অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವೈಜ್ಞಾನಿಕ ಮನೋವೃತ್ತಿ

ಭಾರತದ ಜನಸಂಖ್ಯೆಯಲ್ಲಿ ಶೇ.೩೯ ಜನ ಮಕ್ಕಳಿದ್ದಾರೆ. ಎಂದರೆ ಸುಮಾರು ೧೨೮ ಕೋಟಿ ಜನಸಂಖ್ಯೆಯಲ್ಲಿ ಮಕ್ಕಳ ಸಂಖ್ಯೆ ಐವತ್ತು ಕೋಟಿ. ಇವರಲ್ಲಿ ನೂರಕ್ಕೆ ೭೩ ಮಕ್ಕಳು ಗ್ರಾಮಗಳಲ್ಲಿ ವಾಸಮಾಡುತ್ತಾರೆ. ಮಕ್ಕಳಿಗೆ ಹಲವು ಹಕ್ಕುಗಳನ್ನು ನೀಡಲಾಗಿದೆ. ಯು.ಎನ್. ಸಂಸ್ಥೆಯು ಅಂತರ ರಾಷ್ಟ್ರೀಯ ಮಟ್ಟದಲ್ಲಿ ನಿರೂಪಿಸಿದ ಮಕ್ಕಳ ಹಕ್ಕುಗಳನ್ನು ಭಾರತವೂ ಅಂಗೀಕಾ ಮಾಡಿ, ಅದನ್ನು ಅನುಷ್ಥಾನ ಮಾಡುವ ಸಲುವಾಗಿ ಅನೇಕ ಇಲಾಖೆಗಳು, ಮಂಡಳಿ, ಸಮಿತಿಗಳು, ಆಯೋಗಗಳನ್ನು ರಚಿಸಲಾಗಿದೆ. ಇಲ್ಲಿ ಅನಾಯಾಸ ಅಡಗಿರುವ ಒಂದು ವಿಪರ್ಯಾಸವೆಂದರೆ, ಮಹಿಳೆಯರು, ಕಾರ್ಮಿಕರು, ವಿದ್ಯಾರ್ಥಿಗಳು, ವೈದ್ಯರು ಮುಂತಾದವರು ತಮ್ಮ ತಮ್ಮ ಹಕ್ಕುಗಳಿಗಾಗಿ ತಾವೇ ಸಮೂಹಗಳನ್ನು ಕಟ್ಟಿಕೊಂಡು ಹೋರಾಡುತ್ತಾರೆ: ಆದರೆ ಮಕ್ಕಳು ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ದೊಡ್ಡವರ ಮೇಲೆ ಅವಲಂಬಿಸಬೇಕಾಗುತ್ತದೆ; ಕುಟುಂಬ, ಸಮುದಾಯ, ಸರಕಾರ, ಸಮಾಜದ ಮಟ್ಟದಲ್ಲಿ ದೊಡ್ಡವರು ಮಾತು ಸಂಸ್ಥೆಗಳು ಮಕ್ಕಳಿಗೆ ಅವರ ಹಕ್ಕುಗಳನ್ನು ಒದಗಿಸಿದರೆ ಉಂಟು ಇಲ್ಲವಾದರೆ ಇಲ್ಲ. ನಾವಿಲ್ಲಿ ಮಕ್ಕಳು ಭಾರತದ ಉತ್ತಮ ನಾಗರೀಕರಾಗಿ ಬೆಳೆಯುವ ಹಕ್ಕಿನ ಕುರಿಉ ಮಾತ್ರ ವಿಚಾರ ಮಾಡುತ್ತಿದ್ದೇವೆ.

ಐದು ವರ್ಷದ ಒಳಗೆ

ಮನೋ ವಿಜ್ಞಾನದ ಪ್ರಕಾರ ಒಬ್ಬ ವ್ಯಕ್ತಿ ಮುಂದೆ ಬೆಳೆದು ಹೇಗೆ ಆಗುತ್ತಾರೆ ಎನ್ನುವುದರ ಬೀಜ ಸ್ವರೂಪ ಮಗುವಿನ ಮೊದಲ ಐದು ವರ್ಷದೊಳಗೆ ಖಚಿತವಾಗಿಬಿಟ್ಟಿರುತ್ತದೆ. ಇದರ ನಂತರ ಔಪಚಾರಿಕ ಶಾಲಾ ವ್ಯವಸ್ಥೆಯಲ್ಲಿ ಮಗುವಿಗೆ ಶಿಕ್ಷಣ, ಸಾಮಾಜಿಕ ನೈತಿಕ ಮೌಲ್ಯಗಳು, ಜೀವನ ಕೌಶಲ್ಯಗಳು ಸಿಗುತ್ತವೆ. ಇವೆಲ್ಲದರ ಫಲವಾಗಿ ವ್ಯಕ್ತಿಗಳು ಈ ಸಮಾಜದ ಯೋಗ್ಯ ನಾಗರೀಕರಾಗಿ ಬೆಳೆಯುತ್ತಾರೆ. ಆದ್ದರಿಂದ ಮಕ್ಕಳ ಮೊದಲ ಐದು ಮತ್ತು ನಂತರ (ಮನೆ ಮತ್ತು ಶಾಲೆ)  ಹತ್ತು ವರ್ಷಗಳ ಬೆಳವಣಿಗೆ ಹೇಗಿರಬೇಕು ಎಂಬುದು ಮೊದಲು ಕುಟುಂಬದ, ನಂತರ ಶಾಲೆ, ಸಮುದಾಯದನ್ಥ ಸಂಸ್ಥೆಗಳ ಹೊಣೆಯಾಗಿರುತ್ತದೆ. ಈ ನಿಟ್ಟಿನಲ್ಲಿ ನಾವೇನು ಮಾಡುತ್ತಿದ್ದೇವೆ ಎಂಬುದನ್ನು ಒಮ್ಮೆ ಪರಿಶೀಲಿಸಿಕೊಳ್ಳುವುದು ಒಳ್ಳೆಯದು.

ಪ್ರತಿಯೊಂದನ್ನೂ ಸ್ವತಃ ನೋಡಿ, ಮಾಡಿ ಕಲಿಯುವ, ಎಲ್ಲದಕ್ಕೂ ಪುರಾವೆಯನ್ನು ಕೇಳುವ, ಪ್ರಶ್ನೆ ಕೇಳಿ ತಿಳಿದುಕೊಳ್ಳುವ, ಪ್ರಯೋಗ ಮಾಡಿ ಖಚಿತಪಡಿಸಿಕೊಳ್ಳುವ ವರ್ತನೆಯನ್ನೇ ನಾವು ವೈಜ್ಞಾನಿಕ ಮನೋಭಾವ ಎಂದು ಭಾವಿಸುವುದಾದರೆ, ಮಕ್ಕಳು ಚಿಕ್ಕ ವಯಸ್ಸಿನಲ್ಲಿ ಇಂಥ ವೈಜ್ಞಾನಿಕ ಮನೋವೃತ್ತಿಯನ್ನು ಪ್ರಕೃತಿ ಸಹಜವಾಗಿಯೇ ಹೊಂದಿರುವುದನ್ನು ಕಾಣುತ್ತೇವೆ. ಆದರೆ ಬೆಳೆಯುತ್ತಾ ಕುಟುಂಬದವರು ಎರಡು ಥರದ ಹಾನಿಯನ್ನು ಮಾಡುತ್ತಾರೆ; ಒಂದು, ಮಗುವಿನ ಪ್ರಶ್ನೆ ಕೇಳುವ ಸ್ವಭಾವವನ್ನು ನಿರುತ್ತೇಜಿಸುತ್ತಾರೆ; ತಾನಾಗಿ ತಾರ್ಕಿಕವಾಗಿ ಕಲಿಯುವ ಎಲ್ಲ ಅವಕಾಶಗಳಿಗೆ ನಿಯಂತ್ರಣ ಹೇರುತ್ತಾರೆ; ಎರಡನೆಯದಾಗಿ ತಾವು ಬೆಳೆಸಿಕೊಂಡು ಬಂದಿರುವ ಧಾರ್ಮಿಕ, ಸಾಂಪ್ರದಾಯಿಕ ಮೌಢ್ಯವನ್ನು 'ಸಂಸ್ಕೃತೀಕರಣ' ಎಂಬ ಹೆಸರಿನಲ್ಲಿ ಮಕ್ಕಳ ಮೇಲೆ ಹೇರತೊಡಗುತ್ತಾರೆ.

ಪೋಷಕರ ಈ ಅತಾರ್ಕಿಕ ಮಾತುಗಳಿಂದ ಮೊದ ಮೊದಲು ಗೊಂದಲಕ್ಕೆ ಒಳಗಾಗುವ ಮಕ್ಕಳು, ತಂದೆತಾಯಂದಿರನ್ನು ಓಲೈಸಿಕೊಂಡೇ ಬದುಕಬೇಕಾದ ಅನಿವಾರ್ಯತೆಯಲ್ಲಿ ಅವರು ಕಳಿಸಿದ ಮೌಡ್ಯವನ್ನು ಮೈಗೂಡಿಸಿಕೊಳ್ಳುತ್ತಾ ಹೋಗುತ್ತಾರೆ. ಬಾಲಕಿಯರ ಬೆಳವಣಿಗೆಯ ಮೇಲೆ ಎರಡು ಬಗೆಯ ಮೌಡ್ಯಗಳ ಆಕ್ರಮಣವಾಗುತ್ತದೆ. ಒಂದು, ಎಲ್ಲರಿಗೂ ಸಮಾನವಾದ ಮೂಢಾಚರಣೆಗಳು, ಇನ್ನೊಂದು ಪುರುಷ ಪ್ರಾಧಾನ್ಯದಿಂದ ಒಡಮೂಡಿರುವ ಸಾಂಪ್ರದಾಯಿಕ, ಲಿಂಗ ತಾರತಮ್ಯದ ಮೂಢಾಚರಣೆಗಳು.

ಮಗು ಹುಟ್ಟುವಾಗಲೇ ಯಾವುದೇ ಜಾತಿ /ಧರ್ಮಕ್ಕೆ ಸೇರಿರುವುದಿಲ್ಲ. ಅದು ಕೇವಲ ಗಂಡು ಅಥವಾ ಹೆಣ್ಣು ಮಗುವಾಗಿರುತ್ತದೆ. ಅದೊಂದು ಮನುಷ್ಯ ಜೀವಿ. ಹಾಗೇ ಬಿಟ್ಟಿದ್ದರೆ ಅದು ವಿಶ್ವ ಮಾನವನಾಗಿ ಬೆಳೆಯುತ್ತಿತ್ತು. ಆದರೆ, ಮಗು ಹುಟ್ಟಿದ ಕ್ಷಣದಿಂದಲೇ ನಾವು ಅದಕ್ಕೆ ಒಂದು ಜಾತಿಯನ್ನು / ಉಪ ಜಾತಿಯನ್ನು ಅಂಟಿಸಿ ಬಿಡುತ್ತೇವೆ. ಅನೇಕ ಆಚರಣೆಗಳ ಮೂಲಕ ಮಗು ಒಂದು ನಿರ್ದಿಷ್ಟ ಜಾತಿಗೆ ಸೇರಿದ್ದು ಎನ್ನುವುದನ್ನು ಹೆಚ್ಚು ಹೆಚ್ಚು ಗಟ್ಟಿಯಾಗಿ ಘೋಷಿಸತೊಡಗುತ್ತೇವೆ.

ಹಬ್ಬ, ಈದ್, ಜಾತ್ರೆ, ಉರುಸು, ಹರಕೆ ಅಷ್ಟೇ ಏಕೆ ಮದುವೆ, ಮುಂಜಿಯ ಸಮಯದ ಆಚರಣೆಗಳು ಮಕ್ಕಳಿಗೆ ಅರ್ಥಬದ್ಢವಾಗಿ ತೋರುವುದಿಲ್ಲ. ಆದರೆ ದೊಡ್ಡವರು ಸಿಹಿಯೂಟ, ಹೊಸಬಟ್ಟೆಯ, ಸಂಭ್ರಮ ಸಡಗರದ ಆಮಿಷ ಒಡ್ಡಿ ಅವರಿಗೆ ಅರ್ಥವೇ ಆಗದ ರೂಡಿಗತ ಆಚರಣೆಗಳನ್ನು ಮಕ್ಕಳ ಮೇಲೆ ಹೇರುತ್ತಾರೆ. ತರ್ಕ ಬದ್ದ ಅನಿಸದಿದ್ದರೂ ದೊಡ್ಡವರು ಹೇಳಿದ ಕಾರಣಕ್ಕೆ ಅನುಸರಿಸುವ ಅಭ್ಯಾಸ ಅಲ್ಲಿಂದಲೇ ಆಗಿಬಿಡುತ್ತದೆ. ಪ್ರಶ್ನೆಗೆ  ಬೆಲೆಯೇ ಇರುವುದಿಲ್ಲ. ಕ್ರಮೇಣ ಮಕ್ಕಳೂ ದೊಡ್ಡವರಂತೆ ಮೂಢರಾಗುತ್ತಾರೆ.

ದೊಡ್ಡವರು ಮಕ್ಕಳನ್ನು ಮಕ್ಕಳ ಹಾಗೆ ಬೆಳೆಯಲು ಬಿಡಬೇಕು; ಸಣ್ಣ ಆಕಾರದ ಮುದುಕರನ್ನಾಗಿ ಮಾಡಬಾರದು. ಅವರು ಮುಂದೆ ಶಾಲೆ, ಕಾಲೇಜುಗಳಲ್ಲಿ ಕಲಿತು, ಉದ್ಯೋಗ, ವೃತ್ತಿಯಲ್ಲಿ ಯಶಸ್ವಿಯಾಗಬೇಕು ಎಂದರೆ ಅವರಲ್ಲಿ ಈಗಾಗಲೇ ಇರುವ ವೈಜ್ಞಾನಿಕ, ತಾರ್ಕಿಕ ಸಹಜ ಪ್ರವೃತ್ತಿ ಇನ್ನೂ ಗಟ್ಟಿಯಾಗಿ ಬೆಳೆಯಲು ಸಹಾಯ ಮಾಡಬೇಕು. ತಮ್ಮ ಮೂಢಾಚರಣೆಯನ್ನು ಮಕ್ಕಳ ಮೇಲೆ ಹೇರಬಾರದು. ಜಾತಿ, ಮತಗಳ ಕುರುಹು /ಉಡುಪುತೊಡಪುಗಳನ್ನು ಮಕ್ಕಳಿಗೆ ಹಾಕಬಾರದು. ಅವರು ಹೊರಗೆ ಮುಕ್ತ ಸಮಾಜದಲ್ಲಿ ಮುಜುಗರವಿಲ್ಲದೆ ಬದುಕಬೇಕು ಎಂದರೆ ಇಂಥ ಯಾವುದೇ ಸೀಮಿತವಾದ ವೇಷಭೂಷಣಗಳಿಗೆ, ಅಲಂಕಾರಕ್ಕೆ ಅಂಟಿಕೊಳ್ಳಬಾರದು. ಇಷ್ಟೆಲ್ಲಾ ಆದರೂ ಮಕ್ಕಳು ದೊಡ್ಡವರಾದ ಮೇಲೆ ಧರ್ಮ, ಆಧ್ಯಾತ್ಮ ಇತ್ಯಾದಿಗಳನ್ನು ನಿಮಗಿಂತಲೂ ಚೆನ್ನಾಗಿ ಅಭ್ಯಾಸ ಮಾಡುತ್ತಾರೆ; ಅವಸರದ ಅರೆಬೆಂದ ಅಡುಗೆ ಬೇಡ.

ವೈಜ್ಞಾನಿಕ ಮನೋವೃತ್ತಿ ಮಕ್ಕಳ ಹಕ್ಕು

ಶಾಲೆಗೆ ಬರುವ ಹೊತ್ತಿಗೆ ಮಗುವಿನ ಮೂಲಭೂತ ವ್ಯಕ್ತಿತ್ವಕ್ಕೆ  ಬುನಾದಿ ಬಿದ್ದಿರುತ್ತದೆ. ಖೇದದ ಸಂಗತಿಯೆಂದರೆ ಮಕ್ಕಳು ತಮ್ಮ ತಮ್ಮ ಮತಕ್ಕೆ ಸೇರಿಸಿದವರು ಎಂಬ ಭಾವನೆಯೊಂದಿಗೆ ಶಾಲೆಗೆ ಬರುತ್ತಾರೆ. ತಂದೆ ತಾಯಂದಿರ ಮೌಡ್ಯದ ಬುತ್ತಿಯನ್ನು ಕಟ್ಟಿಕೊಂಡೇ ಬಂದಿರುತ್ತಾರೆ. ತಾವು ಇತರ ಮಕ್ಕಳಿಗಿಂತ ಬೇರೆ ಎನ್ನುವ ಭಾವನೆ ಅವರಲ್ಲಿರುತ್ತದೆ. ಮಕ್ಕಳನ್ನು ಈ ವಿಪರೀತದಿಂದ ವಿಮೋಚನೆಗೊಳಿಸಿ, ಎಲ್ಲರನ್ನು ಮತ್ತೊಮ್ಮೆ ಸಮಾನಗೊಳಿಸಿ, ಧರ್ಮ, ಜಾತಿ, ಲಿಂಗ ಯಾವುದೇ ಆಧಾರದ ಮೇಲೆ ತಾರತಮ್ಯವಿಲ್ಲದಂತೆ ಬೆಳೆಸುವುದು; ಸ್ವತಃ ಅತ್ಯಂತ ಸಮರ್ಥ ವ್ಯಕ್ತಿಯನ್ನಾಗಿ ಮಾಡುವುದರ ಜೊತೆಯಲ್ಲಿ ಭಾರತದ ಅಮೂಲ್ಯ ನಾಗರೀಕರನ್ನಾಗಿ ಸಜ್ಜುಗೊಳಿಸುವ ಕೆಲಸವನ್ನು ಮಾಡಬೇಕಾಗುತ್ತದೆ. ಶಾಲೆಯಂಥ ಸಾಮಾಜಿಕ ಸಂಸ್ಥೆಯ ಕೆಲಸವೇ ಇದು. ಆದರೆ, ವಿಪರ್ಯಾಸದ ಸಂಗತಿಯೆಂದರೆ ಇಂಥ ಮಾನವೀಯ ಕರ್ತವ್ಯವನ್ನು ಗಾಳಿಗೆ ತೂರಿ ನಮ್ಮ ಶಾಲೆಗಳು ಶುಷ್ಕ ಪಠ್ಯಕ್ರಮದ ಗಿಳಿಪಾಠದಲ್ಲಿಯೇ ಸಾರ್ಥಕತೆಯನ್ನು ಕಾಣುತ್ತಿವೆ. ಸಾಲದ್ದಕ್ಕೆ ಜಾತಿ, ಮತ, ಸಾಂಪ್ರದಾಯಿಕ ಮೌಡ್ಯಕ್ಕೆ ನೀರೆರೆದು ಪೋಷಿಸುತ್ತೇವೆ.

ನಾವೆಲ್ಲರೂ ಅಂಗೀಕರಿಸಿರುವ ಭಾರತ ಸಂವಿಧಾನದ ಪ್ರಕಾರ ಭಾರತ 'ಸಾರ್ವಭೌಮ, ಸಮಾಜವಾದಿ, ಜಾತ್ಯಾತೀತ, ಪ್ರಜಾಸತ್ತಾತ್ಮಕ ಗಣತಂತ್ರ'ವಾಗಿದೆ. ಮಕ್ಕಳು ಶಾಲೆಗಳಲ್ಲಿ ಭಾರತದ ಉತ್ತಮ ನಾಗರೀಕರಾಗಿ ವಿಕಾಸ ಹೊಂದಬೇಕು ಎಂದೆವು; ಅದಕ್ಕಾಗಿ ನಮ್ಮ ದೇಶದ ಮೇಲಿನ ಗುಣಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಬೆಳೆಸಿಕೊಳ್ಳಬೇಕು. ಜೊತೆಗೆ, ಭಾರತ ಸಂವಿಧಾನದ ಭಾಗ ೪ ಎ, ಪರಿಚ್ಹೇದ ೫೧ ಎ -ರಲ್ಲಿ ಉಲ್ಲೇಖಿಸಲಾಗಿರುವ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕಲ್ಲವೇ? ಅವುಗಳಲ್ಲಿ ಇಲ್ಲಿ ಸಂಬದ್ದವಾದ ಎರಡನ್ನು ಮಾತ್ರ ಹೇಳುವುದಾದರೆ: (ಇ) ಧರ್ಮ, ಭಾಷೆ ಮತ್ತು ಪ್ರಾದೇಶಿಕತೆ ಅಥವಾ ಸ್ಥಳೀಯ ವಿಭಿನ್ನತೆಗಳನ್ನು ಮೀರಿ ಎಲ್ಲ ಜನರ ನಡುವೆ ಸೌಹಾರ್ಧ ಮತ್ತು ಸೋದರತ್ವವನ್ನು ಬೆಳೆಸುವುದು: ಮಹಿಳೆಯರ ಗೌರವಕ್ಕೆ ಕುಂದು ತರುವಂಥ ಪರಿಪಾಠದಿಂದ ದೂರವಿರುವುದು: (ಎಚ್) ವೈಜ್ಞಾನಿಕ ಮನೋವೃತ್ತಿ, ಮಾನವ ಹಿತಾಸಕ್ತಿ ಮತ್ತು ಅನ್ವೇಷಣೆ ಮತ್ತು ಸುಧಾರಣೆಯ ಮನೋಭಾವವನ್ನು ಬೆಳೆಸಿಕೊಳ್ಳುವುದು. ಇವು ನಮ್ಮ ಮೂಲಭೂತ  ಕರ್ತವ್ಯಗಳಾಗಿವೆ.

ಗಮನಿಸಿ ನೋಡಿದಾಗ ಇಲ್ಲಿ ಉಲ್ಲೇಖಿಸಲಾಗಿರುವ ಗುಣಗಳು ಮಕ್ಕಳಲ್ಲಿ ಸಹಜವಾಗಿಯೇ ಇರುತ್ತವೆ; ಇದನ್ನೇ ಅವರು ಕರ್ತವ್ಯವಾಗಿ ಅಲ್ಲ; ನೈಜವಾದ ಸ್ವಭಾವವಾಗಿ ಅನುಸರಿಸುವುದು. ಆದರೆ ದೊಡ್ಡವರು ಮೊದಲು ಇಂಥ ಮಾನವೀಯ ಸಹಜ ಗುಣಗಳನ್ನು ನಾಶಪಡಿಸಿ, ಅವರಲ್ಲಿ ಜಾತಿ, ಮತಗಳ, ಅಲೌಕಿಕ, ಅತಾರ್ಕಿಕ ನಂಬಿಕೆ, ಆಚರಣೆಗಳ ಮೌಡ್ಯವನ್ನು ತುಂಬುತ್ತೇವೆ; ಉತ್ತಮ ಭಾರತೀಯ ನಾಗರೀಕರನ್ನಾಗಿ ಮಾಡಲು ಮತ್ತೆ ಅವುಗಳನ್ನು ಹೋಗಲಾಡಿಸಲು ನೋಡುತ್ತೇವೆ. ಇದು ನಾವು ದೊಡ್ಡವರು ವೈಯುಕ್ತಿಕವಾಗಿ ಮತ್ತು ಸಾಂಸ್ಥಿಕವಾಗಿ ಮಕ್ಕಳ ಮೇಲೆ ಮಾಡುತ್ತಿರುವ ಅನ್ಯಾಯವಾಗಿದೆ; ದೇಶಕ್ಕೆ ಗೈಯುತ್ತಿರುವ ದ್ರೋಹವಾಗಿದೆ.

ಮಕ್ಕಳಲ್ಲಿ ಮತ್ತು ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳೂ ನಡೆಯಬೇಕಾಗುತ್ತದೆ. ಶಾಲೆಗಳಲ್ಲಿ ಹಲವು ಮಟ್ಟಗಳಲ್ಲಿ ವಿಜ್ಞಾನ ಭಾಷಣ / ಪ್ರಬಂಧ, ನಾಟಕ ಸ್ಪರ್ಧೆಗಳು, ಮಕ್ಕಳೇ ಮಾಡಿದ ಆಟಿಕೆ /ಪ್ರಯೋಗ/ಮಾದರಿಗಳು; ವಿಜ್ಞಾನ ವೀಡಿಯೋ, ನಾಟಕಗಳ ಪ್ರದರ್ಶನ ನಡೆಯುತ್ತಲೇ ಇರಬೇಕು. ಜೊತೆಗೆ ನಂಬಿಕೆ, ಮೂಡನಂಬಿಕೆ ಎಂದರೇನು; ಅವುಗಳಿಂದ ಆಗುವ ಹಾನಿಗಳೇನು, ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವುದು ಹೇಗೆ ಎನ್ನುವುದರ ಕಡೆಗೂ ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕು.

ಭಾರತದ ಮಾದರಿ ನಾಗರೀಕನಾ/ಳಾಗಿ ಮಗು ಬೆಳೆಯಬೇಕು ಎಂದರೆ ವೈಜ್ಞಾನಿಕ ಮನೋವೃತ್ತಿಯನ್ನು ಬೆಳೆಸಿಕೊಳ್ಳುವುದು ಪ್ರತಿಯೊಬ್ಬ ಮಗುವಿನ ಹಕ್ಕಾಗಿರುತ್ತದೆ; ಇದಕ್ಕೆ ಪೂರಕ ಪರಿಸರ, ಸಂಪನ್ಮೂಲಗಳನ್ನು ಒದಗಿಸಿಕೊಡುವುದು ದೊಡ್ಡವರ, ಶೈಕ್ಷಣಿಕ ಮತ್ತು ಸಾಮುದಾಯಿಕ ಸಂಸ್ಥೆಗಳ ಕರ್ತವ್ಯವಾಗಿರುತ್ತದೆ.

ಪ್ರತಿಯೊಂದು ಮಗುವೂ ಹುಟ್ಟುತ್ತಲೇ ವಿಶ್ವಮಾನವ, ಬೆಳೆಯುತ್ತಾ ನಾವು ಅದನ್ನು ಅಲ್ಪ ಮಾನವನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ವಿಶ್ವ ಮಾನವನನ್ನಾಗಿ ಮಾಡುವುದು ಶಿಕ್ಷಣದ ಕರ್ತವ್ಯವಾಗಬೇಕು.- ಕುವೆಂಪು.

ಮೂಲ:ಸೈನ್ಸ್ ಫಾರ್ ಸೋಶಿಯಲ್ ಚೇಂಜ್

ಕೊನೆಯ ಮಾರ್ಪಾಟು : 5/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate