಹಾರದ ಪ್ರಮಾಣವು ಈ ರೀತಿ ಇರಬೇಕು. ಆಹಾರ ಧಾನ್ಯಗಳು ೪೪೦ ಗ್ರಾಂ, ದ್ವಿದಳ ಧಾನ್ಯಗಳು ೫೫ ಗ್ರಾಂ, ಸೊಪ್ಪು ೧೦೦ ಗ್ರಾಂ, ಇತರೆ ತರಕಾರಿಗಳು ೪೦ ಗ್ರಾಂ, ಹಾಲು ೨೦೦ಮಿ.ಲೀ. ಎಣ್ಣೆ ಮತ್ತು ಮೇದಸ್ಸು ೨೦ ಗ್ರಾಂ, ಸಕ್ಕರೆ ಬೆಲ್ಲ ೩೦ ಗ್ರಾಂ, ಗರ್ಭಿಣಿಯರಿಗೆ ವಿಶ್ರಾಂತಿ ಮತ್ತು ವಿಶಿಷ್ಟ ಪೌಷ್ಟಿಕ ಆಹಾರ ನೀಡುವ ಹಲವು ಉಪಯುಕ್ತ ಸಾಂಪ್ರದಾಯಿಕ ನಂಬಿಕೆಗಳನ್ನು ಪ್ರೋತ್ಸಾಹಿಸುವುದು ಒಳ್ಳೆಯದು. ಮಲಬದ್ದತೆಗೆ ಅವಕಾಶ ನೀಡಕೂಡದು. ಊಟದ ನಂತರ ವಿಶ್ರಾಂತಿ ಪಡೆಯಬೇಕು.

ಗರ್ಭಿಣಿ ಆರೋಗ್ಯದಿಂದಿದ್ದಾಳೆಯೋ ಅಥವಾ ಇಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಲು ನಿಯಮಿತವಾಗಿ ಓಕ, ರಕ್ತದ ಒತ್ತಡ ಮತ್ತು ರಕ್ತದ ಪ್ರಮಾಣವನ್ನು ಕಂಡುಕೊಳ್ಳಬೇಕು. ಒಬ್ಬ ಆರೋಗ್ಯವಂತ ಮಹಿಳೆಯ ತೂಕ ಗರ್ಭಾವಸ್ಥೆಯಲ್ಲಿ ಸುಮಾರು ೧೦ ರಿಂದ ೧೨ ಕೆ.ಜಿ.ಯಷ್ಟು ಹೆಚ್ಚಾಗುವುದು. ತೂಕದಲ್ಲಿ ಏರಿಕೆಯ ಪ್ರಮಾಣದಲ್ಲಿ ಆಹಾರ ಸ್ವೀಕರಿಸುತ್ತಾಳೆಂದೂ ಹಾಗೂ ಆರೋಗ್ಯವನ್ತಲಿದ್ದಾಳೆಂದೂಸೂಚಿಸುತ್ತದೆ.ಗರ್ಭಾವಸ್ಥೆಯಲ್ಲಿ ಕಬ್ಬಿಣ ಮತ್ತು ಇತರೆ ಲವನಾಂಶಗಳು ದಿನನಿತ್ಯದ ಆಹಾರದ ಮೂಲಕ ಒದಗಿಸಲಿಕ್ಕಾಗದೇಇರುವುದರಿಂದ, ಲವನಾಮ್ಷಗಳ ಮಾತ್ರೆಗಳನ್ನು ಸ್ವೀಕರಿಸುವುದು ಅತ್ಯಂತ ಸಮಕ್ಷಮ. ಆರೋಗ್ಯವಂತ ಒಬ್ಬ ಸಾಮಾನ್ಯ ಮನುಷ್ಯನ ರಕ್ತದ ಒತ್ತಡ ೧೦೦-೭೦ ರಿಂದ ೧೪೦-೯೦ ರಷ್ಟು ಇರುವುದು. ಗರ್ಭಾವಸ್ಥೆಯ ಅವಧಿಯಲ್ಲಿ ರಕ್ತದ ಒತ್ತಡವೂ ಹೆಚ್ಚುವುದರಿಂದ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಸ್ವೀಕರಿಸಬೇಕು. ಹಲವರಲ್ಲಿ ರಕ್ತದ ಒತ್ತಡ ಕಡಿಮೆಯಾಗುತ್ತಿರುವುದರಿಂದ, ಒಳ್ಳೆಯ ಪೌಷ್ಟಿಕ ಆಹಾರ ಸ್ವೀಕರಿಸುವಂತೆ ತಿಳಿಹೇಳಬೇಕು. ಆದುದರಿಂದ ಕ್ರಮಬದ್ದವಾಗಿ ವೈದ್ಯರಿಗೆ ಭೇಟಿ ನೀಡುವುದರ ಜೊತೆಗೆ ರಕ್ತದ ಒತ್ತಡ, ರಕ್ತದ ಪ್ರಮಾಣ ಹಾಗೂ ತೂಕಗಳ ಪರೀಕ್ಷೆಗಳು ಅತ್ಯಂತ ಅವಶ್ಯವಾಗಿದೆ.

ಮೂಲ:ಕುಟುಂಬ ವಾರ್ತೆ

ಕೊನೆಯ ಮಾರ್ಪಾಟು : 6/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate