ಕಲಿಕಾ ಪ್ರಕ್ರಿಯೆಯು ಭ್ರೂಣದಿಂದ ಚಟ್ಟದವರೆಗೆ ನಡೆಯುವುದು ಎಲ್ಲರಿಗೂ ತಿಳಿದ ಸಂಗತಿಯೆ. ತಾಯಿಯ ಉದರದಲ್ಲಿರುವಾಗಲೇ ’ಅಭಿಮನ್ಯು’ ತನ್ನ ಮಾವ ’ಶ್ರೀಕೃಷ್ಣ’ ಪರಮಾತ್ಮ ತನ್ನ ತಾಯಿಗೆ ಹೇಳುತ್ತಿದ್ದ ಕಥೆಯನ್ನು ಕೇಳಿ ಚಕ್ರವ್ಯೂಹವನ್ನು ಭೇದಿಸಿದ್ದು ಎಲ್ಲರಿಗೂ ತಿಳಿದದ್ದೆ. ಅದೇ ರೀತಿ ಸಾವಿನವರೆಗೂ ಕಲಿಕೆಯಲ್ಲಿ ತೊಡಗಿದ್ದ ಎ.ಪಿ.ಜೆ ಅಬ್ದುಲ್ ಕಲಾಂ, ಗಾಂಧಿಜೀಯವರು ನಿರಂತರ ಕಲಿಕೆಯ ಪ್ರತೀಕ.
ಇಂತಹ ಕಲಿಕೆಯು ಮನೆಯಲ್ಲಿ ತಾಯಿಯಿಂದ ಪ್ರಾರಂಭವಾಗಿ ಅನಂತರ ಗುರುಕುಲ/ಶಾಲೆಯಲ್ಲಿ ನಡೆಯುತ್ತದೆ. ಮನೆಯಲ್ಲಿ ತಾತು ನಡೆ-ನುಡಿ, ವರ್ತನೆ, ಆತಿಥ್ಯ ಸತ್ಕಾರ ಮೊದಲಾದವುಗಳನ್ನು ಕಲಿಸಿದರೆ, ಶಾಲೆಯಲ್ಲಿ ಔಪಚಾರಿಕವಾಗಿ ಈ ಎಲ್ಲವುಗಳ ಅನುಸರಣೆ, ಅನುಕರಣೆ ರೂಢಿಯ ಜೊತೆಯಲ್ಲಿಯೇ ಪ್ರಾಪಂಚಿಕ ಜ್ಞಾನ ನೀಡಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವಂತೆ ಮಾಡಲಾಗುತ್ತದೆ. ಕಾಲ ಬದಲಾದಂತೆ ಈ ಶಿಕ್ಷಣ ವ್ಯವಸ್ಥೆಯಲ್ಲಿಯೂ ಬದಲಾವಣೆಯಾಗುತ್ತಿರುವುದನ್ನು ಕಾಣಬಹುದು. ಶಿಕ್ಷಣವೆಂಬುದು ನಿಂತ ನೀರಲ್ಲ. ಹರಿಯುವ ನೀರು ಆದ ಕಾರಣ ಬದಲಾವಣೆಯೆಂಬುದು ಅಗತ್ಯ ಹಾಗೂ ಅನಿವಾರ್ಯವೂ ಹೌದು.
ಜಾಗತೀಕರಣ, ಉದಾರೀಕರಣ, ಖಾಸಗೀಕರಣದಿಂದಾಗಿ ಇಂದಿನ ಯುಗವು ಪ್ರತಿಯೊಂದು ಕ್ಷೇತ್ರದಲ್ಲಿ ಒಂದಲ್ಲ ಒಂದು ವಿಧದ ಬದಲಾವಣೆಯನ್ನು ಹೊಸತನ್ನು ತರುತ್ತಿದೆ. ಉದಾಹರಣೆಗೆ: ಆರ್ಥಿಕ ವಲಯದಲ್ಲಿನ ಯಾವುದೇ ಒಂದು ವಸ್ತುವಿನ ಉತ್ಪಾದನೆಯು ಬೇಡಿಕೆ ಪೂರೈಕೆ, ಬೆಲೆ, ಗುಣಮಟ್ಟ, ಪ್ರಮಾಣ ಎಲ್ಲಾ ಹಂತಗಳನ್ನು ದಾಟಿ ನಡೆಯುವಂತಹದ್ದು. ಹಿಂದೆ ಇದ್ದದ್ದು ಇಂದು ಇಲ್ಲ. ಇಂದು ಇದ್ದದ್ದು ನಾಳೆ ಇಲ್ಲ. ಹೀಗಾಗಿ ಬದಲಾವಣೆಯು ಅನಿವಾರ್ಯವಾದುದಾಗಿದ್ದು, ಯಾವುದೇ ಕ್ಷೇತ್ರವು ಇದರಿಂದ ಹೊರತಾದುದಲ್ಲ. ಅದು ಆರ್ಥಿಕವಾಗಿರಬಹುದು, ಇಲ್ಲವೇ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರವಾಗಿರಬಹುದು.
ಆದರೆ ಈ ಬದಲಾವಣೆ ಎಂಬುದು ಹೇಗಾಗುತ್ತಿದೆ, ಯಾವ ಹಂತದವರೆಗೆ ನಡೆಯುತ್ತದೆ ಎಂಬುದು ಬಹು ಮುಖ್ಯ. ಅದರಲ್ಲೂ ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಹೊಸತನವನ್ನು ತರಬೇಕಾದರೆ ಮೊದಲು ಗಮನಿಸಬೇಕಾದುದು, ಕಲಿಕಾರ್ಥಿ/ವಿದ್ಯಾರ್ಥಿ ಹಾಗೂ ಶಿಕ್ಷರನ್ನ. ಕಾರಣ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಯ ಪ್ರಭಾವಕ್ಕೆ ಹೆಚ್ಚಾಗಿ ಒಳಗಾಗುವವರು ಈ ಇಬ್ಬರೇ. ಆದರೆ ಉನ್ನತ ಸಂಸ್ಥೆಗಳು ಸರ್ಕಾರ ಇವರತ್ತ ಕೊಂಚವೂ ಗಮನ ಹರಿಸದೆ, ’ನಾ ಮಾಡಿದ್ದೆ ಸರಿ’ ಎಂಬ ಘೋಷಾ ವಾಕ್ಯದಂತೆ ತಮಗೆ ಸರಿ ಅನ್ನಿಸಿದ್ದು ಎಲ್ಲಾ ಕ್ಷೇತ್ರದಲ್ಲಿ ಮಾಡುವಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಮಾಡುತ್ತಿರುವುದು ವಿಪರ್ಯಾಸ.
ಈಗಾಗಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಜಾರಿಗೊಳಿಸಿದ ಬದಲಾವಣೆಗಳಲ್ಲಿ ಸೆಮಿಸ್ಟರ್ ಪದ್ದತಿಯು ಒಂದು. ಮೊದಮೊದಲು ಪ್ರಾಥಮಿಕ ಶಾಲೆಗಳಲ್ಲಿ ಜಾರಿಗೆ ತಂದ ಈ ಪದ್ದತಿ, ಕಾಲಾಂತರದಲ್ಲಿ ಪದವಿ ಶಿಕ್ಷಣಕ್ಕೂ ಆವರಿಸಿತು. ಶಾಲೆಗಳಲಿ ಈ ಪದ್ದತಿಯಿಂದಾದ ಗೊಂದಲಗಳಿಂದ ಅದರ ಅಳವಡಿಕೆಯಲ್ಲಿ ಕೆಲವು ಬದಲಾವಣೆಗಳನ್ನು ಸಡಿಲ ನೀತಿಯನ್ನು ಅನುಸರಿಸುವಂತೆ ಮಾಡಲಾಯಿತು. ಆದರೆ ಪದವಿ ತರಗತಿಗೆ ಜಾರಿಗೊಳಿಸಿದ ಸೆಮಿಸ್ಟರ್ ಪದ್ದತಿಯಿಂದ
ವರ್ಷಕ್ಕೆ ೨ ಪರೀಕ್ಷೆಗಳು ನಡೆಯುವಂತಾಯಿತು. ಒಂದು ಸೆಮಿಸ್ಟರ್ ಗೆ ಇದ್ದ ಪಠ್ಯಗಳು ಮತ್ತೊಂದು ಸೆಮಿಸ್ಟರಿಗೆ ಮುಂದುವರಿಯುವುದಿಲ್ಲ. ಆಯಾ ಸೆಮಿಸ್ಟರಿಗೆ ಅಂದರೆ ೯೦ ಕೆಲಸದ ದಿನಗಳಿಗೆ ಸಂಬಂಧಿಸಿದಂತೆ ಸಿದ್ದಗೊಳಿಸಲಾಗಿರುತ್ತದೆ. ಇದರಿಂದಾಗಿ ಅಧ್ಯಾಪಕರು ತಮಗೆ ನೀಡಿದ ಬೋಧನಾ ಅವಧಿಯ ಒಳಗೆ ಕಿರು ಪರೀಕ್ಷೆಗಳು, ಸಿದ್ದತಾ ಪರೀಕ್ಷೆಗಳನ್ನೊಳಗೊಂಡಂತೆ ಯೋಜನೆಯನ್ನು ತಯಾರಿಸಿ ಬೋಧನಾ ಕಾರ್ಯವನ್ನು ಮುಗಿಸಬೇಕು. ಇನ್ನು ವಿದ್ಯಾರ್ಥಿಗಳೋ ಕೇವಲ ಪರೀಕ್ಷಾ ದೃಷ್ಟಿಯಿಂದ ಮಾತ್ರ ಓದುವರೇ ಹೊರತು ಮುಂದೆ ನಮ್ಮ ಭವಿಷ್ಯಕ್ಕೆ ಸಹಕಾರಿಯಾಗುವುದು ಎಂದೋ ಅಥವಾ ಜ್ಞಾನ ವೃದ್ಧಿಸಿಕೊಳ್ಳಬೇಕೆಂದೋ ಓದುವವರು ಬಹಳ ಕಡಿಮೆ. ಜೊತೆಗೆ ಆಯಾ ಸೆಮಿಸ್ಟರಿಗೆ ಮಾತ್ರ ಸೀಮಿತವಾಗಿರುವ ಪಠ್ಯಕ್ರಮವಾಗಿರುವುದರಿಂದಾಗಿ ಅದನ್ನು ಮುಂದಿನ ಸೆಮಿಸ್ಟರಿಗೆ ಕೊಂಡೊಯ್ಯಲಾಗದು. ಹೀಗಾಗಿ ಒಂದು ಸೆಂ ನಲ್ಲಿ ಓದಿದ್ದನ್ನು ಮತ್ತೊಂದು ಸೆಂ ನಲ್ಲಿ ಮರೆತು ಹೋಗುವ ಸಂಭವವು ಹೆಚ್ಚು.
ವಾರ್ಷಿಕ ಪಠ್ಯಕ್ರಮವೆಂಬ ವಿಧಾನವಿದ್ದಾಗ ಪಠ್ಯಗಳನ್ನು ತಿಂಗಳಿಗೆ ತಕ್ಕಂತೆ ವಿಭಾಗಿಸಿಕೊಂಡು ಇಡೀ ವರ್ಷದ ಪಾಠಯೋಜನೆಯನ್ನು ಸಿದ್ದ ಪಡಿಸಿಕೊಂಡು, ಬೋಧನಾ ಕಾರ್ಯದಲ್ಲಿ ತೊಡಗಿ ಘಟಕ, ಕಿರು, ಮಧ್ಯವಾರ್ಷಿಕ ವಾರ್ಷಿಕ ಪರೀಕ್ಷೆಗಳ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಮೌಲ್ಯಮಾಪನ ಮಾಡಲಾಗುತ್ತಿತ್ತು. ಒಂದು ವರ್ಷದಲ್ಲಿನ ಇಡೀ ಪಠ್ಯವನ್ನು ಹಂತ ಹಂತವಾಗಿ ಘಟಕ, ಕಿರು, ಮಧ್ಯವಾರ್ಷಿಕ ಪರೀಕ್ಷೆಗಳಲ್ಲಿ ಬರೆದು, ಕೊನೆಯಲ್ಲಿ ವಾರ್ಷಿಕ ಪರೀಕ್ಷೆಯಲ್ಲಿ ಬರೆಯುತ್ತಿದ್ದುದರಿಂದ ಮೊದಲಿನಿಂತ ಕೊನೆಯವರೆಗೆ ಎಲ್ಲವನ್ನು ಮತ್ತೊಮ್ಮೆ ಓದಬೇಕಾಗುತ್ತಿತ್ತು. ಇದು ಓದಿದನ್ನು ಪುನರ್ ಮನನ ಮಾಡುತ್ತಿದ್ದುದರಿಂದ ಏನನ್ನು ಓದಿದರು ಮರೆಯುತ್ತಿರಲಿಲ್ಲ. ಆದರೆ ಸೆಮಿಸ್ಟರ್ ಪದ್ದತಿಯಿಂದಾಗಿ ಕಾಲ ಕಡಿಮೆಯಾದುದರಿಂದ ಹಾಗೂ ಪಠ್ಯಗಳು ಆ ಕಾಲಕ್ಕೆ ಮಾತ್ರ ಸೀಮಿತವಾದುದರಿಂದ ಜ್ಞಾನದ ಮಟ್ಟವು ಕುಸಿಯುತ್ತಿದೆ. ವಾರ್ಷಿಕ ಪದ್ದತಿಯಲ್ಲಿ ಕಲಿಕಾ ಹಾಗೂ ಬೋಧನಾ ಅವಧಿ ಹಚ್ಚಿರುವುದರಿಂದ ಕಲಿಕೆಯಲ್ಲಿನ ಅವಧಿ ಹೆಚ್ಚಾಗಿ ಜ್ಞಾನವು ಹೆಚ್ಚುತ್ತದೆ ಹಾಗೂ ಪುನರ್ ಮನನವು ಉಂಟಾಗುವುದರಿಂದ ಜ್ಞಾನವು ಹೆಚ್ಚು ಕಾಲ ಉಳಿಯಲು ಸಹಕಾರಿಯಾಗುವುದು ಎಂಬುದು ನನ್ನ ಅಭಿಮತ.
ಶಿಕ್ಷಣವೆಂಬುದು ಅರಿವಿನ ತಾಣ
ಅದರಲ್ಲಿ ಬದಲಾವಣೆ ತರಲು ಬೇಕು ಸಕಲ ಜ್ಞಾನ.
ಕೊನೆಯ ಮಾರ್ಪಾಟು : 6/22/2020
ಒಂದೂ ಕಾಲು ಶತಮಾನಕ್ಕೂ ಹೆಚ್ಚು ಕಾಲ ಪಾಶ್ಚಾತ್ಯ ಶಿಕ್ಷಣಪದ್...
ಕರ್ನಾಟಕದ ಎಲ್ಲ ಅನಕ್ಷರಸ್ಥರಿಗೆ, ನವಸಾಕ್ಷರರಿಗೆ ಮತ್ತು ಮಧ...
ಬಾಲ ಕಾರ್ಮಿಕತೆಯ-ಮಿಥ್ಯಗಳು ಮತ್ತು ಸತ್ಯಗಳ ಬಗ್ಗೆಗಿನ ಮಾಹ...
ವರದಕ್ಷಿಣಯು ನಮ್ಮ ಸಮಾಜದಲ್ಲಿ ಸಾಮಾಜಿಕ ಪಿಡುಗಾಗಿದ್ದು, ಊಹ...