ಕರುಳು ಹುಳುಗಳು ಅನಾರೋಗ್ಯ ಉಂಟುಮಾಡುತ್ತವೆ. ಈ ಹುಳುಗಳು ಮಲದಲ್ಲಿ ಹೊರಗೆ ಹೋಗುತ್ತವೆ. ಕೆಲವು ಬಾರಿ ವಾಂತಿಯಲ್ಲೂ ಹೊರಹೋಗುತ್ತವೆ. ಕರುಳು ಹುಳುಗಳ ಸಮಸ್ಯೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ ಹಾಗೂ ರಕ್ತ ಹೀನತೆಗೆ ಒಂದು ಮುಖ್ಯ ಕಾರಣ.
ಉದಾ: ಕೊಕ್ಕೆ ಹುಳು, ಜಂತು ಹುಳು, ಸೂಜಿ ಹುಳು, ಲಾಡಿ ಹುಳು.
ಇವುಗಳು ವ್ಯಕ್ತಿಯಿಂದ ವ್ಯಕ್ತಿಗೆ ಕರುಳಿನಲ್ಲಿಟ್ಟ ಮೊಟ್ಟೆಗಳ ಮೂಲಕ ಹರಡುತ್ತವೆ. ಮಲದ ಮೂಲಕ ಮೊಟ್ಟೆಗಳು ಹೊರಬಂದು ಆಹಾರ ಅಥವಾ ನೀರು ಕಲುಷಿತಗೊಂಡು ಬೇರೆಯವರಿಗೆ ಹರಡುವ ಸಾಧ್ಯತೆಯುಂಟು.
ಕೊಕ್ಕೆ ಹುಳುವಿನ ಮೊಟ್ಟೆಯು ನೆಲದಲ್ಲಿ ಒಡೆಯಲ್ಪಟ್ಟು ಪ್ರಥಮ ಹಂತದ ಹುಳು ಹೊರಗೆ ಬರುತ್ತದೆ. ಈ ಎಳೆ ಹುಳು ಮನುಷ್ಯನ ಪಾದದಡಿಯ ಚರ್ಮ ಮತ್ತು ಕಲ್ಮಶಗೊಂಡ ನೆಲದಲ್ಲಿ ಕೆಲಸ ಮಾಡುವ ಕೈಗಳ ಮೂಲಕ ಶರೀರವನ್ನು ಸೇರುತ್ತವೆ. ಈ ಹುಳುವನ್ನು ಬರೀ ಕಣ್ಣಿನಿಂದ ನೋಡಲು ಸಾದ್ಯವಿಲ್ಲ. ಕೊಕ್ಕೇ ಹುಳುಗಳು ಕರುಳಿನಲ್ಲಿ ರಕ್ತ ಹೀರಿ ಜೀವಿಸುತ್ತವೆ ಹಾಗೂ ರಕ್ತಹೀನತೆಯನ್ನು ಉಂಟುಮಾಡುತ್ತವೆ.
ಜಂತು ಹುಳುಗಳು ಉದ್ದವಾಗಿದ್ದು ಕರುಳಿನಲ್ಲಿ ಹೆಚ್ಚು ಸ್ಥಾನವನ್ನು ಆಕ್ರಮಿಸುತ್ತದೆ, ಆಹಾರ ರಸ ಹೀರುವಿಕೆಗೆ ಅಡ್ಡಿ ಉಂಟುಮಾಡುತ್ತದೆ, ಆಹಾರ ಘಟಕಗಳ ಕೊರತೆಯನ್ನುಂಟು ಮಾಡುತ್ತದೆ. ಜಂತು ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ ಕರುಳಿನ ತಡೆ ಉಂಟುಮಾಡುತ್ತವೆ. ಕರುಳಿನ ತಡೆಗೆ ಚಿಕಿತ್ಸೆಯೆಂದರೆ ಶಸ್ತ್ರ ಚಿಕಿತ್ಸೆ.
ಸೂಜಿ ಹುಳುಗಳು ರಾತ್ರಿ ಸಮಯದಲ್ಲಿ ಗುದ ದ್ವಾರದಿಂದ ಹೊರಬಂದು, ಗುದದಲ್ಲಿ ತುರಿಕೆಯನ್ನುಂಟು ಮಾಡುತ್ತವೆ. ತುರಿಕೆಯಿಂದ ನಿದ್ರೆಗೆ ಭಂಗ ಬರುತ್ತದೆ.
ಲಾಡಿ ಹುಳುಗಳು ತುಂಬಾ ಉದ್ದವಾಗಿರುತ್ತವೆ (೨೦-೨೫ ಅಡಿಗಳು) ಇವು ಕರುಳಿನಲ್ಲಿ ಹೆಚ್ಚಿನ ಸ್ಥಾನವನ್ನು ಆಕ್ರಮಿಸಿ ಆಹಾರ ರಸದ ಹೀರುವಿಕೆಗೆ ಆತಂಕ ಮಾಡುತ್ತವೆ. ಲಾಡಿ ಹುಳುಗಳ ಮೊಟ್ಟೆಯು ಹಸುವಿನ ಹಾಗೂ ಹಂದಿಯ ಹಸಿ ಅಥವಾ ಅರ್ಧ ಬೇಯಿಸಿದ ಮಾಂಸವನ್ನು ತಿನ್ನುವುದರ ಮೂಲಕ ಹರಡುತ್ತದೆ. ಏಕೆಂದರೆ ಲಾಡಿ ಹುಳುಗಳು ಹಸು ಹಾಗೂ ಹಂದಿಯ ದೇಹದಲ್ಲಿ ವಾಸಮಾಡುತ್ತವೆ.
ಆಲ್ ಬೆಂಡ್ ಝೋಲ್ (albenda zole ) ೪೦೦ ಮಿ. ಗ್ರಾಂ ಮಾತ್ರೆ. ಇದು ಚೀಪುವ ಮಾತ್ರೆ. ಜಂತು ಹುಳು (೪೦೦ ಮಿ.ಗ್ರಾಂ ಒಂದೇ ಬಾರಿ ) ಕೊಕ್ಕೆಹುಳು (೪೦೦ ಮಿ.ಗ್ರಾಂ ಒಂದೇ ಬಾರಿ) ಸೂಜಿ ಹುಳು (೪೦೦ ಮಿ.ಗ್ರಾಂ ಒಂದೇ ಬಾರಿ), ಲಾಡಿ ಹುಳು (೪೦೦ ಮಿ.ಗ್ರಾಂ ಪ್ರತಿ ದಿನ ಮೂರು ದಿವಸ).
ಈ ಔಷಧಿ ಸುರಕ್ಷಿತವಾಗಿದೆ. ಈ ಔಷಧಿಯ ಅಡ್ಡ ಪರಿಣಾಮಗಳು ಕಡಿಮೆ.
ನಮ್ಮೆಲ್ಲರ ನೇರ ಹತ್ತಿರವಾದ ವಾತಾವರಣ ಮನೆ. ಅಲ್ಲಿ ಸುಮಾರು ಜೀವನದ ಅರ್ಧಕ್ಕಿಂತ ಹೆಚ್ಚು ಸಮಯವನ್ನು ಕಳೆಯುತ್ತೇವೆ. ಈ ಮನೆ ಆರೋಗ್ಯವನ್ನು ಕಾಪಾದುವಂತದ್ದಾಗಬೇಕು. ಮನೆ ಕಟುವಾಗ ಆರೋಗ್ಯದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ನೆನಪಿನಲ್ಲಿಡಬೇಕು. ಅದಕ್ಕೆ ಹೆಚ್ಚು ಹಣ ತೆತ್ತಬೇಕಾಗಿಲ್ಲ. ಹಾಗೂ ಆಧುನಿಕ ಉಪಕರಣಗಳು ಅತ್ಯಗತ್ಯವಲ್ಲ.
ಗ್ರಾಮಗಳಲ್ಲಿ ಮನೆ ದೊಡ್ಡದಾಗಿದ್ದರೂ ಕಿಟಕಿ, ಬಾಗಿಲುಗಳು ಸಣ್ಣದಾಗಿರುತ್ತದೆ. ಹಾಗೂ ಕೆಲವು ಬಾರಿ ಕಿಟಕಿಗಳು ಇರುವುದೇ ಇಲ್ಲ. ಕೆಳಗೆ ದೊಡ್ಡ ಕಿಟಕಿ ಇರುವುದಲ್ಲದೇ ಮೇಲೆ ಸಣ್ಣ ಕಿಟಕಿ ಇರುವುದು ಅವಶ್ಯಕ. ಇದರಿಂದ ಗಾಳಿ ನಿಯಂತ್ರಣಕ್ಕೆ ಸಹಾಯಕವಾಗುವುದು.
ಮನೆಗಳಲ್ಲಿ ಧೂಳು ಸಂಗ್ರಹವಾಗುವುದು ಸಹಜ. ಈ ಧೂಳು ಕ್ರಿಮಿಗಳ ( ಬ್ಯಾಕ್ಟೀರಿಯಾ, ವೈರಸ್, ಫಂಗಸ್) ವೃದ್ದಿಗೆ ಸಹಾಯಕವಾಗುತ್ತದೆ. ಈ ಕ್ರಿಮಿಗಳು ಅನಾರೋಗ್ಯವನ್ನು ಉಂಟುಮಾಡುತ್ತವೆ. ಮೇಲಿಂದ ಮೇಲೆ ಈ ಧೂಳನ್ನು ತೆಗೆಯಬೇಕು ಹಾಗೂ ಸ್ವಚ್ಛ ಮಾಡಬೇಕು. ನೆಲದ ಮೇಲೆ ಹಾಗೂ ಗೋಡೆಯ ಮೇಲೆ ಸಂಗ್ರಹವಾದ ಧೂಳು ತೆಗೆದು ನೆಲವನ್ನು ದಿನನಿತ್ಯ ನೀರಿನಿಂದ ಸ್ವಚ್ಛ ಗೊಳಿಸುವುದು ಅವಶ್ಯಕ. ಗೋಡೆಗಳು ತೊಳೆಯುವಂತಹದ್ದಾಗಿರಬೇಕು ಅಥವಾ ಗೋಡೆಗೆ ಮೇಲಿಂದ ಮೇಲೆ ಸುಣ್ಣ ಹಚ್ಚಿದಲ್ಲಿ ಸ್ವಚ್ಛತೆ ಕಾಪಾಡಬಹುದು.
ಬಚ್ಚಲು ಮನೆಯಲ್ಲಿ ಗಾಳಿ ಬೆಳಕು ಇರುವಂತೆ ಜವಾಬ್ದಾರಿ ವಹಿಸಿ. ನೆಲದ ಸ್ವಚ್ಛತೆ ಕಾಪಾಡಿ. ಫೀನೈಲ್ಅಥವಾ ಕ್ರಿಮಿ ನಾಶಕ ಉಪಯೋಗಿಸಿ ಸ್ವಚ್ಛತೆ ಕಾಪಾಡಿ. ಬಚ್ಚಲು ಮನೆಯ ನಿಷ್ಪ್ರಯೋಜಕ ನೀರು, ಹೀರು ಗುಂಡಿಗೆ ಅಥವಾ ಕೈದೋಟಕ್ಕೆ ಹೋಗುವಂತೆ ಮಾಡಿ. ಆಧುನಿಕ ಬಚ್ಚಲು ಮನೆಗಳಲ್ಲಿ ಈ ಸಮಸ್ಯೆ ಇರುವುದಿಲ್ಲ.
ಗ್ರಾಮಗಳಲ್ಲಿ ಕೆಲವರು ದನಕರುಗಳನ್ನು ಸಾಕುತ್ತಾರೆ. ಮನೆಗೆ ಹೊಂದಿದ ಕೊಠಡಿಯಲ್ಲಿ ಅವುಗಳನ್ನು ಇರಿಸುವ ವ್ಯವಸ್ಥೆಯನ್ನು ಮಾಡಲಾಗಿರುತ್ತದೆ. ಪ್ರಾಣಿಗಳ ಮಲ ಮೂತ್ರದಿಂದ ದುರ್ನಾತ ಉಂಟಾಗಿ ಮನೆಯ ಸ್ವಚ್ಛತೆಗೆ ಧಕ್ಕೆ ಉಂಟಾಗುತ್ತದೆ. ಪ್ರಾಣಿಗಳನ್ನು ಮನೆಯಿಂದ ಸ್ವಲ್ಪ ದೂರದಲ್ಲಿ ಕಟ್ಟುಹಾಕಿದಲ್ಲಿ, ಸ್ವಚ್ಚತೆಯನ್ನು ಕಾಪಾಡುವುದು ಸಾಧ್ಯವಾಗುವುದು ಹಾಗೂ ಕೆಟ್ಟವಾಸನೆ ಮನೆಗೆ ಪಸರಿಸುವುದಿಲ್ಲ.ನೊಣ ಹಾಗೂ ಸೊಳ್ಳೆಗಳ ಹಾವಳಿ ಕಡಿಮೆಯಾಗುವುದು. ದನಕರುಗಳ ಕೊಠಡಿಯನ್ನು ಸ್ವಚ್ಛವಾಗಿಡಲು ಎರಡು ಬಾರಿ ನೀರಿನಿಂದ ತೊಳೆಯುವುದು ಅತ್ಯವಶ್ಯಕ. ಆಧುನಿಕ ಮನೆಗಳಲ್ಲಿ ಈ ಸಮಸ್ಯೆ ಇರುವುದೇ ಇಲ್ಲ. ಕೆಲವು ಮನೆಗಳಲ್ಲಿ ಕೋಳಿ ಗೂಡು ಇಟ್ಟುಕೊಂಡಿರುತ್ತಾರೆ. ಇದನ್ನು ಸಹಿತ ಮನೆಯಿಂದ ಸ್ವಲ್ಪ ದೂರ ಇರಿಸುವುದು ಅವಶ್ಯಕ. ಮನೆಯ ಶೌಚಾಲಯವೂ ಸ್ವ್ಚ್ಚವಾಗಿರುವುದು ಅತ್ಯವಶ್ಯಕ.
ಮನೆಯಲ್ಲಿರುವ ಜನ ಹೆಚ್ಚಾದಂತೆಲ್ಲ, ಸ್ವಚ್ಛತೆ ಕಾಪಾಡಲು ತೊಂದರೆಯಾಗುತ್ತದೆ. ಎಲ್ಲರಿಗೂ ಅನ್ಯಥಾ ಆತಂಕ ಉಂಟಾಗುತ್ತದೆ. ಚರ್ಮ ಹಾಗೂ ಉಸಿರಾಟದ ಸೋಂಕು ರೋಗಗಳು ಕಾಣಿಸಿಕೊಳ್ಳುವುವು.
ಸ್ವಚ್ಛತೆ ಕಾಪಾಡಿ, ಮನೆಯ ಸುತ್ತಲೂ ಗಿಡ ಬೆಳೆಸಿ, ವಾತಾವರಣದ ನೈರ್ಮಲ್ಯವನ್ನು ಕಾಪಾಡಿ. ಅಡಿಗೆ ಮನೆ ಸ್ವಚ್ಛತೆ ಬಗ್ಗೆ ಮನೆಯ ಎಲ್ಲರೂ ಶ್ರಮಿಸಬೇಕು.
ಮೂಲ:ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ.
ಕೊನೆಯ ಮಾರ್ಪಾಟು : 3/3/2020