ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಅತ್ಯುತ್ತಮ ಶೈಕ್ಷಣಿಕ ರೂಢಿಗಳು / ಗೀತಾ / ಕೇಜರಿ ಮರ ಮತ್ತು ಬಿಶ್ನಾಯ್ ಜನಾಂಗ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೇಜರಿ ಮರ ಮತ್ತು ಬಿಶ್ನಾಯ್ ಜನಾಂಗ

ಕೇಜರಿ ಮರ ಮತ್ತು ಬಿಶ್ನಾಯ್ ಜನಾಂಗ ಕುರಿತು

ಕೇಜರಿ ಎನ್ನುವ ಮರ ಅತ್ಯಂತ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯಲು ಅತಿ ಸೂಕ್ತ. ಇದು  ಜಾನುವಾರಿಗೆ ಮೇವಿಗೆ ಬರುತ್ತದೆ. ಹಣ್ಣು ಕೊಡುತ್ತದೆ. ಮರಮುಟ್ಟನ್ನು ಒದಗಿಸುತ್ತದೆ. ಈ ಪುಟ್ಟ ಮರದ ಹಿಂದೆ ಒಂದು ದೊಡ್ಡ ತ್ಯಾಗ ಬಲಿದಾನದ ಕತೆ ಇದೆ.

ಭಾರತದ ಅನೇಕ ರಾಜ್ಯಗಳಲ್ಲಿ, ವಿಶೇಷವಾಗಿ ರಾಜಸ್ತಾನದಲ್ಲಿ ಕಂಡು ಬರುವ ಬಿಶ್ನಾಯ್ ಜನಾಂಗದವರು ಪ್ರಕೃತಿ ಆರಾಧಕರು.ಶ್ರೀ ಜುಂಬೆಶ್ವರ್ ಭಗವಾನ್ ಎಂಬ ಸಮಾಜ ಸುಧಾರಕರು ೪೦೦ ವರ್ಷಗಳ ಹಿಂದೆ ಸ್ತಾಪಿಸಿದ ಧರ್ಮ ಬಿಶ್ನಾಯ್ ಧರ್ಮ. ಕೇವಲ ಯಾಂತ್ರಿಕ ಧರ್ಮಾಚರನೆಗಳಿಂದ ಏನೂ ಪ್ರಯೋಜನವಿಲ್ಲ ಎಂದು ಬಲವಾಗಿ ನಂಬಿದ್ದ ಭಗವಾನರು, ಮರುಭೂಮಿ ಪ್ರದೇಶದ ಆಳ ಅಧ್ಯಯನದಿಂದ ಮರಗಳ ಮಹತ್ವವನ್ನು ಅರಿತಿದ್ದರು. ಹೀಗಾಗಿ ಧರ್ಮಾಚರಣೆಗಾಗಿ ಪರಿಸರ ಸಂರಕ್ಷಣೆಯನ್ನು ಹೇಳಿದ ಮೊದಲ ಧರ್ಮ ಇವರು ಭೋಧಿಸಿದ ಬಿಶ್ನಾಯ್ ಧರ್ಮ.

ರಾಜಸ್ತಾನದ ಜೋಧಪುರ್ ಸಂಸ್ಥಾನಕ್ಕೆ ಸೇರಿದ ಖೇಜರಾಲಿ  ಎಂಬ ಗ್ರಾಮ ಬಿಶ್ನಾಯ್ ಗ್ರಾಮ. ೧೭೩೪ ನೇ ಇಸವಿ. ಇಂದಿನಂತೆಯೇ ಆಗಲೂ ಅತಿ ಕಡಿಮೆ ಮಳೆ. ಕೇವಲ ೪ ತಿಂಗಳಷ್ಟೇ ಬೇಸಾಯ. ತಾವು ಬೆಳೆದ ಧಾನ್ಯದಲ್ಲಿ ಸಾಕು ಪ್ರಾಣಿಗಳಿಗೂ ಪಾಲು. ಪ್ರಾಣಿಗಳ ಮೇಲೆ ಇವರ ಪ್ರೀತಿ ಎಷ್ಟು ಉತ್ಕಟವಾದದ್ದೆಂದರೆ, ತಾಯಿಲ್ಲದ ಕೃಷ್ಣ ಮೃಗದ ಮರಿಗಳನ್ನು ಬಿಶ್ನಾಯ್ ಹೆಂಗಸರು ತಮ್ಮ ಎದೆಹಾಲೂಡಿ ಬೆಳೆಸುತ್ತಾರಂತೆ.!

ಬಿಶ್ನಾಯ್ ಜನರ ಬದುಕಿನ ಕೇಂದ್ರ ಬಿಂದು ಕೇಜರಿ ಮರ (prosopis cineraria ).  ಆ ಬರಡು ಪ್ರದೇಶದಲ್ಲಿ ಸ್ವಲ್ಪ ಎತ್ತರಕ್ಕೆ ಬೆಳೆದು ಸ್ವಲ್ಪ ನೆರಳು ತಂಪು, ಸ್ವಲ್ಪ ಮೇವು, ಸ್ವಲ್ಪ ಮರಮುಟ್ಟು ಕೊಡುವ ಏಕೈಕ ಮರ ಇದು. ಅಂದು ೧೭೩೪ ರ ಇಸವಿ ಸೆಪ್ಟಂಬರ್ ತಿಂಗಳ ಒಂದು ಬಿಸಿ ಮುಂಜಾವು. ಖೆಜರಾಲ ಗ್ರಾಮದ ಬಿಶ್ನಾಯ್ ಮಹಿಳೆ ಮೂರು ಹೆಣ್ಣು ಮಕ್ಕಳ ತಾಯಿ ಅಮೃತಾ ದೇವಿ ಮೊಸರು ಕಡೆಯುತ್ತಿದ್ದಳು. ಆಕೆಯ ಗಂಡ ಹೊಲಕ್ಕೆ ಹೋಗಿದ್ದರು.ಇದ್ದಕ್ಕಿದ್ದಂತೆ ಅವಳಿಗೆ ಮರ ಕದಿಯುವ ಸಪ್ಪಳ ಕೇಳಿಸಿತು. ಬಿಶ್ನಾಯ್ ಗ್ರಾಮದಲ್ಲಿ ಮರ ಕದಿಯುವ ಸದ್ದೇ?! (ಬಿಶ್ನಾಯ್ ಧರ್ಮದ ಪ್ರಕಾರ ಜೀವಂತ ಮರ ಕಡಿಯುವುದು ಸಂಪೂರ್ಣ ನಿಷೇಧ), ಅಮೃತಾದೇವಿ ತನ್ನ ಕಿವಿ ನಂಬದಾದಳು. ಹೊರಗೆ ಬಂದು ನೋಡುತ್ತಾಳೆ, ಜೋಧಪುರ್ ಮಹಾರಾಜನ ಆಸ್ಥಾನದ ಹಿರಿಯ ಅಧಿಕಾರಿ ಗಿರಿಧಾರಿದಾಸ್ ಭಂಡಾರಿ ತನ್ನ ಜನರೊಂದಿಗೆ ಕುದುರೆ ಏರಿ ಬಂದು ಮರ ಕಡಿಯಲು ಆಜ್ಞಾಪಿಸುತ್ತಿದ್ದಾನೆ. ಅವನ ಸುತ್ತಲೂ ಗ್ರಾಮದ ಅನೇಕ ಹಿರಿಯರು ಮುತ್ತಿಕೊಂಡು ಮರ ಕಡಿಯದಿರೆಂದು ಬೇಡಿಕೊಳ್ಳುತ್ತಿದ್ದಾರೆ. ಸುಣ್ಣ ಸುಡಲು ಮರ ಬೇಕಾಗಿದೆ, ಇದು ರಾಜಾಜ್ಞೆ, ಯಾರೂ ತಡೆಯುವಂತಿಲ್ಲ ಎಂದು ಹೇಳುತ್ತಾ ಗಿರಿಧಾರಿದಾಸ್ ತನ್ನ ಕೆಲಸ ಮುಂದುವರೆಸಿದ್ದಾನೆ.ತಮ್ಮ ಏಕೈಕ ಜೀವ ಸೆಲೆಯಾದ ಕೇಜರಿ ಮರಗಳು ಉರುಳಿ ಬೀಳುತ್ತಿರುವುದನ್ನು ಅಮೃತಾಬಾಯಿಗೆ ಸಹಿಸಲಾಗುವುದಿಲ್ಲ. ದುಃಖ ಉಮ್ಮಳಿಸಿ ಬರುತ್ತದೆ. ಏನೂ ಮಾಡಲು ತೋಚದೆ ಓದಿ ಹೋಗಿ ಕಡಿಯುತ್ತಿದ್ದ ಮರವನ್ನು ಗಟ್ಟಿಯಾಗಿ ಅಪ್ಪಿಕೊಳ್ಳುತ್ತಾಳೆ. ''ಮರ ಕಡಿಯುವ ಮುನ್ನ ನನ್ನ ತಲೆ ಕಡಿಯಿರಿ " ಎಂದು ಚೀರುತ್ತಾಳೆ. ಮರಕಟುಕರು ಏನೂ ಮಾಡುವದೆಂದು ತಿಳಿಯದೆ ಸುಮ್ಮನೆ ನಿಲ್ಲುತ್ತಾರೆ.

ರಾಜಾಜ್ಞೆ ಮೀರುವ ಭಯ, ಕೆಲಸಕ್ಕೆ ಅಡ್ಡಿ ಮಾಡುತ್ತಿರುವ 'ಯಕಶ್ಚಿತ್' ಹೆಂಗಸಿನ ಮೇಲಿನ ಸಿಟ್ಟಿನಿಂದ ಮೈಮರೆತ ಗಿರಿಧಾರಿದಾಸ್ ಅವಳ ತಲೆ ಕಡಿಯುವಂತೆ ಆಜ್ಞಾಪಿಸುತ್ತಾನೆ.ಅಮೃತಾಬಾಯಿಯ ತಲೆ ಉರುಳುತ್ತದೆ. ಅವಳ ತ್ಯಾಗದಿಂದ ಪ್ರೇರಿತರಾದ ಅವಳ ಮೂರು ಹೆಣ್ಣು ಮಕ್ಕಳು ಆಶಿ, ರತ್ನ ಮತ್ತು ಬಾಗೂ ಒಬ್ಬರ ನಂತರ ಒಬ್ಬರಂತೆ ಮರ ಅಪ್ಪಿಕೊಂಡು ಕಟುಕರ ಕೊಡಲಿಗೆ ತಲೆ ಕೊಡುತ್ತಾರೆ. ಬಾವೋದ್ರೆಕದಿಂದ ಮೈಮರೆತ ಖೆಜರಾಲದ ಬಿಶ್ನಾಯ್ ಪುರುಷರು, ಮಹಿಳೆಯರು, ಮಕ್ಕಳು ಒಬ್ಬರ ನಂತರ ಒಬ್ಬರಂತೆ ಮರ ಅಪ್ಪಿಕೊಳ್ಳುತ್ತಾ ತಲೆ ಕಳೆದುಕೊಳ್ಳುತ್ತಾರೆ. ಬಿದ್ದ ಪ್ರತಿಯೊಂದು ಕೇಜರಿ ಮರಕ್ಕೆ ಒಂದು ತಲೆ ಉರುಳುತ್ತಾ ಕೊನೆಗೆ ಸರಿಯಾರಿ ೩೬೩ ಜನರ ಬಲಿದಾನವಾಗುತ್ತದೆ.

ಈ ಹತ್ಯಾಕಾಂಡದ ಸಂಗತಿ ಜೋಧಪುರ್ ಮಹಾರಾಜನ ಕಿವಿ ತಲುಪುತ್ತದೆ. ತಕ್ಷಣ ಈ ಘೋರ ಕೃತ್ಯ ನಿಲ್ಲಿಸುವಂತೆ ಆಜ್ಞಾಪಿಸಿ ತನ್ನ ಅಧಿಕಾರಿ ಮಾಡಿದ ತಪ್ಪಿಗೆ ಖೆಜರಾಲಿ ಜನರ ಕ್ಷಮೆಯಾಚಿಸುತ್ತಾನೆ. ಆ ವೇಳೆಗೆ  ದಂಗೆ ಎದ್ದ ಬಿಶ್ನಾಯ್ ಜನ, ತಮ್ಮ ಧರ್ಮ ಪರಿಪಾಲನೆಗೆ ಅಡ್ಡಿ ಮಾಡುವದಾದರೆ ಇಡೀ ಜನಾಂಗವೇ ದೇಶ ಬಿಟ್ಟು ಹೋಗುವುದಾಗಿ ಬೆದರಿಕೆ ಹಾಕಿದರು.ನೊಂದ ರಾಜ, ಇನ್ನು ಮುಂದೆ ಜೋದಪುರ್ ಸಾಮ್ರಾಜ್ಯಕ್ಕೆ ಸೇರಿದ ಯಾವುದೇ ಬಿಶ್ನಾಯ್ ಗ್ರಾಮದಲ್ಲಿ ಮರಗಳನ್ನು ಕಡಿಯುವದಾಗಲಿ, ಪ್ರಾಣಿಗಳ ಬೇಟೆ ಆಡುವುದಾಗಲಿ ಸಂಪೂರ್ಣ ನಿಷೇಧಿಸಿರುವುದಾಗಿ ತಿಳಿಸುವ ತಾಮ್ರದ ಫಲಕದ ಶಾಸನ ಬರೆಯಿಸಿಕೊಡುತ್ತಾನೆ. ಇಂದಿಗೂ ಆ ಗ್ರಾಮದಲ್ಲಿ ಈ ಶ್ರೇಷ್ಠ ತ್ಯಾಗ-ಬಲಿದಾನದ ಸ್ಮಾರಕಾರ್ಥ ದೇವಾಲಯ ಮತ್ತು ಪವಿತ್ರವನಗಳಿವೆ .

ಪರಿಸರ ಸಂರಕ್ಷಣೆಯಲ್ಲಿ ಇದಕ್ಕೆ ಸರಿಸಾಟಿಯಾದ ಸಂಗತಿಗಳು ನಮ್ಮ ಚರಿತ್ರೆಯಲ್ಲೇ ಇಲ್ಲ. ಇಲ್ಲಿಂದಲೇ ಪ್ರೇರಿತವಾದದ್ದು ಚರಿತ್ರಾರ್ಹ "ಚಿಪ್ಕೋ ಚಳುವಳಿ".

ಮೂಲ: ಸಹಜ ಸಾಗುವಳಿ

2.97402597403
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top