অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡಕ್ಕಿರುವ ಸವಾಲುಗಳು

ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡಕ್ಕಿರುವ ಸವಾಲುಗಳು

ಜಾಗತೀಕರಣವು ಎಲ್ಲೆಡೆ ತೀವ್ರವಾಗಿ ಪಸರಿಸುತ್ತಿರುವುದರಿಂದ ಆಧುನೀಕರಣ, ಜಾಗತೀಕರಣದ ಹಿನ್ನೆಲೆಯಲ್ಲಿ ಕನ್ನಡಕ್ಕೆ ಅದರ ಉಳಿವಿನ ಸವಾಲುಗಳು ಎದುರಾಗುತ್ತಿರುವುದು ಕನ್ನಡಿಗರೆಲ್ಲರಿಗೂ ವಿಷಾದನೀಯ ಸಂಗತಿ. ’ಖಾಸಗೀಕರಣ, ಉದಾರೀಕರಣ, ಜಾಗತೀಕರಣಗಳಿಂದಾಗಿ’ ಕನ್ನಡನಾಡಿನ ಜನಜೀವನದಲ್ಲಿ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದು ಇದರ ತೀವ್ರ ಪರಿಣಾಮಕ್ಕೆ ಕನ್ನಡ ಭಾಷೆಯು ಹೊರತಾಗಿಲ್ಲ. ಜಾಗತೀಕರಣದ ಹಿನ್ನೆಲೆಯಲ್ಲಿ ಅನೇಕ ವಿದ್ಯಾಮಾನಗಳು ಕನ್ನಡ ಭಾಷೆಯ ಉಳಿವಿಗೆ ಸವಾಲೊಡ್ಡುತ್ತಿದ್ದು ಅಂತಹ ಪ್ರಚಲಿತ ವಿದ್ಯಾಮಾನಗಳ ತಿಳಿನೋಟ ಹೀಗಿದೆ.

  • ಆಧುನಿಕ ಜಗತ್ತಿನ ಅಗತ್ಯಗಳಾದ ವಿಜ್ಞಾನ, ತಂತ್ರಜ್ಞಾನ, ತತ್ವಜ್ಞಾನ, ವೈಚಾರಿಕತೆ, ಕಂಪ್ಯೂಟರ್, ಅಂತರ್ಜಾಲ, ವಿದೇಶಿ ಸಂಪರ್ಕ ಮೊದಲಾದ ಎಲ್ಲವನ್ನು ಸಾದ್ಯ ಮಾಡಿದ ಭಾಷೆ ಆಂಗ್ಲಭಾಷೆ ಎಂಬ ನಿಲುವು ಕೆಲವರದು.
  • ಆಂಗ್ಲಭಾಷೆಗೆ ಅಭಿವೃದ್ಧಿ ಗುಣವಿದ್ದು ಇಂಗ್ಲೀಷ್ ಎಂದರೆ ಅಭಿವೃದ್ಧಿ. ಅಭಿವೃದ್ಧಿ ಎಂದರೆ ಇಂಗ್ಲೀಷ್ ಎಂದಾಗಿ ಇಂಗ್ಲೀಷ್ ಒಂದು ಜಾಗತಿಕ ಭಾಷೆಯಾಗುತ್ತ ಪ್ರಬಲ ಆಡಳಿತ ಭಾಷೆಯಾಗಿ ವಿಸ್ತೃತಗೊಳ್ಳುತ್ತಿದೆ.
  • ಜಾಗತೀಕರಣದ ಪ್ರಭಾವದಿಂದಾಗಿ ಇಂಗ್ಲೀಷ್ ಸಾಹಿತ್ಯಕ್ಕೆ ಶಾಶ್ವಕತೆ ಇರುತ್ತದೆ ಎಂಬ ಅಭಿಪ್ರಾಯದ ಹಿನ್ನೆಲೇಯಲ್ಲಿ ಕನ್ನಡದ ಹೆಸರಾಂತ ಸಾಹಿತಿಗಳು ತಮ್ಮ ಬರಹಗಳನ್ನು ಇಂಗ್ಲೀಷಿಗೆ ಅನುವಾದಿಸಲು ತವಕದಿಂದ ಕೂಡಿದ್ದು ಕೆಲವೊಮ್ಮೆ ಕನ್ನಡಕ್ಕೆ ಬದಲಾಗಿ ನೇರವಾಗಿ ಇಂಗ್ಲೀಷಿನಲ್ಲಿಯೇ ಬರೆಯಲು ಇಚ್ಛಿಸುತ್ತಾರೆ.
  • ಆಧುನೀಕರಣದಿಂದಾಗಿ ಜನಸಾಮಾನ್ಯರಲ್ಲಂತೂ ತಮ್ಮ ಮಾತೃ ಭಾಷೆಗಳ ಕೀಳರಿಮೆ ಹೇಳತೀರದು. ಜನರು ತಮ್ಮ ಮಕ್ಕಳು ಕನ್ನಡವನ್ನು ಹೊರತುಪಡಿಸಿ ಇತರ ಭಾಷೆಗಳನ್ನು ಮಾತನಾಡುತ್ತಾರೆ ಎಂದರೆ, ಅದನ್ನು ಗೌರವದ ವಿಷಯವೆಂದು ತಿಳಿಯುತ್ತಾರೆ.
  • ಜನ ಸಾಮಾನ್ಯರಲ್ಲಿ ಅಥವಾ ಕನ್ನಡಿಗರಲ್ಲಿನ ಸ್ವಭಾಷಾ ತಾತ್ಸಾರ ಹಾಗೂ ಅನ್ಯ ಭಾಷಾ ವ್ಯಾಮೋಹ ತೀವ್ರವಾಗಿ ಹೆಚ್ಚಳಗೊಂಡರೆ, ಕನ್ನಡದಂತಹ ಭಾಷೆಯ ಭವಿಷ್ಯವೇನೂ?
  • ಜಾಗತೀಕರಣದ ಪ್ರಭಾವದಿಂದ ಯಾವ ರಾಷ್ಟ್ರವೂ ಹೊರಗುಳಿಯಲಾರದು. ಆದ್ದರಿಂದ ಪ್ರತಿಯೊಂದು ದೇಶವು ಪ್ರಗತಿಗಾಗಿ ಜಾಗತೀಕರಣವನ್ನು ಸ್ವಾಗತಿಸುತ್ತಿದ್ದು ದೇಶೀಯತೆಯನ್ನು ಮರೆಯುತ್ತಿವೆ. ಇದಕ್ಕೆ ಕನ್ನಡ ನಾಡು ಹೊರತಾಗಿಲ್ಲ.
  • ಜಾಗತಿಕವಾಗಿ ಲಾಭವೇ ಮುಖ್ಯ ಉದ್ದೇಶವಾಗಿರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಲಾಭದಾಯಕ ಹುದ್ದೆಯ ದೃಷ್ಟಿಯಿಂದ ಉನ್ನತ ಶಿಕ್ಷಣ ಕನ್ನಡ ಮಾಧ್ಯಮದಲ್ಲಿ ಕಷ್ಟಕರವಾದ್ದರಿಂದ ಶಿಕ್ಷಣ ಮಾಧ್ಯಮವಾಗಿ ಇತರ ಭಾಷೆಗಳ ಆಯ್ಕೆ ಹೆಚ್ಚುತ್ತಿದೆ.
  • ಜಾಗತೀಕರಣದ ಹಿನ್ನೆಲೆಯಲ್ಲಿ ಮನುಷ್ಯ ಜೀವನ ಯಾಂತ್ರಿಕವಾಗಿ ಸಮಯದ ಅಭಾವದಿಂದ ಸಾಹಿತ್ಯಾಭಿರುಚಿ ಕಡಿಮೆಗೊಳ್ಳುತ್ತಿದೆ.
  • ಆಧುನಿಕ ಯುಗದಲ್ಲಿ ಆಳುವ ಭಾಷೆ, ಆಳಿಸಿಕೊಳ್ಳುವ ಭಾಷೆ ಎಂಬ ವರ್ಗೀಕರಣವಿದ್ದು, ಆಳುವ ಭಾಷೆ ಶ್ರೀಷ್ಠವೆನಿಸಿದ್ದು ಆಯಾ ನಾಡಿನ ಭಾಷೆಯು ಆಳುವ ಭಾಷೆಯಾದರೆ, ನಾಡಿನಲ್ಲಿನ ಇತರ ಭಾಷೆಗಳು ಆಳಿಸಿಕೊಳ್ಳುವ ಬಾಷೆಗಳಾಗುತ್ತವೆ. ಆದರೆ ಭಾರತದಲ್ಲಿ ಎಲ್ಲಾ ಭಾಷೆಗಳು ಆಳಿಸಿಕೊಂಡವು. ಆಂಗ್ಲಭಾಷೆ ಅಂತರರಾಷ್ಟ್ರೀಯವಾಗಿ ಆಳುವ ಭಾಷೆಯಾಗಿದೆ.

ಹೀಗೆ ಈ ಮೇಲ್ಕಂಡ ವಿದ್ಯಾಮಾನಗಳನ್ನು ಗಮನಿಸಿದಾಗ ಕನ್ನಡ ನಾಡಿನಲ್ಲಿ ಕನ್ನಡ ಬೆಳೆಯುತ್ತಿದೆ ಎಂಬ ಸಾಂತ್ವಾನದ ಮಾತುಗಳನ್ನು ನಂಬಲಾಗದು. ಜಾಗತೀಕರಣದ ಹಿನ್ನೆಲೆಯಲ್ಲಿ ಅನ್ಯ ಭಾಷೆಗಳ ಅಗತ್ಯತೆ ಹೆಚ್ಚಿದರೂ ಅವುಗಳ ಮುಂದೆ ತಾಯ್ನಾಡಿನ ಕನ್ನಡ ಭಾಷೆ, ಸಂಸ್ಕೃತಿಯ ಮೌಲ್ಯವನ್ನು ಕಡೆಗಣಿಸುವಂತಿಲ್ಲ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕನ್ನಡ ಭಾಷೆಗೆ ಎದುರಾಗಿರುವ ಸವಾಲುಗಳಿಗೆ ಸಮಾಧಾನ ಸೂಚಿಸಬಹುದಾದ ಅಂಶಗಳ ಸೂಕ್ಷ್ಮ ನೋಟ ಇಂತಿದೆ.

  • ಯಾವುದೇ ಭಾಷೆಯು ಶಾಶ್ವತವಾಗಿ ಉಳಿಯಬೇಕಾದರೆ ಆ ಭಾಷೆಯ ನಿರಂತರ ಬಳಕೆಯಿಂದ ಭಾಷೆಯ ಜೀವಂತಿಕೆ ಕಾಪಾಡಬೇಕು, ಕನ್ನಡ ಭಾಷೆಯನ್ನು ನಿರಂತರವಾಗಿ ಬಳಸಿ ಜೀವಂತ ಭಾಷೆಯಾಗಿಸಬೇಕು.
  • ’ನಮ್ಮತನ’ ಉಳಿಸಿಕೊಂಡು ಇತರ ಭಾಷೆಗಳನ್ನು ಅಳವಡಿಸಿಕೊಳ್ಳಬೇಕು.
  • ’ನುಡಿದಂತೆ ನಡೆಯಬೇಕು’ ಎಂದರೆ ಕನ್ನಡ ಉಳಿಸಿ, ಬೆಳೆಸಿ, ರಕ್ಷಿಸಿ ಎಂದು ಉದ್ಗರಿಸುವವರು ಪರದೆಯ ಮುಂದೆ ಕನ್ನಡವನ್ನು ಪರದೆಯ ಹಿಂದೆ ಇತರ ಭಾಷೆಗಳನ್ನು ಉತ್ತೇಜಿಸಬಾರದು.
  • ಎಲ್ಲಕ್ಕಿಂತ ಹೆಚ್ಚಾಗಿ ಇಂಗ್ಲೀಷಿನಿಂದ ಇಂಗ್ಲೀಷಿಗೆ ಪ್ರತಿನಿಧಿಸುವ ಸಾವಿರ ಕಣ್ಣುಗಳಿಂದ ಕನ್ನಡಕ್ಕಿರುವ ಅಪಾಯ ತಡೆಯಬೇಕು.
  • ಜಾಗತೀಕರಣದ ನಡುವೆಯೂ ಕನ್ನಡವೆಂದರೆ ಬರಿ ನುಡಿಯಲ್ಲ ಹಿಂದಿದೆ ಅದರರ್ಥ ಎನ್ನುವುದರ ಜೌಚಿತ್ಯ ಸಾರಬೇಕು.
  • ಆಧುನಿಕ ಜಗತ್ತಿನ ಅಗತ್ಯಗಳಾದ ವೈಜ್ಞಾನಿಕತೆ, ವೈಚಾರಿಕತೆ, ತಾಂತ್ರಿಕತೆ, ತಾತ್ವಿಕತೆ, ಕಂಪ್ಯೂಟರ್ ಶಿಕ್ಷಣ, ಅಂತರ್ಜಾಲ ಮಾಹಿತಿ ಮೊದಲಾದ ಸೌಲಭ್ಯಗಳು ಕನ್ನಡ ಭಾಷಾ ಮಾಧ್ಯಮಗಳ ಮೂಲಕ ಪೂರೈಕೆ ಮಾಡಲು ಪ್ರಯತ್ನಿಸಬೇಕು.

ಗ್ರಾಂಥಿಕ ಭಾಷೆ ಹಾಗೂ ಆಡು ಭಾಷೆಯಾಗಿ ಕನ್ನಡ ನಿರಂತರವಾಗಿ ಮುಂದುವರೆದು ಜೀವಂತ ಭಾಷೆಯಾದಲ್ಲಿ ’ಅರಳುಗಟ್ಟಿದ ಚಿನ್ನಕ್ಕೆ ಮೆರುಗು ಕೊಡುವಂತಾಗುತ್ತದೆಯಲ್ಲವೇ?’.

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate