অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ವಿದ್ಯಾಭ್ಯಾಸದ ಗುರಿ

ವಿದ್ಯಾಭ್ಯಾಸದ ಗುರಿ

ಪ್ರಾರಂಭದಲ್ಲಿ ವಿದ್ಯೆ ಎಂಬುದು ಜ್ಞಾನ ಸಂಪಾದನೆಗೆ ಸೀಮಿತವಾಗಿತ್ತು. ಅನಂತರ ವಿದ್ಯೆಯ ಪರಿಭಾಷೆ ವಿಸ್ತಾರವಾಗುತ್ತಾ ಇಂದು ವಿದ್ಯೆ "ವಿದ್ಯಾರ್ಥಿಯ ಸರ್ವತೋಮುಖ ಅಭಿವೃದ್ದಿ" ಎಂದು ವ್ಯಾಖ್ಯಾನಗೊಳಿಸುತ್ತಿದೆ. "ವಿದ್" ಎಂದರೆ ಜ್ಞಾನ. ಅದರ ಅಭ್ಯಾಸ ಮಾಡುವುದೇ " ವಿದ್ಯಾಭ್ಯಾಸ". ಪ್ರಾರಂಭದಲ್ಲಿದ್ದ ವಿದ್ಯೆಯ ಪರಿಭಾಷೆ ವಿಸ್ತಾರಗೊಂಡಂತೆ ಅದರ ಗುರಿಯೂ ಹಿಗ್ಗುತ್ತಾ ಸಾಗಿದೆ. ಏನೇ ಆದರೂ "ಜ್ಞಾನ" ಎಂಬುದು ಶಕ್ತಿಯಾಗಿಯೇ ಉಳಿದಿದೆ. ಆದುದರಿಂದ ಪ್ರಪಂಚದಲ್ಲಿ 'knowledge is power ' ಎಂದು ಪರಿಗಣಿಸಲ್ಪಟ್ಟಿದೆ. ಪುಷ್ಟಿಕರವಾದ ಆಹಾರ ದೇಹಕ್ಕೆ ಶಕ್ತಿ ನೀಡುವಂತೆ ಸಮೃದ್ದವಾದ ಹಾಗೂ ಪ್ರಬುದ್ದವಾದ ಜ್ಞಾನವು ಮಾನಸಿಕ ಶಕ್ತಿಗೆ ಕಾರಣವಾಗಿದೆ.ಇವೆರಡರ ಸಮತೋಲನವೇ ವಿದ್ಯಾಭ್ಯಾಸದ   ಗುರಿಯಾಗಿ ರೂಪುಗೊಳ್ಳುತ್ತಿದೆ. ಸಮರ್ಥವಾದ ಮಾನಸಿಕ ಶಕ್ತಿಗಳಿಸಲು ಅಗತ್ಯವಾದ ಶಾರೀರಿಕ ಶಕ್ತಿ ಬೇಕು. "A sound mind is in sound body " ಎಂದು ಎಲ್ಲರೂ ಹೇಳುತ್ತಾರೆ.ಇದರ ಸರಳ ವ್ಯಾಖ್ಯಾನ "ಸರ್ವತೋಮುಖ ಅಭಿವೃದ್ದಿ" ಎಂದು ಪ್ರಚಲಿತವಿದೆ. ಅಂದರೆ ವಿದ್ಯೆಯ ಮುಖ್ಯಗುರಿ; ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಗೆ ಗಮನ ನೀಡಬೇಕು ಎಂದು ಸೂಚಿಸುತ್ತದೆ. ಇದರ ಉದ್ದೇಶದಂತೆ ವಿದ್ಯಾರ್ಥಿಯು ಪರಿಪೂರ್ಣ ಜ್ಞಾನ ಗಳಿಸಬೇಕು.

ಪ್ರಾಚೀನ ಭಾರತದಲ್ಲಿ ವಿದ್ಯೆಗೆ ಪ್ರಮುಖ ಸ್ಥಾನ ನೀಡಲಾಗಿತ್ತು. ಅಂದಿನ ಸಮಾಜಕ್ಕೆ ಜ್ಞಾನ ಗಂಗೆಯನ್ನು ಹರಿಸಿದ ತಕ್ಷ ಶಿಲಾ, ನಳಂದ ವಿಶ್ವವಿದ್ಯಾಲಯಗಳು ಇಂದಿಗೂ ತಮ್ಮ ಹೆಸರನ್ನು ಉಳಿಸಿಕೊಂಡಿವೆ. ಈ ವಿಶ್ವವಿದ್ಯಾಲಯಗಳಲ್ಲಿ  ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳು ಸಕಲ ವಿದ್ಯೆಗಳಲ್ಲೂ ಪಾರಂಗತವಾಗಿ ಹೊರಬರುತ್ತಿದ್ದರು. ಕೆಲವು ಕಡೆ ಉಲ್ಲೇಖಿಸಿರುವಂತೆ ಹಿಂದಿನ ರಾಜಮನೆತನದವರು ಅರವತ್ತನಾಲ್ಕು ವಿದ್ಯೆಗಳಲ್ಲಿ ಪರಿಣಿತರಾಗಿರುತ್ತಿದ್ದರಂತೆ! ಇಂದೂ ಸಹ ವಿದ್ಯಾಭ್ಯಾಸದ ಪ್ರಕಾರಗಳು ಬಗೆಬಗೆಯಾಗಿ ಹಿಗ್ಗುತ್ತಾ ಹಿಂದಿನ ವಿಶ್ವವಿದ್ಯಾಲಯಗಳ ನೆನಪನ್ನು ತರುತ್ತವೆ. ಯಾವಾಗ ವಿದ್ಯೆಯನ್ನು ಉದ್ಯೋಗ ಪಡೆಯಲು ಕಲಿಯಲಾರಂಭಿಸಿದರೋ ಅಂದಿನಿಂದ ಅವರ ಗುರಿ ಹಾಗೂ ಮೌಲ್ಯಗಳು ಕುಂತಿತಗೊಳ್ಳುತ್ತಾ ಸಾಗುತ್ತಿವೆ. ಹಾಗೂ ಅದರ ಅವಶ್ಯಕತೆ ಹೆಚ್ಚುತ್ತಿದೆ. ಏನೇ ಆಗಲಿ ಯಾವುದೇ ಕ್ಷೇತ್ರದಲ್ಲಿ ಗುರಿ ಸಾಧಿಸಲು ವಿದ್ಯೆ ಅನಿವಾರ್ಯವೆಂಬುದನ್ನು ಎಲ್ಲರೂ ಒಪ್ಪುತ್ತಾರೆ. ಇತ್ತೀಚೆಗೆ ಕೇವಲ ವಿದ್ಯೆಯನ್ನು ಗಳಿಸಿದರೆ ಸಾಲದು, ಅದಕ್ಕೆ ತರಬೇತಿಯೂ ಬೇಕೆನಿಸುತ್ತದೆ. ಏಕೆಂದರೆ ವಿದ್ಯೆ ಜ್ಞಾನವನ್ನು ಕೊಟ್ಟರೆ ತರಬೇತಿ ಪರಿಣತಿಯನ್ನು ನೀಡುತ್ತದೆ. ಇದರಿಂದ ಕುಶಲತೆ, ಯೋಗ್ಯತೆ, ಒಳನೋಟ, ಮತ್ತು ವೈಜ್ಞಾನಿಕ  ದೃಷ್ಟಿಕೋನವನ್ನು ಪಡೆಯಬಹುದು. ಇದೂ ಅಲ್ಲದೆ ವಿದ್ಯೆಯಿಂದ ಸಾಹಿತ್ಯ ಮತ್ತು ಗುಣಗ್ರಾಹ್ಯತೆಯನ್ನು ಪಡೆಯಬಹುದಾದರೂ ಅದರ ಉಪಯುಕ್ತತೆಯೂ ಅಷ್ಟೇ ಪ್ರಮುಖವಾದುದು. ವಿದ್ಯಾಭ್ಯಾಸದ ಗುರಿ ವಿಧ್ಯಾರ್ಥಿಯಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವುದರೊಂದಿಗೆ ಹೊರಗಿನ ಬೌತಿಕ ಮತ್ತು ವಾಸ್ತವಿಕ ಅಂಶಗಳನ್ನು ನೆನಪಿಸುತ್ತದೆ. ವಿದ್ಯಾರ್ಥಿಗಳು ಸ್ವಾವಲಂಭಿಗಳಾಗಿ ತಮ್ಮ ಜೀವನ ನಡೆಸುವಷ್ಟು ಸಾಮರ್ಥ್ಯವನ್ನು ಗಳಿಸಿಕೊಳ್ಳಲು ವಿದ್ಯಾಭ್ಯಾಸ ಸಹಾಯ ಮಾಡುವಂತಿರಬೇಕು. ವಿದ್ಯಾವಂತ ಮನುಷ್ಯನು ತನ್ನ ಜೀವನದಲ್ಲಿ ಎದುರಾಗಬಹುದಾದ ಕಷ್ಟ ಪರಂಪರೆಗಳನ್ನು ಸಮರ್ಥವಾಗಿ ಹಾಗೂ ಧೈರ್ಯವಾಗಿ ಎದುರಿಸುವಂತಾಗಬೇಕು. ಇದರೊಂದಿಗೆ ವಿದ್ಯಾವಂತನು ತಾನು  ಬೆಳೆದ ಸಮಾಜ ಮತ್ತು ದೇಶಕ್ಕೆ ಅರ್ಥಪೂರ್ಣವಾದ ಕೊಡುಗೆಯನ್ನು ಕೊಡುವುದರಲ್ಲಿ ಅಸಮರ್ಥನಾದರೆ ಅಥವಾ ತಪ್ಪಿದರೆ ಅವನನ್ನು ವಿದ್ಯಾವಂತನೆಂದು ಪರಿಗಣಿಸಲಾಗದು.

ವಿದ್ಯೆಯ ಮುಖ್ಯ ಕೆಲಸವೆಂದರೆ ಪ್ರಯೋಜನಕರವಾದ ಬುದ್ದಿವಂತಿಕೆಯ, ರಾಷ್ಟ್ರನಿಷ್ಟೆಯ, ಭಾವೋದ್ವೇಗಕ್ಕೆ ತುತ್ತಾಗದ, ಪ್ರಬಲವಾದ ನೈತಿಕ ಶಕ್ತಿ ಪಡೆಯುವ, ಸುಸಂಸ್ಕ್ರುತಿಯನ್ನು ಮತ್ತು ವೈಜ್ಞಾನಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳುವ, ಆರೋಗ್ಯಪೂರ್ಣ ಪ್ರಜೆಗಳನ್ನು ರೂಪಿಸುವುದೇ ಆಗಿದೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ವಿದ್ಯೆಯ ಗುರಿ ಮತ್ತು ವಾಸ್ತವಾಂಶಗಳು ಕ್ರಮಬದ್ದವಾಗಿ ಐಕ್ಯವಾಗಿರಬೆಕು. ಭಾವನೆ, ಯೋಚನೆ ಮತ್ತು ಪಾಲನೆಗಳಲ್ಲಿ ಹೊಂದಾಣಿಕೆ ಇರಬೇಕು. ಜೀವನದ ಗತಿ ಮತ್ತು ಲಯಕ್ಕೆ ಹೊಂದಿಕೊಳ್ಳುವಂತಹ ವ್ಯಕ್ತಿಗಳಾಗುವಂತೆ ವಿದ್ಯೆಯ ಗುರಿಯಿರಬೇಕು. ವ್ಯಕ್ತಿಯ ಬುದ್ದಿ ಮತ್ತು ಹೃದಯದ ತಾಳ, ಲಯಗಳು ನಿರೀಕ್ಷಿತ ಹೊಂದಾಣಿಕೆ ಮಾಡಿಕೊಳಲಾಗದಿದ್ದರೆ ಇದನ್ನು ಸಾಧಿಸಲಾಗುವುದಿಲ್ಲ.

ವಿದ್ಯೆಯ ಮತ್ತೊಂದು ಮುಖ್ಯ ಲಕ್ಷಣವೆಂದರೆ ನಡತೆಯನ್ನು ರೂಪಿಸುವುದು. ಅಂದರೆ ವಿದ್ಯಾವಂತರು ನಡತೆಯುಳವರೂ ಆಗಿರಬೇಕೆಂಬುದೆ ಅಪೇಕ್ಷೆ. ಕಾಲಕ್ರಮೇಣ ಸನ್ನಡತೆ, ದುರ್ನಡತೆ ಎಂದು ಗುರುತಿಸಬೇಕಾಯಿತು. ಏಕೆಂದರೆ ನಡವಳಿಕೆ ಸನ್ನಡತೆ ಇವುಗಳನ್ನು ಒಂದು ಗೌರವಯುತ ಬದುಕಿಗೆ ನಿರೂಪಿಸಿ ಉಪಯೋಗಿಸುತ್ತಿದ್ದರು.ಅದನ್ನು ಅತ್ಯಂತ ಅಮುಲ್ಯವಾದುದೆಂದು ಒಮ್ಮೆ ಅದನ್ನು ಕಳೆದುಕೊಂಡರೆ ಸರ್ವನಾಶವಾದಂತೆಯೇ ಎಂದೂ ಭಾವಿಸುತ್ತಿದ್ದರು. ನಡತೆಯುಳ್ಳವನು, ಅಥವಾ ನೀತಿವಂತನು ಸಮಾಜದಲ್ಲೂ ಅತ್ಯಂತ ಗೌರವಯುತ ಸ್ಥಾನವನ್ನು ಪಡೆದಿರುತ್ತಿದ್ದನು. ವಿದ್ಯೆ ಇಂತಹ ನಡತೆಗೆ ಸೂಕ್ತ ಅಡಿಪಾಯ. ಅವಿದ್ಯಾವಂತನೂ ಆ ಕಾಲದಲ್ಲಿ ನಡತೆಯುಳ್ಳವರಾಗಿರುತ್ತಿದ್ದರು. ಈ ಕಾರಣದಿಂದ ಅದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕಾದ ಅಥವಾ ಅತಿ ಪ್ರಾಮುಖ್ಯತೆಯನ್ನು ಕೊಡುವ ಸನ್ನಿವೇಶ ಸೃಷ್ಟಿಯಾಗಿರಲಿಲ್ಲ. ಆದರೆ ಸಮಾಜ ಬೆಳೆದಂತೆ ವಿದ್ಯಾವಂತರು ಅವಿದ್ಯಾವಂತರು ಎಂಬ ಧೋರಣೆ ಬಲಗೊಂಡಾಗ ನಡತೆಗೆ ಅಧಿಕ ಮಹತ್ವ ಬಂದಿತು. ಅವಿದ್ಯಾವಂತ ಬಡವರು ಪ್ರಾಮಾಣಿಕರಾಗಿದ್ದರು ಅವರಿಗೆ ಗೌರವ ಸಿಗದಂತಾಯಿತು. ಆದರೆ ವಿದ್ಯಾವಂತರಲ್ಲಿ ಅಂತಹ ಗುಣಗಳನ್ನು ಹುಡುಕಿ ಅವರನ್ನು ಆದರಿಸುವ ಅಭ್ಯಾಸ ರೂಡಿಗೆ ಬಂದಿತು. ಇದರೊಂದಿಗೆ ಜನಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಹೋಗಿದ್ದ ಸನ್ನಡತೆ ಬರುಬರುತ್ತಾ ವಿದ್ಯಾವಂತರ ಸಮಾಜದಲ್ಲಿ ಅತ್ಯಂತ ಪ್ರಭಾವಶಾಲಿಯಾದವರನ್ನು ಸನ್ನಡತೆ ಯವರೆಂದು ಪರಿಗಣಿಸಲಾಯಿತು. ಇದರ ಹಿನ್ನಲೆಯಲ್ಲಿ ತಾತ್ವಿಕವಾದ ಒಂದು ನೀತಿ ಅಡಗಿತ್ತು. ವಿದ್ಯಾವಂತರು ಅಹಂಕಾರಿಗಲಾಗದಿರಲೆಂಬ ಸದುದ್ದೇಶದ ಸದ್ಭಾವನೆ ಇದರ ಆಶಯವಾಗಿತ್ತು. ಅದಕ್ಕಾಗಿಯೇ ಹೀಗೆ ಹೇಳಿದರು. "ವಿದ್ಯಾದದಾತಿ ಶೋಭತೆ ವಿನಯೇ" ವಿದ್ಯೆಯೊಂದಿಗೆ ವಿನಯವಿದ್ದಾಗ ಅದಕ್ಕೆ ಮಹತ್ವ ಬರುತ್ತದೆ.

ಆದರೆ ಇತ್ತೀಚಿಗೆ "ನಡತೆ" ಶಬ್ದ ವಿಭಿನ್ನವಾದ ಪರಿಭಾಷೆಗೆ ತಲುಪಿದೆ. ನದತೆಯೆಂದರೆ ಕೇವಲ ವ್ಯಕ್ತಿಯ ವರ್ತನೆ ಅಥವಾ ನಡವಳಿಕೆಯಷ್ಟೇ ಅಲ್ಲ: ಹಾಗೆ ಹೇಳಿದಾಗ ಅದು ವಿಸ್ತಾರವಾದ ಅರ್ಥಕೊಡುತ್ತದೆ. ನೈತಿಕ ಶಕ್ತಿ, ಚುರುಕು ಬುದ್ದಿ, ಸ್ವಯಂಶಿಸ್ತು, ಮನಸ್ಥೈರ್ಯ ಹಾಗೂ ಪ್ರಖ್ಯಾತಿ ಇತ್ಯಾದಿಗಳನ್ನು ವಿಭಜಿಸಿ ಇವುಗಳನ್ನು ನಡತೆ ಆಳುವುದೆಂದು ತಿಳಿಯಲಾಗಿದೆ. ನಮ್ಮ ಇಂದಿನ ಆಧುನಿಕ ಸಮಸ್ಯೆಗಳಿಗೆ ನೈತಿಕ ಅಭಾವವೇ ಮೂಲ ಕಾರಣ. ಜನರು ತಮ್ಮ ನಡತೆಯನ್ನು ವೃದ್ದಿಸಿಕೊಂಡರೆ (ತಿದ್ದಿಕೊಂಡರು ಸಹ) ಅನೇಕ ಸಮಸ್ಯೆಗಳು ತಮಗೆ ತಾವೇ ಪರಿಹಾರವಾಗುತ್ತವೆ. ಯಾವ ರಾಷ್ಟ್ರದಲ್ಲಿ ಸನ್ನಡತೆಯ ಪ್ರಜೆಗಳಿರುತ್ತಾರೊ ಅಲ್ಲಿ ಎಂತಹ ಪ್ರಬಲ ಆಪತ್ತು ಬಂದರೂ ಸುಲಭವಾಗಿ ಪರಿಹಾರಗೊಳ್ಳುತ್ತದೆ. ಮಾನವ, ಮಾನವತೆ ಇವುಗಳ ಅಂತರಾರ್ಥವೆ "ನಡತೆ" ಅದಕ್ಕೆ ವಿರುದ್ದ ಪದವೇ ಪಶುವೃತ್ತಿ.

ಪಶುಗಳಿಗೂ ಮನುಷ್ಯರಿಗೂ ಈ ಕಾರಣದಿಂದ ಅಂತರ ಏರ್ಪಟ್ಟಿದೆ. ನಡತೆ ಇಲ್ಲದ ವ್ಯಕ್ತಿಗಳ ಬಗ್ಗೆ ಅನೇಕರು ಅನೇಕ ಬಗೆಯ ಲೇಖನ, ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಎಲ್ಲರೂ ಉತ್ತಮ ಹವ್ಯಾಸ ಮತ್ತು ಅಭ್ಯಾಸದಿಂದ ಉತ್ತಮ ನಡತೆ ಸೃಷ್ಟಿಯಾಗುತ್ತದೆ ಎಂದು ಪ್ರತಿಪಾದಿಸಿದ್ದಾರೆ. ಏಕೆಂದರೆ ಉತ್ತಮ ನಡತೆಯುಳ್ಳವರನ್ನು ಆದರ್ಶವ್ಯಕ್ತಿಗಳೆನ್ನುತ್ತಾರೆ. ರಾಷ್ಟ್ರದ ನೆತ್ರುತ್ವವಹಿಸಲು ಇಂತಹ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಭಾರತದಲ್ಲಿ ಮಹಾತ್ಮ ಗಾಂಧಿ, ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ ತಿಲಕ್, ರಾಜೇಂದ್ರ ಪ್ರಸಾದ್, ವಿವೇಕಾನಂದ ಮುಂತಾದವರು ತಮ್ಮ ಆದರ್ಶ ಜೀವನ ಪದ್ದತಿಗಳಿಂದ ಈ ದೇಶದ ನಾಯಕರಾಗಲು ಸಾಧ್ಯವಾಯಿತು. ಈ ದಿಗ್ಗಜರ ಜೀವನ ಚರಿತ್ರೆಯಿಂದ ಇಂದಿನ ಯುವಕರು ಪ್ರೇರಣೆ ಪಡೆಯಬೇಕು.

ನಮ್ಮ ಶಾಲಾ ಕಾಲೇಜುಗಳಲ್ಲಿ ಮತ್ತು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸುವಂತಹ ಮತ್ತು ಅವರು ತಮ್ಮ ಜೀವನದ ಸತ್ಯವನ್ನು ಧೈರ್ಯ ಮತ್ತು ಭರವಸೆಯಿಂದ ಎದುರಿಸುವಂತಹ ಶಿಕ್ಷಣವನ್ನು ನೀಡಬೇಕು. ಈ ಸಂಬಂದವಾಗಿ ಗಾಡವಾಗಿ ಚಿಂತನೆ ನಡೆಸಿದ್ದರು. ಗ್ರಾಮೀಣ ಭಾರತಕ್ಕೆ ಸ್ವಾವಲಂಬಿ ಪ್ರಜೆಗಳನ್ನು ಸೃಷ್ಟಿ ಮಾಡಲು ಎಂತಹ ಶಿಕ್ಷಣ ಬೇಕೆಂಬುದನ್ನು ಅವರು ಪ್ರಾಯೋಗಿಕವಾಗಿ ಪ್ರಯತ್ನಿಸಿ ನೋಡಿದರು. ಅದು ಭಾರತಕ್ಕೆ ಸೂಕ್ತವಾದ ವಿದ್ಯೆ ಎಂದು ನಿಶ್ಚಯಿಸಿ ಮೂಲ ಶಿಕ್ಷಣ (basic Education) ವೆಂಬ ಹೊಸ ಪದ್ದತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಸೂಚಿಸಿದರು. "ಮೂಲ ಶಿಕ್ಷಣ" ವೆಂದರೆ ಸ್ವಂತ ಅನುಭವದಿಂದ ಪಡೆದುಕೊಳ್ಳುವ ಶಿಕ್ಷಣ ಕೆಲಸ ಮತ್ತು ತರಬೇತಿ ಪರಸ್ಪರ ಪೂರಕವಾಗಿ ಸಾಗಿ ಕೇವಲ ಪುಸ್ತಕ ಶಿಕ್ಷಣವಾಗಿರದೆ ಜೀವನದ ವಾಸ್ತವಿಕತೆಯಿಂದ ದೂರ ಉಳಿಯದಿರುವ ಸಾಮಾಜಿಕ ಮತ್ತು ಕುಟುಂಬದ ಹಿನ್ನಲೆಯಿಂದ ಕಲಿಯಬಹುದಾದ ಶಿಕ್ಷಣವನ್ನು ಮೂಲ ಶಿಕ್ಷಣದ ನೆಲೆಗಟ್ಟಿನಲ್ಲಿಡಲಾಗಿದೆ. ಇಂತಹ ಶಿಕ್ಷಣದಿಂದ ಕಸುಬುದಾರರು, ವೈದ್ಯರು, ಎಂಜಿನಿಯರ್, ತಂತ್ರಜ್ಞರು, ಶಿಕ್ಷಕರು ಮುಂತಾದ ವೃತ್ತಿಗಳನ್ನು ವಿದ್ಯಾರ್ಥಿಗಳು ಕಲಿಯಲು ಸಾಧ್ಯವಾಗುವುದು. "ಶಿಕ್ಷಣದೊಂದಿಗೆ ಗಳಿಕೆ" ಎಂಬ ಅಂತರಂಗ ತತ್ವವೂ ಇದರಲ್ಲಿ ಅಡಗಿದೆ.

ಗಾಂಧೀಜಿಯವರು ಈ ಬಗೆಯ ಶಿಕ್ಷಣ  ಪದ್ದತಿಯನ್ನು ಕೆಲವು ಕಡೆ ಪ್ರಯೋಗಿಸಿ ನೋಡಿದ್ದಾರೆ. ಆದರೆ ದೇಶದ ಎಲ್ಲ ಕಡೆ ಇದನ್ನು ಏಕರೂಪ ಶಿಕ್ಷಣ ಪದ್ದತಿಯಾಗಿ ರೂಪಿಸಲಾಗಿಲ್ಲ.ಆದರೆ ನಂತರದ ದಿನಗಳಲ್ಲಿ ವಿವಿಧ ಬಗೆಯ ವ್ಯಕ್ತಿಗಳನ್ನು ರೂಪಿಸುವ ಶಿಕ್ಷಣ ಪ್ರಾರಂಬವಾಗಿದೆ. ಈ ಶಿಕ್ಷಣವು ನಗರ, ಪಟ್ಟಣ ಆಧಾರಿತವಾಗಿರುವುದರಿಂದ ಪುನಃ ಗ್ರಾಮಗಳಲ್ಲಿ ನಿರುದ್ಯೋಗವನ್ನು ಸೃಷ್ಟಿಸುವ ಹಾಗೂ ಜೀವನದ ಮೂಲ ಪ್ರಶ್ನೆಗಳಿಗೆ ಉತ್ತರ ಕೊಡುವುದರಲ್ಲೂ ಸೋಲುವ ಶಿಕ್ಷಣ ನೀಡಲಾಗುತ್ತಿದೆ.

ಆದುದರಿಂದ ವಿದ್ಯಾಭ್ಯಾಸದ ಗುರಿ ಜನರನ್ನು ನಿರುದ್ಯೋಗಿಯಾಗಿಸದೆ ಪ್ರತಿಯೊಬ್ಬನೂ ಸ್ವಾವಲಂಬಿಯಾಗಿ ಬದುಕಲು ಬೇಕಾಗುವ ವಿದ್ಯೆಯನ್ನು ಕೊಡುವುದಾಗಿರಬೇಕು. ಇಂತಹ ಶಿಕ್ಷಣ ಭಾವನಾತ್ಮಕ ಮತ್ತು ಧಾರ್ಮಿಕ ಮನೋಭಾವ ಬೆಳೆಸುವುದೂ ಆಗಿರಬೇಕು. ಶಿಕ್ಷಣದ ಗುರಿ ವ್ಯಕ್ತಿಯ ಸರ್ವತೋಮುಖ ಬೆಳವಣಿಗೆಯಲ್ಲಿ ರಾಷ್ಟ್ರ ಪ್ರೇಮ, ಮಾನವಪ್ರೇಮ, ಪರೋಪಕಾರಿ ಬುದ್ದಿ, ಒಳಗೊಂಡಿರಬೇಕು, ಭಾರತದಂತಹ ವೈವಿದ್ಯಮಯ ರಾಷ್ಟ್ರಕ್ಕೆ ಇಂತಹ ಶಿಕ್ಷಣ ಅತ್ಯಗತ್ಯ.ನಮ್ಮ ಸಂಸ್ಕೃತಿ ಇತಿಹಾಸಗಳ ಬಗೆಗೆ ಹೆಮ್ಮೆ ಪದುವಂತಿರಬೇಕು. ಹಿಂದಿನ ಅನೇಕ ಸಂಕಷ್ಟಗಳ ಪರಿಸ್ಥಿತಿಯಲ್ಲಿ ನಮ್ಮ ದೇಶದ ಒಗ್ಗಟ್ಟನ್ನು ಕಾಪಾಡಲು ಸಹಾಯವಾದುದು ಇಂತಹ ಗುರಿ ಹೊಂದಿದ ಶಿಕ್ಷಣ ಪಡೆದವರಿಂದ ಎಂಬುದನ್ನು ಮರೆಯಬಾರದು.

ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ವಿದ್ಯಾಭ್ಯಾಸಕ್ಕೆ ಅಪಾರ ಹಣ ವ್ಯಾಯ ಮಾಡುತ್ತಿರುವುದರಿಂದಲೇ ಆ ದೇಶಗಳು ಇಂದು ಅಭಿವೃದ್ಧಿ ರಾಷ್ಟ್ರಗಳ ಸಾಲಿನ ಮುಂಚೂಣಿಯಲ್ಲಿವೆ. ವಿದ್ಯಾಭ್ಯಾಸಕ್ಕೆ ವ್ಯಾಯ ಮಾಡುವ ಹಣ, ಮುಂದಿನ ಉತ್ಪನ್ನಗಳಿಗೆ ತೊಡಗಿಸುವ ಬಂಡವಾಳವೆಂದು ಭಾವಿಸಬೇಕು.ಉದ್ದೆಶಪೂರ್ಣ ವಿದ್ಯಾಭ್ಯಾಸವು ಮಾನವ ಸಂಪನ್ಮೂಲವನ್ನು ಸೃಷ್ಟಿಸುವುದಲ್ಲದೆ, ದೂರ ದೃಷ್ಟಿಯ ಲಾಭದಾಯಕ ಉದ್ಯಮವೆನಿಸುತ್ತದೆ. ಶಿಕ್ಷಣ ಉದ್ಯಮವಲ್ಲದಿದ್ದರೂ ಬುದ್ದಿವಂತ ಯುವ ಜನತೆಯನ್ನು ನಿರ್ಮಾಣ ಮಾಡುವುದೆಂಬ ಅರ್ಥದಲ್ಲಿ ಶಿಕ್ಷಣವನ್ನು ಒಂದು ಉದ್ಯಮವೆಂದು ಭಾವಿಸಬೇಕು. (ಈಗ ಲಾಭದಾಯಕ ಉದ್ಯಮವೇ ಆಗಿದೆ) ಸಹನೆ, ಸತ್ಯ, ಶಾಂತಿ, ಅಹಿಂಸೆ, ಮತ್ತು ಔದಾರ್ಯಗಳಂತಹ ಸದ್ಗುಣವನ್ನು ಬೆಳೆಸಲು ನಮ್ಮ ಶಿಕ್ಷಣ ಸಮರ್ಥವಾಗಿರಬೇಕು.ಇದೇ ವಿದ್ಯಾಭ್ಯಾಸದ ಪ್ರಧಾನ ಗುರಿ.

ಕೊನೆಯ ಮಾರ್ಪಾಟು : 5/27/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate