ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಿಜ್ಞಾನ ಮತ್ತು ತಂತ್ರಜ್ಞಾನ

ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವೆನಿಸಿದೆ. ಆಹಾರ, ಗಾಳಿ, ನೀರಿನಷ್ಟೇ ಇಂದು ಜ್ಞಾನ, ಮಾಹಿತಿ ಇತ್ಯಾದಿಗಳು ಅತ್ಯಂತ ಅವಶ್ಯಕವೆನಿಸಿವೆ.

ಆಧುನಿಕ ಪ್ರಪಂಚವು ಇಂದು ವಿಜ್ಞಾನ ಮತ್ತು ತಂತ್ರಜ್ಞಾನಗಳ ಯುಗವೆನಿಸಿದೆ. ಆಹಾರ, ಗಾಳಿ, ನೀರಿನಷ್ಟೇ ಇಂದು ಜ್ಞಾನ, ಮಾಹಿತಿ ಇತ್ಯಾದಿಗಳು ಅತ್ಯಂತ ಅವಶ್ಯಕವೆನಿಸಿವೆ. ಇವೆಲ್ಲವೂ ಒಂದೇ  ವಿಷಯವನ್ನು ಪರಸ್ಪರ ಅವಲಂಬಿಸಿವೆ. ವೈಜ್ಞಾನಿಕ, ತಂತ್ರಜ್ಞಾನವೂ ಅದ್ಭುತ ಪ್ರಗತಿ ಸಾಧಿಸಿ ಮನುಷ್ಯನನ್ನು ಭಗವಂತನೇ  ಅಚ್ಚರಿಪಡುವಷ್ಟು ಶಕ್ತಿಶಾಲಿಯಾಗುವಂತೆ  ಮಾಡಿದೆ ಇಂದು ಮಾನವ ಕಾಲದೊಡನೆ ಸ್ಪರ್ಧಿಸುತ್ತಾ ಅಂತರೀಕ್ಷವನ್ನೇ ಜಯಿಸಿದ್ದಾನೆ. ಇದುವರೆಗೆ ಅಜ್ಞಾತವಾಗಿದ್ದ ಎಷ್ಟೋ ವಿಷಯಗಳನ್ನು ಮತ್ತು ಪ್ರಕೃತಿಯಲ್ಲಿ ಅಡಗಿರಬಹುದಾದ ಸಮಸ್ತ ರಹಸ್ಯಗಳನ್ನು ಅನಾವರಣಗೊಳಿಸಲು ಶಕ್ತನಾಗಿದ್ದಾನೆ. ಒಂದೇ ಮಾತಿನಲ್ಲಿ ಹೇಳಬಹುದಾದರೆ ಮಾನವನಿಗೆ ಅಗೋಚರವಾದ ಅಥವಾ ಅವನ ಅರಿವಿಗೆ ಬಾರದಿರುವ ಯಾವ ಕ್ಷೇತ್ರವೂ ಉಳಿದಿಲ್ಲ.

ಭಾರತದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನಕ್ಕೆ ಸಂಬಂದಿಸಿದ ಸಂಶೋದನೆ ಪ್ರಾಚೀನ ಕಾಲದಿಂದಲೂ ಪರಿಚಿತವಾದ ಕ್ಷೇತ್ರಗಳೇ ಆಗಿದೆ.ಪಾಶ್ಚಾತ್ಯರ  ಸಂಪರ್ಕದಿಂದ ಅವುಗಳ ಹೆಸರು, ವಿಮರ್ಶೆ ಇತ್ಯಾದಿಗಳು ಬೇರೆ ಬೇರೆ ದೃಷ್ಟಿಕೋನಗಳಲ್ಲಿ ಬೆಳಕಿಗೆ ಬಂದಿರಬಹುದು. ಆದರೆ ಆ ದಿಸೆಯಲ್ಲಿ ಪ್ರಾಚೀನ ಭಾರತದ ಋಷಿ ಮುನಿಗಳ ಕಾಲದಿಂದಲೂ, ಅಗ್ರಸ್ಥಾನದಲ್ಲಿದೆ.ಎಂದು ಹೇಳಬಹುದು. ಆ ಕೀರ್ತಿ ಈಗಲೂ ಕೆಲವು ಕ್ಷೇತ್ರಗಳಲ್ಲಿ ನಮ್ಮದಾಗಿಯೇ ಉಳಿದುಕೊಂಡಿದೆ.

ಸ್ವಾತಂತ್ರ್ಯ ಬಂದ ಮೇಲೆ  ಈ ಕ್ಷೇತ್ರಗಳಲ್ಲಿ ಅನೇಕ ಸಂಶೋದನಾ ಕೇಂದ್ರಗಳನ್ನು ಹಾಗೂ ಆ ವಿಷಯಗಳಲ್ಲಿ ತಂತ್ರಜ್ಞಾನವನ್ನು ಕೊಡುವ ಶಿಕ್ಷಣ ಕೇಂದ್ರಗಳನ್ನೂ ನಾವು ಸ್ಥಾಪಿಸಿದ್ದೇವೆ. ಇದರ ಪರಿಣಾಮವಾಗಿ ಯಾವುದೇ ಭಾರತೀಯನು ಹೆಮ್ಮೆ ಪಡುವಷ್ಟರ ಹಾಗೂ ಆತ್ಮ ಶಕ್ತಿ ಹೊಂದುವಷ್ಟರ ಮಟ್ಟಿಗೆ ಈ ಕ್ಷೇತ್ರ ಅಭಿವೃದ್ದಿ ಸಾಧಿಸಿದೆ. ಆದರೂ ಈ ಕ್ಷೇತ್ರದಲ್ಲಿ ಸಾಧಿಸಬೇಕಾದುದು ಇನ್ನೂ ಇದೆ. ವೈಜ್ಞಾನಿಕ ಸಂಶೋದನೆಗಳು ಅನೇಕ ಕ್ಷೇತ್ರದಲ್ಲಿ ಅಂದರೆ ಶುದ್ಧ ವಿಜ್ಞಾನ, ತಂತ್ರಜ್ಞಾನ, ವ್ಯವಸಾಯ, ಪರಮಾನು ಸಂಶೋಧನೆ, ಬಾಹ್ಯಾಕಾಶ ಸಂಶೋಧನೆ ಹಾಗೂ ರಕ್ಷಣಾ ಕ್ಷೇತ್ರಗಳಲ್ಲಿ ನಾವು ಅಪಾರವಾದ ಯಶಸ್ಸನ್ನು ಗಳಿಸಿದ್ದೇವೆ. ಆದರೂ ನಮ್ಮದು ಅಭಿವೃದ್ದಿಶೀಲ ರಾಷ್ಟ್ರವಾಗಿದೆ ಹೊರತು ಸಂಪೂರ್ಣ ಅಭಿವೃದ್ದಿ ರಾಷ್ಟ್ರವೆನಿಸಿಲ್ಲ. ಆ ದಿಸೆಯಲ್ಲಿ ನಮ್ಮ ಪ್ರಯತ್ನ ಸತತವಾಗಿ ಸಾಗುತ್ತಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ಖಾಸಗಿ ಸಂಸ್ಥೆಗಳು ವೈಜ್ಞಾನಿಕ ಸಂಶೋಧನಾ ಕೇಂದ್ರಗಳನ್ನು ಹೊಂದಿವೆ. ಸುಮಾರು ೨೦೦ ಸಂಶೋಧನಾ ಕೇಂದ್ರಗಳಿವೆ ಎಂದು ಅಂದಾಜು, ಇವೆಲ್ಲವೂ ದೇಶವನ್ನು ಅಭಿವೃದ್ದಿ ಪಥದಲ್ಲಿ ಕೊಂಡೊಯ್ಯಲು ಸಹಕರಿಸುತ್ತಿವೆ. ನಮ್ಮ ದೇಶದ ತಂತ್ರಜ್ಞಾನದ ನಿಲುವು ಹಾಗೂ ತತ್ವಗಳು ಉತ್ತಮ ಯೋಜನೆಗಳ ತಳಹದಿಯಲ್ಲಿ ಸಾಗಿವೆ. ಮೂಲ ಹಾಗೂ ಸ್ವಾಭಾವಿಕ ತಂತ್ರಜ್ಞಾನವನ್ನು ಅಭಿವೃದ್ದಿಪಡಿಸಿ ಯಾವುದೇ ಅಗತ್ಯ ತಂತ್ರಜ್ಞಾನವನ್ನು ಹೊರಗಿನಿಂದ ಪಡೆದರೂ ನಮ್ಮ  ತಂತ್ರಜ್ಞಾನದೊಂದಿಗೆ ಹೊಂದಿಸಿಕೊಳ್ಳುವಷ್ಟು ಸಮರ್ಥವಾಗುವ ರೀತಿಯಲ್ಲಿ ಸಾಗುವುದೇ ನಮ್ಮ ಗುರಿಯಾಗಿದೆ. ಅತ್ಯಂತ ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ನಾವು ಪರಾವಲಂಬಿಗಳಾಗದೆ ದೇಶದ ವೈಜ್ಞಾನಿಕ ತಂತ್ರಜ್ಞಾನದ ಅಗತ್ಯಗಳನ್ನು ಪೂರೈಸುವಷ್ಟೂ ಸಾಮರ್ಥ್ಯ ಪಡೆಯುವುದೇ ನಮ್ಮ ಮುಖ್ಯ ಗುರಿಯಾಗಿದೆ. ಇದರ ಪರಿಣಾಮವಾಗಿ ತಂತ್ರಜ್ಞಾನವೂ ನಮ್ಮ ಮುಖ್ಯ ಉದ್ಯಮವೆನಿಸಿಕೊಂಡು ಆ ಕ್ಷೇತ್ರದಲ್ಲಿ ನಂಬಲರ್ಹವಾದ ಸಂಶೋಧನೆ, ತರಭೇತಿ ಮತ್ತು ಅಭಿವೃದ್ದಿ ಸಾದಿಸುತ್ತಿದ್ದೇವೆ.

ವ್ಯವಸಾಯದ ಕ್ಷೇತ್ರದಲ್ಲಿ ನಮ್ಮ ವೈಜ್ಞಾನಿಕ ಮತ್ತು ತಾಂತ್ರಿಕ ಸಂಶೋಧನೆಗಳ ಪರಿಣಾಮವಾಗಿ ಇಂದು ನಾವು ಆಹಾರ ಧಾನ್ಯಗಳಲ್ಲಿ ಸ್ವಾವಲಂಬಿಗಳೂ ಮತ್ತು ಸ್ವಪರಿಪೂರ್ಣರೂ ಆಗಿರುತ್ತೇವೆ. ಇಂದು ನಾವು ಬರಗಾಲ, ಪ್ರವಾಹದಂತಹ ಪ್ರಕೃತಿ ವಿಕೋಪಗಳ ಸಮಯದಲ್ಲೂ ಕಂಗೆಡದಂತೆ ಅವುಗಳನ್ನು ಎದುರಿಸುವಷ್ಟು ಆಹಾರ ಧಾನ್ಯ ಸಂಗ್ರಹದಲ್ಲಿ ಸಮರ್ಥರಾಗಿದ್ದೇವೆ. ಇದರೊಂದಿಗೆ ನಾವು ಆಹಾರ ಧಾನ್ಯವನ್ನು ರಫ್ತು ಮಾಡುವ ಸ್ಥಿತಿಯಲ್ಲಿದ್ದೇವೆ. ಆಹಾರದೊಂದಿಗೆ ಹಾಲಿನ ಉತ್ಪಾದನೆಯಲ್ಲೂ ಪ್ರಗತಿ ಸಾಧಿಸಿ ಕ್ಷೀರಕ್ರಾಂತಿಯನ್ನೇ ಉಂಟುಮಾದುತ್ತಿದ್ದೇವೆ. ಇದಕ್ಕೆಲ್ಲಾ ಕಾರಣ ನಮ್ಮ ವೈಜ್ಞಾನಿಕ ಸಂಶೋಧನೆ ಮತ್ತು ನಮ್ಮ ರೈತರು ನಮ್ಮ ತಂತ್ರಜ್ಞಾನದಲ್ಲಿತ್ತಿರುವ ನಂಬಿಕೆ ಹಾಗೂ ಅದರ ಸದುಪಯೋಗದಿಂದ ಸಾಧ್ಯವಾಯಿತೆಂದು ತಿಳಿಯಬಹುದು.ಸಕಾಲದಲ್ಲಿ ಉತ್ತಮ ತಳಿಯ ಬೀಜ ಸರಬರಾಜು, ಬೆಳೆಗಳ ಸಂರಕ್ಷಣೆ, ಸಮತೋಲನ ವ್ಯವಸಾಯಕ್ರಮ, ಉತ್ತಮ ನೀರಾವರಿ ವ್ಯವಸ್ತೆಗಳ ಮೂಲಕ ಈ ಸಾಧನೆ ಸಾಧ್ಯವಾಗಿದೆ. ಕೈಗಾರಿಕಾ ಕ್ಷೇತ್ರದಲ್ಲಿಯೇ ಇಂದು ನಾವು ಅತ್ಯಂತ ಮಹತ್ವದ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ನಾವಿಂದು ಪ್ರಪಂಚದ ಮುಖ್ಯ ಕೈಗಾರಿಕಾ ಶಕ್ತಿಕೆಂದ್ರವಾಗಿದ್ದೇವೆ. ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಸಂಸ್ಥೆ  (CSIR)  ತನ್ನ ಸಂಶೋಧನಾ ಕೇಂದ್ರದಿಂದ ಪ್ರಾಯೊಜಿಸಲ್ಪಟ್ಟಿರುವ ಸಂಶೋಧನೆಗಳು ಈ ಬಗೆಯ ಅಭಿವೃದ್ದಿಗೆ ನೆರವಾಗಿವೆ. ಇಂದು ನಾವು ಪ್ರಪಂಚದ ಆರು ಅಭಿವೃದ್ದಿ ರಾಷ್ಟ್ರಗಳೊಂದಿಗೆ ಸೇರಿದ್ದೇವೆ. ಅದರಲ್ಲೂ ಪೂನಾದಲ್ಲಿ ಸ್ಥಾಪಿತವಾಗಿರುವ ಕಂಪ್ಯೂಟರ್ ಸಂಶೋಧನಾ ಕೇಂದ್ರವೂ (ಸೂಪರ್ ಕಂಪ್ಯೂಟರ್ ) ಅಭಿವೃದ್ದಿ ರಾಷ್ಟ್ರದ ಮಾನ್ಯತೆ ಗಳಿಸಿಕೊಳ್ಳಲು ಸಹಾಯ ಮಾಡಿದೆ.

ನಮ್ಮ ರಾಷ್ಟ್ರದಲ್ಲಿ ಪರಮಾಣು ಸಂಶೋಧನಾ ಆಯೋಗವನ್ನು ೧೯೪೮ ರಲ್ಲಿ ಸ್ಥಾಪಿಸಲಾಯಿತು.  ಶಾಂತಿ ಪ್ರಕ್ರಿಯೆಗಳಿಗೆ ಪರಮಾಣುವಿನ ಉಪಯೋಗವೆಂಬ ಉದ್ದೇಶ ಹೊಂದಿ ಅದರ ಸ್ಥಾಪನೆಯಾಯಿತು. ಅಣುಶಕ್ತಿ ಇಲಾಖೆ ಎಂಬ ವಿಭಾಗವನ್ನು ಇದಕ್ಕಾಗಿ ತೆರೆಯಲಾಯಿತು. ಮುಂಬೈ ಬಳಿ ಸ್ಥಾಪಿಸಿರುವ ಟ್ರಾಂಬೆ , ಭಾ ಭಾ ಆಟೋಮಿಕ್ ರಿಸರ್ಚ್ ಸೆಂಟರ್ ನಮ್ಮ ದೇಶದ ಅತ್ಯಂತ ದೊಡ್ಡ ಕೇಂದ್ರವಾಗಿ ನ್ಯೂಕ್ಲಿಯರ್ ಸಂಶೋಧನೆಯ ನಿರ್ದೇಶನದ ಜವಾಬ್ದಾರಿ ಹೊತ್ತಿದೆ. ಈಗ ನಮ್ಮ ದೇಶದಲ್ಲಿ ಸೈರಸ್, ಧ್ರುವ, ಜೆರಿನಾ ಮತ್ತು ಪೂರ್ಣಿಮಾ ಸೇರಿ ಒಟ್ಟು ಐದು ಪರಮಾಣು ಸಂಶೋಧನಾ ಕೇಂದ್ರಗಳಿವೆ. ಇದುವರೆಗೆ ನಾವು ರಾಜಸ್ಥಾನದ ಪೋಖ್ರಾನ್ ನಲ್ಲಿ ಎರಡು ಬಾರಿ ಭೂಗರ್ಭದ ನ್ಯೂ ಕ್ಲಿಯರ್ ಟೆಸ್ಟ್ ಗಳನ್ನು ನಡೆಸಿದ್ದೇವೆ. ನಮ್ಮ ವಿಜ್ಞಾನಿಗಳ ಈ ಮಹತ್ವದ ಸಾಧನೆಯಿಂದ ಈ ದಿಸೆಯಲ್ಲಿ ಪ್ರಮುಖ ಸ್ಥಾನದಲ್ಲಿರುವ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ನಮ್ಮ ರಾಷ್ಟ್ರವೂ ಸ್ಥಾನ ಪಡೆಯುವಂತಾಯಿತು. ಪ್ರಪಂಚದ ಏಳು ರಾಷ್ಟ್ರಗಳ ಸಾಲಿನಲ್ಲಿ ಭಾರತ ಅಣು ರಿಯಾಕ್ಟರ್  ತಂತ್ರಜ್ಞಾನದ ಹೊಂದಿರುವ ರಾಷ್ಟ್ರವಾಗಿ ಸೇರ್ಪಡೆ ಹೊಂದಿದೆ. ಚೆನ್ನೈನ ಕಲ್ಪಕಂನಲ್ಲಿ ಇಂದಿರಾಗಾಂಧಿ ಆಟೋಮಿಕ್ ರಿಸರ್ಚ್ ಸೆಂಟರ್ ನಲ್ಲಿ ಈ ಬಗೆಯ ಸಂಶೋಧನೆ ನಡೆಯುತ್ತಿದೆ.

ಆಕಾಶಯಾನ ಕ್ಷೇತ್ರದಲ್ಲಿ ಭಾರತವೂ ಯಶಸ್ಸು ಸಾಧಿಸಿದೆ. ಪಿ ಎಸ್ ಎಲ್ ವಿ (PSLV ) ಡಿ -೨. ಉಡಾವಣೆ ೧೯೯೪ ರ ಅಕ್ಟೋಬರ್ ನಲ್ಲಿ ಯಶಸ್ವಿಯಾಗಿ ನಡೆಯಿತು. ೧೯೯೨ರಲ್ಲಿ ಇನ್ಸಾಟ್-೨ ಉಪಗ್ರಹಗಳ ಉಡಾವಣೆ ಪ್ರಾರಂಭದೊಂದಿಗೆ  ಪ್ರಪಂಚದ ಅತ್ಯಂತ ಕ್ಲಿಷ್ಟ ವ್ಯವಸ್ಥೆ ಹೊಂದಿರುವ ಉಪಗ್ರಹಗಳ ಉಡಾವಣೆಯನ್ನು ನಾವು ಸಾಧಿಸಬಲ್ಲೆವೆಂಬುದನ್ನು  ಸಾಧಿಸಿ ತೋರಿಸಿದ್ದೇವೆ. ನಮ್ಮ ಈ ಹಿಂದಿನ ಉಡಾವಣೆಗಳಾದ  SLV -೩, ಮತ್ತು SLV ಗಳು ಕೇವಲ ನಮ್ಮ ಉತ್ತಮ ವ್ಯವಸ್ಥೆಯ ಮಾದರಿಗಳಾಗಿದ್ದುವು. PSLV  ಒಂದು ಟನ್ ತೂಕದ ಉಪಗ್ರಹವನ್ನು ಅಂತರೀಕ್ಷಕ್ಕೆ ೧೦೦೦ ಕಿ.ಮೀ. ವರೆಗೂ ಹಾರಿಬಿಡುವ ಸಾಮರ್ಥ್ಯ ಹೊಂದಿದೆ ಎಂಬುದನ್ನು ತೋರಿಸಿಕೊಟ್ಟಿದೆ. ನಂತರದ GSLV ೨.೫ ಟನ್ ತೂಕಗಳೊಂದಿಗೆ ೩೬೦೦೦ ಕಿ.ಮೀ. ದೂರ ಸಾಗಬಲ್ಲದಾಗಿತ್ತು. GSLV -೨ನ್ನು  ೨೦೦೩ರ ಮೇ ತಿಂಗಳಲ್ಲಿ ಹಾರಿಬಿಡಲಾಯಿತು. ಈ ಯಶಸ್ವೀ ಕಾರ್ಯ ಸಾಧನೆಯ ನಿಯಂತ್ರಣವನ್ನು ಇಸ್ರೋ ಬಾಹ್ಯಾಕಾಶ ಸಂಶೋಧನಾ ಕೇಂದ್ರವೂ ಪೂರ್ವಯೋಜಿತ ಕಾರ್ಯಕ್ರಮಗಳನ್ನು ಹೊಂದಿ ಇತರ ಉಪಗ್ರಹಗಳೊಡನೆ ಸಂಪರ್ಕ ಸಾಧಿಸುತ್ತಿದೆ. ದಿನಾಂಕ ೧೦-೧-೨೦೦೭ ರಂದು ಪಿ ಎಸ್ ಎಲ್ ವಿ -ಸಿ  ೭ ಉಡಾವಣಾ ವಾಹನದ ಮೂಲಕ ಏಕಕಾಲದಲ್ಲಿ ನಾಲ್ಕು ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವ ಮೂಲಕ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ. ೬೫೦ ಕೆ.ಜಿ. ತೂಕದ ಸ್ಪೇಸ್ ಕ್ಯಾಪ್ಸುಲ್ SRE -೧ ಶ್ರೀ -೧ ನ್ನು ಬಾಹ್ಯಾಕಾಶಕ್ಕೆ ಕಳುಹಿಸಿರುವ ಭಾರತ ಮರು ಪ್ರವೇಶ ತಂತ್ರಜ್ಞಾನ ಸಾಧಿಸುತ್ತಿದೆ. ಮುಂದಿನ ಚಂದ್ರಯಾನಕ್ಕೆ ಇದು ಸಿದ್ದತೆಯಾಗಿದೆ  ಎಂದು ಬಣ್ಣಿಸಲಾಗಿದೆ.

ಇತ್ತೀಚೆಗೆ ನಮ್ಮ  ಸಾಧನೆಗಳ ಕಿರೀಟಕ್ಕೆ ಮತ್ತೊಂದು ಗರಿ ಎಂಬಂತೆ 'ಅಂಟಾರ್ಟಿಕಾ' ಪ್ರದೇಶವು ವೈಜ್ಞಾನಿಕ ಕ್ಷೇತ್ರದಲ್ಲಿ ನಮ್ಮ ಬುದ್ದಿಮತ್ತೆಯನ್ನು  ಸಮರ್ಥಿಸುತ್ತದೆ. ಈ ಹಿಮಖಂಡದಲ್ಲಿ ಎರಡು ಸ್ಥಿರ ಕೇಂದ್ರಗಳಿವೆ. ವಿಜ್ಞಾನಿಗಳು, ಸಾಗರ ಯಾನ ತಜ್ಞರು, ಮತ್ತು ತಂತ್ರಜ್ಞರು ಆ ಅಂಟಾರ್ಟಿಕಾ ಖಂಡವನ್ನು ಪ್ರವೇಶಿಸಿ ಸಂಶೋಧನೆ ನಡೆಸಿದ್ದಾರೆ.

ರಕ್ಷಣಾ ಕ್ಷೇತ್ರದಲ್ಲೂ ನಾವು ಮೆಚ್ಚುವಂತಹ ಕಾರ್ಯ ಮಾಡಿದ್ದೇವೆ. ಪೃಥ್ವಿ ನಾಗ್, ಮುಂತಾದ ಕ್ಷಿಪಣಿಗಳನ್ನು ತಯಾರಿಸಿ ಯಶಸ್ವಿಯಾಗಿ ಪ್ರಯೋಗ ಮಾಡಿದ್ದೇವೆ. ಬೆಂಗಳೂರಿನ HAL  ಹಗುರ ಯುದ್ದ ಹೆಲಿಕಾಪ್ಟರ್ ತಯಾರಿಸಿದೆ.

ಈ ಬಗೆಯ ಅತ್ಯಾಧುನಿಕ ತಂತ್ರಜ್ಞಾನ ಹೊಂದಿ ದೇಶದ ಅಭಿವೃದ್ದಿ ಸಾಧನೆಗೆ ನೆರವಾಗುತ್ತಿದ್ದರೂ ಸಾಧಿಸಬೇಕಾದುದು ಇನ್ನೂ ಎಷ್ಟೋ ಇವೆ. ನಮ್ಮ ಪ್ರಯೋಗಗಳು, ಸಂಶೋಧನೆಗಳು ಜನಸಾಮಾನ್ಯರನ್ನು ತಲುಪುವುದು ಅತಿ ಮುಖ್ಯವಾದುದು. ಸಾಮಾನ್ಯ ಜನರ ಜೀವನ ಸುಖಮಯವಾಗಿ ಅವರ ಬದುಕು ಹಸನು ಮಾಡುವುದೇ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಮೂಲ ಉದ್ದೇಶವಾಗಿದೆ. ಎಲ್ಲಾ ರಾಷ್ಟ್ರಗಳೂ ಇದನ್ನು ಮನಗಂಡಾಗ ಪ್ರಪಂಚ ಶಾಂತಿಯ ನಿಟ್ಟುಸಿರು ಬಿಡಲು ಸಾಧ್ಯ.


ಮೂಲ : ಪ್ರಬಂಧ ಮಂಜರಿ

3.19078947368
poorna Nov 04, 2015 03:42 PM

ತುಂಬಾ ಮಾಹಿತಿ ಇಂದ ಕೂದಿದೆ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top