ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪ್ರಕೃತಿಯ ಹತ್ತಿರ

ಪ್ರಕೃತಿಯ ಹತ್ತಿರ... ವಿಕೃತಿಯಿಂದ ದೂರ...ಕುರಿತಾದ ಮಾಹಿತಿ ಇಲ್ಲಿ ಲಭ್ಯವಿದೆ.

'Nature heals, not the physician'  ಎಂಬಂತೆ ಪಂಚಭೂತಗಳಿಂದ ಮಣ್ಣು, ನೀರು, ಗಾಳಿ,ಅಗ್ನಿ, ಆಕಾಶಗಳಿಂದಾದ ಈ ಶರೀರಕ್ಕೆ, ಇದೇ ತತ್ವಗಳಿಂದಾದ ಔಷಧಿಗಳಿಂದ ಚಿಕಿತ್ಸೆ ನೀಡಿ ಪ್ರಕೃತಿಯಿಂದ ವಿಕೃತಿಯನ್ನು ಹೋಗಲಾಡಿಸುವುದೇ ವೈದ್ಯನ ಉದ್ದೇಶ. ಆಯುರ್ವೇದ ಸಿದ್ದಾಂತಗಳಾದ ದಿನಚರ್ಯೆ, ಋತುಚರ್ಯೆ ಮುಂತಾದ ವಿಧಾನಗಳನ್ನು ಪಾಲಿಸುತ್ತಾ, ಯೋಗಾಭ್ಯಾಸವನ್ನು ಪಾಲಿಸುತ್ತಾ, ಸರಿಯಾದ ಆಹಾರ ವಿಧಾನಗಳನ್ನು ಪಾಲಿಸುತ್ತಾ, ಶಿಸ್ತು-ಸಂಯಮಗಳನ್ನು ಅನುಸರಿಸುತ್ತಾ ಹೋದಲ್ಲಿ ಯಾವುದೇ ರೋಗಗಳಿಲ್ಲದೇ ಪ್ರಾಕೃತ ಜೀವನ ನಡೆಸಲು ಸಾಧ್ಯ.

ದಿನಚರ್ಯೆ: ಶಾರೀರಿಕ ಹಾಗೂ ಮಾನಸಿಕವಾಗಿ ಆರೋಗ್ಯದಿಂದ ಇರಲು ಆಯುರ್ವೇದದಲ್ಲಿ ಹೇಳಿದ ದಿನಚರ್ಯೆಯನ್ನು ಅಂದರೆ ಒಂದು ದಿನದ ಕಾರ್ಯಗಳನ್ನು ಯಾವ ರೀತಿ ಮಾಡಬೇಕು ಎಂಬುದನ್ನು ಈ ರೀತಿಯಂತೆ ಹೇಳಬಹುದು.

ಬೆಳಿಗ್ಗೆ ಬೇಗ ಏಳುವುದು:

ಬೇಗ ಮಲಗಿ ಬೇಗ ಏಳು ಎಂಬುದು ಎಲ್ಲರಿಗೂ ಗೊತ್ತು. ಬೇಗ ಎಂದರೆ ಎಷ್ಟು ಬೇಗ ಹಾಗೂ ಏಕೆ?

ಆಯುಷ್ಯವನ್ನು ಕಾಪಾಡಿಕೊಳ್ಳಲು ಬ್ರಾಹ್ಮಿ ಮುಹೂರ್ತ ಅಂದರೆ ಸೂರ್ಯೋದಯಕ್ಕಿಂತ ಸುಮಾರು ೨ ೧/೨ ಗಂಟೆ ಮೊದಲು ಅಂದರೆ ಸರಿ ಸುಮಾರು ೪-೦೦ ಗಂಟೆಯ ಸಮಯದಲ್ಲಿ ಎದ್ದೇಳಬೇಕು. ಈ ಸಮಯದಲ್ಲಿ ವಾತಾವರಣ ಶುಭ್ರ, ಪ್ರಶಾಂತ ಹಾಗೂ ಕಲ್ಮಶರಹಿತವಾಗಿರುತ್ತದೆ. ಸದ್ಯದ ಪರಿಸ್ಥಿತಿಯಲ್ಲಿ ನಮ್ಮ ಕರ್ತವ್ಯಕ್ಕೆ ಅನುಗುಣವಾಗಿ ನಸುಕಿನ ೪ ಗಂಟೆಯಿಂದ ೫ ಗಂಟೆಯ ಒಳಗೆ ಏಳುವುದು ಸೂಕ್ತ.

ಹೀಗೆ ಬೇಗ ಏಳುವುದಕ್ಕಿಂತ ಮೊದಲು ಹಿಂದಿನ ರಾತ್ರಿ ಉಂಡ ಆಹಾರ ಸಂಪೂರ್ಣವಾಗಿ ಜೀರ್ಣವಾಗಿದ್ದರೆ ಮಾತ್ರ ಏಳಬೇಕು. ಆಹಾರದ ಜೀರ್ಣ ಲಕ್ಷಣಗಳು ಕೆಳಗಿನಂತಿವೆ.

  • ಶುದ್ದಡರಿಕೆ ಅಥವಾ ತೇಗು
  • ಶರೀರದಲ್ಲಿ ಲವಲವಿಕೆ
  • ಮಲ ಮೂತ್ರಗಳು ಸಕಾಲಕ್ಕೆ ಪ್ರವೃತ್ತವಾಗುವುದು
  • ಶರೀರದಲ್ಲಿ ಹಗುರತೆಯ ಅನುಭವ
  • ಹಸಿವು ಸರಿಯಾಗಿ ಆಗುವುದು
  • ನೀರಡಿಕೆ ಸರಿಯಾಗಿ ಆಗುವುದು

ಈ ಲಕ್ಷಣಗಳು ಇದ್ದರೆ ಮಾತ್ರ ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು ಉಚಿತ. ಬೆಳಿಗ್ಗೆ ಎದ್ದ ತಕ್ಷಣ ಇನ್ನೊಂದು ಮುಖ್ಯವಾದ ನೀತಿಯನ್ನು ಪಾಲಿಸುವುದು ಶಾರೀರಿಕ-ಮಾನಸಿಕ ಆಧ್ಯಾತ್ಮಿಕ ದೃಷ್ಟಿಯಿಂದ ಒಳ್ಳೆಯದು. ಅದೆಂದರೆ ಹಾಸಿಗೆಯಲ್ಲಿಯೇ ಕುಳಿತು ಧ್ಯಾನ ಮಾಡುವುದು ಸೂಕ್ತ . ಇದರಿಂದ ಮನಸ್ಸು ಹಗುರವಾಗಿ ಅಂದಿನ ದಿನವೆಲ್ಲಾ ಹರ್ಷಚಿತ್ತವಾಗಿರುತ್ತದೆ.

ಪ್ರಾತರ್ವಿಧಿ: ಎದ್ದ ತಕ್ಷಣ ಮಾಡಬೇಕಾದ ಮುಖ್ಯ ಕಾರ್ಯವೆಂದರೆ ಪ್ರಾತರ್ವಿಧಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಇದರಲ್ಲಿ ಅಡಗಿರುವ ವಿಜ್ಞಾನ ತಿಳಿದುಕೊಳ್ಳಬೇಕು.

ಕೆಲವರಿಗೆ ಎದ್ದ ತಕ್ಷಣ ಪ್ರಾತರ್ವಿಧಿ (ಬಹಿರ್ದೆಸೆ) ಮಾಡಬೇಕೆಂದು ಅನಿಸುತ್ತದೆ. ಹಾಗೆ ಅನಿಸಿದ ತಕ್ಷಣ ಮಾಡಬೇಕು. ನಂತರ ಮಾಡಿದರಾಯಿತೆಂದು ತಡೆದರೆ ಅಸಿಡಿಟಿ, ಸೈನಸ್, ತಲೆನೋವು ಮುಂತಾದ ಖಾಯಿಲೆಗಳು ಉಂಟಾಗುತ್ತವೆ. ಕೆಲವರಿಗೆ ಓಡಾಡಿದರೋ, ಚಹಾ, ಕಾಫಿ ಕುಡಿದ ನಂತರವೋ ಉಂಟಾಗುವ ಅಭ್ಯಾಸವಿರುತ್ತದೆ. ಬರದಿರುವ ವೇಗಗಳನ್ನು ಪ್ರಯತ್ನ ಪೂರ್ವಕವಾಗಿ ಮಾಡಬಾರದು. ಅದೇ ರೀತಿ ಬರದಂತಹ ವೇಗವನ್ನೂ ತಡೆಯಬಾರದು. ಹೀಗೆ ಮಾಡಿದರೆ ಹಲವಾರು ರೋಗಗಳು ಬರುವ ಸಾಧ್ಯತೆಯುಂಟು.

ಆಚಾರ್ಯ ವಾಗ್ಬಟ್ಟರು ಕೆಳಗಿನ ವೇಗಗಳನ್ನು ತಡೆಯಬಾರದೆಂದು ಹೇಳಿದ್ದಾರೆ. ಅವೆಂದರೆ

ಅಪಾನವಾತ, ಮಲ ವೇಗ, ಮೂತ್ರ ವೇಗ, ಸೀನು ಬರುವುದು ಹಸಿವು, ನಿದ್ರೆ, ಕೆಮ್ಮು, ಶ್ರಮಶ್ವಾಸ, ಆಕಳಿಕೆ,ಶ್ವಾಸ, ಕಣ್ಣೀರು, ವಾಂತಿ, ರೇತಸ.

ಈ ವೇಗಗಳನ್ನು ಬಲತ್ಕಾರವಾಗಿ ತಡೆಯುವುದಾಗಲೀ ಅಥವಾ ಹೊರ ಹಾಕುವುದಾಗಲೀ ಮಾಡಿದರೆ ಬೇರೆ ಬೇರೆ ಖಾಯಿಲೆಗಳು ಬರುವುದಾಗಿ ವಿವರಿಸಿದ್ದಾರೆ.

ಉಷಃಪಾನ: ಬೆಳಿಗ್ಗೆ ಎದ್ದ ತಕ್ಷಣ ಏನನ್ನೂ ಸೇವಿಸದೇ ನೀರನ್ನು ಕುಡಿಯುವುದು ಆರೋಗ್ಯಕ್ಕೆ ಹಿತಕರ. ಹಿಂದಿನ ರಾತ್ರಿ ಮಲಗುವಾಗ ಒಂದು ತಾಮ್ರದ ಪಾತ್ರೆಯಲ್ಲಿ ಅವರವರ ಬೊಗಸೆಯಿಂದ ಸುಮಾರು ೮ ಬೊಗಸೆ (೮ ಅಂಜಲಿ) ಪ್ರಮಾಣದ ನೀರನ್ನು ತುಂಬಿಟ್ಟು, ಬೆಳಿಗ್ಗೆ ಎದ್ದ ತಕ್ಷಣ ಆ ನೀರನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಮೂತ್ರಮಲ ಪ್ರವೃತ್ತಿ ಸುಲಭವಾಗಿ ಆಗುತ್ತದೆ. ಮಲಬದ್ದತೆ ಇದ್ದವರಿಗಂತೂ ಇದು ಅತ್ಯುತ್ತಮ ಉಪಾಯ.

ಶೌಚ ವಿಧಿ: ಬಹಿರ್ದೆಸೆ ಮಾಡಿದ ನಂತರ ಕೈಗಳನ್ನು ಹಾಗೂ ಕಾಲುಗಳನ್ನು ಸ್ವಚ್ಚವಾಗಿ ತೊಳೆದುಕೊಳ್ಳಬೇಕು. ಶರೀರದ ಬೇರೆ ಬೇರೆ ಭಾಗಗಳು ಅಂದರೆ ಮೂಗು, ಮುಖ, ಕಣ್ಣು, ಕಿವಿ ಮುಂತಾದವುಗಳನ್ನು ಸ್ವಚ್ಛ ಮಾಡಿಕೊಳ್ಳುವುದು.

ದಂತಧಾವನ (ಹಲ್ಲು ಉಜ್ಜುವುದು)

ಹಲ್ಲು, ವಸಡು ಹಾಗೂ ಮುಖ ಕುಹುರದ ಉಳಿದ ಭಾಗಗಳಿಗೂ ಹಾನಿಯುಂಟಾಗದಂತೆ ಹಲ್ಲು ಉಜ್ಜುವುದು ಅತ್ಯುತ್ತಮ. ಹಲ್ಲು ಉಜ್ಜುವುದೆಂದರೆ ಸುಮ್ಮನೆ ಎಡಕಿನಿಂದ ಬಲಕ್ಕೆ, ಬಲಕಿನಿಂದ ಎಡಕ್ಕೆ ಮೂರ್ನಾಲ್ಕು ಸಲ ಬ್ರಷ್ ಆಡಿಸುವುದಲ್ಲ. ಇದರಲ್ಲಿ ಕಲೆ ಇದೆ. ದಂತ ವಿಜ್ಞಾನದ ಪ್ರಕಾರ ಮುಂಭಾಗದ ಹಲ್ಲುಗಳನ್ನು (incisor to incisor) ಕೆಳಗೂ-ಮೇಲೂ, ದವಡೆ ಹಲ್ಲುಗಳನ್ನು (premolar and molar ) (ಹೊರಮೈ) ವರ್ತುಲಾಕಾರದಲ್ಲೂ ಉಜ್ಜಬೇಕು. ಅನ್ನವನ್ನು ಅಗಿಯುವ ಮುಖ (Occlusal surface ) ವನ್ನು ಆ ಕಡೆ ಈ ಕಡೆ ಬ್ರಷ್ ಆಡಿಸಿಯೂ, ನಾಲಿಗೆಯ ಕಡೆಗಿರುವ ಮುಖವನ್ನು (Lingual surface ) ಮೇಲಿನ ಹಲ್ಲುಗಳಿಗೆ ಮೇಲಿನಿಂದ ಕೆಳಕ್ಕೂ, ಕೆಳಗಿನ ಹಲ್ಲುಗಳಿಗೆ ಕೆಳಗಿನಿಂದ ಮೇಲಕ್ಕೂ ಉಜ್ಜಬೇಕು. ಎರಡು ಹಲ್ಲುಗಳ ಮಧ್ಯ ಅಂತರವಿದ್ದರೆ ಆ ಎರಡೂ ದಂತಗಳು ಕೂಡುವ ಮುಖಗಳನ್ನು ಔಷಧಿಯುಕ್ತದಾರದಿಂದ (Dental flosa ) ಸ್ವಚ್ಛ ಮಾಡಿಕೊಳ್ಳಬೇಕು. (ಈ ದಾರದ ಉಪಯೋಗವನ್ನು ದಂತ ವೈದ್ಯರಿಂದಲೇ ತಿಳಿಯಬೇಕು).

ಬ್ರಷ್ ಮಾಡಿ ಮುಗಿದ ಮೇಲೆ, ಉಂಟಾದ ಬುರುಗನ್ನು ಸ್ವಲ್ಪ ಬಾಯಲ್ಲಿ ಉಳಿಸಿಕೊಂಡು (ಉಳಿದಿದ್ದನ್ನು ಉಗಿದು) ಅದಕೆ ಸ್ವಲ್ಪ ನೀರು ಕೂಡಿಸಿ ಚೆನ್ನಾಗಿ ಮುಕ್ಕಳಿಸಿದರೆ ಪೆಸ್ಟಿನಲ್ಲಿಯ Antiseptic ಗುಣದ ಸಂಪೂರ್ಣ ಉಪಯೋಗವಾಗುತ್ತದೆ. ನಂತರ ಐದು ನಿಮಿಷ ಬಿಟ್ಟು ಬೆಚ್ಚಗಿನ ನೀರಿನಿಂದ ಬಾಯಿ ತೊಳೆದುಕೊಳ್ಳಬೇಕು. ಪ್ರತಿ ಊಟದ ನಂತರವೂ ಬಾಯಿಯನ್ನು ನೀರಿನಿಂದ ಚೆನ್ನಾಗಿ ಮುಕ್ಕಲಿಸಬೇಕು. ಇದರಿಂದ ಹಲ್ಲುಗಳ ಸಂಧುಗಳಲ್ಲಿರುವ ಆಹಾರ ಕಣಗಳು ಹೊರ ಬರುತ್ತವೆ. ದಂತಕ್ಕೆ ಹಾನಿ ತರುವ ಚಾಕಲೇಟ್ಮುಂತಾದ ಅಂಟು ಅಂಟಾದ ಪದಾರ್ಥಗಳನ್ನು, ದಂತವೇಷ್ಟಕ್ಕೆ ಹಾನಿ ತರುವ ತಂಬಾಕಿನ ಪದಾರ್ಥಗಳನ್ನು ವರ್ಜಿಸಬೇಕು.

ಆಯುರ್ವೇದಿಯ ದಂತ ಮಂಜನ್ಗಳಲ್ಲಿ ಖದಿರ (ಕಾಚು), ಬಬ್ಬೂಲ (ಜಾಲಿ) ಮುಂತಾದ ಕಷಾಯ (ಒಗರು-Astringent ) ರಸದ, ನಿಂಬ (ಬೇವು) ಮುಂತಾದತಿಕ್ತರಸ (ಕಹಿ-bitter ) ದ ತೇಜ ಬಲ ಆದಿ ಕಟು ರಸ (ಖಾರರುಚಿ -pungent )ದ ವನಸ್ಪತಿ ಉಪಯೋಗಿಸುವರು, ಒಗರು: ಬಾಯಲ್ಲಿಯ ಜಿಡ್ಡನ್ನು ಅಥವಾ ಅಂಟಿನ ಪದಾರ್ಥವನ್ನು ತೆಗೆಯುವಲ್ಲಿ ಹಾಗೂ ದಂತವೇಷ್ಟ ಸದೃಧವಾಗಿರಿಸುವಲ್ಲಿಯೂ, ಕಹಿಯು; ಕ್ರಿಮಿನಾಶಕ, ರಕ್ತಶೋಧಕ ಹಾಗೂ ರಕ್ತಸ್ತಂಭಾಕವಾಗಿಯೂ ಮತ್ತು ಖಾರವೂ ಲಾಲಾಸ್ರವ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತವೆ.

ಮೂಲ:ಕುಟುಂಬ ವಾರ್ತೆ.

3.01123595506
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top