অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ತಂಬಾಕೋ ಆರೋಗ್ಯವೋ

ಆಧುನಿಕ ಭಾರತದ ಆರೋಗ್ಯ ಸೇವೆ ಮತ್ತು ಅರ್ಬುದ ಚಿಕಿತ್ಸೆಯಲ್ಲಿ ಪ್ರಗತಿದಾಯಕ ಬದಲಾವಣೆ.

ಮೇ,೩೧ ವಿಶ್ವ ತಂಬಾಕು ರಹಿತ ದಿನ. ತಂಬಾಕು ಸಂಬಂಧಿ ರೋಗಗಳಿಂದ ವಿಶ್ವದಲ್ಲಿ ಪ್ರತೀ ವರ್ಷ ಸಾವನಪ್ಪುವವರ ಸಂಖ್ಯೆ ೫೪ ಲಕ್ಷ. ಪ್ರಪಂಚದಲ್ಲಿ ಸಾವಿಗೆ ಕಾರಣವಾಗುವ ಪ್ರಮುಖ ಎಂಟು ಕಾರಣಗಳಲ್ಲಿ ತಂಬಾಕಿಗೆ ಆರನೇ ಸ್ಥಾನ!. ತಮ್ಬಾಕಿನಿಂದ ಬರುವ ಬಾಯಿ ಕ್ಯಾನ್ಸರ್ ಗೆ ಹೆಚ್ಚಾಗಿ ತುತ್ತಾಗುತ್ತಿರುವವರು ಭಾರತೀಯರು. ತಂಬಾಕು ಸೇವನೆಯಿಂದ ಆರೋಗ್ಯದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು, ಜಾಗೃತಿ ಮೂಡಿಸಲು ಪ್ರತೀ ವರ್ಷ ಈ ದಿನ ಆಚರಿಸಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆ ೧೯೮೭ ರಿಂದ ವಿಶ್ವ ತಂಬಾಕು ರಹಿತ ದಿನ ಆದರಿಸುತ್ತಿದೆ.

ತಂಬಾಕು ಮತ್ತು  ತಂಬಾಕು  ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಹಲವು ದಶಕಗಳಿಂದಲೂ ನಮ್ಮಲ್ಲಿ ಅನೇಕರು ಮಾತನಾಡಿದ್ದೇವೆ. ಇಲ್ಲವೇ ಕೇಳಿದ್ದೇವೆ. ಬಹುತೇಕ ಓದುಗರು, ಏಕೆ ಈ ವೈದ್ಯರು ತಂಬಾಕು ಸೇವಿಸುವವರ ಬಗ್ಗೆ ಇಷ್ಟೊಂದು ಕಾಳಜಿ ವಹಿಸುತ್ತಾರೆ, ಆತಂಕ ಪಡುತ್ತಾರೆ ಎಂದು ಆಶ್ಚರ್ಯ ವ್ಯಕ್ತ ಪಡಿಸುತ್ತಾರೆ.ಇದಕ್ಕೆ ಕಾರಣವಿದೆ. ತಂಬಾಕು ಸಂಬಂಧಿ ಕಾಯಿಲೆಗಳಿಂದ ಸಾಯುತ್ತಿರುವವರ ಸಂಖ್ಯೆ ವರ್ಷದಲ್ಲಿ ನಿತ್ಯ ೩ ಜಂಬೋ ಜೆಟ್ ವಿಮಾನಗಳ ದುರಂತದಿಂದ ಆಗುವ ಸಾವಿಗೆ ಸಮನಾಗಿದೆ. ಒಬ್ಬ ವೈದ್ಯ ತಂಬಾಕು ಸೇವನೆಯಿಂದ ಕಾಯಿಲೆಗೆ ತುತ್ತಾದ ವ್ಯಕ್ತಿಗಳಿಗೆ ಜೀವಮಾನ ಪರ್ಯಂತ ಚಿಕಿತ್ಸೆ ನೀಡುವುದಕ್ಕಿಂತ ತಂಬಾಕು ಸೇವನೆ ನಿಯಂತ್ರಣಕ್ಕೆ ಪ್ರೇರಣೆ ನೀಡುವ ಮೂಲಕ  ಹೆಚ್ಚು ಪ್ರಾಣಗಳನ್ನು ಉಳಿಸಬಹುದಾಗಿದೆ.

ತಂಬಾಕಿನಲ್ಲಿ ಸುಮಾರು ೬೦೦೦ಕ್ಕೂ ಹೆಚ್ಚು ರಾಸಾಯನಿಕಗಳಿವೆ.ಇವುಗಳ ಪೈಕಿ ೬೦ಕ್ಕೂ ಹೆಚ್ಚು ರಾಸಾಯನಿಕಗಳು ಮೊದಲ ಗುಂಪಿನ ವಿಷ ವಸ್ತುಗಳು ಎಂದು ಕ್ಯಾನ್ಸರ್ ಕುರಿತಂತೆ ಸಂಶೋಧನೆ ನಡೆಸಿರುವ ಅಂತರಾಷ್ಟ್ರೀಯ ಸಂಸ್ಥೆಗಳು ತಿಳಿಸಿವೆ. ಅವುಗಳೆಂದರೆ -

  • ಪಾಲಿಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋ ಕಾರ್ಬನ್ಸ್ (ಪಿ.ಎ.ಎಚ್) - ಬೆನ್ಜೋ (ಎ) ಪೆರೇನೆ.
  • ಎನ್ - ನೈಟ್ರೋಸಮೈನ್ಸ್ - ನೈಟ್ರೊಸೊನೊರ್ನೈಕೊಥೈನ್.
  • ಆರೋಮ್ಯಟಿಕ್ ಅಮೈನ್ಸ್ - ನೆಪ್ತೊಲಮೈನ್
  • ಆಲ್ದೆ ಹೈಡ್ಸ್ - ಫಾರ್ಸಮಾಲ್ದಹೈದೆ
  • ಬಾಷ್ಪವಾಗುವ ಹೈದ್ರೊಕಾರ್ಬನ್ಸ್ - ಬೆನ್ ಜೇನ್
  • ಲೋಹಗಳು ಮತ್ತು ಸಾವಯವಲ್ಲದ ವಸ್ತುಗಳು -ಆರ್ಸೆನಿಕ್, ನಿಕಲ್, ಕ್ರೊಮಿಯಮ್, ಕ್ಯಾಡ್ಮಿಯಂ.ಪೊಲೋನಿಯಂ ೨೧೦.

ಭಾರತದಲ್ಲಿ ದೊರಕುವ ಅಗಿಯುವ ತಂಬಾಕು ಉತ್ಪನ್ನಗಳಲ್ಲಿ ನಿಗದಿ ಮಾಡಿರುವ ಪರಿಮಾಣಕ್ಕಿಂತ ಶೇಕಡಾ ೩೦ ರಷ್ಟು ಅಧಿಕ ಲೋಹಗಳು ಇರುವುದನ್ನು ಭಾರತೀಯ ಪರಿಸರ ವೈದ್ಯಕೀಯ ಸಂಸ್ಥೆಯ ಅಧ್ಯಯನ ಧ್ರುಡಪದಿಸಿದೆ.

ತಂಬಾಕು ಸೇವನೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ನಮ್ಮಲ್ಲಿ ಅನೇಕರಿಗೆ ಅರಿವಿದ್ದರೂ ದೇಶದಲ್ಲಿ ತಂಬಾಕು ಸೇವನೆ ಮಾಡುವವರ ಸಂಖ್ಯೆ ಸುಮಾರು ೩೦೦ ದಶಲಕ್ಷ ತಲುಪಿದೆ. ಪ್ರತೀ ವರ್ಷ ದೇಶದಲ್ಲಿ ೩೦ ರಿಂದ ೪೦ ಲಕ್ಷ ಮಂದಿ ಈ ದುರಭ್ಯಾಸದ ಫಲವಾಗಿ ಹೃದಯ, ಶ್ವಾಸಕೋಶ ಅಥವಾ ಕ್ಯಾನ್ಸರ್ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಗಿಯುವ ತಂಬಾಕು ಬಳಕೆಯಿಂದಾಗಿ ವಿಶ್ವದಲ್ಲೇ ಅತಿ ಹೆಚ್ಚು ಬಾಯಿ ಕ್ಯಾನ್ಸರ್ ರೋಗಕ್ಕೆ ತುತ್ತಾಗುವವರ ಸಂಖ್ಯೆ ಭಾರತದಲ್ಲೇ ಹೆಚ್ಚಾಗಿದೆ. ದೇಶದ ಪ್ರಜ್ಞಾವಂತ ನಾಗರೀಕರಾಗಿ ಎಚ್ಚೆತ್ತುಕೊಳ್ಳಲು ಇಷ್ಟು ಅಂಕಿ-ಸಂಖ್ಯೆಗಳು ಸಾಕಲ್ಲವೇ?

ತಂಬಾಕು ಸೇವನೆಯಿಂದ ದೇಹದ ಪ್ರಯೊಂದು ಜೀವಕೋಶದ ಮೇಲೂ ದುಷ್ಪರಿಣಾಮ ಬೀರುತ್ತದಾದರೂ, ಪ್ರಮುಖವಾಗಿ ಹೃದಯ ಸಂಬಂಧಿ, ಶ್ವಾಸಕೋಶ ತೊಂದರೆ ಹಾಗೂ ಕ್ಯಾನ್ಸರ್ ಕಾಯಿಲೆಗಳು ಕಾಡುತ್ತವೆ. ಬಹಳ ಹಿಂದೆಯೇ ಅಂದರೆ ೧೯೯೯ ರಲ್ಲಿ ರಥ್ ಮತ್ತು ಚೌಧರಿ ಅವರು ನಡೆಸಿದ ಐ.ಸಿ.ಎಂ.ಆರ್. ಅಧ್ಯಯನದಲ್ಲಿ ಈ ಮೂರು ಕಾಯಿಲೆಗಳ ಚಿಕಿತ್ಸೆಗಳಿಗೆ ಅನುಕ್ರಮವಾಗಿ ೩,೫೦,೦೦೦. ೨೯೦೦೦ ಹಾಗೂ ೨೩,೩೦೦ ರೂಪಾಯಿ ವೆಚ್ಚವಾಗುತ್ತದೆ. ಎಂದು ತಿಳಿಸಿರುತ್ತಾರೆ. ಇದು ದೇಶದ ಜನರ ದೃಷ್ಟಿಯಿಂದ ತೀವ್ರ ಆತಂಕಕಾರಿ. ಕಾರಣ ಭಾರತದಲ್ಲಿ ಶೇಕಡಾ ೮೦ ರಷ್ಟು ಜನರು ಗ್ರಾಮೀಣ ಪ್ರದೇಶದಲ್ ವಾಸಿಸುತ್ತಾರೆ. ದೇಶದ ಪ್ರತಿ ಶತ ೭೫ ರಷ್ಟು ಜನತೆಗೆ ಪ್ರತಿ ದಿನ ೧೦೦ ರೂಪಾಯಿ ಖರೀದಿ ಮಾಡುವ ಸಾಮರ್ಥ್ಯವೂ ಇಲ್ಲ. ವಸ್ತು ಸ್ಥಿತಿ ಹೀಗಿರುವಾಗ ಜನರು ಏಕೆ ಇಂಥ ಅನಗತ್ಯ ವೆಚ್ಹ ಭರಿಸಬೇಕು. ಶ್ರೀ ಸಾಮಾನ್ಯ ಏಕೆ ಸಂಕಷ್ಟಕ್ಕೆ ಒಳಗಾಗಬೇಕು.

ತಂಬಾಕಿಗೆ ಸಂಬಂದಿಸಿದ ಕೆಅವು ಸತ್ಯಗಳು :

  • ವಿಶ್ವಾದ್ಯಂತ ಪ್ರತಿ ವರ್ಷ ೫.೪ ಮಿಲಿಯನ್ ಜನರು  ತಂಬಾಕು ಸೇವನೆಯಿಂದ ಸಾಯುತಿದ್ದಾರೆ.
  • ದುರಂತವೆಂದರೆ, ಇದರಲ್ಲಿ ಶೇಕಡಾ ೮೦ ರಷ್ಟು ಸಾವುಗಳು ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಸಂಭವಿಸುತ್ತಿವೆ.
  • ಪ್ರಪಂಚದಲ್ಲಿ ಸಾವಿಗೆ ಕಾರಣವಾಗುವ ಎಂಟು ಪ್ರಮುಖ ಕಾರಣಗಳಲ್ಲಿ ತಂಬಾಕಿಗೆ ಆರನೇ ಸ್ಥಾನ.
  • ಪ್ರತೀ ವರ್ಷ ೮ ರಿಂದ ೯ ಲಕ್ಷ ಭಾರತೀಯರು ತಂಬಾಕು ಸಂಬಂಧಿ ರೋಗಗಳಿಂದ ಸಾಯುತ್ತಿದ್ದಾರೆ. ಇವೆಲ್ಲವೂ ತಡೆಗಟ್ಟಬಹುದಾದ ಸಾವುಗಳು.
  • ತಂಬಾಕು ಸೇವನೆಯಿಂದ ಬರುವ ರೋಗಗಳಿಂದಾಗಿ ಪ್ರತೀ ನಿತ್ಯ ೨,೨೦೦ ಮಂದಿ ಭಾರತೀಯರು ಸಾವನ್ನಪ್ಪುತ್ತಿದ್ದಾರೆ.
  • ವಿಶ್ವದಲ್ಲಿ ಬಾಯಿ ಕ್ಯಾನ್ಸರ್ ಗೆ ತುತ್ತಾಗುತ್ತಿರುವವರಲ್ಲಿ ಭಾರತೀಯರೇ ಹೆಚ್ಚು. ಇದರಲ್ಲಿ ಶೇಕಡಾ ೯೦ ರಷ್ಟು ಬಾಯಿ ಕ್ಯಾನ್ಸರ್ ಗಳು ತಂಬಾಕಿನಿಂದ ಬರುತ್ತಿವೆ.
  • ಭಾರತದಲ್ಲಿ ಸುಮಾರು ಶೇಕಡಾ ೫೦ ರಷ್ಟು ಕ್ಯಾನ್ಸರ್ ರೋಗಗಳು ತಂಬಾಕು ಸೇವನೆಯಿಂದ ಬರುತ್ತಿವೆ.
  • ಬೇರೆಯವರು ಸೇದಿ ಬಿಟ್ಟ ಸಿಗರೇಟು ಅಥವಾ ಬೀಡಿಯ ಹೊಗೆಯನ್ನು ಸೇವಿಸುವವರಿಗೂ ಮೊದಲು ಸೇದಿದವರಿಗೆ ಇರುವ ಅಪಾಯಗಳೇ ಇವೆ. ಇದರಿಂದ ಮಕ್ಕಳು ಹಾಗೂ ವಯಸ್ಕರಲ್ಲಿ ರೋಗಗಳು ಹಾಗೂ ಅಕಾಲಿಕ ಮರಣಗಳು ಸಂಭವಿಸುತ್ತವೆ.

ಒಬ್ಬ ವೈದ್ಯನಾಗಿ ನಾನು ಗಮನಿಸಿದಂತೆ ಇದು ಕೇವಲ ಚಿಕಿತ್ಸೆಗೆ ಒಳಪಡುವ ರೋಗಿಯ ಮೇಲೆ ಮಾತ್ರವೇ ಪರಿಣಾಮ ಬೀರುವುದಿಲ್ಲ. ಬದಲಾಗಿ ಅವನ ಇಡೀ ಕುಟುಂಬದ ಆರ್ಥಿಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಅವರು ಭಾವನಾತ್ಮಕವಾಗಿ ಹಾಗೂ ಆರ್ಥಿಕವಾಗಿ ಬೆಂದು ಹೋಗುತ್ತಾರೆ. ಈ ಮಧ್ಯೆ ಗ್ರಾಮೀಣ ಪ್ರದೇಶದಲ್ಲಿ ಇಂಥ ರೋಗಿಗಳಿಗೆ ಸರಿಯಾದ ಆರೋಗ್ಯ ಸೇವೆಯೂ ದೊರಕುತ್ತಿಲ್ಲ.

ಹೀಗಾಗಿ ಅವರು ಪಟ್ಟಣ ಅಥವಾ ನಗರಕ್ಕೆ ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಪ್ರತೀ ವರ್ಷ ೧೦ ಲಕ್ಷ ಹೊಸ ಕ್ಯಾನ್ಸರ್ ಕಾಯಿಲೆಗಳು ದಾಖಲಾಗುತ್ತಿವೆ. ಈ ಪೈಕಿ ಶೇಕಡಾ ೫೦ ರಷ್ಟು ತಂಬಾಕು ಸೇವನೆಯಿಂದ ಉಂಟಾಗುತ್ತಿವೆ. ಇವುಗಳ ಪೈಕಿ ಪ್ರತಿ ಶತ ೯೫ ರಷ್ಟು ತಲೆ ಮತ್ತು ಕುತ್ತಿಗೆಗೆ ಸಂಬಂಧಿಸಿದ್ದಾಗಿದೆ.ತಲೆ ಮತ್ತು ಕುತ್ತಿಗೆಗೆ ಸಂಬಂಧಿಸಿದ ಕ್ಯಾನ್ಸರ್ ಕಾಯಿಲೆ ಬಾಯಿ, ಗಂಟಲು, ದ್ವನಿ ಪೆಟ್ಟಿಗೆ, ಅನ್ನನಾಳ ಕ್ಯಾನ್ಸರ್ ಅನ್ನು ಒಳಗೊಂಡಿದೆ. ಇವು ನಮ್ಮ ಶರೀರದ ಅತ್ಯಗತ್ಯ ಮತ್ತು ಅಮೂಲ್ಯವಾದ ಮಾತನಾಡುವುದು, ಆಹಾರ ಸೇವನೆ ಹಾಗೂ ಉಸಿರಾಟದಂಥ ಪ್ರಮುಖ ಕಾರ್ಯವನ್ನು ನಿರ್ವಹಿಸುತ್ತವೆ. ಇಂಥ ಭಾಗಗಳು ಕ್ಯಾನ್ಸರ್ ಗೆ ತುತ್ತಾದರೆ ಅದು ಪ್ರಾಣಕ್ಕೆ ಕುತ್ತು ತರುತ್ತದೆ. ಒಬ್ಬ ಕ್ಯಾನ್ಸರ್ ಶಸ್ತ್ರ ಚಿಕಿತ್ಸಾ ವೈದ್ಯನಾಗಿ ಪ್ರತಿ ನಿತ್ಯ ಇಂಥ ಕಾಯಿಲೆಯಿಂದ ಬಳಲುತ್ತಿರುವವರ ದವಡೆ, ನಾಲಿಗೆ, ಗಂಟಲು ಅಥವಾ ಧ್ವನಿ ಪೆಟ್ಟಿಗೆ ತೆಗೆದು ಹಾಕಿ ಬದಲಿ ವ್ಯವಸ್ಥೆ ಅಳವಡಿಸುತ್ತೇವೆ. ಈ ಕಾಯಿಲೆಗಳು ಬಹುತೇಕ ಸ್ವಯಂ ಕೃತ ಅಪರಾಧ. ಇದನ್ನು ಸ್ವಯಂ ಕಾಳಜಿಯಿಂದ ತಡೆಯಲೂ ಸಾಧ್ಯವಿದೆ ಅಲ್ಲವೇ.

ತೊಂದರೆಗೆ ಮಾತ್ರವಲ್ಲ ಕಾಯಿಲೆಗೆ ಕಾರಣವಾಗುವ ಮೂಲಕ್ಕೆ ಮೊದಲು  ಚಿಕಿತ್ಸೆ ಮಾಡಿ ಎಂಬ ಪ್ರಮುಖ ನೀತಿ ವೈದ್ಯ ವಿಜ್ಞಾನದಲ್ಲಿದೆ. ಉದಾಹರಣೆಗೆ ಒಬ ವ್ಯಕ್ತಿಗೆ ಜ್ವರ ಇದೆ ಎಂದು ವೈದ್ಯರು ಪತ್ತೆ ಮಾಡಿದರೆ, ಇದಕ್ಕೆ ಪ್ಯಾರಾ ಸೆಟಮಾಲ್ ಚಿಕಿತ್ಸೆ ಸಾಕೆ? ಉತ್ತರ ಖಂಡಿತಾ ಇದಲ್ಲ. ಈ ಜ್ವರ ಯಾವುದು ಮಲೇರಿಯಾವೆ, ಟೈಫಾಯಿಡ್ , ಡೆಂಗ್ಯೂ, ಎಚ್ ೧ ಎನ್ ೧ ಇತ್ಯಾದಿ ಯಾವುದು ಎಂಬುದನ್ನೂ ಪತ್ತೆ ಮಾಡಬೇಕಾಗುತ್ತದೆ. ಕಾಯಿಲೆಯನ್ನಷ್ಟೇ ಅಲ್ಲ ಕಾಯಿಲೆ ಯಾವುದು ಎಂಬುದನ್ನೂ ಪತ್ತೆ ಮಾಡುವುದೂ ಕಡ್ಡಾಯ. ಅದೇ ರೀತಿ ಕ್ಯಾನ್ಸರ್ ಗೆ ಚಿಕಿತ್ಸೆ ನೀಡಿದರಷ್ಟೇ ಸಾಲದು. ಅದರ ತೀವ್ರತೆ ಎಷ್ಟಿದೆ. ಅದಕ್ಕೆ ಶಸ್ತ್ರ ಚಿಕಿತ್ಸೆ ಮಾಡಬೇಕೇ, ಕೆಮೋ ಥೆರಪಿ ಮಾಡಬೇಕೆ ಅಥವಾ ರೇಡಿಯೋ ಥೆರಪಿ ಮಾಡಬೇಕೆ ಎಂಬುದನ್ನೂ ನಿರ್ಧರಿಸಬೇಕಾಗುತ್ತದೆ. ಜೊತೆಗೆ ಅದಕ್ಕೆ ಕಾರಣವಾದ ಅಂಶದ ಬಗ್ಗೆ ಗಮನ ಹರಿಸಬೇಕಾಗುತ್ತದೆ. ಹೀಗಾಗಿ ವೈಜ್ಞಾನಿಕ ವಿಶ್ವ ಜೀವ ಉಳಿಸುವುದಷ್ಟೇ ಅಲ್ಲ, ಇಂಥ ರೋಗಿಗಳ ಜೀವನದ ಗುಣಮಟ್ಟವನ್ನು ಕೂಡ ಸುಧಾರಣೆ ಮಾಡುವತ್ತ ಗಮನ ಹರಿಸಿದೆ. ಇವುಗಳಲ್ಲಿ ಪ್ರಧಾನವಾದದ್ದು ಕ್ಯಾನ್ಸರ್ ತಡೆಯೇ ಆಗಿದೆ.

ನನ್ನ ಬಳಿ ಬಂದ ರೋಗಿಗಳಲ್ಲಿ ಒಬ್ಬರು ೩೦ ವರ್ಷದ ಯುವಕ. ಅವರು ತಂತ್ರಾಂಶ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು. ಅವರಿಗೆ ನಾಲಿಗೆಯ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಇದಕ್ಕೆ ಕಾರಣ ತಂಬಾಕು ಸೇವನೆಯೇ. ಆ ಯುವಕನಿಗೆ ಕ್ಯಾನ್ಸರ್ ಇದೆ ಎಂಬುದು ಅವರ ಕುಟುಂಬದವರಿಗೆ ಆಘಾತ ತಂದಿತ್ತು .ಮಿಗಿಲಾಗಿ ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದ ಆತನ ಪತ್ನಿಗೆ ದೊಡ್ಡ ಆಘಾತ ಉಂಟು ಮಾಡಿತ್ತು. ಕೆಮೋ ಥೆರಪಿ ಮತ್ತು ರೇಡಿಯೋ ಥೆರಪಿಯಿಂದ ಕೂಡ ಆ ಕ್ಯಾನ್ಸರ್ ಗೆಡ್ಡೆಯನ್ನು ನಿಯಂತ್ರಿಸಲು ಆಗಲಿಲ್ಲ. ಕೊನೆಗೆ ಕ್ಯಾನ್ಸರ್ ಗೆಡ್ಡೆ ಕುತ್ತಿಗೆವರೆಗೂ ವಿಸ್ತರಿಸಿತ್ತು. ಕುತ್ತಿಗೆಯ ಮೇಲು ಭಾಗದಲ್ಲಿ ಚರ್ಮದ ಮೇಲೂ ಗೋಚರಿಸುತ್ತಿತ್ತು. ಆ ಯುವಕನನ್ನು ಸಾವಿನ ದವಡೆಯಿಂದ ಕಾಪಾಡಲು ಆಗಲಿಲ್ಲ. ಆತ ಸಾಯುವ ಮುನ್ನ ಆಡಿದ ಮಾತುಗಳು ಮತ್ತೆ ಮತ್ತೆ ನೆನಪಿಗೆ ಬರುತ್ತವೆ. ಡಾಕ್ಟರ್ ನಾನು ತಂಬಾಕು ಸೇವಿಸಿದ ಪರಿಣಾಮ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದೇನೆ. ಆದರೆ ನಾನು ವರ್ಷಗಳ ಹಿಂದೆಯೇ ತಂಬಾಕು ತ್ಯಜಿಸಿದೆ. ಆಮೇಲೆ ಮಾಡುವೆ ಆಗಿದ್ದು. ಈಗ ನಾನೇನು ಮಾಡಲಿ? ಆತ ಇಹವನ್ನು ತ್ಯಜಿಸಿದ. ಆತನ ಯುವ ಪತ್ನಿ ವಿಧವೆಯಾದಳು. ಇದು ಒಬ್ಬನ ಕಥೆಯಲ್ಲ. ಇಂಥ ಲಕ್ಷಾಂತರ ನಿದರ್ಶನಗಳಿವೆ.

ಮಾರ್ಗರೇಟ್ ತಿಯೋಪಿಲ್ ಅವರ ಚೀನಾದ ಒಂದು ಕಾಲ್ಪನಿಕ ಜನಪ್ರಿಯ ಕಥೆ ಇದೆ. ಅದು ಇಲ್ಲಿ ಪ್ರಸ್ತುತ ಎನಿಸುತ್ತದೆ.

ಒಂದು ಕಾಲದಲ್ಲಿ ಒಬ್ಬ ಇದ್ದ. ಆತನಿಗೆ ಮೂವರು ಮಕ್ಕಳಿದ್ದರು. ಎಲ್ಲರೂ ವೈದ್ಯರಾದರೂ, ಆದರೆ ಕೊನೆಯ ಪುತ್ರ ಮಾತ್ರ ಜನಪ್ರಿಯ ವೈದ್ಯನಾದ. ಆ ಪ್ರಾಂತ್ಯದಲ್ಲಿ ಹೆಸರುವಾಸಿಯಾದ. ದೂರದೂರದ ಊರುಗಳಿಂದ ರೋಗಿಗಳು ಆ ವೈದ್ಯರನ್ನು ಹುಡುಕಿಕೊಂಡು ಬರುತ್ತಿದ್ದರು. ಗುಣಮುಖರಾಗುತ್ತಿದ್ದರು. ಒಬ್ಬರು ವೈದ್ಯತ್ರಯರ ತಂದೆಯನ್ನು ಕೇಳಿದರು. ಅಲ್ಲ ನಿಮ್ಮ ಎಲ್ಲ ಮೂರು ಮಕ್ಕಳೂ ಡಾಕ್ಟರ್ ಆಗಿದ್ದಾರೆ. ಆದರೆ ಕೊನೆಯವನು ಮಾತ್ರ ಇಷ್ಟು ಜನಪ್ರಿಯ ಆಗಿದ್ದು ಹೇಗೆ?

ಆಗ ತಂದೆ ಹೇಳಿದರು. ಈ ನನ್ನ ಕೊನೆಯ ಮಗ ಸಾವಿನಂಚಿನಲ್ಲಿರುವ ರೋಗಿಯನ್ನೂ ಸಹ ಸಹಜವಾಗಿ ಗುಣವಾಗಿಸುತ್ತಾನೆ. ಇದು ಎಲ್ಲರಿಗೂ ಗೊತ್ತು. ಆದರೆ ನನ್ನ ಮಧ್ಯದ ಮಗ ಕಾಯಿಲೆಯನ್ನು ಪತ್ತೆ ಮಾಡಿ ಅದು ದೊಡ್ಡದಾಗಿ ಬೆಳೆಯದಂತೆ ಚಿಕಿತ್ಸೆ ನೀಡುತ್ತಾನೆ. ಹೀಗಾಗಿ ಕೆಲವರು ಮಾತ್ರ ಅವನನ್ನು ಬಲ್ಲವರಾಗಿದ್ದಾರೆ. ನನ್ನ ದೊಡ್ಡ ಮಗ ಜನರ ಆರೋಗ್ಯ ರಕ್ಷಣೆಯ ಬಗ್ಗೆ ನಿಗಾ ಇಡುತ್ತಾನೆ. ಹೀಗಾಗಿ ಜನ ಕಾಯಿಲೆ ಬೀಳುವುದೇ ಕಡಿಮೆ. ಹೀಗಾಗಿ ಅವನು ಜನಪ್ರಿಯನಾಗಿಲ್ಲ. ಇದರಿಂದಾಗಿ ನನ್ನ ಕೊನೆಯ ಮಗನ ಹೆಸರು ಜನಪ್ರಿಯವಾಗಿದೆ. ನನ್ನ ಉಳಿದಿಬ್ಬರು ಮಕ್ಕಳ ಸೇವೆಯೇ ದೊಡ್ಡದು ಎಂದು ನಾನು ಭಾವಿಸುತ್ತೇನೆ. ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ರೋಗ ಬಾರದಂತೆ ತಡೆಯುವುದೇ ನಿಜವಾದ ವೈದ್ಯ ವೃತ್ತಿ.

ಮೂಲ: ಕುಟುಂಬ ವಾರ್ತೆ.

ಕೊನೆಯ ಮಾರ್ಪಾಟು : 4/20/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate