অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಮಹಿಳಾ ಅಸಮಾನತೆಯ ವಿರುದ್ಧ ಬಂಡಾಯ

ಮಹಿಳಾ ಅಸಮಾನತೆಯ ವಿರುದ್ಧ ಬಂಡಾಯ

ಪುರುಷಪ್ರಧಾನ ಸಮಾಜದಲ್ಲಿ ಮಹಿಳೆ ಮೊದಲಿನಿಂದಲೂ ಎರಡನೆಯ ದರ್ಜೆ ಪ್ರಜೆಯಾಗಿಯೇ ಕಷ್ಟಗಳನ್ನು ಅನುಭವಿಸುತ್ತಿದ್ದು ಅದರ ವಿರುದ್ಧ ಹಲವು ಮಹನೀಯರು ಕೈಗೊಂಡ ಕ್ರಮಗಳು ಹಾಗೂ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರು ರೂಪಿಸಿದ ನೀತಿಗಳನ್ನು ಲೇಖಕರು ತಮ್ಮ 'ಮಹಿಳಾ ಅಸಮಾನತೆ' ಪುಸ್ತಕದ ೩ ನೇ ಅಧ್ಯಾಯದಲ್ಲಿ ವಿವರಿಸಿದ್ದಾರೆ. ಆ ಭಾಗವನ್ನೇ ಇಲ್ಲಿ ನೀಡಲಾಗಿದೆ.

ಬುದ್ಧ

 1. ಬೌದ್ಧ ಧರ್ಮವು ಸಮಾನತೆ, ಶಾಂತಿ, ಪ್ರೀತಿ, ದಯೆಯನ್ನು ಅವಲಂಬಿಸಿದೆ. ಸ್ವಾತಂತ್ಯ, ಸಮಾನತೆ, ಸೋದರತೆಗಳ ಜೊತೆಗೆ ಮಾನವನ ಭೌತಿಕ ಸುಖ ಸಂಪತ್ತನ್ನು ಹೆಚ್ಚಿಸಬಲ್ಲ ಏಕೈಕ ಧರ್ಮವೆಂದರೆ 'ಬೌದ್ಧ ಧರ್ಮ'.
 2. ಸ್ತ್ರೀ ಪುರುಷರಿಬ್ಬರೂ ಸರಿಸಮಾನರು ಎಂದು ಹೇಳಿ ಮಹಿಳೆಯರಿಗೆ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯವನ್ನು ನೀಡಲಾಗಿದೆ.
 3. ಸ್ತ್ರೀಯರನ್ನು ಭಿಕ್ಕು ಸಂಘಕ್ಕೆ ಸೇರಿಸಿಕೊಳ್ಳುವುದರ ಮೂಲಕ ಪ್ರಜಾಪ್ರಭುತ್ವ ಸಿದ್ದಾಂತ ಎತ್ತಿ ಹಿಡಿದಿದೆ.
 4. ಗೃಹಿಣಿ, ವಿಧವೆ, ಬಂಜೆ, ಕೀಳು, ವೇಶ್ಯೆ ಎನ್ನದೇ ಯಾವುದೇ ರೀತಿಯ ಭೇದಭಾವ ಮಾಡದೇ ಎಲ್ಲರಿಗೆ ಮುಕ್ತವಾದ ಪ್ರವೇಶವನ್ನು ಭಿಕ್ಕು ಸಂಘದಲ್ಲಿ ನೀಡಲಾಗಿದೆ.
 5. ಮಹಿಳೆ ತನ್ನ ಏಳಿಗೆಗಾಗಿ ಉನ್ನತಿಗಾಗಿ ಇನ್ನೊಬ್ಬರನ್ನು ಆಶ್ರಯಿಸದೇ ತನ್ನ ಬಲದಿಂದ ಮುನ್ನುಗ್ಗಬೇಕು ಎನ್ನುತ್ತದೆ.
 6. ಹೆಂಡತಿಯನ್ನು ಮೀರಿಸುವ ಸ್ನೇಹಿತರಿಲ್ಲ ಎನ್ನುತ್ತದೆ.
 7. ಹೆಣ್ಣು ಸತ್ತ ನಂತರ ಮೋಕ್ಷ ಪಡೆಯಲು ಕಾರಣ ಅವಳ ಐಶ್ವರ್ಯವಲ್ಲ, ಸೌಂದರ್ಯವಲ್ಲ, ಬಂಧುಬಳಗವಲ್ಲ, ಆಕೆಯ ಮಕ್ಕಳಲ್ಲ. ಆಕೆಯ ಗುಣದಿಂದಲೇ ಎನ್ನುತ್ತದೆ.
 8. ಪತಿ ಪತ್ನಿಯರು ಸಮಾನ ಶ್ರದ್ಧೆಯುಳ್ಳವರಾಗಿರಬೇಕು, ಸಮಾನ ಶೀಲಗಳನ್ನು ಆಚರಿಸಬೇಕು, ಸಮಾನ ತ್ಯಾಗಿಗಳಾಗಿರಬೇಕು ಮತ್ತು ಸಮಾನ ಪ್ರಜ್ಞೆಯುಳ್ಳವರಾಗಿರಬೆಕು ಎಂದೆನ್ನುತ್ತದೆ.
 9. ತಾಯಿಯೇ ಮನೆಯಲ್ಲಿ ಮಕ್ಕಳಿಗೆ ಗುರು, ತಾಯಿಯಿಲ್ಲದ ಮಗುವಿಗೆ ಅನಾಥ ಪ್ರಜ್ಞೆ ಕಾಡುತ್ತದೆ.ತಾಯಿಯಿಲ್ಲದ ಮಗು ಹಸಿವೆಯನ್ನು ತಡೆಯಲಾರದು. ತಾಯಿ ತಾಳ್ಮೆಯ ಸಾಕಾರ ಮೂರ್ತಿ ಎಂದೆನ್ನುತ್ತದೆ.
 10. ಮಾಡುವ ಸರಳವಾಗಿರಬೇಕು ಮತ್ತು ಅದೊಂದು ಸಿವಿಲ್ ಕರಾರು ಎಂದೆನ್ನುತ್ತದೆ.
 11. ಬಾಲ್ಯವಿವಾಹ ಪದ್ಧತಿ ರೂಡಿಯಲ್ಲಿರಲಿಲ್ಲ.
 12. ಸ್ತ್ರೀಯರು ದತ್ತು ತೆಗೆದುಕೊಳ್ಳಬಹುದಿತ್ತು.
 13. ಮದುವೆಯಾಗದ ಕನ್ಯೆಯನ್ನೂ ಗೌರವದಿಂದ ಕಾಣಲಾಗುತ್ತಿತ್ತು.
 14. ಬಾಳಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಮಹಿಳೆಗೆ ನೀಡಲಾಗಿತ್ತು.
 15. ವರದಕ್ಷಿಣೆ ಪಡೆಯುವನನ್ನು ಹೀನ ಜೀವನ ಸಾಗಿಸುವ ಮತ್ತು ನೀಚಕ್ರುತ್ಯ ಮಾಡುವವನೆಂದು ಭಾವಿಸಲಾಗಿತ್ತು.
 16. ನಿರ್ವಾಣ ಪಡೆಯುವಲ್ಲಿ ಸ್ತ್ರೀ ಪುರುಷನಷ್ಟೇ ಶಕ್ತಲಾಗಿದ್ದಾಳೆ ಎನ್ನುತ್ತದೆ.
 17. ಲಿಂಗಾಧಾರಿತ ಅಸಮಾನತೆಯನ್ನು ತಿರಸ್ಕರಿಸಿತ್ತು.
 18. ಎಲ್ಲ ಮಾನವರು ಸಮಾನರು ಎಂದೆನ್ನುತ್ತದೆ.
 19. ಮನುಷ್ಯ ಗುಣದಿಂದ ದೊಡ್ಡವನಾಗುತ್ತಾನೆ. ಹುತ್ತಿನಿಂದಲ್ಲ ಎಂದೆನ್ನುತ್ತದೆ.
 20. ಜ್ಞಾನವೆನ್ನುವುದು ಅನ್ನದಷ್ಟೇ ಮುಖ್ಯ ಎನ್ನುತ್ತಾ ಪ್ರತಿಯೊಬ್ಬರಿಗೂ ಕಲಿಯುವ ಹಕ್ಕನ್ನು ಕೊಟ್ಟಿದೆ.
 21. ವಿವಾಹ ಸಮಯದಲ್ಲಿ ಸ್ತ್ರೀಯರಿಗೆ ಕೊಟ್ಟ ಉಡುಗೊರೆ  ಹಾಗೂ ಸಂಪತ್ತು ಸ್ತ್ರೀಯರಿಗೆ  ಸೇರುತ್ತಿತ್ತು.
 22. ವಿಧವೆಗೆ ಮರುಮದುವೆಯಾಗುವ ಸ್ವಾತಂತ್ರ್ಯವನ್ನು ಕೊಡಲಾಗಿತ್ತು.
 23. ವಿಚ್ಚೇದನದ ಹಕ್ಕನ್ನು ನೀಡಲಾಗಿತ್ತು.
 24. ಆಸ್ತಿಯಲ್ಲಿ ಗಂಡ ಹೆಂಡತಿಗೆ ಸಮಪಾಲು ನೀಡಲಾಗಿತ್ತು. ಕುಟುಂಬದ ಆಸ್ತಿಯನ್ನು ಪರಭಾರೆ ಮಾಡಬೇಕಾದರೆ ಹೆಂಡತಿಯ ಒಪ್ಪಿಗೆ ಬೇಕಾಗಿತ್ತು.ಕೋಸಲದ ಅರಸನ ಪತ್ನಿ ರಾಣಿ ಮಲ್ಲಿಕಾಳಿಗೆ ಹೆಣ್ಣು ಮಗು ಜನಿಸುತ್ತದೆ. ಆ ಸಮಯದಲ್ಲಿ ದೊರೆ ಬೌದ್ಧ ವಿಹಾರದಲ್ಲಿ ಇರುತ್ತಾನೆ. ದೂತರು ಬಂದು ರಾಜನಿಗೆ ಮಗುವಿನ ಜನನದ ಸುದ್ದಿಯನ್ನು ತಿಳಿಸುತ್ತಾರೆ. ಕೂಡಲೇ ರಾಜನ ಮುಖ ಕಳೆಗುಂದುತ್ತದೆ, ಮನಸ್ಸು ಖಿನ್ನವಾಗುತ್ತದೆ. ಆ ಸಮಯಕ್ಕೆ ಅಲ್ಲಿಗೆ ಬಂದ  ಬುದ್ಧ , ರಾಜನ ಖಿನ್ನತೆಗೆ  ಕಾರಣವನ್ನು ಕೇಳುತ್ತಾನೆ. ರಾಜ ತನ್ನ ದುಃಖವನ್ನು ಹೇಳಿಕೊಳ್ಳುತ್ತಾನೆ. ಆಗ ಬುದ್ಧ ಹೇಳುವ ಮಾತುಗಳು ಅವನ ಸ್ತ್ರೀ ಪರ ಧೋರಣೆಗೆ ಕನ್ನಡಿಯನ್ನು ಹಿಡಿದಂತಿವೆ. 'ರಾಜನೇ , ನಿನಗೆ ಹೆಣ್ಣು ಮಗುವಾಯಿತೆಂದು ಏಕೆ ಕೊರುಗುತ್ತಿಯೇ? ನಿನ್ನನ್ನು ಹೆತ್ತವಳು , ನಿನ್ನ ಪ್ರೀತಿಯ ಬಾಳಸಂಗಾತಿ ಹೆಣ್ಣೇ ಆಗಿದ್ದಾಳೆ. ಹೆಣ್ಣಿನದು ಅದ್ಭುತ ವ್ಯಕ್ತಿತ್ವ: ಮನುಕುಲವನ್ನು ಪೊರೆದ ಮಹಾಮಾತೆ ಹೆಣ್ಣು. ರಾಜಾಧಿರಾಜ, ಚಕ್ರವರ್ತಿಗಳು, ಕವಿ, ಋಷಿ, ಪುಂಗವರು, ಕಲಾವಿದ ಶ್ತ್ರೆಷ್ಟರೂ ಸಹ ಮಾತೆಯ ಮಡಿಲಲ್ಲಿ ಆಡುತ್ತಾ ಬೆಳೆದವರು. ಮುಂದೆ ನಿನ್ನ ಮಗಳು ಚಕ್ರವರ್ತಿಗೆ ಜನ್ಮ ಕೊಡಬಹುದು. ಹೀಗಿರುವಾಗ ನೀನೇಕೆ ಚಿಂತಿಸುತ್ತಿಯೇ? ಎದ್ದೇಳು , ಜನ್ಮೊತ್ಸವದ ಸಂಭ್ರಮವನ್ನು ಆಚರಿಸು' ಎನ್ನುತ್ತಾನೆ.

ಬಸವ

ಹನ್ನೆರಡನೇ ಶತಮಾನದಲ್ಲಿ ಕರ್ನಾಟಕದಲ್ಲಿ ಬಸವೇಶ್ವರರ ನೇತೃತ್ವದಲ್ಲಿ 'ಅನುಭವ ಮಂಟಪ' ವೆಂಬ  ಸಂಸ್ಥೆ ಸ್ಥಾಪಿತವಾಯಿತು.ಅನೇಕ ವಿಚಾರವಂತರು ಸಾಮೂಹಿಕವಾಗಿ ಅನುಭವ ಮಂಟಪದಲ್ಲಿ ಸಮಾಜದ ಅನೇಕ ಜ್ವಲಂತ ಸಮಸ್ಯೆಗಳನ್ನು ಚರ್ಚೆ ಮಾಡಿದರು. ಸುದೀರ್ಘ ಚರ್ಚೆಯ ನಂತರ ಬಂದ ನಿರ್ಣಯಗಳೇ ವಚನರೂಪ ತಾಳಿದವು. ಜಾತಿಬೇಧವಿಲ್ಲದೆ, ಲಿಂಗಬೇಧವಿಲ್ಲದೇ ಮತ್ತು ವರ್ಗಬೇಧವಿಲ್ಲದ ಒಂದು ಸಮಸಮಾಜದ ನಿರ್ಮಾಣದ ಗುರಿಯೇ ಎಲ್ಲಾ ವಚನಕಾರರದಾಗಿತ್ತು. ಈ ಗುರಿಯನ್ನು ಸಾಧಿಸಲು ವಚನಕಾರರು ತಮ್ಮ ವಚನಗಳ ಮುಖಾಂತರ ಸಮಾಜದ ಸಮಗ್ರ ಬದಲಾವಣೆಯನ್ನು ಸೂಚಿಸಿದರು. ವಚನಕಾರರು ಲಿಂಗಭೇಧವನ್ನು ಸಂಪೂರ್ಣವಾಗಿ ತಿರಸ್ಕರಿಸಿದರು.

ಮಹಿಳೆಯನ್ನು ಒಬ್ಬ ಮನುಷ್ಯ ಜೀವಿಯನ್ನಾಗಿ ಕಂಡು ಗೌರವಿಸಿದರು. ಇದಕ್ಕೆ ಸಾಕ್ಷಿ ಈ ಕೆಳಗಿನ ಕೆಲವು ವಚನಗಳು:

ಎಮ್ಮ ತಾಯಿ ನಿಂಬವ್ವೆ ನೇರನೆರೆದುಂಬಳ

ಎಮ್ಮಕ್ಕ ಕಂಚಿಯಲ್ಲಿ ಬಾಸಣವೆ ಮಾಡುವಳು.

ಎಂದು  ಬಸವಣ್ಣ ಮಹಿಳೆಯರನ್ನು ಕುರಿತು ಸರ್ವವಿಧದಲ್ಲಿಯೂ ಸಮಾನತೆಯನ್ನು ಸಾರಿದರು.

ಗಂಡ ಶಿವಲಿಂಗ ದೇವರ ಭಕ್ತ

ಹೆಂಡತಿ ಮಾರಿ ಮಸಣಿಯ ಭಕ್ತೆ

ಗಂಡ ಕೊಂಬುದಂ ಪಾರೋದಕ ಪ್ರಸಾದ

ಹೆಂಡತಿಯುಂಬುದು ಸೆರೆಮಾಂಸ

ಬಾಸಂಡ ಭೋಜನ ಶುದ್ಧವಿಲ್ಲದವರ ಭಕ್ತಿ

ಹೆಂಡದ ಮಡಿಕೆಯ ಹೊರಗೆ ತೊಳೆದಂತೆ

ಕೂಡಲಸಂಗಮದೇವಾ .

ಮಹಿಳೆ ಸಾಂಪ್ರದಾಯಿಕವಾಗಿ ತನಗ ಅರಿವು ಇಲ್ಲದಂತೆ ಸದಾ ಮೂಡನಂಬಿಕೆ, ಅಂಧ ಶ್ರದ್ದ ಅಜ್ಞಾನದಲ್ಲಿ ಮುಳುಗಿರುವುದನ್ನು ಈ ವಚನದಲ್ಲಿ ತಿಳಿಸಿದೆ. ಈ ತರಹದ ಅನಾಚಾರವನ್ನು ಹೊಡೆದೋಡಿಸಲು ಮಹಿಳೆಯರಿಗೆ ಸ್ವಾತಂತ್ರ್ಯ ಅಗತ್ಯ ಎಂದು ಬೋಧಿಸಿದರು.

ಛಲ ಬೇಕು ಶರಣಂಗೆ ಪರ ಧನವನೋಲ್ಲೆನೆಂಬ

ಛಲ ಬೇಕು ಶರಣಂಗೆ ಪರ ಸತಿಯನೋಲ್ಲೆನೆಂಬ

ಛಲ ಬೇಕು  ಶರಣಂಗೆ ಪರ ದೈವನೋಲ್ಲೆನೆಂಬ

ಛಲ ಬೇಕು ಶರಣಂಗೆ ಲಿಂಗಜನ್ಗಮನೊಂದೆಂಬ

ಛಲ ಬೇಕು ಶರಣಂಗೆ ಪ್ರಸಾದ ದಿಟವೆಂಬ

ಛಲ ವಿಲ್ಲದವರ ಮೆಚ್ಹ ಕೂಡಲಸಂಗಮದೇವ

ಬಸವಣ್ಣ ಈ ವಚನದಲ್ಲಿ ಪರ ಹೆಣ್ಣಿಗೆ ಆಸೆ ಪಡುವುದು ಅನೈತಿಕ ಅಪರಾಧ ಎಂಬುದನ್ನು ಒತ್ತಿ ಹೇಳಿ ಶರಣರಿಗೆ ಪರ ಸತಿ ಒಲ್ಲನೆಂಬ ಛಲ ಬೇಕು ಎಂದು ಜನತೆಗೆ ಬೋಧಿಸಿದರು.

ಕೇಳಿರಯ್ಯ ಮಾನವರೆ, ಗಂಡಹೆಂಡಿರ ಮನಸ್ಸು ಒಂದಾಗಿದ್ದರೆ

ದೇವರ ಮುಂದೆ ನಂದಾದೀವಿಗೆಯ ಮುಡಿಸಿದ ಹಾಗೆ

ಗಂಡಹೆಂಡಿರ ಮನಸ್ಸು ಬೇರಾದರೆ

ಗಂಜಳದೊಳಗೆ  ಹಂದಿ ಹೊರಳಾಡಿಸಿ

ಒಂದರ ಮಳೆ ಒಂದು ಬಂದು ಮಾಸಿದ ಹಾಗೆ

ಆ ಭಕ್ತನ ಕಾಯಕವೇ ಕೈಲಾಸ

ಅವನ ಒಡಲೇ ಸೇತುಬಂಧ ರಾಮೇಶ್ವರ

ಅವನ ಶಿರವೇ ಶ್ರೀ ಶೈಲ

ಅಂಬಿಗರ ಚೌಡಯ್ಯನ ಈ ವಚನ ಶರಣರು ಅನುಪಮವಾದ ದಾಂಪತ್ಯ ಜೀವನಕ್ಕೆ ನೀಡಿದ ಮಹತ್ವವನ್ನು ಸಾರುತ್ತದೆ. ಸತಿಪತಿಗಳು ಒಂದಾದ ಭಕ್ತಿ ಶಿವನಿಗೆ ಹಿತವೆಂಬ ಸಂದೇಶ ಈ ವಚನದ ಆಶಯ.

ಹೊನ್ನು ಮಾಯೆ ಎಂಬರು, ಹೊನ್ನು ಮಾಯೆಯಲ್ಲ

ಹೆಣ್ಣು ಮಾಯೆ ಎಂಬರು, ಹೆಣ್ಣು ಮಾಯೆಯಲ್ಲ

ಮಣ್ಣು ಮಾಯೆ ಎಂಬರು, ಮಣ್ಣು ಮಾಯೆಯಲ್ಲ

ಹೊನ್ನು, ಹೆಣ್ಣು, ಮಣ್ಣುಗಳ ಸಂಪಾದನೆ, ಸಂಗ್ರಹಣ, ಭಾಗಗಳು ಮನುಷ್ಯನನ್ನು ದಿಕ್ಕೆದಿಸುತ್ತವೆ ಎಂದು ಹೇಳಲಾಯಿತು. ಆದರೆ ಅಲ್ಲಮಪ್ರಭು ಈ ತಿಳಿವಳಿಕೆಯ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಇವಾವೂ ಮೊಕ್ಷಪೆಕ್ಷೆಯಾದವನಿಗೆ ಕಂಟಕಗಳಾಗಿಲ್ಲ. ಮೋಕ್ಷಾಪೇಕ್ಷಿಯಾದವನ ಮನಸ್ಸು ಕುಲಷಿತವಾಗಿ, ಆಸೆಯಿಂದ ಅವುಗಳತ್ತ ಹರಿದಾಗ ಅವು ಅವನನ್ನು ದಿಕ್ಕುಗೆಡಿಸುತ್ತವೆ.

ಮೊಲೆ ಮೂಡಿ ಬಂದರೆ ಹೆಣ್ಣೆಂಬರು

ಗಡ್ಡ ಮೀಸೆ ಬಂದರೆ ಗಂಡೆಂಬರು

ನಡುವೆ ಸುಳಿವಾತ್ಮನು

ಹೆಣ್ಣು ಅಲ್ಲ, ಗಂಡು ಅಲ್ಲ ಕಾಣ ರಾಮನಾಥ

ಗಂಡುಹೆಣ್ಣಿನ ನಡುವಿನ ವ್ಯತ್ಯಾಸಗಳು ಕೇವಲ ಭೌತಿಕ ಸ್ವರೂಪಕ್ಕೆ ಸಂಬಂದಿಸಿದ ಸಂಗತಿಗಳು. ಈ ಬಗೆಯ ಬಾಹ್ಯ ಶರೀರಕ್ಕೂ ಆತ್ಮಕ್ಕೂ ಯಾವುದೇ ಸಂಬಂದವಿಲ್ಲ. ಆತ್ಮಕ್ಕೆ ಗಂಡು ಅಥವಾ ಹೆಣ್ಣು ಭೇದವಿಲ್ಲ ಎಂದು ಹೇಳಲಾಗಿದೆ.

ಸ್ವಾತಂತ್ರ್ಯ ಹೋರಾಟ

ಭಾರತ ದೇಶದ ಸ್ವಾತಂತ್ರ್ಯ ಹೋರಾಟ ಒಬ್ಬ ವ್ಯಕ್ತಿಯಿಂದ ನಡೆದಂತಹ ಹೋರಾಟವಲ್ಲ ಅಥವಾ ಒಂದು ಸಮಸ್ಯೆಗಾಗಿ ನಡೆದ ಹೋರಾಟವಲ್ಲ. ನಮ್ಮ  ದೇಶದ ಸ್ವಾತಂತ್ರ್ಯ  ಹೋರಾಟ ಕೇವಲ ರಾಜಕೀಯ ಹೋರಾಟವಾಗಿರದೆ ಅದೊಂದು ಆರ್ಥಿಕ ಮತ್ತು ಸಾಮಾಜಿಕ ಹೋರಾಟವೂ ಆಗಿತ್ತು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರುದ್ಧ ರಾಜಕೀಯ ಅಧಿಕಾರ ನಮ್ಮ ಕೈಗೆ ಬರಬೇಕೆಂದು ಒಂದು ಕಡೆ ಹೋರಾಟ ನಡೆದರೆ, ಮತ್ತೊಂದು ಕಡೆ ಪಾಲೆಗಾರಿ ಪದ್ಧತಿ ಹೋಗಬೇಕು ಎನ್ನುವ ಆರ್ಥಿಕ ಹೋರಾಟವೂ ನಡೆಯಿತು. ಜೊತೆಜೊತೆಯಲ್ಲಿ ಸಾಮಾಜಿಕ ಅನಿಷ್ಟ ಪದ್ದತಿಗಳಾದ ಸತಿ ಸಹಗಮನ ಪದ್ಧತಿ,ವರದಕ್ಷಿಣೆ, ಬಾಲ್ಯವಿವಾಹ , ಅಸ್ಪ್ರುಶ್ಯತೆ ಇತ್ಯಾದಿಗಳ ವಿರುದ್ದ ಸಾಮಾಜಿಕ ಹೋರಾಟವೂ ನಡೆಯಿತು.ಈ ಹೋರಾಟ ಎಲ್ಲಾ ಧರ್ಮದ, ಜಾತಿಯ, ಭಾಷೆಯ ಹಾಗು ವರ್ಗಗಳ ಜನರು ತೊಡಗಿಸಿಕೊಂಡ ಹೋರಾಟವಾಗಿತ್ತು. ವಿಶೇಷವೆಂದರೆ ಈ ಹೋರಾಟದಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಗಿರಿಜನರು ಧುಮುಕಿದ್ದದ್ದು, ಮನೆಯಿಂದ ಹೊರಬರುವ ಸ್ವಾತಂತ್ರ್ಯವಾಗಲಿ, ಸಾಮಾಜಿಕ ಆಗುಹೋಗುಗಳಲ್ಲಿ ಭಾಗವಹಿಸುವ ಅವಕಾಶವಾಗಲಿ ಮಹಿಳೆಯರ ಪಾಲಿಗೆ ಇರಲಾರದ ಸನ್ನಿವೇಶದಲ್ಲಿ ಭಾರತೀಯ ಮಹಿಳೆಯರು ಸ್ವಾತಂತ್ರ್ಯ ಹೋರಾಟದಲ್ಲಿ ಧುಮುಕಿದರು. ಹಣ, ಆಸ್ತಿ, ಅಂತಸ್ತುಗಳು ಮಾತ್ರವಲ್ಲ ಜೀವದ  ಹಂಗನ್ನೂ ಪಣಕ್ಕಿಟ್ಟು ಸೆಣೆಸಾಡಿದ ಧೀರ  ವನಿತೆಯರು ಅದೆಷ್ಟೋ. ಖಾಸಗೀ ಬದುಕು, ಮನೆಮಠಗಳನ್ನು ಬಿಟ್ಟು ತಾಯ್ನಾಡಿನ ಬಂಧಮುಕ್ತಿಗಾಗಿ ಸರ್ವಸ್ವವನ್ನು ಸಮರ್ಪಿಸಿದ ತ್ಯಾಗಜೀವಿಗಲೆಷ್ಟೋ? ಕಾಂಗ್ರೆಸ್ಸಿನ ಹುಟ್ಟು, ಅದರಲ್ಲೂ ಗಾಂಧೀಜಿಯ ಪ್ರವೇಶ ಸ್ವಾತಂತ್ರ್ಯ ಚಳುವಳಿಗೆ ಮಹಿಳೆಯರನ್ನು ಇಳಿಸಿತು. ದಂಡಿ ಸತ್ಯಾಗ್ರಹ ಮಹಿಳೆಯರನ್ನು ಬೃಹತ್ ಪ್ರಮಾಣದಲ್ಲಿ ಹೋರಾಟಕ್ಕೆ  ಇಳಿಯುವಂತೆ ಮಾಡಿತು. ಫುಲೆ  ಹಾಗೂ ಅಂಬೇಡ್ಕರ್ ರ ಪ್ರವೇಶ ಮಹಿಳೆಯರ ಪರ ಗಮನ ಹರಿಸುವಂತಾಯಿತು. ಎಡಪಂಥಿಯ ಹೊರಾತಗಳಾದ ತೆಲಂಗಾಣ ಹೋರಾಟ, ತೇಬಾಗ್ ಹೋರಾಟ, ಪುನ್ನಪ್ರ ವಯಲರ್ ಹೋರಾಟ, ಕಯ್ಯುರು ಹೋರಾಟ ಇತ್ಯಾದಿಗಳು ಮಹಿಳೆಯರ ದೊಡ್ಡ ಪ್ರಮಾಣದ ಪಾಲ್ಗೊಳ್ಳುವಿಕೆಯನ್ನು ಸಾಧ್ಯವಾಗಿಸಿ ಮಹಿಳಾ ಚಳುವಳಿಕೆಗಳ ಬೆಳವಣಿಗೆಗೆ ಪ್ರೇರಕ ಶಕ್ತಿಯನ್ನು ತುಂಬಿದವು. ಮಹಿಳಾಪರ ಸಂಘಟನೆಗಳಾದ ವಿಮೆನ್ಸ್ ಇಂಡಿಯಾ ಅಸೋಸಿಯೇಷನ್, ದಿ ನ್ಯಾಷನಲ್ ಕೌನ್ಸಿಲ್ ಫಾರ್ ವಿಮೆನ್ ಇನ್ ಇಂಡಿಯಾ, ಆಲ್ ಇಂಡಿಯಾ ವಿಮೆನ್ಸ್ ಕಾನ್ಫರೆನ್ಸ್ , ಪರೇಲ್ ಮಹಿಳಾ ಸಂಘ, ಮಹಿಳಾ ಆತ್ಹ್ಮರಕ್ಷಾ ಸಮಿತಿ , ನೇತಾಜಿ  ಸುಭಾಷ್  ಚಂದ್ರ ಬೋಸರ ಜಾನ್ಸಿ ರೆಜಿಮೆಂಟ್ ಇತ್ಯಾದಿಗಳು ಮಹಿಳಾ ಚಳುವಳಿಗೆ ಸಂಘಟಿತ ರೂಪ ಮತ್ತು ತಾತ್ವಿಕತೆಯನ್ನು ಒದಗಿಸಿದವು ಮತ್ತು ಮಹಿಳಾ ಸಮಸ್ಯೆಗಳನ್ನು ಸ್ವಾತಂತ್ರ್ಯ ಹೋರಾಟದ ಮುಂಚೂಣಿಗೆ ತಂದವು. ಸಮಾಜ ಸುಧರಕರಾದ ರಾಜಾರಾಂ ಮೋಹನ್ರಾಯ್ , ಈಶ್ವರ ಚಂದ್ರ ವಿದ್ಯಾಸಾಗರ್, ಎಂ,ಜಿ, ರಾನಡೆ, ದಯಾನಂದ ಸರಸ್ವತಿ ವಿವೇಕಾನಂದ, ಜ್ಯೋತಿರಾವ್ ಫುಲೆ, ಮಹಾತ್ಮ ಗಾಂಧಿ, ಅಂಬೇಡ್ಕರ್, ಇ.ವಿ.ರಾಮಸ್ವಾಮಿ ನಾಯಕರ (ಪೆರಿಯಾರ್) ಇನ್ನೂ ಅನೇಕರು ಮಹಿಳಾ ಸ್ಥಿತಿಗತಿಗಳ ಬಗ್ಗೆ ಧ್ವನಿಯನ್ನು ಎತ್ತಿದ್ದರು ಹಾಗೂ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.ಕಿತ್ತೂರಿನ ರಾಣಿ ಚೆನ್ನಮ್ಮ ಮತ್ತು ಜಾನ್ಸಿ ರಾಣಿ ಲಕ್ಷ್ಮಿಬಾಯಿ ಬ್ರಿಟಿಷರ ವಿರುದ್ಧ ಹೋರಾಡಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ವೀರ ಮಹಿಳೆಯರು.

ಮಹಿಳಾಪರ  ಹೋರಾಟಗಾರರಾದ  ಅನ್ನಿಬೇಸೆಂಟ್, ನಿವೇದಿತಾ,ಸರೋಜಿನಿ  ನಾಯ್ಡು, ಕಮಲಾದೇವಿ ಚಟ್ಟೋಪಾಧ್ಯಾಯ, ತಾರಾದೇವಿ ಸಿಂಧೆ, ವಿಜಯಲಕ್ಷ್ಮಿ ಪಂಡಿತ್, ವಿಮಲ ರಣದಿವೆ, ಅಹಲ್ಯ ರಂಗ್ಣೆಕರ್, ಲಕ್ಷ್ಮಿ ಸೆಹಗಲ್ರಂತಹ ವೀರ ವನಿತೆಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದರು. ೧೯೨೮ ರಲ್ಲಿ ನಡೆದ ಬಾರ್ಡೋಲಿ ಸತ್ಯಾಗ್ರಹದಲ್ಲಿ ಪುರುಷರಿಗಿಂತ ಮಹಿಳೆಯರೇ ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು.ಸತ್ಯಾಗ್ರಹದ ಸಭೆಯನ್ನು ಉದ್ದೇಶಿಸಿ ಸರದಾರ್ ಪಟೇಲರು,'ಸ್ವಾತಂತ್ರ್ಯದ ಗುರಿ ಸಾಧನೆಗೆ ತನ್ನ ಪ್ರಾಮಾಣಿಕತೆ, ಸರಳತೆ, ಚಿಂತನೆ, ನಿಖರತೆಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸಮರ್ಥರು'. ಎಂದರು. ೧೯೩೦ ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಗಾಂಧೀ ಅಹಮದಾಬಾದಿನ ಸಾಬರಮತಿ ಆಶ್ರಮದಿಂದ ಸೂರತ್ ನ ದಂಡಿಯವರೆಗೆ ನಡೆದ ಜಾಥಾಕ್ಕೆ ಮಹಿಳೆಯರು  ಭಾಗವಹಿಸುವಂತೆ ವಿನಂತಿಸಿದರು. ಜಾಥಾದ ಉದ್ದಕ್ಕೂ ಅಸಂಖ್ಯ ಮಹಿಳೆಯರು ಹಳ್ಳಿಗಳಲ್ಲಿ ನೆರೆದು ಈ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿದರು. ೧೯೩೦ ರಲ್ಲಿ ಬಾಲಗಂಗಾದರ ತಿಲಕ್ ರ ವಾರ್ಷಿಕ ಪುಣ್ಯ ತಿಥಿಯ ಸಂಧರ್ಭದಲ್ಲಿ ಬಾಂಬೆ ನಗರದಲ್ಲಿ ಕಮಲಾದೇವಿ ಚಟ್ಟೊಪಾದ್ಯಯ, ಸರೋಜಿನಿ ನಾಯ್ಡು, ಹನ್ಸ್ ಮೆಹತಾ, ಮನಿಬೆನ್ ಮುಂತಾದವರು 'ದೇಶ ಸೇವಿಕಾ ಸಂಘ' ಎಂಬ ಸಂಘಟನೆ ಪ್ರಾರಂಭಿಸಿ ಸರ್ಕಾರಿ ಕಛೇರಿಗಳ ಮುಂದೆ ಚಳುವಳಿ ನಡೆಸಲು ಸಂಘದ ಸದಸ್ಯರಿಗೆ ತರಬ್ತಿ ನೀಡಿದರು. ಅಸಹಕಾರ ಮತ್ತು ಕರ ನಿರಾಕರಣೆ ಚಳುವಳಿಯಲ್ಲಿ ಅಸಂಖ್ಯಾತ ಮಹಿಳೆಯರು ಧುಮುಕಿದರು. ವಿದೇಶಿ ಬಟ್ಟೆಗಳನ್ನು ಮತ್ತು ವಿದೇಶಿ ಮದ್ಯವನ್ನು ಮಾರುವ ಅಂಗಡಿಗಳನ್ನು ಮುಚ್ಚಿಸಿದರು. ೧೯೪೨ರಲ್ಲಿ ಪ್ರಾರಂಭವಾದ 'ಕ್ವಿಟ್ ಇಂಡಿಯಾ ' ಚಳುವಳಿಯಲ್ಲಿ ಅರುಣಾ ಆಸಫ್ ಅಲಿಯವರ ಪಾತ್ರ ಬಹುಮುಖ್ಯವಾದದ್ದು. ಕಾಂಗ್ರೆಸ್ಸ್ ಪಕ್ಷ ಸ್ಥಾಪಿಸಿದ್ದ ರೇಡಿಯೋ ಪ್ರಸಾರದ ಹೊಣೆ ಹೊತ್ತ ಉಷಾ ಮೆಹತಾರವರು ನಾಲ್ಕು ವರ್ಷಗಳ ಕಠಿಣ ಶಿಕ್ಷೆಗೆ ಗುರಿಯಾದರು. ರಜಿಯಾ ಸುಲ್ತಾನ, ಲೇಡಿ ಸಾರತ್ ಜುಲೇಕ ಬೇಗಮ್, ನಿಶಾ ಬೇಗಂ, ಜುಬೇದ ದಾವುದಿ ಹಾಗೂ ಇನ್ನೂ ಅನೇಕ ಮುಸ್ಲಿಂ ಮಹಿಳೆಯರು ವಿವಿಧ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ.

ಬ್ರಿಟಿಷರು ತಂದ ಮಹಿಳಾ ಪರ ಕಾನೂನುಗಳು

ಈಗಾಗಲೇ ಹೇಳಿದಂತೆ ಭಾರತದ ರಾಷ್ಟ್ರೀಯ ಚಳುವಳಿ ಕೇವಲ ರಾಜಕೀಯ ಚಳುವಳಿಯಾಗಿರದೆ ಅದೊಂದು ಸಾಮಾಜಿಕ ಚಳುವಳಿಯೂ ಆಗಿತ್ತು. ಮಹಿಳೆಯರ ಮೇಲಿನ ದೌರ್ಜನ್ಯ, ಕ್ರೌರ್ಯ, ಹಿಂಸೆ ಎಲ್ಲ ರೀತಿಯ ಅಸಮಾನತೆಯ ವಿರುದ್ದ ಅನೇಕ ಮಹನೀಯರು ಮತ್ತು ಸಂಘ ಸಂಸ್ಥೆಗಳು ಧ್ವನಿ ಎತ್ತಿ ಹೋರಾಟ ನಡೆಸಿದ್ದರ ಪರಿಣಾಮವಾಗಿ ಮಹಿಳೆಯರ ಬದುಕಿನ ಬೆಳಕಿನ ಸೂರ್ಯ ಮೋದಿ ಬಂತು. ಬ್ರಿಟಿಷ್ ಸರ್ಕಾರ ಈ ಹೋರಾಟಗಳ ಒತ್ತಡಕ್ಕೆ ಮಣಿದು ಹೊಸ ಕಾನೂನುಗಳನ್ನು ರಚಿಸಿತು. ಅವುಗಳಲ್ಲಿ ಪ್ರಮುಖವಾದವೆಂದರೆ;
 1. ಬಾಲೆಯರ ಬಲಿ ನಿಷೇಧ ಕಾಯಿದೆ.
 2. ಬೆಂಗಾಲ್ ಸತಿ ಪದ್ದತಿ ಸುಧಾರಣಾ ಕಾಯ್ದೆ ೧೮೨೯.
 3. ಹಿಂದೂ ವಿಧವೆಯರ ಮರುಮದುವೆ ಕಾಯ್ದೆ ೧೮೫೬.
 4. ಹಿಂದೂ ಮಹಿಳಾ ಆಸ್ತಿಯ ಹಕ್ಕು ಕಾಯ್ದೆ ೧೯೩೭.
 5. ಬಾಲ್ಯ ವಿವಾಹ ನಿಷೇಧ ಕಾಯ್ದೆ.
 6. ವಿವಾಹ ವಿಚ್ಹೆಧನ ಕಾಯ್ದೆ ೧೮೬೯.
 7. ಭಾರತೀಯ ವಾರಸುದಾರಿಕೆ ಕಾಯ್ದೆ ೧೯೩೬.
 8. ವರದಕ್ಷಿಣೆ ನಿಷೇಧ ಕಾಯ್ದೆ.
 9. ದೇವದಾಸಿ ಪದ್ಧತಿ ನಿಷೇಧ ಕಾಯ್ದೆ.
 10. ಮಹಿಳಾ ಜೇವನಾಂಶದ ಹಕ್ಕು ಕಾಯ್ದೆ.
 11. ಆನಂದ ವಿವಾಹ ಹಕ್ಕು ಕಾಯ್ದೆ ೧೯೦೯.
 12. ಮುಸ್ಲಿಂ ಮದುವೆ ವಿಚ್ಚ್ಧನ ಕಾಯ್ದೆ ೧೯೩೯.
 13. ಪಾರಸಿ ಮದುವೆ ಮತ್ತು ವಿಚ್ಹೇಧನ ಕಾಯ್ದೆ ೧೯೩೭.
 14. ವಿಶೇಷ ಮದುವೆ ಕಾಯ್ದೆ  ೧೮೭೨.
 15. ಆರ್ಯ ಮದುವೆ ಊರ್ಜಿತ ಕಾಯ್ದೆ ೧೯೩೭.
 16. ಭಾರತೀಯ ಕ್ರೈಸ್ತ ಮದುವೆ ಕಾಯ್ದೆ ೧೮೭೨
 17. ಮದುವೆ ಊರ್ಜಿತ ಕಾಯ್ದೆ ೧೮೯೨.
 18. ಭಾರತೀಯ ಪೀನಲ್ ಕೋಡ್ ೧೮೬೦.
 19. ಕ್ರಿಮಿನಲ್ ಪ್ರೋಸಿಜರ್ ಕೋಡ್.
 20. ಮಹಿಳಾ ಅಸಮಾನತೆ.

 

ಮೂಲ: ಸೈನ್ಸ್ ಫಾರ್ ಸೋಶಿಯಲ್ ಚೇಂಜ್.

 © 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate