ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಶಿಕ್ಷಕರ ಮೂಲೆ / ಉನ್ನತ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಉನ್ನತ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ

ಉನ್ನತ ಶಿಕ್ಷಣದಲ್ಲಿ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆ

ಒಂದು ರಾಷ್ಟ್ರದ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಯ ಮೂಲವೇ ಶಿಕ್ಷಣ. ಮನುಷ್ಯನಿಗೆ ಮಾನಸಿಕ ಮತ್ತು ಬೌದ್ಧಿಕ ಸಂಸ್ಕಾರ ನೀಡುವ ಮೂಲಕ ಮಾನವೀಯತ್ವ ಪ್ರಾಪ್ತವಾಗಲು ಮೂಲಕಾರಣವೇ ಶಿಕ್ಷಣ. ಇದರಲ್ಲಿ ಸಾಮಾನ್ಯ ಶಿಕ್ಷಣದ ಹಾಗೂ ಉನ್ನತ ಶಿಕ್ಷಣದ ಪಾತ್ರವು ಹಿರಿದಾದುದಾಗಿದೆ. ಮೂಲಭೂತ ಶಿಕ್ಷಣದ ಜೊತೆಯಲ್ಲಿಯೇ ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯು ಆಯಾ ರಾಷ್ಟ್ರದ ಉನ್ನತ ಶಿಕ್ಷಣದ ವ್ಯವಸ್ಥೆ, ಗುಣಮಟ್ಟ, ಸುಶಿಕ್ಷಿತರ ಪ್ರಮಾಣ ಮೊದಲಾದವುಗಳ ಮೇಲೆ ಅವಲಂಬಿತವಾಗಿರುತ್ತದೆ.

ಆಧುನಿಕ ಶಿಕ್ಷಣ ಕ್ರಮವು ೧೦+೨+೩ ಮಾದರಿಯದಾಗಿದ್ದು, ಸಾಮಾನ್ಯ ಶಿಕ್ಷಣ, ಪದವಿ ಪೂರ್ವ ಮತ್ತು ಉನ್ನತ ಶಿಕ್ಷಣಗಳನ್ನೊಳಗೊಂಡಿದೆ. ಇದರಲ್ಲಿ ಉನ್ನತ ಶಿಕ್ಷಣವು ಮನುಕುಲವು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ನೈತಿಕ, ಸಾಂಸ್ಕೃತಿಕ ಮೊದಲಾದ ವಿಷಯಗಳ ಬಗ್ಗೆ ಆಲೋಚನೆ ಮಾಡಲು ಅವಕಾಶ ಮಾಡಿಕೊಟ್ಟು, ವಿಶೇಷವಾದ ಜ್ಞಾನ ಮತ್ತು ಕೌಶಲ್ಯಗಳನ್ನು ಬೆಳೆಸುವುದರ ಮೂಲಕ ರಾಷ್ಟ್ರದ ಅಭಿವೃದ್ಧಿಪೂರಕ ಕೊಡುಗೆಯನ್ನು ನೀಡುವ ಶಿಕ್ಷಣವಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಮೂಲಕ “ಪ್ರಜೆಗಳಿಂದ, ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರುವ ಪ್ರಜಾಪ್ರಭುತ್ವ ಹಾಗೂ ರಾಷ್ಟ್ರದ ಬಗೆಗಿನ ಹಿತ, ಆಸ್ಥೆಯ ರಾಷ್ಟ್ರೀಯತೆಯ ಆಲೋಚನೆಗಳನ್ನು ಸಕಾರಾತ್ಮಕವಾಗಿ ಆಚರಣೆಗೊಳ್ಳುವತ್ತಾ ಗಮನ ಹರಿಸುವುದು ಇಂದಿನ ಬದಲಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸನ್ನಿವೇಶಕ್ಕೆ ಅಗತ್ಯ ಅನಿವಾರ್ಯವಾಗಿರುವುದನ್ನು ಕಾಣಬಹುದು. ಉನ್ನತ ಶಿಕ್ಷಣ ಸಂಸ್ಥೆಗಳು ಜೌದ್ಯೋಗಿಕ ಕ್ಷೇತ್ರಕ್ಕೆ ಅಗತ್ಯವಾದ ಯಂತ್ರಗಳಾಗಿ ವಿದ್ಯಾರ್ಥಿಗಳನ್ನು ರೂಪಿಸುವ ಬದಲು ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕವಾಗಿ ಸರ್ವಜ್ಞಾನ ಪಡೆದ ಸರ್ವತೋಮುಖ ಅಭಿವೃದ್ಧಿಯೊಂದಿಗೆ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವಂತಾಗಬೇಕು. ಶಿಕ್ಷಣದ ಮೂಲಕ ಪ್ರಜಾಪ್ರಭುತ್ವ ಮತ್ತು ರಾಷ್ಟ್ರೀಯತೆಯ ವಿಷಯವನ್ನು ಮುಂಚೂಣಿಗೆ ತರುತ್ತಿರುವ ಲೋಕದ ಅನುಭವವನ್ನು ಕಟ್ಟಿಕೊಡುವ ಆಲೋಚನೆ, ಅಭಿಪ್ರಾಯ ಆಚರಣೆಗಳನ್ನು ಪ್ರಸ್ತುತಪಡಿಸುವ ಹಿನ್ನೆಲೆಯಲ್ಲಿ ಉನ್ನತ ಶಿಕ್ಷಣದ ಪಾತ್ರ ಮಹತ್ವವನ್ನು ತಿಳಿಸುವ ಆಶಯವನ್ನು ಈ ಸಂಶೋಧನ ಲೇಖನವು ಹೊಂದಿದೆ.

ಪೀಠಿಕೆ

ಪ್ರತಿಯೊಂದು ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯು ಆ ರಾಷ್ಟ್ರದ ಶಿಕ್ಷಣದ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಂದು ಕ್ಷೇತ್ರದ ಬೆಳವಣಿಗೆಯ ಅವಿಭಾಜ್ಯ ಅಂಗವೇ ಶಿಕ್ಷಣ. ಶಿಕ್ಷಣವು ಮನುಷ್ಯನನ್ನು ನಾಗರೀಕನನ್ನಾಗಿ, ಸುಸಂಸ್ಕೃತ ಸಂಸ್ಕಾರವಂತನನ್ನಾಗಿ ಮಾಡಿ ಮಾನವೀಯತ್ವ ಪ್ರಾಪ್ತವಾಗುವಂತೆ ಮಾಡುತ್ತದೆ. ಹೀಗಾಗಿಯೇ ಭಗವದ್ಗೀತೆಯಲ್ಲಿ “ನಹೀ ಜ್ಞಾನೇನ ಸದೃಶ್ಯಂ ಪವಿತ್ರ ಮಿಹ ವಿದ್ಯತೇ” ಅಂದರೆ ಜ್ಞಾನಕ್ಕೆ ಸಮಾನವಾದುದು ಪವಿತ್ರವಾದುದು ಈ ವಿಶ್ವದಲ್ಲಿ ಮತ್ತೊಂದಿಲ್ಲ. ಇಂತಹ ಶಿಕ್ಷಣವು ಮೊದಮೊದಲು ಮೌಖಿಕವಾಗಿ ಅನಂತರ ಬರವಣಿಗೆಯ ರೂಪ ಪಡೆದು ಕಾಲ ಕಾಲಕ್ಕೆ ಬದಲಾಗುತ್ತಾ ಹೋಯಿತು. ಇಂದಿನ ಶಿಕ್ಷಣವು ೧೦+೨+೩ ಮಾದರಿಯದಾಗಿದ್ದು, ಇದರಲ್ಲಿ ಉನ್ನತ ಶಿಕ್ಷಣದ ಪ್ರಭಾವವು ಇಂದಿನ ಪೀಳಿಗೆಯ ಮೇಲೆ ಅಪಾರವಾದುದಾಗಿದ್ದು, ಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಗಳಿಗೆ ಒಂದು ಮೂರ್ತ ರೂಪ ದೊರೆಯುವಲ್ಲಿ ಯಶಸ್ವಿ ಮೂಲವಾಗಿದೆ. ಆದರೆ ಇಂದಿನ ಆಧುನಿಕ ಮುಂದುವರಿದ ವೈಜ್ಞಾನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳು ತಮ್ಮ ಮೂಲ ಉದ್ದೇಶಗಳನ್ನು ಮರೆತು, ಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನು ನಕಾರಾತ್ಮಕವಾಗೆ ವಿದ್ಯಾರ್ಥಿಗಳಲ್ಲಿ ಮೂಡುವಂತೆ ಮಾಡುತ್ತಿರುವುದು ಆತಂಕಕಾರಿಯಾದ ಸಂಗತಿ ಎಂಬುದರ ಹಿನ್ನೆಲೆಯಲ್ಲಿ ಈ ಲೇಖನವನ್ನು ವಿಶ್ಲೇಷಿಸಲಾಗಿದೆ.

ಆಶಯದ ವಿಶ್ಲೇಷಣೆ

ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಹಂತದ ನಂತರ ಬರುವುದೇ ಉನ್ನತ ಶಿಕ್ಷಣ. ಇದನ್ನು ವಿಶ್ವವಿದ್ಯಾಲಯ ಶಿಕ್ಷಣವೆಂತಲೂ ಕರೆಯುತ್ತೇವೆ. ಉನ್ನತ ಶಿಕ್ಷಣವು ಸೃಜನಾತ್ಮಕ ಜ್ಞಾನ ಕೌಶಲ್ಯಗಳನ್ನು ಬೆಳೆಸುವುದರ ಜೊತೆಗೆ ಇಂದಿನ ಪೀಳಿಗೆಯು ಎದುರಿಸುತ್ತಿರುವ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಸಮಸ್ಯೆಗಳನ್ನು ಸಾಮಾಲೋಚಿಸಿ, ರಾಷ್ಟ್ರದ ಅಭಿವೃದ್ಧಿಗೆ ಪೂರಕ ಕೊಡುಗೆಯನ್ನು ನೀಡವಲ್ಲಿ ಪ್ರಮುಖವಾದುದು. ಆದರೆ ನಮ್ಮ ಉನ್ನತ ಶಿಕ್ಷಣವು ಇಂದು ತನ್ನ ಮೂಲ ಆಶಯವನ್ನು ಬದಿಗೊತ್ತಿ ವೈಯಕ್ತಿಕ ಆಶಯಗಳ ಕಡೆಗೆ ಗಮನ ಹರಿಸುತ್ತಿರುವುದನ್ನು ಕಾಣಬಹುದು. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಸಂಬಂಧಿಸಿದ ಜ್ಞಾನವನ್ನು ಮಾತ್ರ ಪಡೆಯುವಂತೆ ಮಾಡುತ್ತಿವೆ. ಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಯು ಹಳೆಯದಾದರೂ ಹೊಸ ಪರಿಕಲ್ಪನೆಯಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತಿವೆ.

ಪ್ರಭುತ್ವ

ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ ಉದ್ಯೋಗ ಪಡೆಯಲು ಸಹಕಾರಿಯಾದ ಶಿಕ್ಷಣವನ್ನು ನೀಡುವ ಮೂಲಕ ಪಾಶ್ಚಾತ್ಯ ಕಂಪನಿಗಳಿಗೆ ಉದ್ಯೋಗಿಗಳಾಗಿ ಕೆಲಸ ನಿರ್ವಹಿಸುವ ದಾಸ್ಯ ಮನೋಭಾವದ ಬಗ್ಗೆ ಚಿಂತನೆ ಮಾಡದೇ ಕೆಲಸಕ್ಕೆ ಸೇರುವ ಜನವರ್ಗವನ್ನು ಸೃಷ್ಟಿ ಮಾಡುವ ಉದ್ದಿಮೆಗಳಾಗಿ ಮಾರ್ಪಟ್ಟಿವೆ. ಉನ್ನತ ಶಿಕ್ಷಣ ಸಂಸ್ಥೆಗಳನ್ನು, ವಿಶ್ವವಿದ್ಯಾಲಯಗಳನ್ನು ನಿಯಂತ್ರಿಸುತ್ತಿರುವವರು ವೈಯಕ್ತಿಕ ಹಿತಾಸಕ್ತರಾಗಿರುವುದನ್ನು ಕಾಣಬಹುದು. ಆಳುವವರು ಆಳಿಸಿಕೊಳ್ಳುವವರ ಹಿತಾಸಕ್ತಿ, ಕ್ಷೇಮದ ಬಗ್ಗೆ ಗಮನ ಹರಿಸಿ ಅಭಿವೃದ್ಧಿ ಪೂರಕ ಕಾರ್ಯ ಮಾಡುವುದು ಪ್ರಭುತ್ವದ ಮೂಲ ಜವಾಬ್ದಾರಿ ಎಂಬುದನ್ನು ತಿಳಿಸುವ ಮೂಲಕ ಉನ್ನತ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಪ್ರಭುತ್ವದ ಮೂಲ ಕಲ್ಪನೆಯನ್ನು ಮೂಡುವಂತೆ ಮಾಡಬೇಕು. ಆದರೆ ಪ್ರಭುತ್ವದ ಅರ್ಥವೇ ಬದಲಾಗಿ ಕೆಲವೇ ವ್ಯಕ್ತಿಗಳ ಹಿತಾಸಕ್ತಿಗನುಗುಣವಾಗಿ ಕಾರ್ಯನಿರ್ವಹಿಸುವ ಆಡಳಿತ ವರ್ಗಕ್ಕೆ ಅನುಕೂಲವಾಗುವ ಹಾಗೂ ಕಾರ್ಪೊರೇಟ್ ಜಗತ್ತಾದ ಬಹುರಾಷ್ಟ್ರೀಯ ಕಂಪನಿಗಳ ಕೈಗೊಂಬೆಗಳಾಗಿ ಉನ್ನತ ಶಿಕ್ಷಣವು ಬದಲಾಗುತ್ತಿರುವುದು ಆತಂಕಕಾರಿಯಾಗಿದೆ.

ರಾಷ್ಟ್ರೀಯತೆ:

ಇತ್ತೀಚೆಗೆ ರಾಷ್ಟ್ರೀಯತೆ ಎಂಬುದು ರಾಜಕೀಯವಾಗಿ ಎಲ್ಲಿಲ್ಲದ ಮಹತ್ವ ಪಡೆದಿದೆ. ವ್ಯಕ್ತಿಗೆ ತನ್ನ ಅಭಿಪ್ರಾಯ ಅನಿಸಿಕೆಯನ್ನು ಸ್ವತಂತ್ರ್ಯವಾಗಿ ಅಭಿವ್ಯಕ್ತಿಸುವ ನಮ್ಮ ದೇಶದಲ್ಲಿ ರಾಷ್ಟ್ರೀಯತೆಯ ಪರಿಕಲ್ಪನೆಯೇ ಬದಲಾಗುತ್ತಿರುವುದಕ್ಕೆ ಉನ್ನತ ಶಿಕ್ಷಣವು ಕಾರಣವಾಗಿದೆ. ರಾಷ್ಟ್ರದ ಹಿತ, ರಾಷ್ಟ್ರದ ಒಗ್ಗಟ್ಟು ಮತ್ತು ರಾಷ್ಟ್ರದ ಸ್ವಾತಂತ್ರದ ಬಗ್ಗೆ ಆಸ್ಥೆಯನ್ನು ಹೊಂದಿರುವ ರಾಷ್ಟ್ರೀಯತೆಯು ಇಂದು ತನ್ನ ಮೂಲಾರ್ಥವನ್ನೇ ಬದಲಾಯಿಸಿಬಿಟ್ಟಿದೆ. ಇದಕ್ಕೆ ಕಾರಣ ನಮ್ಮ ಇಂದಿನ ಉನ್ನತ ಶಿಕ್ಷಣದ ರಚನಾ ವ್ಯವಸ್ಥೆ, ಶಿಕ್ಷಣದ ಗುಣಮಟ್ಟ ಮತ್ತು ಶಿಕ್ಷಿತರ ಪ್ರಮಾಣವಾಗಿದೆ. ರಾಷ್ಟ್ರದ ಬಗ್ಗೆ ಶ್ರದ್ಧೆ ಇಲ್ಲದೆ ರಾಷ್ಟ್ರೀಯ ಮನೋಭಾವವೂ ಮೂಡಲು ಸಾಧ್ಯವಿಲ್ಲ. ಭಾರತದಲ್ಲಿನ ಸಾಮಾಜಿಕ ಧಾರ್ಮಿಕ ಚಳುವಳಿಯ ಸುಧಾರಕರಾದ ಶಂಕರಾಚಾರ್ಯ, ಮದ್ವಾಚಾರ್ಯ, ರಾಮಾನುಜಾಚಾರ್ಯ, ಬಸವಣ್ಣ, ಕಬೀರ್ ಮೊದಲಾದವರು ಭಕ್ತಿಯ ಮೂಲಕ ವ್ಯಕ್ತಿಯಲ್ಲಿ ನೈತಿಕತೆಯು ಹೆಚ್ಚುವಂತಹ ಭಾರತೀಯತೆಗೆ (ರಾಷ್ಟ್ರೀಯತೆಗೆ) ಒತ್ತು ಕೊಟ್ಟರು. ಇಂತಹ ಸುಧಾರಣಾಕಾರರ, ರಾಷ್ಟ್ರೀಯವಾದಿಗಳ, ಸಾಹಿತಿಗಳ ವಿಚಾರಧಾರೆಗಳು ಕೂಡಿದಾಗ ನೈಜ ರಾಷ್ಟ್ರೀಯತೆಯ ಮನೋಭಾವ ಮೂಡುತ್ತದೆ. ಉನ್ನತ ಶಿಕ್ಷಣ ಸಂಸ್ಥೆಗಳು ಇಂತಹವರ ವಿಚಾರ ಆಲೋಚನೆಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಆದರೆ ಅವು ಕೆಲವು ವ್ಯಕ್ತಿಗಳ ಅಥವಾ ವ್ಯಕ್ತಿಯ , ಸಂಸ್ಥೆ ಅಥವಾ ಸಂಘದ , ಸರ್ಕಾರದ ಹಿಡಿತಕ್ಕೆ ಹಿತಾಸಕ್ತಿಗೆ ಒಳಗಾಗಿ ರಾಷ್ಟ್ರೀಯತೆಯ ಪರಿಕಲ್ಪನೆಯನ್ನೇ ಬದಲಿಸಿರುವುದು ಆತಂಕಕಾರಿಯಾಗಿದೆ.

ರಾಜಕೀಯ ವ್ಯಕ್ತಿಗಳ, ಬಂಡವಾಳಶಾಹಿಗಳ ಹಿಡಿತದಿಂದ ಪ್ರಭುತ್ವವನ್ನು ಮುಕ್ತಗೊಳಿಸಿ, ನಿಜವಾದ ರಾಷ್ಟ್ರದ ಹಿತಾಸಕ್ತಿಯ ರಾಷ್ಟ್ರೀಯತೆಯನ್ನು ಯುವಪೀಳಿಗೆಯು ಹೊಂದುವಂತೆ ಮಾಡುವುದು ಇಂದಿನ ಉನ್ನತ ಶಿಕ್ಷಣದ ಜವಾಬ್ದಾರಿಯುತ ಕರ್ತವ್ಯವಾಗಬೇಕು. “ಅಲ್ಪ ಸಂಖ್ಯಾತರ (ರಾಜಕೀಯ ವ್ಯಕ್ತಿಗಳ, ಬಂಡವಾಳಶಾಹಿಗಳ) ಪ್ರಭಾವಕ್ಕೆ ಪ್ರಭುತ್ವವು ಕಿವಿಗೊಡದೆ ಬಹುಸಂಖ್ಯಾತರ(ಪ್ರಜೆಗಳ) ಹಿತಾಸಕ್ತಿಗಾಗಿ ಶ್ರಮಿಸುವಂತಾಗಬೇಕಾದರೆ” ಉನ್ನತ ಶಿಕ್ಷಣವು ಪ್ರಭಾವಿ ಶಕ್ತಿಯುತ ಮಾಧ್ಯಮವಾಗಿ ಮೂಡಿದಾಅಗ ಮಾತ್ರ ಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಯು ತನ್ನ ನೈಜ ಅಸ್ಥಿತ್ವವನ್ನು ಪಡೆಯಲು ಸಾಧ್ಯ. ಹೀಗಾದಾಗ ರಾಷ್ಟ್ರದ ಸರ್ವತೋಮುಖ ಪ್ರಗತಿಯ ಕನಸು ನನಸಾಗಲು ಸುಗಮದಾರಿ ಕಲ್ಪಿಸಿದಂತಾಗುತ್ತದೆ.

ಅಧ್ಯಯನದ ಪ್ರಸ್ತುತತೆ

ಆಳಿಸಿಕೊಳ್ಳುವ ವರ್ಗಗಳು ಯಾವುದೇ ಮಾತನಾಡದೇ ಇರುವುದರಿಂದ ಆಳುವ ವರ್ಗಗಳ ಮಾತುಗಳಿಗೆ ಪ್ರಭಾವಕ್ಕೆ ಒಳಗಾಗಿ ಇಂದಿನ ಪ್ರಭುತ್ವವು ನಲುಗುತ್ತಿರುವುದರಿಂದ, ರಾಷ್ಟ್ರೀಯತೆಯ ಪರಿಕಲ್ಪನೇ ಬದಲಾಗಿದೆ. ಇದರಿಂದ ಮತ್ತೊಮ್ಮೆ ಪಾಶ್ಚಾತ್ಯರು ಜಗತ್ತನ್ನು ಆಳಬಲ್ಲವು ಎಂಬುದು ಆಘಾತಕಾರಿ ಸಂಗತಿಯಾಗಿದೆ. ಹೀಗಾಗಿ ಉನ್ನತ ಶಿಕ್ಷಣ ಸಂಸ್ಥೆಗಳು ತಮ್ಮ ಶಿಕ್ಷಣಿಕ ಅಸ್ತ್ರದ ಮೂಲಕ ಪ್ರಭುತ್ವ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಗೆ ನೈಜತೆ ತುಂಬುವ ಮೂಲಕ ಜೀವಂತಿಕೆಯನ್ನು ಕಾಪಾಡಬೇಕಾದ ಪ್ರಸ್ತುತತೆಯನ್ನು ಈ ಲೇಖನವು ತಿಳಿಸುವುದು.

ಆಕರ ಗ್ರಂಥಗಳು

  • ಇಂಡಿಯಾಸ್ ಸ್ಟ್ರಗಲ್ ಫಾರ್ ಇಂದಿಪೆಂಡೆನ್ಸ್- ಚಂದ್ರಬಿಪಿನ್, ೧೮೫೭-೧೯೪೭ ನ್ಯೂಡೆಲ್ಲಿ. ೧೯೮೯
  • ಗ್ರಾಮೀಣ ಸಾಂಸ್ಕೃತಿಕ ಪರಂಪರೆ ಮತ್ತು ರಾಷ್ಟ್ರೀಯ ಭಾವೈಕ್ಯತೆ – ಗುಜಗೊಂಡ ಸಂಗಮೇಶ. ಧಾರವಾಡ ೧೯೯೪.
  • ಪದವಿ ಪೂರ್ವ ತರಗತಿಯ ರಾಜಕೀಯ ಪಠ್ಯ ಪುಸ್ತಕ. ೨೦೧೬-೧೭
  • ಅಂತರ್ ಜಾಲ ಮಾಹಿತಿ ೨೭.೧೧.೨೦೧೭
  • www.aniketana.org/ಪ್ರಜಾಪ್ರಭುತ್ವದ-ಸಡಿಲ-ಕೊಂಡ
  • www.socialworkfootprints.org/3250327132223240322332513265/5215371
  • www.prajavani.net
2.97297297297
Anonymous Jul 30, 2019 07:33 AM

ಶಿಕ್ಷಣ ಮಾನವನ ಅಭಿವೃದ್ಧಿ ಹಾಗೂ ಉತ್ತಮ ಪ್ರೆಜೆಯಾಗಿ ಸಮಾಜ ದಲ್ಲಿ ಜೀವನ ಮಾಡಲು ಶಿಕ್ಷಣ ತುಂಬಾ ಅವಶ್ಯಕ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top