অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಪ್ರಜಾಪ್ರಭುತ್ವ ಮತ್ತು ಶಿಸ್ತು

ಪ್ರಜಾಪ್ರಭುತ್ವ ಮತ್ತು ಶಿಸ್ತು

ಮನುಷ್ಯ ಬುದ್ದುಜೆವಿ, ಸಮಾಜ ಜೀವಿಯೂ ಹೌದು. ಮಾನವ ಸಮಾಜದಲ್ಲಿರುವವರೆಲ್ಲರೂ ಪ್ರಜೆಗಳು, ಅಂದರೆ ಯಾವುದೇ ಒಂದು ದೇಶದ ಜನರೆಲ್ಲರೂ ಆ ದೇಶದ ಪ್ರಜೆಗಳು. ಈ ಪ್ರಜೆಗಳು ಪರಸ್ಪರ ಸೌಹಾರ್ದ ದಿಂದ ಬದುಕುತ್ತಾ ಬಂದಿದ್ದಾರೆ. ಆದರೂ ಬದುಕಿಗೆ ಒಂದು ನೀತಿ - ನಿಯಮವಿರುವಂತೆ ಆಡಳಿತಕ್ಕೂ ನೀತಿ ನಿಯಮಗಳನ್ನು ರೊಪಿಸಿಕೊಳ್ಳಬೆಕಾಯಿತು. ಅಂತಹ ಸನ್ನಿವೇಶ ಬಂದಾಗ ಹುಟ್ಟಿಕೊಂಡಿದ್ದು ಪ್ರಜಾಪ್ರಭುತ್ವ ಶಬ್ದ. ಈ ಪ್ರಜಾಪ್ರಭುತ್ವವನ್ನು ಕ್ರಮವಾಗಿ ಅನುಸರಿಸಿದರೆ ಜನರಿಗೆ ಅವಶ್ಯಕವಾದ ಹಕ್ಕುಗಳೂ ಮತ್ತು ಕರ್ತವ್ಯಗಳೂ ದೊರಕುತ್ತವೆಂದು ನಂಬಲಾಯಿತು. ಅದರಂತೆ ಅವುಗಳನ್ನು ವ್ಯವಸ್ಥಿತವಾಗಿ ಅನುಸರಿಸುವುದೂ ಅನಿವಾರ್ಯವೆಂದು ತಿಳಿದುಕೊಂಡರು. ಅದನ್ನೇ ಶಿಸ್ತು  (discipline)  ಎಂದು ಭಾವಿಸಿದರು.ಇವೆರಡೂ ಒಂದನ್ನೊಂದು ಪರಸ್ಪರ ಅವಲಂಬಿಸಿದೆ. ಶಿಸ್ತಿಲ್ಲದ ಪ್ರಜಾಪ್ರಭುತ್ವ ಹಾಗೂ ಪ್ರಜಾಪ್ರಭುತ್ವದ ಶಿಸ್ತು ಎರಡೂ ಹಾನಿಕರ. ಅದು ಸರ್ವಾದಿಕಾರ ಅಥವಾ ನಿರಂಕುಶಾಧಿಕಾರಕ್ಕೆ ದಾರಿ ಮಾಡುತ್ತದೆ. ಆದುದರಿಂದ ಪ್ರಜಾಪ್ರಭುತ್ವದ ಯಶಸ್ಸಿಗೆ ಶಿಸ್ತು ಅನಿವಾರ್ಯ.

ಪ್ರಜಾಪ್ರಭುತ್ವ ಎಂದರೇನು? ''ಪ್ರಜೆಗಳಿಂದಲೇ, ಪ್ರಜೆಗಳಿಗಾಗಿಯೇ ಪ್ರಜೆಗಳಿಗೊಸ್ಕರವೇ" ನಡಸುವ ಆಡಳಿತ ಪ್ರಜಾಪ್ರಭುತ್ವ ವೆನ್ನಿಸುತ್ತದೆ. ಹೀಗೆಂದು ಅಬ್ರಹಾಂ ಲಿಂಕನ್ ವ್ಯಾಖ್ಯಾನಿಸಿದ್ದಾರೆ. ಇಂತಹ ಆಡಳಿತ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಪರಮಾಧಿಕಾರವಿರುತ್ತದೆ. ಅವರೇ ಸರ್ಕಾರದ ಪ್ರಭುಗಳೆನಿಸುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ಮತ್ತು ಹಕ್ಕುಗಳನ್ನು ತಿಳಿದಿರಬೇಕು. ಪ್ರತಿಯೊಬ್ಬರಿಗೂ ಸ್ವತಂತ್ರವಾಗಿರಲು ಹಕ್ಕಿದೆ. ಅಪಾರವಾದ ಸ್ವಾತಂತ್ರ್ಯವೂ ಇದೆ . ಅದರ ಸರಿಯಾದ ಉಪಯೋಗದಿಂದ ಪ್ರಜ್ಞಾವಂತ ನಾಗರೀಕನು ಸೃಷ್ಟಿಯಾಗುತ್ತಾನೆ. ಇಂತಹ ಸ್ವಾತಂತ್ರ್ಯದ ಸವಿ ಅತ್ಯಂತ ಶ್ರೇಷ್ಟವಾದುದು. ಆದರೆ ಇದೆಲ್ಲವೂ ಶಿಸ್ತಿಗೆ ಒಳಪಟ್ಟಿರುತ್ತದೆ. ಶಿಸ್ತು ಪಾಲನೆ ಒಂದು ಬಗೆಯ ಕರ್ತವ್ಯವಿದ್ದಂತೆ . ನಮ್ಮ ದೇಶದ ಸಂವಿಧಾನವೂ ಪ್ರಜೆಗಳಿಗಿರುವ ಹಕ್ಕು ಮತ್ತು ಕರ್ತವ್ಯಗಳನ್ನು ವಿಸ್ತಾರವಾಗಿ ಹಾಗೂ ಸ್ಪಷ್ಟವಾಗಿ ನಿರೂಪಿಸಿದೆ. 'ಹಕ್ಕು ಮತ್ತು ಕರ್ತವ್ಯಗಳು' " ಒಂದೇ ನಾಣ್ಯದ ಎರಡು ಮುಖಗಳು" ಎಂದು ಹೇಳುತ್ತಾರೆ. ಇದು ಸರಿಯಾಗಿ ಚಾಲನೆಯಾದರೆ  ಮಾತ್ರ  ಪ್ರಜಾಪ್ರಭುತ್ವ ಊರ್ಜಿತವಾಗುವುದು.  ಇಲ್ಲವಾದಲ್ಲಿ ಸರ್ವಾಧಿಕಾರದ ಆಡಳಿತ ಬರುವುದು ನಿಶ್ಚಿತ. ನಮ್ಮ ಸ್ವಾತಂತ್ರ್ಯವನ್ನು ನಾವು ಬಯಸುವಂತೆ, ಗೌರವಿಸುವಂತೆ  ಇನ್ನೊಬ್ಬರ ಸ್ವಾತಂತ್ರ್ಯವನ್ನು ನಾವು ಗೌರವಿಸಬೇಕು. ಅವರ ಹಕ್ಕನ್ನು ಅವರು ಅನುಭವಿಸಲು ಅವಕಾಶವಿರಬೇಕು. ಇದನ್ನು ಅನುಸರಿಸುವುದೇ ಶಿಸ್ತು ಪಾಲನೆ.

ಶಿಸ್ತು ಪಾಲನೆ ಪ್ರಜಾಪ್ರಭುತ್ವದ ಜೀವಾಳ. ನೈತಿಕ ಹಕ್ಕಿನ ತಳಹದಿಯನ್ನು ಹೊಂದಿರುವ ಸಾಮಾಜಿಕ ಬದ್ದತೆ ಇರುವ, ಸಮಾನತೆ ಇರುವ, ಸಮಾನತೆ ಇರುವ ಪ್ರಪಂಚದ ಯಾವುದೇ ಪ್ರಜಾಪ್ರಭುತ್ವವೂ ಶಿಸ್ತು ಪಾಲನೆ ಮಾಡದೆ ಬದುಕಿರಲಾರದು .  ಪ್ರಜಾಪ್ರಭುತ್ವದ ಗೆಲುವು ಅದರ ಗೌರವಪೂರ್ಣ ಉಪಯೋಗ ಮತ್ತೊಂದರ ಉಲ್ಲಂಘನೆ ಮಾಡದಿರುವುದರಲ್ಲಿ ಅಡಗಿದೆ. ಈ ಬಗೆಯ ನಿಲುವು ಕಾನೂನು ಪಾಲನೆಯ  ಮುಖ್ಯ ಅಂಗವಾಗಿದೆ. ಅದಕ್ಕಿಂತ ಹೆಚ್ಚಾಗಿ ಪ್ರಜಾಪ್ರಭುತ್ವದಲ್ಲಿ ಸ್ವಯಂ ಶಿಸ್ತುಪಾಲನೆ ಅತ್ಯಂತ ಮಹತ್ವ ಪೂರ್ಣವಾದುದು.

ಪ್ರಜಾಪ್ರಭುತ್ವ ಭಾರತಕ್ಕೆ ಹೊಸದೇನಲ್ಲ. ಚಕ್ರವರ್ತಿಗಳು, ರಾಜ ಮಹಾರಾಜರುಗಳು ಪ್ರಜೆಗಳ ಅಭಿಪ್ರಾಯವನ್ನು ಸ್ವತಃ ಕೇಳಿ ತಿಳಿದುಕೊಳ್ಳುತ್ತಿದ್ದರು. ತಮ್ಮ ಆಡಳಿತದಲ್ಲಿ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವುದರ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸುತ್ತಿದ್ದ ಅನೇಕ ಉದಾಹರಣೆಗಳಿವೆ. ಆಗಲೂ ಅಭಿವ್ಯಕ್ತ ಸಾತಂತ್ರ್ಯವಿತ್ತು. ಆದರೆ ಇಷ್ಟೊಂದು ವ್ಯಾಪಕವಾದ ಕಾನೂನು ಬದ್ದ ಪ್ರಜಾಪ್ರಭುತ್ವವಿರಲಿಲ್ಲ.

ಪ್ರಜಾಪ್ರಭುತ್ವದಲ್ಲಿ ದೊರಕುವ ಸ್ವಾತಂತ್ರ್ಯ ಅಪರಿಮಿತ. ಅದಕ್ಕೆ ಎಲ್ಲೆಯೇ ಇಲ್ಲ. ಸಂಚಾರ, ವಾಸ,ಉದ್ಯೋಗ, ಆಸ್ತಿ ಹೊಂದುವುದು, ಧರ್ಮಾಚರಣೆ, ಕಲೆ, ಅಭಿವ್ಯಕ್ತಿ ಸ್ವಾತಂತ್ರ್ಯ ಇವೆಲ್ಲವುಗಳನ್ನೂ ಮುಕ್ತವಾಗಿ ಅನುಭವಿಸುವ ಸ್ವಾತಂತ್ರ್ಯ ದೊರಕುತ್ತದೆ. ಆದರೆ ಅದೇ ಸಮಯದಲ್ಲಿ ನಮ್ಮ ನೆರೆಯವರಿಗೂ  ಅಷ್ಟೇ ಸ್ವಾತಂತ್ರ್ಯ ವಿರುತ್ತದೆಂಬುದನ್ನು  ಮರೆಯುವಂತಿಲ್ಲ. ನಮ್ಮ ಸ್ವಾತಂತ್ರ್ಯ ನಮ್ಮ ಎಲ್ಲೇ ಮೀರಬಾರದು. ಈ ನಿಲುವಿನಲ್ಲಿ ವಿರೋಧ ಬಂದಾಗ ಸಂಘರ್ಷವೂ ಹುಟ್ಟುತ್ತದೆ. ಇಂತಹ ವೇಳೆಯಲ್ಲಿ ಸಂಯಮ, ವಿವೆಕಪೂರ್ಣ ನಡವಳಿಕೆಗಳು ಶಿಸ್ತಿಗೆ ಅವಶ್ಯಕ. ಸಮಾಜವಿಲ್ಲದೆ ಸ್ವಾತಂತ್ರ್ಯವಿಲ್ಲ. ಏಕೆಂದರೆ ಸ್ವಾತಂತ್ರ್ಯವನ್ನು ಸಮಾಜವೇ ನಮಗೆ ಕೊಡುತ್ತದೆ. ಆದುದರಿಂದ ಒಟ್ಟು ಸಮಾಜದಲ್ಲಿ ವಾಸಿಸುವರ್ಲ್ಲರೂ ಬದುಕು ಸಾಗಿಸುವವರೆಲ್ಲರೂ ತಾಳ್ಮೆ, ಶಿಸ್ತು, ಇವುಗಳನ್ನು ಸ್ವಾತಂತ್ರ್ಯಕ್ಕೆ ಪೂರಕವಾಗಿ ಹೊಂದಿಸಿಕೊಂಡು ಸಹಬಾಳ್ವೆ ನಡೆಸಬೇಕು. ಹಾಗೂ ಅದಕ್ಕೆ ಬದ್ದರಾಗಿರಬೇಕು.

ಪ್ರಜಾಪ್ರಭುತ್ವವೂ ಸಮಾನತೆ, ನ್ಯಾಯ ಮತ್ತು ಸಹೋದರತ್ವ ಇವುಗಳ ಮೇಲೆ ಆಧಾರಿತವಾಗಿದೆ. ಅದಕ್ಕಾಗಿ ಶಿಸ್ತು ಅನಿವಾರ್ಯ. ನಮ್ಮ ರಾಷ್ಟ್ರ ಪ್ರಜಾಪ್ರಭುತ್ವದ ರಾಷ್ಟ್ರವಾದ ಮೇಲೆ ಅನೇಕ ರಾಷ್ಟ್ರಗಳು ಪ್ರಜಾಪ್ರಭುತ್ವ ಸರ್ಕಾರಗಳನ್ನು ಸ್ಥಾಪಿಸಿಕೊಂಡವು. ಅವುಗಳಲ್ಲಿ ಕೆಲವು ರಾಷ್ಟ್ರಗಳು ಅತಿಯಾದ ಶಿಸ್ತು ಅಥವಾ ಅಂಕೆಯಿಲ್ಲದ ಆಡಳಿತದ ಕಾರಣದಿಂದ ಇಂದು ಏಕಾಧಿಕಾರಕ್ಕೆ ಅಥವಾ ಮಿಲಿಟರಿ ಆಡಳಿತಕ್ಕೆ ಒಳಪಟ್ಟಿವೆ. ಇದರಿಂದ ಪ್ರಜಾಪ್ರಭುತ್ವ ರಾಷ್ಟ್ರಗಳು ಅತಿ ಎಚ್ಚರಿಕೆಯಿಂದ ಆಡಳಿತ ನಡೆಸಬೇಕಾಗುವುದೆಮ್ಬುದು ತಿಳಿದು ಬರುತ್ತದೆ.

ಅಶಿಸ್ತು ಮತ್ತು ಕಾನೂನು ಪಾಲನೆ ಮಾಡದಿರುವುದು ಪ್ರಜಾಪ್ರಭುತ್ವದ ಅವನತಿಯ ಅಥವಾ ಅತಂತ್ರದ ಸಂಕೇತ. ಪ್ರಜಾಪ್ರಭುತ್ವ ಮತ್ತು ಶಿಸ್ತು ಪರಸ್ಪರ ಪೂರಕವಾಗಿ ಪುಷ್ಟಿ ಹೊಂದಿರುತ್ತವೆ. ಏಕೆಂದರೆ ಎರಡೂ ಸಹ ಅದರ ಪಾಲನೆಯಲ್ಲಿ, ಕರ್ತವ್ಯಗಳಲ್ಲಿ ಆಳವಾದ ನಂಬಿಕೆಯ , ಜವಾಬ್ದಾರಿಯ, ಹೊಂಗಾರಿಕೆಯ ಬೇರುಗಳನ್ನು ಹೊಂದಿವೆ. ಒಬ್ಬರು ಅದನ್ನು ಮೀರಿದರೆ  ಇನ್ನೊಬ್ಬರು ಅದರ ನಾಶಕ್ಕೆ ಸಿದ್ದವಾಗಿರುತ್ತಾರೆ. ಇವೆರಡರ ಮಧ್ಯೆ  ಸಮತೂಕದ ನಿರ್ವಹಣೆ ಅತಿ ಅಗತ್ಯ. ಇವೆರಡರ ಮೇಲೂ ಯಾವುದೇ ಅತಿಯಾದ ಒತ್ತಡವಿರಬಾರದು. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಾದುದರಿಂದ  ಯಾವುದೇ ಒಂದರ ಒತ್ತಡ ಇನ್ನೊಂದರ ಪ್ರಗತಿಯನ್ನೂ ಕುಂಠಿತಗೊಳಿಸುತ್ತದೆ. ಒಂದನ್ನೇ ನಂಬಿಕೊಂಡು ಇನ್ನೊಂದನ್ನು ಬಿಡಲಾಗುವುದಿಲ್ಲ. ಕಾನೂನು ಮತ್ತು ನಿಯಮಗಳ ಉಲ್ಲಂಘನೆ ಪ್ರಜಾಪ್ರಭುತ್ವದ ಅತಿ ದೊಡ್ಡ ಶತ್ರುಗಳು. ಯಾವಾಗಲೂ ಅವುಗಳ ಸರಿಯಾಗಿ ಪಾಲನೆ ಮಾಡುವುದರಿಂದ ಹಿತವಾಗುವುದು. ಸಮುದ್ರಕ್ಕೂ ಒಂದು ಎಲ್ಲೇ ಇದೆಯಲ್ಲವೇ? ಅದೂ ಸಹ ತನ್ನ ಮಿತಿಯನ್ನು ಮೀರಲಾರದು. ಅದೇ ಕಾರಣಕ್ಕೆ ಅದಕ್ಕೆ ಒಂದು ಸ್ಥಾನ ಮತ್ತು ಶಕ್ತಿ ಇದೆ ಂದು ಭಾವಿಸುತ್ತೇವೆ. ಅಂದ ಮೇಲೆ ಮನುಷ್ಯನಿಗೆ ಯಾವುದೇ ಬಗೆಯ ಕಡಿವಾಣವಿಲ್ಲದಿದ್ದರೆ ಸ್ವಾತಂತ್ರ್ಯವನ್ನು ಅನುಭವಿಸಲು ಹೇಗೆ ಸಾಧ್ಯ? ಪ್ರಜಾಪ್ರಭುತ್ವ, ಕಾನೂನು ನಿಯಮಗಳು ಅಥವಾ ಶಿಸ್ತು ಪಾಲನೆ ಇವುಗಳು ಎಲ್ಲಾ ರೀತಿಯಿಂದಲೂ ಒಂದೇ ಗುರಿಯನ್ನು ಹೊಂದಿರುತ್ತವೆ.

ಭಾರತ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ. ನೂರು ಕೋಟಿಗಿಂತಲೂ ಅಧಿಕ ಜನ ಸಂಪತ್ತಿನೊಂದಿಗೆ ಸ್ವಾತಂತ್ರ್ಯದ ಅರ್ಧ ಶತಮಾನವನ್ನು ಅತ್ಯಂತ ಯಶಸ್ವಿಯಾಗಿ ಕಳೆದಿದ್ದೇವೆ. ಭಾರತೀಯರು ಸ್ವಾಭಾವಿಕವಾಗಿ ಶಾಂತಿಪ್ರಿಯರೂ, ಶಾಂತಿಪಾಲಕರೂ, ಸ್ವತಃ ನೀತಿ ನಿರ್ಧಾರಗಳನ್ನು ಅನುಸರಿಸುವವರೂ, ನಿಯಮ ಪಾಲಕರೂ ಆಗಿರುವುದರಿಂದ ಈ ಬಗೆಯ ಯಶಸ್ಸು ಸಾಧ್ಯವಾಗಿದೆ. ಮತದಾರರು ಜಾಗೃತರಾಗಿರುವರಲ್ಲದೇ, ಪ್ರಜ್ನಾವಂತರೂ ಆಗಿದ್ದಾರೆ.  ಒಳಿತು ಕೆಡುಕುಗಳನ್ನು ನಿರ್ಣಯಿಸಿ, ವಿಶ್ಲೇಷಣೆ ಮಾಡಿ ತೀರ್ಮಾನಿಸುವಷ್ಟು ಶಕ್ತರಾಗಿದ್ದಾರೆ. ನಾವು ಪರಿಣಾಮಕಾರಿಯಾದ ತಿಳಿವಳಿಕೆ ಮತ್ತು ಸಹನೆ ಹಾಗೂ ಶಿಸ್ತನ್ನು ಮೈಗೂಡಿಸಿಕೊಂಡಿರುವುದರಿಂದ, ನಾವು ಗಳಿಸಿರುವ ಸ್ವಾತಂತ್ರ್ಯವನ್ನು ಅರ್ಥಪೂರ್ಣವಾಗಿ  ಅನುಭವಿಸುತ್ತಿದ್ದೇವೆ. ಸಾಮಾಜಿಕ, ನೈತಿಕ  ಜವಾಬ್ದಾರಿ, ಕರ್ತವ್ಯ ಪ್ರಜ್ಞೆ, ತಾತ್ವಿಕ ಬದ್ದತೆಗಳ ಮೂಲಕ ನಮ್ಮ ಪ್ರಜಾಪ್ರಭುತ್ವಕ್ಕೆ ಮೌಲಿಕ ಅರ್ಥವನ್ನೂ ಮತ್ತು ಉಜ್ವಲವಾದ ಭವಿಷ್ಯವನ್ನೂ ಬಯಸಲು ನಾವು ಸಮರ್ಥರಾಗಿದ್ದೇವೆ .

ಇತರೆ ಶೀರ್ಷಿಕೆಗಳು -

  1. ಶಿಸ್ತು ಮತ್ತು ನಾಗರೀಕತೆ
  2. ಪ್ರಜಾಪ್ರಭುತ್ವಕ್ಕೆ ರಸ್ತೆ ಪೂರಕ.

ಮೂಲ: ಪ್ರಬಂಧ ಮಂಜರಿ.

ಕೊನೆಯ ಮಾರ್ಪಾಟು : 1/28/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate