অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸಜೆಸ್ಟೋಪೀಡಿಯಾ

ನೀವು ಎಂದಾದರೂ ಹೊಸ ಭಾಷೆಯನ್ನು (ಅಥವಾ ಇಂಗ್ಲಿಷನ್ನು ಗಂಭೀರವಾಗಿ) ಕಲಿಯಲು ಪ್ರಯತ್ನಿಸಿದ್ದೀರಾ? ಆಗ ನಿಮಗೆ ಹೇಗನಿಸಿತ್ತು? ‘ಬೇಡಪ್ಪಾ ಇದರ ಸಹವಾಸ, ಬಿಟ್ಟು ಹಾಕೋಣ’ ಎನಿಸಿತ್ತೆ? ‘ನನ್ನ ಮೆದುಳಿಗೆ ಈ ಸಾಮಥ್ರ್ಯ ಇಲ್ಲ’ ಎನಿಸಿತ್ತೆ? ಹಾಗಿದ್ದರೆ ಈ ಬಾರಿ ಸಜೆಸ್ಟೋಪೀಡಿಯಾ ವಿಧಾನ ಕಲಿಯಿರಿ.

ಏನಿದು ಸಜೆಸ್ಟೋಪೀಡಿಯಾ ಅಂದರೆ?

ಸರಳವಾಗಿ ಹೇಳುವುದಾದರೆ, ಕಲಿಯುವವರ ಸಹಜ ಸಮಗ್ರ ಪ್ರತಿಭೆಗಳನ್ನು ಬಳಸಿ ಅವರ ಕಲಿಕೆಯ ಸಾಮಥ್ರ್ಯವನ್ನು ಗರಿಷ್ಠ

ಮಟ್ಟಕ್ಕೆ ಏರಿಸುವ ಒಂದು ಸಂಶೋಧನೆ ಮತ್ತು ತತ್ವಶಾಸ್ತ್ರ ಆಧರಿಸಿದ ಕಲಿಸುವ ತಂತ್ರವನ್ನು ಸಜೆಸ್ಟೋಪೀಡಿಯಾ ಎಂದು ಕರೆಯುತ್ತಾರೆ. ಇದನ್ನು ಬಲ್ಗೇರಿಯಾದ ಮನೊವಿಜ್ಞಾನಿ ಜಾರ್ಜಿ ಲೋಝನೋವ್ ಎಂಬಾತ 1975ರಲ್ಲಿ ಕಂಡುಹಿಡಿದ.

ಹಿನ್ನೆಲೆ:

ಇಂಗ್ಲಿಷ್ ಭಾಷಾ ಕಲಿಕೆಯ ಇತಿಹಾಸದಲ್ಲಿ 1970ರ ದಶಕವು ಗಮನಾರ್ಹವಾದುದು. ಅ ಮೊದಲಿನ ಕಲಿಕಾ ವಿಧಾನಗಳು ವಿದ್ಯಾರ್ಥಿಗಳ ಮನೋವೈಜ್ಞಾನಿಕ ಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುತ್ತಲೇ ಇರಲಿಲ್ಲ. ಪಠ್ಯದ ಅಯ್ಕೆ, ಕಲಿಕೆಯ ಚಟುವಟಿಕೆ  ಇವೆಲ್ಲ ವಿಷಯಗಳಲ್ಲೂ ಅವರನ್ನು ಭಾವನಾರಹಿತ ಯಂತ್ರಗಳಂತೆ ಪರಿಗಣಿಸಲಾಗುತ್ತಿತ್ತು.

1970ರ ದಶಕದಲ್ಲೇ ವಿದ್ಯಾರ್ಥಿ -ಪ್ರಧಾನ ದೃಷ್ಠಿ ಬಂದದ್ದು (ಲರ್ನರ್ ಸೆಂಟರ್ಡ್). ಕಲಿಯುವವರು ರಕ್ತ ಮಾಂಸಗಳಿಂದ ಕೂಡಿದ ಅರಿವುಳ್ಳ ಮನುಷ್ಯರು,  ಹೀಗಾಗಿ ಶಿಕ್ಷಕರು ಅವರ ಮನಸ್ಸು, ಆಲೋಚನೆಗಳ ಬಗ್ಗೆ ಅನುಭವಗಳ ಬಗ್ಗೆ ಸೂಕ್ಷ್ಮ ಸಂವೇದನೆಗಳನ್ನು ಹೊಂದಿರಬೇಕು, ಎಂಬ ಭಾವನೆ ಇದ್ದರೆ ಅದನ್ನು  ಮಾನವೀಯ ಧೊರಣೆ ಎನ್ನುತ್ತಾರೆ. ಹೀಗೆ ಅವರ ಅರಿವು ಮನಸ್ಸುಗಳನ್ನು ಪ್ರಚೋದಿಸಿ ಅವರ ಕಲಿಕಾ ಸಾಮಥ್ರ್ಯವನ್ನು ಪೂರ್ಣವಾಗಿ ಬಳಸುವಂತೆ ಮಾಡಬಹುದು.

ಅವರ ಕಲಿಕೆಯ ಬಗ್ಗೆ ಇರುವ ಮಾನಸಿಕ ಒಡ್ಡುಗಳನ್ನು ಕಿತ್ತುಹಾಕುವುದರಿಂದ ವಿದ್ಯಾರ್ಥಿಗಳ ಮನಸ್ಸನ್ನು ಪ್ರಚೋದಿಸುವ ಕ್ರಿಯೆಯನ್ನು ಸಾಧಿಸಬಹುದು. 1970ರ ಕೊನೆಯಲ್ಲಿ ಇಂತಹ ಪ್ರಯತ್ನ ಮೊದಲು ಪಟ್ಟದ್ದು ಬಲ್ಗೇರಿಯಾದ ಮನೋವಿಜ್ಞಾನಿ ಜಾರ್ಜಿ ಲೋಝನೋವ್.  ಭಾಷೆಯ ಕಲಿಕೆಯ ಈ ತಂತ್ರವನ್ನು ಅವನು ಸಜೆಸ್ಟೋಪೀಡಿಯಾ ಎಂದು ಕರೆದ. ಇದನ್ನು ನಂತರ ಸೂಪರ್ ಲರ್ನಿಂಗ್ ಎಂದೂ ಕರೆಯುತ್ತಾರೆ.

ಸಜೆಸ್ಟೋಪೀಡಿಯಾ ಹೇಗೆ ಕೆಲಸ ಮಾಡುತ್ತದೆ?

ಈ ತರಗತಿಗಳು ಸಾಂಪ್ರದಾಯಿಕ ತರಗತಿಗಳ ಹಾಗೆ ಇರುವುದಿಲ್ಲ.
ಅದರಲ್ಲಿ ಬಳಸುವ ಒಂದೊಂದು ಕ್ರಮವೂ ಸಂಪ್ರದಾಯ ವಾದಿಗಳು ಹುಬ್ಬೇರಿಸುವಂತೆಯೇ ಇರುತ್ತದೆ.  ಉದಾಹರಣೆಗೆ:  ತರಗತಿ ನಡೆಯುತ್ತಿರುವಾಗ ಹಿನ್ನೆಲೆಯಲ್ಲಿ ಸಂಗೀತ ಹಾಕಿರುತ್ತಾರೆ.  ಬಹಳ ಸುಖಾಸೀನಗಳನ್ನು ವಿದ್ಯಾರ್ಥಿಗಳಿಗೆ ನೀಡುತ್ತಾರೆ.  ವಿಶ್ರಾಂತ ಮನಸ್ಸು ಅತ್ಯಧಿಕ ಕಲಿಕೆಗೆ ಕಾರಣವಾಗುತ್ತದೆ ಎಂದು ನಂಬಿದೆ. ವಿದ್ಯಾರ್ಥಿಯ ಒಟ್ಟಾರೆ ವ್ಯಕ್ತಿತ್ವವನ್ನು ಪ್ರಚೋದಿಸುತ್ತದೆ.  ಮನಸ್ಸಿನಲ್ಲಿರುವ ಒಡ್ಡುಗಳನ್ನು ತೊರೆದುಹಾಕಿ ವೇಗವಾಗಿ ಮುನ್ನುಗ್ಗುತ್ತದೆ.  ತರಗತಿಯಲ್ಲಿ ಗಂಭೀರವಾಗಿರುವುದಕ್ಕಿಂತ, ಆರಾಮವಾಗಿರುವುದನ್ನು ಉತ್ತೇಜಿಸುತ್ತದೆ. ಕಲಿಕೆಯನ್ನು  ಎಲ್ಲ ಇಂದ್ರಿಯಗಳ ಮೂಲಕ ನಡೆಸುತ್ತದೆ. ಪಠ್ಯವನ್ನು ಅಭಿನಯಿಸಿ ನಾಟಕೀಕರಿಸುತ್ತದೆ.  ಚಿತ್ರ ಹಾಗೂ ಸಂಗೀತ ಚಲನೆಯನ್ನು ಒಳಗೊಂಡಿದೆ.
ಮತ್ತೊಬ್ಬ ಶಿಕ್ಷಣ ತಜ್ಞ ಸ್ಟೀಫನ್ ಕ್ರಾಷನ್ ಬಹಳ ಹಿಂದೆ ಹೇಳಿರುವ ಅಫೆಕ್ಟಿವ್ ಫಿಲ್ಟರ್ ಇದನ್ನೇ ಪ್ರತಿಪಾದಿಸುತ್ತದೆ. ಕಲಿಯುವವರಿಗೆ ಬೋರಾಗಿದ್ದರೆ, ಕೋಪಗೊಂಡಿದ್ದರೆ,  ಹತಾಷರಾಗಿದ್ದರೆ, ನರ್ವಸ್ ಆಗಿದ್ದರೆ,  ಅಥವಾ ಒತ್ತಡದಲ್ಲಿದ್ದರೆ ಇವು ಅವರ ಕಲಿಕೆಗೆ ಫಿಲ್ಟರ್‍ಗಳಾಗಿ ಪರಿಣಮಿಸುತ್ತವೆ ಎನ್ನುತ್ತದೆ.

ಸಜೆಸ್ಟೋಪೀಡಿಯ ಬಹು ಸ್ಥರಗಳ ಕಲಿಕೆ. ಸೋವಿಯೆಟ್ ಮನೋವೈಜ್ಞಾನಿಕ ಸಂಶೋಧನೆ ಹಾಗೂ ನಮ್ಮ ಭಾರತೀಯ ಯೋಗ ಇವೆರಡರ ಬಳಕೆಯನ್ನು ಈ ವಿಧಾನದ ಕಲಿಕೆಯಲ್ಲಿ ಕಾಣಬಹುದು.  ಮುಲತಃ ಈ ವಿಧಾನವನ್ನು  ವಿದೇಶೀ ಭಾಷೆಗಳನ್ನು ಕಲಿಯಲು ರೂಪಿಸಿದ್ದು. ಮನುಷ್ಯನ ಮೆದುಳು ಹೇಗೆ ಕೆಲಸ ಮಾಡುತ್ತದೆ  ಮತ್ತು ನಾವು ಅತ್ಯಂತ ಪ್ರಭಾವಶಾಲಿಯಾಗಿ ಹೇಗೆ ಕಲಿಯುತ್ತೇವೆ ಎಂಬುದರ ಅಧ್ಯಯನದ ಮೇಲೆ ಆಧರಿಸಿದ ವಿಧಾನ. ಸಾಂಪ್ರದಾಯಿಯ ವಿಧಾನಗಳಲ್ಲಿ ಕಲಿಯುವ ವೇಗಕ್ಕಿಂತ ಮೂರು (ಇದರ ಬೆಂಬಲಿಗರು 25 ಪಟ್ಟು ಎಂದು ಹೇಳಿಕೊಳ್ಳುತ್ತಾರೆ) ಪಟ್ಟು ಹೆಚ್ಚು ವೇಗವಾಗಿ ಕಲಿಯಲು ಸಾಧ್ಯ.
ನಾಲ್ಕು ಪ್ರಮುಖ ಹಂತಗಳು:

ನಿರೂಪಣೆ:

ಕಲಿಕೆಯು ಸುಲಭವಗಿಯೂ ಮೋಜಿನಿಂದ ಕೂಡಿರುತ್ತದೆಂದೂ ಭರವಸೆ ನೀಡುತ್ತಾ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ನಿರಾಳವಾಗಿರಲು, ಹಾಗೂ ಧನಾತ್ಮಕ ಮನಸ್ಥಿತಿಗೆ ತರಿಸುವ ಸಿದ್ಧತಾ ಹಂತ.
ಮೊದಲ ಸಂಗೀತ : ಕಲಿಯಬೇಕಾದ ಪಠ್ಯದ ಗತಿಶೀಲ ನಿರೂಪಣೆ ಈ ಹಂತದಲ್ಲಿರುತ್ತದೆ. ಉದಾಹರಣೆಗೆ, ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ಪಠ್ಯದ ನಾಟಕೀಯ ಓದುವಿಕೆ


ಎರಡನೆಯ  ಸಂಗೀತ:

(ನಿಷ್ಕ್ರಿಯ ಸ್ಥಿತಿ) ವಿದ್ಯಾರ್ಥಿಗಳನ್ನು ಈಗ ವಿರಮಿಸುತ್ತಾ ಬರೋಕ್ ಸಂಗೀತವನ್ನು ಕೇಳಲು ಹೇಳಬೇಕು. ಹಿನ್ನೆಲೆ ಸಂಗೀತ ಈಗ ಭಿನ್ನವಾಗಿರುತ್ತದೆ. ಅದು ವಿದ್ಯಾರ್ಥಿಗಳು ಪ್ರಯತ್ನರಹಿತವಾಗಿ ಅತ್ಯುತ್ತಮ ಮಟ್ಟದಲ್ಲಿ ಕಲಿಯಲು ನೆರವು ನೀಡುತ್ತದೆ.  ಪದಗಳನ್ನು ಕಲಿಯಲು ಫ್ಲಾಷ್ ಕಾರ್ಡ್‍ಗಳನ್ನು ಬಳಸಿ, ಪ್ರಾಣಾಯಾಮದೊಂದಿಗೆ, ಶಿಕ್ಷಕನ ಪದಗಳ ಉಚ್ಚಾರವನ್ನು ಕೇಳುತ್ತಾ, ಕಲಿಯುವ ವಿಧಾನ ದೃಶ್ಯ, ಶ್ರವ್ಯ ಮಾದ್ಯಮಗಳಿಂದ ಮನದಟ್ಟಾಗುತ್ತದೆ.


ಅಭ್ಯಾಸ:

ಕಲಿತ ಪಾಠದ ಪುನಃ ಪರಿಶೀಲನೆ ಮತ್ತು ಒಟ್ಟುಗೂಡಿಸುವಿಕೆಗಾಗಿ ಆಟಗಳು, ಒಗಟುಗಳು ಇಂತಹ ವೈವಿಧ್ಯಮಯ ಚಟುವಟುವಟಿಕೆಗಳನ್ನು ನಡೆಸಲಾಗುತ್ತದೆ.
ಸಂಗೀತದ ಪಾತ್ರ:
ಗ್ಯಾಸ್ಟನ್ ಹೇಳುವ ಪ್ರಕಾರ,  ಸಂಗೀತವು ವಯಕ್ತಿಕ ಸಂಬಂಧಗಳನ್ನು ಸ್ಥಾಪಿಸುತ್ತದೆ ಮತ್ತು ಪಾಲಿಸುತ್ತದೆ . ಅದು ಆತ್ಮ ತೃಪ್ತಿಯೊಂದಿಗೆ ಆತ್ಮ sಸ್ಥೈರ್ಯವನ್ನೂ ತರುತ್ತದೆ. ವಿದ್ಯಾರ್ಥಿಗಳ ಮನಸ್ಸಿಗೆ ಮುದನೀಡುತ್ತದೆ  ಅದರಿಂದ ಕಲಿಕೆ ಸುಲಭವಾಗುತ್ತದೆ.ಇಂತಹ ಸಂಗೀತಗಾರ ನಿಮಿಷಕ್ಕೆ 60 ಬೀಟ್ ಇರುವ ಟಚಿಡಿgo ಸಂಗೀತವನ್ನು ಹಿನ್ನೆಲೆಯಾಗಿ ಬಳಸುತ್ತಾರೆ.  ಸಜೆಸ್ಟೋಪೀಡಿಯ ಮೂಲಕ ಇತರರಿಗೆ ಕನ್ನಡ ಕಲಿಸಲು ಇದಕ್ಕೆ ಸರಿ ಸಮನಾದ ಕರ್ನಾಟಿಕ್ ಸಂಗೀತ ರೂಪವನ್ನು ಕಂಡುಕೊಳ್ಳುವುದು ಕಷ್ಟದ ಕೆಲಸವೇನಲ್ಲ.

ಭಾಷೆಯ ಸಿದ್ಧಾಂತ:

ಲೋಝನೋವ್ ಪ್ರಕಾರ ಭಾಷಾ ತರಗತಿಯಲ್ಲಿನ ಬಹುಮುಖ್ಯ ಸಮಸ್ಯೆಯೆಂದರೆ ಪದಗಳನ್ನೂ ವಾಕ್ಯ ರಚನೆಗಳನ್ನೂ ನೆನಪಿನಲ್ಲಿಡುವುದು ಹಾಗೂ ಅದರ  ಸಮಗ್ರೀಕರಣ. ಕಲಿಯುತ್ತಿರುವ  ಭಾಷೆಯ ಪದ ಹಾಗೂ ವಿದ್ಯಾರ್ಥಿಯ ಮಾತೃಭಾಷೆಯ ಸಮಾನಾರ್ಥಕಗಳ ಜೋಡಿಗಳನ್ನು ನೆನಪು ಮಾಡಿಕೊಂಡರೆ ಸಂದರ್ಭಕ್ಕೆ ಒತ್ತುಕೊಡದೆ, ಶಬ್ಧಗಳನ್ನು ಕಲಿತಂತಾಗುತ್ತದೆ.
ಸಜೆಸ್ಟೋಪೀಡಿಯಾದ ಮೂಲಭೂತ ಅಂಶ ಸಲಹೆ ನೀಡುವುದು.  ಲೋಝೊನೋವ್ ಪ್ರಕಾರ ಇದು ಸಮ್ಮೋಹನ ಅಥವಾ ಮನಸ್ಸನ್ನು ನಿಯಂತ್ರಿಸುವ ಇತರ ತಂತ್ರಗಳಿಗಿಂತ ಭಿನ್ನವಾದುದು. ಏಕೆಂದರೆ ಅವುಗಳಲ್ಲಿ  ‘ಡಿ-ಸಜೆಸ್ಟಿವ್ ಮತ್ತು ಸಜೆಸ್ಟಿವ್’ ಸೆನ್ಸ್ ಇರುವುದಿಲ್ಲ ಎನ್ನುತ್ತಾನೆ. ಸಜೆಸ್ಟೋಪೀಡಿಯಾದಲ್ಲಿ  ಕೇಂದ್ರೀಕೃತ ಮನೋವೈಜ್ಞಾನಿಕ ವಿರಾಮ. ಸಲಹೆ ಮತ್ತು ನಿರ್-ಸಲಹೆ ಯನ್ನು  ಚಾಲನೆಗೆ ತರಲು ಹಲವು ಪ್ರಮುಖ ತಾತ್ವಿಕ ಅಂಶಗಳು ಇವೆ.

ಅಧಿಕಾರವಾಣಿ:

ಯಾರಾದರೂ ಅಧಿಕಾರಯುತವಾಗಿ ವಿಷಯಗಳನ್ನು ಹೇಳಿದರೆ ಆಗ ಜನರು ಹೆಚ್ಚು ಚೆನ್ನಾಗಿ ಪ್ರಭಾವಿತರಾಗುತ್ತಾರೆ ಹಾಗೂ  ಚೆನ್ನಾಗಿ ನೆನಪಿನಲ್ಲಿಡುತ್ತಾರೆ. ‘ಈಗ ನಾನು ಈ ಕ್ರಮದಲ್ಲಿ ಕಲಿಯುತ್ತಿದ್ದೇನೆ ಹೀಗಾಗಿ ನನಗೆ ಇದು ಬಾಯಿಪಾಠವಾಗಿತ್ತದೆ. ನಂತರ ನಾನು ಅದನ್ನು ಬಳಸಬಲ್ಲೆ.’  ಎಂಬ ಪೂರ್ವಾಗ್ರಹದಲ್ಲಿ ಕಲಿತುಬಿಡುತ್ತಾನೆ.
ನಾವು ಮಕ್ಕಳಾಗಿದ್ದಾಗ  ಬಳಸಿದ್ದ ಕಲಿಯುವ ಸಾಮಥ್ರ್ಯಗಳನ್ನು ಈಗ  ಬದಿಗೊತ್ತಿ ಕಲಿಕೆಯ ನಿಷೇಧಗಳನ್ನು ಹೇರಿಕೊಂಡಿರುತ್ತೇವೆ. ಕಲಿಯಲಾರೆನೋನೋ ಎಂಬ ಭಯ ನಮ್ಮಲ್ಲಿರುತ್ತದೆ. ಆದರೂ ಸಹ ಅಂತಹ ಸಾಮಥ್ರ್ಯಗಳು ಕಮರಿಹೋಗದೆ ನಮ್ಮಲ್ಲಿ ಸುಪ್ತವಾಗಿ ಇರುತ್ತವೆ. ಇದನ್ನು ಸಜೆಸ್ಟೋಪೀಡಿಯಾ ವಿಧಾನಗಳ ಮೂಲಕ ಮತ್ತೆ ಜಾಗೃತಗೊಳಿಸಾಬಹುದು ಎಂದು ಲೋಝನೋವ್ ಹೇಳುತ್ತಾನೆ.

ಸಿಲಬಸ್:

ಸಜೆಸ್ಟೋಪೀಡಿಯ  ಮುವತ್ತು ದಿನಗಳ ಕೋರ್ಸ್  ಆಗಿದ್ದು, ವಾರದಲ್ಲಿ ಆರು ದಿನಗಳು, ದಿನಕ್ಕೆ ನಾಲ್ಕು ಗಂಟೆಗಳಂತೆ  ಹತ್ತು ಯುನಿಟ್‍ಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಯುನಿಟ್‍ನಲ್ಲೂ ಪ್ರಮುಖವಾಗಿ ಸುಮಾರು 1200 ಪದಗಳ ಒಂದು ಸಂಭಾಷಣೆ ಇರುತ್ತದೆ. ಅದರ ಜೊತೆಗೆ ಶಬ್ದಗಳ ಪಟ್ಟಿ  ಹಾಗೂ ವ್ಯಾಕರಣ ವಿವರಣೆ.  ಪಠ್ಯದಲ್ಲಿ ಶಬ್ದಗಳು ಮತ್ತು ವ್ಯಾಕರಣವನ್ನು ಹಂತ ಹಂತವಾಗಿ ಕ್ಲಿಷ್ಟವಾಗುವಂತೆ ರೂಪಿಸಿರುತ್ತಾರೆ.  ತಾವು ಕಲಿಯುವ ಭಾಷೆಯ ಒಂದು ಹೊಸ ಹೆಸರನ್ನು ವಿದ್ಯಾರ್ಥಿಗಳಿಗೆ ಕೊಟ್ಟಿರುತ್ತಾರೆ, ಅದೇ ರೀತಿ ಅವರಿಗೆ ತಾವು ಕಲಿಯುವ ಸಂಸ್ಕೃತಿಯ ಒಂದು ಹೊಸ ಚರಿತ್ರೆಯನ್ನು ಕೊಟ್ಟಿರುತ್ತಾರೆ. ಕೋರ್ಸ್ ಮುಗಿಯುವ ವರೆಗೂ ಇದೇ ಹೆಸರಿನಲ್ಲೇ ಅವರು ಚಲಾವಣೆಯಾಗಬೇಕು.

ಇದರ ಬಗ್ಗೆ ಟೀಕೆ ಹಾಗೂ ಇದರ ಮಿತಿಗಳು :  ಸಜೆಸ್ಟೋಪೀಡಿಯಾದಲ್ಲಿರುವ ಎಲ್ಲಾ ತಂತ್ರಗಳೂ ಕಲಿಯುವವರಿಗೆ ಹಿತವಾಗಿಯೇ ಇರುತ್ತದೆ ಎಂದು ಹೇಗೆ ಹೇಳಲು ಸಾಧ್ಯ? ಕಲಿಯುವಾಗ  ಸಂಗೀತದ ಶಬ್ಧ  ಕೆಲವರಿಗೆ ಕಿರಿಕಿರಿ ಎನಿಸಬಹುದು. ಉದ್ದುದ್ದದ ಸಂಭಾಷಣೆ ಗಳು   ಕಲಿಯುವವರಲ್ಲಿ ಪ್ರೇರಣೆ ಹಾಗೂ ಆತ್ಮ ವಿಶ್ವಾಸ ಮೂಡಿಸುತ್ತದೆ ಎಂದು ಹೇಳಿಕೊಳ್ಳುತ್ತದೆ  ಆದರೆ ಉದ್ದುದ್ದದ ಸಂಭಾಷಣೆ ಗಳು ಕಲಿಯುವವರಲ್ಲಿ ಬೋರು ಹೊಡೆಸಬಹುದು, ಆತ್ಮ ಸ್ಥೈರ್ಯ ಕೆಡಿಸಬಹುದು. ಈ ವಿಧಾನಕ್ಕೆ ಸ್ಪಷ್ಟವಾದ ಭಾಷಾ ಸಿದ್ಧಾಂತವೇ ಇಲ್ಲದಿರುವುದರಿಂದ ಭಾಷೆ ಹಾಗೂ ಭಾಷಾ ಕಲಿಕೆಯ ನಡುವಿನ ಸಂಬಂಧವನ್ನು  ವ್ಯವಸ್ಥಿತವಾಗಿ ಹೆಣೆದಿಲ್ಲ.  ವ್ಯಾಕರಣದ ನಿಯಮಗಳನ್ನು  ಅಂತರ್ಗತ ಮಾಡಿಕೊಂಡರೆ ಭಾಷಾ ಬಳಕೆ ಹೆಚ್ಚು ಅಧಿಕಾರಯುತವಾಗಿ ಕಲಿಯಬಹುದೆಂಬುದನ್ನು ಸಜೆಸ್ಟೋಪೀಡಿಯ ಸಂಪೂರ್ಣವಾಗಿ ಕೈಬಿಟ್ಟಿದೆ.   ಇತರ ಮಿತಿಗಳೆಂದರೆ, ತುಂಬಿದ ತರಗತಿಗಳಿರುವ ಭಾರತದಂತಹ   ದೇಶಗಳಲ್ಲಿ  ಸುಖಾಸೀನಗಳು, ಮತ್ತು ನಿರ್ವಹಣೆಯ ಸಮಸ್ಯೆಗಳು ಎದುರಾಗುತ್ತವೆ.  

ಹಾಗೆಂದ ಮಾತ್ರಕ್ಕೆ ಸಜೆಸ್ಟೋಪೀಡಿಯವನ್ನು ಸಂಪೂರ್ಣವಾಗಿ ತಳ್ಳಿಹಾಕಬೇಕೆಂದು  ಹೇಳುತ್ತಿಲ್ಲ,  ಹಿತವಾದ ಶಾಸ್ತ್ರೀಯ ಸಂಗೀತದ ಹಿನ್ನೆಲೆಯಾಗಲೀ, ಪಠ್ಯಗಳನ್ನು ಅಭಿನಯಿಸಿ ಹೇಳುವುದಾಗಲೀ,  ಚಾರ್ಟ್ ತಗುಲಿಹಾಕಿರುವುದರಿಂದ  ಪರೋಕ್ಷವಾಗಿ ಕಲಿಯುವುದಾಗಲೀ, ಹೆಚ್ಚು ಪ್ರಭಾವಶಾಲಿಯಾಗುವುದರಲ್ಲಿ ಸಂಶಯವಿಲ್ಲ.  ನಮ್ಮ ವಾತಾವರಣ ಹಾಗೂ ಲಭ್ಯ ಸಾಮಗ್ರಿಗಳ ಮಿತಿಯಲ್ಲಿ ಈ ತಂತ್ರವನ್ನು ಎಷ್ಟು ಚೆನ್ನಾಗಿ ಅಳವಡಿಸಿಕೊಳ್ಳಬಹುದೆಂದು ಪ್ರಯೋಗಿಸಿ ಉತ್ತಮ ಫಲಿತಾಂಶ ದೊರೆತರೆ ಕಲಿಕೆಯ ವಿಧಾನಗಳಲ್ಲಿ ಒಂದಾಗಿ ಉಳಿಸಿಕೊಳ್ಳಬಹುದು.

ಸಂಕ್ಷಿಪ್ತವಾಗಿ ಹೇಳುವುದಾದರೆ..

ಹೆಸರು ನಿಷ್ಪತ್ತಿ: ಸಜೆಸ್ಚನ್+ ಪೆಡಗಾಜಿ = ಸಜೆಸ್ಟೋಪೀಡಿಯ
ಉದ್ದೇಶ:
ಅನ್ಯಭಾಷೆ ಕಲಿಕೆಯ ವೇಗವರ್ಧನೆ ಹಾಗೂ ಕಲಿಯುವವರ ಮನೋವೈಜ್ಞಾನಿಕ ಒಡ್ಡುಗಳ ನಿವಾರಣೆ
ವಿದ್ಯಾರ್ಥಿ ಪಾತ್ರಗಳು:
ಈ ವಿಧಾನದಲ್ಲಿ ಮತ್ತು ಗುರುವಿನಲ್ಲಿ ನಂಬಿಕೆ ಬೇಕು. ಮನಸ್ಸಿನ ಪ್ರತಿರೋಧಗಳನ್ನು ತೊರೆದು ಸ್ವಪ್ರೇರಿತವಾಗಿ  ನಿರ್ಬಿಢೆಯಿಂದಿರಬೇಕು.
ಕಲಿಕಾ ಪರಿಸರ :                  ಸುಖಾಸೀನಗಳು, ಮುದ ನೀಡುವ (ಸಂಗೀತಮಯ) ವಾತಾವರಣ, ಭಿತ್ತಿಪತ್ರ ಪ್ರದರ್ಶನ


ಕಲಿಸುವ ಕ್ರಮ:

ಪಠ್ಯದ ಕರಪತ್ರ. ಮಾತೃ ಭಾಷೆಯಲ್ಲಿ ಅನುವಾದ, ಆಟ, ಹಾಡು, ಪ್ರಶ್ನೋತ್ತರ, ಪಠ್ಯದ ನಾಟಕೀಕರಣ. ಮಲಗುವ ಮುಂಚೆ - ಎದ್ದ ನಂತರ ಓದುವಿಕೆ. (ಹೋಂವರ್ಕ್)
ವಿದ್ಯಾರ್ಥಿ ಭಾವನೆಗ ಬಗ್ಗೆ ಧೋರಣೆ:
ನಿರಾಳವಾಗಿ, ಆತ್ಮವಿಶ್ವಾಸದಿಂದಿರಬೇಕು, ನೇರವಾದ ನೇರವಲ್ಲದ ಸಲಹೆಗಳೊಂದಿಗೆ ಆತ್ಮ ವಿಶ್ವಾಸ ಬೆಳೆಸಬೇಕು. ಮನೋವೈಜ್ಞಾನಿಕ ಒಡ್ದುಗಳನ್ನು  ತೊರೆದುಹಾಕಲು ಡಿ-ಸಜೆಸ್ಚನ್ ಮಾಡಬೇಕು.
ಭಾಷೆಯ ನಾಲ್ಕು ಕೌಶಲ್ಯಗಳು:   ಶಬ್ಧಬಂಢಾರ, ಕನಿಷ್ಟ ವ್ಯಾಕರಣ, ಸಂವಹನ ಭಾಷೆ.  ಕನಿಷ್ಟ ಓದು, ಬರಹಗಳನ್ನು ಕಲಿಸುತ್ತದೆ.


ತಪ್ಪುಗಳು

ಪ್ರಾರಂಭಿಕ ಹಂತದಲ್ಲಿ ತಪ್ಪುಗಳನ್ನು ತಿದ್ದುವುದಿಲ್ಲ. ಉದ್ದೇಶಿತ ಸಂವಹನ ನಡೆದರೆ ಸಾಕು. ತಪ್ಪುಗಳನ್ನು ನಂತರ ಕಾಲ್ಪನಿಕ ಹೆಸರುಗಳನ್ನು ಬಳಸಿ ತಿದ್ದುತ್ತಾರೆ.
ಸಜೆಸ್ಟೋಪೀಡಿಯಾ ಬಳಸುವ ತಂತ್ರಗಳು:
ಭಿತ್ತಿ ಪತ್ರಗಳಿಂದ ಪರಿಧಿ-ಕಲಿಕೆ; ದೃಶ್ಯ ಮಾಧ್ಯಮ: ಅಭಿನಯ ತಂತ್ರ; ಯಶಸ್ಸು ಖಂಡಿತವೆಂಬ ಸಲಹೆ; ಸಂಗೀತ ಆಲಿಸುವಿಕೆಯಿಂದ ಮನೋಲ್ಲಾಸ ಮತ್ತು ಏಕಾಗ್ರತೆ.

ಪ್ಲಸೀಬೋ

ರೋಗಿಯ ಮನಸ್ಸನ್ನು ಸಮಾಧಾನ ಪಡಿಸುವುದಕ್ಕೆ ಕೊಡುವ ಆದರೆ ದೈಹಿಕವಾಗಿ ಪರಿಣಾಮವನ್ನು ಬೀರದ ಕಪಟ ಔಷಧಗಳನ್ನು ಪ್ಲಸೀಬೋ ಎನ್ನುತ್ತಾರೆ.
ಕೆಲವೊಮ್ಮೆ ರೊಗಿಗೆ ವೈದ್ಯರ ಮೇಲೆ/ ಔಷಧದದ ಮೇಲೆ ಅಪಾರವಾದ ನಂಬಿಕೆ ಇದ್ದರೆ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿ ಬಿಡುತ್ತದೆ. ಇದನ್ನು ಪ್ಲಸೀಬೋ ಪರಿಣಾಮ (ಎಫೆಕ್ಟ್) ಎನ್ನುತ್ತಾರೆ.

ಇತ್ತೀಚಿನ ದಿನಗಳಲ್ಲಿ ಹುಟ್ಟಿಕೊಂಡಿರುವ ಅನೇಕ ಅಸಾಂಪ್ರದಾಯಿಕ ವೈದ್ಯಕೀಯ ಚಿಕಿತ್ಸೆಗಳು ಬಹುಷಃ ಈ ಮನೋವೈಜ್ಞಾನಿಕ ಕಾರಣಗಳಿಗೆ ಯಶಸ್ವೀ ಚಿಕಿತ್ಸೆ ಎನಿಸಿಕೊಂಡಿವೆ.  ನಮ್ಮ ಬಹುತೇಕ ಖಾಯಿಲೆಗಳು ಸೈಕೋ ಸೊಮ್ಯಾಟಿಕ್ ( ಮನಃಶ್ಯಾರೀರಿಕ)ಆದುದು.  ಹೀಗಾಗಿ ನಿಜ ವೈದ್ಯದ ಕೆಮಿಸ್ಟ್ರೀ ಇಲ್ಲದೆ ಪ್ಲಸೀಬೋ ಪರಿಣಾಮದಲ್ಲೇ ಸರಿಹೋಗಬಹುದು.

ಈಗ ಇಂಜಕ್ಷನ್ ಕೊಟ್ಟಿದ್ದೇನೆ ಇನ್ನು ಅರ್ಧ ಗಂಟೆಯಲ್ಲಿ ನಿಮ್ಮ ಖಾಯಿಲೆ ನಿಯಂತ್ರಣಕ್ಕೆ ಬರುತ್ತದೆ. ನಾಳೆ ಬೆಳಿಗ್ಗೆ ಜಾಗಿಂಗ್ ಹೋಗಬಹುದು. ಎಂದು ಹೇಳುವ ಅಧಿಕಾರ ವಾಣಿಯಲ್ಲಿ, ಇವರು ನಂಬಲರ್ಹ ವೈದ್ಯ, ನನಗೆ ನೀಡಿರುವುದು ಪರಿಣಾಮಕಾರಿ ಔಷಧಿ ಎಂಬ ಗುಣಾತ್ಮಕ ಭಾವನೆಗಲಿಂದಲೇ ಆತನಿಗೆ ಚೇತರಿಕೆ ಆಗಿಹೋಗುವ ಸಾಧ್ಯತೆ ಇದೆ.  ದೈಹಿಕ ಸ್ವಾಸ್ಥ್ಯದಲ್ಲಿ ಮೆದುಳಿನ ಪಾತ್ರ ಪ್ರಮುಖವಾದುದೆಂಬುದಕ್ಕೆ ಇದೇ ಉದಾಹರಣೆ.

ಇದಕ್ಕೆ ವಿರುದ್ಧವಾಗಿ ಎಷ್ಟೋ ಬಾರಿ, ರೋಗಿಗೆ ಖಾಯಿಲೆ ವಾಸಿಯಾಗುವ ಎಲ್ಲ ಸಾಧ್ಯತೆ ಇದ್ದೂ, ಅತ್ಯಂತ ಪರಿಣಾಮಕಾರಿ ಔಷಧಿ ಕೊಟ್ಟರೂ ರೋಗಿಯ ಮನಸ್ಸಿನಲ್ಲಿ ಈ ಯಾವುದರ ಬಗ್ಗೆಯೂ ಭರವಸೆ ಇಲ್ಲದಿದ್ದರೆ ಅವನ ದೇಹ ಪ್ರತಿಕ್ರಿಯಿಸದೆ ಚಿಕಿತ್ಸೆ ವಿಫಲವಾಗಬಹುದು.  ಇದೇ ರೀತಿ ಪ್ಲಸೀಬೋ ಚಿಕಿತ್ಸೆ ಬಗ್ಗೆ ವಿಶ್ವಾಸ ವಿಲ್ಲದಿದ್ದರೆ ದುಷ್ಪರಿಣಾಮ ಬೀರಬಹುದು ಇದನ್ನು ನೊಸೀಬೋ ಪರಿಣಾಮ ಎನ್ನುತ್ತಾರೆ.

ಕೊಡುಗೆ : ಡಾ|| ಉದಯರವಿ ಶಾಸ್ತ್ರೀ

ಕೊನೆಯ ಮಾರ್ಪಾಟು : 2/15/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate