ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕೊಳ್ಳೇಗಾಲದ ಸಂಗೀತ ಸಾಧಕರು

ಕೊಳ್ಳೇಗಾಲದ ಸಂಗೀತ ಸಾಧಕರು ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

ಕೊಳ್ಳೇಗಾಲ ತಾಲ್ಲೋಕ್ ಚಾಮರಾಜನಗರ ಜಿಲ್ಲೆಯಲ್ಲಷ್ಟೇ ಅಲ್ಲದೆ, ರಾಜ್ಯ ಮಟ್ಟದಲ್ಲಿಯೂ ಹೆಸರಿಸಬೇಕಾದ ಮುಖ್ಯ ಮಾತು ವೈಶಿಷ್ಟ್ಯ ಪೂರ್ಣ ಸಾಂಸ್ಕೃತಿಕ ಕ್ಷೇತ್ರವಾಗಿದೆ. ಇಲ್ಲಿ ಶಿಷ್ಟ ಮತ್ತು ಜನಪದ ಕಲೆಗಳೆರಡೂ ನೆಲೆ ಪಡೆದು ಜನಜೀವನದಲ್ಲಿ ಬೆರೆತಿವೆ. ಅವುಗಳಲ್ಲಿ ಸಾಹಿತ್ಯ ಮತ್ತು ಸಂಗೀತಗಳು ಆಧುನಿಕ ಪೂರ್ವಕಾಲದ ಪ್ರಮುಖ ವಿದ್ಯೆಗಳಾಗಿ ಎಲ್ಲೆಡೆಯನ್ತೆಯೂ ಇಲ್ಲಿಯೂ ಪ್ರಾಶಸ್ತ್ಯ ಪಡೆದಿವೆ.

ಕೊಳ್ಳೇಗಾಲ ತಾಲ್ಲೋಕಿನಲ್ಲಿ ಬಹಳ ಹಿಂದಿನಿಂದಲೂ ಸಂಗೀತಗಾರರು ಇದ್ದುದರಿಂದ ಅಲ್ಲಿ ಅದು ಪ್ರತಿಷ್ಠೆಯ ವಿದ್ಯೆಯೆಂದು ಗೌರವಿಸಲ್ಪಟ್ಟಿದೆ. ಸಾಂಸ್ಕೃತಿಕವಾಗಿ ಅತ್ಯಂತ ವೈಭವದಿಂದ ಮೆರೆದ ಮೈಸೂರಿನ ಸಂಗೀತಗಾರರ ಪರಿಚಯವೂ ಇದೆ. ಇಲ್ಲಿನ ಸಂಗೀತ ಸಾಧಕರಲ್ಲಿ ಹೆಚ್ಚಿನವರು ದೇವಾಂಗ ಜನಾಂಗಕ್ಕೆ ಸೇರಿದರಾಗಿದ್ದು, ಅವರ ಮನೆಮಾತು ತೆಲುಗು ಆಗಿರುವುದರಿಂದ ಸಹಜವಾಗಿಯೇ ತ್ಯಾಗರಾಜರ ಕೀರ್ತನೆಗಳ ಭಾಷಿಕರ ಸಾಮಿಪ್ಯದೊಡನೆ ಆಂಧ್ರದ ಸಂಗೀತದ ಸಂಸರ್ಗವೂ ಸಿಗುವಂತಾಗಿದೆ.ಈ ಮೂರರ ಪ್ರಭಾವದಲ್ಲಿ ಕೊಳ್ಳೇಗಾಲದ ಸಂಗೀತ ಸಾಧಕರು ಬೆಳೆದಿದ್ದಾರೆ.

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕೊಳ್ಳೇಗಾಲ ತಾಲ್ಲೋಕಿಗೆ ಬಹು ಮಹತ್ವದ ಸ್ಥಾನವನ್ನು ದೊರಕಿಸಿ ಕೊಟ್ಟ ನಿಜಗುಣರು ಆದ್ಯ ಸಂಗೀತಗಾರರಲ್ಲೊಬ್ಬರೆಂದು ಹೇಳಲಾಗುತ್ತಿದೆ. ಅವರ 'ಕೈವಲ್ಯ ಪದ್ದತಿಯ'ಯ ಪದಗಳಿಗೆ ಕಾಂಬೋಧಿ, ರೇಗುಪ್ತಿ, ಸೌರಾಷ್ಟ್ರ ಶಂಕರಾಭರಣ ಇತ್ಯಾದಿ ರಾಗಗಳನ್ನು ಸೂಚಿಸಲಾಗಿದೆ. ತಂಬೂರಿ ಪದಗಳಾಗಿ ಜನಪ್ರಿಯವಾಗಿದ್ದ ಅವುಗಳನ್ನು ಕೀರ್ತನೆಗಳಂತೆ ಶಾಸ್ತ್ರೀಯವಾಗಿ ಹಾಡಿಸುವ ಪ್ರಯತ್ನವನ್ನು ಶ್ರೀಕುಮಾರ ನಿಜಗುಣರು ಕೆಲವು ವರ್ಷಗಳಿಂದ ಮಾಡುತ್ತಿದ್ದಾರೆ.

ಕೊಳ್ಳೆಗಾಲದ ಹಿಂದಿನ ಸಂಗೀತಗಾರರಲ್ಲಿ ಮೊದಲಿಗೆ ಹೆಸರಿಸಬೇಕಾದವರು ಮಧುವನಹಳ್ಳಿಯ ಹಾರ್ಮೋನಿಯಂ ಸಿದ್ದಶೆಟ್ಟರು. ಅವರು ಹಾರ್ಮೋನಿಯಂ ವಾದಕರಾಗಿ, ನಾಟಕ ತರಬೇತುದಾರರಾಗಿ ತಮ್ಮ ಕಾಲದಲ್ಲಿ ಹಳೆಯ ಮೈಸೂರಿನಲ್ಲೆಲ್ಲಾ ಪ್ರಸಿದ್ದರಾಗಿದ್ದರು. ಅವರು ಕಲಿಸುತ್ತಿದ್ದ ಕುರುಕ್ಷೇತ್ರ ನಾಟಕ ಬಹಳ ಪ್ರಸಿದ್ದವಾಗಿತ್ತು. ಅವರಿಗೆ ಶಾಸ್ತ್ರಿಯ ಸಂಗೀತದ ಹೆಚ್ಚಿನ ಪಾಠವಾಗಿರಲಿಲ್ಲ, ಆದರೆ ಹಾರ್ಮೋನಿಯಂ ನುಡಿಸುಗಾರಿಕೆಯಲ್ಲಿ ಅವರಿಗೆ ಸರಿಸಾಟಿಯಿರಲಿಲ್ಲ ಎಂದು ಅವರನ್ನು ಬಲ್ಲವರು ಹೇಳುತ್ತಾರೆ.

ಮಧುವನಹಳ್ಳಿಯ ಶ್ರೀ ರಾಜಶೇಖರಪ್ಪ ಕೂಡ ನಾಟಕ ತರಬೇತಿದಾರರಾಗಿ ಪ್ರಸಿದ್ದರು. ಅವರು "ಸಂಗೀತ ಸುಭದ್ರೆ" ಎಂದೇ ಹೆಸರಾದ "ಸುಭದ್ರಾ ಪರಿಣಯ" ನಾಟಕವನ್ನು ಕಲಿಸುತ್ತಿದ್ದರು. " ನಿಜಗುಣ ಶಿವಯೋಗಿ" ಎಂಬ ಹೊಸ ನಾಟಕಕ್ಕೂ ಅವರು ಸಂಗೀತ ಸಂಯೋಜಿಸಿದ್ದರು ಅವರಿಗೆ ಶಾಸ್ತ್ರಿಯ ಸಂಗೀತದ ಹೆಚ್ಚಿನ ಪಾಠವಾಗಿತ್ತು. ಮಹದೇಶ್ವರರ ಬಗೆಗಿನ ತಮ್ಮ ಬರಹಗಳಿಂದ ಪ್ರಸಿದ್ದರಾಗಿದ್ದ ಶ್ರೀ ಹ.ಜ. ಶಿವಶಂಕರಪ್ಪನವರಿಗೆ ಇವರು ಸಂಬಂಧಿಕರು.

ಕೊಳ್ಳೆಗಾಲದ ನಾಗಲಿಂಗಾಚಾರ್ ಅವರು ಸಾಹಿತ್ಯ ಪಂಡಿತರಾಗಿದ್ದುದಲ್ಲದೆ, ಸಂಗೀತತಜ್ಞರೂ ಆಗಿದ್ದವರು. ಅವರು ಈ ಎರಡು ಪಾಂಡಿತ್ಯಗಳನ್ನು ಮೇಳೈಸಿ 'ಭೂ ಕೈಲಾಸ ಮುಂತಾದ ಕಥೆಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಅವರು ಶ್ರೀ ವಸಂತಕುಮಾರಿ ಶಾಲೆಯ ಹೆಣ್ಣು ಮಕ್ಕಳಿಗೆ 'ಅಕ್ಕ ಮಹಾದೇವಿ' ನಾಟಕ ಕಲಿಸಿದ್ದರು. ಆ ನಾಟಕಕ್ಕೆ ಹಾರ್ಮೋನಿಯಂ ವಾದಕರಾಗಿ ಮಧುವನಹಳ್ಳಿಯ ಶ್ರೀ ಏ. ಪುಟ್ಟರಸಶೆಟ್ಟರು ಪಿಟೀಲುವಾದಕರಾಗಿ ಮುಡಿಗುಂಡಮ್ ನ ಶ್ರೀ ಮಹದೇವಪ್ಪನವರೂ ನೆರವು ನೀಡಿದ್ದರು.

ಕೊಳ್ಳೆಗಾಲದ ತಾಳವಾದ್ಯ ವಿದ್ವಾಂಸರಲ್ಲಿ ಮದ್ದಲೆ ಬಸವಯ್ಯನವರು ಹಿಂದಿನವರಲ್ಲಿ ಪ್ರಮುಖರು. ಸಿಂಗಾರಿ ಬಸವಯ್ಯ ಎಂದೂ ಕರೆಯಲ್ಪಡುತ್ತಿದ್ದ ಅವರು, ಮ್ರುದಂಗವಾದಕರಾಗಿದ್ದರು. ಬೆಳಕವಾಡಿ ವರದರಾಜಯ್ಯನಂತಹವರಿಗೆ ಪಕ್ಕವಾದ್ಯ ನುಡಿಸಿದ ಹಿರಿಮೆ ಅವರದು. ಅವರ ತಮ್ಮ ಸುಬ್ರಮಣ್ಯಮ್ ಕೂಡ ಮೃದಂಗ ವಾದಕರು.

ಕೊಳ್ಳೆಗಾಲದ ಹಾರ್ಮೋನಿಯಂ ವಾದಕರಲ್ಲಿ ತುಂಬಾ ಹೆಸರುವಾಸಿಯಾದವರು ಶ್ರೀ ಚಾಯ್ಲು ಮಲ್ಲಿಕಾರ್ಜುನಯ್ಯನವರು, ಕರ್ನಾಟಕ ಶಾಸ್ತ್ರಿಯ ಸಂಗೀತ ಕಛೇರಿಗಳಲ್ಲಿ ಹಾರ್ಮೋನಿಯಂ ಬಳಸುವುದು ಕಡಿಮೆ. ಚಾಯ್ಲು ಅವರು ಅಂತಹ ಕಚೇರಿಗಳಲ್ಲಿಯೂ ಹಾರ್ಮೋನಿಯಂ ನುಡಿಸುವ ಒಲ್ಮೆಯಿದ್ದವರು ಅವರ ಮಗ ಶ್ರೀ ಕುಮಾರ್ ಈಗ ಕೊಳ್ಳೆಗಾಲದ ಪ್ರಸಿದ್ದ ತಬಲವಾದಕರಾಗಿದ್ದಾರೆ. ಶ್ರೀ ವೆಂಕಟರಾಮು ಅವರು ಕೊಳ್ಳೆಗಾಲದ ಮತ್ತೊಬ್ಬ ನುರಿತ ಹಾರ್ಮೋನಿಯಂ ವಾದಕರು.

ಮಧುವನಹಳ್ಳಿಯ ಶ್ರೀ ಏ.ಪುಟ್ಟರಸಶೆಟ್ಟಿಯವರು ಪಿಟೀಲುವಾದಕರಾಗಿ ಅದರಲ್ಲಿಯೂ ನಾಟಕಗಳಲ್ಲಿ ನುಡಿಸುವವರಾಗಿ ಹಳೆಯ ಮೈಸೂರು ಜಿಲ್ಲೆಯಲ್ಲಿ ಮತ್ತು ಹೊರಗಡೆಯೂ ಸಾಕಷ್ಟು ಪ್ರಸಿದ್ದರಾದವರು. ಕೆಲವು ಪ್ರಸಿದ್ದ ನಾಟಕ ಕಂಪನಿಗಳ ಜೊತೆಯಲ್ಲಿ ಉತ್ತರ ಕರ್ನಾಟಕದ ಗದಗ ಮುಂತಾದ ಕಡೆಗಳಲ್ಲಿ ಹೋಗಿ ಬಂದವರು. ಅವರು ತಮಿಳುನಾಡಿನ ಕೊಯಮತ್ತೂರಿನ ಸಂಗೀತ ಕಚೇರಿಗಳಿಗೆ ಹೋಗುತ್ತಿದ್ದರು.ತಮಗೆ ಪರಿಚಿತರಾಗಿದ್ದ ಅನೇಕ ಸಂಗೀತಗಾರರನ್ನು ಅವರು ತಮ್ಮ ಊರಿಗೆ ಕರೆಸಿ ಬಹಳಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಕೊಳ್ಳೆಗಾಲದ ಬಲಮುರಿ ಗಣೇಶನ  ಗುಡಿಯಲ್ಲಿಯೂ ಸಾಕಷ್ಟು ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅವರು ಸುಪ್ರಸಿದ್ದ ಪಿಟೀಲುವಾದಕ ಶ್ರೀ ಟಿ.ಚೌಡಯ್ಯನವರ ತಮ್ಮ ಶ್ರೀ ಪುಟ್ಟಸ್ವಾಮಯ್ಯನವರಿಂದ  ಸಂಗೀತಾಭ್ಯಾಸ ಪಡೆದವರು. ಮುಡಿಗುಂಡದ ಶ್ರೀ ಮಹದೇವಪ್ಪನವರು ಅವರ ಸಹಪಾಠಿ. ಸ್ವತಃ ತಾವೇ ಅನೇಕ ಜನರಿಗೆ ಸಂಗೀತ ಪಾಠ ಹೇಳಿಕೊಟ್ಟಿದ್ದಾರೆ ಅವರಿಂದ ಏನನ್ನೂ ಪಡೆಯದೆ, ಅವರಲ್ಲಿ ಕ್ಲಾರಿಯೋನೆಟ್ ನಾಗರಾಜು ಅವರ ತಮ್ಮ ಪಿಟೀಲು ವಾದಕ ಶ್ರೀ ಪ್ರಭಾಕರ್ ಒಬ್ಬರು. ಮತ್ತೊಬ್ಬ ಶ್ರೀ ಕೃಷ್ಣ ಈಗ ಹಾರ್ಮೋನಿಯಂ ವಾದಕರಾಗಿ ಪ್ರಸಿದ್ದರಾಗುತ್ತಿದ್ದಾರೆ.

ಮಧುವನಹಳ್ಳಿಯವರೇ ಆದ ಶ್ರೀ ಶಿವರಾಮು ಅವರು ಉತ್ತಮ ಗಾಯಕರು. ತಮ್ಮ ಕಂಠಮಾಧುರ್ಯದಿನ್ದ ಭಾವಪೂರ್ಣ ಗಾಯನದಿಂದ ಜನರಿಗೆ ಪ್ರಿಯರಾದವರು. ಶ್ರೀ ಪುಟ್ಟರಸಶೆಟ್ಟರು, ಶ್ರೀ ಪುತ್ತಸ್ವಾಮಯ್ಯನವರಿಂದಲೇ ಮೈಸೂರಿನಲ್ಲಿಯೂ ಸಂಗೀತಾಭ್ಯಾಸ ಮಾಡಿ ಸಂಗೀತ ಪರೀಕ್ಷೆಯಲ್ಲಿ ಉತ್ತೀರ್ಣರಾದವರು. ಹಾರ್ಮೋನಿಯಂ ಮತ್ತು ಪಿಟೀಲು ವಾದನಗಳನ್ನು ನುಡಿಸುವವರಲ್ಲದೆ, ನಾಟಕ ತರಬೇತುದಾರರೂ ಆಗಿದ್ದಾರೆ. 'ರಾಮಾಯಣ' ನಾಟಕ ತರಬೇತುದಾರರೂ ಆಗಿದ್ದಾರೆ. 'ರಾಮಾಯಣ' ನಾಟಕ ಕಲಿಸುವುದರಲ್ಲಿ ಇವರು ಬಲ್ಲಿದರು. ಶ್ರೀ ಮಹಾದೇವಪ್ಪನವರು ಇಲ್ಲಿನ ಮತ್ತೊಬ್ಬ ಹಾರ್ಮೋನಿಯಂ ವಾದಕರು ಮತ್ತು ನಾಟಕ ತರಬೇತುದಾರರು ಅವರ ಮಗ ಶ್ರೀ ನಟರಾಜು ಅವರು ಶ್ರೀ ಏ. ಪುಟ್ಟರಸಶೆಟ್ಟರಲ್ಲಿ ಸಂಗೀತಾಭ್ಯಾಸ ಮಾಡಿ ಹಾರ್ಮೋನಿಯಂ ವಾದಕರಾಗಿದ್ದಾರೆ.

ಮಧುವನಹಳ್ಳಿಯ ಶ್ರೀ ಪಿ. ಮಹಾದೆವಶೆಟ್ಟರು  ಗಾಯಕರು, ಹಾರ್ಮೋನಿಯಂ ವಾದಕರು ಹಾಗೂ ನಾಟಕ ತರಬೇತುದಾರರು, ಅವರು ತಮ್ಮ ಕಂಚಿನ ಕಂಠದಿಂದ ಮತ್ತು ಬಾವಪೂರ್ಣ ಗಾಯನದಿಂದ ಶ್ರೋತೃಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ ಊರಿನ ಶ್ರೀ ರಾಜಷೆಖರಪ್ಪನವರಿಂದ ಮತ್ತು ಮೈಸೂರಿನಲ್ಲಿಯೂ ಸಂಗೀತಾಭ್ಯಾಸ ಮಾಡಿದ್ದಾರೆ. ಮೈಸೂರಿನ ಜೆ.ಎಸ್.ಎಸ್ ಸಂಸ್ಥೆಯವರು ಪ್ರದರ್ಶಿಸುವ 'ಶ್ರೀ ನಿಜಗುಣ ಶಿವಯೋಗಿ' ನಾಟಕದ ಖಾಯಂ ಹಾರ್ಮೋನಿಯಂ ವಾದಕರೂ, ಹಿನ್ನಲೆ ಗಾಯಕರೂ ಆಗಿದ್ದಾರೆ. ಇವರು ಮತ್ತು ಶ್ರೀ ಶ್ರೀ ಶಿವರಾಮು ಅವರು ನಿಜಗುಣರ 'ಕೈವಲ್ಯ ಪದ್ಧತಿ' ಯಾ ಪದಗಳಿಗೆ ರಾಗ ಸಂಯೋಜನೆ ಮಾಡಿ ಪ್ರಸಿದ್ದಿಪಡಿಸಿದ್ದಾರೆ.

ಮಧುವನಹಳ್ಳಿಯ ಶ್ರೀ ಯತಿರಾಜು ಅವರೂ ಕೂಡ ಗಾಯಕರು, ಹಾರ್ಮೋನಿಯಂ ವಾದಕರು ಮತ್ತು ನಾಟಕ ತರಬೇತುದಾರರು.'ಹರಿಶ್ಚಂದ್ರ' ನಾಟಕ ಕಲಿಸುವುದರಲ್ಲಿ ಪರಿಣಿತರು, ಶ್ರೀ ರಾಜಷೆಖರಪ್ಪನವರು ಮತ್ತು ತಮ್ಮ ಸಂಬಂಧಿಕರೇ ಆದ ಶ್ರೀಮತಿ ಜಯಮ್ಮನವರಲ್ಲಿ ಸಂಗೀತಾಭ್ಯಾಸ ಮಾಡಿದವರು.

ಕೊಳ್ಳೆಗಾಲದ ಸಂಗೀತಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಮಧುವನಹಳ್ಳಿಯಲ್ಲಿ ಇನ್ನೂ ಅನೇಕ ಸಂಗೀತಾಭ್ಯಾಸಿಗಳಿದ್ದಾರೆ. ಅವರಲ್ಲಿ ಹರಳೆಯ ಮಣಿಗಾರ್ ಶ್ರೀ ಗುರು ರಾಜಶೆಟ್ಟರು ಒಬ್ಬರು. ಅವರು ತಮ್ಮ ಮನೆಯ ಮಕ್ಕಳಲ್ಲಿ ಕೆಲವರಿಗೆ ಸಂಗೀತಾಭ್ಯಾಸ ಮಾಡಿಸಿದ್ದಾರೆ. ಶ್ರೀ ಏ. ಪುಟ್ಟರಸ ಶೆಟ್ಟರ ಶಿಷ್ಯರು ಬಹಳ ಜನರಿದ್ದಾರೆ.ಅವರಲ್ಲಿ ಕೆಲವರು ಈ ತಲೆಮಾರಿನ ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಇಲ್ಲಿನ ಶ್ರೀ ರಾಮಭಜನ ಮಂಡಳಿಯವರು ಕರ್ನಾಟಕ ಶಾಸ್ತ್ರೀಯ ಸಂಗೀತದ ಉತ್ತಮ ರಾಗಗಳನ್ನು ಅಳವಡಿಸಿದ ದಾಸರ ಕೀರ್ತನೆಗಳನ್ನು ಹಾಡುತ್ತಿದ್ದರು.

ಕೊಳ್ಳೆಗಾಲದ ತಾಳವಾದ್ಯ ವಾದಕರಲ್ಲಿ ಶ್ರೀ ಸಮರಪ್ಪ, ಶ್ರೀ ವೀರಭದ್ರಪ್ಪ, ಶ್ರೀ ಕೆರಳ್ಳೆ ಶಿವಣ್ಣ ಪ್ರಮುಖರು. ಶ್ರೀ ವೀರಭದ್ರಪ್ಪನವರ ಮಗ ಶ್ರೀ ದಶಪಾಲ್ ಈಗ ಕೊಳ್ಳೆಗಾಲದ ಅತ್ಯಂತ ಪ್ರಸಿದ್ದ ತಬಲವಾದಕರು. ಶ್ರೀ ಕೆರಳ್ಲಿ ಶಿವಣ್ಣನವರು ನಾಟಕಗಳಿಗೆ ತಬಲಾ ನುಡಿಸುವುದರಲ್ಲಿ ಪ್ರಸಿದ್ದರಾಗಿದ್ದವರು.

ಕೊಳ್ಳೆಗಾಲದ ಪಿಟೀಲು ವಾದಕರಲ್ಲಿ ಶ್ರೀ ನಾರಾಯಣಸ್ವಾಮಿ, ಬಂಗಾರು ಅವರ ಸೋದರ ಮಾವ ಶ್ರೀ ನಾಗೇಶಪ್ಪ, ಶ್ರೀ ಮಾದೇಶಯ್ಯ ಪ್ರಮುಖರು. ಮಾದೆಶಯ್ಯ ಶ್ರೀ ಭುವನೇಶ್ವರ ಅಯ್ಯನವರ ಶಿಷ್ಯ ಒಳ್ಳೆಯ ಸಂಗೀತಜ್ಞ, ಶಿಕ್ಷಕ.

ಕೊಳ್ಳೆಗಾಲದ ಶ್ರೀ ಗಣಪತಿ ಹಾರ್ಮೋನಿಯಂ ಮತ್ತು ಪಿಟೀಲು ವಾದಕರು. ಅವರ ಮಗ ಶ್ರೀ ವೆಂಕಟೇಶ್ ಈಗ ಕೀ ಬೋರ್ಡ್ ವಾದಕರಾಗಿ ಬಹಳ ಪ್ರಸಿದ್ದರು ಅವರ ಮತ್ತೊಬ್ಬ ಮಗ ತಬಲಾವಾದಕ.

ಕೊಳ್ಳೆಗಾಲದ ಶ್ರೀ ಮಾದಪ್ಪನವರು ಪಿಟೀಲು ತೆಗೆದುಕೊಂಡು ಮನೆ ಮನೆಗೆ ಹೋಗಿ ಸಂಗೀತ ಪಾಠ ಹೇಳಿಕೊಟ್ಟು ಜೀವನ ಸಾಗಿಸಿದ ಸಂಗೀತ ಗುರುಗಳು. ಅವರ ಅನೇಕ ವಿದ್ಯಾರ್ಥಿಗಳು ಸಂಗೀತದ ಕಿರಿಯ ಹಿರಿಯ ಮತ್ತು ವಿದ್ವತ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ಕೊಳ್ಳೆಗಾಲದ ದೇವಾಂಗ ಪೇಟೆಯ ಸೋಮವಾರ ಭಜನಾ ಮಂದಿರ ಬಹಳ ಕಾಲದಿಂದಲೂ ಕೊಳ್ಳೆಗಾಲದ ಸಂಗೀತಕ್ಕೆ ಭದ್ರನೆಲೆಯಾಗಿ ಪಾತ್ರವಹಿಸಿದೆ. ಅಲ್ಲಿ ಸಂಗೀತ ಕಾರ್ಯಕ್ರಮ ನೀಡುವುದು ಒಂದು ಕಾಲಕ್ಕೆ ಪ್ರತಿಷ್ಠೆಯ ಸಂಗತಿಯಾಗಿತ್ತು, ಕೊಳ್ಳೆಗಾಲದ ಕೆಲವು ಸಂಗೀತಗಾರರು ತ್ಯಾಗರಾಜರ ಆರಾಧನೆಗೆ ಹೋಗಿ ಬರುವ ರೂಢಿಯನ್ನಿಟ್ಟುಕೊನ್ದಿದ್ದರು.

ಕೊಳ್ಳೆಗಾಲದಲ್ಲಿ ಕ್ಲಾರಿಯೋನೆಟ್ ನುಡಿಸುವ ಏಕ ಮಾತ್ರ ವಾದ್ಯಗಾರರಾಗಿ ತುಂಬಾ ಜನಪ್ರಿಯರಾಗಿದ್ದವರು ಶ್ರೀ ನಾಗರಾಜ್. ಅವರು ಇರುವವರೆಗೆ ಈ ಭಾಗದಲ್ಲಿ ಅವರ ಕ್ಲಾರಿಯೋನೆಟ್ ವಾದನವಿಲ್ಲದೆ ನಾಟಕಗಳು ನಡೆದಿರುವುದು ಕಡಿಮೆ; ಇಲ್ಲ ಎಂದೂ ಹೇಳಬಹುದು. ಅವರ ತಮ್ಮ ಶ್ರೀ ಪ್ರಭಾಕರ್ ಈಗ ಕೊಳ್ಳೆಗಾಲದ ಪ್ರಸಿದ್ದ ಪಿಟೀಲುವಾದಕರು ಅವರ ಮತ್ತೊಬ್ಬ ತಮ್ಮ ತಬಲಾ ವಾದಕ ಅವರ ಮಗನಿಗೂ ಸಂಗೀತಭ್ಯಾಸವಾಗಿದೆ.

ಅಂತರ ರಾಷ್ಟ್ರೀಯ ಖ್ಯಾತಿಯ ಪಿಟೀಲು ವಾದಕರು ಎಂ. ನಾಗರಾಜು ಮತ್ತು ಡಾ. ಎಂ.ಮಂಜುನಾಥ್

ಕೊಳ್ಳೆಗಾಲದ ಸಂಗೀತ ಸಾಧನೆ ಅಂತರರಾಷ್ಟ್ರೀಯ ಮಟ್ಟವನ್ನು ಮುಟ್ಟಿದ್ದು ಮುಡಿಗುಂಡದ ಶ್ರೀ ಮಹಾದೇವಪ್ಪನವರ ಕುಟುಂಬದವರಿಂದ. ಅವರ ತಂದೆ ಹಾರ್ಮೋನಿಯಂ ಸುಬ್ಬಪ್ಪನವರು ಹಾರ್ಮೋನಿಯಂ ರಿಪೇರಿ ಮಾಡುತ್ತಿದ್ದವರು. ಮಹಾದೇವಪ್ಪನವರು ಹಿಂದೆ ಹೇಳಿದ ಶ್ರೀ ಪುಟ್ಟಸ್ವಾಮಯ್ಯನವರಲ್ಲಿ ಸಂಗೀತಾಭ್ಯಾಸ ಮಾಡಿದವರು. ಮೈಸೂರು ವಿಶ್ವ ವಿದ್ಯಾನಿಲಯದ ಲಲಿತ ಕಲಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದವರು. ಪಿಟೀಲು ಅವರ ಕುಟುಂಬಕ್ಕೆ ಒಲಿದ ವಾದನ. ಇವರ ಮಕ್ಕಳಾದ ಮೈಸೂರು ಎಂ. ನಾಗರಾಜ್, ಡಾ.ಎಂ.ಮಂಜುನಾಥ್ ಮತ್ತು ಶ್ರೀಮತಿ ರೂಪ ಪಿಟೀಲು ವಾದಕರು. ಎಂ.ಮಂಜುನಾಥ್ ಮತ್ತು ರೂಪ ಅವರು ಶ್ರೇಷ್ಠ ಗಾಯಕರೂ ಹೌದು, ಅಂತರರಾಷ್ಟ್ರೀಯ ಖ್ಯಾತಿಯನ್ನು ಪಡೆದವರು. ಹಲವಾರು ಬಾರಿ ಕಚೇರಿ ನೀಡುವುದಕ್ಕೆ ಹೊರದೇಶಗಳಿಗೆ ಪ್ರವಾಸ ಮಾಡಿ ಬಂದಿದ್ದಾರೆ. ಅನೇಕ ಪ್ರಸಿದ್ದ ಸಂಗೀತಗಾರರಿಗೆ ಪಕ್ಕ ವಾದ್ಯ ನುಡಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಲಲಿತ ಕಲಾ ಕಾಲೇಜಿನಲ್ಲಿ ಅಧ್ಯಾಪಕರಾಗಿರುವ ಡಾ.ಮಂಜುನಾಥ್ ಕರ್ನಾಟಕ ಶಾಸ್ತ್ರಿಯ ಸಂಗೀತದ ಶೈಲಿಯಲ್ಲದೆ ಹಿಂದೂಸ್ಥಾನಿ ಸಂಗೀತ ಶೈಲಿಯಲ್ಲಿಯೂ ನುಡಿಸಬಲ್ಲವರಾಗಿದ್ದು ಸಹೋದರರೊಡನೆ ನೂರಾರು ಜುಗಲ್ ಬಂಧಿ ಕಾರ್ಯಕ್ರಮವನ್ನು ನೀಡಿದ್ದಾರೆ. ಶ್ರೀ ಮಹಾದೇವಪ್ಪನವರ ಸಹೋದರನ ಮಗ ಶ್ರೀ ನಟರಾಜ್ ಮೃದಂಗ ವಾದಕರು. ಎಂ.ನಾಗರಾಜ್ ಮೈಸೂರು ಆಕಾಶವಾಣಿಯ 'ಎ' ಗ್ರೇಡ್ ಕಲಾವಿದರು. ಇವರ ಪುತ್ರನೂ ಈಗ ಪಿಟೀಲು ನುಡಿಸುವ ಬಾಲ ಪ್ರತಿಭೆ.

ಮೂಲ:ರಜತ ದರ್ಪಣ.

3.1170212766
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top