অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸುವರ್ಣ ಕರ್ನಾಟಕ

ಸುವರ್ಣ ಕರ್ನಾಟಕ

ಕನ್ನಡ ಮಾತನಾಡುವ ಜನರೆಲ್ಲರೂ ಒಂದೇ ಆಡಳಿತಕ್ಕೆ ಒಳಪಟ್ಟ ಸಂದರ್ಭವನ್ನು ರಾಜ್ಯೋತ್ಸವದ ನೆಪದಲ್ಲಿ ಪ್ರತಿ ವರ್ಷ ನೆನಪಿಸಿಕೊಳ್ಳುವ ಸಂಪ್ರದಾಯಕ್ಕೆ ಇದೀಗ ಐವತ್ತೈದು ವರ್ಷಗಳು ಸಂದಿವೆ. ಈ ಸುವರ್ಣ ಮಹೋತ್ಸವದ ನಂತರ ಏಕೀಕರಣಗೊಂಡ ಕರ್ನಾಟಕದ ಸ್ಥಿತಿ - ಗತಿಗಳನ್ನು ಕುರಿತು ನಾವಿಂದು ಸೂಕ್ಷ್ಮವಾಗಿ ಅವಲೋಕನ ಮಾಡಿದಾಗ ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆಯುವ ಕಾರ್ಯ ಪ್ರಸ್ತುತದ ತುರ್ತು ಅಗತ್ಯವೆನಿಸುತ್ತದೆ.

ಭಾಷಾವಾರು ಪ್ರಾಂತ್ಯಗಳ ಪುನರ್ವಿಂಗಡನೆ ಹಿನ್ನಲೆಯಲ್ಲಿ ೧೯೫೬ ನವೆಂಬರ್ ೧ ರಂದು ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿತು. ಗಡಿ ವಿವಾದಗಳಿಗೆ ಪರಿಹಾರ ಕಂಡುಕೊಳ್ಳುವ ತಾತ್ಕಾಲಿಕ ಪ್ರಯತ್ನವದು. ಕೆಲವು ಭಾಗಗಳನ್ನು ಪಡೆದುಕೊಂಡು, ಸಾಕಷ್ಟನ್ನು ಕಳೆದುಕೊಂಡು ಅಸ್ತಿತ್ವಕ್ಕೆ ಬಂಡ ಮೈಸೂರು ರಾಜ್ಯಕ್ಕೆ ೧೯೭೩ ರ ನವೆಂಬರ್ ೧ ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸ್ ಅವರು ಅವರು 'ಕರ್ನಾಟಕ' ಎಂದು ನಾಮಕರಣ ಮಾಡಿದರು.

ಐವತ್ತೈದು ವರ್ಷಗಳು ಸಂದಿರುವ ಏಕೀಕರಣ ಕರ್ನಾಟಕದ ಇಂದಿನ ಸುವರ್ಣ ನಾಡಿಗೆ ಹಲವು ಆಸೆ-ಹತಾಶೆಗಳು ತುಂಬಿವೆ. ಏಕೀಕೃತಗೊಲ್ಲಬೇಕಾಗಿದ್ದ ಕನ್ನಡದ ಮನಸ್ಸುಗಳು ಹಲವು ಕಾರಣಗಳಿಗಾಗಿ ಮುರುಟಿಕೊಂಡಿವೆ. ಒಂದು ಪ್ರದೇಶದ ಅಭಿವೃದ್ದಿಯಲ್ಲಿ ಪ್ರಧಾನ ಪಾತ್ರವಹಿಸಬೇಕಾದ ಆಡಳಿತ ಯಂತ್ರದಲ್ಲಿ ನಾಡು - ನುಡಿಯ ಬಗ್ಗೆ ಬದ್ದತೆ ಕಾಣದಿದ್ದರೆ ಎಂಥ ಗೊಂದಲದ ಸ್ಥಿತಿ ತಲುಪಬೇಕಾಗುತ್ತದೆಂಬುದಕ್ಕೆ ಇಂದಿನ ಕರ್ನಾಟಕ ನಿದರ್ಶನ.

ಯಾವ ಕಾರಣಕ್ಕಾಗಿ ಹೋರಾಟ ನಡೆಸಿ ಏಕೀಕರಣ ಸಾಧ್ಯ ಮಾಡಲಾಯಿತೋ ಆ ಉದ್ದೇಶ ಇನ್ನೂ ಸಾಕಾರಗೊಂಡಿಲ್ಲ. ಒಂದು ನಿರ್ದಿಷ್ಟ ಬೌಗೋಳಿಕ ಪ್ರದೇಶದಲ್ಲಿ ನೆಲೆಸಿರುವ ನಾವೆಲ್ಲರೂ ಕನ್ನಡಿಗರೆಂಬ ಆತ್ಮಾಭಿಮಾನ ಮೂಡಬೇಕಾಗಿತ್ತು. ನೆರೆ - ಹೊರೆ ರಾಜ್ಯಗಳ ಪ್ರಭಾವ ನಮ್ಮ ಗಡಿ ಪ್ರದೇಶಗಳ ಮೇಲೆ ಇದ್ದರೂ ಅವುಗಳನ್ನು ಏಕತ್ರ ಬೆಸೆಯುವ ಪ್ರಯತ್ನ ಆಗಬೇಕಾಗಿತ್ತು. ಆದರೆ, ಈ ಹೊತ್ತಿಗೂ ಅದು ಸಾಧ್ಯವಾಗಲಿಲ್ಲ ಎಂಬುದು ವಿಷಾದದ ಸಂಗತಿಯಾಗಿದೆ.

ಮುಖ್ಯವಾಗಿ ಕರ್ನಾಟಕ ಉತ್ತರ - ದಕ್ಷಿಣ ಎಂದು ವಿಭಾಗವಾಗಿದೆ. ಇದು ಎಷ್ಟು ದೊಡ್ಡ ಪ್ರಮಾಣದಲ್ಲಿ ಕಂದಕವನ್ನು ನಿರ್ಮಾಣ ಮಾಡಿದೆ ಎಂದರೆ, ನಮ್ಮ ನಾಡಿನ ಶ್ರೀಮಂತಿಕೆ ಪ್ರತೀಕವಾದ ಸಾಂಸ್ಕೃತಿಕ ವಲಯದಲ್ಲೂ ಅಸಮಧಾನ, ಅನುಮಾನಗಳು ಭುಗಿಲೇಳುವಂತೆ ಮಾಡಿದೆ. ಪ್ರಶಸ್ತಿಗಳು ಘೋಷಣೆಯಾದ ಸಂದರ್ಭದಲ್ಲಿಯೂ ಉತ್ತರಕ್ಕೆಷ್ಟು ದಕ್ಷಿಣಕ್ಕೆಷ್ಟು ಎಂಬ ಲೆಕ್ಕಚಾರಕ್ಕಿಳಿಯುತ್ತವೆ ನಮ್ಮ ಕನ್ನಡ ಮನಸ್ಸುಗಳು. ಕನಿಷ್ಠ ಪರಸ್ಪರ ಸಾಧಕರಲ್ಲಿ ಅಭಿಮಾನ ಮೂಡದಷ್ಟು ಅಸಮಧಾನದ ವಾತಾವರಣ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯನ್ನು ತೊಡೆದು ಹಾಕುವ ಪ್ರಯತ್ನವನ್ನು ಆಡಳಿತ ವ್ಯವಸ್ಥೆ ಮಾಡಬೇಕಾಗಿದೆ.

ಅಲ್ಲದೆ ಒಂದೂವರೆ ಸಾವಿರ ವರ್ಷಗಳಿಗೂ ಹೆಚ್ಚು ಭಾಷಿಕ, ಸಾಹಿತ್ಯಿಕ, ಪಾರಂಪರಿಕ ಇತಿಹಾಸವಿರುವ ಕನ್ನಡ ಭಾಷೆ ಮತ್ತು ಈ ನೆಲದ ಅಭಿವೃದ್ದಿ ಭಾಷೆಯ ಬೆಳವಣಿಗೆಯ ಮೂಲಕ ಸಾಧ್ಯ ಎಂಬ ನಿಲುವು ಮುಂದಿನ ಎಲ್ಲಾ ವಿಚಾರಗಳು ಅದಕ್ಕೆ ಹೊಂದಿಕೊಳ್ಳುತ್ತವೆ. ಆದರೆ, ಯಾವುದೇ ಸಂದರ್ಭದಲ್ಲೂ ಭಾಷೆಯೊಡನೆ ಇತರ ವಿಷಯಗಳನ್ನು ತಳುಕು ಹಾಕುವ ಪ್ರಯತ್ನ ಮಾಡಬಾರದು. ಭಾಷೆಯೊಂದಕ್ಕೆ ತನ್ನದೇ ಆದ ಸಾಂಸ್ಕೃತಿಕ ಆಯಾಮವಿರುತ್ತದೆ.

ಕಳೆದ ಐವತ್ತೈದು ವಸಂತಗಳು ನಾಡಿನ ಭಾಷೆ, ನೆಲ, ಜಲ,ಕಲೆ, ಸಂಸ್ಕೃತಿ, ಸಾಹಿತ್ಯದ ಅಭಿವೃದ್ದಿಗೆ ದೊರಕಿದ ಅವಧಿ ಬಹಳ ಸುದೀರ್ಘವೆಂದೇ ಹೇಳಬೇಕು. ಆದರೆ, ಕ್ಷೇತ್ರವಾರು ಪ್ರಗತಿ ನೋಡಿದರೆ ಸಾಕಷ್ಟು ನಿರಾಸೆಯುಂಟಾಗುತ್ತದೆ. ಕನ್ನಡಿಗರಾದ ನಾವು ನಿರಭಿಮಾನಿಗಲಾಗಿದ್ದೇವೇನೋ ಎಂಬ ಅನುಮಾನ ಕಾಡುತ್ತದೆ. "ಕನ್ನಡಕ್ಕಾಗಿ ಕೈ ಎತ್ತು; ನಿನ್ನ ಕೈ ಕಲ್ಪವೃಕ್ಷವಾಗುತ್ತದೆ. ಕನ್ನಡಕ್ಕಾಗಿ ಕೊರಳೆತ್ತು ಪಾಂಚಜನ್ಯ ಮೊಳಗುತ್ತದೆ" ಎಂಬ ಕುವೆಂಪು ಅವರ ಕವಿವಾಣಿಯನ್ನು ಅನುಸರಿಸಿ ಇಂದು ಕನ್ನಡಕ್ಕಾಗಿ ಕೈ ಎತ್ತುವ ; ಕೊರಳೆತ್ತುವ ಕನ್ನಡಿಗರು ಎಷ್ಟು ಮಂದಿ ಇದ್ದಾರೆ? "ಉದಯವಾಗಲಿ ಚಲುವ ಕನ್ನಡ ನಾಡು" ಎಂಬ ಹುಯಿಲಗೋಳ ನಾರಾಯಣರಾಯರ ಅನಿಸಿಕೆಗೆ ಅನುಗುಣವಾಗಿ ಈಗಿರುವ ನಮ್ಮ ನಾಡು ಚಲುವ ಕನ್ನಡ ನಾಡಾಗಿ ರೂಪುಗೊಂಡಿದೆಯೇ? ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಏಕೀಕೃತ ಕನ್ನಡ ನಾಡಿಗಾಗಿ ದುಡಿದ ಅಳವಾಡಿ ಶಿವಮೂರ್ತಿ, ಶಾಂತವೇರಿ ಗೋಪಾಲಗೌಡರು, ವೆಂಕಟರನ್ಗೊಕಟ್ಟಿ, ಬಿ.ವಿ.ಕಕ್ಕಿಲಾಯ, ಕೆ.ಆರ್.ಕಾರಾಂತಾರಂತಹ ಸಮಾಜವಾದಿ, ಕಮ್ಯುನಿಸ್ಟ್ ನಾಯಕರು, ಕಯ್ಯಾರ ಕಿಯ್ಯಣ್ಣರೈ, ಕೆಂಗಲ್ ಹನುಮಂತಯ್ಯನ ಮಹನೀಯರ ಶ್ರಮ ಮತ್ತು ಹೋರಾಟದ ನಾಡಿ ಮಿಡಿತ ನಮಗೆ ಇಂದು ಅರ್ಥವಾಗುತ್ತಿಲ್ಲ.

ಈ ಸುದೀರ್ಘ ಅವಧಿಯಲ್ಲಿ ನಮ್ಮ ನಾಡು - ನುಡಿ ಎಷ್ಟು ಗಟ್ಟಿಗೊಂಡಿದೆ? ನಾವೆಷ್ಟು ಸುಭದ್ರರು ಎನ್ನುವ ಪ್ರಶ್ನೆಗಳಿಗೆ ಪೂರ್ಣ ವಿರಾಮ ದೊರಕಲಾರದು. "ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು, ಒಟ್ಟಿಗೆ ಬಾಳುವ ತೆರದಲಿ ಹರಸು" ಎಂಬ ಕವಿ ವಾಣಿಗೆ ಶತಮಾನಗಳು ಕಳೆದರೂ ಕನ್ನಡಿಗರ ನೈಜ ಸ್ವಭಾವವನ್ನು ಕೆಣಕುವಂತಿದೆ. ಗಡಿ ಮತ್ತು ಭಾಷಾ ಸಮಸ್ಯೆ ಇಂದಿಗೂ ನಮ್ಮ ಬೆನ್ನು ಬಿಡದೆ ಕಾಡುತ್ತಿವೆ. ಅನ್ಯ ಭಾಷಿಕರು ನಮ್ಮ ಭಾಷೆಯನ್ನೂ ನುಂಗಿ ಹಾಕಲು ಹೊಂಚು ಹಾಕುತ್ತಿರುವ ಈ ಹೊತ್ತಿನಲ್ಲೂ ನಮ್ಮನ್ನಾಳುವವರು ಕನ್ನಡತನವನ್ನು ಕಳೆದುಕೊಂಡಿರುವುದು ನೋವನ್ನು ತರಿಸುವಂತದ್ದಾಗಿದೆ. ಈ ಸಂದರ್ಧದಲ್ಲಿ ಬರಗೂರರು ಹೇಳಿರುವಂತೆ "ಜಗತ್ತಿನ ಪ್ರತಿಯೊಂದು ಭಾಷೆಗೂ ಇಂಥ ಸಂದಿಗ್ದ ಸ್ಥಿತಿ ಎದುರಾಗುತ್ತದೆ. ಇದರಿಂದ ಧ್ರುತಿಗೆಡುವ ಅಗತ್ಯವಿಲ್ಲ" ಎಂಬ ಹೇಳಿಕೆಯಿಂದ ನಮ್ಮ ಭಾಷೆಯನ್ನೂ ಸಮರ್ಥವಾಗಿ ಕಟ್ಟಿಕೊಳ್ಳುವ ಸಂಕಲ್ಪವನ್ನು ಇನ್ಡಿವ ಯುವ ಪೀಳಿಗೆ ಕೈಗೊಳ್ಳಬೇಕಾಗಿದೆ.

ಇಂದಿನ ಕರ್ನಾಟಕವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಗೋಚರವಾಗುವ ನೈಜ ಸಮಸ್ಯೆಗಳ ಚಿತ್ರಣ ನಮ್ಮ ಮುಂದೆ ಈ ರೀತಿಯಾಗಿ ಅನಾವರಣಗೊಳ್ಳುತ್ತದೆ. ರೈತನ ಆತ್ಮಹತ್ಯೆಯಿಂದ ಹಿಡಿದು ಶಿಕ್ಷಣ, ಆರೋಗ್ಯದಂತ ಮೂಲಭೂತ ಸೌಕರ್ಯಗಳಿಲ್ಲದ ಧಾವಂತದಲ್ಲಿ ಶ್ರೀ ಸಾಮಾನ್ಯರು ಬದುಕನ್ನು ಕಟ್ಟಿಕೊಳ್ಳಲು ಪರದಾಡುತ್ತಿರುವುದು ಕಾಣಿಸುತ್ತದೆ. ಸೂಕ್ತ ಶಿಕ್ಷಣ ಪಡೆದಿದ್ದರೂ ನಿರುದ್ಯೋಗ ತಾಂಡವವಾಡುತ್ತಿರುವುದು, ಸಾಮಾಜಿಕ ಅಸಮಾನತೆ, ಅಶಾಂತಿಗಳು ನಮ್ಮ ನಾಡಿನ ವೈಶಿಷ್ಟ್ಯತೆಯನ್ನು ಜಾಗತಿಕ ಮತದಲ್ಲಿ ಮಸುಕು ಮಾಡುತ್ತಿವೆ.

ಕೊನೆಯದಾಗಿ ಹೇಳುವುದಾದರೆ ಭಾಷೆ ಬೆಳವಣಿಗೆಯ ಹಿನ್ನಲೆಯಲ್ಲಿ ಕೆಲವೊಂದು ಕಟ್ಟು ನಿಟ್ಟಾದ ಕ್ರಮಗಳನ್ನು ಅನುಸರಿಸ ಬೇಕಾಗುತ್ತದೆ. ಅವುಗಳಲ್ಲಿ ಏಕರೂಪ ಶಿಕ್ಷಣ ಪದ್ಧತಿ, ಪ್ರಾಥಮಿಕ ಶಿಕ್ಷಣ ಕನ್ನಡದಲ್ಲೇ ನೀಡುವುದು. ಹೊರ ಭಾಗದಿಂದ ಬಂದ  ಅಧಿಕಾರಿಗಳು ಕನ್ನಡದಲ್ಲೇ ವ್ಯವಹರಿಸುವುದು. ಇವರ ಜತೆಗೆ ಡಿ.ಆರ್. ನಾಗರಾಜ್ ಅವರು ಹೇಳಿರುವಂತೆ "ಕನ್ನಡ ಭಾಷೆ ಕನ್ನಡ ನಾಡಿನಲ್ಲಿ ತೀವ್ರವಾಗಿ ಅಂತರ್ಮುಖಿಯಾಗಿ ಬೆಳೆಯಬೇಕು" ಎಂಬ ಸಲಹೆ ಪ್ರಸ್ತುತವೆನಿಸುತ್ತದೆ. ಇದಕ್ಕಿಂತ ಮುಖ್ಯವಾಗಿ ವೈದ್ಯಕೀಯ ತಾಂತ್ರಿಕ ವಿಜ್ಞಾನವನ್ನು ಕಲಿಸುವ ಕಸುವು ಕನ್ನಡಕ್ಕಿದೆ ಎಂಬುದನ್ನು ತೋರಿಸಿ ಕೊಡುವುದು. ಕನ್ನಡ ನೆಲದಲ್ಲಿ ಸ್ಥಾಪಿತವಾಗಿರುವ ಐ.ಟಿ - ಬಿ.ಟಿ. (I .T -B .T ) ಕಂಪನಿಗಳು ಕನ್ನಡಿಗರಿಗೆ ಉದ್ಯೋಗವಕಾಶ ನೀಡಿ ತನ್ನ ಬದ್ದತೆಯನ್ನು ತೋರಿಸುವುದು. ಕೇಂದ್ರದಲ್ಲಿ ಹೆಚ್ಚಿನ ರಾಜಕೀಯ ಅಧ್ಹಿಕಾರವನ್ನು ಪಡೆಯುವ ಮೂಲಕ ನಮ್ಮ ನಾಡಿಗೆ ನ್ಯಾಯಯುತವಾಗಿ ದಕ್ಕಬೇಕಾದ ಎಲ್ಲಾ ಸೌಲಭ್ಯಗಲನ್ನು ತರುವ ಪ್ರಯತ್ನವಾಗಬೇಕಾಗಿದೆ. ಈ ರೀತಿಯಾಗಿ ನಾವು ಕನ್ನಡವನ್ನು ಉಳಿಸುವ, ಬೆಳೆಸುವ ಕಾರ್ಯಕ್ಕೆ ಕಟಿಬದ್ದರಾಗಬೇಕಾಗಿದೆ. ಆಗ ಮಾತ್ರ ಕುವೆಂಪು ಅವರು ಹೇಳಿರುವ "ಕನ್ನಡವೆನೆ ಕುಣಿದಾಡುವುದೆನ್ನದೆ ಕನ್ನಡವೆನೆ ಕಿವಿ ನಿಮಿರುವುದು" ಎಂಬ ಹೃದಯಾಂತರಾಳದ ಅಭಿಮಾನದ ನುಡಿ ಕನ್ನಡಿಗರ ಅಭಿಮಾನವಾಗಿ ಮೈ ದಾಳನೀ ಬೇಕಾಗಿದೆ. ಎಲ್ಲಾದರೂ ಇರು, ಹೇಗಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ಅಕ್ಷರಶಃ ನಮ್ಮೆಲ್ಲರ ಬಾಳಿನಲ್ಲಿ ರೂಡಿಸಿಕೊಳ್ಳೋಣ.

"ಸಿರಿಗನ್ನಡಂ ಗೆಲ್ಗೆ - ಸಿರಿಗನ್ನಡಂ ಬಾಳ್ಗೆ"    -   ಜೈ ಹಿಂದ್ - ಜೈ ಕರ್ನಾಟಕ

ಮೂಲ:ರಜತ ದರ್ಪಣ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate