ಶಿಕ್ಷಕ ಅಥವಾ ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ಗುರು ಸೃಷ್ಟಿ ಸ್ಥಿತಿ ಮತ್ತು ಲಯಕಾರಕಾನೂ ಹೌದಲ್ಲವೇ? ಶಿಕ್ಷಕ ಭೌತಿಕವಾಗಿ ಏನನ್ನೂ ತಯಾರಿಸದಿರಬಹುದು. ಆದರೆ ಮಕ್ಕಳ / ವಿದ್ಯಾರ್ಥಿಗಳ ಜೀವನದ ಗುರಿ, ಉದ್ದೇಶಗಳನ್ನು, ಅವುಗಳನ್ನು ಸಾಧಿಸುವ ಮಾರ್ಗಗಳನ್ನು, ಧ್ಯೇಯವನ್ನು, ವಿದ್ಯಾರ್ಥಿಗಳ ಮನಸಲ್ಲಿ ಸೃಷ್ಟಿ ಮಾಡುವವನು, ಅವು ಪಕ್ವವಾಗಿ ಬೆಳೆಯುವಂತೆ ವಿವಿಧ ತತ್ವಗಳನ್ನು ತಲೆಯಲ್ಲಿ ತುಂಬುವವನು ಮತ್ತು ದಾರಿತಪ್ಪುವ ವಿದ್ಯಾರ್ಥಿಗಳ ನಡೆ ನುಡಿಗಳನ್ನು, ವಿದ್ಯಾರ್ಥಿಗಳಲ್ಲಿನ ಕೆಟ್ಟ ಯೋಚನೆಗಳನ್ನು ನಾಶಮಾಡಿ ಸರಿಯಾದ ದಾರಿಯನ್ನು ತೋರುವವನು ಗುರುವೇ ಆಗಿದ್ದಾನೆ. ಈ ಭೂಮಂಡಲದಲ್ಲಿ ಎಲ್ಲಾ ಪ್ರಾಣಿಗಳಂತೆ ಮನುಷ್ಯನೂ ಪ್ರಾಣಿಯೇ ಆದರೂ ಆತ ಭಿನ್ನ ಎನಿಸಿಕೊಳ್ಳುವುದು ಯೋಚನಾ ಶಕ್ತಿಯ ಮೂಲಕ. ಆದರೂ ಜನ್ಮಜಾತವಾಗಿ ಪ್ರಾಣಿಗಳಿಗೆ ಬರುವಂತಹ ಗುಣಗಳು ಮನುಷ್ಯನಿಗೆ ಬಂದಿರುವುದಿಲ್ಲ. ಹುಲಿಯನ್ನು ಅದರ ಗುಂಪಿನಿಂದ ಬೇರ್ಪಡಿಸಿದರೂ ಅದು ಬೇಟೆಯಾಡಲು ಕಲಿಯುತ್ತದೆ. ಜಿಂಕೆಯನ್ನು ಎಲ್ಲೇ ಬಿಟ್ಟಾರೂ ಅದು ಹುಲ್ಲು ತಿಂದೇ ಜೀವಿಸುತ್ತದೆ. ಕೋತಿಯು ಮರದಿಂದ ಮರಕ್ಕೆ ಜಿಗಿಯುವುದನ್ನು ತಾನಾಗಿಯೇ ಕಲಿಯುತ್ತದೆ. ಅಂದರೆ ಎಲ್ಲಾ ಪ್ರಾಣಿಗಳೂ ವಂಶಪಾರಂಪರ್ಯವಾಗಿ ಕೆಲವು ಗುಣಗಳನ್ನು ಕಾಳಿತಿರುತ್ತವೆ. ಆದರೆ ಮನುಷ್ಯನಿಗೆ ಎಲ್ಲಾ ಗುಣಗಳೂ ಹೇಳಿಕೊಟ್ಟರೆ ಮಾತ್ರ ಕಲಿಯಲು ಸಾದ್ಯ. ಹುಟ್ಟುತ್ತಲೇ ಏನೇನೂ ತಿಳಿಯದ ಮಗು ಕ್ರಮೇಣ ತನ್ನ ಸುತ್ತಮುತ್ತಲಿನವ ಭಾಷೆಯನ್ನು ಗಮನಿಸುತ್ತಾ ಕೆಲವು ಶಬ್ದಗಳನ್ನು ಕಲಿಯುತ್ತದೆ. ನಿಧಾನವಾಗಿ ಮನೆಯ ಸುತ್ತಮುತ್ತಲಿನ ಪರಿಸರದಲ್ಲಿ ಕಂಡುಬರುವ ವಿವಿಧ ಜನರು, ವಸ್ತುಗಳಿಂದ ಅನೇಕ ವಿಷಯಗಳನ್ನು ಕಲಿಯುತ್ತದೆ. ಆದರೆ ಶೈಶವಾವಸ್ಥೆ ಕಳೆದು ಬಾಲ್ಯಕ್ಕೆ ಅಡಿಯಿಟ್ಟಾಗ ಮಕ್ಕಳಿಗೆ ಸಾಮಾಜಿಕ ಜೀವನದ ಪರಿಚಯ ಆಗುತ್ತಾ ಹೋಗುತ್ತದೆ. ಈ ಹಂತದಿಂದ ಮಗುವಿನ ಕಲಿಕೆಯ ರೀತಿ ಮತ್ತು ಅದರ ವೇಗ ಎರಡೂ ಬದಲಾಗುತ್ತಾ ಹೋಗುತ್ತದೆ. ಇದು ಬಹಳ ಮನುಷ್ಯನ ಜೀವನದ ಗುರಿಯನ್ನು ರೂಪಿಸುವ ಪ್ರಮುಖ ಹಂತವಾಗಿದ್ದು, ಇಲ್ಲಿಂದ ಮಕ್ಕಳಿಗೆ ಉತ್ತಮ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿ ಬೇಕಾಗುತ್ತದೆ. ಗುರು ಎಂದರೆ ಕೇವಲ ಶಾಲೆಗಳಲ್ಲಿ ಅಕ್ಷರ ಹೇಳಿಕೊಡುವ ಗುರುಗಳಷ್ಟೇ ಅಲ್ಲ. ಮನೆಯಲ್ಲಿ ತಾಯಿ ತಂದೆ ಅಜ್ಜ ಅಜ್ಜಿಯರು, ಬಂಧು ಬಳಗದವರು ಸ್ನೇಹಿತರು, ದಿನಾಲೂ ನಾವು ನೋಡುವ ಮಾತಾಡಿಸುವ ಜನರನ್ನೂ, ಸಮಾಜದಲ್ಲಿ ಎತ್ತರದಲ್ಲಿರುವ ಗಣ್ಯ ವ್ಯಕ್ತಿಗಳು, ಮಹನೀಯರನ್ನೂ ಸಹ ಗುರುಗಳಾಗಿ ಭಾವಿಸಿದರೆ, ಮನುಷ್ಯ ಬಹಳ ಎತ್ತರಕ್ಕೆ ಏರಬಹುದು. ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ದಾರ್ಶನಿಕನೊಬ್ಬ ಹೇಳಿದ್ದಾನೆ. ಅಂದರೆ ಏನೂ ತಿಳಿಯದ ಒಬ್ಬ ಸಾಮಾನ್ಯ ಮನುಷ್ಯನನ್ನು ಜೀವನದ ಮೌಲ್ಯಗಳು, ಜೀವನದ ಅರ್ಥ, ಗುರಿ ಆ ಗುರಿಯನ್ನು ಸಾಧಿಸಲು ಇರುವ ಮಾರ್ಗ ಮುಂತಾದವುಗಳನ್ನು ಗುರುವಿನ ಮಾರ್ಗದರ್ಶನವಿಲ್ಲದೆ ತಿಳಿಯಲು ಸಾಧ್ಯವಿಲ್ಲ. ಪ್ರಪಂಚದ ಮಹಾನ್ ವ್ಯಕ್ತಿಗಳು, ದಾರ್ಶನಿಕರು, ಸಂತರು, ರಾಜಕೀಯ ಮುತ್ಸದ್ದಿಗಳ ಜೀವನದ ವಿವಿಧ ಹಂತಗಳನ್ನು ಗಮನಿಸಿದಾಗ ಅವರ ಜೀವನದ ಪ್ರತಿ ಹಂತದಲ್ಲಿ ಮಾರ್ಗದರ್ಶಕರಾಗಿ ಒಬ್ಬ ಗುರು ಜೊತೆಗಿದ್ದನೆಂದು ತಿಳಿಯುತ್ತದೆ. ಮನಸ್ಸು ಎಲ್ಲ ಕಡೆಗೂ ಓಡುತ್ತಿರುತ್ತದೆ. ಆದರೆ ಅಂತಹ ಮನಸ್ಸಿಗೆ ಸರಿಯಾದ ದಾರಿ ತೋರುವ, ಬುದ್ದಿಯನ್ನು ಉಪಯೋಗಿಸಿ ಸಮಾಜಕ್ಕೆ ಒಳಿತು ಮಾಡುವ ಮಾರ್ಗದರ್ಶನ ತೋರಿಸುವ ಶಕ್ತಿಯಿರುವುದು ಕೇವಲ ಗುರುವಿನಲ್ಲಿ ಮಾತ್ರ. ಪುರಾಣದ ಕತೆಗಳನ್ನು ನೋಡಿದರೆ ನಮ್ಮ ಪ್ರಾಚೀನರು ಗುರುಗಳಿಗೆ ಎಂತಹ ಮಹತ್ವವನ್ನು ನೀಡಿದ್ದರು ಎಂದು ತಿಳಿಯುತ್ತದೆ. ಮಹಾಭಾರತ, ರಾಮಾಯಣದಂತಹ ಬೃಹತ್ ಕಾವ್ಯಗಳು ನಮ್ಮ ಪೂರ್ವಜರ ಜೀವನಕ್ರಮ,ಸಂಸ್ಕೃತಿ,ಅವರು ನಂಬಿದ್ದ, ಗೌರವಿಸುತ್ತಿದ್ದ ಮೌಲ್ಯಗಳನ್ನು ತಿಳಿಸುತ್ತವೆ. ಶ್ರೀರಾಮಚಂದ್ರನು ಮರ್ಯಾದಾ ಪುರುಷೋತ್ತಮ ಎಂದು ಕರೆಸಿಕೊಳ್ಳಲು ಅವನಿಗೆ ಜೀವನದ ವಿವಿಧ ಹಂತಗಳಲ್ಲಿ ದೊರೆತ ಗುರುಗಳೇ ಕಾರಣ. ಅವರ ಮಾರ್ಗದರ್ಶನವೇ ಆತನನ್ನು ಆದರ್ಶ ಪುರುಷನನ್ನಾಗಿ ರೂಪಿಸಿದವು. ಅಂತೆಯೇ ಮಹಾಭಾರತದಲ್ಲಿ ಅರ್ಜುನ ಒಬ್ಬ ಉತ್ತಮ ಬಿಲ್ಲು ವಿದ್ಯಾಪ್ರವೀಣನಾಗಲು ದ್ರೋಣಾಚಾರ್ಯರಂತಹ ಗುರುಗಳೇ ಕಾರಣ. ಹಾಗೆಯೇ ನಮ್ಮ ಇತಿಹಾಸದ ಪ್ರಸಿದ್ದ ದೊರೆಗಳಾದ ಹಕ್ಕ ಬುಕ್ಕರು ಶತ್ರುಗಳ ದಾಳಿಯಿಂದ ಕೈತಪ್ಪಿದ ವಿಜಯನಗರ ಸಾಮ್ರಾಜ್ಯವನ್ನು ಹಿಂಪಡೆಯಲು ವಿದ್ಯಾರಣ್ಯರಂತಹ ಗುರುಗಳ ಮಾರ್ಗದರ್ಶನ ಅತ್ಯಗತ್ಯವಾಗಿತ್ತು. ಶಿವಾಜಿ ಮಹಾರಾಜ ಸೋತು ಬಸವಳಿದು ಕಂಗೆಟ್ಟು ಕುಳಿತಿದ್ದಾಗ, ಸಮರ್ಥ ರಾಮದಾಸರಂತಹ ಗುರುಗಳು ಆತನಿಗೆ ಅನೇಕ ಉಪದೇಶಗಳ ಮೂಲಕ ಆತ್ಮವಿಶ್ವಾಸ ತುಂಬುತ್ತಾರೆ. ಆತ ಪುನಹ ತನ್ನ ಸಾಮ್ರಾಜ್ಯವನ್ನು ಪಡೆಯುವಲ್ಲಿ ಯಶಸ್ವಿಯಾಗಲು ಕಾರಣರಾಗುತ್ತಾರೆ. ಅಂಬೇಡ್ಕರ್ ಬರೆದ ಸಂವಿಧಾನ ಇಂದು ದೇಶದ ಹಣೆಬರಹವನ್ನು ನಿರ್ಧರಿಸುವ ಒಂದು ಸಂಹಿತೆಯಾಗಿದೆ. ಆದರೆ ಅವರಿಗೆ ಸಿಕ್ಕಂತಹ ಗುರುಗಳು ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ನೀಡದಿದ್ದರೆ ಅಂಬೇಡ್ಕರ್ ಓದು ಮುಂದುವರೆಸಲು ಸಾಧ್ಯವಾಗುತ್ತಿರಲಿಲ್ಲ. ಮಹಾತ್ಮಾ ಗಾಂಧೀಜಿಯವರನ್ನು ಇಡೀ ವಿಶ್ವ ಕೊಂಡಾಡುತ್ತದೆ. ಅವರ ಅಹಿಂಸೆಯ ತತ್ವಗಳನ್ನು ಬಹಳಷ್ಟು ಮಂದಿ ಇಷ್ಟಪಡುತ್ತಾರೆ. ಆದರೆ ಮೋಹನದಾಸ ಕರಮಚಂದ ಗಾಂಧಿ ಮಹಾತ್ಮಾ ಗಾಂಧಿಯಾಗಲು ಕಾರಣವಾದ ಗುರುಗಳು ಅನೇಕರು. ಅವರ ತತ್ವೋಪದೇಶಗಳು ಮಹಾತ್ಮಾ ಗಾಂಧಿಯವರ ಮನಸ್ಸನ್ನು ಆಳವಾಗಿ ಹೊಕ್ಕು ಅಹಿಂಸೆ ಸತ್ಯದ ಬಗೆಗಿನ ನಂಬಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸಿದವು. ಆದ್ದರಿಂದ ಭಾರತದ ಸ್ವಾತಂತ್ರ್ಯ ಹೋರಾಟದ ದಿಕ್ಕೇ ಬದಲಾಗಿ ಅಹಿಂಸೆಯಿಂದ ಸ್ವರಾಜ್ಯವನ್ನು ಪಡೆದ ಪ್ರಪಂಚದ ಮೊದಲ ರಾಷ್ಟ್ರವಾಯಿತು. ಈಗಲೂ ನಮ್ಮ ಸುತ್ತಮುತ್ತಲಿನ ಯಾವುದೇ ನಾಯಕರನ್ನು ಕೇಳಿದರೆ ಅವರ ಜೀವನದ ಗುರಿ ಅವರ ಗುರು ಹಾಕಿಕೊಟ್ಟ ಮಾರ್ಗದ ಮೇಲೆಯೇ ನೆಡೆಯುತ್ತಿದೆ ಎಂಬ ಸತ್ಯ ತಿಳಿಯುತ್ತದೆ. ಆದರೆ ಇಂದು ಸಮಾಜ ವಿಚಿತ್ರ ರೀತಿಯಲ್ಲಿ ಬದಲಾಗುತ್ತಿದೆ. ಶಿಕ್ಷಕರ ಸ್ಥಾನಮಾನಗಳು ಪಲ್ಲಟವಾಗುತ್ತಿವೆ. ಗುರುಗಳ ಮೇಲಿನ ಗೌರವ ಮೊದಲಿಂತಿಲ್ಲ. ಇದಕ್ಕೆ ಕೇವಲ ವಿದ್ಯಾರ್ಥಿಗಳಷ್ಟೇ ಕಾರಣರಲ್ಲ. ಅವರ ಪೋಷಕರು, ನಮ್ಮ ಸಾಮಾಜಿಕ ವ್ಯವಸ್ಥೆ, ಮಾದ್ಯಮಗಳೂ ಸಹ ಕಾರಣ. ಅಲ್ಲದೆ ಶಿಕ್ಷಕರೂ ಸಹ ಹಲವೆಡೆ ಹಾದಿ ತಪ್ಪುತ್ತಿದ್ದಾರೆ. ಅವರ ವರ್ತನೆ ನಡುವಳಿಕೆಗಳು ಅನುಕರಣೀಯಗಿ ಎಲ್ಲ ಸಂದರ್ಭದಲ್ಲೂ ಇರುವುದಿಲ್ಲ. ಇದರಿಂದ ನಮ್ಮ ಸಾಮಾಜಿಕ ತಳಹದಿಯೇ ಅಲುಗಾಡುತ್ತಿದೆ. ಸಮಾಜದಲ್ಲಿ ಅತ್ಯಾಚಾರ ಮೋಸ ಧಗ ವಂಚನೆ ಭ್ರಷ್ಟಾಚಾರದಂತ ಘಟನೆಗಳು ಇಂದು ಹೆಚ್ಚಾಗುತ್ತಿವೆ. ಇದಕ್ಕೆಲ್ಲ ಸರಿಯಾದ ಗುರುವಿನ ಮಾರ್ಗದರ್ಶವಿಲ್ಲದಿರುವುದೇ ಕಾರಣ. ನಾವು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಶಿಕ್ಷಕರು ಮೌಲ್ಯಯುತವಾದ ಪ್ರಜೆಗಳನ್ನು ತಯಾರು ಮಾಡಬೇಕು.
ಕೊನೆಯ ಮಾರ್ಪಾಟು : 4/21/2020