অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ನಾಡ ಹಬ್ಬ

ನಾಡ ಹಬ್ಬ

"ಬೊಂಬೆಗಳೊಂದಿಗೆ  ಮಾನವನದು ಅವಿನಾಭಾವ ಸಂಬಂಧ. ಮಗುವಿದ್ದಾಗಿನಿಂದ ಹಿಡಿದು ಜೀವನದ ವಿವಿಧ ಹಂತದಲ್ಲಿ ಬೊಂಬೆಗಳೊಂದಿಗೆ ಅವನ ಒಡನಾಟ ತಿಳಿದೋ ತಿಳಿಯದೆಯೋ ಇದ್ದೇ ಇದೆ. ಆಟಿಕೆಯ ಬೊಂಬೆಯಿಂದ ಹಿಡಿದು ಪ್ರದರ್ಶನದ ಬೊಂಬೆಯವರೆಗೆ ಯಾವ ಮನೆಯೂ ಬೊಂಬೆಗಳಿಲ್ಲದೆ ಇಲ್ಲ. ಇದನ್ನೇ ಒಂದು ಸಂಪ್ರದಾಯವಾಗಿರಿಸಿರುವ ನಮ್ಮ ಸಂಸ್ಕೃತಿ ಅತ್ಯಂತ ಅನನ್ಯ".

"ಪ್ರತಿ ವರ್ಷ ಬೊಂಬೆ ಹಬ್ಬ ಬಂದರೆ ಅದೇನೋ ಒಂದು ಸಂಭ್ರಮ, ಉತ್ಸಾಹ. ಬೊಂಬೆ ಕೂರಿಸುವ ೧೫ ದಿನ ಮುಂಚೆಯೇ ಅತ್ತ ಸೇರಿರುವ ಬೊಂಬೆಗಳನ್ನೆಲ್ಲಾ ತೆಗೆದು ಧೂಳು ಜಾಡಿಸಿ, ಪಟ್ಟದ ಗೊಂಬೆಗಳಿಗೆ ಬಣ್ಣದ ಕಾಗದಗಳ ಬಟ್ಟೆ ತೊಡಿಸಿ, ಅಂಗೈ ಅಗಲ ಹೂದೋಟ ಮಾಡಲು ರಾಗಿಯನ್ನು ಚೆಲ್ಲಿ, ಪೈರು ಬರುವುದನ್ನೇ ಕಾದಿದ್ದು, ಯಾವ ವಿಷಯದ ಮೇಲೆ ಗೊಂಬೆ ಕೂರಿಸಿವುದು ಹೀಗೆ ತಯಾರಿಗೇ ಸಮಯ ಸಾಲದು..... ಅಲ್ಲೊಂದು ಉದ್ಯಾನವನ ಮಾಡೋಣ... ಇಲ್ಲೊಂದು ಥೀಮ್ ಪಾರ್ಕ್ ಮಾಡೋಣ.... ಇಡೀ ಮನೆಯನ್ನು ಒರಣವಾಗಿಸೋಣ ..... ವಿದ್ಯುದೀಪದ ಅಲಂಕಾರಗಳನ್ನು ಮಾಡಿ, ದಸರೆಯನ್ನು ಬರಮಾಡಿಕೊಳ್ಳಲು ಉತ್ಸುಕತೆಯಿಂದ ಸಜ್ಜಾಗೋಣ..... ಎಂದು ವಿಜ್ರುಂಭಣೆಯಿನ್ದ ಆಚರಿಸುವ ಬಗೆ ಮನಸ್ಸಿಗೆ ಅಮೋದ ನೀಡುತ್ತದೆ." ಎನ್ನುತ್ತಾರೆ  ಬೆಂಗಳೂರಿನ ಜಯನಗರ ಬಡಾವಣೆಯ ಶ್ರೀಮತಿ ಭಾಗ್ಯಲಕ್ಷ್ಮಿ.

ಈ ನವರಾತ್ರಿಯ ಒಂಬತ್ತು ದಿನಗಳೂ ಪ್ರತಿಯೊಂದು ದಿನ ಒಂದೊಂದು ರೂಪದಲ್ಲಿ ದೇವಿಯನ್ನು ಆರಾಧಿಸುವುದು, ಪ್ರತಿದಿನ ಬಗೆಬಗೆ ನೈವೇದ್ಯಗಳು, ಈ ಒಂಬತ್ತೂ ದಿನಗಳ ಕಾಲ ನಡೆಯುತ್ತದೆ.

ಪ್ರತಿವರ್ಷವೂ ಒಂದು ಹೊಸ ವಿಷಯವನ್ನಾಧರಿಸಿ ಬೊಂಬೆ ಜೋಡಿಸುತ್ತಾ ಬಂದಿದ್ದಾರೆ. ಶ್ರೀಮತಿ ಭಾಗ್ಯಲಕ್ಷ್ಮಿ. ಪ್ರಸ್ತುತತೆಗೆ ತಕ್ಕಂತೆ ವಿಷಯವನ್ನಾಧರಿಸಿಕೊಂಡು ಸಂಪ್ರದಾಯವನ್ನೂ ಬಿಡದೆ ಎರಡರ ಸಮನ್ವಯದೊಂದಿಗೆ ತಮ್ಮದೇ ಪುಟ್ಟ ರೀತಿಯಲ್ಲಿ ಜನಜಾಗೃತಿ ಮೂಡಿಸುವುದು ಮಾಡಿದಂತಾಗುತ್ತದೆ. ಎನ್ನುವುದು ಅವರ ಅಭಿಪ್ರಾಯ.

ಈ ಕಾರಣಕಾಗಿಯೇ ಈ ಮನೆಯಲ್ಲಿ ವರ್ಷದಿಂದ ವರ್ಷಕ್ಕೆ ಬೊಂಬೆಗಳ ಸಂಖ್ಯೆ ಹೆಚ್ಚಾಗುತ್ತಾ ಹೋಗುತ್ತಿದೆ. ಭಾಗ್ಯಲಕ್ಷ್ಮಿಯವರು ಪ್ರವಾಸ ಹೋದಾಗಲೆಲ್ಲ ಆಸಕ್ತಿ ವಹಿಸಿ ಗೊಂಬೆಗಳನ್ನು ವಿವಿಧೆಡೆಗಳಿಂದ ತಮ್ಮ ಸಂಗ್ರಹಕ್ಕೆ ಸೇರಿಸಿದ್ದಾರೆ. ಇದರಲ್ಲಿ ತಲೆತಲಾಂತರಗಳಿಂದ ಬಳುವಳಿಯಾಗಿ ಬಂದಂತಹ ಗೊಂಬೆಗಳು, ಉಡುಗೊರೆಗಳಾಗಿ ಬಂದಂತಹವು. ನೆಂಟರಿಷ್ಟರು, ಆಪ್ತರು ಹೊರ ದೇಶಗಳಿಗೆ ಹೋದಾಗ  ತಂದು ಕೊಟ್ಟವು. ಹೀಗೆ ಸೇರಿಸುತ್ತಾ ಬಂಡ ಗೊಂಬೆಗಳ ಸಂಖ್ಯೆ ಇಂದಿಗೆ ೨೦೦೦೦ ಮೀರಿದೆ. ಇವರ ಮನೆಯಲ್ಲಿ ಕೊರಿಯಾ,ಚೈನಾ, ಅಮೇರಿಕಾ ದೇಶದ ಗೊಂಬೆಗಳೂ ಸೇರಿದಂತೆ ನಮ್ಮ ದೇಶದ ರಾಜಸ್ಥಾನ, ಗುಜರಾತ್, ಜೈಪುರ, ಒರಿಸ್ಸಾದ ಪೀಪ್ಲಿ, ತೆಲಂಗಾಣದ ಹೈದರಾಬಾದ್, ಆಂಧ್ರಪ್ರದೇಶದ ಕೊಂಡಪಲ್ಲಿ, ಪಾಂಡಿಚೇರಿ, ತಮಿಳುನಾಡಿನ ಕಾಂಚಿಪುರ, ಕೃಷ್ಣಗಿರಿ, ಕರ್ನಾಟಕದ ಚನ್ನಪಟ್ಟಣ, ಮೈಸೂರು ಹಾಗೂ ಶ್ರೀರಂಗಪಟ್ಟಣದಿನ್ದ ತಂದಿರುವ ವೈವಿಧ್ಯಮಯ ಗೊಂಬೆಗಳಿವೆ.

ವಿಜಯನಗರದಲ್ಲಿ ಶ್ರೀ ಕೃಷ್ಣ ದೇವರಾಯರು ಮಹಾನವಮಿ ದಿಬ್ಬದಲ್ಲಿ ಕುಳಿತು, ತಮ್ಮ ಗಜ ಪಡೆ, ಅಶ್ವ ಪಡೆ, ಸೈನ್ಯದ ಕವಾಯತುಗಳು, ಫಿರಂಗಿಗಳ ಹಾಗೂ ಆಯುಧಗಳ ಶಕ್ತಿ ಪ್ರದರ್ಶನವನ್ನು ವೀಕ್ಷಿಸುತ್ತಿದ್ದರು. ಮೈಸೂರಿನ ಅರಸರು ಇದೇ ಪದ್ದತಿಯನ್ನು ಮುಂದುವರೆಸಿದರು. ಈ ಹಬ್ಬವನ್ನು ನಾಡಹಬ್ಬವೆಂದು ಘೋಷಿಸಿ, ನಾಡಿನ ಎಲ್ಲಾ ಮನೆಯ ಸಂತೋಷವನ್ನು ನಾಡಸಂತೋಷವನ್ನಾಗಿಸಿದ ಸರ್ಕಾರ, ದಸರೆಯ ಆಚರಣೆಯನ್ನು ಮುಂದುವರೆಸಿಕೊಂಡು ಬಂದಿದೆ. ರಾಜ ಮನೆತನದ ಸಹಯೋಗದೊಂದಿಗೆ ದಸರಾ ಹಬ್ಬವನ್ನು ಪ್ರತಿ ವರ್ಷ ವಿಜ್ರುಮ್ಭಣೆಯಿನ್ದ ಕರ್ನಾಟಕದಲ್ಲಿ ಮಾತ್ರ ಆಚರಿಸುವುದು ವಿಶೇಷ.

ಭಾಗ್ಯಲಕ್ಷ್ಮಿಯವರು ಪತ್ರಿಕೆಗಳು ಆಯೋಜಿಸಿದ್ದ ಗೊಂಬೆ ಸ್ಪರ್ಧೆಯಲ್ಲಿ ಭಾಗವಹಿಸಿ ೪ ಬಾರಿ ಬಹುಮಾನಗಳನ್ನು ಪಡೆದವರು. ಆಧುನಿಕತೆ ಹಾಗೂ ಸಾಂಪ್ರದಾಯಿಕತೆಯ ಸಮ್ಮಿಳಿತ ವಿಷಯವನ್ನು ಆಯ್ಕೆ ಮಾಡಿಕೊಂಡು, ಗ್ರಾಮೀಣ ಸೊಗಡನ್ನು ಬಿಂಬಿಸುವ ಹಳ್ಳಿಯ ಚಿತ್ರಣ, ಅಮೇರಿಕಾದ ಪಾರ್ಕವೊಂದರ ಪ್ರತಿರೂಪ, ಧೀರೆ ಒನಕೆ ಓಬವ್ವನ ಕಥೆ ಹೇಳುವ ಚಿತ್ರಣ, ತೊಗಲು ಗೊಂಬೆಯಾಟದ ವೇದಿಕೆಯ ಮಾದರಿ, ಶಾಲೆಯ ಪ್ರತಿರೂಪ, ದಸರಾ ಮೆರವಣಿಗೆಯ ಅಚ್ಹೊತ್ತು. ಸುರಕ್ಷಿತ ಮತ್ತು ಸುಖಕರ ಪ್ರಯಾಣಕ್ಕಾಗಿ ಸರ್ಕಾರಿ ವಾಹನಗಳನ್ನೇ ಬಳಸಿ ಎನ್ನುವ ಸದುದ್ದೇಶದ ಸಂದೇಶವನ್ನು ಸಾರುವ ವಿಷಯದ ಮೇಲೆ ಗೊಂಬೆಗಳನ್ನು ಇರಿಸಲಾಗಿದೆ. ಈ ಬೃಹತ್ ಗೊಂಬೆ ಮನೆಯಲ್ಲಿ.

ಇಂದಿನ ಬೆಂಗಳೂರು ನಗರಿಯ ಜನತೆಗೆ ತಮ್ಮ ಧಾವಂತದ ಜೀವನದಲ್ಲಿ ಒಂದು ದಿನದ ಹಬ್ಬವನ್ನು ಆಚರಿಸುವುದು ಕಷ್ಟ ಸಾಧ್ಯ. ಇಂತಹ ಪರಿಸ್ಥಿತಿಯಲ್ಲೂ ಕಾಳಜಿ ವಹಿಸಿ, ಬೊಂಬೆ ಇಡುವ ಒಂಬತ್ತು ದಿನಗಳ ಸಂಪ್ರದಾಯಕ್ಕೆ ಎಲ್ಲೂ ಚ್ಯುತಿ ಬರದಂತೆ ಮುಂದಿನ ಪೀಳಿಗೆಗೆ ಬೊಂಬೆ ಹಬ್ಬದ ಪ್ರಾಮುಖ್ಯತೆಯನ್ನು ಸಾರುವ ಧನ್ಯ ಕಾರ್ಯವನ್ನು ನಡೆಸಿಕೊಂಡು ಬರುತ್ತಿರುವ ಭಾಗ್ಯಲಕ್ಷ್ಮಿಯವರ ಶ್ರದ್ಧೆ ಮತ್ತು ಸಹನೆ ಮೆಚ್ಚುವಂಥದ್ದು.

ಮೂಲ:ಜನಪದ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate