ಗ್ರಂಥಾಲಯಗಳು ಆಧುನಿಕ ಕಾಲದ ಸರಸ್ವತಿ ಮಂದಿರಗಳು, ಮೂರ್ತಿಗಳ ನೆಲೆಬೀಡಾದ, ಶೋಷಣೆಯ ಕಟುಕಾಲಯಗಳಾದ , ಮೌಡ್ಯಗಳ ತವರಾದ ಸಾಂಪ್ರದಾಯಿಕ ದೇವಾಲಯಗಳಿಂದ ಮಾನವರಿಗೆ ಹೆಚ್ಚೇನು ಪ್ರಯೋಜನವಾಗಲಿಕ್ಕಿಲ್ಲ. ಶತ ಶತಮಾನಗಳಿಂದ ಸಂಗ್ರಹಗೊಂಡಿರುವ ಜ್ಞಾನ ನಿಧಿಗಳೇ ಗ್ರಂಥಾಲಯಗಳು, ಪ್ರಾಚೀನ ಕವಿ, ಋಷಿ, ಸಂತ, ತತ್ವಜ್ಞಾನಿ, ವಿಜ್ಞಾನಿಗಳ ಸಂಗ ಸಹವಾಸ ಸಂಪರ್ಕವನ್ನು ಉಪೇಕ್ಷಿಸುವವರು ಗ್ರಂಥಾಳಯಗಳೆಂಬ ತಪೋನಂದನಗಳಿಗೆ ಹೋಗಬೇಕು. ಸಂಸಾರದಲ್ಲಿ ಬೆಂದು ನೊಂದವರು ಶಾಂತಿ ಸಮಾಧಾನಗಳಿಗಾಗಿ ಪುಸ್ತಕ ಭಂಡಾರಗಳೆಂಬ ದಿವ್ಯಾಶ್ರಮಗಳನ್ನಾಶ್ರಯಿಸಬೇಕು. ಗ್ರಂಥಾಲಯಗಳಿಲ್ಲದ ಶಾಲಾ ಕಾಲೇಜುಗಳು, ಮರುಭೂಮಿಗಳು: ಗ್ರಂಥಾಲಯಗಳಿಲ್ಲದ, ಪ್ರೀತಿಸದ ವ್ಯಕ್ತಿ ಮತಿ ವಿಹೀನ, ಜ್ಞಾ ವೈರಿನ ; ದೈವ ವಿರೋಧಿ "ಮಹಾಕೃತಿಯೊಂದು ಮಹಾ ಚೈತನ್ಯವೊಂದರ ಸಾರಸರ್ವಸ್ವವಾಗಿದ್ದು, ಇಂದಿನ ಬದುಕಿಗೆ ಮಾತ್ರವಲ್ಲ ಮುಂದಿನ ಬದುಕಿಗೂ ಸಹ ಅತ್ಯವಶ್ಯಕವಾದ ಸಾರವನ್ನುಳಿಸಿ, ರಕ್ಷಿಸುವ ಶಕ್ತಿ ಮಾತೃಕೆಯೆಂದು ಮಿಲ್ಟನ್ ನುಡಿದಿದ್ದಾರೆ" ಇದು ಮಾನವನನ್ನು ಪೂರ್ಣ ಮಾನವನನ್ನಾಗಿ ಪರಿವರ್ತಿಸುತ್ತದೆಂದು ಬೇಕನ್ ಸ್ಪಷ್ಟಪಡಿಸಿದ್ದಾರೆ ಜಗತ್ತಿನ ಚಲನೆಗೆ ಭಾವನೆಗಳೇ ವಿಧ್ಯುತ್; ಗ್ರಂಥಗಳೇ ಆ ವಿದ್ಯುತ್ತನ್ನು ಸೃಷ್ಟಿ ಮಾಡುವ ವಿದ್ಯುದಾಗಾರಗಳು, ಉತ್ತಮ ಗ್ರಂಥಗಳಿಗೆ ಯಾವಾಗಲೂ ಮುಪ್ಪಿಲ್ಲ. ಅವು "ಯೌವ್ವನದ ಆಹಾರ, ಮುಪ್ಪಿನ ಆನಂದ, ದೌರ್ಬಲ್ಯದ ವಿಟಮಿನ್" ಎಂದು ಬಲ್ಲವರು ಹೇಳುತ್ತಾರೆ. ಇಂದಿನ ನಿಜವಾದ ಆಸ್ತಿ ಭುಮಿಯಲ್ಲ ಚಿನ್ನವಲ್ಲ, ಜ್ಞಾನ ನಿಧಿಗಳಾದ ಗ್ರಂಥರಾಶಿಗಳು 'ಆನಂದ ಬೇಕಾದರೆ ಗ್ರಂಥಗಳನ್ನು ಸಂಗ್ರಹಿಸು' ಎಂಬ ಗಾದೆಯೂ ಉಂಟು, ಹಾಗೆಯೇ 'ಹಳೆಯ ಕೋಟನ್ನಾದರೂ ಧರಿಸು ಆದರೆ ಹೊಸ ಪುಸ್ತಕವನ್ನೇ ಕೊಳ್ಳು' ಹಾಗೂ 'ಮಕ್ಕಳಿಗೆ ಆಸ್ತಿ ಮಾಡದಿದ್ದರೂ ಪರವಾಗಿಲ್ಲ ಮಕ್ಕಳನ್ನೇ ಆಸ್ತಿಯಾಗಿ ಮಾಡು' ಎಂಬ ಸೂಕ್ತಿಗಳೂ ಕೂಡ ಜಗಜ್ಜಾಹೀರಾಗಿದೆ.
ಓದಿನಿಂದ ಅರಿವು ಮೂಡುತ್ತದೆ; ಅರಿವೇ ಗುರುವೆಂಬ ಶರಣ ಸೂಕ್ತಿ ನಿಜಕ್ಕೂ ಸತ್ಯ. ಮಾನವನ ಬೌದ್ದಿಕ ಶಕ್ತಿ ಸಾಮರ್ಥ್ಯ ಪ್ರತಿಭೆಗಳ ವಿಶ್ವಾಸಕ್ಕೆ ಓದು ಪ್ರಚೋದನೆಯನ್ನೋದಗಿಸುತ್ತದೆ ಮತ್ತು ಚಿಂತನಾ ಕೌಶಲ ವೃದ್ಡಿಯಾಗುತ್ತದೆ. ವಿಜ್ಞಾನ ಶಿಕ್ಷಣದ ಯಶಸ್ಸಿಗೆ ಪ್ರಯೋಗಶಾಲೆ ಎಷ್ಟು ಮುಖ್ಯವೋ, ಹಾಗೆ ಎಲ್ಲಾ ಶಿಕ್ಷಣದ ಶ್ರೇಯಸ್ಸಿಗೆ ಗ್ರಂಥಾಲಯವು ಅಗತ್ಯ ಮತ್ತು ಅನಿವಾರ್ಯವಾದ ಅವಿಬಾಜ್ಯ ಅಂಗ ಎಂಬುದಾಗಿ ಹಿರಿಯರು ಅರ್ಥೈಸಿದ್ದಾರೆ. ಗ್ರಂಥಾಲಯವು ಸೇವಾ ಸಂಸ್ಥೆಯೂ ಸಹ ಹೌದು. ಓದುಗರೆಂಬ ಗ್ರಾಹಕರು ಹೆಚ್ಚಿದಷ್ಟು ಭಂಡಾರಿಗಳು ಖುಶಿಪಡುತ್ತಾರೆ ಮತ್ತು ಅಗತ್ಯಗಳನ್ನು ಪೂರೈಸುವುದು ಸಂಸ್ಥೆಯ ಮುಖ್ಯಸ್ಥರ ಮತ್ತು ಗ್ರಂಥಾಲಯದ ಅಧಿಕಾರಿಗಳ ಜವಾಬ್ದಾರಿಯಾಗಿರುತ್ತದೆ.
ಮಾಹಿತಿ ತಂತ್ರಜ್ಞಾನವು ದಿನದಿನಕ್ಕೆ ಉತ್ತುಂಗಕ್ಕೆರುತ್ತಿದೆ. ಜಗತ್ತಿನ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಿರಂತರವಾಗಿ ಬದಲಾವಣೆಗಳು ನಡೆಯುತ್ತಿದೆ. ಅವು ಹಳ್ಳಿಗಾಡಿನ ಸಾಮಾನ್ಯ ಜನರ ಜೀವನ ವ್ಯವಹಾರಗಳ ಮೇಲೂ ಪ್ರಭಾವ ಬೀರುತ್ತಿವೆ. ಆದ್ದರಿಂದ ಇಂದಿನ ಬದಲಾವಣೆ ಇಂದೇ ಎಲ್ಲರನ್ನು ಮುಟ್ಟಲು ವ್ಯವಸ್ಥೆ ಮಾಡುವುದು ಅತ್ಯಂತ ಸೂಕ್ತ ಮತ್ತು ಅಗತ್ಯವಾಗಿದೆ. ಜ್ನಾನವೆಂಬುದು ಶುಚಿತ್ವವನ್ನುಳಿಸಿಕೊಂಡು, ನಿತ್ಯ ನೂತನವಾಗಲು ಸದಾ ವಾಹಿನಿಯಂತೆ ಹರಿಯುತ್ತಿರಬೇಕೇ ಹೊರತು ಅದು ಮಡುಗಟ್ಟಬಾರದು. ಶಿಕ್ಷಣದ ಸರ್ವಧ್ಯೆಯ ಜ್ಞಾನಲಾಭವೆ ಆಗಿರುತ್ತದೆ. ಈ ಜ್ಞಾನದ ಅಕ್ಷಯ ನಿಧಿಗಳೇ ಹಾಗೂ ಪ್ರಾಚೀನ ಅರ್ವಾಚೀನ ಸಾರಸ್ವತ ತಪಸ್ವಿಗಳ ಚೈತನ್ಯ ಚಿಲುಮೆಗಳೇ ಈ ಗ್ರಂಥಾಲಯಗಳು. ಆದ್ದರಿಂದ ಶಿಕ್ಷಣ ಮತ್ತು ಗ್ರಂಥಾಲಯಗಳಿಗೆ ಹೊಕ್ಕುಳ ಬಳ್ಳಿಯಂತಹ ಸಂಬಂಧವಿದೆಯೆಮ್ಬುದು ನಿಜಕ್ಕೂ ಸತ್ಯ.
ಮೂಲ:ರಜತ ದರ್ಪಣ
ಕೊನೆಯ ಮಾರ್ಪಾಟು : 4/24/2020
ಮಾಹಿತಿ ಹಕ್ಕು ಕಾಯಿದೆ- 2005ರಡಿಯಲ್ಲಿ ಯಾವುದೇ ಸಾರ್ವಜನಿಕ...
ಕರ್ನಾಟಕ ಮಾಹಿತಿ ತಂತ್ರಜ್ಞಾನ ಜೈವಿಕ ತಂತ್ರಜ್ಞಾನ ಮತ್ತು ವ...
ದೂರು ದಾಖಲಿಸಲು ನಿಗದಿತ ನಮೂನೆ ಇದೆಯೇ & ದೂರಿನಲ್ಲಿ ಏನೆಲ್...
ಈ ಕಾಯಿದೆ ಆಕ್ಟೊಬರ್ 12, 2005ರಂದು ಜಾರಿಗೆ ಬಂತು