অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಮಾನತೆ

ಸಮಾನತೆ

ಸಮತೆ

ಆರೋಗ್ಯವನ್ನು ಎಲ್ಲರ ಹಕ್ಕಾಗಿಸುವ ನಿಟ್ಟಿನಲ್ಲಿ ಎಲ್ಲ ಕಡೆ ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿಯು ರಚನೆಯಾಗುತ್ತಿದೆ. ಈ ಸಮಿತಿಯು ಗ್ರಾಮದ ಜನರಿಗೆ ಆರೋಗ್ಯ ಸೌಲಭ್ಯಗಳನ್ನು ಲಭ್ಯವಾಗಿಸುವುದಕ್ಕಲ್ಲದೆ ಜನರ ಮನೋಭಾವನೆಗಳನ್ನು ಬದಲಾಯಿಸುವ ಕರ್ತವ್ಯವನ್ನು ಹೊಂದಿದೆ.

ಜನರ ಹಕ್ಕಾಗಿ ಆರೋಗ್ಯ

ನಾವು ಆರೋಗ್ಯವನ್ನು ಹೇಗೆ ಅರ್ಥಮಾಡಿಕೊಂಡಿದ್ದೇವೆ?

ಆರೋಗ್ಯ ಎಂದರೆ ಔಷಧಿಗಳೇ, ಆಸ್ಪತ್ರೆಗಳನ್ನು ಹೊಂದಿರುವುದೆಂದು ಅರ್ಥವೇ? ಅಥವಾ ಖಾಯಿಲೆ ಇಲ್ಲದಿರುವುದೇ? ಇಲ್ಲಾ ಇದು ಡಾಕ್ಟರ್ ಅಥವಾ ನರ್ಸುಗಳಿಂದ ಕೆಲವೇ ವ್ಯಕ್ತಿಗಳಿಗೆ ಸಂಬಂಧ ಪಟ್ಟಿರುವುದೇ?.

ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ: ಅಲ್ಲ, ಅದು ಹಾಗಲ್ಲ

ಆರೋಗ್ಯ ದಾನವಲ್ಲ. ಜನರ ಅವಶ್ಯಕತೆಗಳನ್ನು ಪೂರೈಸುವುದು. ಆದರೆ ಆರೋಗ್ಯ, ಜನರು ತಮ್ಮ ಹಕ್ಕು ಎಂದು ಒತ್ತಾಯಿಸಬೇಕಾದ ವಿಷಯ.

ಭಾರತೀಯ ಸಂವಿಧಾನವು ತನ್ನೆಲ್ಲಾ ಪ್ರಜೆಗಳಿಗೆ ಜೀವನ ನಡೆಸುವ ಹಕ್ಕನ್ನು ಕೊಟ್ಟಿದೆ. ವ್ಯಕ್ತಿಯೊಬ್ಬ ಆರೋಗ್ಯವಾಗಿದ್ದಾಗ ಮಾತ್ರ ಅರ್ಥಪೂರ್ಣ ಜೀವನ ನಡೆಸಬಲ್ಲ. ಆದ್ದರಿಂದ ಜೀವಿಸುವ ಹಕ್ಕು ಎಂಬುದು ಆರೋಗ್ಯದ ಹಕ್ಕನ್ನೂ ಒಳಗೊಂಡಿದೆ.

ಯಾವುದೇ ತಾರತಮ್ಯವಿಲ್ಲದೆ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆ ಮತ್ತು ಅಭಿವೃದ್ದಿಗಾಗಿ ಆರೋಗ್ಯ ಒಂದು ಹಕ್ಕಾಗಬೇಕು. ಅಂತಹ ಹಕ್ಕುಗಳಿಗಾಗಿ, ಹಕ್ಕನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಿ ಒತ್ತಾಯಿಸಬೇಕಾದ ಪರಿಸ್ತಿತಿ ಇಂದು ನಮ್ಮ ಮುಂದಿದೆ.

ಆರೋಗ್ಯಕರ ಸಮಾಜ

ಆರೋಗ್ಯಕರ ಸಮಾಜದ  ಬಗ್ಗೆ ನಾವು ಯೋಚಿಸಬಹುದೇ? ಅದು ಹೇಗಿರುತ್ತದೆ.?

  • ಲಿಂಗತ್ವ, ಜಾತಿ, ವರ್ಗ ಅಥವಾ ಧರ್ಮ ಯಾವುದೇ ರೀತಿಯ ತಾರತಮ್ಯವಿರುವುದಿಲ್ಲ.
  • ತಮ್ಮ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲು ಎಲ್ಲರಿಗೂ ಸರಿಸಮಾನವಾದ ಅವಕಾಶಗಳಿರುತ್ತದೆ.
  • ಸಂಪನ್ಮೂಲಗಳಿಗೆ ಎಲ್ಲರಿಗೂ ಸಮಾನ ಅವಕಾಶವಿರುತ್ತದೆ.
  • ತಮ್ಮದೇ ಆದ ನಂಬಿಕೆಗಳನ್ನು ಆಚರಿಸಲು ಎಲ್ಲರಿಗೂ ಸಮಾನ ಸ್ವಾತಂತ್ರ್ಯವಿರುತ್ತದೆ.

ನಿಮಗೆ ಇಂತಹ ಸಮಾಜ ಬೇಡವೇ?

  • ಇಂತಹ ಸಮಾಜವನ್ನು ನಮ್ಮ ಹಳ್ಳಿಗಳಲ್ಲಿಯೂ ನಿರ್ಮಿಸಲು ಸಾಧ್ಯವಿದೆ. ಇಂತಹ ಸಮಾಜ ನಿರ್ಮಾಣಕ್ಕೆ, ಎಲ್ಲರಿಗೂ ತಮ್ಮ ಆರೋಗ್ಯದ ಹಕ್ಕನ್ನು ಅರ್ಥಮಾಡಿಕೊಳ್ಳಲು ಸಮಾನ ಅವಕಾಶವಿದೆ ಎಂಬುದನ್ನು   ಖಚಿತಪಡಿಸಿಕೊಳ್ಳಬೇಕು.

ಆರೋಗ್ಯದಲ್ಲಿ ಸಮತೆ (equity)

ಇಲ್ಲಿ ಅತಿ ಮುಖ್ಯವಾದ ಪದ ಸಮತೆ, ಸಮತೆಯ ಅರ್ಥವೇನು? ಸಮತೆ ಎಂದರೆ ದುರ್ಬಲರಿಗೆ ಆದ್ಯತಾ ಸೇವೆಯನ್ನೊಳಗೊಂದಂತೆ ಸಮಾನ ಅವಕಾಶಗಳು / ಸೌಲಭ್ಯಗಳು ಮತ್ತು ಸೇವೆಗಳು.

  • ಯಾವುದೇ ತಾರತಮ್ಯವಿಲ್ಲದೆ ಎಲ್ಲರಿಗೂ ಲಭ್ಯವಾಗಬೇಕು.
  • ಯಾವುದೇ ಅಡೆತಡೆಯಿಲ್ಲದೆ ಎಲ್ಲರಿಗೂ ಅವಕಾಶವಿರಬೇಕು.
  • ಯಾವುದೇ ಅಪವಾದದ ಆಧಾರದಲ್ಲಿ ನಿರಾಕರಣೆಯಾಗಬಾರದು.

ಉದಾಹರಣೆಗೆ

ಮುಂದುವರಿದಂತೆ ಕೆಲವು ಸಮುದಾಯದ ವಿಶೇಷ ಅವಶ್ಯಕತೆಗಳನ್ನು ಪೂರೈಸಬೇಕು. ಉದಾಹರಣೆಗೆ: ವಿಕಲಾಂಗರಿಗೆ ಅರ್ಥಪೂರ್ಣ ಜೀವನವನ್ನು ನಡೆಸಲು ಕೆಲವು ಸಾಧನ ಸಲಕರಣೆಗಳ ಅವಶ್ಯಕತೆಯಿರುತ್ತದೆ. ಸೇವೆಗಳು ಲಭ್ಯವಾಗಲಾರದಂತಹ ತೀರಾ ಒಳ ಪ್ರದೇಶಗಳಲ್ಲಿ ವಾಸವಿರುವ ಜನರಿಗೆ ಸೇವೆಗಳು ಲಭ್ಯವಾಗುವಂತೆ ಮಾಡಲು ಪರಿಶ್ರಮ ಬೇಕಾಗುತ್ತದೆ.

ಆರೋಗ್ಯದಲ್ಲಿ ಸಮತೆಯನ್ನು ಖಚಿತಪಡಿಸಿಕೊಳ್ಳಲು ಅಸಮಾನತೆಯಿದ್ದು ಕ್ಷೇತ್ರಗಳನ್ನು ಪರಿಶೀಲಿಸುವ ಅವಶ್ಯಕತೆಯಿದೆ.

  • ಅಸಮಾನತೆಯಿರುವಲ್ಲಿ- ಅನಾರೋಗ್ಯ, ಖಾಯಿಲೆ, ಅಹಿಂಸೆ ಮತ್ತು ಸಾವು.
  • ಅಸಮಾನತೆಯು ಜನರನ್ನು ಆರೋಗ್ಯ ಸೇವೆ ಮತ್ತು ಸೌಲಭ್ಯಗಳನ್ನು ಬಳಸಿಕೊಳ್ಳಲು ತಡೆಯೊದ್ದುತ್ತದೆ.
  • ಅಸಮಾನತೆಯು ಆರೋಗ್ಯ ಮತ್ತು ಜೀವನಕ್ಕಾಗಿ ಜನ ತಮ್ಮನ್ನು ಹಕ್ಕನ್ನು ಸಾಧಿಸಲು ತಡೆಯೊದ್ದುತ್ತದೆ.

ಭಾರತ ಸಮಾಜ: ಭಾರತ ವೈವಿಧ್ಯಮಯ ದೇಶ

  • ಇಲ್ಲಿ ಅನೇಕ ಜಾತಿ ಮತ್ತು ಧರ್ಮಗಳಿಗೆ ಸೇರಿದ ಜನರಿದ್ದಾರೆ.
  • ಬೌಗೋಳಿಕವಾಗಿ ಬೇರೆ ಬೇರೆ ಭಾಗದಲ್ಲಿ ವಾಸಿಸುವ ಜನ ಬೇರೆ ಬೇರೆ ಭಾಷೆಗಳನ್ನಡುತ್ತಾರೆ.
  • ಅವರು ಬೇರೆ ಬೇರೆ ಸಂಪ್ರದಾಯ ಮತ್ತು ಪದ್ದತಿಗಳನ್ನು ಆಚರಿಸುತ್ತಾರೆ. ಇದೇ ಭಾರತದ ವೈವಿದ್ಯತೆಯ ನಿಜವಾದ ಶಕ್ತಿ. ಆದರೆ ಭಾರತದಲ್ಲಿ ಆಳವಾಗಿ ಬೇರೂರಿರುವ ಅಸಮಾನತೆಗಳಿವೆ. ಸಾಮಾಜಿಕ ಸಬಲರಾಗಿಲ್ಲದಿರುವ  ಕಾರಣಗಳಿಂದ ತಾರತಮ್ಯತೆ ಮತ್ತು ಆರ್ಥಿಕ ಸಮಾಜದಲ್ಲಿ ಕೆಲವು ಗುಂಪಿನ ಜನ ತೊಂದರೆ ಅನುಭವಿಸುವನ್ತಾಗುತ್ತದೆ.
  • ಮಹಿಳೆಯರು
  • ದಲಿತರು
  • ಬುಡಕಟ್ಟು ಜನಾಂಗ
  • ವಿಶೇಷ ಅಗತ್ಯವುಳ್ಳವರು
  • ಧಾರ್ಮಿಕ ಅಲ್ಪ ಸಂಖ್ಯಾತರು
  • ಇವು ನಮಗೆ ನಾವೇ ಕೆಲವು ಪ್ರಶ್ನೆಗಳನ್ನು ಹಾಕಿಕೊಂಡು, ಅಸಮಾನತೆಗಳನ್ನು ಕಡಿಮೆ ಮಾಡಲು ಪ್ರತಿಕ್ರಯಿಸುವಂತೆ ಮಾಡಿವೆ.
  • ನಾವು ಈ ಗುಂಪುಗಳನ್ನು ಕೆಟ್ಟದಾಗಿ ಏಕೆ ನಡೆಸಿಕೊಂಡಿದ್ದೇವೆ?
  • ಇದರಿಂದಾಗುವ ಪರಿಣಾಮಗಳು/ ಅನಾಹುತಗಳೆನು?
  • ಈ ಅಸಮಾನತೆಗಳನ್ನು ಸರಿಪಡಿಸಿ ಕೊಳ್ಳಲು ನಾವೇನು ಮಾಡಬೇಕು?

ಮಹಿಳೆ ಮತ್ತು ಆರೋಗ್ಯ

ಮಾದೇವಿಯ ಕತೆಯನ್ನು ಕೇಳೋಣ.

ಮಾದೇವಿ ೧೪ ವರ್ಷದ ಹುಡುಗಿ. ಅವಳ ತಂದೆ ತಾಯಿಯರಿಗೆ ಒಟ್ಟು ನಾಲ್ಕು ಮಕ್ಕಳಲ್ಲಿ ಹಿರಿಯವಳು. ಇವಳಿಗೆ ಮೂರು ಜನ ತಂಗಿಯರಿದ್ದಾರೆ, ಅವರು ೧೧ ವರ್ಷ, ೭ ವರ್ಷ, ಮತ್ತು ೩ ವರ್ಷದವರು. ಅವರದು ಕೂಲಿ ಕೆಲಸ ಅವರಿಗೆ ಸ್ವಂತ ಜಮೀನಿಲ್ಲ. ಗ್ರಾಮದ ಜಮೀನ್ದಾರನ ಮನೆಯಲ್ಲಿ ಕೂಲಿ ಕೆಲಸ ಮಾಡುತ್ತಾರೆ.

ಮಾದೇವಿ ತುಂಬಾ ಚಟುವಟಿಕೆಯುಳ್ಳ ಹುಡುಗಿ. ಯಾವಾಗಲೂ ಮನೆಯಿಂದ ಹೊರಗಿರಲು ಬಯಸುತ್ತಾಳೆ. ಮರ ಹತುವುದು, ಹಳ್ಳಿಯ ಕೆರೆಯಲ್ಲಿ ಈಜುವುದು ಇವು ತುಂಬಾ ಪ್ರಿಯವಾದ ಕೆಲಸಗಳು ಅವಳ ತಾಯಿ ಅನೇಕ ಬಾರಿ, "ನೀನ್ಯಾಕೆ ಹುಡುಗಿಯಾಗಿ ಹುಟ್ಟಿದೆ? ನೀನೂ ನನ್ ತರಾ ಕರ್ಮ ಅನುಭವಿಸಬೇಕಾಗುತ್ತೆ" ಅಂತ ಹೇಳ್ತಾಳೆ. ಮಾದೇವಿಗೆ ೫ ವರ್ಷ ಆದಾಗ ಅವಳು ಅಂಗನವಾಡಿಗೆ ಹೋಗಲು ಆರಂಭಿಸಿದಳು. ಅವಳು ತನಗಾಗಿ ಸ್ಲೇಟು, ಬಳಪವನ್ನು ಕೊಂದ ದಿನವನ್ನ ಇನ್ನೂ ನೆನಪಿಸಿಕೊಳ್ಳುತ್ತಾಳೆ. ತನ್ನದೇ ಆದ ಸ್ಲೇಟಿನಲ್ಲಿ ಕನ್ನಡದ ಅಕ್ಷರಗಳನ್ನು ಅಭಿಮಾನದಿಂದ ಬರೆದಳು.

ಮಾದೇವಿ ೮ ವರ್ಷದವಳಿದ್ದಾಗ ಅವಳ ತಾಯಿಗೆ ವಿಪರೀತ ಖಾಯಿಲೆಯಾಯಿತು. ಅವಳಿಗೆ ಹೆರಿಗೆಯಾಗಿ  ಮಾದೇವಿಗೆ ಪುಟ್ಟ ತಂಗಿ ಹುಟ್ಟಿದಳು. ಸಿಸ್ಟರ್ ಹೇಳಿದಳು "ನೀನು ಬದುಕಿದ್ದೇ ನಿನ್ನ ಅದೃಷ್ಟ ನೀನು ಉಮಬಾ ಸುಸ್ತಾಗಿದ್ದಿಯ ನಿನ್ನಲ್ಲಿ ರಕ್ತವೇ ಇಲ್ಲ" ಎಂದು.

ಮಾದೇವಿಯ ಪ್ರಪಂಚವೆಲ್ಲಾ ತಲೆಕೆಳಗಾಯಿತು. ಅವಳು ಶಾಲೆ ಬಿಟ್ಟಳು. ಅವಳ ಸಂತಸದ ದಿನಗಳು ಮುಗಿದವು. ಬೆಳಿಗ್ಗೆ ಬೇಗ ಎದ್ದು ಮನೆಗೆ ಬಾವಿಯಿಂದ ನೀರು ತರಬೇಕು. ಒಲೆಗೆ ಬೆಂಕಿ ಹಾಕಿ ಅಡುಗೆ ಮಾಡಬೇಕು. ಅವಳ ತಂದೆ ಕೆಲಸಕ್ಕೆ ಹೋಗುವ ಮುಂಚೆ ತಾಯಿ ಎದ್ದು ಅವರಿಗೆ ಗಂಜಿ ಮಾಡಿಕೊದುವಳು. ಮಾದೇವಿ ಪಾತ್ರೆ ತೊಳೆದು ತಂಗಿಯನ್ನು ಅಂಗನವಾಡಿಗೆ ಬಿಟ್ಟುಬರಬೇಕು. ಪುಟ್ಟ ತಂಗಿಯನ್ನು ನೋಡಿಕೊಳ್ಳಲು ನೆರವಾಗಬೇಕು ಹೀಗೆ ದಿನವೂ ಕೆಲಸದಿಂದಲೇ ಕಳೆಯುತ್ತಿತ್ತು.

ಅವಳು ಶಾಲೆ ಬಿಟ್ಟು ೪ ವರ್ಷಗಳ ನಂತರ, ಅವಳ ತಾಯಿಗೆ ಇನ್ನೊಂದು ಮಗುವಾಯಿತು. ಅದೂ ಹೆಣ್ಣೇ! ಅದರಿಂದ ಕೋಪಗೊಂಡ ಅವಳ ಅಪ್ಪ ಚೆನ್ನಾಗಿ ಕುಡಿದು ಬಂದು ಅಮ್ಮನ ಜೊತೆ ಜಗಳ ಶುರು ಮಾಡಿದ. ಕೆಲವು ವಾರಗಳ ಹಿಂದೆ ಅವನ ಹೊಡೆತದಿಂದ ಅಮ್ಮನ ಕೈ ಮುರಿಯಿತು, ಸ್ತಳೀಯ ಆಸ್ಪತ್ರೆಗೆ ಕರೆದೊಯ್ದರು, ಅವಳ ಕೈಗೆ ಪ್ಲಾಸ್ಟರ್ ಹಾಕಲಾಯಿತು. ಇದರಿಂದ ಮಾದೇವಿ ಅಸಹಾಯಕಳಾದಳು ಅವಳಿಗೆ ತಂದೆಯ ಬಗ್ಗೆ ತುಂಬಾ ಕೋಪ ಬಂತು. ತಾಯಿಗೆ ಯಾವ ರೀತಿ ಸಹಾಯ ಮಾಡಬೇಕೆಂದು ತೋರದಾಯಿತು.

ಮಾದೇವಿಗೆ ಯಾವುದೇ ಜವಾಬ್ದಾರಿಯಿಲ್ಲದ, ಆಟವಾಡಿಕೊಂಡಿದ್ದ ಶಾಲಾ ದಿನಗಳ ನೆನಪು ಮಾಡಿಕೊಳ್ಳುತ್ತಾಳೆ.ತಾನು ದೊಡ್ಡವಳಾಗಿ ಒಬ್ಬ ಮುಖ್ಯ ವ್ಯಕ್ತಿಯಾಗಿ, (ಅಧಿಕಾರಿಯಾಗುವೆನೆಂದು) ತಾನು ಹೇಳಿದ ಮಾತನ್ನ ಕಲ್ಪನೆ ಮಾಡಿಕೊಳ್ಳುತ್ತಾಳೆ, ಆದರೆ ಆ ಕನಸು ಮುಂದೆಂದೂ ನನಸಾಗುವುದಿಲ್ಲ. ಅವಳ ತಂದೆ ತನ್ನ ಜವಾಬ್ದಾರಿ ಕಳೆದುಕೊಳ್ಳಲು ಮದುವೆಗೆ ಒಬ್ಬ ಗಂಡನ್ನು ನೋಡಿದ್ದಾನೆ.

ಅವಳ ತಾಯಿ ಹುಟ್ಟಿದ್ದೇ ಕೆಟ್ಟ ಕರ್ಮ ಎಂದು ಏಕೆ ಹೇಳುತ್ತಿದ್ದಳು ಎಂದು ಅವಳಿಗೀಗ ಅರ್ಥವಾಗುತ್ತಿದೆ.

ಈ ಕತೆ ನಮಗೆ ಚಿರಪರಿಚಿತವಲ್ಲವೇ? ಮಾದೇವಿಯರನ್ನು ನಾವು ನಮ್ಮ ಗ್ರಾಮಗಳಲ್ಲಿ ಕುಟುಂಬಗಳಲ್ಲಿ ಮತ್ತು ಮನೆಗಳಲ್ಲಿ ನೋಡುತ್ತಿಲ್ಲವೆ?

ಮಾದೇವಿಯ ಕತೆ ನಮ್ಮ ದೇಶದ ಅನೇಕ ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಕತೆ. ಮಾದೇವಿ ಮತ್ತು ಅವಳ ತಾಯಿಯಂತೆಯೇ ಅನೇಕ  ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಈ ಕೆಳಗಿನವುಗಳಿಂದ ವಂಚಿತರಾಗಿದ್ದಾರೆ.

  • ಶಿಕ್ಷಣ ಪಡೆಯುವಲ್ಲಿ
  • ಎಳೆ ವಯಸ್ಸಿನಲ್ಲೇ ಹೆಚ್ಚಾದ ಕೆಲಸದ ಹೊರೆ
  • ತಮ್ಮ ಬಾಲ್ಯವನ್ನು ಆಟಪಾಠಗಳಲ್ಲಿ ಕಳೆಯುವ
  • ಅಷ್ಟೇ ಅಲ್ಲದೆ ಕೆಳಗಿನ ಕಾರ್ಯಗಳಲ್ಲಿ ತೀರ್ಮಾನ ತೆಗೆದುಕೊಳ್ಳುವುದರಿಂದ ವಂಚಿತರಾಗಿದ್ದಾರೆ.
  • ಹೆಚ್ಚಿನ ಶಿಕ್ಷಣ ಪಡೆಯುವಲ್ಲಿ
  • ವೃತ್ತಿ ಆಯ್ಕೆ ಮಾಡುವಲ್ಲಿ
  • ಬಾಳ ಸಂಗಾತಿ ಆರಿಸಿಕೊಳ್ಳುವುದರಲ್ಲಿ
  • ತನ್ನ ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ
  • ಮಕ್ಕಳನ್ನು ಪಡೆಯುವಲ್ಲಿ ಮತ್ತು ಅಂತರದ ಹೆರಿಗೆಯಾಗುವಲ್ಲಿ
  • ಆಸ್ತಿ ಮೇಲಿನ ಒಡೆತನದ ವಿಷಯದಲ್ಲಿ
  • ತಾನು ದುಡಿದ ಆದಾಯ ಖರ್ಚು ಮಾಡುವಲ್ಲಿ.

ನಿರಂತರ ದಬ್ಬಾಳಿಕೆ

  • ಬೈಗುಳ, ಹೊಡೆತ, ನಿಂದನೆ, ಚುಚ್ಚು ಮಾತು, ಕೊಲೆಗೈಯುವುದು ಮುಂತಾದ ಹಿಂಸಾತ್ಮಕ ಕ್ರಮಗಳು.
  • ದುಡಿಮೆಗೆ ಕಡಿಮೆ ಕೂಲಿ
  • ಅಪಾಯಕಾರಿ ಕೆಲಸಗಳು
  • ಆದಾಯ ಇಲ್ಲದ ಅಥವಾ ಕೌಶಲ ಇಲ್ಲದ ಕೆಲಸಗಳಲ್ಲಿ ಹೆಚ್ಚು ತೊಡಗಿಸುವುದು.

ಈ ಅಸಮಾನತೆಗಳು, ಹಿಂಸೆ ಮತ್ತು ತಾರತಮ್ಯಗಳು ಅವಳ ಭೌತಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ತುಂಬಾ ಗಂಭೀರ ಪರಿಣಾಮಗಳನ್ನು ಉಂಟು ಮಾಡುತ್ತವೆ.

  • *ಅಪೌಷ್ಟಿಕತೆ
  • ರಕ್ತ ಹೀನತೆ
  • ಮಾತೃ ಮರಣ
  • ಖಿನ್ನತೆ ಮತ್ತು ಆತ್ಮ ಹತ್ಯೆಗೆ ಪ್ರೇರಣೆ
  • ಕೀಳರಿಮೆ
  • ಅತಿಯಾದ ಆಯಾಸ/ ಸುಸ್ತು
  • ಇದೆಲ್ಲದರ ನಡುವೆಯೂ ಮಹಿಳೆ ಕಷ್ಟ ಪಟ್ಟು ದುಡಿದು ಅವಳ ಸಂಸಾರ ಮತ್ತು ಸಮುದಾಯಕ್ಕೆ ನೆರವಾಗುತ್ತಿದ್ದಾಳೆ.
  • ಹೊಲಗದ್ದೆ ಕಚೇರಿ, ಕಾರ್ಖಾನೆಗಳಲ್ಲಿ ದುಡಿಯುತ್ತಿದ್ದಾರೆ.
  • ವ್ಯಾಪಾರದಲ್ಲಿ ತೊಡಗಿದ್ದಾರೆ
  • ಮನೆಯಲ್ಲಿ ಕುಟುಂಬದ ಜವಾಬ್ದಾರಿ ಹೊತ್ತಿದ್ದಾರೆ.
  • ಮಕ್ಕಳ ಪಾಲನೆ ಪೋಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ
  • ಅವಕಾಶ ದೊರೆತಿರುವಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲೂ ತಮ್ಮ ಕೊಡುಗೆ ನೀಡುತ್ತಿದ್ದಾರೆ.
  • ಸ್ವ - ಸಹಾಯ ಸಂಘಗಳನ್ನು ನಡೆಸುತ್ತಿದ್ದಾರೆ.
  • ಪಂಚಾಯತಿಯ ವ್ಯವಸ್ತೆಯಲ್ಲಿ ಸಕ್ರಿಯ ಪಾಲುದಾರರಾಗಿದ್ದಾರೆ.
  • ಸಹಕಾರಿ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ. ಸಾಮಾಜಿಕ ಹೋರಾಟಗಳನ್ನು ನಡೆಸಿದ್ದಾರೆ.

ಸಮಾಜಕ್ಕೆ  ಮಹಿಳೆ ಪುರುಷನಷ್ಟೇ ಕೊಡುಗೆಗಳನ್ನು ನೀಡುತ್ತಿದ್ದರೂ ಅವಕಾಶಗಳಲ್ಲಿ ತಾರತಮ್ಯ ಏಕೆ? ಅವಳಿಗೂ ಪುರುಷನಷ್ಟೇ ಸ್ವಾತಂತ್ರ್ಯ ಅನುಭವಿಸುವ, ತನ್ನ ಜೀವನ ತಾನು ರೂಪಿಸಿಕೊಳ್ಳುವ ಅವಕಾಶಗಳಿರಬೇಕು.ಮಾದೇವಿಯರಿಗೆ ನಾವು ಅವರ ಸಾಮರ್ಥ್ಯ ಮತ್ತು ಕನಸುಗಳನ್ನು ನನಸು ಮಾಡಿಕೊಳ್ಳುವ ಅವಕಾಶ ಕೊಡಬೇಡವೇ? ಈ ನಿಟ್ಟಿನಲ್ಲಿ ಸಮಾಜದಲ್ಲಿರುವ ಕಟ್ಟು ಪಾಡುಗಳನ್ನು ಮೀರಿದಲ್ಲಿ ...... ಇಂತಹ ಬದಲಾವಣೆಗೆ ನಾವೆಲ್ಲಾ ಸಿದ್ದರಿರಬೇಕು.

ಕೇವಲ ಮಕ್ಕಳನ್ನು ಹೆರಲು, ಮಕ್ಕಳಿಗೆ ಹಾಲುಣಿಸಲು, ಪೋಷಿಸಲು, ಕುಟುಂಬದ ನೊಗ ಹೊರಲು ಮಹಿಳೆ ಆರೋಗ್ಯವಾಗಿರಬೇಕು ಎನ್ನುವುದನ್ನು ಬಿಟ್ಟು "ಆರೋಗ್ಯ" ಮಹಿಳೆಯ ಹಕ್ಕು ಎನ್ನುವ ನೋಟ ಬೆಳೆಸಿಕೊಳ್ಳೋಣ. ಈ ಸಂದರ್ಭದಲ್ಲಿ ನಾವು ಮಾದೇವಿಯಂತಹ ಹೆಣ್ಣು ಮಕ್ಕಳ ಕನಸನ್ನು ನನಸಾಗಿಸಲು ಕಾರ್ಯೋನ್ಮುಖರಾಗೋಣ.

  • ನಿರ್ಭೀತವಾಗಿ ಓಡಾಡಲು, ಜೀವಿಸಲು ಪೂರಕವಾದ ವಾತಾವರಣ ನಿರ್ಮಿಸುವುದು.
  • ನಿಮ್ಮ ಗ್ರಾಮದಲ್ಲಿ ಹೆಣ್ಣು ಮಕ್ಕಳಿಗೆ ಕಿರುಕುಳ ನೀಡದಂತೆ ಗಂಡು ಮಕ್ಕಳು ಮತ್ತು ಪುರುಷರನ್ನು ಸಂವೆದನಾಶೀಲರನ್ನಾಗಿ ಮಾಡಿ
  • ಹೆಣ್ಣು ಮಕ್ಕಳು  ಕಿರುಕುಳದ ಘಟನೆಯನ್ನು ವರದಿ ಮಾಡಿದಾಗ ಅದನ್ನು ಗಂಬೀರವಾಗಿ ಪರಿಗಣಿಸುವುದು.
  • ಹೆಣ್ಣು ಮಕ್ಕಳ ಪರವಾಗಿ ಮಧ್ಯ ಪ್ರವೇಶಿಸಿ ಅದನ್ನು ಸಮುದಾಯದ ಗಮನಕ್ಕೆ ತನ್ನಿ
  • ಮಹಿಳೆಯರ ಮೇಲಿನ ಹಿಂಸಾಚಾರವನ್ನು ನಿಲ್ಲಿಸುವುದು.
  • ಪುರುಷರು ತಮ್ಮ ಹೆಂಡತಿಯರನ್ನು ಹೊಡೆಯದಂತೆ ಸ್ಥಳೀಯ ಒತ್ತಡ ಗುಂಪುಗಳನ್ನು ರಚಿಸಿ
  • ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿರುವ ಮಹಿಳೆ ಸಹಾಯ ಪಡೆಯಲು ಅವಳನ್ನು ಬೆಂಬಲಿಸಿ.
  • ನಮ್ಮಲ್ಲಿರುವ ಮನೋಭಾವವನ್ನು  ಬದಲಾಯಿಸಿಕೊಂಡು
  • ಅವರ ಆಸೆ, ಆಕಾಂಕ್ಷೆ, ಅಭಿಪ್ರಾಯಗಳಿಗೆ ಬೆಲೆ ಕೊಡುವುದು.
  • ಅವರ ಭಿನ್ನತೆಯನ್ನು ಗೌರವಿಸುವುದು.
  • ಅವರನ್ನು ನೋಡುವ ಸತ್ಕರಿಸುವ, ಬೆಳೆಸುವ, ಪ್ರೋತ್ಸಾಹಿಸುವ ರೀತಿಯನ್ನು ಸಕಾರತ್ಮಗೊಳಿಸಿಕೊಳ್ಳುವುದು.
  • ಕುಟುಂಬದ ಎಲ್ಲಾ ಆಗು ಹೋಗುಗಳಲ್ಲಿ ಮಹಿಳೆಯ ಅಭಿಪ್ರಾಯಗಳಿಗೆ ಮನ್ನಣೆ ಕೊಡುವುದು.
  • ಸಾಮಾಜಿಕ, ರಾಜಕೀಯ ಆರ್ಥಿಕ ಹಾಗೂ ಆಡಳಿತಾತ್ಮಕ ನಿರ್ಧಾರಗಳಲ್ಲಿ ಮಹಿಳೆಗೆ ಸರಿಸಮ ಅವಕಾಶಗಳನ್ನು ಕಲ್ಪಿಸುವುದು.
  • ಅಭ್ಯಾಸ ಮಾಡುವಾಗ, ಎಲ್ಲಾ ಜಾತಿ ಮತ್ತು ಸಮುದಾಯದ ಎಲ್ಲಾ ಮಹಿಳೆಯರೂ ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಿ.
  • ಗ್ರಾಮದ ಮಹಿಳೆಯರ ಆರೋಗ್ಯ ಸಮಸ್ಯೆಗಳನ್ನು ಒಟ್ಟಾರೆಯಾಗಿ ವಿಶ್ಲೇಷಿಸಿ
  • ಕಳೆದ ವರ್ಷದಲ್ಲಿ ಮಹಿಳೆಯರಲ್ಲಿ / ಹದಿಹರೆಯದ ಹೆಣ್ಣು ಮಕ್ಕಳಲ್ಲಿ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಪ್ರಮುಖವಾಗಿ ಕಂಡುಬರುತ್ತವೆ?
  • ಎಷ್ಟು ಜನ ಮಹಿಳೆಯರು / ಹದಿಹರೆಯದ ಹೆಣ್ಣು ಮಕ್ಕಳು ಮರಣ ಹೊಂದಿದ್ದಾರೆ? ಮತ್ತು ಯಾವ ಕಾರಣಕ್ಕಾಗಿ ಈ ಮಹಿಳೆಯರು / ಹೆಣ್ಣು ಮಕ್ಕಳು ಯಾವುದೇ ಒಂದು ಜಾತಿ / ಧರ್ಮಕ್ಕೆ ಸೇರಿದವರೇ?
  • ಎಷು ಜನ ಮಹಿಳೆಯರು / ಹೆಣ್ಣು ಮಕ್ಕಳಿಗೆ ಗ್ರಾಮದಲ್ಲಿ ವಿವಿಧ ಆರೋಗ್ಯ ಸೇವೆಗಳಿಗೆ ಅವಕಾಶವಿತ್ತು? ಮಹಿಳೆಯರು / ಹೆಣ್ಣು ಮಕ್ಕಳಲ್ಲಿ ಯಾರಿಗೆ ಆರೋಗ್ಯ ಸೇವೆ ಪಡೆಯಲು ಬಹಳ ಕಡಿಮೆ ಅವಕಾಶಗಳಿತ್ತು (ವಯಸ್ಸು, ಜಾತಿ, ಧರ್ಮದ ಆಧಾರದಲ್ಲಿ)
  • ಎಲ್ಲಾ ಜಾತಿ ಮತ್ತು ಸಮುದಾಯಕ್ಕೆ ಸೇರಿದ ಮಹಿಳೆಯರನ್ನು ಸಂಪರ್ಕಿಸಿ ಕಂಡುಕೊಂಡ ಸಮಸ್ಯೆಗಳಿಗೆ ಪರಿಹಾರಗಳನ್ನು ಯೋಜಿಸಿ.

ಸಮಾಜದಲ್ಲಿ ದಲಿತರು

"ದಲಿತ" ಎಂಬುದು ತುಳಿತಕ್ಕೊಳಗಾದ ನಿರ್ಲಕ್ಷ್ಯಕ್ಕೊಳಗಾದ ಅಸ್ಪ್ರುಶ್ಯತೆಗೊಳಗಾದ ಸಮಾಜದ ಕಟ್ಟ ಕಡೆಯ ಜನರನ್ನು ಪ್ರತಿನಿದಿಸುವ ಪದವಾಗಿದೆ. ಶೇಕಡಾ ೮೦ ರಷ್ಟು ದಲಿತರು ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಬದುಕಿಗಾಗಿ ಇತರರನ್ನೇ ಅವಲಂಬಿಸಿದ್ದಾರೆ.

  • ಜಾತಿ ದಬ್ಬಾಳಿಕೆ
  • ಹಲ್ಲೆ
  • ತಾರತಮ್ಯ
  • ಅಸ್ಪೃಶ್ಯತೆ
  • ದೈಹಿಕ - ಮಾನಸಿಕ ಹಿಂಸೆಗಳು.
  • ಅವಮಾನ
  • ಮಹಿಳೆಯರೊಂದಿಗೆ ದುರ್ನಡತೆ
  • ಇಂತಹ ಕೆಟ್ಟ ಪರಿಸ್ಥಿತಿಯಿಂದಾಗಿ ದಲಿತರಿಗೆ ಶಿಕ್ಷಣ, ಆರೋಗ್ಯ, ಅಗತ್ಯ ಸೌಲಭ್ಯಗಳು ಸಿಗುತ್ತಿಲ್ಲ. ಊಟ ತಿಂಡಿ, ಬಟ್ಟೆ-ಬರೆ ಸಹ ಹೊಂದಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

 

ಶತ -ಶತಮಾನಗಳಿಂದ ದಬ್ಬಾಳಿಕೆಗೊಳಗಾದ ದಲಿತರಿಗೆ ಈಗಲೂ ಭೂಮಿ ಹೊಂದಲು ಸಾಧ್ಯವಾಗಿಲ್ಲ.ಆದ್ದರಿಂದ:

  • ಹೆಚ್ಚಿನ ದಲಿತರು ಈಗಲೂ ಕೂಲಿಕಾರರಾಗಿಯೇ ಉಳಿದಿದ್ದಾರೆ.
  • ಶೇಕಡಾ ೫೦ ರಷ್ಟು ದಲಿತರು ಬಡತನ ರೇಖೆಗಿಂತ ಕೆಳಗಿದ್ದಾರೆ.
  • ಜೀತ ಮಾಡುತ್ತಿರುವವರಲ್ಲಿ ಹೆಚ್ಚಿನವರು ದಲಿತರೇ ಆಗಿದ್ದಾರೆ.
  • ಸಮಾಜದಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ಪಡೆಯುವಲ್ಲಿ ದಲಿತರದ್ದು ಕಡೆಯ ಪಾಲು.
  • ವಿದ್ಯಾವಂತ ಉದ್ಯೋಗಸ್ಥ, ಆಸ್ಥಿವಂತ ದಲಿತರ ಸಂಖ್ಯೆ ಬಹಳ ಕಡಿಮೆ.
  • ಜಾತಿ ತಾರತಮ್ಯಕ್ಕೆ ತುತ್ತಾಗಿರುವ ದಲಿತ ಸಮುದಾಯವು:
  • ಉತ್ತಮ ಆರೋಗ್ಯ ಸೇವೆಗಳನ್ನು ಹೊಂದಲು ಸಾಧ್ಯವಾಗಿಲ್ಲ.
  • ದಲಿತರನ್ನು ದೈಹಿಕವಾಗಿ ಮುಟ್ಟಲು, ಉಪಚರಿಸಲು ಅಗತ್ಯ ಆರೋಗ್ಯ ಸೇವೆ ನೀಡಲು ಆರೋಗ್ಯ ವ್ಯವಸ್ಥೆಯೂ ಮುಂದಾಗಿಲ್ಲ.
  • ದಲಿತರಿಗೆ ಆರೋಗ್ಯ ನಿರಾಕರಣೆಯ ಪ್ರಕರಣಗಳು ಇಂದಿಗೂ ವರದಿಯಾಗುತ್ತಿವೆ.

ಹಾಗೆಯೇ ಸಮಾಜದ ಎಲ್ಲ ಕಡೆಗಳಲ್ಲಿಯೂ ನಿರ್ಲಕ್ಷ್ಯಕ್ಕೆ ಒಳಗಾಗಿರುವ ದಲಿತ ಸಮುದಾಯ ಆರೋಗ್ಯ ಸೇವೆಗಳನ್ನು ಗಿಟ್ಟಿಸುವಲ್ಲಿಯೂ ಸಹ ಹಿಂಜರಿಕೆ ತೋರಿಸುತ್ತದೆ. ಇದರಿಂದಾಗಿ ದಲಿತರ ಆರೋಗ್ಯ ಪರಿಸ್ಥಿತಿ ಇತರರಿಗಿಂತ ಹೀನಾಯವಾಗಿರಲು ಕಾರಣವಾಗಿರುತ್ತದೆ.

ದಲಿತ ಮಹಿಳೆಯರ ವಿಷಯದಲ್ಲಂತೂ ತಾರತಮ್ಯ ಎರಡರಷ್ಟಿದೆ. ಒಂದು ಜಾತಿಯ ಕಾರಣಕ್ಕೆ. ಮತ್ತೊಂದು ಮಹಿಳೆ ಎಂಬ ಕಾರಣಕ್ಕೆ. ಜಾತಿ ಎಂಬ ಒಂದು ಕಾರಣಕ್ಕಾಗಿಯೇ ದಲಿತ ಸಮುದಾಯ ಎಷ್ಟೆಲ್ಲಾ ನಷ್ಟ ಹೊಂದಿದೆ ಎಂಬುದನ್ನು ಮೇಲೆ ಗಮನಿಸಿದ್ದೇವೆ. ಇದನ್ನು ದುಪ್ಪಟ್ಟು ಮಾಡಿ ಮಹಿಳೆಯರಿಗೆ ಅನ್ವಯಿಸಿ ನೋಡಿ.

ಈ ಸ್ಥಿತಿಯನ್ನು ಸುಧಾರಿಸುವುದು ಹೇಗೆ?

  • ಸಂಪನ್ಮೂಲಗಳ ಬಳಕೆಗೆ ಇತರರಂತೆ ಅವರಿಗೂ ಮುಕ್ತ ಅವಕಾಶ ಕಲ್ಪಿಸುವುದು:.
  • ಭೂ-ಸುಧಾರಣೆಗಳ ಮೂಲಕ ದಲಿತರಿಗೆ ಭೂಮಿ ಲಭ್ಯವಾಗಿಸುವುದು.
  • ವಸತಿಗಳನ್ನು ಕಲ್ಪಿಸುವುದು
  • ಸಾರ್ವಜನಿಕ ನೀರಿನ ಮೂಲಗಳಿಂದ ಮುಕ್ತವಾಗಿ ನೀರನ್ನು ಪಡೆಯುವಂತೆ ನೋಡಿಕೊಳ್ಳುವುದು.
  • ಗರಿಷ್ಟ ಕೆಲಸ ಹಾಗೂ ಕನಿಷ್ಠ ವೇತನದಿಂದ ಮುಕ್ತಗೊಳಿಸುವುದು.
  • ಸಾರ್ವಜನಿಕ ಸ್ಥಳಗಳಿಗೆ ಮುಕ್ತ ಪ್ರವೇಶ ಹಾಗೂ ಸರಿಸಮಾನ ಉಪಚಾರವಿರುವಂತೆ ನೋಡಿಕೊಳ್ಳುವುದು.

ಆರೋಗ್ಯ ಸೇವೆಗಳನ್ನು ಕಲ್ಪಿಸುವಲ್ಲಿ ವಿಶೇಷ ಗಮನ ಹರಿಸುವುದು:

  • ದಲಿತರ ನಿರ್ದಿಷ್ಟವಾದ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಗ್ರಾಮದ ಕ್ರಿಯಾ ಯೋಜನೆಯಲ್ಲಿ ಆದ್ಯತೆ ನೀಡಿ ಪರಿಹಾರದತ್ತ ವಿಶೇಷ ಗಮನ ಹರಿಸುವುದು.
  • ಆರೋಗ್ಯ ಕಾರ್ಯಕರ್ತರು ದಲಿತ ಮನೆಗಳಿಗೆ ಭೇಟಿ ನೀಡುವಂತೆ ನೋಡಿಕೊಳ್ಳುವುದು.
  • ದಲಿತ ಮಹಿಳೆಯರಿಗೆ ಅಗತ್ಯ ತಪಾಸಣೆ, ಔಷಧಿ, ಉಪಚಾರಗಳನ್ನು ನೆರವೇರಿಸುವುದು.
  • ದಲಿತ ವಾಸಿತ ಪ್ರದೇಶಗಳು ಸ್ವಚ್ಚವಿರುವಂತೆ ನೋಡಿಕೊಳ್ಳುವುದು ಹಾಗೂ ಅದರ ಅಗತ್ಯದ ಕುರಿತು ಅವರನ್ನೂ ಪ್ರೇರೇಪಿಸುವುದು.
  • ಗ್ರಾಮದ ಎಲ್ಲಾ ಆರೋಗ್ಯ ಕಾರ್ಯಕ್ರಮಗಳಲ್ಲಿ ಅವರಿಗೆ ಹೆಚ್ಚಿನ ಆದ್ಯತೆ ನೀಡಿ ಅವರನ್ನೂ ಪಾಲ್ಗೊಲ್ಳುವಂತೆ  ಮಾಡುವುದು.

ನಮ್ಮ ಸಮಾಜದಲ್ಲಿ ವಿಶೇಷ ಅಗತ್ಯವುಳ್ಳವರು

ವಿಶೇಷ ಅಗತ್ಯವುಳ್ಳ ವ್ಯಕ್ತಿಯ ಬಗ್ಗೆ ಯೋಚಿಸಿದಾಗ ನಮ ಮನಸ್ಸಿಗೆ ಏನು ಬರುತ್ತದೆ? ಒಬ್ಬ "ಅಸಹಾಯಕ"ರನ್ನು ಇನ್ನೊಬ್ಬರು ನೋಡಿಕೊಳ್ಳಬೇಕಾದ ಚಿತ್ರವೆ? ನಮ್ಮ ಅನುಕಂಪ ಬಯಸುವ ವ್ಯಕ್ತಿಯೇ ನಾವು ಒಬ್ಬ ವಿಕಲಾಂಗ ವ್ಯಕ್ತಿಯನ್ನು ನೋಡಿದಾಗ ನಮ್ಮಲ್ಲಿ ಎಷ್ಟು ಜನ ವೈಕಲ್ಯಕ್ಕು ಮೀರಿ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಹೊರಡುತ್ತೇವೆ?.

ವಿಕಲಾಂಗರಾದ ವ್ಯಕ್ತಿಗಳನ್ನು ಅವರ ಹೆಸರು ಹಿಡಿದು ಕರೆಯುವುದಕ್ಕಿಂತ ಹೆಚ್ಚಾಗಿ ವಿಕಲಾಂಗತೆಯ ಹೆಸರಿನಿಂದ (ಕುರುಡ, ಕುಂಟ, ಮೂಗ ಇತ್ಯಾದಿ) ಕರೆಯುವುದೇ ಹೆಚ್ಚು.

೧೨ನೆ ಪಂಚವಾರ್ಷಿಕ ಯೋಜನೆಯಲ್ಲಿ (೨೦೦೭-೨೦೧೨) ನಮ್ಮ ದೇಶದಲ್ಲಿ ಶೇ.೫-೬ ರಷ್ಟು ಜನ ಸಂಖ್ಯೆಯನ್ನು ವಿಶೇಷ ಅಗತ್ಯವುಳ್ಳವರೆನ್ದು ಅಂದಾಜು ಮಾಡಿದೆ. ವಿಶೇಷ ಅಗತ್ಯವುಳ್ಳವರು ಎಲ್ಲಾ ಸಮುದಾಯದಲ್ಲಿದ್ದಾರೆ.ಎಲ್ಲಾ ವಯೋಮಾನದವರಲ್ಲಿದ್ದಾರೆ. ಬಡವ - ಶ್ರಿಮಂತರಲ್ಲಿದ್ದಾರೆ. ಮಹಿಳೆಯರು, ಪುರುಷರಲ್ಲಿ, ಎಲ್ಲಾ ಜಾತಿಯ ಧರ್ಮಗಳಲ್ಲೂ ಇದ್ದಾರೆ.

ನಮ್ಮ ಸಮಾಜದ ಅನೇಕ ಕಡೆಗಣಿಸಲ್ಪಟ್ಟ ಗುಂಪುಗಳಂತೆ, ವಿಶೇಷ ಅಗತ್ಯವುಳ್ಳವರೂ ಪ್ರತ್ಯೇಕವಾಗಿ ಯಾರಿಗೂ ಕಾಣಿಸಿಕೊಳ್ಳದಂತೆ ತಮ್ಮ ಜೀವನವನ್ನು ನಡೆಸಲು ಬಯಸುತ್ತಾರೆ. ಇಂತಹ ಮಕ್ಕಳನ್ನು ಹೊಂದಿರುವ ಪೋಷಕರು, ನಾವು ಬದುಕಿರುವವರೆಗೆ ನಾವು ಅವರ ಕಾಳಜಿ ಮಾಡುತ್ತೇವೆ ಅದಕ್ಕಾಗಿ ಅವರೇನೂ ಯೋಚಿಸಬೇಕಾಗಿಲ್ಲ" ಎನ್ನುತ್ತಾರೆ. ಬಡ ಕುಟುಂಬದವರಿಗೆ ತಮ್ಮ ವಿಶೇಷ ಅಗತ್ಯವುಳ್ಳ ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಲು ಸಾಧ್ಯವಾಗುವುದಿಲ್ಲ.

ವಿಶೇಷ ಅಗತ್ಯವುಳ್ಳ ಮಹಿಳೆಯರು ಹೆಚ್ಚು ತಾರತಮ್ಯವನ್ನು ಎದುರಿಸಬೇಕಾಗುತ್ತದೆ. ಅವರು ತಮ್ಮ ಕುಟುಂಬ ಮತ್ತು ಸಮುದಾಯಗಳಲ್ಲಿ ಸಂಪನ್ಮೂಲಗಳು ಮತ್ತು ಸೇವೆಗಳ ಕುರಿತಂತೆ ಸಮಾನ ಅವಕಾಶಗಳನ್ನು ಪಡೆಯಲಾಗುವುದಿಲ್ಲ.

ಉದಾ: ನೀರು ಮತ್ತು ನೈರ್ಮಲ್ಯ ಸೌಲಭ್ಯಗಳು, ಆರೋಗ್ಯ ಸೇವೆ ಮುಂತಾದ ವ್ಯವಸ್ಥೆಗಳಿಗೆ ಸುರಕ್ಷಿತವಾದ / ಸ್ವತಂತ್ರ್ಯವಾದ / ಗೌರವಯುತವಾದ ಅವಕಾಶ.

ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಗೆ ಬರುವುದು ಶಾಲೆಯಲ್ಲಿ ಉಳಿಯುವುದು ಕಡಿಮೆ. ಅವರು ಶಾಲೆಗೆ ಹೋದರೂ ಪ್ರಾಥಮಿಕ ಹಂತದಿಂದ ಮುಂದೆ ಹೋಗುವವರು ತುಂಬಾ ಕಡಿಮೆ ಇದರಿಂದ ಅವರು ಕಡಿಮೆ ಮಟ್ಟದ ಕೆಲಸ ಮಾಡಬೇಕಾಗಿ ಆದಾಯವೂ ಕಡಿಮೆಯಾಗುತ್ತದೆ. ಇಂಥ ಯುವಕರು ಹೆಚ್ಚಾಗಿ ನಿರುದ್ಯೋಗಿಗಳಾಗಿರುತ್ತಾರೆ. ಸಾಮಾನ್ಯ ಜನರಿರುವ ಕುಟುಂಬಗಳಿಗಿಂತ ವಿಶೇಷ ಅಗತ್ಯವುಳ್ಳ ವ್ಯಕ್ತಿಗಳನ್ನು ಹೊಂದಿರುವ ಕುಟುಂಬಗಳು ಆರ್ಥಿಕವಾಗಿ ದುರ್ಬಲರಾಗಿರುತ್ತಾರೆ. ಬೇರೆಲ್ಲಾ ವ್ಯಕ್ತಿಗಳಿಗೆ ಅವಶ್ಯಕತೆಗಳಿರುವಂತೆ ಈ ವಿಶೇಷ ಅಗತ್ಯವುಳ್ಳ ವ್ಯಕ್ತಿಗಳಿಗೂ ಅವಶ್ಯಕತೆಗಳಿರುತ್ತವೆ. ಇತರ ಮಕ್ಕಳಂತೆ ಈ ಮಕ್ಕಳಿಗೂ ಎಲ್ಲರಂತೆ ಶಿಕ್ಷಣ ಪಡೆಯಲು ಆಟ ಆಡುವ ಮನರಂಜನೆ ಮತ್ತು ಸುರಕ್ಷತೆಗೆ ಅವಕಾಶಗಳಿರಬೇಕು. ಇತರರಂತೆ ವಿಶೇಷ ಅಗತ್ಯವುಳ್ಳವರೂ, ಗೌರವಯುತವಾಗಿ ಘನತೆಯಿಂದ ಸಮುದಾಯಕ್ಕೆ ಆದಾಯ ತರುವಂತ ಜೀವನ ನಡೆಸಲು ಬಯಸುತ್ತಾರೆ. ವಿಶೇಷ ಅಗತ್ಯವುಳ್ಳವರು ಸಮುದಾಯದಲ್ಲಿ ಚಟುವಟಿಕೆಯಿಂದ ಭಾಗವಹಿಸಲು ಏಕೆ ಸಾಧ್ಯವಿಲ್ಲ? ಅವರು ನೋಡಲಾರರು / ಕೇಳಲಾರರು / ನಡೆಯಲಾರರು / ಅರ್ಥ ಮಾಡಿಕೊಳ್ಳಲಾರರು ಎಂಬ ಕಾರಣದಿಂದಲೇ ? ಅಥವಾ ಸಮುದಾಯವಾಗಿ ನಾವು ಅವರಿಗೆ ಅದೇ ತಡೆಗಳನ್ನು ಒಡ್ಡಿದ್ದೀವೆಯೇ?.

ಮನೋಭಾವನಾತ್ಮಕ ಅಡೆತಡೆಗಳು:

" ವಿಕಲತೆ, ಅವರ ಹಿಂದಿನ ಪಾಪದ ಫಲ" ಎಂಬ ಸಾಂಪ್ರದಾಯಿಕ ನಂಬಿಕೆಯಿದೆ. ಇಂತಹ ಸಾಮಾಜಿಕ ಮನೋಭಾವಗಳು ಆದೇ ಕುಟುಂಬದವರಲ್ಲಿದ್ದು, ವಿಕಲಾಂಗರನ್ನು ಸಂಪೂರ್ಣವಾಗಿ ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ತೊಡಗಿಸಿಕೊಳ್ಳಲು ಅಡ್ಡಿಪಡಿಸುತ್ತವೆ. ಮಾನಸಿಕ ಅಸ್ವಸ್ಥರನ್ನು ಸಮಾಜದಲ್ಲಿ ಇನ್ನೂ ಹೆಚ್ಚು ಕಳಂಕಿತರನ್ನಾಗಿ ನೋಡುವುದಲ್ಲದೆ ಸಮಾಜದ ಎಲ್ಲರು ದೂರವಿಟ್ಟಿರುತ್ತಾರೆ.

ಮಾಹಿತಿ ಮತ್ತು ಸಂವಹನದ ಅಡೆತಡೆಗಳು:

  • ವಿಶೇಷ ಅಗತ್ಯವುಳ್ಳ ವ್ಯಕ್ತಿಗಳನ್ನು ಅವಶ್ಯಕತೆಗಳನ್ನು ಕೇಳಲು ಮತ್ತು ಅರ್ಥಮಾಡಿಕೊಳ್ಳಲು ಕುಟುಂಬ / ಸಮುದಾಯಗಳಿಗೆ ಸಮಯವೇ ಇಲ್ಲ.
  • ಅವರ ಅವಶ್ಯಕತೆಗಳ ಕುರಿತು ಅನೇಕ ವೇಳೆ ಉದಾಸೀನ ಮಾಡಲಾಗುತ್ತದೆ.ಅಥವಾ ಹೆಚ್ಚು ಪ್ರಾಮುಖ್ಯತೆ ನೀಡಲಾಗುವುದಿಲ್ಲ.

ಸೇವೆಗಳ ಅಲಭ್ಯತೆಗೆ ಸಂಬಂಧಿಸಿದ ಅಡೆತಡೆಗಳು:

ವಿಶೇಷ ಅಗತ್ಯವುಳ್ಳ ವ್ಯಕ್ತಿಗಳಿಗೆ ಅವಶ್ಯವಿರುವ ಸೇವೆಗಳು ಸಾಮಾನ್ಯವಾಗಿ ಗ್ರಾಮ / ತಾಲೋಕಗಳಲ್ಲಿ ಲಭ್ಯವಿರುವುದಿಲ್ಲ. ಉದಾಹರಣೆ ವಿಕಲಾಂಗತೆಯ ಮೌಲ್ಯಮಾಪನ, ಅದಕ್ಕೆ ಬೇಕಾದ ಸಾಧನ / ಸಲಕರಣೆಗಳು ಬೇಕಾದ ತಜ್ಞರು ಸುಲಭವಾಗಿ ಲಭ್ಯವಿರುವುದಿಲ್ಲ. ಆದ್ದರಿಂದ ಅಗತ್ಯವುಳ್ಳ ವ್ಯಕ್ತಿಗಳಿಗೆ ಬೇಕಾದ ಅವಶ್ಯಕತೆಗಳಿಗೆ ಉದಾಸೀನ ತೋರಿಸಲಾಗುತ್ತದೆ.

ಭೌತಿಕ ಅಡೆತಡೆಗಳು:

  • ಸಮತಟ್ಟಾಗಿಲ್ಲದ ರಸ್ತೆಗಳು / ರಸ್ತೆಗಳಿಲ್ಲದಿರುವುದು.
  • ಮೆಟ್ಟಿಲುಗಳಿರುವುದು.
  • ಸಾರ್ವಜನಿಕ ಕಟ್ಟಡಗಳು / ಶೌಚಾಲಯಗಳಿಗೆ ಹೋಗುವ ಮಾರ್ಗಗಳು ಸೂಕ್ತವಾಗಿಲ್ಲ.
  • ಸಾರ್ವಜನಿಕ ಸಂಚಾರಕ್ಕೆ ಮಿತವಾದ ಅವಕಾಶ

ಈ ಋಣಾತ್ಮಕ ಮನೋಭಾವಗಳನ್ನು ವಿಕಲಾಂಗ ವರ್ಗದ ಕುಟುಂಬದವರೂ ಹೊಂದಿರುವುದು ದುರಾದೃಷ್ಟ ಅಷ್ಟೇ ಅಲ್ಲದೆ ಸ್ವತಃ ಕಡಿಮೆ ಆತ್ಮಸ್ತೈರ್ಯ ಹೊಂದಿರುವ ವಿಕಲಾಂಗರೂ ಇಂತಹ ಮನೋಭಾವ ಹೊಂದಿದವರಾಗಿದ್ದಾರೆ.

ನಾವ್ ವಿ.ಎಚ್.ಎಸ್.ಸಿ. ಯಾಗಿ ವಿಶೇಷ ಅಗತ್ಯವುಳ್ಳ ವ್ಯಕ್ತಿಗಳು ಆರೋಗ್ಯ ಯೋಜನೆಯ ತಯಾರಿಯಲ್ಲಿ ಸಕ್ರಿಯವಾಗಿ ಭಾಗವಹಿಸಿ ತಮ್ಮ ಅವಶ್ಯಕತೆಗಳು ಪೂರೈಸುವಂತಹ ಯೋಜನೆ ತಯಾರಿಸಿದ್ದಾರೆಂಬುದನ್ನು ಖಚಿತಪಡಿಸಿಕೊಳ್ಳುವುದು ಹೇಗೆ?

ಧಾರ್ಮಿಕ ಅಲ್ಪಸಂಖ್ಯಾತರು

ದೇಶದ ಒಟ್ಟು ಜನಸಂಖ್ಯೆಯಲ್ಲಿ ಸುಮಾರು ಶೇ.೧೩ ಧಾರ್ಮಿಕ ಅಲ್ಪ ಸಂಖ್ಯಾತ ಜನಾಂಗದವರಿದ್ದಾರೆ. ಇವರ ಆರ್ಥಿಕ ಪರಿಸ್ಥಿತಿ ದಲಿತರಂತೆ ಇದೆ. ಇನ್ನು ಶೈಕ್ಷಣಿಕವಾಗಿ ತೀರ ಹಿಂದುಳಿದಿದ್ದಾರೆ. ಇವರು ಸಣ್ಣ ಪುಟ್ಟ ವ್ಯಾಪಾರ, ಗ್ಯಾರೇಜು ಕೆಲಸ, ಸಣ್ಣ ಪ್ರಮಾಣದಲ್ಲಿ ವ್ಯವಸಾಯ ಹಾಗೂ ಕೃಷಿ ಕೂಲಿಕಾರರಾಗಿ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಮಹಿಳೆಯರು ಬೀಡಿ ಕಟ್ಟುವುದು, ಅಗರಬತ್ತಿ ಮಾಡುವುದು ಮತ್ತು ಕಸೂತಿ ಕೆಲಸಗಳಲ್ಲಿ ತೊಡಗಿರುತ್ತಾರೆ. ಗ್ಯಾರೇಜು, ಸೈಕಲ್ ಶಾಪ್ ಮು ಹೊಟೇಲುಗಳಲ್ಲಿ ಬಾಲಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಮಹಿಳೆಯರು ಅವಿರತವಾಗಿ ದುಡಿಯುವ ಮತ್ತು ಪದೇ ಪದೇ ಗರ್ಭ ಧರಿಸುವ ಕಾರಣ ವಿಶ್ರಾಂತಿ, ಪೌಷ್ಟಿಕ ಆಹಾರ ಆರೋಗ್ಯಕರ  ಪರಿಸರ ಇಲ್ಲದೆ ಹಲವಾರು ರೋಗಗಳಿಗೆ ತುತ್ತಾಗುತ್ತಿದ್ದಾರೆ.ಅದರಲ್ಲೂ ಅಪೌಷ್ಟಿಕತೆ, ರಕ್ತಹೀನತೆ, ಕ್ಷಯ ರೋಗಗಳು ಹೆಚ್ಚಿವೆ.ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳನ್ನು ಅವಲೋಕಿಸುವಾಗಲೇ ಅವರ ಬಗೆಗೆ ಸಮಾಜ ಹೊಂದಿರುವ ಪೂರ್ವಾನುಗ್ರಹಗಳನ್ನು ಸಹ ಗಮನಿಸಬೇಕಿದೆ. ಆರೋಗ್ಯ, ಶೈಕ್ಷಣಿಕ ಮಾತು ಆಡಳಿತ ವ್ಯವಸ್ತೆ ಇವರ ಕುರಿತಾಗಿ ನಕಾರಾತ್ಮಕ ನಿಲುವು ತಾಳಿರುವುದನ್ನು ಕಾಣುತ್ತೇವೆ.

ನಮ್ಮದು ವಿವಿಧ್ಯತೆಗಳ ದೇಶ. ಹೀಗಾಗಿ ವಿವಿಧ ಜಾತಿ ಜನಾಂಗದ ನಡುವೆ ಸೌಹಾರ್ಧತೆ, ಪರಸ್ಪರ ಗೌರವ, ಪರಸ್ಪರ ನೆರವು ಅಭಿವೃದ್ದಿ ಹಾಗೂ ಬೆಳವಣಿಗೆಗೆ ಪೂರಕವಾಗಿರುತ್ತವೆ. ಬದಲಿಗೆ ಅಪನಂಬಿಕೆಗಳಿದ್ದಲ್ಲಿ ಸಮಾಜ ಹಾಗೂ ಮಾನವ ಅಭಿವೃದ್ದಿಗೆ ಹಿನ್ನಡೆಯಾಗುತ್ತದೆ. ನಾಡಿನ ಸಾಂಸ್ಕೃತಿಕ ವೈವಿಧ್ಯ ಸೊರಗುತ್ತದೆ. ಇದರ ಬಗ್ಗೆ ಹೀಗಾಗಲೇ ನಮಗೆ ಅರಿವಿದೆ.

ಮೂಲ:ಗ್ರಾಮ ಆರೋಗ್ಯ ಮತ್ತು ನೈರ್ಮಲ್ಯ ಸಮಿತಿ ಹಾಗೂ ಇತರೆ ಸಮಿತಿಗಳ ಕೈಪಿಡಿ.

ಕೊನೆಯ ಮಾರ್ಪಾಟು : 4/6/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate