অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಧರೆ ಹತ್ತಿ ಉರಿದೊಡೆ

ಧರೆ ಹತ್ತಿ ಉರಿದೊಡೆ

ಕಳೆದ ೫೦ ವರ್ಷಗಳಿಂದ ಮಳೆಯ ಪ್ರಮಾಣ ಇಳಿಮುಖವಾಗುತ್ತಿದ್ದು , ಕಳೆದ ೨೫ ವರ್ಷಗಳಿಂದ ಈ ಇಳಿಮುಖತೆಯ ಪ್ರಮಾಣ ತೀವ್ರವಾಗುತ್ತಿದೆ. ಭಾರತದ ಕೆಲವು ಪ್ರದೇಶಗಳಲ್ಲಿ ವಿಪರೀತ ಮಳೆಯಾಗಿ ಪ್ರವಾಹ ಉಕ್ಕಿ ಹರಿದರೆ ಇನ್ನು ಕೆಲವು ಪ್ರದೇಶಗಳಲ್ಲಿ ವಾರ್ಷಿಕ ಸರಾಸರಿ ಮಳೆ ಕೂಡ ಸುರಿಯದೆ ಕೃಷಿಗೆ ತೀವ್ರ ತೊಡಕಾಗುವ ಜೊತೆಗೆ ಕುಡಿಯುವ ನೀರಿನ  ಸಮಸ್ಯೆ ಬಿಗಡಾಯಿಸಿಕೊಂಡಿದೆ. ಸಾಮಾನ್ಯವಾಗಿ ರೈತಾಪಿ ಜನತೆ ಮಳೆಯನ್ನ ರೋಹಿಣಿ, ಭರಣಿ, ಅಶ್ವಿನಿ, ಆರಿದ್ರ, ಪುನರ್ವಸು,ಹಸ್ತ, ಚಿತ್ತ, ಅನುರಾಧ ಎಂಬ ನಕ್ಷತ್ರಗಳ ಮೂಲಕ ಗುರುತಿಸುತ್ತಾರೆ  ಮತ್ತು ಮೊದಲನೆ ಪಾದ, ಎರಡನೆ ಪಾದ ಎಂದು ಎರಡು ಹಂತಗಳಲ್ಲಿ ವಿಂಗಡಿಸುತ್ತಾರೆ. ರೋಹಿಣಿ ಮಳೆಯ ಮೊದಲನೆ ಪಾದ, ಎರಡನೇ ಪಾದಗಳಲ್ಲಿ ಮಳೆಯಾಗದಿದ್ದರೆ ಕೃಷಿ ಭೂಮಿಯ ಉಳುಮೆ ಮಾಡಲಾಗುವುದಿಲ್ಲ; ಭರಣಿ ಮಳೆ ತನ್ನ ಎರಡೂ ಪಾದಗಳಲ್ಲಿ ಸುರಿಯದಿದ್ದರೆ ಬೀಜ ಬಿತ್ತನೆ ಮಾಡಲಾಗುವುದಿಲ್ಲ. ಹೀಗೆ ವಿವಿಧ ಮಳೆ  ನಕ್ಷತ್ರಗಳು ಬೇಸಾಯದ ಕೆಲಸಕಾರ್ಯಗಳ ಜೊತೆ ತಾಲೂಕು ಹಾಕಿಕೊಂಡಿವೆ. ಮಳೆಯ ಪ್ರಮಾಣ ಇಳಿಮುಖವಾಗುವುದರ ಜೊತೆಗೆ ಮಳೆ ತನ್ನ ಲಯಬದ್ದತೆಯ ಜೊತೆಗೆ ಮಳೆ ಸುರಿದಾಗ ಮಣ್ಣಿನಿಂದ ಹೊಮ್ಮುತ್ತಿದ್ದ ಸುಗಂಧಗಾಳಿ ಕೂಡ ಹೇಳ ಹೆಸರಿಲ್ಲದಂತಾಗಿದೆ. ಮಳೆ ಯಾಕೆ ತನ್ನ ಲಯ ಮತ್ತು ಸುಗಂಧ ಕಳೆದುಕೊಂಡಿವೆ ಎಂಬುದು ಇಂದಿನ ಜಗತ್ತಿನ ಚಿಂತೆಗೆ ಕಾರಣ ಮತ್ತು ಭೂಮಿಯ ಮೇಲಿನ ಜೀವಸಂಕುಲದ ಅಳಿವು ಉಳಿವಿನ ಪ್ರಶ್ನೆಯಾಗಿದೆ.

ಭೂಮಿಯ ಮೇಲಿನ  ತಾಪಮಾನ ಹೆಚ್ಚಾಗುತ್ತಿದೆ. ಕೈಗಾರಿಕಾ ಪೂರ್ವ ಕಾಲಕ್ಕೆ ಹೋಲಿಸಿದರೆ ಕೈಗಾರಿಕೊತ್ತರ ಕಾಲದಲ್ಲಿ ಜಾಗತಿಕ  ತಾಪಮಾನ  ಎರಡು ಪಟ್ಟು ಹೆಚ್ಚಾಗಿದೆ. ಅಂತರ ಸರ್ಕಾರ ಹವಾಮಾನ ವೈಪರೀತ್ಯ ಸಂಸ್ಥೆ (IPCC ) ಯಾ ಪ್ರಕಾರ ವಾತಾವರಣದಲ್ಲಿನ ಹಸಿರುಮನೆ ಅನಿಲಗಳ  (green house gales )   ಸಾಂದ್ರತೆಯ ಪ್ರಮಾಣ ಪ್ರತಿ ೧೦ ಲಕ್ಷ ಕಣಗಳ ಪೈಕಿ 390 (390 PPM ) ರಷ್ಟಿದೆ.ವಾತಾವರಣದಲ್ಲಿನ ಈ ಹಸಿರು ಮನೆ ಅನಿಲಗಳು ಸೂರ್ಯ ಮತ್ತು ಭೂಮಿ ನಡುವೆ ಇರುವ ಓಜೋನ್ ಅನಿಲಗಳ ಪದರವನ್ನ ಚಿದ್ರಗೊಳಿಸಿವೆ. ಹೀಗಾಗಿ  ಸೂರ್ಯನಿಂದ ಹೊಮ್ಮುವ ಅತಿ ನೇರಳೆ ಕಿರಣಗಳು (ultra voilet rays ) ವಾತಾವರಣದಲ್ಲಿನ ಹಸಿರು ಮನೆ ಅನಿಲಗಳನ್ನ ಬಿಸಿ  ಮಾಡುತ್ತಿವೆ; ಆದ್ದರಿಂದ ಜಾಗತಿಕ ತಾಪಮಾನ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ.ವಾತಾವರಣದಲ್ಲಿನ ಈ ಹಸಿರುಮನೆ ಅನಿಲಗಳ ದಟ್ಟಣೆಯನ್ನ ತಗ್ಗಿಸಲು ಜಗತ್ತಿನ ಮೇಲಿರುವ  ದೇಶಗಳು ಅನೇಕ ಸಭೆಗಳನ್ನ ನಡೆಸಿ ದಟ್ಟಣೆಯನ್ನು ೧೯೯೨ ರಲ್ಲಿ ಇದ್ದ ಪ್ರಮಾಣಕ್ಕೆ ತಗ್ಗಿಸಲು, ಅಂದರೆ ೩೫೦ ಪಿ ಪಿ ಎಂಗೆ ತಗ್ಗಿಸಲು ಆಗಾಗ ಚಿಂತನೆ ನಡೆಸುತ್ತಿವೆ;  ಆದರ್ ಇದು ಚಿಂತನೆಯ ಮಟ್ಟದಲ್ಲೇ ಉಳಿದು ಹೋಗಿದೆ. ೧೯೯೨ ರಲ್ಲಿ ಬ್ರೆಜಿಲ್ ದೇಶದ ರಿಯೋಡಿ-ಜನೈರೊ ಎಂಬ ಸುಂದರ ನಗರದಲ್ಲಿ ನಡೆದ ಜೀವವೈವಿಧ್ಯ ಶೃಂಗ ಸಭೆಯಲ್ಲಿ ತಮ್ಮ ತಮ್ಮ ದೇಶಗಳ ಜೀವವೈವಿಧ್ಯತೆಯನ್ನ ಸಂರಕ್ಷಿಸುವುದಾಗಿ ಮತ್ತು ಹೆಚ್ಚಿಸುವುದಾಗಿ ಒಂದು ಒಪ್ಪಂದ ನಡೆಯಿತು. ಎಲ್ಲ ದೇಶಗಳೂ ಇದಕ್ಕೆ ಸಹಿ ಹಾಕಿದ್ದವು. ಆದರೆ ಈ ಒಪ್ಪಂದದ ನಂತರ ಯಾವ ದೇಶದಲ್ಲಿಯೂ ಸಸ್ಯ ಪ್ರಬೇಧಗಳು ಹೆಚ್ಹಾಗುವುದಿರಲಿ ಇದ್ದ ಅನೇಕ ಸಸ್ಯ ಪ್ರಬೇಧಗಳು ನಾಶವಾದವು ಅಥವಾ ಅಳಿವಿನ ಅಂಚಿನಲ್ಲಿವೆ. 2009 ರಲ್ಲಿ ಕೋಪನ್ ಹೇಗನ್ ನಗರದಲ್ಲಿ ಜಾಗತಿಕ ತಾಪಮಾನ ತಗ್ಗಿಸುವ ಸಲುವಾಗಿ ಒಂದು ಶೃಂಗ ಸಭೆ ನಡೆಯಿತು. ಈ ಶೃಂಗ ಸಭೆಗೆ ಹೋಗುವುದೇ ಇಲ್ಲ ಎಂದು ಪಟ್ಟು ಹಿಡಿದಿದ್ದ ಭಾರತ ಸರ್ಕಾರದ  ಪ್ರತಿನಿಧಿಗಳು, ಅಂದರೆ ಅಂದಿನ ಡಾ. ಮನಮೋಹನ್ ಸಿಂಗ್ ಕೋಪನ್ ಹೇಗನ್ ಶೃಂಗ ಸಭೆಗೆ ಹೋಗಿ ನಮ್ಮ ದೇಶಕ್ಕೆ ಅಭಿವೃದ್ದಿಯ ಹಕ್ಕಿದೆಯಾದ್ದರಿಂದ ವಾತಾವರಣದಲ್ಲಿನ ಹಸಿರು ಮನೆ ಅನಿಲಗಳ ಕಡಿತ ಕುರಿತ ಒಪ್ಪಂದಕ್ಕೆ ಸಹಿ ಹಾಕಲು ಹಿಂದೇಟು ಹಾಕಿದರು, ಇದೇ ವಿತಂಡವಾದದ ಅಡ್ಡದಾರಿ ಹಿಡಿದ ಅಮೇರಿಕ ನಮಗೆ ನಮ್ಮ ಜೇವನ ಶೈಲಿಯ ಹಕ್ಕಿದ ಎಂದಿತು. ಹೀಗಾಗಿ  ಈ ಸರ್ಕಾರಿ ಪ್ರತಿನಿಧಿಗಳು ಒಂದು ಕಡೆ ಸಭೆ  ಸೇರಿ  ಮಾತಾಡಿದ್ದರಿಂದ ವಾತಾವರಣದ ಹಸಿರುಮನೆ ಅನಿಲಗಳ ಪ್ರಮಾಣ ತಗ್ಗುವುದಿರಲಿ ಅದರ ಪ್ರಮಾಣ ಮತ್ತಷ್ಟು ಹೆಚ್ಚಿತು. ಈ ಯಾವ ದೇಶಗಳಿಗೂ ಮುಖಕ್ಕೆ ಕನ್ನಡಿ ಹಿಡಿದುಕೊಳ್ಳುವ, ಆತ್ಮಾವಲೋಕನ ಮಾಡಿಕೊಳ್ಳುವ ಇಚ್ಚಾ ಶಕ್ತಿಯೇ ಇರಲಿಲ್ಲ.

 

ಕೈಗಾರಿಕೆಗಳು ಮತ್ತು ಅತಿಯಾದ ಮೋಟಾರು ವಾಹನಗಳ ದಟ್ಟಣೆಯಿಂದ  ಹೊರಸೂಸುವ ಇಂಗಾಲದ ಡೈ ಆಕ್ಸೈಡ್  ಮಾತು ಮಾನಾಕ್ಸೈಡ್, ಭೂಮಿ  ಮೇಲೆ  ನೀರು ನಿಲ್ಲಿಸಿ ಭತ್ತ ಬೆಳೆಯುವ ಕೆಸರು ಗದ್ದೆಗಳು, ಗ್ರಾಮೀಣ ಪ್ರದೇಶದ ತಿಪ್ಪೆರಾಶಿಗಳು ಮತ್ತು ಜಾನುವಾರುಗಳು ಮೆಲುಕು ಹಾಕುವಾಗ ಹೊಮ್ಮುವ ಮೀಥೇನ್, ರೆಫ್ರಿಜರಟರುಗಳಿಂದ ಹೊರಸೂಸುವ ಕಾರ್ಬೋಫ್ಳುರಾನ್ಸ್, ಕೃಷಿಯಲ್ಲಿ ಎರ್ರಾ  ಬಿರ್ರಿಯಾಗಿ ಬಳಸುವ ರಾಸಾಯನಿಕ ಗೊಬ್ಬರಗಳಿಂದ ಹೊಮ್ಮುವ ನೈಟ್ರಿಕ್ ಆಕ್ಸೈಡ್ ಅನಿಲಗಳು ಭೂಮಿ ಮತ್ತು ಸೂರ್ಯನ ನಡುವೆ ಇರುವ ಓಜೋನ್ ಅನಿಲ ಪದರವನ್ನ ಚಿದ್ರಗೊಳಿಸಿವೆ ಹೀಗಾಗಿ ಅತಿನೇರಳೆ ಕಿರಣಗಳು ವ್ಯೋಮದಲ್ಲಿನ ಹಸಿರು ಮನೆ ಅನಿಲ ಕಣಗಳನ್ನ ಬಿಸಿ ಮಾಡುತ್ತಿವೆ; ಇದು ಜಾಗತಿಕ ತಾಪಮಾನ ( global warming)  ಹೆಚ್ಚಳಕ್ಕೆ ಕಾರಣ. ನಾಟಿ ಅಥವಾ ಜವಾರಿ ಹಸುಗಳಿಗಿಂತ ಅಧಿಕ ಹಾಲು ಕೊಡುವ  ವಿದೇಶಿ ಹಸುಗಳು ಹೆಚ್ಚು ಪ್ರಮಾಣದ ಮೀಥೇನ್ ಅನಿಲವನ್ನ ಹೊರಹಾಕುತ್ತವೆ. ಸೂಕ್ತ ಸಂಸ್ಕರಣೆ ಮಾಡದೆ ಒಂದು ಕಡೆ ಕೂಡಿ ಹಾಕಿದ ಸಗಣಿ ರಾಶಿ - ತಿಪ್ಪೆಗಳಿಂದ ಮೀಥೇನ್  ಅನಿಲ ಉತ್ಪತಿಯಾಗುತ್ತಿದ್ದು ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾದಾಗ ಇಂತಹ ತಿಪ್ಪೆಗಳು ಹೊತ್ತಿ ಉರಿಯತೊಡಗುತ್ತವೆ. ಮೀಥೇನ್ ಅನಿಲ, ಕಾರ್ಬನ್ ಡೈ ಆಕ್ಸೈಡ್ ಗಿಂತ 25 ಪಟ್ಟು  ಬೇಗ ಮತ್ತು ಅಧಿಕವಾಗಿ ಬಿಸಿಯಾಗುತ್ತದೆ. ಯಾವುದೇ ಜೈವಿಕ ಪದಾರ್ಥ ಆಮ್ಲಜನಕದ ಗೈರುಹಾಜರಿಯಲ್ಲಿ ಕೊಳೆತಾಗ ಮೀಥೇನ್ ಅನಿಲ ಬಿಡುಗಡೆಯಾಗುತ್ತದೆ.

ಜಾಗತಿಕ ತಾಪಮಾನದಲ್ಲಿ ಹೆಚ್ಚಳವಾಗುತ್ತಿರುವುದರಿಂದ ಹಿಮಪರ್ವತಗಳು ಕರಗುತ್ತಿವೆ. ಈ ಹಿಮಪರ್ವತಗಳು ಪೂರ್ತಿಯಾಗಿ ಕರಗಿಬಿಟ್ಟರೆ ಅವುಗಳ ಕೆಳಗೆ ಶೇಖರವಾಗಿರುವ ಅಪಾರ ಪ್ರಮಾಣದ ಮೀಥೇನ್ ಅನಿಲ ಒಮ್ಮೆಗೆ ಸ್ಪೋಟಿಸಿ ವಾತಾವರಣಕ್ಕೆ ಸೇರ್ಪಡೆಯಾಗಿ ಜಗತಿನ ತಾಪಮಾನ ಇದ್ದಕ್ಕಿದ್ದಂತೆ ಜಾಸ್ತಿಯಾಗುವುದೆಂದು ವಿಜ್ಞಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಜಾಗತಿಕ ತಾಪಮಾನದ ಈ ಹೆಚ್ಚಳ ಅನೇಕ ಸರಪಳಿ ಕ್ರಿಯೆಗಳನ್ನು ಪ್ರಚೋದಿಸುತ್ತವೆ; ಸಮುದ್ರದ ಮತ್ತ ಏರತೊಡಗುತ್ತದೆ. ಅನೇಕ ಸಣ್ಣ ಪುಟ್ಟ ದ್ವೀಪ ದೇಶಗಳು ಸಮುದ್ರದಲ್ಲಿ ಮುಳುಗಡೆಯಾಗುತ್ತವೆ. ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಗಳ ಕರಾವಳಿ ಪ್ರದೇಶದ ನಗರಗಳು, ಗ್ರಾಮಗಳು ಸಮುದ್ರ ಪಾಲಾಗುತ್ತವೆ. ಮಾಲ್ಡೀವ್ಸ್ ದೇಶ ಸಂಪೂರ್ಣವಾಗಿ ಸಮುದ್ರ ಪಾಲಾಗುವ ಭೀತಿ ಎದುರಿಸುತ್ತಿದೆ. ಮತ್ತು ತನ್ನ ದೇಶದ ನಾಗರೀಕರನ್ನು ಸ್ಥಳಾಂತರಿಸಲು  ಬೇರೆ  ದೇಶಗಳಲ್ಲಿ ಭೂಮಿ ಹುಡುಕುತ್ತಿದೆ.

ಭಾರತ ಸರ್ಕಾರ ತನ್ನ ಅರಣ್ಯ ನೀತಿಯಲ್ಲಿ ಹೇಳಿರುವಂತೆ  ಸಕಾಲಕ್ಕೆ ಸಮೃದ್ಧ ಮಳೆಯಾಗಬೇಕೆಂದರೆ ಭಾರತದ ಒಟ್ಟು ಭು ವಿಸ್ತೀರ್ಣದ ಪೈಕಿ ಶೇ. 33 ರಷ್ಟು  ಭೂ ಪ್ರದೇಶದಲ್ಲಿ ದಟ್ಟ ಮಳೆಕಾಡು ಇರಬೇಕು. ಆದರೆ ಭಾರತ ಸರ್ಕಾರದ ದೂರ ಸಂವೇದಿ ಇಲಾಖೆಯ ಸಮೀಕ್ಷೆ ಪ್ರಕಾರ ಭಾರತದಲ್ಲಿ ಈಗಿರುವ ಕಾಡಿನ ಪ್ರಮಾಣ ಶೇ. 22 ರಷ್ಟು  ಮಾತ್ರ. ಇದರ ಪೈಕಿ ಶೇ.8 ರಷ್ಟು ಅರಣ್ಯ ಮಾತ್ರ ಸ್ವಯಂ ಸೃಷ್ಟಿಶೀಲವಾದ ದಟ್ಟ ಮಳೆಕಾಡು; ಉಳಿದಂತೆ ಕುರುಚಲು ಕಾಡುಗಳು, ಬಯಲು ಸೀಮೆಯ ಬಿಡಿ ಬಿಡಿ ಮರಗಿಡಗಳು ಮತ್ತು ಮುಕ್ಕಾಲು ಸವೆದಿರುವ  ಬೆಟ್ಟಗುಡ್ಡಗಳು.

ಸುಸ್ಥಿರ ಮಳೆ ಚಕ್ರ ( sustainable hydrological cycle ) ಕ್ಕಾಗಿ, ಕೃಷಿ ಮಣ್ಣಿನ ಸ್ವಯಂ ಸೃಷ್ಟಿ ಶೀಲ ಫಲವಂತಿಕೆಗಾಗಿ, ಮಣ್ಣಿನ ತೇವಾಂಶ ಧಾರಣ ಶಕ್ತಿಯ ವೃದ್ದಿಗಾಗಿ, ಪಶು ಪಕ್ಷಿಗಳ ಆಹಾರ, ಮೇವು, ಮಾನವ ಕುಲಕ್ಕೆ ಬೇಕಿರುವ ವನಸ್ಪತಿಗಳು ಜೊತೆಗೆ ಆಮ್ಲಜನಕ ಉತ್ಪತ್ತಿಗಾಗಿ ಒಟ್ಟು ಭೂ ಪ್ರದೇಶದ ಪೈಕಿ ಶೇ. 33  ಕ್ಕಿಂತ ಹೆಚ್ಚು ಕಾಡುಗಳು ನಮಗೆ ಅವಶ್ಯಕ. ಅರಣ್ಯ ಮಾತ್ರವಲ್ಲ, ಮಣ್ಣಿನ ಸವಕಳಿ ತಡೆಯಲು, ತೇವಾಂಶ ಧಾರಣೆಗಾಗಿ ಫಲವಂತಿಕೆ ಸೃಷ್ಟಿಗಾಗಿ, ಪಶು ಪಕ್ಷಿಯಾದಿ ಮಾನವ ಸಂಕುಲಕ್ಕೆ ಬೇಕಿರುವ ಹಣ್ಣು , ಸೊಪ್ಪು, ನಾರು, ಸೌದೆ, ಮೇವು ಮತ್ತು ಆಸರೆಗಾಗಿ ಕೃಷಿ ಭೂಮಿಯಲ್ಲಿ ಕೂಡ ಸಾಕಷ್ಟು ಮರಗಿಡಗಳಿರಬೆಕು; ಎಲ್ಲಕ್ಕಿಂತ ಮಿಗಿಲಾಗಿ ಬೆಟ್ಟ ಗುಡ್ಡಗಳು ಪೂರ್ಣ ಪ್ರಮಾಣದ ಸಸ್ಯ ವೈವಿಧ್ಯತೆಯೊಂದಿಗೆ ಜೀವಂತವಾಗಿರಬೇಕು. ಆದರೆ ಭಾರತದ ಬೆಟ್ಟಸಾಲುಗಳು ಅಷ್ಟು ಜೀವಂತವಾಗಿಲ್ಲ.

ಒಂದು ತಾಯಿಯ ಗರ್ಭದಿಂದ ಹೊರಬಂದಾಗ ದಾದಿಯರು ಮಗುವಿನ ಹೊಕ್ಕಳು ಬಳ್ಳಿಯನ್ನು ಕತ್ತರಿಸಿ ಮಗು ಸ್ವತಂತ್ರವಾಗಿ ಬೆಳೆಯಲು ಅನುವು ಮಾಡಿಕೊಡುತ್ತಾರೆ; ಈ ರೀತಿ ಹೊಕ್ಕಳಬಳ್ಳಿ ಕತ್ತರಿಸಿ ತಾಯಿಂದ ಬೇರ್ಪಟ್ಟ ಮೇಲೂ ಮಗುವಿಗೆ ವರ್ಷಕಾಲದ ತನಕ ತಾಯಿಯ ಎದೆ ಹಾಲು ಬೇಕು. ಮಗು ತಾಯಿಯ ಗರ್ಭದಿಂದ ಪ್ರತ್ಯೇಕಗೊಳ್ಳುವುದು ನೈಸರ್ಗಿಕ. ಆದರೆ ಮನುಷ್ಯ ಎಂದಿಗೂ ನಿಸರ್ಗದೊಂದಿಗಿನ ಹೊಕ್ಕಳಬಳ್ಳಿ ಸಂಬಂಧ ಕಡಿದುಕೊಂಡ ಮಾನವಕುಲ ಅನೇಕ ರೋಗ ರುಜಿನಗಳಿಗೆ ತುತ್ತಾಗುತ್ತದೆ. ಸಮಸ್ತ ಮಾನವಕುಲದ ಅತ್ಯಂತಿಕ ತಾಯಿಯೆಂದರೆ ನಿಸರ್ಗ; ನೈಸರ್ಗಿಕವಾಗಿ ಸಿಗುವ ಮತ್ತು ನೈಸರ್ಗಿಕವಾಗಿ ಬೆಳೆಸಲಾಗುವ ಆಹಾರ ಪದಾರ್ಥಗಳು ಮತ್ತು ವನಸ್ಪತಿಗಳು ಮಾತ್ರ ಮಾನವ, ಪ್ರಾಣಿ, ಪಕ್ಷಿಸಂಕುಲದ ಆರೋಗ್ಯವನ್ನು ಸಮತೋಲನದಲ್ಲಿ ಪೋಷಿಸುವ ಚೈತನ್ಯ ಹೊಂದಿದೆ.

ಭೂಮಿಯ ಮೇಲ ಮನುಷ್ಯರ ಅತೀವ  ಆರ್ಥಿಕ ಚಟುವಟಿಕೆಗಳು. ಅಂದರೆ, ಕೈಗಾರೀಕರಣ, ಮೋಟಾರು ವಾಹನಗಳ  ಅತಿ ದಟ್ಟಣೆ, ಕೃಷಿಯಲ್ಲಿ ಅತೀವವಾಗಿ ಬಳಕೆಯಾಗುತ್ತಿರುವ  ರಾಸಾಯನಿಕ ಗೊಬ್ಬರಗಳು, ವಿಷಯುಕ್ತ ಕೀಟನಾಶಕಗಳು, ವಿಪರೇತವಾಗುತ್ತಿರುವ ನಗರೀಕರಣ  ಭೂಮಿಯ ಸ್ವಯಂ ಸೃಷ್ಟಿಶೀಲತೆ ಮತ್ತು ಧಾರಣ ಶಕ್ತಿಯನ್ನು ಕುಂಠಿಸುತ್ತಿವೆ; ಹೀಗಾಗಿ ನೈಸರ್ಗಿಕವಾಗಿ ತನ್ನೆಲ್ಲ ಲಯ ಮತ್ತು ಮಿಂಚಿನಿಂದ ಸುರಿಯುತ್ತಿದ್ದ ಮಳೆಯ ವೈಭವ ಇಲ್ಲವಾಗುತ್ತಿದೆ; ಮಣ್ಣು ತನ್ನ ಸುಗಂಧ ಹೊಮ್ಮಿಸುವ ಚೈತನ್ಯ ಕಳೆದುಕೊಂಡಿದೆ. ಭೂಮಿಯ ಮಳೆ ಮಾನವ ಕುಲವಷ್ಟೇ ಅಲ್ಲ ಸಮಸ್ತ ಜೀವ ಸಂಕುಲದ ಬದುಕು ಅತಂತ್ರ ಗೊಳ್ಳುತ್ತಿದೆ. ಹವಾಮಾನ  ಶಾಸ್ತ್ರಜ್ಞರು  ಇಂತಹ ದಿವಸ ಮಳೆಯಾಗುತ್ತದೆಂದು ವೈಜ್ಞಾನಿಕವಾಗಿ ಊಹಿಸಿದರೂ ವಿಜ್ಞಾನಿಗಳ ಊಹೆಯನ್ನ ಮೀರಿ ಮಳೆ ಕೈಕೊಡುತ್ತಿರುತ್ತದೆ; ಅಂದರ ಜಾಗತಿಕ ಹವಾಮಾನ ವಿಜ್ಞಾನಿಗಳ ಊಹೆಯನ್ನೂ ಮೀರಿ ತೀವ್ರವಾಗಿ  ಹದಗೆಟ್ಟಿದೆ. ಪೆಸಿಫಿಕ್ ಮಹಾಸಾಗರದಲ್ಲಿ ಉಂಟಾಗಿರುವ ಎಲ್ ನಿ ಸೂ  ಮತ್ತು ಏನ್ ಲಿ ಲೊ ಎಂಬ ಅವಳಿ ಪರಿಣಾಮಗಳ ದೆಸೆ ಬೆಸುತ್ತಿರುವ ಬಿಸಿಗಾಳಿ ವಿಜ್ಞಾನಿಗಳ ಮಳೆ ಕುರಿತ ಊಹೆಯನ್ನ ಕೂಡ ಸುಳ್ಳು ಮಾಡುತ್ತಿದೆ.

ಸಾಮಾನ್ಯವಾಗಿ ದೂರದರ್ಶನ ಖಾಸಗಿ ಚಾನಲ್ಲುಗಳು ಆಗಾಗ ಅಥವಾ ವೀಕ್ಷಕರ ಅತೀರಂಜನೆಗೆ  ಬೇರೇನೂ ಸರಕಿರದಿರುವಾಗ ಭೂಮಿಯ ಮೇಲೆ ಸಂಭವಿಸಲಿರುವ ಮಹಾಪ್ರಳಯ ಕುರಿತಂತೆ ಜ್ಯೋತಿಷಿಗಳ ಸಂವಾದ ಕಾರ್ಯಕ್ರಮ ನಡೆಸುತ್ತಿರುತ್ತವೆ. ತಮಾಷೆ ಎಂದರೆ ಇಂಥದೇ ದಿನ ಪ್ರಳಯವಾಗುತ್ತದೆಂದು ತಮ್ಮ ಹರಕುನಾಲಗೆಯನ್ನು ಹರಿಯಬಿದುತ್ತಾರೆ, ಜ್ಯೋತಿಷ್ಯದ ಜೊತೆಗೆ ವೈಜ್ಞಾನಿಕ ವಿಚಾರಗಳನ್ನ ಬೆರೆಸಿ ಗೊಂದಲವುಂಟುಮಾಡುತ್ತಾರೆ. ಈ ಮೂಲಕ ವೀಕ್ಷಕರಲ್ಲಿ ಒಂದು ರೀತಿಯ  ಆತ್ಮ ಸಂತೃಪ್ತಿಯ ಭಾವನೆ ಬಿತ್ತುತ್ತಿರುತ್ತಾರೆ. ಅಂದರೆ ' ಅಯ್ಯೋ ಬೇಡಿ ಲೋಕಕ್ಕೆಲ್ಲಾ ಆಗಿದ್ದು ನನಗೂ ಆಗುತ್ತದೆ. ಎಂಬ ಘಾತುಕ ಭಾವನೆ; ಈ  ತರದ ಆತ್ಮ ಸಮಾಧಾನ ಒಂದು ರೆತಿಯ ಸಾಮಾಜಿಕ ಜಡತ್ವವನ್ನು ಉಂಟುಮಾಡಿ, ಮನುಷ್ಯ ತನ್ನ ಜೀವನ ಶೈಲಿಯಲ್ಲಿ ತಂದು ಕೊಳ್ಳಬೇಕಾದ ಬದಲಾವಣೆಗಳ ಬಗ್ಗೆ ಮತ್ತು ತಾನು ಸಾಮಾಜಿಕ - ಪರಿಸರಾತ್ಮಕವಾಗಿ ವಹಿಸಬೇಕಾಗಿರುವ ಸೃಷ್ಟಿ ಶೀಲ ಪಾತ್ರವನ್ನು ಆಘಾತಗೊಳಿಸುತ್ತದೆ; ಇದೊಂದು ಗೊಡ್ಡು ವಿತಂಡವಾದ.

ಇನ್ನೊಂದು ವಿತಂಡವಾದವಿದೆ ಅದೊಂದು ತರದ ವೈಜ್ಞಾನಿಕವಾಗಿ ವಿತಂಡವಾದ. ಕೆಲವು ವಿಜ್ಞಾನಿಗಳು ' ಭೂಮಿಯ ಮೇಲೆ ಏನನ್ನು ಸೃಷ್ಟಿಸಲಾಗುವುದಿಲ್ಲ, ಏನನ್ನು ನಾಶ ಮಾಡಲಾಗುವುದಿಲ್ಲ'  ಎಂಬ ಥರ್ಮೊಡೈನಮಿಸಮ್  ನ  ಕೆಲವು ಅಂಶಗಳನ್ನು ತಿರುಚುತ್ತಿರುತ್ತಾರೆ. ಮಣ್ಣು ಫಲವಂತಿಕೆ ವಿಜ್ಞಾನದಲ್ಲಿ ಕೂಡ ಆದದ್ದು ಇದೇ ವಿತಂಡವಾದ. ಏನನ್ನೂ ಸೃಷ್ಟಿ  ಮಾಡಲಾಗುವುದಿಲ್ಲ, ನಾಶಮಾಡಲಾಗುವುದಿಲ್ಲ ನಿಜ ಆದರೆ ಭೂಮಿಯ ಪರಿಸರ ವ್ಯವಸ್ಥೆಯ ಸುಸಂಗತಿಯನ್ನ ಚಿದ್ರಗೊಳಿಸಿ ಭ್ರಷ್ಟಗೊಳಿಸಬಹುದು. ನಾವು ಮನುಷ್ಯರು ಭೂಮಿಯ ಮೇಲಿನ ಏನನ್ನೂ ನಾಶ ಮಾಡಲಾಗುವುದಿಲ್ಲ.  ಎಂದರೆ ಏನರ್ಥ? ಏನನ್ನೂ ಮಾಡಲಾಗದಿದ್ದರೆ  ಸುರಿವ ಮಳೆಗ ಮಣ್ಣಿನಿಂದ ಹೊಮ್ಮುತ್ತಿದ್ದ ಮಳೆಯ ಸುಖದ ಸುಗಂಧ ಗಾಳಿ ಯಾಕೆ ಇಲ್ಲದಂತಾಯಿತು.?.

 

ಮಣ್ಣು ತನಗೆ ತಾನೇ ಸೃಷ್ಟಿಶೀಲವಾದದ್ದು, ಅದು ನೈಸರ್ಗಿಕವಾಗಿ ಮಿಲಿಯಗಟ್ಟಲೆ ವರ್ಷಗಳಿಂದ ವಿಕಾಸಗೊಳ್ಳುತ್ತ ಬಂದಿದೆ. ಶಿಲೆಗಳು ಬಿಸಿಲಿಗೆ ಕಾದು, ಮಳೆ, ಹಿಮದಲ್ಲಿ ನೆನೆದು ನುಚ್ಚಾಗಿ ಈ ಮೂಲಕ ಭೂಮಿಯ ಮೇಲೆ ಸಸ್ಯ ಪ್ರಭೇಧಗಳು ಬೆಳೆದು ಮಣ್ಣಿನ ಬೌತಿಕ ಸಂರಚನೆ ಮತ್ತು ಹೆಣೆಗೆ ಸುಸೂಕ್ಷ್ಮಗೊಳ್ಳುತ್ತ ಮತ್ತಷ್ಟು ಜೀವ ಪ್ರಭೇಧಗಳ ಸೃಷ್ಟಿಗೆ ಅನುವು ಮಾಡಿಕೊಡುತ್ತಿರುತ್ತವೆ; ಅಂದರೆ ಮಣ್ಣು ತನ್ನಿಂದ ಸುಗಂಧ ಗಾಳಿಯನ್ನ ಹೊಮ್ಮಿಸಲು ಮಿಲಿಯಗಟ್ಟಲೆ ವರ್ಷಗಳನ್ನ ತೆಗೆದುಕೊಂಡಿದೆ. ಆದರೆ ಕೇವಲ 50  ವರ್ಷಗಳಲ್ಲಿ ನಾವು ಮಣ್ಣಿನ ನೈಸರ್ಗಿಕ ಸುಗಂಧವನ್ನೇ ನಾಶ ಮಾಡಿ ಮಣ್ಣಿನ ಸಲಹುವ ಗುಣ ಮತ್ತು ಅದರ ಸೈರಣೆಯನ್ನ ಕೊಂದು ಭ್ರಷ್ಟ ಗೊಳಿಸಿದ್ದೆವೆ. ಹವಾಮಾನ ವೈಪರೀತ್ಯದಿಂದ ಕೃಷಿಯ ಮೇಲೆ ಅನಾಹುತಕಾರಿ ಪರಿಣಾಮಗಳು ಉಂಟಾಗುತ್ತವೆ. ನಿಜ, ಆದರೆ ಕೃಷಿಯಿಂದಲೇ ಶೇ. 27  ರಷ್ಟು ಹಸಿರು ಮನೆ ಅನಿಲಗಳು ಬಿಡುಗಡೆಯಾಗುತ್ತಿರುವ ಕಹಿಸತ್ಯವನ್ನು ನಾವು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಮನುಷ್ಯಕುಲ ಕೇವಲ ಮರಗಿಡಗಳ ಮೇಲೆ ಕೊಡಲಿ ಎತ್ತಿಲ್ಲ. ತನ್ನ ಅಸ್ತಿತ್ವದ ಬುಡಕ್ಕೆ ಕೊಡಲಿ ಹಾಕಿಕೊಳ್ಳುತ್ತಿದ್ದಾನೆ; ದುರಂತ ಏನೆಂದರೆ ಮನುಷ್ಯ ನಿಸರ್ಗದ ವಿರುದ್ದ ಎತ್ತಿರುವ ಎರ್ರಾಬಿರ್ರಿ ಅಭಿವೃದ್ದಿ ಮಾದರಿಗಳು ಮತ್ತು ಜೀವನ ಶೈಲಿಗಳ ಘಾತುಕ ಕೊಡಲಿಯ ಹಿಡಿ ಕೂಡ ಕಾಡಿನಿಂದಲೇ ಬಂದದ್ದು

ಮೂಲ: ಸೈನ್ಸ್ ಫಾರ್ ಸೋಶಿಯಲ್ ಚೇಂಜ್

ಕೊನೆಯ ಮಾರ್ಪಾಟು : 10/26/2019



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate