9ರಿಂದ 12ನೇ ತರಗತಿಯ ಶಿಕ್ಷಣವನ್ನು ಸಾರ್ವತ್ರೀಕರಿಸಿ ಉನ್ನತೀಕರಣಗೊಳಿಸಲು ಈ ವರ್ಷದಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಾ ಅಭಿಯಾನ (ಆರ್.ಎಂ.ಎಸ್.ಎ)ವನ್ನು ಕೇಂದ್ರ ಸರ್ಕಾರ ಆರಂಭಿಸಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆಗಳು ರೂಪುಗೊಂಡು ಹೊಸ ಹೊಸ ಯೋಜನೆಗಳು ಜಾರಿಯಾಗುತ್ತಿವೆ. ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ, ಶಿಕ್ಷಕರ ತರಬೇತಿಗಳಲ್ಲಿ ಬದಲಾವಣೆ, ಫೋನ್-ಇನ್ ನೇರ ಕಾರ್ಯಕ್ರಮ ಈ ಎಲ್ಲ ಯೋಜನೆಗಳ ಮೂಲ ಉದ್ದೇಶ ಶಿಕ್ಷಣದ ಗುಣಮಟ್ಟ ಉನ್ನತವಾಗಬೇಕು ಎನ್ನುವುದಾಗಿದೆ.
ರಾಷ್ಟ್ರೀಯ ಶಿಕ್ಷಣ ನೀತಿ ಈ ದಿಸೆಯಲ್ಲಿ ಹೊಸ ಚಿಂತನೆಯನ್ನು ಪ್ರಾರಂಭಿಸಿತು. ಅರ್ಹ ವಯಸ್ಸಿನ ಅಂದರೆ ಹದಿನಾಲ್ಕು ವಯಸ್ಸಿನೊಳಗಿನ ಎಲ್ಲ ಮಕ್ಕಳನ್ನು ಶೈಕ್ಷಣಿಕ ವ್ಯವಸ್ಥೆಗೆ ಸೇರ್ಪಡೆ ಮಾಡುವುದು ಒಂದು ಗುರಿಯಾದರೆ, ಸೇರ್ಪಡೆಯಾದ ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸಕ್ಕೆ ಸರಕಾರವು ಬದ್ಧತೆಯಿಂದ ಇರಬೇಕು ಎಂಬುದು ಆಶಯವಾಗಿದೆ.
ಶಾಲಾ ಮಕ್ಕಳ ಗುಣಮಟ್ಟವನ್ನು ಮೌಲ್ಯಾಂಕನ ಮಾಡುತ್ತ ಮಕ್ಕಳ ಕಲಿಕೆ ಗುಣಮಟ್ಟವನ್ನು ಹೆಚ್ಚಿಸುವ ಧ್ಯೇಯ ಹೊಂದಿರುವ ಸಂಸ್ಥೆಯೇ ಕರ್ನಾಟಕ ಶಾಲಾ ಗುಣಮಟ್ಟ ಮೌಲ್ಯಾಂಕನ ಸಂಸ್ಥೆ(ಕೆ. ಎಸ್. ಕ್ಯೂ. ಎ. ಓ)ಯಾಗಿದೆ.
ಪ್ರೌಢ ಶಿಕ್ಷಣ ಸಾರ್ವತ್ರೀಕರಣದ ಉದ್ದೇಶದಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್.ಎಮ್.ಎಸ್.ಎ) ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮವು 2017ರ ವೇಳೆಗೆ ಶಾಲಾ ಶಿಕ್ಷಣ (9-12 ತರಗತಿ)ವನ್ನು ಸಾರ್ವತ್ರೀಕರಣಗೊಳಿಸುವ ಗುರಿ ಹೊಂದಿದೆ.
ಈ ಕಾರ್ಯಕ್ರಮದ ಚೌಕಟ್ಟಿನಡಿಯಲ್ಲಿ ರಾಜ್ಯದಲ್ಲಿ ಪ್ರೌಢ ಶಿಕ್ಷಣದ ಸಾರ್ವತ್ರೀಕರಣ ಸಾಧಿಸುವಲ್ಲಿ ಸಾರ್ವತ್ರಿಕ ಅವಕಾಶ, ಸಮತೆ, ಗುಣಮಟ್ಟ ಸುಧಾರಣೆ ಸೇರಿದಂತೆ ಹಲವಾರು ಪೂರಕ ಅಂಶಗಳನ್ನು ಪರಿಗಣಿಸಿ ಮುನ್ನೋಟ ಯೋಜನೆ (ಪರ್ಸ್‌ಪೆಕ್ಟಿವ್ ಪ್ಲಾನ್) 2010-2017’ ತಯಾರಿಸಿ ಅನುಮೋದನೆಯ ನಂತರ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ರಾಜ್ಯವ್ಯಾಪಿ ಏಕರೂಪದ ಕಲಿಕೆಯ ಸಾಧನೆಯ ಅಂಕಿ ಅಂಶಗಳು (ಬೆಂಚ್‌ಮಾರ್ಕ) ಇಲ್ಲದಿರುವ ವಿಚಾರವನ್ನು ಮನಗಂಡಿರುವ ಇಲಾಖೆ ರಾಜ್ಯದ ಆಯ್ದ ಸರಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ 9 ನೆಯ ತರಗತಿಯ ಮಕ್ಕಳ ಕಲಿಕೆಯ ಗುಣಮಟ್ಟವನ್ನು ಬೇಸ್‌ಲೈನ್ ಅಧ್ಯಯನದ ಮೂಲಕ ತಿಳಿಯಲು ನಿರ್ಧರಿಸಿದೆ.
ಈ ಕಾರ್ಯಕ್ಕಾಗಿ ರಾಜ್ಯದ ಸರಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಶೇ 30 ವಿವಿಧ ಮಾಧ್ಯಮದ ಶಾಲೆಗಳಲ್ಲಿ ಮೌಲ್ಯಾಂಕನ ಕಾರ್ಯ ನಡೆಯಲಿದೆ.
ವಿಷಯಗಳ ಆಯ್ಕೆ ಪ್ರಥಮ ಭಾಷೆ- ಕನ್ನಡ, ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ ಒಳಗೊಂಡಂತೆ ಒಟ್ಟು ಎಂಟು ಭಾಷೆಗಳಿವೆ.
ದ್ವಿತೀಯ ಭಾಷೆ- ಇಂಗ್ಲಿಷ್/ ಕನ್ನಡ ; ತೃತೀಯ ಭಾಷೆ- ಹಿಂದಿ /ಕನ್ನಡ /ಇಂಗ್ಲಿಷ್ /ಸಂಸ್ಕ್ರತ ; ಕೋರ್ ವಿಷಯಗಳು -ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ;ಸಹ ಪಠ್ಯ ವಿಷಯ- ಪಾರ್ಟ್- ಬಿ-2009 ಜೂನ್‌ನಿಂದ 2009ರ ಡಿಸೆಂಬರ್ ಅಂತ್ಯದವರೆಗಿನ ಅವಧಿಯಲ್ಲಿನ ಪಠ್ಯವಸ್ತುವನ್ನು ಆಧರಿಸಿ ಪ್ರತಿ ವಿಷಯದಲ್ಲಿ ಆಯ್ದ 30 ನಿರೀಕ್ಷಿತ ಕಲಿಕೆಯ ಫಲಗಳನ್ನು ಆಯ್ಕೆ ಮಾಡಲಾಗಿದೆ. ಬಹು ಆಯ್ಕೆ ಪದ್ಧತಿಗಳನ್ನು ಪ್ರಶ್ನಾವಳಿಯಲ್ಲಿ ಅನುಸರಿಸಲಾಗುತ್ತಿದ್ದು ನಾಲ್ಕು ಪತ್ರಿಕೆಗಳಲ್ಲಿ ಏಳು ವಿಷಯಗಳನ್ನು ಅಳವಡಿಸಲಾಗಿದೆ. ಪ್ರಶ್ನೆ ಪತ್ರಿಕೆಯು ಲಿಖಿತ ಹಾಗೂ ಮೌಖಿಕ ಎರಡನ್ನೂ ಒಳಗೊಂಡಿದೆ.
ಪ್ರೌಢಶಾಲಾ 9ನೆಯ ತರಗತಿಯ ವಿದ್ಯಾರ್ಥಿಗಳ ಮೌಲ್ಯಾಂಕನ ಕಾರ್ಯಕ್ಕೆ ಸ್ಥಳೀಯ ಪ್ರೌಢಶಾಲಾ ಶಿಕ್ಷಕರ ಜೊತೆಗೆ ಬಿ.ಇಡಿ ಪ್ರಶಿಕ್ಷಣಾರ್ಥಿಗಳನ್ನು ನಿಯೋಜಿಸಲಾಗಿದೆ.
ಜಿಲ್ಲಾ ಹಂತದಲ್ಲಿ ಇಲಾಖೆಯ ಅಧಿಕಾರಿಗಳಿಗೆ ಒಂದು ದಿನದ ತರಬೇತಿಯನ್ನು ನೀಡಲಾಗಿದೆ. ಈಗಾಗಲೇ ಬ್ಲಾಕ್
ಹಂತದಲ್ಲಿ ಬಿ.ಇಡಿ ಪ್ರಶಿಕ್ಷಣಾರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ಮಹಾವಿದ್ಯಾಲಯಗಳಿಗೆ ಕಳುಹಿಸಿಕೊಡಲಾಗಿದೆ.
9ನೆಯ ತರಗತಿಯ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಮೌಲ್ಯಾಂಕನ ಪರೀಕ್ಷೆಯು ಒಟ್ಟು ನಾಲ್ಕು ಪತ್ರಿಕೆಗಳನ್ನು ಒಳಗೊಂಡಿದೆ.
ಪತ್ರಿಕೆ 1 ರಲ್ಲಿ ಪ್ರಥಮ ಭಾಷೆ ಹಾಗೂ ಗಣಿತ ಪತ್ರಿಕೆ-2 ರಲ್ಲಿ ದ್ವಿತೀಯ ಭಾಷೆ ಹಾಗೂ ಸಮಾಜ ವಿಜ್ಞಾನ, ಪತ್ರಿಕೆ 3ರಲ್ಲಿ ತೃತೀಯ ಭಾಷೆ ಹಾಗೂ ವಿಜ್ಞಾನ, ಪತ್ರಿಕೆ 4 ರಲ್ಲಿ ಪಾರ್ಟ್-ಬಿ ಪತ್ರಿಕೆಗಳನ್ನು ನಿಗದಿಗೊಳಿಸಲಾಗಿದೆ. ಈ ಕಾರ್ಯವು ಫೆಬ್ರುವರಿ 9 ಹಾಗೂ 10 ನೇ ದಿನಾಂಕಗಳಂದು ಎರಡು ದಿನಗಳ ಕಾಲ ನಡೆಯಲಿದೆ.
ಮುಖ್ಯೋಪಾಧ್ಯಾಯರು ಮೌಲ್ಯಾಂಕನ ಕಾರ್ಯದಲ್ಲಿ ತಮ್ಮ ಕರ್ತವ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕಾದುದು ಅತೀ ಅವಶ್ಯ. ಪ್ರಶ್ನೆ ಪತ್ರಿಕೆಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವುದು. ವೇಳಾಪಟ್ಟಿಗೆ ಅನುಗುಣವಾಗಿ ಪ್ರಶ್ನೆಪತ್ರಿಕೆಗಳ ವಿತರಣೆಯಾಗುವಂತೆ ನೋಡಿಕೊಳ್ಳುವುದು. ತರಗತಿಯಲ್ಲಿ ನಕಲು ಮಾಡದಂತೆ ಕಟ್ಟೆಚ್ಚರ ವಹಿಸುವುದು, ಜಾಣ ವಿದ್ಯಾರ್ಥಿಗಳ ಶಾಂತಿ ಭಂಗವಾಗದ ರೀತಿಯಲ್ಲಿ ತರಗತಿಯಲ್ಲಿನ ಶಾಂತತೆ ಕಾಯ್ದುಕೊಳ್ಳುವ ನಿರ್ದೇಶನಗಳನ್ನು ನೀಡುವುದು. ಆಸನ ವ್ಯವಸ್ಥೆ ಚೆನ್ನಾಗಿರುವಂತೆ ಕ್ರಮ ಕೈಗೊಳ್ಳುವುದು.
ಒಟ್ಟಾರೆಯಾಗಿ ಪರೀಕ್ಷಾ ಮೌಲ್ಯವನ್ನು ಎತ್ತಿ ಹಿಡಿಯುವ ಕಾರ್ಯವು ಮುಖ್ಯಗುರುಗಳಿಂದಾಗಬೇಕಿದೆ.
ಶಿವಾನಂದ ಗಿಡ್ನಂದಿ
ಮೂಲ :ಪ್ರಜಾವಾಣಿ
ಕೆ .ಎ .ಎಸ್ ಪೂರ್ವಭಾವಿ ಪರೀಕ್ಷೆ ಜೂನ್ 6ರಂದು ನಡೆಯಲಿದೆ. ಸುಮಾರು ಐದರಿಂದ ಆರು ಲಕ್ಷ ವಿದ್ಯಾರ್ಥಿಗಳು ಈ ಪರೀಕ್ಷೆ ತೆಗೆದುಕೊಳ್ಳಲಿದ್ದಾರೆ. ಈ ಪರೀಕ್ಷೆಗೆ ನೀವು ಸಜ್ಜಾಗಬೇಕಾದುದು ಹೇಗೆ? ಇಲ್ಲಿದೆ ಒಂದಿಷ್ಟು ಮಾಹಿತಿ.
ಮೊನ್ನೆ ಒಂದು ಪತ್ರ ಬಂದಿತ್ತು. ಪತ್ರದ ಸಾರಾಂಶ ಹೀಗಿದೆ. ‘ನಾನು ಒಬ್ಬ ಸ್ನಾತಕೋತ್ತರ ಪದವೀಧರೆ, ಆದರೆ ಉದ್ಯೋಗವಿಲ್ಲ, ಗ್ರಾಮೀಣ ಹಿನ್ನೆಲೆಯಿರುವ ಕಾರಣ ಇಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಅಷ್ಟೊಂದು ಮಾಹಿತಿಯು ಸಿಗುವುದಿಲ್ಲ. ಆದರೂ ಸಿಕ್ಕ ಮಾಹಿತಿಯ ಆಧಾರದ ಮೇಲೆ ಸಾಕಷ್ಟು ಪರೀಕ್ಷೆಗಳನ್ನು ಎದುರಿಸಿರುತ್ತೇನೆ. ಆದರೆ ಯಶಸ್ಸು ಮಾತ್ರ ಶೂನ್ಯ! ಈಗ ಕೆ.ಎ.ಎಸ್. ಪರೀಕ್ಷೆ ಕರೆದಿದ್ದಾರೆ. ಅದರ ತಯಾರಿ ಹೇಗೆ ಮಾಡಿಕೊಳ್ಳಲಿ? ದಯಮಾಡಿ ತಿಳಿಸುವಿರಾ?’ ಹೀಗೆಯೇ ಸಾವಿರಾರು ವಿದ್ಯಾರ್ಥಿಗಳು ತಮ್ಮ ಭವ್ಯ ಭವಿಷ್ಯವನ್ನು ರೂಪಿಸಿಕೊಳ್ಳಲು ಕಾತರರಾಗಿ ಪತ್ರಗಳನ್ನು ಪತ್ರಿಕಾಲಯಗಳಿಗೆ, ತಜ್ಞ ಉಪನ್ಯಾಸಕರಿಗೆ ಬರೆಯುತ್ತಲೇ ಇರುತ್ತಾರೆ. ಪ್ರಸ್ತುತ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆ ಬರುವ ಜೂನ್ 6ರಂದು ನಡೆಯಲಿರುವುದರಿಂದ ಒಂದಿಷ್ಟು ಉಪಯುಕ್ತ ಮಾಹಿತಿ.
ಕರ್ನಾಟಕ ಲೋಕ ಸೇವಾ ಆಯೋಗವು ಕರೆದಿರುವ ಗೆಜೆಟೆಡ್ ಪ್ರೊಬೆಷನರಿ ಪರೀಕ್ಷೆ ಅಥವಾ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷಾ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಮಾತ್ರ ಅವಕಾಶವಿದೆ. ಕಂಪ್ಯೂಟರ್ ಮೂಲಕ ಆನ್ಲೈನ್ನಲ್ಲಿ ಅಂತರ್ ಜಾಲ ತಾಣ http://kpsc.kar.nic/ONLINE APPLICATION ಕ್ಲಿಕ್ ಮಾಡಿ ಅರ್ಜಿಯನ್ನು ಭರ್ತಿ ಮಾಡಬಹುದು. ಫೆಬ್ರುವರಿ 1 ರಿಂದ ಮಾರ್ಚ್ 3 ರೊಳಗೆ ಭರ್ತಿ ಮಾಡಲು ಅವಕಾಶವಿದೆ. ಅರ್ಜಿಯನ್ನು ಭರ್ತಿ ಮಾಡಿದ ನಂತರ ಪರೀಕ್ಷಾ ಶುಲ್ಕವನ್ನು ಅದೇ ವೆಬ್‌ಸೈಟ್‌ನಲ್ಲಿರುವ ಇನ್ನೊಂದು ಬಟನ್ ಕ್ಲಿಕ್ ಮಾಡುವುದರ ಮೂಲಕ ಬ್ಯಾಂಕ್ ಚಲನ್‌ನ್ನು ಡೌನ್‌ಲೋಡ್ (ಮೂರು ಪ್ರತಿಯಲ್ಲಿ) ಮಾಡಿಕೊಂಡು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಅಥವಾ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್‌ನಲ್ಲಿ ತುಂಬಬೇಕು. ಹೀಗೆ ಪರೀಕ್ಷಾ ಶುಲ್ಕ ತುಂಬಲು ಕೊನೆಯ ದಿನ ಮಾರ್ಚ್ 4, 2010 ಆಗಿರುತ್ತದೆ. ಅರ್ಜಿಯನ್ನು ತುಂಬುವಾಗ ಯಾವುದೇ ಗೊಂದಲಗಳಿದ್ದರೆ ಲೋಕಸೇವಾ ಆಯೋಗ ಒದಗಿಸಿದ ಈ ದೂರವಾಣಿ 9740977411 ಯನ್ನು ಸಂಪರ್ಕಿಸಬಹುದು.
ಕಳೆದ ಬಾರಿಗೆ ಹೋಲಿಸಿದರೆ ಈ ಸಲ ಹೆಚ್ಚು ಹುದ್ದೆಗಳಿವೆ. ಒಟ್ಟು 268 (ಕಳೆದ ಬಾರಿ 141) ಹುದ್ದೆಗಳಿವೆ. ಕನಿಷ್ಠ 21 ವರ್ಷ ಮತ್ತು ಗರಿಷ್ಠ ಸಾಮಾನ್ಯ ಅಭ್ಯರ್ಥಿಗಳಿಗಾದರೆ 35 ವರ್ಷ, ಎಸ್.ಸಿ./ ಎಸ್.ಟಿ ಪ್ರವರ್ಗ 1ರ ಅಭ್ಯರ್ಥಿಗಳಿಗೆ 40 ವರ್ಷಗಳು ಹಾಗೂ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 38 ವರ್ಷಗಳಾಗಿರುತ್ತದೆ. ಅಲ್ಲದೇ ಐ.ಎ.ಎಸ್ ಪರೀಕ್ಷೆಯಲ್ಲಿರುವಂತೆ ಸಾಮಾನ್ಯ ಅಭ್ಯರ್ಥಿಗಳಿಗೆ 4 ಬಾರಿ ಮತ್ತು 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 7 ಬಾರಿ ಪರೀಕ್ಷೆ ಬರೆಯಲು (ಅಟೆಂಪ್ಟ್) ಅವಕಾಶಗಳಿವೆ. ಹಾಗೂ ಎಸ್.ಸಿ./ ಎಸ್.ಟಿ ಪ್ರವರ್ಗ1ರ ಅಭ್ಯರ್ಥಿಗಳಿಗೆ ಯಾವುದೇ ತರಹದ ನಿರ್ಬಂಧ ಇರುವುದಿಲ್ಲ.
ಸಾಮಾನ್ಯವಾಗಿ ಪಿ.ಯು.ಸಿ. ಮತ್ತು ಪದವಿ ಮುಂತಾದ ಅಕಾಡೆಮಿಕ್ ಪರೀಕ್ಷೆಗಳಿಗೂ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಇರುವ ವ್ಯತ್ಯಾಸ ಗೊತ್ತೆ? ಈ ಪರೀಕ್ಷೆಯ ಉದ್ದೇಶವೇ ಸ್ಪರ್ಧೆಯನ್ನು ನೀಡಿ ನಮ್ಮೊಂದಿಗಿರುವ ಇತರ ಅಭ್ಯರ್ಥಿಗಳಿಗಿಂತ ಮುಂದೆ ಇರುವುದಾಗಿದೆ. ಆದುದರಿಂದ ಉತ್ತೀರ್ಣರಾಗಲು ಕನಿಷ್ಠ ಅಂಕಗಳತ್ತ ಗಮನ ನೀಡದೇ ಅತೀ ಹೆಚ್ಚು ಅಂಕಗಳನ್ನು ಪಡೆದು ರ್‍ಯಾಂಕ್ ಗಳಿಸಲು ಗಮನ ಹರಿಸಬೇಕಾಗಿದೆ. ಈ ಹಿಂದೆ ನಾವು (ಅಭ್ಯರ್ಥಿಗಳು) ಎದುರಿಸಿದ ಎಲ್ಲಾ ವಾರ್ಷಿಕ ಪರೀಕ್ಷೆಗಳಲ್ಲಿ ಒಂದು ನಿಶ್ಚಿತ ಪಠ್ಯಕ್ರಮವಿರುತ್ತಿತ್ತು. ಮತ್ತು ಅದೇ ಪಠ್ಯಕ್ರಮದಿಂದ ಪ್ರಶ್ನೆಗಳನ್ನು ನೀಡುತ್ತಿದ್ದರು. ಆದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಠ್ಯಕ್ರಮದಾಚೆಗಿನ ಪ್ರಶ್ನೆಗಳನ್ನು ಸಹಾ ಕೇಳುವುದನ್ನು ಕಾಣುತ್ತೇವೆ. ಹೀಗಾಗಿ ಒಂದಿಷ್ಟು ತಯಾರಿ ಅಗತ್ಯ ಬೇಕು.
ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿವೆ. ಮೊದಲ ಪತ್ರಿಕೆಯು 150 ಅಂಕಗಳ ಸಾಮಾನ್ಯ ಜ್ಞಾನವಾದರೆ, ದ್ವಿತೀಯ ಪತ್ರಿಕೆಯೂ 300 ಅಂಕಗಳ ಐಚ್ಛಿಕ ವಿಷಯವನ್ನು ಹೊಂದಿರುತ್ತದೆ. ಒಟ್ಟು ಸರಿಸುಮಾರು 31 ಐಚ್ಛಿಕ ವಿಷಯಗಳಿವೆ. ಅದರಲ್ಲಿ ಯಾವುದಾದರೂ ಒಂದು ಐಚ್ಛಿಕ ವಿಷಯವನ್ನು ಆರಿಸಿಕೊಂಡು ಪರೀಕ್ಷೆ ಬರೆಯಬೇಕು. ಸಾಮಾನ್ಯಜ್ಞಾನ ಪತ್ರಿಕೆಯ ವಿಭಾಗದಲ್ಲಿ ಇತಿಹಾಸ, ವಿಜ್ಞಾನ, ಭೂಗೋಳ, ಭಾರತದ ಸಂವಿಧಾನದ ಪರಿಚಯ, ಭಾರತದ ಅರ್ಥವ್ಯವಸ್ಥೆಯ ಪರಿಚಯ, ಕರ್ನಾಟಕದ ಬಗೆಗಿನ ಮಾಹಿತಿಗಳು, ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಪ್ರಚಲಿತ ಘಟನೆಗಳ ಬಗ್ಗೆ ಅಭ್ಯರ್ಥಿ ಎಷ್ಟರ ಮಟ್ಟಿಗೆ ಹಿಡಿತವನ್ನು ಸಾಧಿಸಿದ್ದಾರೆ ಎಂದು ಪರೀಕ್ಷಿಸಲಾಗುತ್ತದೆ.
ಈ ಹಿಂದಿನ ಪರೀಕ್ಷೆಗಳಲ್ಲಿ ನೀಡಿರುವ ಪ್ರಶ್ನೆ ಪತ್ರಿಕೆಗಳನ್ನು ಗಮನಿಸಿದರೆ ಹೆಚ್ಚು ಒತ್ತು ಪ್ರಚಲಿತ ಘಟನೆಗಳತ್ತ ಕೇಂದ್ರೀಕೃತವಾಗಿರುವುದು ನಮ್ಮ ಗಮನಕ್ಕೆ ಬರುತ್ತದೆ. ಆದ್ದರಿಂದ ಪ್ರಚಲಿತ ಸಂವಿಧಾನಾತ್ಮಕ ಹಾಗೂ ರಾಜಕೀಯ ಬೆಳವಣಿಗೆಗಳು, ಇತ್ತೀಚೆಗೆ ವೈಜ್ಞಾನಿಕ ಕ್ಷೇತ್ರದಲ್ಲಿ ಆಗುವ, ಆಗುತ್ತಿರುವ ಬದಲಾವಣೆಗಳು ಮತ್ತು ಸಂಶೋಧನೆಗಳತ್ತ ಅಭ್ಯರ್ಥಿಗಳು ಗಮನ ಹರಿಸಿ ಓದುವುದು ಉತ್ತಮ.
ಏನನ್ನು ಓದಬೇಕು ಎಂಬುದು ಪಠ್ಯಕ್ರಮವನ್ನು ಗಮನಿಸಿದಾಗಲೇ ಗೊತ್ತಾಗುತ್ತದೆ. ಜೊತೆಗೆ ಕೆ.ಪಿ.ಎಸ್.ಸಿ.ಯೂ ಈ ಹಿಂದೆ ನಡೆಸಿದ ವಿವಿಧ ಪರೀಕ್ಷೆಗಳ ಪ್ರಶ್ನೆಪತ್ರಿಕೆಯನ್ನು ಗಮನಿಸಿದರೂ ಮುಂಬರುವ ಪರೀಕ್ಷೆಗಳಲ್ಲಿ ಎಂಥಹ ಪ್ರಶ್ನೆ ಪತ್ರಿಕೆ ಬರಬಹುದೆಂಬ ಅಂದಾಜನ್ನು ಮಾಡಲು ಸಾಧ್ಯವಾಗುತ್ತದೆ. ಆದರೂ ನಾವು ಹೀಗೆ ಹೇಳಬಹುದು.
ಸಾಮಾನ್ಯಜ್ಞಾನ ಪರೀಕ್ಷೆಗಳಿಗೆ ಬೇಸಿಕ್ ಪುಸ್ತಕಗಳಾಗಿ ಡಿ.ಎಸ್.ಆರ್.ಟಿ.ಸಿ. ಪ್ರಕಟಿತ 8, 9, 10ನೇ ತರಗತಿಯ ಪುಸ್ತಕಗಳ ಜೊತೆಗೆ ಸಾಧ್ಯವಾದರೆ ಅದೇ ತರಗತಿಯ ಎನ್.ಸಿ.ಇ.ಆರ್.ಟಿ. ಪುಸ್ತಕಗಳನ್ನು ಮತ್ತು ಡಿಡಿ ಬಸು ಅವರ ಭಾರತ ಸಂವಿಧಾನಕ್ಕೆ ಸಂಬಂಧಿಸಿದ ಪುಸ್ತಕ, ಸುಂದರಮ್ ಅಂಡ್ ದತ್ತ ಅವರ ಭಾರತದ ಅರ್ಥಶಾಸ್ತ್ರದ ಬಗೆಗಿನ ಪುಸ್ತಕ ಹಾಗೂ ಭಾರತ ಸರ್ಕಾರವು ಪ್ರಕಟಿಸುವ ಎಕೊನೊಮಿಕ್ ಸರ್ವೆ ಆಫ್ ಇಂಡಿಯಾ - 2010 ಗಳನ್ನು ಓದುವುದೊಳಿತು, ಬೆಂಗಳೂರಿನ ಜ್ಞಾನಭಾರತಿಯು ಪ್ರಕಟಿಸಿರುವ ಸ್ಪರ್ಧಾಭಾರತಿಯನ್ನು ಓದುವುದು ಉತ್ತಮ. ಸಾಮಾನ್ಯ ಜ್ಞಾನದ ಪತ್ರಿಕೆಯೂ ಪ್ರಚಲಿತ ವಿದ್ಯಮಾನಗಳೊಂದಿಗೆ ಆರ್ಥಿಕ ಕ್ಷೇತ್ರದಲ್ಲಿನ ಆಗುಹೋಗುಗಳು, ವೈಜ್ಞಾನಿಕ ಕ್ಷೇತ್ರಗಳಲ್ಲಿನ ಬೆಳವಣಿಗೆಗಳು, ರಾಜಕೀಯ ಕ್ಷೇತ್ರದಲ್ಲಿನ ಕೋಲಾಹಲಗಳ ಕುರಿತು ಪ್ರಶ್ನಾವಳಿಗಳನ್ನು ಒಳಗೊಂಡಿರುವುದರಿಂದ ದಿನ ಪತ್ರಿಕೆಗಳನ್ನು ಓದಲು ಮರೆಯಬಾರದು. ಐ.ಎ.ಎಸ್. ಪರೀಕ್ಷೆಗಾಗಿಯೇ ಇರುವ ಸ್ಪೆಕ್ಟ್ರಮ್ ಜನರಲ್ ಸ್ಟಡೀಸ್, ಕರ್ನಾಟಕ ಇತಿಹಾಸಕ್ಕೆ ಡಾ. ಸೂರ್ಯನಾಥ ಕಾಮತ್‌ರ ಕರ್ನಾಟಕದ ಸಂಕ್ಷಿಪ್ತ ಇತಿಹಾಸ, ಕರ್ನಾಟಕದ ಭೂಗೋಳಕ್ಕೆ ‘ಕರ್ನಾಟಕದ ಕೈಪಿಡಿ’ಯಲ್ಲಿರುವ ಮಾಹಿತಿ, ನಮ್ಮ ರಾಜ್ಯದ ಸಾಂಸ್ಕೃತಿಕ ಹಾಗೂ ಸಾಮಾನ್ಯ (ಜನರಲ್) ವಿಷಯದ ಜ್ಞಾನಕ್ಕೆ ಕರ್ನಾಟಕ ಸರ್ಕಾರದ ಗೆಜೆಟಿಯರ್ ಇಲಾಖೆ ಪ್ರಕಟಿಸಿದ ‘ಹ್ಯಾಂಡ್‌ಬುಕ್ ಆಫ್ ಕರ್ನಾಟಕ’ ಅಥವಾ ‘ಕರ್ನಾಟಕದ ಕೈಪಿಡಿ’ ಓದುವುದು ಉತ್ತಮ.
ಈ ಪರೀಕ್ಷೆಯಲ್ಲಿ ಐಚ್ಛಿಕ ವಿಷಯ ಮಹತ್ವವಿದ್ದು 300 ಅಂಕಗಳನ್ನು ಹೊಂದಿರುವುದರಿಂದ ಈ ಪತ್ರಿಕೆಯ ಆಯ್ಕೆಯಲ್ಲಿಯೇ ನಿಮ್ಮ ಸ್ಪರ್ಧೆಯ ಗೊತ್ತು ಗುರಿ ನಿಶ್ಚಿತವಾಗುತ್ತದೆ. ಆದ್ದರಿಂದ ಕನ್ನಡ, ಇತಿಹಾಸ, ಭೂಗೋಳ, ಸಮಾಜಶಾಸ್ತ್ರ, ಸಾರ್ವಜನಿಕ ಆಡಳಿತ- ಇತ್ಯಾದಿ ನಿಮಗೆ ಸರಿ ಹೊಂದುವ ಯಾವುದಾದರೂ ಐಚ್ಛಿಕ ವಿಷಯವನ್ನು ಆರಿಸಿಕೊಂಡು ವ್ಯವಸ್ಥಿತ ಅಧ್ಯಯನ ಮಾಡಬೇಕು. ಯಾವುದೇ ಐಚ್ಛಿಕ ವಿಷಯವನ್ನಾದರೂ ಅಭ್ಯರ್ಥಿಗಳು ಆರಿಸಿಕೊಳ್ಳಬಹುದು. ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯವನ್ನೇ ಆರಿಸಿಕೊಳ್ಳಬೇಕು ಎಂಬ ನಿಯಮವೇನೂ ಇಲ್ಲ.
ದಿನಕ್ಕೆ ಕನಿಷ್ಠ 3-4 ಗಂಟೆಗಳ ಕಾಲವನ್ನು ಅಭ್ಯಾಸಕ್ಕಾಗಿ ತೆಗೆದಿಡಿ. ಮೊದಲ ಪತ್ರಿಕೆಗೆ ನೀಡಿದಷ್ಟೇ ಸಮಯವನ್ನು ಎರಡನೆಯ ಪತ್ರಿಕೆಯ ಅಧ್ಯಯನಕ್ಕೂ ಮೀಸಲಿಡಿ.
ನಾವು ಈ ಹಿಂದೆ ಸಾಂಪ್ರದಾಯಿಕವಾಗಿ ಎದುರಿಸಿದ ಎಸ್.ಎಸ್.ಎಲ್.ಸಿ. ಮತ್ತು ಪದವಿ ಹಂತದಲ್ಲಿನ 3 ಗಂಟೆಯ ಪರೀಕ್ಷೆಗಳು ನಮಗೆ ಪರೀಕ್ಷಾ ಕೊಠಡಿಯಲ್ಲಿ ಸ್ವಲ್ಪ ಯೋಚಿಸಲು ಅವಕಾಶ ನೀಡುತ್ತಿದ್ದವು. ನಮಗೆ ಕೊಡುವ ಜನರಲ್ ಸ್ಟಡೀಸ್‌ನಂತಹ ಪತ್ರಿಕೆಯಲ್ಲಿ 120 ನಿಮಿಷದಲ್ಲಿ 150 ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಕೆಲವು ಸುಲಭದ ಪ್ರಶ್ನೆಗಳು ಕಡಿಮೆ ಸಮಯವನ್ನು ಬಯಸಿದರೆ ಕ್ಲಿಷ್ಟ ಪ್ರಶ್ನೆಗಳು ಹೆಚ್ಚು ಸಮಯವನ್ನು ಬಯಸುತ್ತವೆ. ಆದರೂ ನಾವು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲೇಬೇಕು. ರ್‍ಯಾಂಕ್ ಗಳಿಕೆಯಲ್ಲಿ ಮುಂದಿರಲೇಬೇಕು. ಆದ್ದರಿಂದ ಇಲ್ಲಿ ಟೈಮ್ ಮ್ಯಾನೇಜ್‌ಮೆಂಟ್ ಅತಿ ಮುಖ್ಯ. ಅದರತ್ತವೂ ಗಮನ ಹರಿಸಿ.
ಪುಸ್ತಕಗಳನ್ನು ಓದುವಾಗ ಈ ಹಿಂದೆ ಪರೀಕ್ಷೆಯಲ್ಲಿ ಕೇಳಲಾದ ಪ್ರಶ್ನೆಗಳನ್ನು ಗಮನದಲ್ಲಿರಿಸಿಕೊಂಡು ಓದಿ. ಹೀಗೆ ಓದುವುದರಿಂದ ನಿಮಗೆ ಯಾವ ವಿಷಯವನ್ನು ಎಷ್ಟರ ಮಟ್ಟಿಗೆ ಓದಬೇಕು ಮತ್ತು ಹ್ಯಾಗೆ ಅದನ್ನು ಗ್ರಹಿಸಬೇಕು ಎಂಬ ಬಗ್ಗೆ ಖಚಿತತೆ ಬರುವುದು.
ಪ್ರತಿ ವಾಕ್ಯದಲ್ಲೂ ಪ್ರಶ್ನೆಗಳನ್ನು ಕಲ್ಪಿಸಿಕೊಳ್ಳುತ್ತಾ ಓದುವುದು ಈ ತರಹದ ಪರೀಕ್ಷೆಗಳಿಗೆ ಸಹಕಾರಿ.
ಜೊತೆಗೆ ಪ್ರತಿದಿನ ಕನಿಷ್ಠ ಒಂದು ಗಂಟೆಯಾದರೂ ವಸ್ತುನಿಷ್ಠ ಪ್ರಶ್ನೆಗಳನ್ನು ಬಿಡಿಸಿ ಪ್ರಾಕ್ಟೀಸ್ ಮಾಡಿ, ಈ ಅಭ್ಯಾಸವು ನಿಮ್ಮ ಪರೀಕ್ಷಾ ದಿನ ಪರೀಕ್ಷಾ ಕೊಠಡಿಯಲ್ಲಿ ಆಗುವ ಕನ್‌ಪ್ಯೂಶನ್ ತಡೆಯಬಲ್ಲದು.
ಮಾನಸಿಕವಾಗಿ ‘ಪ್ರತಿನಿತ್ಯ ನಾನು ಈ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇನೆ’ ಎಂಬ ವಿಶ್ವಾಸದಲ್ಲಿ ಅದೇ ಉತ್ಸಾಹದಲ್ಲಿ ತಯಾರಿ ನಡೆಸಿ, ಯಶಸ್ಸು ನಿಮ್ಮದಾಗಿರುತ್ತದೆ.
ಇದೊಂದು ಸ್ಪರ್ಧಾತ್ಮಕ ಪರೀಕ್ಷೆಯಾದ್ದರಿಂದ ಸ್ಪರ್ಧೆಯೇ ಮುಖ್ಯವಾದ್ದರಿಂದ ತರಬೇತಿಯನ್ನೂ ಪಡೆದುಕೊಳ್ಳಬಹುದು.
ಕೆಲವು ತರಬೇತಿ ಕೇಂದ್ರಗಳ ವಿವರಗಳು ಇಲ್ಲಿವೆ: ಜ್ಞಾನಭಾರತಿ ಗುಲ್ಬರ್ಗಾ ದೂರವಾಣಿ : 9035753979; ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಸೆಂಟ್ರಲ್ ಕಾಲೇಜು, ಬೆಂಗಳೂರು.; ಪರೀಕ್ಷಾ ಪೂರ್ವ ತರಬೇತಿ ಕೇಂದ್ರ, ಧಾರವಾಡ ವಿಶ್ವವಿದ್ಯಾಲಯ ಧಾರವಾಡ; ಜೈಸ್ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಬೆಂಗಳೂರು.
ಇವುಗಳಲ್ಲದೇ ನಿಮ್ಮ ಊರಿನ ಹತ್ತಿರದಲ್ಲಿರುವ ಯೋಗ್ಯ ತರಬೇತಿ ಕೇಂದ್ರಗಳ ಸಹಾಯವನ್ನು ಸಹಾ ಪಡೆಯಬಹುದು.
ಕೊನೆಯ ಮಾರ್ಪಾಟು : 3/31/2020
ಭಾರತದ ಶಿಕ್ಷಣ ಪದ್ದತಿಯು ಹೊರತರುತ್ತಿರುವ ಜಾಣರನ್ನು ನೋ...