ಬಾಳೆಗಿಡದ ರಸ ಬಟ್ಟೆಯ ಮೇಲೆ ಬಿದ್ದರೆ ಆಗುವ ಕಲೆ ಬಟ್ಟೆ ಹರಿದರೂ ಹೋಗುವುದಿಲ್ಲ. ಅಂದರೆ ಬಾಳೆರಸ ಗಾಳಿಯೊಂದಿಗೆ ವರ್ತಿಸಿ ಬಣ್ಣಕ್ಕೆ ತಿರುಗುವುದಲ್ಲದೆ ಆ ಬಣ್ಣ ಬಟ್ಟೆಗೆ ಬಿಗಿಯಾಗಿ ಅಂಟಿಕೊಳ್ಳುತ್ತದೆ. ಇದು ನಮ್ಮ ಉಡುಗೆ ಬಗೆಗೆ ಎಚ್ಚರವಹಿಸುವ ಸಮಸ್ಯೆ ಆದರೆ ವಾಸ್ತವವಾಗಿ ಬಾಳೆ ರಸದ ಈ ಗುಣ ಬಾಳೆಗಿಡ ಬದುಕಿ ಉಳಿಯಲು ಅತ್ಯಂತ ಪೂರಕವಾದ ಗುಣ. ಕೀಟದ ಬಾಧೆಯಿಂದಲೋ ಬಿರುಗಾಳಿಯಿಂದಲೋ ಬಾಳೆ ಗಿಡದಿಂದ ರಸ ಒಸರತೊಡಗಿತೆನ್ನಿ. ನಿರಂತರ ರಸ ಸ್ರಾವ ಆಗಿ ಬಾಳೆ ಗಿಡ ಒಣಗಿಬಿಡುತ್ತಿತ್ತು. ಆದರೆ ರಸವು ಗಾಳಿಯೊಡನೆ ಘನೀಭವಿಸಿ ಸೋರುವ ಜಾಗಕ್ಕೂ ತೇಪೆ ಹಾಕುತ್ತದೆ.
ಮಾನವ ದೇಹದಲ್ಲಿಯೂ ಹಾಗೆ ರಕ್ತಸ್ರಾವ ಅಲ್ಪ ಪ್ರಮಾಣದಲ್ಲಿ ಆದಾಗ ರಕ್ತವು ಹೆಪ್ಪುಗಟ್ಟಿ ಮುಂದೆ ರಕ್ತ ಸ್ರಾವ ಆಗದಂತೆ ತಡೆಯುತ್ತದೆ! (ಅಧಿಕ ರಕ್ತಸ್ರಾವವಾದರೆ ಈ ವಿಧಾನ ಸಫಲ ಆಗದು).
ಅದೇನೇ ಆಗಲಿ, ಗಾಯವಾದಾಗ ಮುಲಾಮು ಸವರುತ್ತೇವೆ. ಮುಲಾಮು ಸವರೆದೆಯೇ ಅನೇಕರಿಗೆ ಗಾಯ ವಾಸಿಯಾಗುವುದುಂಟು. ಅಂದ ಮೇಲೆ ಮುಲಾಮಿನಿಂದಾಗಿ ಕೆರೆದ ಗಾಯದಲ್ಲಿ ಚರ್ಮ ಬೆಳೆದು ಗಾಯ ಮಾಯುವುದಿಲ್ಲ, ಹಾಗಿದ್ದರೆ ಮುಲಾಮಿನ ಪಾತ್ರವೇನು? ತೆರೆದ ಗಾಯದೊಳಕ್ಕೆ ಗಾಳಿಯಲ್ಲಿರುವ ಸೂಕ್ಷ್ಮ ಜೀವಿಗಳು ಪ್ರವೇಶಿಸಿ ಸೋಂಕು ಉಂಟಾಗದಂತೆ ತಡೆಯುವುದು ಅಕಸ್ಮಾತ್ ಮುಲಾಮು ಹಚ್ಚುವ ವೇಳೆಗಾಗಲೇ ಸೋಂಕು ಆಗಿದ್ದರೆ ಅದು ಹೆಚ್ಚಳವಾಗದಂತೆ ತಡೆಯುವುದು!.
ಬಯಲಿನಲ್ಲಿ ಸಾಗುವಾಗ ಗಾಯವಾಯಿತೆನ್ನಿ, ಆಗ ಮುಲಾಮು ದೊರೆಯದೇ ಹೋದಲ್ಲಿ ಗಾಯವನ್ನು ತಣ್ಣೀರಿನಿಂದ ತೊಳೆದು ಕೊಬ್ಬರಿ ಎಣ್ಣೆ/ಹರಳೆಣ್ಣೆ/ವ್ಯಾಸಲಿನ್ ಸವರಿದರೂ ಕೊಬ್ಬಿನ ಪದರದ ಮೂಲಕ ಗಾಳಿಯ ಬ್ಯಾಕ್ಟೀರಿಯಾ ಗಾಯದೊಳಗೆ ಪ್ರವೇಶಿಸಿ ಹುಣ್ಣಾಗುವುದು ತಪ್ಪುತ್ತದೆ.
ಅಂದಮೇಲೆ ಗಾಯವನ್ನು ನಮ್ಮ ಕಾಯವೇ (ದೇಹವೇ) ದುರಸ್ತಿ ಮಾಡಿಕೊಳ್ಳುತ್ತದೆ. ಸೋಂಕುಗಳೇನೂ ಆಗದಿದ್ದಲ್ಲಿ ನಿಧಾನವಾಗಿ ಅಲ್ಲಿ ಚರ್ಮ ಬೆಳೆದು ತೆರೆದ ಗಾಯವನ್ನು ಆವರಿಸಿಬಿಡುತ್ತದೆ.
ಗಾಯ ಮಾಯುವುದೆಂದರೆ ತೆರೆದ ಗಾಯದ ಮೇಲೆ ಹೊಸ ಚರ್ಮ ಬೆಳೆದು ಗಾಳಿಯ ಸಂಪರ್ಕವು ದೇಹದ ದ್ರವಗಳಿಗೆ ತಾಗದಂತೆ ತಡೆಯುವುದು. ಗಾಯವು ತಂತಾನೇ ಮಾಯುವಾಗ ಹೊಸ ಚರ್ಮ ರೂಪುಗೊಳ್ಳುವಾಗ ನರಾಗ್ರಗಳು ವಿಚಲಿತಗೊಂಡು ನವೆ ಆಗುತ್ತದೆ. ಆ ನವೆ ತಾಳಲಾರದೆ ಕೆರೆದೆವೆನ್ನೋಣ - ಆ ಪರಚುವಿಕೆಯಿಂದ ಆಗತಾನೇ ನವಿರಾಗಿ ಮೂಡುತ್ತಿರುವ ಚರ್ಮ/ಜೀವಕೋಶಗಳು ಮತ್ತೆ ಹರಿದು ಗಾಯವಾಗುತ್ತದೆ.ಅದಕ್ಕೆ ತಿಳಿದವರು ಹೇಳುತ್ತಾರೆ; ಗಾಯದ ನವೆ ಗಾಯ ಮಾಯುವುದರ ಮುನ್ಸೂಚನೆ.ಆಗ ಕೆರೆಯಬೇಡಿ.
"ತರಚುಗಾಯವ ಕೆರೆದು ಹುಣ್ಣಾಗಿಸುವುದು ಕಪಿ" - ಎಂದು ಕಗ್ಗ ಪ್ರಸ್ತಾಪಿಸುತ್ತದೆ.ಮನಸ್ಸಿಗೆ ಆದ ಬೇಸರವನ್ನು ಮೌನವು ದುರಸ್ತಿ ಮಾಡುತ್ತಿರುವಾಗ ಮತ್ತೆ ಮತ್ತೆ ನೆನಪಿಸಿಕೊಂಡು ಹಲುಬುವ ಕಪಿಬುದ್ದಿ ಸಲ್ಲದು ಎಂದು ಮಂಕುತಿಮ್ಮನ ಕಿವಿ ಮಾತು.
ದೇಹದ ಗಾಯದ ಸುದ್ದಿಗೆ ಹಿಂತಿರುಗೋಣ- ಗಾಯವಾದಾಗ ಮೂಡುವ ಹೊಸ ಚರ್ಮ ಗಾಯವಾಗದಿದ್ದರೆ ಬೆಳೆಯುತ್ತಿರಲಿಲ್ಲ. ಹಾಗೆ ಸುಮ್ಮನೆ ಚರ್ಮ ಬೆಳೆದಿದ್ದರೆ ಮೈಯೆಲ್ಲಾ ಗಂಟುಗಳಾಗಿಬಿಡುತ್ತಿತ್ತು. ಹಾಗೆ ಆಗದು ಅಂದ ಮೇಲೆ ಗಾಯವಾಗಿದೆ ಅಲ್ಲಿ ಹೊಸ ಜೀವಕೋಶಗಳನ್ನು ಬೆಳೆಸಿ ಚರ್ಮದ ಮುಸುಕು ಹಾಕಬೇಕೆಂಬ ಮುನ್ಸೂಚನೆಯನ್ನು ನಾವೇನೂ ಕಾಯಕ್ಕೆ ಕಲಿಸಿಲ್ಲ. ಈ ದುರಸ್ತಿ ಕಾಯಕ ತಂತಾನೇ ಜರುಗತೊಡಗುತ್ತದೆ.
ಕೆಲವೊಮ್ಮೆ ಗಾಯ ವಾಸಿಯಾಗುವಾಗ ಅಗತ್ಯಕ್ಕೂ ಮೀರಿ ಹೆಚ್ಚು ಬೆಳವಣಿಗೆ ಆಗಿ ಗಾಯವಾದೆಡೆ ಗಂಟು ಮೂಡುತ್ತದೆ. ಆದರೆ ಅದು ಕ್ರಮೇಣ ಸರಿಯಾಗುತ್ತದೆ.
ಅದು ಹಾಗಿರಲಿ, ದುರಸ್ತಿಗಾರರಿಗೆ ಕರೆ ಕಳಿಸಿದವರು ಯಾರು? ಆ ದುರಸ್ತಿ ಮೊದಲಾದದ್ದು ಹೇಗೆ?
ಜೀವಿಗಳಿಗೆ ಯಾವುದೇ ಸಂದೇಶವೂ ರಾಸಾಯನಿಕ ಭಾಷೆಯಲ್ಲೇ ಆಗಬೇಕು. ಗಾಯವಾದಾಗ ಈ ಮೊದಲು ಇದ್ದ ಅಣು ಗಾಯವಾದೆಡೆ ರೂಪುಗೊಳ್ಳಬೇಕು. ಹಾಗೆ ರೂಪುಗೊಳ್ಳುವ ಅಣು ಯಾವುದು? ಗಾಯವು ಉಂಟುಮಾಡುವ ರಾಸಾಯನಿಕ ಕ್ರಿಯೆಯ ಉತ್ಪನ್ನ ಯಾವುದು?
ಈ ಪ್ರಶ್ನೆಗೆ ಉತ್ತರವನ್ನು ಅರಿಜೋನಾ ವಿಶ್ವ ವಿದ್ಯಾನಿಲಯದ ಕಿನ್ ವೋಂಗ್ ಅವರು ಕಂಡುಕೊಂಡಿದ್ದಾರೆ. ಗಾಯ ಮುಚ್ಚಲು ನಿರ್ದೇಶಿಸುವ ಅಪಾಯ DII4 'ಪ್ರೋಟೀನ್. ಈ ಪ್ರೋಟೀನ್ ದೇಹದಲ್ಲಿ ಇರುವುದಿಲ್ಲ. ಆದರೆ ದೇಹದ ಯಾವ ಭಾಗದಲ್ಲಿ ವ್ರಣ ವಾಗುವುದೋ, ಅಲ್ಲಿ ಉಂಟಾಗಿ ದುರಸ್ತಿ ಕಾರ್ಯಕ್ಕೆ ಹಸಿರು ಬಾವುಟ ತೋರಿಸುವುದು. ಕಾರ್ಯ ಮುಗಿದೊಡನೆ ಆ ಅಣು ನಿರ್ಗಮಿಸುವುದು.
ನಮ್ಮ ಮನಸ್ಸಿಗೇಳುವ ಮುಂದಿನ ಪ್ರಶ್ನೆ ತೀರಾ ಸಹಜವಾದದ್ದು, ಆ ಸಂಶ್ಲೇಷಣೆ ಗಾಯವಾದಾಗ ಆಗಲು ಕಾರಣವಾದರೂ ಏನು? ದೇಹದ ಸುಸ್ತಿತಿಯಿರುವಾಗ ಜೀವಕೋಶಗಳು ಒಂದು ಬಗೆಯ ಯಾಂತ್ರಿಕ ಬಿಗುವಿನ ಸಮಸ್ಥಿತಿಯಲ್ಲಿರುತ್ತದೆ. ಆ ಬಿಗುವು, ಗಾಯವಾದಾಗ ನಷ್ಟವಾಗುವ ಜೀವಕೋಶಗಳಿಂದಾಗಿ ಸಮಸ್ಥಿತಿಯ ಏರುಪೇರಿನಿಂದ - ಬದಲಾಗುತ್ತದೆ ಈ ಬಿಗುವಿನ ಬದಲಾವಣೆಯಿಂದ 'DII4 ' ಅಣು ರೂಪುಗೊಳ್ಳುತ್ತದೆ.
ಈ ಅಣುವಿನ ಪತ್ತೆಯಿಂದ ಆಉವ ಪ್ರಯೋಜನವಾದರೂ ಏನು? ವ್ಯಾವಹಾರಿಕ ಪ್ರಶ್ನೆ ಇದು.
ಮನೆ ಬಿದ್ದುಹೋದಾಗ ದುರಸ್ತಿ ಮಾಡಲು ಇಂಜಿನಿಯರ್ ಅವರ ಸಲಹೆ ಪಡೆಯುತ್ತೇವಲ್ಲವೆ? ಇದು ಜೈವಿಕ ಇಂಜಿನಿಯರಿಂಗ್ ಇಲ್ಲಿ ಆಗುವುದು ಕಳೆದುಹೋದ ಜೀವಕೋಶಗಳ ಮರು ನಿರ್ಮಾಣ, ಹಾನಿಕರ ಅಣುಗಳ ದಾಳಿಯನ್ನು ತಪ್ಪಿಸುವ ಆವರಣವನ್ನು ಆರೋಗ್ಯಕರ ಜೀವಕೋಶಗಳ ಸುತ್ತಲೂ ನಿರ್ಮಿಸುವ ಕಲೆಗಾರಿಕೆಯುಳ್ಳ ಇಂಜಿನಿಯರ್ DII4 ಎಂಬ ಪ್ರೋಟೀನ್ ಹೀಗೆ ಊಹಿಸೋಣ. ರೋಗಗ್ರಸ್ಥ ಜೀವಕೊಶಗಳಿಗೂ ಆರೋಗ್ಯಕರ ಜೀವ ಕೋಶಗಳಿಗೂ ಪ್ರತ್ಯೇಕ ಪ್ರತ್ಯೆಕನ ಕಲ್ಪಿಸಲು, ನಮ್ಮ ದೇಹದಲ್ಲಿ DII4 ಪ್ರೋಟೀನ್ ಅನ್ನು ಉಂಟುಮಾಡಿ ಸಾಧಿಸಬಹುದೆ?
ಉತ್ತರ ಇಷ್ಟು ಸರಳ ಇರದು. ಏನೇ ಆಗಲೀ, ದೊರೆತ ಕೀಲಿಕೈಯಿಂದ ರಹಸ್ಯ ಗೃಹ ಪ್ರವೇಶಿಸಿದ್ದೇವೆ. ಮುಂದಿನ ತಪಾಸಣೆ ಫಲಿತಾಂಶಗಳನ್ನು ಕಾದು ನೋಡೋಣ. ಹೆಚ್ಚಿನ ವಿವರಕ್ಕೆ ನೇಚರ್ ಕಮ್ಯುನಿಕೆಶನ್ಸ್ ನೋಡಿ.
ಹೂವು ಹೊರಳುವುದು ಸೂರ್ಯನ ಕಡೆಗೆ, ನಮ್ಮ ದಾರಿ ಬರಿ ಚಂದ್ರನವರೆಗೆ-ಕಣವಿ ಕನಸು ಮನಸ್ಸಿನ ವೇಗದಲ್ಲಿ ಸಾಗುತ್ತದೆ. ವಿಜ್ಞಾನ ಸಂಶೋಧನೆ ಕುಂಟುತ್ತಾ ಬೆನ್ನಟ್ಟಬೇಕಲ್ಲವೆ?
ಗಾಯ ಮಾಯವಾದರೆ ಅದಕ್ಕೆ ವೈದ್ಯರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ದ್ವಿತೀಯ ಸೋಂಕು ಆಗದಂತೆ ತಡೆದಿದ್ದಾರೆ. ಅದಕ್ಕೆ ಅವರು ಅರ್ಹರು. ದೇಹದ ಗಾಯ ಮಾಯವಾಗಿಸುವ ಸಾಮರ್ಥ್ಯ, ಇದೀಗ ಹೊಸ ಲೋಕವನ್ನು ತೆರೆದಿದೆ; ವಿಜ್ಞಾನಿಗಳು ಜನರ ಮೆಚ್ಚುಗೆಯಿಂದ ದೂರವೇ ಉಳಿಯಬಾರದಲ್ಲವೇ?
ಮೂಲ: ಸೈನ್ಸ್ ಫಾರ್ ಸೋಶಿಯಲ್ ಚೇಂಜ್
ಕೊನೆಯ ಮಾರ್ಪಾಟು : 4/24/2020