ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
 • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಹವಾಗುಣ ಬದಲಾವಣೆಯಂತೂ ಖಾತ್ರಿ

ಹವಾಗುಣ ಬದಲಾವಣೆಯಂತೂ ಖಾತ್ರಿ - ನಮ್ಮ ಗುಣ ಬದಲಾದೀತೆ

ಕಳೆದ ಎರಡು ದಶಕಗಳಿಂದ ಪ್ರಪಂಚದ ಎಲ್ಲ ಮಾಧ್ಯಮಗಳಲ್ಲೂ 'ಭೂಮಿ ಬಿಸಿಯಾಗುತ್ತಿದೆ. ಎಂಬ ಮಾತು ಕೇಳಬರುತ್ತಿದೆ. ವಿಶ್ವಸಂಸ್ಥೆಯ ಆದೇಶದ ಮೇರೆಗೆ ಜಗತ್ತಿನ ಐದು ನೂರು ವಿಜ್ಞಾನಿಗಳು, ನಾನಾ ವಿಧದ ಥರ್ಮಾಮೀಟರ್ ಗಳನ್ನು ಬಳಸಿ, ಭೂಮ್ಯಾಕಾಶ ಸುತ್ತಾಡಿ, ಭೂಮಿಗೆ ಜ್ವರ ಬಂದಿದೆ ಎಂಬುದನ್ನು ಖಾತ್ರಿಯಾಗಿ ಹೇಳಿದ್ದಾರೆ. ಇದಕ್ಕೆ ಮನುಷ್ಯನೇ ಕಾರಣ ಎಂತಲೂ ತೀರ್ಪು ನೀಡಿದ್ದಾರೆ.

ಇದೇ ಗತಿಯಲ್ಲಿ ಬಿಸಿ ಹೆಚ್ಚುತ್ತ ಹೋದರೆ ಧ್ರುವ ಪ್ರದೇಶಗಳ ಹಿಮವೆಲ್ಲ ಕರಗಿ, ಸಮುದ್ರ ಉಕ್ಕೇರುತ್ತದೆ. ಮುಂಬರುವ ಹತ್ತರಿಂದ ಐವತ್ತು ವರ್ಷಗಳಲ್ಲಿ ಒಂದಷ್ಟು ಕಾಲ ಜಲ ಪ್ರಳಯ ಉಂಟಾಗುತ್ತದೆ. ಆಮೇಲೆ ಬರಗಾಲದ ಹಾವಳಿ. ನೀರಿಗೆ ಹಾಹಾಕಾರ. ನಿಸರ್ಗದ ಸಮತೋಲ ಏರುಪೇರಾಗಿ, ಋತುಮಾನಗಳು ಬದಲಾಗುತ್ತವೆ. ರೋಗರುಜಿನಗಳು ಹೆಚ್ಚುತ್ತವೆ. ಆಹಾರದ ಪಿರಮಿಡ್ ಕುಸಿಯುತ್ತದೆ. ಅಂಥ ಪ್ರಳಯವನ್ನು ತಡೆಯಬೇಕೆಂದರೆ, ಈಗಿನಿಂದಲೇ ನಾವು ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ವಿಜ್ಞಾನಿಗಳು ಹೇಳತೊಡಗಿದ್ದಾರೆ.

ಬಿಸಿ ಪ್ರಳಯದ ಕಾರಣಗಳು

ಭೂಮಿ ಕ್ರಮೇಣ ಕಾವೇರುತ್ತಿರುವುದಕ್ಕೆ 'ಹಸಿರು ಮನೆ ಪರಿಣಾಮ' ಎನ್ನುತ್ತಾರೆ. ಬಿಸಿಲಲ್ಲಿದ್ದ ಕಾರು ಅಥವಾ ಬಸ್ಸುಗಳಲ್ಲಿ ಸೆಕೆ ಅತಿಯಾಗುವುದನ್ನು ನಾವು ಅನುಭವಿಸುತ್ತಿದ್ದೇವೆ. ಗಾಜಿನಿಂದ ಒಳಕ್ಕೆ ಬಂದ ಶಾಖ ಹೊರಕ್ಕೆ ಹೋಗಲಾರದೆ ಒಳಗಿನ ತಾಪಮಾನವನ್ನು ಹೆಚ್ಚಿಸುತ್ತವೆ.ಅದೇ ರೀತಿ ಹೂ,ಹಣ್ಣು, ತರಕಾರಿಗಳನ್ನು ಕೃತಕ ಪರಿಸರದಲ್ಲಿ ಬೆಳೆಸಲೆಂದು ಗಾಜಿನ ಇಲ್ಲವೆ ಪಾಲಿವಿನೈಲ್ ಆವರಣವುಳ್ಳ ಟೆಂಟ್ಗಳನ್ನು ಕಟ್ಟುವುದನ್ನು ನಾವು ನೋಡಿದ್ದೇವೆ. ಅದರೊಳಕ್ಕೆ ಸೂರ್ಯಕಿರಣ ಬಂದಾಗ  ಅದರೊಳಗಿನ ತಾಪವೆಲ್ಲ ಆವರಣದೊಳಕ್ಕೆ ಸಿಕ್ಕಿಹಾಕಿಕೊಳ್ಳುತ್ತದೆ.

ಬೆಳಕು ಮಾತ್ರ ಮರಳಿ ಪ್ರತಿಫಲಿಸಿ ಹೋಗಬಹುದು. ಉಷ್ಣತೆ ಆ ಗಾಜನ್ನು / ಪಿವಿಸಿ ತಗಡನ್ನು ದಾಟಿ ಹೋಗಲಾರದು. ಹಸಿರು ಮನೆಯಲ್ಲಿ ಉಷ್ಣತೆ ಹಾಗು ತೇವಾಂಶ ಹೆಚುತ್ತ ಹೋದ ಹಾಗೆ ಮಳೆಕಾಡಿನ ಪರಿಸರ ಅಲ್ಲಿ ಸೃಷ್ಟಿಯಾಗಿ ಸಸ್ಯಗಳು ಪುಷ್ಕಳವಾಗಿ ಬೆಳೆಯುತ್ತವೆ. ಅಂಥ ಮನೆಗೆ 'ಹಸಿರು ಮನೆ' ಎನ್ನುತ್ತಾರೆ.

ಭೂಮಿಯನ್ನು ಸುತ್ತುವರೆದ ವಾತಾವರಣದಲ್ಲಿ ನೀರಿನ ಆವಿ, ಕಾರ್ಬನ್ ಡೈ ಆಕ್ಸೈಡ್, ಮೀಥೇನ್ ಮತ್ತು ನೈಟ್ರೋಜನ್ ನ ಕೆಲ ಅನಿಲಗಳು ಗಾಜಿನ ಹಾಗೆ ವರ್ತಿಸುತ್ತವೆ. ಅಂದರೆ, ನೆಲದ ಕಾವನ್ನು ಆಚೆ ಹೋಗಲು ಬಿಡುವುದಿಲ್ಲ.ಆ ಅನಿಲಗಳ ಆವರಣ ದಟ್ಟವಾಗುತ್ತ ಹೋದಷ್ಟೂ ನೆಲದ ಕಾವು ಹೆಚ್ಚುತ್ತ ಹೋಗುತ್ತದೆ. ಈ ಪ್ರಕ್ರಿಯೆಗೆ 'ಹಸಿರು ಮನೆ ಪರಿಣಾಮ' ಎನ್ನುತ್ತಾರೆ. ಅದಕ್ಕೆ ಕಾರಣವಾಗುವ ಅನಿಲಗಳನ್ನು 'ಹಸಿರು ಮನೆ ಅನಿಲ' ಎನ್ನುತ್ತಾರೆ.

ಈ ಎಲ್ಲ 'ಹಸಿರು  ಮನೆ ಅನಿಲ'ಗಳನ್ನು  ನಾವು ಖಳನಾಯಕರೆಂದು ಬಿಂಬಿಸಬೇಕಾಗಿಲ್ಲ. ಅವು ತಕ್ಕ ಪ್ರಮಾಣದಲ್ಲಿ ಇದ್ದರೇನೇ ಭೂಮಿ ನಮಗೆ ವಾಸಯೋಗ್ಯದ ಹದ ಬೆಚ್ಚಗಿನ ಪರಿಸರ ಇರುತ್ತದೆ. ಇಷ್ಟು ವರ್ಷ ಹಾಗಿತ್ತು. ಆದರೆ ಈಚೀಚೆಗೆ ನಮ್ಮ ಔದ್ಯಮಿಕ ಚಟುವಟಿಕೆಗಳು ಹೆಚ್ಚಾದ ನಂತರ ಈ ಹಸಿರು ಮನೆ ಅನಿಲಗಳ ಸಾಂದ್ರತೆ, ವಾತಾವರಣದಲ್ಲಿ ಹೆಚ್ಚಾಗುತ್ತಾ ಹೋಗುತ್ತಿದೆ.

ಭೂಮಿಯ ಸರಾಸರಿ ತಾಪಮಾನ ಆಗಾಗ ಹೆಚ್ಚು ಕಡಿಮೆ ಆಗುವುದು ಹೊಸದೇನಲ್ಲ. ಅದೊಂದು ಗಡಿಯಾರ ಇದ ಹಾಗೆ. ನಾಲ್ಕು ನೂರು ಕೋಟಿ ವರ್ಷಗಳ ಇತಿಹಾಸದಲ್ಲಿ ಅದೆಷ್ಟೂ ಭಾರೀ ಹಿಮಯುಗಗಳು ಆಗಿ ಹೋಗಿವೆ. ಒಂದೊಂದು ಯುಗವೂ ಲಕ್ಷಾಂತರ ವರ್ಷಗಳದ್ದಾಗಿರುತ್ತದೆ. ಹಿಮ ಯುಗದಲ್ಲಿ ಸಾಗರಗಳ ನೀರು ಬಹುದೊಡ್ಡ ಪ್ರಮಾಣದಲ್ಲಿ ಆವಿಯಾಗಿ, ಸಮುದ್ರದ ಮಟ್ಟ ತೀರಾ ಕೆಳಕ್ಕಿಳಿದು, ಇಡೀ ಭೂಮಿ ಮೈತುಂಬ ಹಿಮದ ಹಾಸು ಹೊದೆಯುತ್ತದೆ. ಮುದುರಿ ಕೂತಿದ್ದ ಸಾಗರಜೀವಿಗಳು ಕಾರ್ಬನ್ ಡೈ ಆಕ್ಸೈಡ್ ಅನಿಲವನ್ನು ಹೆಚ್ಚು ಪ್ರಮಾಣದಲ್ಲಿ ವಿಸರ್ಗಿಸಿ, ವಾತಾವರಣದ ತಾಪಮಾನವನ್ನು ಮತ್ತೆ ಮೆಲ್ಲಗೆ ಏರಿಸುತ್ತವೆ.

ಜ್ವಾಲಾಮುಖಿಗಳೂ ಅಲ್ಲಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊಗೆ, ಇಂಗಾಲವನ್ನು ಹೊರಕ್ಕೆ ಕಕ್ಕುತ್ತವೆ. ಉಷ್ಣತೆ ಮತ್ತೆ ಕೊಂಚ ಹೆಚ್ಚುತ್ತದೆ. ಮುಂದಿನ ಕೆಲವು ಕೋಟಿ ವರ್ಷಗಳಲ್ಲಿ ಚಳಿ ಬಿಸಿಲಿನ ಸಮತೋಲ ಸರಿ ಇದ್ದಾಗ, ಹೊಸ ಹೊಸ ಜೀವಿಗಳು ವಿಕಾಸಗೊಳ್ಳುತ್ತವೆ.ಭೂಮಿ ಮತ್ತೆ ನಳನಳಿಸುತ್ತದೆ.

ಇಡೀ ಭೂಮಿಯೇ ಹೀಗೆ ಒಂದು ಜೀವಂತ ಘಟಕದ ಹಾಗೆ, ಬಿಸಿ ಹೆಚ್ಚಿದಾಗ ಹಿಮದ ಹೊದಿಕೆ ಹೊದೆಯುತ್ತ, ಚಳಿ ಅತಿಯಾದಾಗ ಮೈ ಕೊಡವಿ ಮರುಭುಮಿಗಳನ್ನು ಸೃಷ್ಟಿಸಿಕೊಳ್ಳುವ ಕ್ರಿಯೆಯೇ ತುಂಬ ಸೋಜಿಗ, ಭೂಮಿಯ ಮೇಲಿನ ಹಾಗೂ ತುಸು ಒಳಗಿನ ಸೂಕ್ಷ್ಮ ಜೀವಿಗಳೇ, ಈ ಕೆಲಸವನ್ನು ಶ್ರದ್ದೆಯಿಂದ ಮಾಡುತ್ತವೆ ಎಂಬುದು ಈಗೀಗ ಗೊತ್ತಾಗುತ್ತಿದೆ.ಎಂಥ ಅತೀತ ಪ್ರಳಯದ ಅಂಚಿನಲ್ಲೂ ಜೀವಿಗಳ ಮೂಲಕವೇ ಜೀವಲೋಕವನ್ನು ಉಳಿಸಿಕೊಳ್ಳುವ, ಈ ಜೀವಂತ ಪೃಥ್ವಿಗೆ 'ಗೇಯಾ' ಎನ್ನುತ್ತಾರೆ. ಭೂಮಿಯ ಇತಿಹಾಸದಲ್ಲಿ ತೀರಾ ಈಚೆಗೆ ಅಂದರೆ, ಒಂದೂವರೆ ಲಕ್ಷ ವರ್ಷಗಳ ಹೀನ್ದೆ ಭೂಮಿಯ ತಾಪಮಾನ ಏರಿತ್ತು.

ಬಿಸಿ ಪ್ರಳಯದ ಪರಿಣಾಮಗಳು

 • ನೆಲದ ಶೇಕಡಾ ೭೦ ರಷ್ಟು ಭಾಗದಲ್ಲಿ ನೀರೇ ತುಂಬಿರುವುದರಿಂದ ಸಮುದ್ರದ ನೀರು ಬಿಸಿಯಾಗಿ ಅಸರ ಮಟ್ಟ ಮೇಲೇರುತ್ತದೆ.
 • ಹಿಮಾವೃತ ಪ್ರದೇಶದಲ್ಲಿರುವ ಹಿಮನದಿಗಳು, ಧ್ರುವ ಪ್ರದೇಶದಲ್ಲಿರುವ ಹಿಮದ ಹಾಸುಗಳು ಕರಗುತ್ತ ಸಮುದ್ರಮಟ್ಟ ಇನ್ನಷ್ಟು ಮೇಲಕ್ಕೆ ಏರುತ್ತದೆ.
 • ವಾತಾವರಣದ ಸಮತೋಲ ಏರುಪೇರಾಗುತ್ತದೆ. ಮಳೆ ಬೀಳುವ ಪ್ರಮಾಣ ಹೆಚ್ಚಾದರೂ, ಮೋಡಗಳು ಎಲ್ಲೆಲ್ಲೊ ಮಳೆ ಸುರಿಸುತ್ತವೆ.
 • ಮರುಭೂಮಿಗಳು ನಿಧಾನಕ್ಕೆ ಹಸಿರಾಗುತ್ತವೆ. ಈಗಿರುವ ಮಳೆ ಕಾಡುಗಳು ನಾಶವಾಗಿ ಮರುಭೂಮಿಯಾಗುತ್ತದೆ.
 • ಜೀವಿ ಸಂಕುಲಗಳು ಬಹುದೊಡ್ಡ ಪ್ರಮಾಣದಲ್ಲಿ ನಶಿಸಿಹೋಗುತ್ತವೆ. ಸಾಗರದಂಚಿನ ಜನಸಾಂದ್ರತೆ ಅತಿ ಹೆಚ್ಚಾಗಿರುವ ದೇಶಗಳಲ್ಲಿ ಸಮುದ್ರಮಟ್ಟ ಏರಿ ಜನರು ಗುಳೆ ಹೋಗಬೇಕಾಗುತ್ತದೆ.
 • ಆಹಾರದ ಅಭಾವ ಉಂಟಾಗುತ್ತದೆ. ಬೇಸಾಯವನ್ನು ಆಧರಿಸಿದ ಜೀವನಮಟ್ಟ ಏರುಪೇರಾಗುತ್ತದೆ.

ಉತ್ತರ ಧ್ರುವದಲ್ಲಿ ಐಫ಼ೆಲ್ ಟವರ್ ನ ಮೂರು ಪಟ್ಟು ಎತ್ತರದ ಹಿಮ ಬಂಡೆಗಳು ಹೋಳಾಗಿ ಸಮುದ್ರಕ್ಕೆ ಬೀಳತೊದಗಿವೆ. ತ್ಸುನಾಮಿ ಅಲೆ ಹಠತ್ತಾಗಿ ಎರಗಿ ಬಂದು ಮೂರು ಲಕ್ಷ ಜನರ ಬಲಿ/ಆಪೋಶನ ತೆಗೆದುಕೊಂಡಿದೆ. ನ್ಯುಆರ್ಲಿನ್ಸ್ ನಂಥ  ನಗರವನ್ನೇ ನೆಲಸಮ ಮಾಡುವಂಥ ಸುಂಟರಗಾಳಿಗಳು ಒಂದರ ಮೇಲೆಂದೊಮ್ಬಂತೆ ಅಪ್ಪಳಿಸುತ್ತಿವೆ. ಸಾಗರದಾಳದಲ್ಲಿ ನೂರೆಂಬತ್ತು ಕಿಲೋಮೀಟರ್  ಅಗಲದ, ಎಂಟೊವರೆ ಸಾವಿರ ಕಿ.ಮೀ. ಉದ್ದದ ಉಷ್ಣ ಪ್ರವಾಹ ಮೆಲ್ಲಗೆ ತನ್ನ ದಿಕ್ಕನ್ನು ಬದಲಿಸುತ್ತಿದೆ. ದಕ್ಷಿಣ ಧ್ರುವದ ಬಳಿ ಶ್ರೀಲಂಕ ದೇಶಕ್ಕಿಂತ ವಿಶಾಲವಾದ ಹಿಮದ ಹಾಸು, ಅಲ್ಲಲ್ಲಿ ಬಿರುಕು ಬಿಟ್ಟು ನಿಧಾನವಾಗಿ ಕರಗಿ ಸಮುದ್ರದಲ್ಲಿ ಲೀನವಾಗುತ್ತಿದೆ.

ನಿಸರ್ಗದಲ್ಲಿ ಈ ಕ್ರಿಯೆ ಹಿಂದೆಯೂ ಆಗುತ್ತಿತ್ತು. ಮುಂದೆಯೂ ಆಗಲಿದೆ ಎಂದಾಗ ನಾವೇಕೆ ಚಿಂತಿಸಬೇಕು

ಚಿಂತೆಗೆ ಮುಖ್ಯ ಕಾರಣ ಏನೆಂದರೆ ಈಗಿನ ಬಿಸಿ ಪ್ರಳಯ,ನಮ್ಮ ನಿಸರ್ಗದ ಸಹಜ ಕ್ರಿಯೆ ಅಲ್ಲ ಎಂಬುದು ಗೊತ್ತಾಗಿದೆ. ಭೂಮಿಯ ಕ್ಯಾಲೆಂಡರ್ ಪ್ರಕಾರ,ಇನ್ನೂ ಅನೇಕ ಲಕ್ಷ ವರ್ಷಗಳ ಕಾಲ ವಾತಾವರಣ ಸಮತೋಲ ಸ್ಥಿತಿಯಲ್ಲೇ ಇರಬೇಕಿತ್ತು. ಮನುಷ್ಯ ನಿಸರ್ಗದ ಎಲ್ಲ ಸಹಜ ಕ್ರಿಯೆಗಳಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ, ಮುಂದೆಂದೋ ನಿಧಾನಕ್ಕೆ ಸಹಜ ಗತಿಯಲ್ಲಿ ನಡೆಯಬೇಕಾದ ಕ್ರಿಯೆಯೊಂದು ತೀರ ಕ್ಷಿಪ್ರವಾಗಿ ಜರುಗಲಿದೆ. ಉದಾಹರಣೆಗೆ ಜನವರಿಯಲ್ಲಿ ಜಡಿಮಳೆ,ಸಿಡಿಲು, ಗುಡುಗು, ಮಹಾಪೂರ ಬಂದರೆ ಹೇಗಿರುತ್ತದೆ?

ಭೂಮಿಯ ಈ ಎಲ್ಲ ಕೃತ್ಯಗಳೂ ಮನುಕುಲವನ್ನು ಸಲೀಸಾಗಿ ಹೊಸಕಿ ಹಾಕುವಷ್ಟು ಶಕ್ತಿಶಾಲಿ ಎಂಬುದು ಗೊತ್ತಾದಾಗ ಮನುಷ್ಯ ಎದ್ದೇಳುತ್ತಾನೆ. ಇಷ್ಟು ದೊಡ್ಡ 'ಯಂತ್ರ' ವೊಂದು ಕೆಟ್ಟು ಕೂತರೆ, ಸರಿಪಡಿಸುವುದು ಹೇಗೆ? ಎಂಬುದು ಅವನ ತಲೆ ತಿನ್ನುತ್ತಿದೆ.

ಹೊತ್ತಲ್ಲದ ಹೊತ್ತಿನಲ್ಲಿ ಹೀಗಾಗಲು ಕಾರಣಗಳೇನು

ಅಮೇರಿಕಾದ ಮಾಜಿ ಉಪಾಧ್ಯಕ್ಷ ಅಲ್ಗೋರ್ ನಿರೂಪಣೆಯ ಬಿಸಿ ಪ್ರಳಯದ ಕುರಿತ ಸಾಕ್ಷ್ಯ ಚಿತ್ರ An Inconvenient Truth ಪ್ರಕಾರ (ಇದನ್ನು ಪರಿಸರ ಸಂಸ್ಥೆ ಒಂದು ನಿಷ್ಟುರ ಸತ್ಯ ಎಂದು ಕನ್ನಡಕ್ಕೆ ತಂದಿದೆ.)

ಮೊದಲನೆಯದು - ಜನಸಂಖ್ಯಾ ಸ್ಪೋಟ. ಕಳೆದ ಒಂದೂವರೆ ಸಾವಿರ ವರ್ಷಗಳಿಂದ ಭೂಮಿಯ ಮೇಲೆ ಮನುಷ್ಯರ ಸರಾಸರಿ ಸಂಖ್ಯೆ ಇನ್ನೂರು ಕೋಟಿಗಿಂತ ಕಡಿಮೆ ಇತ್ತು. ಕಳೆದ ಒಂದು ನೂರು ವರ್ಷಗಳಲ್ಲಿ, ಅದು ೭೦೦ ಕೋಟಿಗೆ ಬಂದು ನಿಂತಿದೆ. ನಿಂತಿಲ್ಲ, ಇನ್ನೂ ಹೆಚ್ಚುತ್ತಲೇ ಇದೆ. ಈ ಎಲ್ಲರಿಗೂ ನೀರು-ವಿದ್ಯುತ್-ಗಾಳಿ ಬೇಕು, ಆಹಾರಕ್ಕೆ-ವಸತಿಗೆ-ಸಂಚಾರಕ್ಕೆ ನೆಲ ಬೇಕು, ಮನರಂಜನೆ ಬೇಕು, ಅರಣ್ಯ-ಪ್ರಾಣಿ-ಪಕ್ಷಿ-ಮೀನು ಎಲ್ಲ ಬೇಕು. ಆ ಎಲ್ಲವನ್ನು ಇರುವ ಒಂದೇ ಭೂಮಿಯಿಂದ ಎತ್ತಬೇಕು.ಇದು ಸುತ್ತಲಿನ ಪ್ರಕೃತಿಯ ಮೇಲೆ ಭಾರಿ ಒತ್ತಡ ಹೇರಿದೆ.

ಎರಡನೆಯದಾಗಿ - ತಂತ್ರಜ್ಞಾನ, ಟೆಕ್ನಾಲಜಿ. ಈ ಹಿಂದೆ ಭೂಮಿಯ ಸಂಪತ್ತನ್ನು ಎತ್ತುತ್ತಿದ್ದ ಗುದ್ದಲಿ, ಕೊಡಲಿ ಅಥವಾ ದೋಣಿಗಳ ಬದಲಿಗೆ ಈಗ ಬುಲ್ಡೋಜರ್, ಆರ್ಥ್ ಮೂವರ್, ಟ್ರಾವೆಲ್ಲರ್ಗಳು ಬಂದಿವೆ. ಹಿಂದಿನ ಶತಮಾನಗಳಿಗೆ ಹೋಲಿಸಿದರೆ ಇಂದಿನ ತಲಾ ವ್ಯಕ್ತಿಯ ತೋಳ್ಬಲವೂ ಸಾವಿರಾರು ಪಟ್ಟು ಹೆಚ್ಚಿದೆ.

ಮೂರನೆಯ ಕಾರಣ - ಆರ್ಥಿಕ ಏಳಿಗೆಯೊಂದನ್ನೆ ಗುರಿಯಾಗಿಟ್ಟುಕೊಂಡು, ನಿಸರ್ಗದ ಸಮತೋಲನವನ್ನು ಕಡೆಗಣಿಸುವ ನೀತಿ ಎಲ್ಲ ದೇಶಗಳಲ್ಲಿ ಕಾಣುತ್ತಿದೆ. ಹಿಂದೆಲ್ಲ ಮನುಷ್ಯನ ನಡೆ, ನುಡಿ ಹಾಗು ತ್ಯಾಜ್ಯಗಳು ಪ್ರಕೃತಿಗೆ ಸಹನೀಯವಾಗಿದ್ದವು. ಅಡುಗೆಗೆ ಒಲೆ ಉರಿಸಿದರೆ , ಅದರಿಂದ ಹೊಮ್ಮುವ ಕಾರ್ಬನ್ ಡೈ ಆಕ್ಸೈಡ್ ಮರಳಿ ಗಿಡಮರಗಳ ಘೋಷಣೆಗೆ ನೆರವಾಗುತ್ತಿತ್ತು. ಹಿಂದೆ ಉಳುಮೆ ಮಾಡುತ್ತಿದ್ದ 'ಯಂತ್ರ' ಬಸವಣ್ಣನ ತ್ಯಾಜ್ಯಗಳು ಭೂಮಿಗೆ ಗೊಬ್ಬರವಾಗುತ್ತಿತ್ತು. ಇಂದು ಹಾಗಲ್ಲ. ಎಲ್ಲೋ ಕೊಲ್ಲಿ ರಾಷ್ಟ್ರದ ಮರುಭೂಮಿಯ ಪಾತಳದಲ್ಲಿದ್ದ ತೈಲವನ್ನು ಎತ್ತಿ ತಂದು ಉರಿಸಿ, ವಿಧ್ಯುತ್ ಉತ್ಪಾದನೆ ಮಾಡಿ, ಅಡುಗೆ ಮಾಡುತ್ತೇವೆ. ಉಳುಮೆ ಮಾಡುತ್ತೇವೆ. ರಸಗೊಬ್ಬರ ತಯಾರಿಸುತ್ತೇವೆ. ಉಳುಮೆಗೆ ಬಳಸುವ ಈ ಯಂತ್ರದಿಂದ ಸೆಗಣಿಯೂ ಇಲ್ಲ, ಗಂಜಲವೂ ಇಲ್ಲ. ಬರೀ ಹಸಿರುಮನೆ ಅನಿಲಗಳು. ಹಿಂದಿನವರು ಮನೆ ನಿರ್ಮಾಣಕ್ಕೆ ಸೋಗೆ, ಮಣ್ಣು, ಹುಲ್ಲುಕಡ್ಡಿಗಳನ್ನು ಬಳಸುತಿದ್ದರು. ಈಗಿನವರು ಕಬ್ಬಿಣ, ಸಿಮೆಂಟ್, ಗ್ರಾನೈಟ್, ಮರಳು, ಇಟ್ಟಿಗೆ, ಗಾಜು ಬಳಸಿ ನಗರ ನಿರ್ಮಾಣ ಮಾಡುತ್ತಾರೆ. ಅಲ್ಲಿ ತಾಪಮಾನ ಹೆಚ್ಚಿತು ಎಂದು ಇನ್ನಷ್ಟು ವಿಧ್ಯುತ್ ಉರಿಸಿ ಕೃತಕ ತಂಪುಗಾಳಿಯನ್ನು ಸುತ್ತ ಎರೆದುಕೊಳ್ಳುತ್ತಾರೆ. ಇನ್ನಷ್ಟು ವಿಧ್ಯುತ್ ಬೇಕು ಎಂದು ಒತ್ತಾಯ ಮಾಡುತ್ತಾರೆ. ಅದರಿಂದ ಧಗೆ ಇನ್ನಷ್ಟು ಹೆಚ್ಚುತ್ತದೆ ಎಂಬುದು ಗೊತ್ತಿದ್ದರೂ.

ತಂಪುಗೊಳಿಸಲು ಹೋದರೆ ಇನ್ನಷ್ಟು ಹೆಚ್ಚು ಬಿಸಿ

ಇದು ಬಿಸಿ ಪ್ರಳಯದ ಇನ್ನೊಂದು ಆಯಾಮವನ್ನು ಸೃಷ್ಟಿಸುತ್ತಿದೆ. ನಾವು ಯಾವ ಕ್ರಮವನ್ನೂ ಕೈಗೊಳ್ಳದೆ ಅಭಿವೃದ್ದಿಯ ಯಂತ್ರವನ್ನು ಇದ್ದ ಸ್ಥಿತಿಯಲ್ಲೇ ಸ್ಥಗಿತಗೊಳಿಸಿದರೂ, ಈವರೆಗೆ ಮಾಡಿರುವ ಅವಾಂತರಗಳಿಂದ ಬಿಡುಗಡೆಯಾಗಿರುವ  'ಹಸಿರು ಮ್ಯಾನ್ ಅನಿಲಗಳು' ವಾತಾವರಣಕ್ಕೆ ಸೇರಿ ಭೂಮಿಯನ್ನು ಬಿಸಿ ಮಾಡುತ್ತಲೇ ಹೋಗುತ್ತಿದೆ. ಈ ಹಸಿರು ಮನೆ ಅನಿಲಗಳನ್ನು ಹೀರಿಕೊಳ್ಳುತ್ತಿದ್ದ ಅರಣ್ಯಗಳನ್ನು ನಾಶ ಆದಿ ಕೆರೆ ಕತೆಗಳನ್ನು ಬತ್ತಿಸಿ, ಒತುವರಿ ಮಾಡಿದ್ದೇವೆ. ಸಾಗರಗಳನ್ನು ಮಲಿನಗೊಳಿಸಿದ್ದೆವೆ. ಇದರಿಂದ ಧ್ರುವ ಪ್ರದೇಶಗಳ ಹಿಮದ ಹಾಸು ಕರಗುತ್ತಾ ಬಂದ ಹಾಗೆ, ಇನ್ನೂ ಕಲ್ಲಿದ್ದಲು ಅಥವಾ ಪೆಟ್ರೋಲು ಆಗಿ ಪರಿವರ್ತಕವಾಗದ, ಇಂಗಾಲದ ಅಂಶಗಳೊಂದಿಗೆ, ಹಿಮದಡಿಯಲ್ಲಿ ಹೂತಿರುವ ಮೀಥೇನ್ ಇಂಧನ ಪದರ 'ಪೀಟ್ ಬ್ಯಾಗ್'ಗಳು ವಾತಾವರಣಕ್ಕೆ ಬಿಡುಗಡೆಯಾಗುತ್ತವೆ. ಇವು ಭೂಮಿಯ ಉಷ್ಣತೆಯನ್ನು ಇಪ್ಪತ್ತು ಪಟ್ಟು ಹೆಚ್ಚಿಸುತ್ತದೆ. ಈಗಾಗಲೇ ನಾವು ಭೂಮಿಯ ತಾಪ-ಸಮತೋಲನವನ್ನು ಬಿಗಡಾಯಿಸುವ ನಿಟ್ಟಿನಲ್ಲಿ ಸಾಕಷ್ಟು ದೂರ ಕ್ರಮಿಸಿದ್ದೇವೆ. ಇದು ಯಾವ ತಪ್ಪೂ ಮಾಡದ ಇತರ ಮುಗ್ದ ನಿಸ್ಸಹಾಯಕ ಜೀವಿಗಳ ಮೇಲೂ ದುಷ್ಪರಿಣಾಮ ಬೀರುತ್ತದೆ.

ಆದರೆ, ನಾವೇನಾದರೂ ಮಾಡಲೇಬೇಕು, ಏನು ಮಾಡುವುದು

ಮಾತೆತ್ತಿದರೆ ನಾವು ಪರಿಸರ ಸಂರಕ್ಷಿಸೋಣ, ಜನಜಾಗೃತಿ ಮಾಡೋಣ ಎನ್ನುತೇವೆ. ನಾವು ನಮ್ಮ ಜೀವನ ಶೈಲಿಯನ್ನು ತುಸುವೂ ಬದಲಿಸಿಕೊಳ್ಳದೆ, ವರ್ಷ ವರ್ಷವೂ ಪೃಥ್ವಿಯ ಯಾವುದೋ ಒಂದು ಸಮಸ್ಯೆಯತ್ತ ವಿಶೇಷ ಒತ್ತು ಕೊಟ್ಟು ಎಲ್ಲ ಜನರ ಗಮನ ಸೆಳೆಯಲು ಯತ್ನಿಸುತ್ತಿದ್ದೇವೆ. ೧೯೭೨ ರಿಂದಲೂ, ಒಂದು ವರ್ಷ ಮಾಲಿನ್ಯ ನಿಯಂತ್ರಣಕ್ಕೆ ಒತ್ತು, ಮತ್ತೊಂದು ವರ್ಷ ಅರಣ್ಯ ರಕ್ಷಣೆಗೆ ಒತ್ತು, ಒಮ್ಮೆ ಇಡೀ ಜೀವಜಾಲ ರಕ್ಷಣೆಗೆ ಒತ್ತು. ಮತ್ತೊಮ್ಮೆ ಅಂತರ್ಜಲ ರಕ್ಷಣೆಗೆ, ಇನ್ನೊಮ್ಮೆ ಸುಸ್ತಿರ ಬದುಕಿಗೆ ಒತ್ತು. ಒಂದು ವರ್ಷ ಸಾಗರ ಮಾಲಿನ್ಯದತ್ತ ಗಮನ, ಮತ್ತೊಂದು ವರ್ಷ ವಿಸ್ತರಿಸುತ್ತಿರುವ ಮರುಭುಮಿಗಳತ್ತ ಲಕ್ಷ್ಯ....

ಈಗ ನೋಡಿದರೆ, ಈ ಎಲ್ಲ ಸಮಸ್ಯೆಗಳೂ ಒಟ್ಟಾಗಿ ವಕ್ಕರಿಸಿವೆ. ಪೃಥ್ವಿಯ ಕಾಯಿಲೆಗಳನ್ನು ಬಿಡಿಬಿಡಿಯಾಗಿ ನೋಡುವ ಬದಲು, ಮನುಷ್ಯ ಕೃತ್ಯಗಳ ಪರಿಣಾಮ ಇಡೀ ಭೂಮಿಯ ಮೇಲೆ ಹೇಗಾಗುತ್ತಿದೆ ಎಂಬುದನ್ನು ಒತ್ತರ್ ಅವಲೋಕಿಸಬೇಕು

 • ಮೊದಲು ಕಾರ್ಬನ್ ಡೈ ಆಕ್ಸೈಡ್ ಮತ್ತು ಮೀಥೇನ್ ಅನಿಲಗಳ ಉತ್ಪಾದನೆಯನ್ನು ಕಡಿಮೆ ಮಾಡಬೇಕು.
 • ವಾತಾವರಣಕ್ಕೆ ಸೇರುತ್ತಿರುವ ಹೆಚ್ಚುವರಿ ಕಾರ್ಬನ್ ಡೈ ಆಕ್ಸೈಡ್ಗ ಗಳನ್ನು ಹೇಗಾದರೂ ಮಾಡಿ ಸಮುದ್ರದ ತಳಕ್ಕೂ ಇಲ್ಲವೇ ಭೂಗರ್ಭಕ್ಕೂ ಸೇರಿರಬೇಕು.

ಇದನ್ನೆಲ್ಲಾ ಯಾರು ಮಾಡಬೇಕು

ಈ ಪ್ರಶ್ನೆ ಜಟಿಲವಾದುದು. ಸುಧಾರಿತ ದೇಶಗಳಾದ ಅಮೇರಿಕ, ಕೆನಡ, ರಷ್ಯ, ಜಪಾನ್, ಆಸ್ಟ್ರೇಲಿಯಾ, ನ್ಯುಜೀಲ್ಯಾಂಡ್ , ಯುರೋಪ್  ಒಕ್ಕೂಟ ದೇಶಗಳು, ಖನಿಜ ತೈಲಗಳನ್ನು ಅತಿಯಾಗಿ ಬಳಸುವ ದೇಶಗಳು. ಇದಕ್ಕೆ ಇವರೆಲ್ಲ ಮುಂದಾಗಿ, ಬದಲೀ ಇಂಧನಗಳ ಶೋಧನೆಗೆ ಹೆಜ್ಜೆ ಇಡಬೇಕೆಂದು ೧೯೯೮ ರಲ್ಲಿ ಜಪಾನಿನ ಕ್ಯೊಟೊ ನಗರದಲ್ಲಿ ನಡೆದ ಸಮಾವೇಶದಲ್ಲಿ ಒಪ್ಪಂದಕ್ಕೆ ಬರಲು ತೀರ್ಮಾನಿಸಲಾಗಿತ್ತು. ಚೀನಾ, ಇಂಡಿಯಾದಂತ ಪ್ರಗತಿಶೀಲ ದೇಶಗಳಲ್ಲಿ ಕಾರ್ಬನ್ ಡೈ ಆಕ್ಸೈಡ್ ಉತ್ಪಾದನೆ ಅಷ್ಟೇನೂ ದೊಡ್ಡ ಪ್ರಮಾಣದಲ್ಲಿ ಇಲ್ಲವಾದ್ದರಿಂದ ಅವುಗಳ ಮೇಲೆ ಸದ್ಯಕ್ಕೆ ಯಾವ ಕಟ್ಟುಪಾಡುಗಳನ್ನು ಹೇರಬೇಕಿಲ್ಲವೆಂದು ನಿರ್ಧರಿಸಲಾಯಿತು. ಆದರೆ ಈ ದೇಶಗಳು ಭರದಿಂದ ಪ್ರಗತಿ ಸಾದಿಸುತ್ತಿರುವುದರಿಂದ, ಅವೂ ಈ ಒಪ್ಪಂದದಲ್ಲಿ ಭಾಗಿಯಾಗಬೇಕು  ಎಂದು ಅಮೇರಿಕ, ಆಸ್ಟ್ರೇಲಿಯಾಗಳು ಹಠ ಹಿಡಿದು ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದವು.ಇದು ಕೇವಲ ಕುಂಟು ನೆಪವೆಂದೂ, ಈ ಎರಡು ದೇಶಗಳ ಸರಕಾರಗಳು ಪೆಟ್ರೋಲಿಯಂ ಉದ್ಯಮದ ಬಿಗಿಮುಷ್ಟಿಯಲ್ಲಿ ಸಿಲುಕಿದ್ದು, ಕೇವಲ ಲಾಭಕ್ಕಾಗಿ ಸಹಿ ಹಾಕಲು ಆಸಕ್ತಿ ತೋರುತ್ತಿಲ್ಲವೆಂದೂ ಇತರ ದೇಶಗಳಿಗೆ ಸ್ಪಷ್ಟವಾಗಿದೆ.ಕೊನೆಗೆ ಒತ್ತಡಕ್ಕೆ ಮಣಿದು, ಇಂಡೊನೆಶ್ಯಾದಲ್ಲಿ ನಡೆದ ಬಾಲಿ ಸಮ್ಮೇಳನದಲ್ಲಿ ತಾನೂ ಹಸಿರುಮನೆ ಅನಿಲಗಳ ಉತ್ಪಾದನೆಗೆ ಕಡಿವಾಣ ಹಾಕಲು ಯತ್ನಿಸುತ್ತೆನೆಂದು ಅರೆಮನಸ್ಸಿನಿಂದ ಹೇಳಿ ಹೋದ ಅಮೆರಿಕಾದ ಅಂದಿನ ಅಧ್ಯಕ್ಷ ಬುಷ್, ನಂತರ ಬೇರೆ ನೆಪ ಹೇಳಿದರು. 'ಏನನ್ನಾದರೂ ಮಾಡುತ್ತೇವೆ ಆದರೆ ನಮ್ಮ ಪ್ರಜೆಗಳ ಐಶಾರಾಮಿ ಬದುಕನ್ನು ಕಸಿಯಲು  ಸಿದ್ದರಿಲ್ಲ' ಎಂದಿದ್ದರು. ಆದರೆ ಈಚಿನ ವರ್ಷಗಳಲ್ಲಿ ಅಮೇರಿಕ ದೇಶದಲ್ಲೇ ಅತಿವೃಷ್ಟಿ, ಅತಿ ಹಿಮಪಾತ, ಅತಿ ಭೀಕರ ಬರಗಾಲ, ಅತಿ ಭೀಕರ ಚನ್ದಮಾರುತಗಳಂಥಹ ನೈಸರ್ಗಿಕ ಪ್ರಕೋಪ ಅದೆಷ್ಟು ಜಾಸ್ತಿ ಆಗುತ್ತಿದೆಯೆಂದರೆ ಭೂತಾಪವನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳುವುದು ಅಲ್ಲಿನ ಸರಕಾರಕ್ಕೆ ಅನಿವಾರ್ಯವಾಗುತ್ತಿದೆ.

ಬಿಸಿ ಪ್ರಳಯದ ಕುರಿತು ಭಾರತದ ನೀತಿ ಸ್ಪಷ್ಟವಾಗಿದೆ. ಅಮೆರಿಕಾದ ಹಾಗೆ ನಾವೂ ಪ್ರಗತಿ ಸಾಧಿಸಬೇಕು. ನಮಗೂ ನಿರಂತರ ವಿದ್ಯುತ್ ಬೇಕು. ನಮ್ಮ ಜನರೂ ಕಾರು-ಬೈಕ್ ಗಳಲ್ಲಿ ಓಡಾಡಬೇಕು. ಸೌದೆ ಉರಿಸುವ ಬದಲು ಗ್ಯಾಸ್ -ವಿದ್ಯುತ್  ಬಳಸಿ ಅಡುಗೆ ಮಾಡಬೇಕು. ಬದಲೀ ಇಂಧನಗಳು, ಹಸಿರುಮನೆ ಅನಿಲ ಕಡಿಮೆ ಮಾಡುವ ತಂತ್ರಜ್ಞಾನ ರೂಪುಗೊಂಡರೆ, ಅವು ನಮ್ಮ ಕೈಗೆಟಕುವನ್ತಿದ್ದರೆ, ಸುಧಾರಿತ ದೇಶಗಳು ನಮಗದನ್ನು ಕೊಡಲಿ. ಅಲ್ಲಿಯವರೆಗ್ ನಾವು ನಮಗೆ ಲಭ್ಯವಿರುವ ತಂತ್ರಜ್ಞಾನವನ್ನೇ ಬಳಸುತ್ತೇವೆ. ಭಾರತದ ಈ ಗಟ್ಟಿ ನಿಲುವು ಕ್ರಮೇಣ ಅಮೆರಿಕಕ್ಕೂ ಅರ್ಥವಾದಂತಿದೆ. ಈಚೆಗೆ (೨೫ ಜನವರಿ ೨೦೧೫) ಗಣರಾಜ್ಯೋತ್ಸವ ಅತಿಥಿಯಾಗಿ ದಿಲ್ಲಿಗೆ ಬಂದಿದ್ದ ಅಲ್ಲಿನ ಅಧ್ಯಕ್ಷ ಬರಾಕ಼್ ಒಬಾಮ ಮತ್ತು ಪ್ರಧಾನಿ ಮೋದಿ ಅವರ ಒಪ್ಪಂದದ ಪ್ರಕಾರ ಭಾರತದಲ್ಲಿ  ಕಾರ್ಬನೇತರ ಶಕ್ತಿಮೂಲಗಳನ್ನು ಅಭಿವೃದ್ದಿಪಡಿಸಲು ಬೇಕಾದ ತಂತ್ರಜ್ಞಾನ ಮತ್ತು ಧನಸಹಾಯ (ಆರು ಲಕ್ಷ ಕೋಟಿಗೆ) ಅಮೇರಿಕ ಸರಕಾರ ನೆರವು ನೀಡಲಿದೆ. ಸಮುದ್ರಮಟ್ಟ ಏರುತ್ತ, ಅನ್ತರ್ಜಲಮಟ್ಟ ಇಳಿಯುತ್ತಿರುವ ಸಂಧರ್ಭದಲ್ಲಿ ಹವಾಗುಣ ಬದಲಾವಣೆಯನ್ನು ಎದುರಿಸಲು ಸಕಲ ಸಿದ್ದತೆಗೆ ಅಮೇರಿಕ ಅಧುನಿಕ ತಂತ್ರಜ್ಞಾನದ ನೆರವು ನೀಡುವುದಾಗಿ ಹೇಳಿದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ, ರಾಷ್ಟ್ರಮಟ್ಟದಲ್ಲಿ ಅದೇನೇನೆ ಯೋಜನೆ ಹಾಕಿಕೊಂಡಿರಲಿ, ರಾಜ್ಯಮಟ್ಟದಲ್ಲಿ ಏನಾದರೂ ಸ್ಸಿದ್ದತೆ ನಡೆದಿದೆಯೇ ಎಂದು ಕೇಳಿದರೆ ಇದುವರೆಗಿನ ಕ್ರಮಗಳು ನಿರಾಶದಾಯಕವಾಗಿವೆ. ಭೂತಾಪವನ್ನು ಎದುರಿಸಲು ಏನೆಲ್ಲಾ ಸಿದ್ದತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಯೋಜನೆಯೂ ರೂಪುಗೊಂಡಿಲ್ಲ. ಇದೀಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿದಿಗಳು ರಾಜ್ಯದೆಲ್ಲೆಡೆ ಓಡಾಡಿ ಜನಾಭಿಪ್ರಾಯ ಸಂಗ್ರಹಣೆ ಮಾಡುತಿದ್ದಾರೆ. ಬರಲಿರುವ ಬಿಸಿಯುಗದಲ್ಲಿ ಬರಪೀಡಿತ ಜಿಲ್ಲೆಗಳು ನೀರಿನ ಅತಿ ಅಭಾವವನ್ನು ಎದುರಿಸಲಿವೆ; ಹಠಾತ್ ಅತಿವೃಷ್ಟಿಯಾದಾಗ ಹೇಗೆ ನಿಭಾಯಿಸಬೇಕು ಎಂಬುದನ್ನು ಜನರಿಗೆ ತಿಳಿಸಬೇಕಿದೆ. ಪ್ರಖರ ಸೂರ್ಯನನ್ನೇ ಪ್ರಮುಖ ಶಕ್ತಿಮೂಲವಾಗಿ ಬಳಸುವ ನಿಟ್ಟಿನತ್ತ ಕ್ರಮ ಕೈಗೊಳ್ಳಬೇಕಿದೆ.ಸಮುದ್ರದ ಮಟ್ಟ ಮೆಲ್ಲಗೆ ಏರುತ್ತ, ಕರಾವಳಿ ಸೀಮೆಯಲ್ಲಿ ಉಪ್ಪುನೀರಿನ ಅಂಶ ಹೆಚ್ಚುತ್ತಿರುವಾಗ ಅದನ್ನೇ ಸಿಹಿನೀರಾಗಿ ಪರಿವರ್ತಿಸುವ ತಂತ್ರಜ್ಞಾನವನ್ನು ಜಾರಿಗೆ ತರಬೇಕಿದೆ. ಬಣವೆಗೆ ಬೆಂಕಿ ಬಿದ್ದಾಗ ಬಾವಿ ತೋಡುವ ಬದಲು ಈಗಿನಿಂದಲೇ ಅಂಥ ತಂತ್ರಜ್ಞಾನಗಳನ್ನು ಪ್ರಾತ್ಯಕ್ಷಿಕೆಗೆಂದು ಗ್ರಾಮೀಣ ಪರಿಸರದಲ್ಲಿ ಸ್ಥಾಪಿಸಿ ಅಲ್ಲಿನ ಯುವಕರು ತಾಂತ್ರಿಕ ಪರಿಣತಿ ಪಡೆದು ಉದ್ಯೋಗವಕಾಶವನ್ನೂ ಪಡೆಯುವಂತೆ ಅನುಕೂಲತೆಗಳನ್ನು ಮಾಡಬೇಕಾಗಿದೆ.

ಸಾಮಾನ್ಯ ಪ್ರಜೆಗಳಾದ ನಾವು ಏನು ಮಾಡಬೇಕು

ಸರಕಾರಗಳ ನೀತಿ ಹಾಗು ಕಾರ್ಯಾಚರಣೆ ಹೇಗೂ ಇರಲಿ, ನಾವು ಸಾಮಾನ್ಯ ಪ್ರಜೆಗಳು ಪೃಥ್ವಿಯ ಬಿಸಿ ಪ್ರಳಯವನ್ನು ತಡೆಗಟ್ಟಲು ವೈಯುಕ್ತಿಕ ಮಟ್ಟದಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ಶಕ್ತಿಯ ಅಂದಾದುಂದಿ ವೆಚ್ಚಕ್ಕೆ ಕಡಿವಾಣ ಹಾಕಬೇಕು. ಸಾದ್ಯವಿದ್ದಷ್ಟೂ ನಿಸರ್ಗದ ಪ್ರಕ್ರ್ಯೆಗಳಿಗೆ ಭಂಗ ಬಾರದಂಥ ಜೀವನ ಕ್ರಮವನ್ನು ಅನುಸರಿಸಬೇಕೇ ವಿನಾ ಅಮೇರಿಕಾದ ಮಾದರಿಯ ಐಭೊಗದ ಬದುಕನ್ನಾಗಲಿ ಪಾಶ್ಚಾತ್ಯರ ಕೊಳ್ಳುಬಾಕ ಸಂಸ್ಕ್ರುತಿಯನ್ನಾಗಲಿ ಅನುಸರಿಸಬೇಕಿಲ್ಲ.

'ಜಗತ್ತು ಬದಲಾಗಬೇಕೆಂದು ಎಲ್ಲರೂ ಬಯಸುತ್ತಾರೆ. ತಾನು ಬದಲಾಗಬೇಕೆಂದು ಯಾರೂ ಯತ್ನಿಸುವುದಿಲ್ಲ' ಎಂದು ಖ್ಯಾತ ಚಿಂತಕ ಲಿಯೋ ಟಾಲ್ ಸ್ಟಾಯ್ ಹೇಳಿದ್ದರು.

ಅದನ್ನೇ ಗಾಂಧೀಜಿಯವರು ಇನ್ನೊಂದು ರೀತಿಯಲ್ಲಿ ಹೇಳಿದ್ದರು

'ಬೇರೆಯವರಲ್ಲಿ ಏನು ಬದಲಾವಣೆ ಆಗಬೇಕೆಂದು ನೀವು ನಿರೀಕ್ಷಿಸುತ್ತಿರೋ, ಅಂಥದೇ ಬದಲಾವಣೆ ನಿಮ್ಮಲ್ಲೂ ಆಗಲಿ' ಎಂದು. ಅವರು ಸ್ವತಃ ಈ ಮಾತಿಗೆ ಮಾದರಿಯಾಗಿ ಬದುಕಿದ್ದರು.

ನಾವು ಬದಲಾಗಬೇಕು. ನಮ್ಮ ದಿನನಿತ್ಯದ ಚರ್ಯೆಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಎಲ್ಲರೂ ತಂತಮ್ಮ ಬದುಕಿನ ವಿಧಾನಗಳನ್ನು ತುಸು ತುಸು ಬದಲಿಸಿಕೊಂಡರೆ ಮಾತ್ರ, ಭೂಮಿಯನ್ನು ಮುಂದಿನ ತಲೆಮಾರಿಗೆ ಸುರಕ್ಷಿತವಾಗಿ ವರ್ಗಾವಣೆ ಮಾಡಲು ಸಾಧ್ಯವಿದೆ.

ನೀವು ನಗರವಾಸಿಗಳಾಗಿದ್ದರೆ

 • ಓಡಾಟಕ್ಕೆ ಬಸ್ ರೈಲಿನಂಥ ಸಾಮೂಹಿಕ ಸಂಚಾರ ಸಾಧನಗಳನ್ನು ಬಳಸಿ, ಸಮೀಪದ ತಿರುಗಾಟಕ್ಕೆ ಕಾಲ್ನಡಿಗೆ, ಸೈಕಲ್ ಸವಾರಿ ಉತ್ತಮ.
 • ಸ್ನಾನಕ್ಕೆ - ಆಡುಗೆಗೆ ಕಲ್ಲಿದ್ದಲು, ಖನಿಜತೈಲದಿಂದ ಉತ್ಪಾದಿಸಿದ ವಿದ್ಯುತ್ ಬಳಸಲೇಬೇಡಿ. ಸೌರಶಕ್ತಿಯನ್ನು ಬಳಸಿ.
 • ವಿದ್ಯುತ್ ಬಳಕೆಯನ್ನು ಮಿತಗೊಳಿಸಿ, ಫಿಲಮೆಂಟ್ ಬಲ್ಬ್  ಗಳ ಬದಲಿಗೆ ಸಿ ಎಫ್ ಎಲ್ / ಎಲ್ ಇ ಡಿ ಗಳನ್ನೂ ಬಳಸಿ.
 • ನೀರಿನ ದುರ್ಬಳಕೆಯನ್ನು ತಡೆಗಟ್ಟಿ, ಬಟ್ಟೆ ತೊಳೆದ ನೀರನ್ನು ಅಂಗಳ - ಕಾರ್ ತೊಳೆಯುವುದಕ್ಕೆ ಮರುಬಳಕೆ ಮಾಡಿ.
 • ಮಳೆನೀರನ್ನು ಸಂಗ್ರಹಿಸಿ, ಬಳಸಿ.
 • ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಿ; ಘನತ್ಯಾಜ್ಯಗಳ ಮರುಬಳಕೆಗೆ ಯತ್ನಿಸಿ.
 • ಮನೆಯಲ್ಲೊಂದು ಕೈದೋಟ ಹಾಗು ಸುತ್ತಮುತ್ತ ಗಿಡಮರಗಳನ್ನು ಬೆಳೆಸಿ. ಅವುಗಳ ಪೋಷಣೆಗೆ ಅಡುಗೆ ತ್ಯಾಜ್ಯ ನೀರನ್ನೇ ಬಳಸಿ.
 • ಏರ್ ಕಂಡೀಶನಿಂಗ್ ಅಗತ್ಯವಿಲ್ಲದಂತೆ ಮನೆಕಟ್ಟುವ ಹಂತದಲ್ಲಿ ತಾಪಸಮತೋಲ ಕಾಯ್ದುಕೊಳ್ಳುವಂಥ ಕಟ್ಟಡ ಸಾಮಗ್ರಿಗಳನ್ನು ಬಳಸಿ
 • ಮದುವೆ, ಹಬ್ಬಹರಿದಿನಗಳಲ್ಲಿ ಪರಿಸರಕ್ಕೆ ಧಕ್ಕೆ ತರುವ ಆಚರಣೆಗಳನ್ನೆಲ್ಲ ಕಡಿಮೆ ಮಾಡಿ.
 • ಸಮೀಪದ ಶಾಲೆ - ಕಾಲೇಜುಗಳಿಗೆ ಭೇಟಿ ನೀಡಿ, ಪರಿಸರ ರಕ್ಷಣೆಯ ಕೆಲಸಗಳಿಗೆ ಪ್ರೇರಣೆ ನೀಡಿ; ಅದಕ್ಕೆ ಪೂರಕವಾದ ಸಮುದಾಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಿ.
 • ನಿಮ್ಮ ಮನೆಯ ನರ್ಸರಿಯಲ್ಲಿ ಬೆಳೆದ ಸಸಿಗಳನ್ನು ದಾನ ಕೊಡಿ.
 • ಮರಣದ ನಂತರ ನಿಮ್ಮ ದೇಹವನ್ನು ವಿದ್ಯುತ್ ಚಿತೆಯಲ್ಲೋ ಕಟ್ಟಿಗೆಯಿಂದಲೋ ಸಂಸ್ಕಾರ ಮಾಡದೆ ಹೂಳಲು ಹೇಳಿ. ಇಲ್ಲವೇ ದೇಹದಾನದ ಉಯಿಲು ಬರೆದಿಡಿ.
 • ಉಡುಗೊರೆ ನೀಡುವಾಗ ಪರಿಸರಸ್ನೇಹಿ ವಸ್ತುಗಳನ್ನೇ ಉಡುಗೊರೆ ನೀಡಿ. ಭೋಗವಸ್ತುಗಳ ಬದಲು ಪರಿಸರ ರಕ್ಷಣೆಗೆ ಪ್ರೇರಣೆ  ನೀಡಬಲ್ಲ ಗ್ರಂಥ, ಸಿಡಿ, ಡಿ ವಿ ಡಿ ಗಳನ್ನು ನೀಡಿ.

ನೀವು ಗ್ರಾಮವಾಸಿಗಳಾಗಿದ್ದರೆ

 • ಜಮೀನನ್ನು  ಖಾಲಿ ಬಿಡಬೇಡಿ. ಅಲ್ಲಿ ತೋಟಗಾರಿಕೆಯ ಗಿಡಮರಗಳನ್ನು ಬೆಳೆಸಿ. ಬದುಗಳಲ್ಲಿ, ಬೇಲಿಯಂಚಿನಲ್ಲಿ ಮಳೆಗಾಲಕ್ಕೆ ಮುನ್ನ ಆಳದ ಮರದ ಕೊಂಬೆ, ಹೊಗೆಯಂಥ ಸಸಿಗಳನ್ನು ನೆಟ್ಟು ಬೆಳೆಸಿ.
 • ಭತ್ತ, ಕಬ್ಬು, ಬಾಳೆ ಬೆಳೆಯಲು ಅಂತರ್ಜಲ ಬಳಸಲೇ ಬೇಡಿ.
 • ನಿಮ್ಮ ಜಮೀನಿನ ಮೇಲೆ ಸುರಿಯುವ ಮಳೆನೀರು ವ್ಯರ್ಥ ಹರಿದು ಹೋಗದಂತೆ ಜಮೀನಿನಲ್ಲೆ ಇಂಗಿಸಿ.
 • ಸಾಧ್ಯವಾದಷ್ಟೂ ಸಾವಯವ ಬೇಸಾಯ ಮಾಡಿ.
 • ಹಣ್ಣಿನ ಗಿಡಗಳ ನರ್ಸರಿ ತಯಾರಿಸಿ. ನಿಮ್ಮ ಹಳ್ಳಿಯ ರಸ್ತೆ ಬದಿಯಲ್ಲಿ, ಕೆರೆಯಂಚಿನಲ್ಲಿ , ಖಾಲಿ ಭೂಮಿಯಲ್ಲಿ ಸಾಮೂಹಿಕವಾಗಿ ನೆಟ್ಟು ಬೆಳೆಸಿ.

ನೆನಪಿಡಿ

'ಈ ಭೂಮಿ ಎಲ್ಲರ ಆಸೆಗಳನ್ನು ಪೂರೈಸಬಲ್ಲದು; ದುರಾಸೆಗಳನ್ನಲ್ಲ'

ಎಂದು ಗಾಂಧೀಜಿ ತುಂಬಾ ಹಿಂದೆಯೇ ಹೇಳಿದ್ದರು. ಈ ಮಾತು ಎಲ್ಲ ಮನುಷ್ಯರ ಬದುಕಿನ ಸೂತ್ರವಾದರೆ, ಭೂಮಿಗೆ ಬಿಸಿ ಪ್ರಳಯದ ಭಯ ಇರಲಾರದು.

ಮೂಲ : ನಾಗೇಶ್ ಹೆಗಡೆ /ಸೈನ್ಸ್  ಫಾರ್  ಸೋಶಿಯಲ್  ಚೇಂಜ್

2.85185185185
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top