ಮಳೆಗಾಲದ ಮದುಮಗಳು...ಅಬ್ಬೆ
ಕಾವೇರಿ... ಕೊಡಗಿನ ಕಾವೇರಿ..... ಕಾವೇರಿ ನೀ ಹರಿಯುವ ನದಿಯಲ್ಲ.. ಶೃಂಗಾರ ಲಹರಿ... ಎಂಬ ಕವಿಯ ಸಾಲುಗಳು ಅರ್ಥಪೂರ್ಣ. ಕರ್ನಾಟಕದ ಜೀವನದಿ ಕಾವೇರಿ ತಲಕಾವೇರಿಯಲ್ಲಿ ಹುಟ್ಟಿ, ಬಂಗಾಳಕೊಲ್ಲಿಯನ್ನು ಸೇರುವ ತನಕ ಕಾವೇರಿಯ ಚೆಲುವು ಶೃಂಗಾರ ಲಹರಿಯೇ. ಅಬ್ಬಿಯ ಅಂದಕ್ಕೆ, ಬೃಂದಾವನದ ಚೆಲುವಿಗೆ, ಶಿವನಸಮುದ್ರದ ಭರಚುಕ್ಕಿ, ಗಗನಚುಕ್ಕಿಯ ಸಂಭ್ರಮಕ್ಕೆ, ಹೊಗೆನಕಲ್ ಜಲಪಾತಕ್ಕೆ ಕಾರಣವಾಗುವ ಕಾವೇರಿಯ ಈ ಓಟದ ಬಗ್ಗೆ ಉದ್ಗ್ರಂಥವನ್ನೇ ಬರೆಯಬಹುದು.
ಕಾವೇರಿ ಹುಟ್ಟುವುದು ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಬ್ರಹ್ಮಗಿರಿ ಬೆಟ್ಟಶ್ರೇಣಿಯಲ್ಲಿ. ಈ ಪವಿತ್ರ ಪುಣ್ಯಕ್ಷೇತ್ರಕ್ಕೆ ತಲಕಾವೇರಿ ಎಂಬ ನಾಮಧೇಯ. ಇಲ್ಲಿ ಅಗಸ್ತ್ಯೇಶ್ವರ ದೇವಾಲಯ,ಗಣಪತಿ ದೇವಾಲಯ ಇದೆ. ಅಗಸ್ತ್ಯ ಮಹಾಮುನಿಗಳು ಈ ಲಿಂಗವನ್ನು ಸ್ಥಾಪಿಸಿದರು ಎಂಬುದು ಪ್ರತೀತಿ. ತಲಕಾವೇರಿಯ ಈ ದೇಗುಲಗಳ ತಗ್ಗಿನಲ್ಲಿ ಕಾವೇರಿ ಉಗಮವಾಗುವ ಚಚ್ಚೌಕದ ಚಿಕ್ಕ ಕೊಳವಿದೆ. ಅದರ ಮುಂದೆ ಸ್ನಾನಘಟ್ಟ. ಇಲ್ಲಿಯೇ ಕಾವೇರಿ ಹುಟ್ಟುವುದು. ಈ ಸ್ಥಳಕ್ಕೆ ಕುಂಡಿಗೆ ಎನ್ನುತ್ತಾರೆ. ತುಲಾಸಂಕ್ರಮಣದ ನಿಶ್ಚಿತವಾದ ದಿನ ಇಲ್ಲಿ ಕಾವೇರಿ ತೀರ್ಥೋದ್ಭವವಾಗುತ್ತದೆ. ಪ್ರತಿ ವರ್ಷ ತುಲಾ ಮಾಸದ ಸಂಕ್ರಮಣದಿಂದ ವೃಶ್ಚಿಕ ಮಾಸದ ಸಂಕ್ರಮದವರೆಗೆ ಇಲ್ಲಿ ಕಾವೇರಿ ಜಾತ್ರೆ ನಡೆಯುತ್ತದೆ. ತಮಿಳುನಾಡು, ಕೇರಳ, ಪಾಂಡಿಚೇರಿ, ಕರ್ನಾಟಕದ ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳಿಂದ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ. ಕೊಳದಲ್ಲಿ ಮಿಂದು ಕುಂಡಿಗೆಯ ತೀರ್ಥ ಕುಡಿದು, ಪ್ಲಾಸ್ಟಿಕ್ ಕ್ಯಾನ್‌ಗಳಲ್ಲಿ ತುಂಬಿಕೊಂಡು ಮನೆಗೆ ಹೋಗುತ್ತಾರೆ.
ಇದು ಪೌರಾಣಿಕ ಸ್ಥಳ, ಜೀವ ನದಿ ಹುಟ್ಟುವ ಜನ್ಮಸ್ಥಳ ಹೀಗಾಗಿ ಇದು ಭಕ್ತರಿಗೆ ಪುಣ್ಯ ಕ್ಷೇತ್ರ. ಪ್ರವಾಸಿಗರಿಗೆ ರಮ್ಯಕ್ಷೇತ್ರ. ಶೀತ ಮಾರುತಗಳಿಂದ, ಶೀತಹವೆಯಿಂದ ಕೂಡಿರುವ ಈ ಸ್ಥಳ ರಮಣೀಯ. ಬ್ರಹ್ಮಗಿರಿಯ ಶಿಖರವೇರಿದಾಗ ಕಾಣುವ ಆಕಾಶಶುಭ್ರವಾಗಿರುವ ಬೆಟ್ಟದಪುರದ ನೋಟ ಮನೋಹರ. ಇಲ್ಲಿ ನಿಂತು ನೋಡಿದರೆ, ಹಾವಿನಂತೆ ಹರಿಯುವ ನದಿಗಳನ್ನೂ, ದೂರದಲ್ಲಿ ಅರಬ್ಬಿ ಸಮುದ್ರದ ರುದ್ರರಮಣೀಯ ಪ್ರಕೃತಿ ಸಿರಿಯನ್ನೂ ಕಣ್ತುಂಬಿಕೊಳ್ಳಬಹುದು. ಹತ್ತಿರದಲ್ಲೇ ಇರುವ ಅಬ್ಬಿ ಜಲಪಾತಕ್ಕೆ ಹೋಗಿ ಆನಂದಿಸಬಹುದು.
ಅಬ್ಬೆ ಜಲಪಾತ :ಕಾವೇರಿ ಜಲಾನಯನ ಪ್ರದೇಶಗಳಲ್ಲಿ, ಭಾಗಮಂಡಲದ ಸುತ್ತ ಮುತ್ತ ಮಳೆ ಸುರಿಯುತ್ತಿದ್ದಾಗ ಕನ್ನಡ ನಾಡಿನ ಜೀವನದಿ ಕಾವೇರಿ ಉಕ್ಕಿ ಹರಿಯುತ್ತದೆ. ಕೊಡಗಿನ ರಮಣೀಯ ಹಸಿರು ರಾಶಿಯ ಮೇಲೆ ಮಳೆಯ ಹನಿಗಳು ಬೀಳುತ್ತಿದ್ದಂತೆಯೇ ಇಲ್ಲಿನ ವಿಖ್ಯಾತ ಜಲಪಾತ ‘ಅಬ್ಬೆ’ ಮೈದುಂಬಿ ಧುಮ್ಮುಕ್ಕುತ್ತದೆ. ಹಾಲು ನೊರೆಯಂತೆ ಆಕರ್ಷಕವಾಗಿ ಧುಮ್ಮಿಕ್ಕುವ ಅಬ್ಬಿ, ತನ್ನ ಪೂರ್ಣ ಸೊಬಗನ್ನು ಪಡೆವುದೇ ಮಳೆಗಾಲದಲ್ಲಿ. ಹೀಗಾಗೆ ಅಬ್ಬಿಗೆ ಮಳೆಗಾಲದ ಮದುಮಗಳು ಎಂಬ ಹೆಸರೂ ಇದೆ.
ರಭಸದಿಂದ ಭೋರ್ಗರೆವ ಅಬ್ಬಿಯ ಆರ್ಭಟ ಮಳೆಗಾಲದಲ್ಲಿ ಅರ್ಧ ಕಿಲೋ ಮೀಟರ್ ದೂರ ಕೇಳುತ್ತದೆ. ಬಂಡೆಗಳ ಮೇಲಿಂದ ಧುಮ್ಮಿಕ್ಕುವ ಅಬ್ಬಿಯ ಜಲಪಾತ ಹಾಲು ನೊರೆಯಂತಹ ರಮಣೀಯ ದೃಶ್ಯದೊಂದಿಗೆ ಮತ್ತಷ್ಟು ಕಳೆಗಟ್ಟುತ್ತದೆ. ನೋಡುಗರಿಗೆ ಅಮಿತಾನಂದವನ್ನು ನೀಡುತ್ತದೆ.
ಇಲ್ಲಿರುವ ತೂಗುಯ್ಯಾಲೆಯ ಮೇಲೆ ಮಳೆಯಲ್ಲಿ ತೋಯುತ್ತಾ, ಅತ್ತಿಂದಿತ್ತ, ಇತ್ತಿಂದತ್ತ ಓಲಾಡುತ್ತಾ ಸಾಗಿದರೆ, ಧುಮ್ಮಿಕ್ಕುವ ಭೋರ್ಗರೆಯುತ್ತಾ ಧುಮ್ಮಿಕ್ಕುವ ಅಬ್ಬಿಯ ಜಲಹನಿಗಳೂ ನಿಮಗೆ ಪನ್ನೀರ ಎರಚುತ್ತಾ ಸ್ವಾಗತ ಕೋರುತ್ತವೆ. ಬೇಸಿಗೆಯಲ್ಲಿ ಒಣಗಿ ತನ್ನ ಸೊಬಗನ್ನು ಕಳೆದುಕೊಳ್ಳುವ ಮನೋಹರವಾದ ಅಬ್ಬಿ ಜಲಪಾತದ ಸೊಬಗನ್ನು ಸವಿಯಲು ಮಳೆಗಾಲವೇ ಸೂಕ್ತ.
ಪ್ರವಾಸ ಮಾರ್ಗದರ್ಶಿ : ಬೆಂಗಳೂರಿನಿಂದ ೨೫೨ ಕಿಲೋಮೀಟರ್ ದೂರದಲ್ಲಿರುವ ಮಡಿಕೇರಿಗೆ ರಾಜ್ಯದ ಎಲ್ಲ ಪ್ರಮುಖ ಪಟ್ಟಣಗಳಿಂದ ನೇರ ಬಸ್ ಸೌಲಭ್ಯ ಇದೆ. ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಕೇವಲ 10 ಕಿಲೋ ಮೀಟರ್. ಮಡಿಕೇರಿಯಲ್ಲಿ ಮೊದಲು ಮಡಿಕೇರಿ ಕೋಟೆ ನೋಡಿ, ಅಲ್ಲಿಂದ ಅಬ್ಬಿಗೆ ಬರಬಹುದು. ಮಡಿಕೇರಿಯಿಂದ ಭಾಗಮಂಡಲಕ್ಕೆ ೩೯ ಕಿ.ಮೀಟರ್. ಕಾವೇರಿ, ಕನ್ನಿಕ ಹಾಗೂ ಸುಜ್ಯೋತಿ ನದಿಗಳು ಸೇರುವ ಈ ಸ್ಥಳದಲ್ಲಿ ಸುಂದರ ದೇವಾಲಯವಿದೆ. ಹತ್ತಿರದಲ್ಲೇ ಕನ್ನಡ ನಾಡಿನ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯೂ ಇದೆ. (ಮಡಿಕೇರಿಯಿಂದ ತಲಕಾವೇರಿಗೆ ೪೪ ಕಿ.ಮೀಟರ್). ಮಡಿಕೇರಿಯಿಂದ ನಿಸರ್ಗಧಾಮಕ್ಕೆ ೨೫ ಕಿ.ಮೀ ಹಾಗೂ ಹಾರಂಗಿ ಜಲಾಶಯಕ್ಕೆ ೩೬ ಕಿ.ಮೀ. ಮಾತ್ರ.
ಪ್ರವಾಸ ಮಾಹಿತಿ: ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in ಸಂಪರ್ಕಿಸಬಹುದು.
ಕವಿ ನಿಸಾರ್ ಅಹ್ಮದ್, ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾದ ಜೋಗವನ್ನು ತಮ್ಮ ಕಾವ್ಯದಲ್ಲಿ ಸುಂದರವಾಗಿ ವರ್ಣಿಸಿದ್ದಾರೆ. ನಿತ್ಯೋತ್ಸವ ಧ್ವನಿಸುರುಳಿಯ ‘ಜೋಗದ ಸಿರಿ ಬೆಳಕಿನಲ್ಲಿ ತುಂಗೆಯ ತೆನೆ ಬಳುಕಿನಲ್ಲಿ, ಸಹ್ಯಾದ್ರಿಯ ಲೋಹದದಿರ ಉತ್ತುಂಗದ ನಿಲುಕಿನಲ್ಲಿ...’ ಗೀತೆ ಕರುನಾಡ ಹೆಮ್ಮೆಯ ಜೋಗದ ರಮಣೀಯತೆಯನ್ನು ವೈಭವವನ್ನು,ಸೌಂದರ್ಯವನ್ನು ಕನ್ನಡಿಗರ ಹೃನ್ಮನಗಳಲ್ಲಿ ಮೂಡಿಸುತ್ತದೆ.
ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ ಸಾಯದ್ರಲ್ಲಿ ಒಮ್ಮೆ ನೋಡು ಜೋಗದ ಗುಂಡಿ ಎಂಬ ನಟ ಗಾಯಕ ಡಾ. ರಾಜ್ ಹಾಡಿದ ಗೀತೆ ಪ್ರತಿಯೊಬ್ಬ ಕನ್ನಡಿಗನೂ ಜೋಗವನ್ನು ತಪ್ಪದೆ ನೋಡಲೇಬೇಕು ಎಂದು ತಾಕೀತು ಮಾಡುತ್ತದೆ. ಹೌದು ಜೋಗದಲ್ಲೇನು ಅಂಥ ವಿಶೇಷ?
ಜೋಗ ಜಲಪಾತ ಪಶ್ಚಿಮಘಟ್ಟದ ರುದ್ರ ರಮಣೀಯ ಪ್ರಕೃತಿಯ ಸಿರಿಯನ್ನು ಮತ್ತಷ್ಟು ಶ್ರೀಮಂತಗೊಳಿಸಿರುವ ರಮ್ಯತಾಣ. ೭೩೦ ಮೀಟರ್ ಎತ್ತರದ ಅಂಬುತೀರ್ಥದಲ್ಲಿ ಹುಟ್ಟಿ ಮೈದುಂಬಿ ಹರಿವ ಕನ್ನಡ ನಾಡ ಭಾಗೀರಥಿ ಎಂದೇ ಖ್ಯಾತವಾದ ಶರಾವತಿ ನದಿ ಗಿರಿಶಿಖರಗಳ ನಡುವೆ ಹೊಸನಗರ ಮೂಲಕ ಸಾಗಿ ೮೦ನೇ ಕಿ.ಮೀ. ತಿರುವಿನಲ್ಲಿ ೨೯೨ ಮೀಟರ್ ಪ್ರಪಾತಕ್ಕೆ ಧುಮ್ಮಿಕ್ಕುವ ನೋಟ ನಯನ ಮನೋಹರ. ರಾಜ ಗಾಂಭೀರ್ಯದಿಂದ ಪ್ರಪಾತಕ್ಕೆ ಜಿಗಿಯುವ ರಾಜ, ಒಮ್ಮೆ ನೋಡಿದರೆ ಸಾಲದು ಎಂಬ ಭಾವನೆ ಮೂಡಿಸುತ್ತ ಭೋರ್ಗರೆದು ಧುಮ್ಮಿಕ್ಕುವ ರೋರರ್, ಬಳ್ಳಿಯಂತೆ ಬಳುಕುತ್ತಾ ತನ್ನ ಚೆಲುವಿಂದ ಆಕರ್ಷಿಸುವ ರಾಣಿ, ಸ್ಪುಟ್ನಿಕ್‌ನಂತೆ ಶರವೇಗದಲ್ಲಿ ಧರೆಮುಟ್ಟುವ ರಾಕೆಟ್ ಎಂಬ ನಾಲ್ಕು ಕವಲುಗಳ ಸೌಂದರ್ಯ ವರ್ಣನಾತೀತ. ಹೀಗಾಗೇ ಜೋಗ ಜಲಪಾತಗಳ ರಾಜ. ಈ ಸುಂದರ ತಾಣದಲ್ಲಿ ಪ್ರತಿವರ್ಷ ಜೂನ್ ತಿಂಗಳಿನಿಂದ ಅಕ್ಟೋಬರ್‌ವರೆಗೆ ೩೦೦೦ ಮಿ.ಮೀಟರ್‌ನಷ್ಟು ಮಳೆ ಆಗುತ್ತದೆ. ಯಥೇಚ್ಛವಾದ ನೀರಿನ ಹರಿವಿನಿಂದ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ಮಳೆಗಾಲದಲ್ಲಿ ಧುಮ್ಮಿಕ್ಕುವ ಶರಾವತಿಯ ಮನಮೋಹಕ ದೃಶ್ಯವನ್ನು ನೋಡುವುದೇ ಒಂದು ಸೊಬಗು. ಸುರಿಯುವ ಮಳೆಯ ನಡುವೆ ಕೊಡೆ ಹಿಡಿದು ಜೋಗದ ರುದ್ರ ನರ್ತನ ನೋಡುವಾಗ ಸಿಗುವ ಅಮಿತಾನಂದ ಊಹಿಸಲಸಾಧ್ಯ. ವರ್ಣಿಸಲಸದಳ.
ವಿಶ್ವೇಶ್ವರಯ್ಯನವರ ಕೊಡುಗೆ: ಒಂದು ಕಾಲದಲ್ಲಿ ಕಾಡಾನೆಗಳಿಂದ ಕೂಡಿ ಕಾಲಿಡಲೂ ಜನ ಹೆದರುತ್ತಿದ್ದ ದುರ್ಗಮ ಅರಣ್ಯ ಇಂದು ಲಕ್ಷಾಂತರ ಪ್ರವಾಸಿಗರನ್ನು ಕೈಬೀಸಿ ಕರೆವ ವಿಶ್ವಖ್ಯಾತ ಜೋಗವಾಗಲು ಸರ್.ಎಂ. ವಿಶ್ವೇಶ್ವರಯ್ಯನವರೇ ಕಾರಣ.
ಈ ಪ್ರದೇಶಕ್ಕೆ ಒಮ್ಮೆ ಭೇಟಿಕೊಟ್ಟ ಸರ್.ಎಂ.ವಿ. ‘ಅಯ್ಯೋ ಎಷ್ಟೊಂದು ವ್ಯರ್ಥ, ತುಂಬಲಾರದ ನಷ್ಟ ’ ಎಂದು ಉದ್ಗರಿಸಿ, ವ್ಯಥೆಪಟ್ಟರು. ಇಂಥ ಸೌಂದರ್ಯವನ್ನು ಆಸ್ವಾದಿಸದೆ ವ್ಯಥೆ ಪಟ್ಟ ಸರ್.ಎಂ.ವಿ. ಯತ್ತ ಜೊತೆಯಲಿದ್ದವರು ಕಣ್ಣು ನೆಟ್ಟರು. ಆಗ ಸರ್.ಎಂ.ವಿ. ಇಂತಹ ಪ್ರಕೃತಿ ದತ್ತ ಅಗಾಧ ಸಂಪತ್ತು ವ್ಯರ್ಥವಾಗಿ ಹಾಳಾಗುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಅಂಬುತೀರ್ಥದಿಂದ ಅರಬ್ಬಿಸಮುದ್ರದವರೆಗೆ ೧೩ ಜಲಪಾತಗಳನ್ನು ಸೃಷ್ಟಿಸುವ ಶರಾವತಿಗೆ ಅಡ್ಡಲಾಗಿ ಲಿಂಗನಮಕ್ಕಿ ಜಲಾಶಯ ನಿರ್ಮಿಸಲಾಗಿದ್ದು, ಇದು ಪ್ರಮುಖ ಜಲವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿದೆ. ಈ ಘಟಕ ಸ್ಥಾಪನೆಯಾದದ್ದು ೧೯೪೯ರಲ್ಲಿ. ೧೨೦೦ ಮೆಗಾ ವ್ಯಾಟ್ ಸಾಮರ್ಥ್ಯದ ಇದು ಅತಿ ಹೆಚ್ಚು ಜಲವಿದ್ಯುತ್ ಉತ್ಪಾದಿಸುವ ದೇಶದ ಸ್ಥಾವರಗಳಲ್ಲಿ ಒಂದೆನಿಸಿದೆ. ಶರಾವತಿಯ ನೀರನ್ನು ವಿದ್ಯುತ್ ಉತ್ಪಾದನೆಗೆ ಬಳಸಿಕೊಳ್ಳುತ್ತಿರುವ ಕಾರಣ, ಜಲಪಾತಕ್ಕೆ ಹರಿದು ಬರುವ ನೀರಿನ ಪ್ರಮಾಣ ಸಹಜವಾಗೇ ಕಡಿಮೆಯಾಗಿದೆ. ಕಳೆದ ವರ್ಷ ಶನಿವಾರ, ಭಾನುವಾರ ಹಾಗೂ ಸರ್ಕಾರಿ ರಜೆ ದಿನಗಳಲ್ಲಿ ಜಲಪಾತಕ್ಕೆ ೨೦೦ಕ್ಯೂಸೆಕ್ಸ್ ನೀರು ಬಿಡಬೇಕೆಂಬ ನಿರ್ಧಾರವಾಗಿತ್ತು. ಆದರೆ ಅದಿನ್ನೂ ಕಾರ್ಯಗತವಾಗಿಲ್ಲ. ಜೋಗ ಎಷ್ಟು ಖ್ಯಾತಿಯೋ ಇಲ್ಲಿನ ಪ್ರವಾಸಿ ಸೌಲಭ್ಯ ಅಷ್ಟೇ ಕುಖ್ಯಾತ. ಈ ರಮ್ಯತಾಣ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ ಎಂಬುದು ಪ್ರವಾಸಿಗರ ಅನಿಸಿಕೆ. ಆ ಆಪಾದನೆಗಳೂ ಸರ್ಕಾರದ ಕಿವಿಗೂ ಮುಟ್ಟಿವೆ. ಹೀಗಾಗಿ ವರ್ಷದ ೩೬೫ ದಿನವೂ ನೀರು ಧುಮ್ಮಿಕ್ಕುವಂತೆ ಮಾಡುವ ಮೂಲಕ ಜೋಗದ ಖ್ಯಾತಿಯನ್ನು ಉಳಿಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಕಳೆದ ೧೬ ವರ್ಷಗಳವರೆಗೆ ಲೋಕೋಪಯೋಗಿ ಹಾಗೂ ವಿದ್ಯುತ್ ಕಂಪನಿ ಆಡಳಿತಕ್ಕೊಳಪಟ್ಟಿದ್ದ ಜೋಗ ಈಗ ಜೋಗ ಅಭಿವೃದ್ಧಿಪ್ರಾಧಿಕಾರದ ವ್ಯಾಪ್ತಿಯಲ್ಲಿದೆ. ಜಲಪಾತದ ಅಕ್ಕಪಕ್ಕದಲ್ಲಿ ಕೆ.ಆರ್.ಎಸ್. ಪಕ್ಕದ ಬೃಂದಾವನ ಉದ್ಯಾನ ಮಾದರಿಯಲ್ಲಿ ಉದ್ಯಾನವನ, ದೋಣಿ ವಿಹಾರ ಕೇಂದ್ರ, ಈಜುಕೊಳ, ವನ್ಯಜೀವಿ ಧಾಮ, ಪಕ್ಷಿ ಧಾಮಗಳನ್ನು ನಿರ್ಮಿಸಿ ಪ್ರವಾಸಿಗರನ್ನು ಆಕರ್ಷಿಸುವ ಯೋಜನೆಯೂ ಇದೆ.ಅದು ಆದಷ್ಟು ಬೇಗ ಕೈಗೂಡಲಿ ಎಂದು ಹಾರೈಸೋಣ.
ಜೋಗಕ್ಕೆ ಹೋಗುವುದು ಹೇಗೆ ?
ರಾಜ್ಯದ ರಾಜಧಾನಿ ಬೆಂಗಳೂರಿನಿಂದ ಜೋಗ್ ಜಲಪಾತಕ್ಕೆ ೩೭೯ಕಿ.ಮೀ. ಶಿವಮೊಗ್ಗದಿಂದ ಜೋಗಕ್ಕೆ ಕೇವಲ ೧೦೫ ಕಿ.ಮೀ. ಸಾಗರದಿಂದ ೩೨ ಕಿ.ಮೀ. ರಾಜ ಪ್ರವಾಸೋದ್ಯಮ ಇಲಾಖೆಯ ಪ್ರವಾಸ ಸೇವೆಯೂ ಇದೆ. ಜೊತೆಗೆ ಕೆ.ಎಸ್.ಆರ್.ಟಿ.ಸಿ. ಬಸ್ ಸೌಕರ್ಯವೂ ಇಲ್ಲಿಗುಂಟು.
ಪ್ರವಾಸ ಮಾಹಿತಿ: ಹೆಚ್ಚಿನ ಮಾಹಿತಿಗೆ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ,ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.in ಸಂಪರ್ಕಿಸಬಹುದು.
ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿಗೆ ಕೇವಲ ೩೫ ಕಿಲೋ ಮೀಟರ್ ದೂರದಲ್ಲಿರುವ ಊರು ದೇವನಹಳ್ಳಿ. ದೇವನಹಳ್ಳಿ ಇತಿಹಾಸ ಪ್ರಸಿದ್ಧವಾದ ಸ್ಥಳ. ಆದರೂ ದೇವನಹಳ್ಳಿ ಜನಜನಿತವಾದದ್ದು ಕೇವಲ ಐದಾರು ವರ್ಷದಿಂದೀಚೆಗೆ. ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಸ್ತಾಪ ಬಂದಾಗ, ಮೈಸೂರು ರಸ್ತೆಯ ಕುಂಬಳಗೋಡು ಹಾಗೂ ದೇವನಹಳ್ಳಿಯ ಹೆಸರು ಕೇಳಿಬಂತು. ಕೊನೆಗೆ ಜಯಿಸಿದ್ದು ದೇವನಹಳ್ಳಿ.
ಇತಿಹಾಸ: ದೇವನಹಳ್ಳಿ ಒಂದು ಪುಟ್ಟ ಊರು. ಈ ಊರಿಗೆ ಖ್ಯಾತಿ ಬಂದಿದ್ದು ಮೈಸೂರು ಹುಲಿ ಟಿಪ್ಪೂ ಸುಲ್ತಾನರಿಂದ. ೧೭೫೦ರ ನವೆಂಬರ್ ೧೦ರಂದು ಟಿಪ್ಪು ಹುಟ್ಟಿದ್ದೇ ಈ ಪುಟ್ಟ ಊರಿನಲ್ಲಿ. ಚಿಕ್ಕದೊಂದು ಗುಡಿಸಿಲಿನಲ್ಲಿ. ದೇವನಹಳ್ಳಿ ಅತ್ಯಂತ ಪುರಾತನವಾದ ಊರು. ೧೪ನೇ ಶತಮಾನದಲ್ಲೇ ಇಲ್ಲಿ ಊರಿತ್ತು ಎಂದು ಶಾಸನಗಳು ಸಾರುತ್ತವೆ. ಈ ಊರಿನ ಹಿಂದಿನ ಹೆಸರು ದೇವನದೊಡ್ಡಿ. ಇಲ್ಲಿ ೫೦೦ ವರ್ಷಗಳಷ್ಟು ಪುರಾತನವಾದ ಭದ್ರವಾದ ಹಾಗೂ ಆಮೆಯಾಕಾರದ ಸುಂದರ ಕೋಟೆ ಇದೆ. ಕಂಚಿಯಿಂದ ವಲಸೆ ಬಂದ ಆವತಿ ರಾಜವಂಶದ ಮಲ್ಲಭೈರೇಗೌಡ ೧೫೦೧ರಲ್ಲಿ ಈ ಕೋಟೆ ಕಟ್ಟಿದ ಎನ್ನುತ್ತದೆ ಇತಿಹಾಸ.
೧೪ನೇ ಶತಮಾನದ ಆದಿಯಲ್ಲಿ ತಮಿಳುನಾಡಿನ ಕಾಂಚೀಪುರ ಸಮೀಪದ ಅತ್ತೂರಿನ ಪಾಳೆಯಗಾರರ ಉಪಟಳ ತಾಳಲಾರದೆ ಊರು ಬಿಟ್ಟು ಬಂದ ರಣಭೈರೇಗೌಡ ಹಾಗೂ ಆತನ ಆರು ಸಹೋದರರು ಸಮೃದ್ಧವಾಗಿ ನೀರಿದ್ದ ದೇವನಹಳ್ಳಿ ಸಮೀಪದ ಆವತಿ ಎಂಬ ಗ್ರಾಮದಲ್ಲಿ ನೆಲೆಸಿದರು. ಊರಿನಲ್ಲಿ ಉತ್ತಮ ಕೆಲಸ ಮಾಡಿ ಯಜಮಾನಿಕೆ ಮಾಡಿದರು. ೧೭೪೯ರಲ್ಲಿ ದಳವಾಯಿ ನಂಜರಾಜಯ್ಯ ಇದನ್ನು ವಶಪಡಿಸಿಕೊಂಡ. ಆಗ ಇದು ಮೈಸೂರು ಅರಸರ ಆಳ್ವಿಕೆಗೆ ಒಳಪಟ್ಟಿತು. ಹೈದರಾಲಿಯ ಶೌರ್ಯ ಪ್ರತಾಪಗಳು ಬೆಳಕಿಗೆ ಬಂದಿದ್ದೇ ಈ ಯುದ್ಧದಲ್ಲಿ. ಹೈದರಾಲಿ ರಾಜನಾದ ಬಳಿಕ ಈ ಕೋಟೆಯನು ದುರಸ್ತಿ ಮಾಡಿಸಿದ. ಹೈದರ್ ಈ ಕೋಟೆಯನ್ನು ಮತ್ತೆ ಕಟ್ಟಿಸಿದ ಎಂಬ ಉಲ್ಲೇಖಗಳೂ ಇವೆ. ನಂತರ ದೇವನಹಳ್ಳಿಗೆ ಟಿಪ್ಪು ಯೂಸಫಾಬಾದ್ ಎಂದೂ ಕರೆದ. ಆದರೆ ಆ ಹೆಸರು ಸ್ಥಿರವಾಗಲಿಲ್ಲ. ೧೭೯೧ರಲ್ಲಿ ಈ ಕೋಟೆ ಕಾರ್ನವಾಲೀಸ್ ಪಾಲಾಯಿತು.ಇಂದಿಗೂ ಇಲ್ಲಿ ಟಿಪ್ಪೂ ಹುಟ್ಟಿದ ಸ್ಥಳವನ್ನು ರಾಷ್ಟ್ರೀಯ ಸ್ಮಾರಕ ಮಾಡಲಾಗಿದೆ.
ಕೋಟೆ: ಕಲ್ಲು, ಇಟ್ಟಿಗೆ, ಗಾರೆಯಿಂದ ನಿರ್ಮಿಸಿರುವ ಈ ಕೋಟೆಯಲ್ಲಿ ೧೩ ವೃತ್ತಾಕಾರದ ಕೊತ್ತಲಗಳಿವೆ. ಎರಡು ಚೌಕಾಕಾರದ ಬತೇರಿಗಳಿವೆ. ಪ್ರತಿ ಹೊರಭಿತ್ತಿಯ ಒಳಗಡೆ ಚಿಕ್ಕ ಚಿಕ್ಕ ರಂದ್ರಗಳಿವೆ. ಈ ರಂಧ್ರಗಳು ಇಂಗ್ಲಿಷ್ ವಿ ಆಕಾರದಲ್ಲಿದ್ದು ದೂರದರ್ಶಕದಂತೆ ಕೆಲಸ ಮಾಡುತ್ತವೆ. ಈ ಕಿಂಡಿಗಳಲ್ಲಿ ನೋಡಿದರೆ ಕೋಟೆಯ ಹೊರಗಿನ ಚಿತ್ರಣ ಸಂಪೂರ್ಣ ಕಾಣುತ್ತದೆ. ಶತ್ರುಗಳಿಂದ ರಕ್ಷಣೆ ಪಡೆಯಲು ಇದು ಅದ್ಭುತವಾದ ಕಾರ್ಯವಾಗಿದೆ.
ಕೋಟೆಯ ಪೂರ್ವದ ಬಾಗಿಲು ಬಿದ್ದು ಹೋಗಿದೆಯಾದರೂ, ಪಶ್ಚಿಮದ ಬಾಗಿಲು ಸುಭದ್ರವಾಗಿದೆ. ಶತ್ರುಗಳ ದಾಳಿಯಿಂದ ರಕ್ಷಿಸಲು ಬೇಕಾದ ಸಕಲ ವ್ಯವಸ್ಥೆಯನ್ನೂ ಈ ಕೋಟೆಯಲ್ಲಿ ಮಾಡಲಾಗಿದೆ. ಕೋಟೆಯ ಒಳಗೇ ನಿಂತು ಹೊರಗಿನಿಂದ ಆಕ್ರಮಣ ಮಾಡುವ ಶತ್ರುಗಳನ್ನು ನಿಗ್ರಹಿಸಲು ಸಕಲ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಅನಿವಾರ್‍ಯ ಪರಿಸ್ಥಿತಿಯಲ್ಲಿ ತಪ್ಪಿಸಿಕೊಳ್ಳಲು ತುರ್ತು ಮಾರ್ಗವೂ ಇದೆ. ಕೋಟೆಯ ಮೇಲೆ ಕಾವಲು ಗೋಪುರಗಳಿದ್ದು,ಇಲ್ಲಿ ಕಾವಲುಗಾರರ ನಿವಾಸಗಳೂ ಇವೆ. ಈಗ ಈ ಕಾವಲು ನಿವಾಸಗಳು ಊರಿನವರಿಗೆ ಶೌಚಗೃಹವಾಗಿ ಮಾರ್ಪಟ್ಟಿರುವುದು, ಪೋಲಿ ಹುಡುಗರ ಜೂಜಾಟದ ಕೇಂದ್ರವಾಗಿರುವುದು ದುರ್ದೈವ. ಈ ಐತಿಹಾಸಿಕ ಕೋಟೆಯನ್ನು ಸಂರಕ್ಷಿಸಿ, ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುವ ಬದಲು ಸಂಪೂರ್ಣವಾಗಿ ನಿರ್ಲಕ್ಷಿಸಿರುವುದು ಆಗೊಮ್ಮೆ ಈಗೊಮ್ಮೆ ಬರುವ ಪ್ರವಾಸಿಗರಿಗೆ ವ್ಯಥೆಯನ್ನುಂಟು ಮಾಡುತ್ತದೆ.
ಕೋಟೆಯ ಸುತ್ತ ರಕ್ಷಣಾರ್ಥ ಕಂದಕ ತೋಡಿ ಅದರಲ್ಲಿ ನೀರು ತುಂಬಿಸಿ ಅದರಲ್ಲಿ ಮೊಸಳೆಗಳನ್ನು ಬಿಟ್ಟಿದ್ದರು ಎಂದು ಊರಿನ ಹಿರೀಕರು ಹೇಳುತ್ತಾರೆ. ಇಲ್ಲಿ ಕಂದಕ ಇತ್ತು ಎಂಬುದಕ್ಕೆ ಕುರುಹುಗಳೂ ಇವೆ. ಹಳೆಯ ನಂಜುಂಡೇಶ್ವರ ದೇವಾಲಯ, ವೇಣುಗೋಪಾಲಸ್ವಾಮಿ ದೇಗುಲ, ಸುಲ್ತಾನ್‌ಪೇಟೆ, ಪೂರ್ಣಯ್ಯನವರ ಸರೋವರ,ವೇಣುಗೋಪಾಲಸ್ವಾಮಿ ದೇವಾಲಯ, ಆವತಿಯಲ್ಲಿ ಚೆನ್ನಕೇಶವ ದೇವಾಲಯವಿದೆ.
ಬ್ರಿಟಿಷರ ವಿರುದ್ಧ ಹೋರಾಡಿ ಕರ್ನಾಟಕ ಕೀರ್ತಿ ಪತಾಕೆಯನ್ನು ಬಾನೆತ್ತರ ಹಾರಿಸಿದ ಮೈಸೂರು ಹುಲಿ ಟಿಪ್ಪೂ ಸುಲ್ತಾನರ ಗೌರವಾರ್ಥ ೧೯೯೭ರಲ್ಲಿ ನಡೆದ ದೇವನಹಳ್ಳಿ ವಿಜಯಪುರ - ಟಿಪ್ಪೂ ಉತ್ಸವ ಕಾಲದಲ್ಲಿ ಇಲ್ಲಿ ಟಿಪ್ಪೂ ಪ್ರತಿಮೆಯನ್ನು ಅಂದಿನ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಉದ್ಘಾಟಿಸಿದ್ದರು. ಇಂದು ಈ ಪ್ರತಿಮೆ ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಸರ್ಕಾರ ಮನಸ್ಸು ಮಾಡಿದರೆ ದೇವನಹಳ್ಳಿಯನ್ನು ಸುಂದರ ಪ್ರವಾಸಿ ತಾಣವಾಗಿ ಪರಿವರ್ತಿಸಬಹುದು. ಅದು ಆಗುತ್ತದೆಯೇ ಕಾದು ನೋಡಬೇಕು.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.ಇನ್ ನಂದನವನವೀ ಬ್ಯೂಗಲ್ ರಾಕ್ ರಂಗು ರಂಗಿನ ನೀರನು ಚುಮ್ಮುತ, ಸಂಗೀತದ ತಾಳಕ್ಕೆ ತಕ್ಕಂತೆ ನರ್ತಿಸುವ ಸಂಗೀತ ಕಾರಂಜಿಯ ಕಾಣಲು ಮೈಸೂರು ಬಳಿಯ ಬೃಂದಾವನ ಗಾರ್ಡನ್ಸ್‌ಗೆ ಹೋಗುವವರ ಸಂಖ್ಯೆಗೇನೂ ಕಡಿಮೆ ಇಲ್ಲ. ದೇಶ ವಿದೇಶಗಳಿಂದ ಬರುವ ಪ್ರವಾಸಿಗರೂ ಮಂಡ್ಯ ಜಿಲ್ಲೆಯ ಕೆ.ಆರ್.ಎಸ್.ನಲ್ಲಿ ಈ ಸೊಬಗು ಸವಿಯುತ್ತಾರೆ.
ಬೆಂಗಳೂರು ನಿವಾಸಿಗಳು ಕೂಡ ಇಷ್ಟು ದಿನ ಸಂಗೀತ ಕಾರಂಜಿಯ ಕಾಣಲು ಮೈಸೂರಿಗೆ ಹೋಗುತ್ತಿದ್ದರು. ಈಗ ಬೆಂಗಳೂರಿಗೇ ಸಂಗೀತ ಕಾರಂಜಿಗಳು ಬಂದಿವೆ. ಉದ್ಯಾನ ನಗರವಾಸಿಗಳಿಗೆ ಉದ್ಯಾನದಲ್ಲೇ ಉಚಿತವಾಗಿ ಈ ರಸದೌತಣ ನೀಡುತ್ತಿವೆ.
ಬೆಂಗಳೂರಿನ ಮಾಜಿ ಮೇಯರ್ ಹಾಲಿ ಶಾಸಕ ಚಂದ್ರಶೇಖರ್ ಹನುಮಂತನಗರದಲ್ಲಿ ತಿಮ್ಮೇಶಪ್ರಭು ಉದ್ಯಾನದಲ್ಲಿ ಮೊದಲಿಗೆ ಈ ಸಂಗೀತ ಕಾರಂಜಿಯನ್ನು ಮಾಡಿದ್ದಾರೆ. ಪ್ರತಿ ಭಾನುವಾರ ಬೆಂಗಳೂರಿನ ಮೂಲೆ ಮೂಲೆಯಿಂದ ಅಷ್ಟೇಕೆ ನೆರೆಯೂರಿನಿಂದಲೂ ಜನ ತಂಡೋಪತಂಡವಾಗಿ ಆಗಮಿಸಿ ಈ ಆನಂದ ಸವಿಯುತ್ತಿದ್ದಾರೆ. ಈಗ ಈ ಉದ್ಯಾನಕ್ಕೆ ಸನಿಹದಲ್ಲೇ ಇರುವ ಕಹಳೆ ಬಂಡೆ ಅರ್ಥಾತ್ ಬ್ಯೂಗಲ್‌ರಾಕ್‌ನಲ್ಲಿಯೂ ಈ ಅವಕಾಶ ಉಂಟು. ಬ್ಯೂಗಲ್‌ರಾಕ್ ಎಂದೊಡನೆ ನೆನಪಾಗುವುದು ಕಡಲೆಕಾಯಿ ಪರಿಷೆಯ ದೊಡ್ಡ ಬಸವಣ್ಣ, ಬೆಣ್ಣೆ ಅಲಂಕಾರದಿಂದ ಕಂಗೊಳಿಸುವ ದೊಡ್ಡ ಗಣಪನ ದೇಗುಲ. ಈ ದೇಗುಲದ ಹಿಂದೆ ಹಲವು ನೈಸರ್ಗಿಕ ಬಂಡೆಗಳ ಸುತ್ತ ಆಳೆತ್ತರ ಬೆಳೆದ ಮರ ಗಿಡ. ಹಚ್ಚ ಹಸುರಿನಿಂದ ಕೂಡಿದ ಉದ್ಯಾನ.
ಈ ಉದ್ಯಾನ ಒಂದು ಕಾಲದಲ್ಲಿ ಉಚ್ಛ್ರಾಯದಲ್ಲಿತ್ತು. ವಿರಕ್ತ ರಾಷ್ಟ್ರಕ ಡಿ.ವಿ.ಗುಂಡಪ್ಪ (ಡಿವಿಜಿ) ಮೊದಲಾದ ಸಾಹಿತ್ಯ ಶ್ರೇಷ್ಠರಿಗೆ ಸ್ಫೂರ್ತಿಯ ತಾಣವೂ ಆಗಿತ್ತು. ಇಷ್ಟು ಐತಿಹಾಸಿಕ ಮಹತ್ವದ ಉದ್ಯಾನ, ಬಹುಕಾಲ ನಿರ್ಲಕ್ಷ್ಯಕ್ಕೆ ಒಳಗಾಗಿತ್ತು. ಅನೈತಿಕ ವ್ಯವಹಾರಗಳ ತಾಣವಾಗಿತ್ತು. ಆದರೀಗ ಹೊಸ ಮದುವಣಗಿತ್ತಿಯಂತೆ ಸಿಂಗರಿಸಿಕೊಂಡಿದೆ. ಹಚ್ಚ ಹಸುರಿನಿಂದ, ಝಗಮಗಿಸುವ ಬೆಳಕಿಂದ ಕಂಗೊಳಿಸುತ್ತಿದೆ. ನಂದನವನವನ್ನೂ ನಾಚಿಸುವಂತೆ ನಳನಳಿಸುತ್ತಿದೆ. ಈ ಸಾಧನೆಯ ಹಿಂದೆ ಇದೇ ವಾರ್ಡ್‌ನ ನಗರಪಾಲಿಕೆ ಸದಸ್ಯ ಕಟ್ಟೆಬಳಗದ ಸತ್ಯನಾರಾಯಣ್ ಶ್ರಮವಿದೆ. ಕೋಟಿ ರುಪಾಯಿ ವೆಚ್ಚದಲ್ಲಿ ಈ ಉದ್ಯಾನವನ್ನೀಗ ಅಭಿವೃದ್ಧಿಗೊಳಿಸಲಾಗಿದೆ.
ಹಗಲು ಹೊತ್ತಿನಲ್ಲೇ ಇಲ್ಲಿಗೆ ಬರಲು ಹಿಂಜರಿಯುತ್ತಿದ್ದ ಜನ ಈಗ ಈಗ ರಾತ್ರಿ ಹತ್ತರವರೆಗೂ ಈ ಉದ್ಯಾನದಲ್ಲಿ ವಾಯು ವಿಹಾರದಲ್ಲಿ ತೊಡಗುತ್ತಾರೆ. ಉದ್ಯಾನದ ಸ್ವರೂಪವೇ ಈಗ ಬದಲಾಗಿದೆ.
ಉದ್ಯಾನದ ಒಳಭಾಗದಲ್ಲಿರುವ ೯೦ ವರ್ಷಗಳಷ್ಟು ಹಳೆಯದಾದ ನೀರಿನ ಟ್ಯಾಂಕ್‌ನ್ನು ನವೀಕರಿಸಲಾಗಿದೆ. ಟ್ಯಾಂಕ್‌ನ ಹೊರಗೋಡೆಯ ಸುತ್ತ ಫೈಬರ್‌ನೆರವಿನಿಂದಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಉಬ್ಬು ಚಿತ್ರಗಳನ್ನು ನಿರ್ಮಿಸಲಾಗಿದೆ. ಟ್ಯಾಂಕ್ ಪಕ್ಕದಲ್ಲಿ ಮಂಕುತಿಮ್ಮನ ಕಗ್ಗದ ಖ್ಯಾತಿಯ ಡಿ.ವಿ.ಜಿ. ಅವರ ಪುತ್ಥಳಿ ಸ್ಥಾಪಿಸಲಾಗಿದೆ. ಪಕ್ಕದಲ್ಲೇ ಸುಂದರ ವೇದಿಕೆಯುಳ್ಳ ಬಯಲು ರಂಗ ಮಂದಿರವನ್ನೇ ನಿರ್ಮಿಸಲಾಗಿದೆ.
ಉದ್ಯಾನದ ದ್ವಾರವನ್ನು ವಿಶೇಷವಾಗಿ ಸಿಂಗರಿಸಲಾಗಿದೆ. ಸನ್ನಿ ರಸ್ತೆಯ ದ್ವಾರ ಫೈಬರ್ ಗ್ಲಾಸ್‌ನ ಕಲ್ಲುಬಂಡೆಗಳ ಜೋಡಣೆಯಿಂದ ಕಂಗೊಳಿಸುತ್ತಿದ್ದರೆ, ಗಣೇಶನ ಗುಡಿಯ ಪಕ್ಕದಲ್ಲಿ ಬಸವಣ್ಣನ ಕೊಂಬಿನಾಕಾರದ ದ್ವಾರ ಗಮನ ಸೆಳೆಯುತ್ತದೆ. ಉದ್ಯಾನಕ್ಕೆ ಒಟ್ಟು ಐದು ದ್ವಾರಗಳಿದ್ದು, ಬಸವನಗುಡಿ ಅಭಿವೃದ್ಧಿಗೆ, ಖ್ಯಾತಿಗೆ ಕಾರಣರಾದ ಟಿ.ಆರ್.ಶಾಮಣ್ಣ, ಬೆಳ್ಳಾವೆ ವೆಂಕಟನಾರಾಯಣಪ್ಪ, ಟಿ.ಪಿ.ಕೈಲಾಸಂ,ಮಾಸ್ತಿ ವೆಂಕಟೇಶ ಅಯ್ಯಂಗಾರ್ ಹೆಸರಿಡಲಾಗಿದೆ.
ಬಸವಣ್ಣನ ಗುಡಿಯ ಮುಂದಿನ ದ್ವಾರಕ್ಕೆ ಬಸವದ್ವಾರವೆಂದೇ ನಾಮಕರಣ ಮಾಡಲಾಗಿದೆ. ಬಣ್ಣ ಬಣ್ಣದ ನೀರಿನ ಕಾರಂಜಿ, ಸಂಗೀತ ಕಾರಂಜಿ ನಿರ್ಮಿಸಿ ಉದ್ಯಾನಕ್ಕೆ ಹೊಸ ಕಳೆ ನೀಡಲಾಗಿದೆ. ಬಹುವರ್ಷಗಳಿಂದ ಉದ್ಯಾನದಲ್ಲಿರುವ ಬಂಡೆಯ ಮೇಲಿನ ಗೋಪುರ ಸುಣ್ಣ ಬಣ್ಣಗಳಿಂದ ರಂಗಾಗಿದೆ. ಪಕ್ಕದಲ್ಲೊಂದು ಕೃತಕ ಕೊಳ ನಿರ್ಮಿಸಲಾಗಿದ್ದು, ಈ ಕೊಳ ತುಂಬಿದಾಗ ಆಳೆತ್ತರದಿಂದ ಧುಮ್ಮಿಕ್ಕುವ ನೀರು ಕೃತಕ ಜಲಪಾತವನ್ನೇ ಸೃಷ್ಟಿಸಿದೆ. ಉದ್ಯಾನದಲ್ಲಿ ನೀರಿನ ಕೊರತೆ ಬಾರದಿರಲೆಂದು ಮಳೆಯ ನೀರು ಸಂಗ್ರಹಿಸಲು ಯೋಜನೆ ರೂಪಿಸಲಾಗಿದೆ. ಆಬಾಲ ವೃದ್ಧರಾದಿಯಾಗಿ ಎಲ್ಲ ವರ್ಗದವರನ್ನೂ ಆಕರ್ಷಿಸುವಲ್ಲಿ ಈ ಉದ್ಯಾನ ಯಶಸ್ವಿಯಾಗಿದೆ.
ಮಕ್ಕಳಿಗೆ ಆಟವಾಡಲು ವಿವಿಧ ಆಟಿಕೆಗಳು, ಜಾರುವ ಬಂಡೆ, ಏತಪೋತ, ಉಯ್ಯಾಲೆ... ಒಂದೇ ಎರಡೇ.. ವಯೋವೃದ್ಧರಿಗೆ ಸಂಜೆಯ ಹೊತ್ತಿನಲ್ಲೂ ನಿರಾತಂಕವಾಗಿ ವಾಯುವಿಹಾರ ನಡೆಸಲು ಸಮತಟ್ಟಾದ ಪಾದಚಾರಿ ರಸ್ತೆ, ಬೆಳದಿಂಗಳೋಪಾದಿಯ ಹಾಲು ಬೆಳಕು ಉದ್ಯಾನದ ಅಂದವನ್ನು ಹೆಚ್ಚಿಸಿದೆ.
ಈಗೇನೋ ಉದ್ಯಾನ ಸುಂದರವಾಗಿದೆ. ಮುಂದೆಯೂ ಇದರ ಅಂದ ಹೀಗೇ ಇರುತ್ತದೆಯೇ? ಇಷ್ಟು ಸುಂದರ ಉದ್ಯಾನದ ನಿರ್ವಹಣೆ ಎಂತು?ಎಂಬ ಪ್ರಶ್ನೆ ಎದುರಾಗದಿರದು. ಇದಕ್ಕೂ ವ್ಯವಸ್ಥೆ ಮಾಡಲಾಗಿದೆ. ಖಾಸಗಿಯವರ ನೆರವಿನಿಂದ ಉದ್ಯಾನದ ನಿರ್ವಹಣೆಗೆ ಒತ್ತು ನೀಡಲಾಗಿದೆ. ಉದ್ಯಾನದ ಸ್ವಚ್ಛತೆ ಕಾಪಾಡಲು ಒಂದು ಕಾರ್ಯಪಡೆಯನ್ನೇ ರಚಿಸಲಾಗಿದೆ. ಉದ್ಯಾನಕ್ಕೆ ಬರುವವರಿಗಾಗಿಯೇ ಬಯಲು ರಂಗ ಮಂದಿರದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲೂ ವ್ಯವಸ್ಥೆ ಮಾಡಲಾಗಿದೆ.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.ಇನ್
ರಾಜ್ಯದ ರಾಜಧಾನಿ ಬೆಂಗಳೂರಿಗೆ 20-25 ಕಿಲೋಮೀಟರ್ ದೂರದಲ್ಲಿ ದಟ್ಟವಾದ ನೈಸರ್ಗಿಕ ಅರಣ್ಯವಿದೆ. ಇದರಲ್ಲಿ ನೂರಾರು ಕಾಡಾನೆಗಳಿವೆ ಎಂದು ಯಾರಾದರೂ ಹೇಳಿದರೆ ನಿಮಗೆ ಅಚ್ಚರಿ ಎನಿಸಬಹುದು. ಆದರೂ ಇದು ಸತ್ಯ. ಬನ್ನೇರುಘಟ್ಟ - ಆನೇಕಲ್ ವಲಯದಲ್ಲಿ ವಿಶಾಲವಾದ ನೈಸರ್ಗಿಕ ಕಾನನವಿದೆ. ಇಲ್ಲಿ ನೂರಾರು ಸಂಖ್ಯೆಯಲ್ಲಿ ಕಾಡಾನೆಗಳೂ ಇವೆ. ಕಾಡು ಪ್ರಾಣಿಗಳೂ ಇವೆ. ಒಮ್ಮೊಮ್ಮೆ ಈ ಕಾಡುಪ್ರಾಣಿಗಳು ಮತ್ತು ಕಾಡಾನೆಗಳು ನೀರು, ಆಹಾರ ಹುಡುಕಿ ಬೆಂಗಳೂರು ಪುರ ಪ್ರವೇಶ ಮಾಡುತ್ತವೆ.
ಹೀಗೆ ಆನೆಗಳು ಕೋಣನಕುಂಟೆಗೋ, ಜೆಪಿನಗರಕ್ಕೋ ಬಂದರೆ ಅದು ದೊಡ್ಡ ಸುದ್ದಿಯಾಗುತ್ತದೆ. ಬೆಂಗಳೂರು ಬೆಳೆದಂತೆ ಕಾನನದ ಒತ್ತುವರಿ ಅವ್ಯಾಹತವಾಗಿ ನಡೆದಿದೆ. ಕಾನನ ಸದ್ದಿಲ್ಲದೆ ಕಮರಿಹೋಗುತ್ತದೆ. ಹೀಗಾಗೆ ಬೆಂಗಳೂರು ಬಳಿಯ ಈ ಅರಣ್ಯವನ್ನು ನಗರೀಕರಣದಿಂದ ಕಾಪಾಡಲು 1974ರಲ್ಲಿ ಬನ್ನೇರುಘಟ್ಟ ಅರಣ್ಯವನ್ನು ಅಭಯಾರಣ್ಯ ಎಂದು ಘೋಷಿಸಲಾಯಿತು. ವನ್ಯಜೀವಿ ಸಂರಕ್ಷಣೆ, ಜೈವಿಕ ಶಿಕ್ಷಣ,ಜೈವಿಕ ಮನರಂಜನೆ ಮತ್ತು ವನ್ಯಪ್ರಾಣಿ ಪುನರ್ವಸತಿಗಾಗಿ 739 ಹೆಕ್ಟೇರ್ ಪ್ರದೇಶದಲ್ಲಿ ಬನ್ನೇರುಘಟ್ಟದಲ್ಲಿ ರಾಷ್ಟ್ರೀಯ ಉದ್ಯಾನವನ್ನೂ ಸ್ಥಾಪಿಸಲಾಯಿತು. ಈಗ ಈ ಉದ್ಯಾನ ಪ್ರಾಣಿ ಪ್ರಪಂಚವಾಗಿ ಮಾರ್ಪಟ್ಟಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಈ ಹಿಂದೆ ಅರಣ್ಯ ಇಲಾಖೆಯ ವ್ಯಾಪ್ತಿಯಲ್ಲಿದ್ದ ಉದ್ಯಾನ ಈಗ ರಾಷ್ಟ್ರೀಯ ಮೃಗಾಲಯ ಪ್ರಾಧಿಕಾರದ ಆಡಳಿತ ವ್ಯಾಪ್ತಿಗೆ ಒಳಪಟ್ಟಿದೆ. ಬೆಂಗಳೂರಿನಿಂದ ಕೇವಲ 21 ಕಿಲೋ ಮೀಟರ್ ದೂರದಲ್ಲಿರುವ ಈ ರಮಣೀಯ ತಾಣ ಬಿಳಿ ಹುಲಿ, ಪಟ್ಟೆಹುಲಿಗಳ ಬೀಡು. ಆನೆಗಳಿರುವ ನೈಸರ್ಗಿಕ ಕಾಡು. ಬೃಹದಾಕಾರವಾದ ಕಲ್ಲುಬಂಡೆಗಳು, ಗಿರಿ ಶಿಖರಗಳ ನಡುವೆ ತಂತಾನೇ ಮುಗಿಲೆತ್ತರ ಬೆಳೆದು ನಿಂತ ಸಹಸ್ರಾರು ಗಿಡ ಮರಗಳ ಸ್ವಾಭಾವಿಕ ಕಾನನದ ನಡುವೆ ಸಹಜವಾಗಿ ನಿರ್ಮಿಸಿರುವ ಈ ಜೈವಿಕ ಉದ್ಯಾನದಲ್ಲಿ ಭಾರತದ ಪಟ್ಟೆ ಹುಲಿ, ಬಿಳಿ ಹುಲಿ, ಸೈಬೀರಿಯನ್ ಹುಲಿ, ಸಿಂಹ, ಜಿಂಕೆ, ಕಡವೆ, ಕಾಡೆಮ್ಮೆ, ಹಿಪೊಪೊಟಮಸ್ (ನೀರಾನೆ), ಜೀಬ್ರಾ, ಚಿರತೆ, ಕತ್ತೆಕಿರುಬ, ನರಿ, ತೋಳ, ಮೊಸಳೆ, ಕರಡಿ, ಹದ್ದು, ಪಾರಿವಾಳ, ಕಾಡುಕೋಳಿ, ಗೂಬೆ, ವರ್ಣ ಗಿಳಿ, ಮುಳ್ಳುಹಂದಿ, ಹಂಸ, ಕೊಕ್ಕರೆ,ವಿವಿಧ ಬಗೆಯ ಮೀನುಗಳು, ಹೆಬ್ಬಾವು, ಕಾಳಿಂಗಸರ್ಪ, ನಾಗರಹಾವು, ದಾಸರಹಾವು, ಮಂಡಲದ ಹಾವು, ಇಗ್ವಾನಾ ಸೇರಿದಂತೆ 70 ಪ್ರಬೇಧದ 1200ಕ್ಕೂ ಹೆಚ್ಚು ವನ್ಯಮೃಗ, ದೊಡ್ಡ ದೊಡ್ಡ ಪಂಜರದಲ್ಲಿರುವ ಪಂಚವರ್ಣದ ಗಿಣಿ, ಗೂಬೆ, ಗರುಡ, ಹದ್ದು, ನೀಲಕಂಠ, ನವಿಲು, ಕೊಕ್ಕರೆ, ಹಂಸ, ಕೃಷ್ಣ ಹಂಸ ಸೇರಿದಂತೆ ನೂರಾರು ಬಗೆಯ ಪಕ್ಷಿಗಳೂ ಪ್ರವಾಸಿಗರ ಮನಸೆಳೆಯುತ್ತವೆ.
ಸಸ್ಯಹಾರಿ ಮತ್ತು ಮಾಂಸಹಾರಿ ಪ್ರಾಣಿಗಳ ಸಫಾರಿ ಇಲ್ಲಿನ ಪ್ರಮುಖ ಆಕರ್ಷಣೆ. ಸಫಾರಿ ಮತ್ತು ಪ್ರಾಣಿ ಸಂಗ್ರಹಾಲಯದ ವೀಕ್ಷಣೆಗೆ ಟಿಕೆಟ್ ಖರೀದಿಸಿದರೆ, ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ಸುರಕ್ಷಿತ ವಾಹನದಲ್ಲಿ ನೈಸರ್ಗಿಕ ಅರಣ್ಯದಲ್ಲಿ ಸಫಾರಿ ವೀಕ್ಷಿಸಬಹುದು.
ಕಾಡೆಮ್ಮೆ, ಜಿಂಕೆ, ಕಡವೆ, ಕೃಷ್ಣ ಮೃಗಗಳು, ಹತ್ತಾರು ಸಂಖ್ಯೆಯ ಕರಡಿಗಳು, ಸ್ವೇಚ್ಛೆಯಾಗಿ ವಿಹರಿಸುವ ಬಿಳಿ ಹುಲಿ, ಬಂಗಾಳದ ಪಟ್ಟೆ ಹುಲಿ, ಘರ್ಜಿಸುವ ಸಿಂಹಗಳು ಈ ಸಫಾರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಈ ಎಲ್ಲ ಪ್ರಾಣಿಗಳನ್ನು ತಮ್ಮ ಕೆಮರಾದಲ್ಲಿ, ಮೊಬೈಲ್ ನಲ್ಲಿ ಸೆರೆ ಹಿಡಿಯಲು ಪ್ರತಿಯೊಬ್ಬರೂ ಹಾತೊರೆಯುತ್ತಾರೆ. ಪ್ರಾಣಿಗಳನ್ನು ಕಣ್ತುಂಬ ನೋಡಿ, ಅವುಗಳ ಛಾಯಾಚಿತ್ರವನ್ನೂ ಸೆರೆ ಹಿಡಿದು ಬೇರೆಯವರಿಗೂ ತೋರಿಸಿ ಸಂತೋಷ ಪಡುತ್ತಾರೆ.
ಈ ಸಫಾರಿಯಲ್ಲಿ ಎಲ್ಲರ ಮನಸೆಳೆಯುವ ಮತ್ತೊಂದು ಪ್ರಾಣಿ ಆನೆ. ಇಲ್ಲಿ ಹತ್ತಾರು ಆನೆಗಳು ಗುಂಪಾಗಿ ಓಡಾಡುತ್ತವೆ. ಆನೆಗಳು ವಾಹನ ಓಡಾಡುವ ರಸ್ತೆಗೆ ಬಾರದಿರಲಿ ಎಂದು ಸೌರ ವಿದ್ಯುತ್ ತಂತಿ ಬೇಲಿ ಹಾಕಲಾಗಿದೆ. ಕೆಲವು ತುಂಟ ಆನೆಗಳ ಕಾಲಿಗೆ ಸರಪಣಿಯನ್ನೂ ಹಾಕಲಾಗಿದೆ. ಮರಿಯಾನೆಗಳ ಜೊತೆ ಸ್ವಚ್ಛಂದವಾಗಿ ಓಡಾಡುವ ಈ ಆನೆಗಳ ಸಮೂಹ ನೋಡುವುದು ಒಂದು ಅವಿಸ್ಮರಣೀಯ ಅನುಭವ. ಮೃಗಾಲಯದ ಮತ್ತೊಂದು ಆಕರ್ಷಣೆ ಸತ್ತ ಪ್ರಾಣಿಗಳ ವಸ್ತು ಸಂಗ್ರಹಾಲಯ. ಇಲ್ಲಿ ಜೀವಂತವಾಗೇ ನಿಂತಿರುವಂತೆ ಭಾಸವಾಗುವ ಹುಲ್ಲು ತುಂಬಿದ ಹುಲಿ, ಸಿಂಹ, ಕಾಡೆಮ್ಮೆ, ಜಿಂಕೆ ಮೊದಲಾದ ಪ್ರಾಣಿಗಳನ್ನೂ ನೋಡಬಹುದು. ಇಲ್ಲಿ ಪ್ರಾಣಿ ಹವ್ಯಾಸ ಅಧ್ಯಯನಿಗಳಿಗಾಗಿ ಹಲವು ಮಾಹಿತಿಗಳನ್ನು ಪ್ರಕಟಿಸಲಾಗಿದೆ.
ಮಕ್ಕಳಿಗೆ ಆಟ ಆಡಲೆಂದು ಜೋಕಾಲಿ, ಏತಪೋತ, ಜಾರುವ ಬಂಡೆ ಮೊದಲಾದ ಆಟಿಕೆಗಳೂ ಇವೆ. ಈ ಉದ್ಯಾನಕ್ಕೆ ಪ್ರತಿ ವರ್ಷ ಸುಮಾರು 10 ಲಕ್ಷ ಪ್ರವಾಸಿಗರು ಭೇಟಿ ಕೊಡುತ್ತಾರೆ. ಬೇಸಿಗೆ ರಜೆ, ದಸರಾ ರಜೆ, ಭಾನುವಾರ ಹಾಗೂ ಸಾರ್ವತ್ರಿಕ ರಜಾ ದಿನಗಳಂದು ಸುಮಾರು 15 ರಿಂದ ಇಪ್ಪತ್ತು ಸಾವಿರ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಸಾಮಾನ್ಯ ದಿನಗಳಲ್ಲಿ ನಾಲ್ಕಾರು ಸಾವಿರ ಪ್ರವಾಸಿಗರಿಗೆ ಕೊರತೆ ಇಲ್ಲ.
ಅರಣ್ಯ ಇಲಾಖೆಯಿಂದ ಬೇರ್ಪಟ್ಟು ಮೃಗಾಲಯ ಪ್ರಾಧಿಕಾರದ ವ್ಯಾಪ್ತಿಗೆ ಬಂದಿರುವ ಉದ್ಯಾನ, ಮುಂದಿನ ವರ್ಷಗಳಲ್ಲಿ ತನ್ನ ಖರ್ಚು ವೆಚ್ಚಕ್ಕೆ ತಾನೇ ಸಂಪನ್ಮೂಲ ಕ್ರೋಡೀಕರಿಸಿಕೊಳ್ಳಬೇಕಾಗಿರುವುದರಿಂದ ಪ್ರವೇಶ ದರ ಹೆಚ್ಚಿಸುವ ಇರಾದೆಯೂಪ್ರಾಧಿಕಾರಕ್ಕಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪಶು ಪಕ್ಷಿಗಳನ್ನು ದತ್ತು ಪಡೆಯಲೂ ಇಲ್ಲಿ ಅವಕಾಶವಿದೆ. ದಾನಿಗಳು ಪ್ರಾಣಿ ಪಕ್ಷಿಗಳ ನಿರ್ವಹಣೆಗೆ ಹಣ ನೀಡಿದರೆ, ಅವರ ಹೆಸರನ್ನು ಆಯಾ ಪ್ರಾಣಿಯ ಪಂಜರದ ಮುಂದೆ ಹಾಕಲಾಗುತ್ತದೆ.
ನಗರ ಪ್ರದೇಶದ ಮಕ್ಕಳಿಗೆ ಹತ್ತಿರದಲ್ಲೇ ವನ್ಯಪ್ರಾಣಿಗಳ ದರ್ಶನ ಮಾಡಿಸಲು, ಪ್ರಾಣಿಗಳ ಲಕ್ಷಣ, ಆಹಾರ,ವರ್ತನೆಯ ಬಗ್ಗೆ ಅರಿವು ಮೂಡಿಸುವುದು. ಈ ಪಟ್ಟಣದ ಸದ್ದು ಗದ್ದಲದಿಂದ ದೂರವಾಗಿ ಪ್ರಶಾಂತ ತಾಣದಲ್ಲಿ ವಿಹರಿಸ ಬಯಸುವವರಿಗೆ ಇದು ನಿಜಕ್ಕೂ ಒಂದು ಸುಂದರ ತಾಣ.
ಚಿಟ್ಟೆಗಳ ಪಾರ್ಕ್: ಕಳೆದ ಕೆಲವು ವರ್ಷಗಳ ಹಿಂದಷ್ಟೇ ಇಲ್ಲಿ ಪ್ರವಾಸಿಗರನ್ನು ಆಕರ್ಷಿಸಲು ಚಿಟ್ಟೆಗಳ ಪಾರ್ಕ್ ಕೂಡ ನಿರ್ಮಿಸಲಾಗಿದೆ. ಚಿಟ್ಟೆಯ ಆಕಾರದಲ್ಲೇ ನಿರ್ಮಿಸಲಾಗಿರುವ ಈ ವಿಹಾರ ತಾಣವನ್ನು ಸಂಪೂರ್ಣ ಗಾಜಿನಿಂದ ನಿರ್ಮಿಸಲಾಗಿದ್ದು, ಒಳಗೆ ಪುಷ್ಪ ಸಸ್ಯಗಳನ್ನು ಬೆಳೆಸಲಾಗಿದೆ.
ಈ ಹೂ ಗಿಡಗಳ ಮೇಲೆ ಬಣ್ಣಬಣ್ಣದ ಚಿಟ್ಟೆಗಳು ಹಾರಾಡುವುದನ್ನು ನೋಡುವುದೇ ಒಂದು ಸೊಗಸು, ಮಕ್ಕಳಂತೂ ವಿವಿಧ ವರ್ಣದ, ವಿವಿಧ ಆಕಾರದ ಚಿಟ್ಟೆಗಳನ್ನು ನೋಡಿ ಆನಂದ ತುಂದೀಲರಾಗುತ್ತಾರೆ.
ಮೊಟ್ಟೆ, ಗೂಡು, ಕಂಬಳಿ ಹುಳುವಿನ ರೂಪದಿಂದ ಚಿಟ್ಟೆ ಹೇಗಾಗುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ಮಕ್ಕಳು ಇಲ್ಲಿ ಪಡೆಯಲು ಸಾಧ್ಯ. ಅಲ್ಪಾಯುಷಿಗಳಾದ ಚಿಟ್ಟೆಗಳ ಸಮಗ್ರ ಮಾಹಿತಿ ನೀಡುವ ವಸ್ತು ಪ್ರದರ್ಶನ ಮತ್ತು ಚಲನಚಿತ್ರ ಪ್ರದರ್ಶನವೂ ಇಲ್ಲಿದೆ.
ಸಾರಿಗೆ: ಬೆಂಗಳೂರಿನ ಶಿವಾಜಿನಗರ, ಕಳಾಸಿಪಾಳ್ಯಂ ಹಾಗೂ ಬಸ್ ನಿಲ್ದಾಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ನೇರ ಬಸ್ ಸೌಕರ್ಯ ಇದೆ. ರಜಾ ದಿನಗಳಂದು ಹಾಗೂ ಭಾನುವಾರ ಹೆಚ್ಚುವರಿ ಬಸ್ ಸೌಕರ್ಯವನ್ನೂ ಕಲ್ಪಿಸಲಾಗಿದೆ.
ನಗರದಿಂದ ಹೊರಗೆ ಕಾನನ ಪ್ರದೇಶದಲ್ಲಿರುವ ಈ ಉದ್ಯಾನಕ್ಕೆ ಮಕ್ಕಳೊಂದಿಗೆ ಹೋದರೆ ದೊರಕುವ ಆನಂದ ಅಪರಿಮಿತ. ಆದರೆ, ಮನೆಯಿಂದ ಸಾಕಷ್ಟು ನೀರು, ಆಹಾರ ಕೊಂಡೊಯ್ಯುವುದು ಉತ್ತಮ.
ಇಲ್ಲಿ ಮಯೂರ ವನಶ್ರೀ ಹೊಟೆಲ್ ಹಾಗೂ ಅಂಗಡಿ ಇದೆ. ದರ ತುಸು ದುಬಾರಿ. ಡೇಟ್ ಎಕ್ಸ್‌ಪೈರ್ ಆದ ಖಾದ್ಯ - ಪೇಯಗಳೂ ಇಲ್ಲಿ ಮಾರಾಟಕ್ಕಿರುವ ಕಾರಣ ಪ್ರವಾಸಿಗರು ಎಚ್ಚರದಿಂದಿರುವುದು ಉತ್ತಮ.
ವೀಕ್ಷಣಾ ಸಮಯ: ಬೆಳಗ್ಗೆ 9-3೦ರಿಂದ ಸಂಜೆ 5-3೦ರವರೆಗೆ ಉದ್ಯಾನ ಸಾರ್ವಜನಿಕ ವೀಕ್ಷಣೆಗೆ ಮುಕ್ತ. ಪ್ರಾಣಿಗಳಿಗೆ ಆಹಾರ ನೀಡುವುದು, ರೇಗಿಸುವುದು ನಿಷಿದ್ಧ.
ಪ್ಲಾಸ್ಟಿಕ್ ಬಳಕೆ ನಿಷಿದ್ಧ:ಅಂದಹಾಗೆ ಈ ಉದ್ಯಾನ ಪ್ಲಾಸ್ಟಿಕ್ ಮುಕ್ತ ಪ್ರದೇಶ. ಇಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಕಾರಣ ಏನು ಗೊತ್ತೆ..? ಪ್ರವಾಸಿಗರು ತಿಂಡಿ ತಿಂದು ಬಿಸಾಡಿದ ಪ್ಲಾಸ್ಟಿಕ್ ಬ್ಯಾಗ್ ತಿಂದ ಜಿಂಕೆಗಳು ಇಲ್ಲಿ ಸಾವನ್ನಪ್ಪಿವೆ.
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಲ್ಲಿ ಜಿರಾಫೆ, ಚಿಂಪಾಂಜಿ ಮೊದಲಾದ ಪ್ರಾಣಿಗಳನ್ನು ಪ್ರದರ್ಶನಕ್ಕಿಟ್ಟು,ಪ್ರವಾಸಿಗರಿಗೆ ಹೆಚ್ಚಿನ ಮೂಲಭೂತ ಸೌಕರ್ಯ ಹಾಗೂ ಅನುಕೂಲತೆ ಕಲ್ಪಿಸಿದರೆ ಈ ಉದ್ಯಾನ ಮೈಸೂರು ಚಾಮರಾಜೇಂದ್ರ ಮೃಗಾಲಯದಂತೆಯೇ ವಿಶ್ವಖ್ಯಾತಿ ಪಡೆಯುವುದರಲ್ಲಿ ಸಂದೇಹವಿಲ್ಲ.
ಚಂಪಕಧಾಮ: ರಾಷ್ಟ್ರೀಯ ಉದ್ಯಾನಕ್ಕೆ ಒಂದು ಕಿಲೋ ಮೀಟರ್ ದೂರದಲ್ಲಿ ಚಾಲುಕ್ಯರ ಕಾಲದ ಚಂಪಕಧಾಮ ಸ್ವಾಮಿ ದೇವಾಲಯವಿದೆ. ಅತ್ಯಂತ ಪುರಾತನವಾದ ಈ ದೇವಾಲಯದಲ್ಲಿ ಸುಂದರವಾದ ಚಂಪಕಧಾಮಸ್ವಾಮಿ ವಿಗ್ರಹ, ಲಕ್ಷೀ ದೇವಾಲಯವಿದೆ. ಸುಂದರ ಕೆತ್ತನೆಯ ಗರುಡಗಂಭ, ಪ್ರಾಚೀನ ಉತ್ಸವ ಮೂರ್ತಿಗಳು ಇಲ್ಲಿವೆ.
ಬೆಟ್ಟದ ಮೇಲೆ ಪುರಾತನವಾದ ಲಕ್ಷೀನರಸಿಂಹ ಸ್ವಾಮಿ ದೇವಾಲಯವೂ ಇದೆ. ಬೆಟ್ಟವನ್ನೇರಿ ಹೋಗಲು ಮಟ್ಟಿಲುಗಳನ್ನೂ ನಿರ್ಮಿಸಲಾಗಿದೆ. ಹವ್ಯಾಸಿ ಛಾಯಾಗ್ರಾಹಕರಿಗಿದು ಸುಂದರ ತಾಣ.
ಮೀನಾಕ್ಷಿ ಸುಂದರೇಶ್ವರ ದೇವಾಲಯ: ಉದ್ಯಾನದಿಂದ ಬೆಂಗಳೂರಿಗೆ ಬರುವ ಮಾರ್ಗದಲ್ಲಿ ಹುಳಿಮಾವಿನ ಬಳಿ ಸುಂದರವಾದ ಮೀನಾಕ್ಷಿ ಸುಂದರೇಶ್ವರ ದೇವಾಲಯವಿದೆ. ಹತ್ತಿರದಲ್ಲೇ ಆದಿಚುಂಚನಗಿರಿ ಮಠಕ್ಕೆ ಸೇರಿದ ಗುಹಾಂತರ ರಾಮಲಿಂಗೇಶ್ವರ ಸ್ವಾಮಿ ದೇವಾಲಯವಿದೆ. ಲಿಂಗಾಕಾರದಲ್ಲೇ ನಿರ್ಮಿಸಿರುವ ಬ್ರಹ್ಮಕುಮಾರಿ ಈಶ್ವರೀಯ ಕೇಂದ್ರವೂ ಇದೆ.
ಸಂಪರ್ಕ: ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಖನಿಜ ಭವನ, ರೇಸ್‌ಕೋರ್ಸ್ ರಸ್ತೆ, ಬೆಂಗಳೂರು. ದೂರವಾಣಿ :080-2352901 /2352909 /2352903 Email : kstdc@vsnl.ಇನ್
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಮಾಗಡಿ ಗ್ರಾಮದ ಕೆರೆ - ವಿದೇಶಿ ಹಕ್ಕಿಗಳಿಗೆ ವಲಸೆ ತಾಣವಾಗಿದೆ . ಛಳಿಗಾಲಕ್ಕೆ ವಿವಿಧ ಪ್ರದೇಶಗಳಿಂದ ಇಲ್ಲಿಗೆ ಬರುವ ಬಣ್ಣ ಬಣ್ಣದ ಸಹಸ್ರಾರು ಬಾನಾಡಿಗಳು ಸ್ವಚ್ಛಂಧವಾಗಿ ವಿಹರಿಸುತ್ತ ವರ್ಣರಂಜಿತ ಪಕ್ಷಿ ಲೋಕವನ್ನೇ ಸೃಷ್ಟಿಸುತ್ತವೆ
ಪ್ರತಿ ವರ್ಷದ ಚಳಿಗಾಲ ಪ್ರಾರಂಭವಾಗುತ್ತಿದ್ದಂತೆಯೇ ಮಾಗಡಿ ಕೆರೆಯಲ್ಲಿ ವಿದೇಶಿ ಪಕ್ಷಿಗಳ ಕಲರವ ಪ್ರಾರಂಭವಾಗುತ್ತದೆ . ಸ್ಥಳೀಯ ಗ್ರಾಮದ ಜನರಿಗೆ ಅಪ್ಯಾಯಮಾನ ಅನುಭವ ನೀಡುವ ಈ ಬಾನಾಡಿಗಳು, ಆಕರ್ಷಕ ಪಕ್ಷಿಧಾಮವನ್ನೇ ರಚಿಸುತ್ತವೆ. ಹಲವಾರು ಪ್ರಬೇಧಗಳ ಈ ಹಕ್ಕಿಗಳ ಆಶ್ರಯ ತಾಣದಿಂದಾಗಿ ಜಿಲ್ಲೆಯ ಈ ಕೆರೆ ಆಕರ್ಷಕ ಪ್ರವಾಸಿ ತಾಣವಾಗಿ ರೂಪಗೊಂಡಿದೆ .
ಮಾಗಡಿ ಗೂಡು; ಬನ್ನಿ, ಈ ಪಕ್ಷಿಧಾಮದಲ್ಲಿ ಒಮ್ಮೆ ಸುತ್ತಾಡಿ ಬಾನಾಡಿಗಳ ದಿನಚರಿಯನ್ನು ಅಂತುಕೊಳ್ಳೊಣ, ಗದಗದಿಂದ ಹಾವೇರಿಗೆ ತೆರಳುವ ಮಾರ್ಗದಲ್ಲಿ ೨೬ ಕಿ. ಮಿ. ಸಂಚರಿಸಿದರೆ ಮಾಗಡಿ ಗ್ರಾಮ ದೊರೆಯುತ್ತದೆ . ತಾಲೂಕು ಕೇಂದ್ರವಾದ ಶಿರಹಟ್ಟಿಯಿಂದ ಕೆವಲ ೮ ಕಿ. ಮಿ. ಹಾಗೂ ಇತಿಹಾಸ ಪ್ರಸಿದ್ಧ ಲಕ್ಷ್ಮೇಶ್ವರದಿಂದ ೧೧ ಕಿ. ಮಿ. ಪಯಣಿಸಿದರೆ ಮಾಗಡಿ ಕೆರೆ ದೊರೆಯುತ್ತದೆ . ಈ ಕೆರೆಯ ಒಟ್ಟು ವಿಸ್ತೀರ್ಣ ೧೩೪. ೧೫ ಎಕರೆಯಷ್ಟು ವಿಶಾಲವಾದುದು . ಮಾಗಡಿ ಹಾಗೂ ಹೊಳಲಾಪುರ ಗ್ರಾಮದಲ್ಲಿ ಮೈಚಾಚಿದ ಈ ಕೆರೆಯ ಜಲಾನಯನ ಪ್ರದೇಶ ಪಕ್ಷಿಗಳ ಬಿಡಾರಕ್ಕೆ ಹೇಳಿ ಮಾಡಿಸಿದಂತಿದೆ .
ದೂರದ ಜಮ್ಮು - ಕಾಶ್ಮಿರ್, ಲಡಾಕ್, ಟಿಬೇಟ್ , ಮಲೇಷಿಯಾ, ಶ್ರೀಲಂಕಾ, ಪಾಕಿಸ್ತಾನ, ಅಪಘಾನಿಸ್ತಾನ,ಆಸ್ಟ್ರಿಯಾ, ನೇಪಾಳ, ಬಾಂಗ್ಲಾ ಹಾಗೂ ಹಿಮಾಲಯ ಸರೋವರಗಳಿಂದ ಆಗಮಿಸುವ ಈ ಬಾನಾಡಿಗಳು ಈ ಕೆರೆಯಲ್ಲಿ ಐದಾರು ತಿಂಗಳು ನೆಲೆಯೂರಿ ನಂತರ ಪುನಃ ತಮ್ಮ ತವರಿಗೆ ತೆರಳುತ್ತವೆ . ಪಕ್ಷಿ ತಜ್ಞರ ಪ್ರಕಾರ ಇಂತಹ ಪಕ್ಷಿಗಳು ತಾವು ವಾಸಿಸುವ ಪ್ರದೇಶಗಳಲ್ಲಿ ಹೆಪ್ಪುಗಟ್ಟುವಂತಹ ಶೀತದಿಂದಾಗಿ ಇವುಗಳು ವಲಸೆ ಹೊರಟು ಉಷ್ಣ ಪ್ರದೇಶಗಳತ್ತ ಪಯಣಿಸುತ್ತವಂತೆ ತಮ್ಮ ಪ್ರವಾಸ ಕಾಲದಲ್ಲಿ ಸೂಕ್ತವೆನಿಸುವ ತಾಣವನ್ನು ಆಯ್ದುಕೊಂಡು ಅಲ್ಲಿ ಕೆಲ ಕಾಲ ಇದ್ದು ಮರಳಿ ಮಾರ್ಚ್ ಹೊತ್ತಿಗೆ ತಮ್ಮ ಗೂಡಿಗೆ ಸೇರುತ್ತವೆ . ಹೀಗೆ ಇವುಗಳು ಆಯ್ದುಕೊಂಡ ಸಮಶೀತೋಷ್ಣ ಸ್ಥಳವೇ ಮಾಗಡಿ ಕೆರೆ .
ಇವ ಯಾಊರಾವ ; ನಮ್ಮ ದೇಶದ ಬಾತುಕೋಳಿಗಳಿಗಿಂತ ಚಿಕ್ಕ ಗಾತ್ರದಲ್ಲಿರುವ ಹಂಸಗಳ ಜಾತಿಗೆ ಸೇರುವ ಈ ಪಕ್ಷಿಗಳ ಒಡನಾಟದಿಂದ ಮಾಗಡಿ ಕೆರೆ ಕಂಗೋಳಿಸುತ್ತದೆ . ಈಗಾಗಲೇ ಸಾವಿರಾರು ಪಕ್ಷಿಗಳು ಕೆರೆಗೆ ಅತಿಥಿಗಳಾಗಿ ಆಗಮಿಸಿವೆ . ಇಲ್ಲಿಗೆ ವಲಸೆ ಬರುವ ಈ ವೈವಿಧ್ಯಮಯ ಪಕ್ಷಿಗಳ ಪ್ರಬೇಧ ಸಹ ಸಾಕಷ್ಟಿದೆ . ಸಾಮಾನ್ಯವಾಗಿ ಅಕ್ಟೋಬರ್ ತಿಂಗಳಾಂತ್ಯಕ್ಕೆ ಇಲ್ಲಿಗೆ ೧೩೦ ಕ್ಕೂ ಹೆಚ್ಚು ಜಾತಿಯ ಹಕ್ಕಿಗಳು ವಲಸೆ ಬರುವದಾಗಿ ಗುರುತಿಸಲಾಗಿದೆ . ಅವುಗಳಲ್ಲಿ ೧೬ ಪ್ರಬೇಧದ ಹಕ್ಕಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಆಪೈಕಿ ಗೀರು ತಲೆಯ ಬಾತುಕೋಳಿಗಳು ( ಬಾರ್ ಹೆಡೆಡ್ ಗೂಸ್ ) ಪಕ್ಷಿಗಳ ಸಂಖ್ಯೆ ಅಧಿಕವಾಗಿದ್ದು , ನಂತರದ ಸ್ಥಾನಗಳಲ್ಲಿ ಬ್ರಾಹ್ಮಿಣಿ ಡಕ್, ಬ್ಲಾಕ್ ಐಬಿಸ್, ಪೈಂಟೆಡ್ ಸ್ಟಾರ್ಕ್ ಹಾಗೂ ಸ್ಪೂನ್ ಬಿಲ್ ಜಾತಿಯ ಹಕ್ಕಿಗಳು ಈ ಕೆರೆಯನ್ನು ಆಶ್ರಯಿಸುತ್ತವೆ. ನಾವು ಕಾಣದ ಕೇಳದ ನಾರ್ದನ್ ಶೆಲ್ವರ್ , ಲಿಟ್ಲ್ ಕಾರ್ಪೋರಲ್ಸ್ , ಅಟಲ್‌ರಿಂಗ್ ಪ್ಲೋವರ್ , ಲೊಮನ್ ಡೇಲ್, ವುಡ್ ಸ್ಟಾಂಡ್ , ಪೈಪರ, ಗ್ರಿವನ್ ಟೇಲ್, ಬ್ಲಾಕ್ ಡ್ರಾಂಗೋ , ರೆಡ್ ಢ್ರೋಟ್, ಪೆಡ್ಡಿ ಪ್ರೀಪೆಟ್ ಹೀಗೆ ಅನೇಕ ಜಾತಿಯ ಪಕ್ಷಿಗಳು ಕೆರೆಗೆ ವಲಸೆ ಬಂದಿರುವದನ್ನು ಗುರುತಿಸಲಾಗಿದೆ .
ವಾಕಿಂಗ್ ಪ್ರವೀಣರು; ಕೆರೆಯಲ್ಲಿ ವಾಸವಾಗುವ ಈ ವಲಸೆ ಹಕ್ಕಿಗಳು ವಾಕಿಂಗ್ ಪ್ರವೀಣರೆಂದರೆ ತಪ್ಪಾಗದು. ಇವುಗಳ ದೈನಂದಿನ ಚಟುವಟಿಕೆ ಬಹು ವಿಶಿಷ್ಟವಾದರು. ಪ್ರತಿದಿನ ನಸುಕಿನ ವೇಳೆಗೆ ಮೈದಡವಿಕೊಂಡು ಆಹಾರ ಅರಸುತ್ತ ಸುತ್ತಲಿನ ಪ್ರದೇಶಗಳತ್ತ ಸಾಕಷ್ಟು ದೂರ ಸಂಚರಿಸುವ ಈ ಪಕ್ಷಿಗಳು ಎಳೆ ಬಿಸಿಲು ಆರಂಭವಾಗುವ ೮ ರಿಂದ ೯ ಗಂಟೆ ಹೊತ್ತಿಗೆ ಕೆರೆ ಅಂಗಳಕ್ಕೆ ವಿಮಾನಗಳಂತೆ ಕಾಲಿಡುತ್ತವೆ . ಸಂಜೆಯವರೆಗೆ ಕೆರೆಯಲ್ಲಿ ಸ್ವಚ್ಛಂದವಾಗಿ ವಿಹರಿಸಿ, ವಿರಮಿಸುವ ಈ ಸಂಕುಲ , ಸಂಜೆ ೬ ರ ಹೊತ್ತಿಗೆ ಪುನಃ ಆಹಾರ ಅರಸುತ್ತ ಮತ್ತೊಮ್ಮೆ ವಾಕಿಂಗ್ ಪ್ರಾರಂಭಿಸುತ್ತವೆ . ಒಕ್ಕಲಾದ ಹೊಲದಲ್ಲಿಯ ಅಳಿದುಳಿದ ಕಾಳು , ಕೆರೆಯಲ್ಲಿರುವ ಚಿಕ್ಕ ಜಲಚರಗಳನ್ನು ಹೆಕ್ಕಿ ತಿನ್ನುವ ಈ ಪಕ್ಷಿಗಳು ರಾತ್ರಿ ಕೆರೆಯಲ್ಲಿ ತಂಗುತ್ತವೆ .
ಕೆರೆಯಲ್ಲಿ ರಂಗೋಲಿ ; ಕೆರೆಯಲ್ಲಿ ಗುಂಪು ಗುಂಪಾಗಿ ವಿಹರಿಸುವ ಬಣ್ಣ ಬಣ್ಣದ ಈ ಹಕ್ಕಿಗಳನ್ನು ಕಂಡಾಗ ನೀರಲ್ಲಿ ರಂಗೋಲಿ ಹಾಕಿದಂತೆ ಬಾಸವಾಗುತ್ತದೆ . ಬಂಗಾರ ವರ್ಣದ ಬಾಹ್ಮಿಣಿ ಡಕ್, ಬೂದು ಕೆಂಪು ನೆರಳೆ, ಕಪ್ಪು ಬಣ್ಣದ ಕುತ್ತಿಗೆ ಕೊಕ್ಕರೆಗಳು , ಹೊಟ್ಟೆ ಭಾಗದಲ್ಲಿ ಬಿಳಿ ಹಾಗೂ ಬೂದು ಬಣ್ಣದ ರೆಕ್ಕೆಗಳು, ಕೇಸರಿ ಬಣ್ಣದ ನೀಳ ಕಾಲುಗಳನ್ನು ಹೊಂದಿರುವ ಈ ಪಕ್ಷಿಗಳು ನೀರಲ್ಲಿ ಗಂಭೀರವಾಗಿ ಚಲಿಸುವದನ್ನು ಕಂಡಾಗ ಮೈಯೆಲ್ಲಾ ಪುಳಕಗೊಂಡು ಸ್ಮರಣೀಯ ಅನುಭವವಾಗುತ್ತದೆ .
ಬರದ ಛಾಯೆಯಲ್ಲಿದ್ದ ಈ ಕೆರೆಗೆ ಅದೃಷ್ಟವಶಾತ್ ಬಂದ ಮಳೆಯಿಂದ ಕೆರೆ ತುಂಬಿದೆ . ಹೀಗಾಗಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬಂದಿಳಿದಿರುವ ಈ ಹಕ್ಕಿಗಳು, ಪಕ್ಷಿ ಪ್ರೀಯರನ್ನು ಸೆಳೆಯುತ್ತಿವೆ . ಐದರಿಂದ ಹತ್ತು ಸಾವಿರದ ವರೆಗೂ ಬರುವ ಚಳಿಗಾಲದ ಈ ಖಾಯಂ ಅತಿಥಿಗಳಿಂದಾಗಿ ಮಾಗಡಿ ಕೆರೆ ಪಕ್ಷಿ ಧಾಮವಾಗಿ ರೂಪಗೊಂಡ ನಿಸರ್ಗ ಪ್ರೇಮಿಗಳನ್ನು , ಶಾಲಾ ಮಕ್ಕಳನ್ನು ಆರ್ಕಷಿಸುತ್ತದೆ . ಮಾಗಡಿ ಗ್ರಾಮದ ಪಕ್ಷಿ ಪ್ರೀಯ ಯುವಕರ ಪಡೆ ಸಂಘವೊಂದನ್ನು ಸ್ಥಾಪಿಸಿ ಪಕ್ಷಿಗಳ ರಕ್ಷಣೆ ಮುಂದಾಗಿದೆ . ಈ ಕೆರೆಯನ್ನು ಅಧಿಕೃತ ಪಕ್ಷಿ ಧಾಮವನ್ನಾಗಿ ಘೋಷಿಸಿ ಪಕ್ಷಿ ಸಂರಕ್ಷಣೆ ಪೂರಕ ವಾತಾವರಣ ಕಲ್ಪಿಸಬೇಕೆಂಬುದು ಅವರ ಬೇಡಿಕೆಯಾಗಿದೆ .
ಪಕ್ಷಿ ವೀಕ್ಷಣೆ; ಕೆಂದ್ರ ಸರ್ಕಾರ ಈ ಕೆರೆ ಅಭಿವೃಧ್ಧಿಗಾಗಿ ಅರಣ್ಯ ಇಲಾಖೆಯ ಯೋಜನೆಗೆ ಒಪ್ಪಿಗೆ ಸೂಚಿಸಿ , ೬೬. ೩೫ ಲಕ್ಷ ರೂ. ಗಳನ್ನು ಕೆರೆ ಪ್ರದೇಶಾಭಿವೃಧ್ಧಿಗಾಗಿ ಮಂಜೂರಾತಿ ನೀಡಿದೆ . ಕೆರೆಯ ಸಂರಕ್ಷಣೆ ಹಾಗೂ ನಿರ್ವಹಣೆಗೆ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಅದರ ಅನುಷ್ಠಾನಕ್ಕೆ ಇಲಾಖೆ ಮುಂದಾಗಿದೆ . ಕೆರೆಯ ಉದ್ದಕ್ಕೂ ಪಕ್ಷಿ ವೀಕ್ಷಕರಿಗೆ ಅನುಕೂಲವಾಗುವದಕ್ಕಾಗಿ ಬೇಲಿ ಹಾಕಿದ್ದು ಇದರಿಂದಾಗಿ ವಲಸೆ ಪಕ್ಷಿಗಳಿಗೆ ಸಂರಕ್ಷಣೆ ದೊರೆತ್ತಿದ್ದು ಅವು ಮುಕ್ತವಾಗಿ ಕೆರೆಯಲ್ಲಿ ವಿಹರಿಸಲು ಸಾಧ್ಯವಾಗಿದೆ . ಪಕ್ಷಿಗಳು ಹೆಚ್ಚಾಗಿರುವ ಸ್ಥಳದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದ್ದು , ಪಕ್ಷಿಗಳ ಮಾಹಿತಿ ಫಲಕಹಾಕಿ , ವಿಶ್ರಾಂತಿ ತಾಣ ( ಪರ ಗೋಲಾ ) ನಿರ್ಮಿಸಿರುವುದು ಕೆರೆಗೆ ಭೇಟಿ ನೀಡುವ ಪ್ರವಾಸಿಗರಿಗೆ ಅನಕೂಲವಾಗಿದೆ . ಅರಣ್ಯ ಇಲಾಖೆ ಪಕ್ಷಿಗಳ ನೇರವಿಗಾಗಿ ೮ . ೫ ಕಿ. ಮಿ. ಉದ್ದದ ಕೆರೆ ರಸ್ತೆ ಬದಿ ಸಸ್ಯರೋಪಣ ಹಾಗೂ ರೈತರ ೧೫೬ ಹೆಕ್ಟೇರುಗಳಲ್ಲಿ ನೆಡು ತೋಪು ಮುಂತಾದವುಗಳನ್ನು ಅಭಿವೃಧ್ಧಿಗೊಳಿಸಿದೆ . ಸಣ್ಣ ನೀರಾವರಿ ಇಲಾಖೆಯು ಕರೆ ಅಭಿವೃಧ್ಧಿಗೆ ಮುಂದಾಗಿದೆ . ಇದರಿಂದಾಗಿ ಕೆರೆಯಲ್ಲಿ ನಡೆಯುವ ಈ ಪಕ್ಷಿ ಜಾತ್ರೆಗೆ ಬರುವ ಪ್ರೇಕ್ಷಕರ ಸಂಖ್ಯೆ ಹೆಚ್ಚಿದ್ದು, ವಿವಿಧ ಶಾಲಾ - ಕಾಲೇಜು - ವಿದ್ಯಾರ್ಥಿಗಳಿಗೆ ಇದು ಪಿಕ್‌ನಿಕ್ ಸ್ಥಳವಾಗಿದೆ . ಮಾಗಡಿ ಕೆರೆಯ ವಲಸಿಗರ ಕಲರವ ಕೇಳಲು ನಯನ ಮನೋಹರ ದೃಶ್ಯ ನೋಡಲು ಮನಸ್ಸು ಕಾತರಗೊಂಡಿರಬೇಕು. ಮತ್ತೇಕೆ ತಡ ಕಣ್ಣಿಗೆ ಹಬ್ಬ ನೀಡುವ , ಮಕ್ಕಳ ಮನ ಮುಗ್ದಗೊಳಿಸುವ ಪಕ್ಷಿಧಾಮ ದತ್ತ ನಿಮ್ಮ ಪಯಣ ಸಾಗಲಿ.
ಅರಬ್ಬೀ ಮತ್ತು ಹಿಂದೂ ಸಂಸ್ಕೃತಿಗಳು ಪರಸ್ಪರ ಮೇಳೈಸಿದ ನಾಡು ಬಿಜಾಪುರ. ಆದಿಲ್‌ಶಾಹಿ ಸಂಸ್ಥಾನದ ರಾಜಧಾನಿಯಾಗಿ (1489-1686) ಮೆರೆದ ನಾಡು. 1627-1756ರ ಅವಧಿಯಲ್ಲಿ ಮಹಮದ್ ತನಗಾಗಿ ಕಟ್ಟಿಸಿಕೊಂಡ ಸ್ಮಾರಕ ಗೋಳಗುಮ್ಮಟದಿಂದಾಗಿ ಹಾಗೂ ಇಲ್ಲಿರುವ 300ಕ್ಕೂ ಹೆಚ್ಚು ಪ್ರಾಚೀನ ಸುಂದರ ಕಟ್ಟಡ ಮತ್ತು ಪ್ರೇಕ್ಷಣೀಯ ಸ್ಥಳಗಳಿಂದ ಬಿಜಾಪುರ ವಿಶ್ವವಿಖ್ಯಾತವಾಗಿದೆ.
ಗೋಳಗುಮ್ಮಟ: ಗೋಳಗುಮ್ಮಟ ವಿಶ್ವದ ಎರಡನೇ ಅತಿ ದೊಡ್ಡ ಗೊಮ್ಮಟ ಎಂಬ ಖ್ಯಾತಿಗೆ ಪಾತ್ರವಾಗಿದೆ. ಇದರ ವ್ಯಾಸ 44 ಮೀ. ಇಲ್ಲಿನ ವಿಶಾಲವಾದ ಆಚ್ಛಾದನ (ಮೇಲ್ಛಾವಣಿ ಹೊದಿಕೆ) ಗುಮ್ಮಟದಿಂದ ಶಬ್ದತರಂಗಗಳು ಪ್ರತಿಧ್ವನಿಸಿ ವಿಶಿಷ್ಟ ಪರಿಣಾಮ ಉಂಟು ಮಾಡುತ್ತವೆ. ಪಿಸುಮಾತು, ಚಪ್ಪಾಳೆ, ಸಿಳ್ಳೆ ಏನೇ ಮಾಡಿದರೂ ಅದು ಏಳಕ್ಕೂ ಹೆಚ್ಚುಬಾರಿ ಮಾರ್ದನಿಸುತ್ತದೆ. ಜೊತೆಗೆ ಒಂದೆಡೆ ಮಾಡುವ ಸಣ್ಣ ಸದ್ದು ಈ ಗ್ಯಾಲರಿಯ ಯಾವುದೇ ಭಾಗದಲ್ಲಿ ಅಂದರೆ ೧೨೫ ಅಡಿ ದೂರದಲ್ಲಿ ಸ್ಪಷ್ಟವಾಗಿ ಕೇಳುತ್ತದೆ. ಹೀಗಾಗೆ ಇದಕ್ಕೆ ಪಿಸುಗುಟ್ಟುವ ಗ್ಯಾಲರಿ ಎಂದು ಹೆಸರು.
ಇತಿಹಾಸ: ಬಿಜಾಪುರ ಮಟ್ಟಸವಾದ ಫಲವತ್ತಾದ ಮಣ್ಣಿನ ನಾಡು. ಅದಕ್ಕಾಗಿಯೇ ಈ ಪ್ರದೇಶವನ್ನು ಆದಿಲ್‌ಶಾಹೀ ದೊರೆಗಳು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಬಿಜಾಪುರದ ಮೊದಲ ಹೆಸರು ವಿಜಯಪುರ ಎಂದು ಹಲವು ಶಾಸನಗಳು ಸಾರುತ್ತವೆ. ಬಹಮನಿ ಸುಲ್ತಾನರು 1347ರಲ್ಲಿ ರಾಜ್ಯ ಸ್ಥಾಪಿಸಿದಾಗ ಬಿಜಾಪುರ ಒಂದು ಮುಖ್ಯ ಕೇಂದ್ರವಾಗಿತ್ತು. ಆದರೆ ಅದಕ್ಕೂ ಮೊದಲು ಇಲ್ಲಿ ವಿಜಯಪುರ ಎಂಬ ಊರಿತ್ತು. ಈ ಪ್ರಾಂತ್ಯದ ಅಕಾರಿ ಯೂಸುಫ್ ಆದಿಲ್ ಖಾನ್ ಸ್ವತಂತ್ರ್ಯವಾಗಿ ಆದಿಲ್‌ಶಾಹೀ ಸಾಮ್ರಾಜ್ಯ ಕಟ್ಟಿದ, ನಂತರ ಔರಂಗಜೇಬ್ ವಶಪಡಿಸಿಕೊಂಡ. ಬಿಜಾಪುರವನ್ನು ಮೊಗಲರು, ಹೈದ್ರಾಬಾದ್ ನಿಜಾಮರು, ಪೇಶವೆಗಳು ಆಳಿದರು.
ಕೋಟೆ: ಬಿಜಾಪುರದ ಕೋಟೆ ಬಹುಶಃ ಭಾರತದ ಬೃಹತ್ ಕೋಟೆಗಳಲ್ಲೊಂದು. ವೃತ್ತಾಕಾರದಲ್ಲಿರುವ ಈ ಕೋಟೆಯ ಹೊರಸುತ್ತಿನ ಗೋಡೆಯ ಸುತ್ತಳತೆ ಸುಮಾರು 10 ಕಿ.ಮೀ. ಎಂದರೆ ಇದರ ವಿಸ್ತಾರದ ಪರಿಚಯವಾಗುತ್ತದೆ. ದೊಡ್ಡ ಕಲ್ಲುಗಳಿಂದ ಕಟ್ಟಿರುವ ಕೋಟೆ ಕೆಲವೆಡೆ 50 ಅಡಿಗಳಷ್ಟು ದಪ್ಪವಿದೆ. ಕೋಟೆಯ ಸುತ್ತ 50 ಅಡಿ ಅಗಲದ ಕಂದಕವಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಕೋಟೆ ಅತ್ಯಂತ ಬಲಿಷ್ಠವೆಂದೇ ಪರಿಗಣಿತವಾಗಿದೆ.
ನೋಡಬೇಕಾದ ಸ್ಥಳಗಳು: ಒಳಕೋಟೆಯಾದ ಅರಕಿಲ್ಲಾ, ಎರಡನೇ ಇಬ್ರಾಹೀಂ ಆದಿಲ್ ಶಾ 1589ರಲ್ಲಿ ಕಟ್ಟಿಸಿದ ಅರಮನೆ ಆನಂದಮಹಲ್, ಹಳೆಯ ಹಿಂದೂ ದೇವಾಲಯಗಳ ಚಪ್ಪಡಿ, ಕಂಬ ಬಳಸಿ ದೇವಾಲಯ ವಾಸ್ತು ರೀತ್ಯ ಕಟ್ಟಲಾಗಿರುವ ಕರೀಮುದ್ದೀನನ ಮಸೀದಿ, ರಾಜಸಭಾ ಸದನ ಗಗನ್‌ಮಹಲ್, ಬೃಹತ್ ಕಟ್ಟಡಗಳಾದ ಸಾತ್ ಮಂಜಿಲ್, ಜಲಮಂಜಿಲ್, ಅಸಾರ್ ಮಹಲ್, ನಗರ್‌ಖಾನಾ, ಜಹಾಜ್ ಮಹಲ್, ಜಾಮಿ ಮಸೀದಿ, ಇಬ್ರಾಹಿಂ ರೋಜಾ, ರುಕ್ಮಾಂಗದ ಪಂಡಿತರ ಸಮಾಧಿ ಹಾಗೂ ಕೆಲವೇ ವರ್ಷಗಳ ಹಿಂದೆ ಅನಾವರಣಗೊಂಡ ಬೃಹತ್ ಶಿವನ ವಿಗ್ರಹ.
ಬೆಂಗಳೂರಿನಿಂದ ಸುಮಾರು 580 ಕಿ.ಮೀ. ದೂರದಲ್ಲಿರುವ ಬಿಜಾಪುರಕ್ಕೆ ನೇರ ಬಸ್ ಸೌಕರ್ಯವೂ ಇದೆ. ಪ್ರವಾಸೋದ್ಯಮ ನಿಗಮದ ಟೂರ್ ಪ್ಯಾಕೇಜ್ ಸಹ ಉಂಟು.
ಚಾಲುಕ್ಯರ ಕಾಲದ ಪ್ರಸಿದ್ಧ ಪುಣ್ಯಕ್ಷೇತ್ರ ಬಾದಾಮಿಯ ಪೂರ್ವಕ್ಕೆ ಸುಮಾರು 5 ಕಿಲೋ ಮೀಟರ್ ದೂರದಲ್ಲಿರುವ ನಂದಿಕೇಶ್ವರ ಗ್ರಾಮದ ಬಳಿ ಇರುವ ಮತ್ತೊಂದು ತೀರ್ಥಕ್ಷೇತ್ರ ಮಹಾಕೂಟ.
ವಿರಳ ಹಾಗೂ ಬಹು ಅಪರೂಪದ ಗಿಡಮರಗಳಿಂದ ಕೂಡಿದ ಕಾನನ ಪ್ರದೇಶದಲ್ಲಿ ಅಚ್ಛಾದಿತವಾದ ನಸುಗೆಂಪು ಮರಳು ಕಲ್ಲಿನ ಎರಡು ಬೆಟ್ಟಗಳ ನಡುವೆ ಇರುವುದೇ ಮಹಾಕೂಟವೆಂಬ ಪುಣ್ಯಕ್ಷೇತ್ರ.
ಇಲ್ಲಿ ಮಹಾಕೂಟೇಶ್ವರ ಮತ್ತು ಮಲ್ಲಿಕಾರ್ಜುನ ದೇಗುಲಗಳಿವೆ. ಈ ಎರಡು ದೇವಾಲಯಗಳ ಮಧ್ಯೆ ಸುಂದರವಾದ ಪುಷ್ಕರಣಿಯಿದ್ದು ಇದರ ಸುತ್ತಲೂ ಹಲವಾರು ಸಣ್ಣ ಪುಟ್ಟ ದೇವಲಾಯಗಳಿವೆ. ಹಲವು ಭಿನ್ನ ವಿಗ್ರಹಗಳನ್ನು ಪುಷ್ಕರಣಿಯ ಸುತ್ತಲೂ ಜೋಡಿಸಿಡಲಾಗಿದೆ.
ಪುಷ್ಕರಣಿಯಲ್ಲಿ ಮುಖಲಿಂಗ ಮಂಟಪ ಇದೆ. ಮುಖಲಿಂಗ ಮಂಟಪದಲ್ಲಿರುವ ಶಿವಲಿಂಗದಲ್ಲಿ ನಾಲ್ಕುಮುಖದ ಅಪರೂಪದ ಶಿವಲಿಂಗವಿದೆ. ಅತ್ಯಂತ ಕಲಾತ್ಮಕವಾದ ಹಾಗೂ ಸೂಕ್ಷ್ಮ ಕೆತ್ತನೆಗಲಿಂದ ಕೂಡಿದ ಈ ಲಿಂಗದಲ್ಲಿರುವ ಶಿವನ ಶಿರದಲ್ಲಿ ಗುಂಗುರು ಗುಂಗುರು ಕೂದಲನ್ನೂ ಸಹ ಶಿಲ್ಪಿ ಮನೋಹರವಾಗಿ ಕೆತ್ತಿದ್ದಾನೆ.
ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನನ ದರ್ಶನಕ್ಕೆ ಬರುವ ಭಕ್ತರು, ಪುಷ್ಕರಣಿಯಲ್ಲಿ ಮೊದಲು ಸ್ನಾನ ಮಾಡಿ ನಂತರ ದೇವರ ಮಾಡುತ್ತಾರೆ.
ಮಹಾಕೂಟೇಶ್ವರ ಹಾಗೂ ಮಲ್ಲಿಕಾರ್ಜುನ ದೇವರ ದೇವಾಲಯಗಳನ್ನು ಒಂದೇ ಮಾದರಿಯಲ್ಲಿ ನಿರ್ಮಿಸಲಾಗಿದೆ. ಬೆಟ್ಟಗಳ ಸಾಲಿನ ನಡುವೆ,ಹಸಿರುವನ ರಾಶಿಯ ನಡುವೆ ಕಂಗೊಳಿಸುವ ಈ ದೇಗುಲಗಳ ರಮಣೀಯವಾಗಿ ಕಾಣುತ್ತವೆ.
ಈ ದೇಗುಲಗಳಲ್ಲಿ ಚೌರಸ ಗರ್ಭಗೃಹವಿದೆ. ಇದಕ್ಕಿಂತ ಅಗಲವಾದ ಸಭಾ ಮಂಟಪ ಹಾಗೂ ಕಿರಿದಾದ ಮುಖಮಂಟಪವಿದೆ. ಗರ್ಭಗುಡಿಯ ಮೇಲೆ ದ್ರಾವಿಡ ಶೈಲಿಯ ಶಿಖರವಿದೆ. ಎತ್ತರದ ಅಷ್ಠಾನ ಅಡ್ಡ ಪಟ್ಟಿಕೆಗಳಲ್ಲಿ ಹೆಚ್ಚಾಗಿ ಶಿವಪುರಾಣಗಳಿಗೆ ಸಂಬಂಧಿಸಿದ ಲೌಕಿಕ ವಿಷಯದ ಶಿಲ್ಪಗಳಿವೆ. ಹೊರ ಬಿತ್ತಿಗಳಲ್ಲಿ ಜಾಲಂದ್ರವಿದೆ. ಅರ್ಧನಾರೀಶ್ವರನ ಸುಂದರ ಕೆತ್ತನೆ ಮನಮೋಹಕವಾಗಿದೆ.
ದೇವಾಲಯದ ಎದುರು ಹೊರಭಾಗದಲ್ಲಿರುವ ನಂದಿಯ ಹಿಂಭಾಗದಲ್ಲಿ ಪ್ರವೇಶದ್ವಾರಕ್ಕೆ ಎದುರುಮುಖವಾಗಿ ಗಣಪನ ವಿಗ್ರಹವಿದೆ. ಭಕ್ತರು ಈ ಗಣಪನಿಗೆ ವಿಶೇಷ ರೀತಿಯಲ್ಲಿ ಪೂಜೆ ಸಲ್ಲಿಸುತ್ತಾರೆ. ಅದೇನು ಗೊತ್ತೆ, ಈ ಗಣಪನ ಹೊಕ್ಕಳಿಗೆ ಭಕ್ತರು ಎಣ್ಣೆ ಹಚ್ಚುತ್ತಾರೆ.
ಗಣಪನ ಡೊಳ್ಳುಹೊಟ್ಟೆಯಲ್ಲಿ ಹೊಕ್ಕುಳ ಜಾಗದಲ್ಲಿ ದೊಡ್ಡದೊಂದು ರಂದ್ರವಿದೆ. ಭಕ್ತರು ಈ ರಂದ್ರದಲ್ಲಿ ಎಣ್ಣೆಸುರಿಯುತ್ತಾರೆ.
ಈ ದೇವಾಲಯ 8ನೇ ಶತಮಾನದಲ್ಲಿ ನಿರ್ಮಾಣವಾಗಿದೆ ಎಂಬುದು ಇಲ್ಲಿನ ಅರ್ಚಕರ ಅಂಬೋಣ..... ದೇವಾಲಯದ ಸುತ್ತ ಅಗಸ್ತ್ತ್ಯೆಶ್ವರ,ವೀರಭದ್ರೇಶ್ವರ ಮೊದಲಾದ ಹಲವಾರು ಚಿಕ್ಕ ಗುಡಿಗಳಿವೆ.
ಪ್ರಮುಖ ದೇಗುಲದ ಹೊರಬಿತ್ತಿಯ ಮೇಲೆ ವಿಷ್ಣು, ಸ್ಥಾನಕಬ್ರಹ್ಮ, ಅರ್ಧ ನಾರೀಶ್ವರ, ಪರಶುಧರ ಶಿವ, ತ್ರಿಶೂಲಧಾರಿ ಶಿವ ಮೊದಲಾದ ಕೆತ್ತನೆ ಇದೆ. ಕೆಳ ಪಟ್ಟಿಕೆಗಳಲ್ಲಿ ಸುಂದರ ಶಿಲ್ಪಕಲಾ ಕೆತ್ತನೆ ಇದೆ. ಇಲ್ಲಿ ಸೂಕ್ಷ್ಮ ಕೆತ್ತನೆ ಇಲ್ಲದಿದ್ದರೂ ಮನೋಹರವಾದ ಶಿಲ್ಪಕಲಾ ಸೌಂದರ್ಯವಿದೆ.
ಬಾದಾಮಿ ಚಾಲುಕ್ಯರ ನಾಡಿನಲ್ಲಿ ಶಿಲೆಗಳೂ ಸಂಗೀತವನ್ನು ಹಾಡುತ್ತವೆ. ವಿಶೇಷ ವಾಸ್ತು ಶೈಲಿಯ ಸುಂದರ ದೇವಾಲಯಗಳು ಆಸ್ತಿಕರಿಗೆ ಭಕ್ತಿಭಾವ ಮೂಡಿಸಿದರೆ, ನಾಸ್ತಿಕರನ್ನು ತಮ್ಮ ಕಲಾಶ್ರೀಮಂತಿಕೆಯಿಂದ ಕೈಬೀಸಿ ಕರೆಯುತ್ತವೆ.
ತುಮಕೂರು ಜಿಲ್ಲೆ ತಿಪಟೂರು ತಾಲ್ಲೂಕಿನಲ್ಲಿರುವ ಕುಗ್ರಾಮ ವಿಘ್ನಸಂತೆ. ತುರುವೇಕೆರೆಯಿಂದ 12 ಕಿಲೋಮೀಟರ್ ಮತ್ತು ನೊಣವಿನಕೆರೆಯಿಂದ ಸುಮಾರು 5 ಕಿಮೀ ದೂರದಲ್ಲಿರುವ ಈ ಗ್ರಾಮ ಶಿಲ್ಪಕಲಾ ವೈಭವಕ್ಕೆ ಹೆಸರಾದ ಸುಂದರ ದೇವಾಲಯಗಳ ತವರಾಗಿದೆ.
ಇಲ್ಲಿರುವ ಲಕ್ಷ್ಮೀನರಸಿಂಹ ದೇವಾಲಯದ ಶಿಖರದಲ್ಲಿರುವ ನಾಟ್ಯಗಣಪ ಹಳೆಬೀಡಿನ ಪ್ರವೇಶ ದ್ವಾರದ ಬಲಭಾಗದಲ್ಲಿರುವ ನಾಟ್ಯ ಗಣಪನನ್ನೇ ಹೋಲುತ್ತದೆ. ದೇವಾಲಯದ ಮುಂಭಾಗದಲ್ಲಿರುವ ಆನೆಗಳ ವಿಗ್ರಹ ಬೇಲೂರು, ಹಳೇಬೀಡು ಹಾಗೂ ಸೋಮನಾಥಪುರ ದೇವಾಲಯಗಳ ಆವರಣದಲ್ಲಿರುವ ಆನೆಗಳ ಶಿಲ್ಪವನ್ನೇ ಹೋಲುತ್ತದೆ.
ದೇವಾಲಯ ಹೊಯ್ಸಳ ಶೈಲಿಯಲ್ಲಿದ್ದು, ದೇಗುಲದಲ್ಲಿರುವ ಕೇಶವ, ಲಕ್ಷ್ಮೀನಾರಾಯಣ ಹಾಗೂ ವೇಣುಗೋಪಾಲಸ್ವಾಮಿ ವಿಗ್ರಹಗಳು ನಯನ ಮನೋಹರವಾಗಿವೆ.
ಈ ಗ್ರಾಮಕ್ಕೆ ಹಿಂದೆ ಇಗನಸಂತೆ ಎಂದು ಕರೆಯುತ್ತಿದ್ದರಂತೆ. ಕಾಲಾನುಕ್ರಮದಲ್ಲಿ ಇದು ವಿಘ್ನಸಂತೆಯಾಗಿದೆ. ಹೊಯ್ಸಳರ ಕಾಲದಲ್ಲಿ ಇದೊಂದು ಪ್ರಮುಖ ಸ್ಥಳವಾಗಿತ್ತು ಎಂಬುದನ್ನು ದೇವಾಲಯದ ಎಡಭಾಗದಲ್ಲಿರುವ ಶಾಸನಗಳು ಸಾರುತ್ತವೆ. ಹೊಯ್ಸಳ ಮೂರನೆಯ ನರಸಿಂಹನ ದಂಡನಾಯಕರೂ ಮಲ್ಲಿದೇವದಂಡನಾಯ ಕನ ಮಕ್ಕಳೂ ಆದ ಅಪ್ಪಯ್ಯ, ಗೋಪಾಲ ಮತ್ತು ಮಾಧವ ಎಂಬವರು ಈ ದೇವಾಲಯವನ್ನು 1286ರಲ್ಲಿ ಕಟ್ಟಿಸಿದರೆಂದು ಶಾಸನ ತಿಳಿಸುತ್ತದೆ.
ವಿಶಿಷ್ಟ ವಿನ್ಯಾಸ ಮತ್ತು ಸೂಕ್ಷ್ಮ ಶಿಲ್ಪಾಲಂಕರಣಗಳಿಂದ ಕೂಡಿದ ಹೊಯ್ಸಳ ಶೈಲಿಯಲ್ಲೇ ಪೂರ್ಣವಾಗಿ ರಚಿತವಾಗಿರುವ ದೇವಾಲಯದ ಹೊರ ಭಿತ್ತಿಯ ಮೇಲೆ ಹೆಚ್ಚಿನ ಸೂಕ್ಷ್ಮ ಕೆತ್ತನೆಗಳಿಲ್ಲದಿದ್ದರೂ, ಶಿಖರದಲ್ಲಿ ಸೂಕ್ಷ್ಮ ಕೆತ್ತನೆಗಳಿವೆ. ಪ್ರವಾಸಿಗರಿಗೆ ಮಾಹಿತಿ ಇಲ್ಲದೆ, ಸೂಕ್ತ ನಿರ್ವಹಣೆ ಇಲ್ಲದೆ ದೇವಾಲಯ ಇಂದು ಕಳಾಹೀನವಾಗಿದೆ. ಸುಂದರ ಶಿಖರಗಳಲ್ಲಿ ಗಿಡ ಗಂಟೆಗಳು ಬೆಳೆದಿವೆ. ಆನೆಗಳು ದನ ಕಟ್ಟುವ ಕಲ್ಲುಗಳಾಗಿವೆ.
ಈ ಗ್ರಾಮದಲ್ಲಿ ಹರಿಯುವ ಹಳ್ಳದ ಪಕ್ಕದಲ್ಲಿ ಬಾಲಲಿಂಗೇಶ್ವರ ದೇವಾಲಯವಿದೆ. ಶಿಥಿಲಾವಸ್ಥೆಯಲ್ಲಿದ್ದ ಈ ದೇವಾಲಯದ ಜೀರ್ಣೋದ್ಧಾರ ಕಾರ್ಯ ಈಗ ನಡೆಯುತ್ತಿದೆ.
ಗ್ರಾಮದ ಉತ್ತರದಲ್ಲಿರುವ ಬಯಲಲ್ಲಿ ನೂತನವಾಗಿ ಕಟ್ಟಿದ ಬನಶಂಕರಿ ದೇವಾಲಯವಿದೆ. ಗರ್ಭಗೃಹ ಮತ್ತು ಸುಕನಾಸಿ ಮಾತ್ರವಿರುವ ಈ ದೇವಾಲಯದಲ್ಲಿ ಸುಖಾಸನಾರೂಢವಾದ ಬಹುಶಃ ಹೊಯ್ಸಳ ಕಾಲಕ್ಕೆ ಸೇರಿದ ದೇವಿಯ ವಿಗ್ರಹವಿದೆ. ವರ್ಷಕ್ಕೊಮ್ಮೆ ಇಲ್ಲಿ ವಿಜೃಂಭಣೆಯಿಂದ ಜಾತ್ರೆಯೂ ನಡೆಯುತ್ತದೆ.
ಹೋಗುವುದು ಹೇಗೆ - ತುರುವೇಕೆರೆಯಿಂದ ತಿಪಟೂರಿಗೆ ಹೋಗುವ ಮಾರ್ಗದಲ್ಲಿ ಎಡಕ್ಕೆ ನೊಣವಿನಕೆರೆಗೆ 5 ಕಿಲೋ ಮೀಟರ್ ನಂತರ ಎಡಕ್ಕೆ ತಿರುಗಿದರೆ ವಿಘ್ನಸಂತೆಗೆ ಹೋಗಬಹುದು. ತಿಪಟೂರಿನಿಂದ ತುರುವೇಕೆರೆಗೆ ಹೋಗುವ ಮಾರ್ಗದಲ್ಲಿ 8 ಕಿಲೋ ಮೀಟರ್ ಕ್ರಮಿಸಿದ ಬಳಿಕ ಬಲ ಭಾಗದಲ್ಲಿ ಈ ಗ್ರಾಮಕ್ಕೆ ಹೋಗುವ ದಾರಿ ಸಿಗುತ್ತದೆ. ಎರಡು ಮೂರು ಕಿಲೋ ಮೀಟರ್ ಕಚ್ಚಾ ರಸ್ತೆಯಲ್ಲಿ ಕ್ರಮಿಸುವುದು ಅನಿವಾರ್ಯ. ದೇವಾಲಯ 10 ಗಂಟೆ ನಂತರ ತೆರೆಯುತ್ತದೆ.
ಬೇಲೂರು ಎಂದೊಡನೆ, ಮೌನ ಕಾವ್ಯಕನ್ನಿಕೆಯರನ್ನು ಕಲ್ಲಿನಲ್ಲಿ ಅರಳಿಸಿದ ಖ್ಯಾತ ಶಿಲ್ಪಿ ಜಕಣಾಚಾರಿ ಕಣ್ಣೆದುರು ನಿಲ್ಲುತ್ತಾನೆ. ಯಗಚಿ ನದಿಯ ದಂಡೆಯಲ್ಲಿ, ಪಶ್ಚಿಮಘಟ್ಟಗಳ ಶ್ರೇಣಿಯ ಇಳಿಜಾರಿನಲ್ಲಿರುವ ಬೇಲೂರು ನೈಸರ್ಗಿಕ ಕಾನನದಿಂದ ಸುತ್ತುವರಿದಿದೆ. ಹಸಿರು ಸಿರಿಯ ನಡುವೆ ಇರುವ ಈ ಅರೆ ಮಲೆನಾಡು ಪ್ರದೇಶ ಹೊಯ್ಸಳ ಅರಸರ ಹೆಮ್ಮೆಯ ರಾಜಧಾನಿಯಾಗಿ, ಶಿಲ್ಬಕಲೆಗಳ ತವರಾಗಿ ಕರ್ನಾಟಕದ ಪ್ರಮುಖ ಪ್ರವಾಸಿ ಕೇಂದ್ರವಾಗಿ ಕಂಗೊಳಿಸಿದೆ.
ಹಿಂದೆ ವೇಲಾಪುರ ಎಂದು ಕರೆಸಿಕೊಂಡ ಬೇಲೂರಿನ ಚೆನ್ನಕೇಶ್ವರ ದೇವಾಲಯ ವಿಷ್ಣುವರ್ಧನ ತಲಕಾಡಿನ ಚೋಳರ ಮೇಲೆ ವಿಜಯ ಸಾಧಿಸಿದ ಸಂಕೇತವಾಗಿ ತಲಕಾಡು, ಮೇಲುಕೋಟೆ, ತೊಣ್ಣೂರು, ಗದಗ ಹಾಗೂ ಬೇಲೂರಿನಲ್ಲಿ ಕಟ್ಟಿದ ಐದು ದೇವಾಲಯಗಳ ಪೈಕಿ ಇದೂ ಒಂದು ಎಂದು ಪ್ರತೀತಿ.
ತಲಕಾಡುಗೊಂಡ ಎಂದೇ ಖ್ಯಾತನಾಗಿದ್ದ ವಿಷ್ಣುವರ್ಧನ 20 ಮಾರ್ಚ್ 1117ರಲ್ಲಿ ಈ ದೇವಾಲಯ ಪ್ರತಿಷ್ಠಾಪಿಸಿದ ಎಂದು ಶಾಸನ ಸಾರುತ್ತದೆ. ವಿಷ್ಣುವರ್ಧನ ವಿಜಯದ ಸಂಕೇತವಾಗಿ ಕಟ್ಟಿಸಿದ ಈ ದೇಗುಲದಲ್ಲಿನ ಶಿಲ್ಪಕಲೆಗಳು ಅದ್ವಿತೀಯ.
ಬೇಲೂರಿನ ಚೆನ್ನಕೇಶವ ದೇಗುಲಕ್ಕೆ ಅದುವೇ ಸಾಟಿ. ನಕ್ಷತ್ರಾಕಾರದ 32 ಕೋನಗಳ ಶ್ರೀಚಕ್ರ ರೂಪದ ಜಗಲಿಯ ಮೇಲೆ ನಿರ್ಮಿಸಲಾಗಿರುವ ಸುಂದರ ದೇವಾಲಯದ ಭಿತ್ತಿಗಳಲ್ಲಿ ಆನೆಗಳು, ಪುರಾಣ, ಪುಣ್ಯ ಕಥೆಗಳಿವೆ. ಇಲ್ಲಿರುವ ನರ್ತಿಸುತ್ತಿರುವ ಶಿಲಾಬಾಲಕಿಯರು ಕನ್ನಡ ನಾಡಿನ ಹೆಮ್ಮೆಯ ಶಿಲ್ಪಿಗಳ ಕಲಾಪ್ರೌಢಿಮೆಯನ್ನು ಎತ್ತಿಹಿಡಿಯುತ್ತವೆ. ಮೂರೂವರೆ ಅಡಿ ಎತ್ತರದ ಪೀಠದ ಮೇಲೆ ನಿಂತಿರುವ 9 ಅಡಿ ಎತ್ತರದ ಮಣಿಮಕುಟ, ಮಕರಕುಂಡಲ, ಕಟಿಬಂಧಗಳಿಂದ ಅಲಂಕೃತನಾದ ಶಂಖ, ಚಕ್ರ, ಗದಾ, ಪದ್ಮ ಹಿಡಿದ ಚೆನ್ನಕೇಶವನ ಸುಂದರ ಸೌಮ್ಯ ಮೂರ್ತಿಯ ಚೆಲುವು ಚೆನ್ನ ಕೇಶವ ಎಂಬ ಹೆಸರಿಗೂ ಅನುರೂಪವಾಗಿದೆ.
ದೇಗುಲದ ನವರಂಗದಲ್ಲಿ ಭುವನೇಶ್ವರಿಗೆ ಆಧಾರವಾದ ಕಂಬಗಳ ಮೇಲೆ ಇರುವ 42 ಮದನಿಕೆ ವಿಗ್ರಹಗಳು ಅತ್ಯಂತ ಸುಂದರವಾಗಿದ್ದು ಬೇಲೂರು ಶಿಲಾಬಾಲಿಕೆಯರು ಎಂದೇ ಇದು ಖ್ಯಾತವಾಗಿದೆ. ದರ್ಪಣ ಸುಂದರಿ, ಕಲ್ಲಿನಲ್ಲೇ ಚಿಗುರುತ್ತಿರುವಂತೆ ಕಾಣುವ ತರುಲತೆಗಳು, ಕುಪ್ಪಳಿಸಲು ಸಿದ್ಧವಾಗಿರುವಂತಿರುವ ಕಪ್ಪೆಯುಳ್ಳ ಚೆನ್ನಿಗರಾಯನ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆ.
ಕಪ್ಪೆ ಚೆನ್ನಿಗರಾಯ ದೇವಾಲಯವನ್ನು 1117ರಲ್ಲಿ ವಿಷ್ಣುವರ್ಧನ ಪಟ್ಟದರಸಿ ಶಾಂತಲೆ ಕಟ್ಟಿಸಿದಳೆಂದು ಶಾಸನ ಹೇಳುತ್ತದೆ. ಎಲ್ಲ ದೇವಾಲಯಗಳ ನವರಂಗಗಳ ಮೇಲ್ಛಾವಣಯ ಸುಂದರ ಶಿಲ್ಪಕಲೆ, ಪ್ರತಿಯೊಂದು ಕಂಬಗಳಲ್ಲಿಯೂ ಇರುವ ವೈವಿಧ್ಯತೆ ಸೂಕ್ಷ್ಮವಾಗಿ ಗಮನಿಸಲೇಬೇಕಾದ ಕೆತ್ತನೆಗಳಿಂದ ಕೂಡಿದೆ. ಒಂದು ಕಂಬ ಮತ್ತೊಂದು ಕಂಬಕ್ಕಿಂತ ವಿಭಿನ್ನವಾಗಿದ್ದು ಮನಸೂರೆಗೊಳ್ಳುತ್ತವೆ. ಗುರುಗಳು ಹೊಯ್ ಎಂದೊಡನೆ ಹುಲಿಯನ್ನು ಕೊಂದ ಸಳನನ್ನೇ ಲಾಂಛನ ಮಾಡಿಕೊಂಡ ಹೊಯ್ಸಳರ ಲಾಂಛನ ಮನಸೂರೆಗೊಳ್ಳುತ್ತದೆ. ತನ್ನ ಸೌಂದರ್ಯವನ್ನು ತಾನೇ ನೋಡುತ್ತಾ ಮೈಮರೆತು ನಿಂತ ದರ್ಪಣ ಸುಂದರಿ, ಗಿಣಿಗೆ ಹಣ್ಣು ಕೊಟ್ಟು ಮಾತು ಕಲಿಸುತ್ತಿರುವ ಶುಕ ಸುಂದರಿ, ಯುವತಿಯ ವಸ್ತ್ರ ಎಳೆಯುತ್ತಿರುವ ಮಂಗ ಮೊದಲಾದ ಕೆತ್ತನೆಗಳು ಅತ್ಯಂತ ಮನೋಹರವಾಗಿವೆ.
ಅಂದ ಹಾಗೆ ಚೆನ್ನಿಗರಾಯ ದೇಗುಲವನ್ನು ಖ್ಯಾತ ಶಿಲ್ಪಿ ಜಕಣಾಚಾರಿ ನಿರ್ಮಿಸಿದನೆಂದೂ, ಇದರಲ್ಲಿದ್ದ ದೋಷವನ್ನು ಜಕಣನ ಮಗ ಡಕಣಾಚಾರಿ ತೋರಿಸಿದಾಗ ಜಕಣ ತನ್ನ ಬಲಗೈ ಕತ್ತರಿಸಿಕೊಂಡ. ತುಮಕೂರು ಬಳಿಯ ಕೈದಾಳದಲ್ಲಿ ಜಕಣ ಕೇಶವ ದೇಗುಲ ನಿರ್ಮಿಸಿದಾಗ ಮತ್ತೆ ಅವನ ಕೈ ಬೆಳೆಯಿತು ಎಂಬ ಐತಿಹ್ಯವಿದೆ. ಬೇಲೂರು ಬೆಂಗಳೂರಿನಿಂದ 120 ಹಾಗೂ ಹಾಸನದಿಂದ 35 ಕಿ.ಮೀಟರ್ ದೂರದಲ್ಲಿದೆ.
ಹಳೆಬೀಡು ಶಿಲ್ಪಕಲೆಯ ನೆಲೆವೀಡು. ಹಳೆಬೀಡಿನ ವೈಭವ ವರ್ಣಿಸಲಸದಳ. ಹಳೆಬೀಡಿನ ಮೊದಲ ಹೆಸರು ದೋರಸಮುದ್ರ. 950ಕ್ಕೆ ಮೊದಲೇ ಭಾವದೋರ ಎಂಬಾತ ಇಲ್ಲಿ ಕೆರೆಯನ್ನು ನಿರ್ಮಿಸಿ ರಾಜ್ಯಭಾರ ಮಾಡಿದ್ದರಿಂದ ಇದಕ್ಕೆ ದೋರಸಮುದ್ರ ಎಂದು ಹೆಸರು ಬಂದಿತ್ತು ಎನ್ನುತ್ತಾರೆ.
ಬೆಟ್ಟಗುಡ್ಡಗಳಿಂದಾವರಿಸಿ, ವಿಶಾಲ ಕಣಿವೆಗಳಿರುವ ಈ ರಮ್ಯತಾಣ ಮುಮ್ಮಡಿ ಬಲ್ಲಾಳನ ಕಾಲದಲ್ಲಿ ವಿಸ್ತಾರಗೊಂಡಿತು. ಒಂದನೇ ಬಲ್ಲಾಳ ಬೇಲೂರನ್ನೂ, ವಿಷ್ಣವರ್ಧನ ವಿಷ್ಣುಸಮುದ್ರವನ್ನೂ ನೆಲೆವೀಡಾಗಿ ಮಾಡಿಕೊಂಡರೂ ಒಂದುಕಾಲದಲ್ಲಿ ಹೊಯ್ಸಳರ ರಾಜಧಾನಿಯಾಗಿದ್ದ ದೋರಸಮುದ್ರ ಹಳೇಬೀಡು ಎಂಬ ಅಭಿದಾನದಿಂದ ಜಗದ್ವಿಖ್ಯಾತವಾಯ್ತು.
ಹೆಸರು ಹಳೆಯ ಬೀಡಾದರೂ, ಇಲ್ಲಿನ ಶಿಲ್ಪಕಲೆಗಳು ನವನವೀನ, ನಿತ್ಯನೂತನ. ಹಳೆಯ ಬೀಡಿನಲ್ಲಿ ಹಲವಾರು ಅತ್ಯಂತ ಸುಂದರ ದೇಗುಲಯಗಳಿವೆಯಾದರೂ,ಅಲ್ಲಾಉದ್ದೀನನ ದಂಡನಾಯಕ ಮಲ್ಲಿಕ್ ಕಾಫೂರ್ ಸೇರಿದಂತೆ ಹಲವು ಮುಸಲ್ಮಾನ ದೊರೆಗಳ ದಾಳಿಯ ಬಳಿಕ ಈ ಹೊತ್ತು, ಸುಸ್ಥಿತಿಯಲ್ಲಿ ಉಳಿದಿರುವುದು ಹೊಯ್ಸಳೇಶ್ವರ ದೇವಾಲಯ ಮಾತ್ರ. ಗಟ್ಟದಹಳ್ಳಿ ಶಾಸನ ಆಧರಿಸಿ ಈ ದೇವಾಲಯವನ್ನು ವಿಷ್ಣುವರ್ಧನನ ಅಕಾರಿ ಕೇತಮಲ್ಲ 1121ರಲ್ಲಿ ಕಟ್ಟಿಸಿದ ಎಂದು ಹೇಳಲಾಗಿದೆ.
ಕರ್ನಾಟಕದ ಪರಂಪರೆಯ ಪ್ರತೀಕವಾಗಿರುವ ಈ ದೇವಾಲಯ ಹೊಯ್ಸಳ ದೊರೆಗಳ ಕಲಾಶ್ರೀಮಂತಿಕೆಯ ದ್ಯೋತಕವಾಗಿ ಹಾಗೂ ಕಲೋಪಾಸನೆಗೆ ಸಾಕ್ಷಿಯಾಗಿವೆ. ಗಟ್ಟಿಯಾದ ಬಳಪದ ಕಲ್ಲಿನಿಂದ ನಿರ್ಮಿಸಿರುವ ದೇವಾಲಯ ಅತ್ಯಂತ ವಿಸ್ತಾರವಾಗಿದ್ದು, 700 ಅಡಿಗಳಿಗೂ ಹೆಚ್ಚು ಉದ್ದವಾಗಿರುವ ಭಿತ್ತಿಗಳ ಮೇಲೆ ಸಾವಿರಾರು ದೇವತೆಗಳ ಕೆತ್ತನೆ, ಮಹಾಭಾರತ, ರಾಮಾಯಣ, ಶೈವಪುರಾಣ,ಸಮುದ್ರ ಮಂಥನದ ಉಬ್ಬುಶಿಲ್ಪಗಳಿವೆ. ಆನೆ, ಹಂಸ, ಬಳ್ಳಿ ಸುರುಳಿ,ಕುದುರೆ, ಕಥಾ ಪಟ್ಟಿಗೆಗಳು ಅತ್ಯಂತ ಮನೋಹರವಾಗಿವೆ. ಆನೆಯ ಪಟ್ಟಿಕೆಯೊಂದರಲ್ಲೇ ಸುಮಾರು 2 ಸಾವಿರ ಆನೆಗಳ ಕೆತ್ತನೆಗಳಿವೆ.
ಶಿಲಾಬಾಲಿಕೆ, ಮದನಿಕೆಯರ ಸುಂದರ ಎತ್ತರವಾದ ಹಾಗೂ ಸುಂದರವಾದ ಕೆತ್ತನಗಳಿವೆ. ನಂದಿಯ ಮೂರ್ತಿಗಳೂ ಇವೆ. ದಶಾವತಾರ, ಪಾರಿಜಾತಾಪಹರಣ, ಇಂದ್ರಸಭೆ ಮೊದಲಾದ ಕಥಾಪಟ್ಟಿಕೆಗಳು ಇಡೀ ಪುರಾಣವನ್ನೇ ಕಣ್ಣೆದುರು ತಂದು ನಿಲ್ಲಿಸುತ್ತವೆ. ಈ ಹೊಯ್ಸಳೇಶ್ವರನ ದೇಗುಲದ ಪುತ್ಥಳಿಗೂ ಭಿನ್ನವಾಗಿವೆ. ಭಗ್ನಗೊಂಡಿವೆ. ಇಲ್ಲಿರುವ ಮತ್ತೊಂದು ಮನೋಹರ ದೇಗುಲ ಕೇದಾರೇಶ್ವರ ದೇವಾಲಯ. ಬೆಳಗಾವಿಯ ದಕ್ಷಿಣ ಕೇದಾರೇಶ್ವರ ದೇವಾಲಯದಿಂದ ಸೂರ್ತಿಪಡೆದ ಹೊಯ್ಸಳರ ಎರಡನೆ ಬಲ್ಲಾಳ ಹಾಗೂ ಅವನ ಕಿರಿಯ ರಾಣಿ ಕೇತಲದೇವಿ ೧೨೧೯ರಲ್ಲಿ ಕಟ್ಟಿದರಂತೆ. ಈ ದೇಗುಲದ ಭಿತ್ತಿಗಳಲ್ಲಿರುವ ಹಂಸ ಹಾಗೂ ಮಕರ ಶಿಲ್ಪಗಳು ಅತ್ಯದ್ಭುತವಾಗಿವೆ. ದೇಗುಲದ ಬಾಗಿಲವಾಡ, ಭುವನೇಶ್ವರಿಗಳಲ್ಲಿ ರಮ್ಯ ಶಿಲ್ಪಗಳಿವೆ. ದೇಗುಲದಲ್ಲಿ ಹಲವು ವಿಗ್ರಹಗಳು ಇಲ್ಲ. ಭಿನ್ನವಾದ ವಿಗ್ರಹಗಳೀಗ ವಸ್ತುಸಂಗ್ರಹಾಲಯಗಳನ್ನು ಸೇರಿವೆ. ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಪ್ರಾಜ್ಯ ವಸ್ತು ಸಂಗ್ರಹಾಲಯ ತೆರೆದಿರುತ್ತದೆ. ಶುಕ್ರವಾರ ಮಾತ್ರ ಇದಕ್ಕೆ ರಜೆ. ಉಳಿದ ಭಿನ್ನ ವಿಗ್ರಹಗಳನ್ನು ದುರಸ್ತಿ ಮಾಡುವ ಪ್ರಯತ್ನವಂತೂ ಆಗಿದೆ. ಆದರೆ ಮೂಲ ಸೊಬಗನ್ನು ತರುವಲ್ಲಿ ಇವು ವಿಫಲವಾಗಿವೆ. ಹೊಯ್ಸಳೇಶ್ವರ ದೇಗುಲಕ್ಕೆ ಸಮೀಪದಲ್ಲೆ ಮೂರು ಬಸದಿಗಳೂ ಇವೆ. ಜೈನ, ಶೈವ ಹಾಗೂ ವೈಷ್ಣವ ಸಂಪ್ರದಾಯಗಳ ಬೀಡು ಇದೆಂಬುದನ್ನು ಇವು ನಿರೂಪಿಸುತ್ತವೆ.
ಊರಿನ ಬೆಣ್ಣೆ ಗುಡ್ಡಕ್ಕೆ ಹೊಂದಿಕೊಂಡಂತೆ ಪೂರ್ವದ ಕಡೆ ಇರುವ ವಿಶಾಲ ಬಯಲಿನಲ್ಲಿ ಹೊಯ್ಸಳರ ಅರಮನೆಯಿತ್ತು. ಈಗಲೂ ಇದನ್ನು ಅರಮನೆ ಹೊಲ ಎಂದೇ ಕರೆಯುತ್ತಾರೆ. ನಿಧಿ, ನಿಕ್ಷೇಪ ಸಿಗಬಹುದೆಂದು ಹಲವರು ಇಲ್ಲಿ ಗುಂಡಿಗಳನ್ನು ತೋಡಿದ್ದಾರೆ.
ಬೆಂಗಳೂರಿನಿಂದ 220 ಕಿ.ಮೀ. ಹಾಗೂ ಹಾಸನದಿಂದ 31 ಕಿ.ಮೀ. ದೂರದಲ್ಲಿರುವ ಹಳೇಬೀಡು ಬೇಲೂರಿಗೆ ಕೇವಲ 17 ಕಿ.ಮೀಟರ್ ಅಂತರದಲ್ಲಿದೆ. ಸುತ್ತಮುತ್ತ ನೋಡಬೇಕಾದ ಸ್ಥಳಗಳೆಂದರೆ ಬೆಳವಾಡಿ, ಬಸ್ತಿಹಳ್ಳಿ, ಜೈನಬಸದಿಗಳು.
ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿರುವ ಪವಿತ್ರ ಪುಣ್ಯ ಕ್ಷೇತ್ರ ಬನಶಂಕರಿ. ಸಿಂಹ ವಾಹಿನಿಯಾದ ಪಾರ್ವತಿ ಬನಶಂಕರಿಯಾಗಿ ನೆಲೆಸಿಹ ಈ ಊರಿಗೆ ಬನಶಂಕರಿ ಎಂದೇ ಹೆಸರು ಬಂದಿದೆ.
ಈ ಪ್ರದೇಶ ಸಂಪೂರ್ಣ ಬನಗಳಿಂದ ಕೂಡಿರುವ ಕಾರಣ ಇಲ್ಲಿ ನೆಲೆಸಿಹ ತಾಯಿಗೂ ಬನಶಂಕರಿ ಎನ್ನುತ್ತಾರೆ. ಈ ತಾಯಿಗೆ ಸ್ಥಳೀಯರು ಬಾಳವ್ವ, ಬನದವ್ವ, ಸುಂಕವ್ವ, ಶಾಕಾಂಬರಿ, ಶಿರಿವಂತಿ, ಚೌಡಮ್ಮ, ವನದುರ್ಗೆ ಎಂತಲೂ ಕರೆಯುತ್ತಾರೆ. ಬನಶಂಕರಿ ನವದುರ್ಗೆಯರದಲ್ಲಿ 6ನೇ ಅವತಾರವೆಂದೂ ಹೇಳಲಾಗುತ್ತದೆ. ಈ ಪ್ರದೇಶದಲ್ಲಿ ಭೀಕರ ಕ್ಷಾಮ ತಲೆದೋರಿದಾಗ ತಾಯಿ ತನ್ನ ತನುವಿನಿಂದ ಕಾಯಿಪಲ್ಲೆ ಸೃಷ್ಟಿಸಿ ಜನರ ಸಂಕಷ್ಟ ನೀಗಿಸಿದಳಂತೆ ಹೀಗಾಗೇ ಶಾಕಾಂಬರಿ ಎನ್ನುವ ಹೆಸರು ತಾಯಿಗೆ ಬಂತೆಂದೂ ಅರ್ಚಕರು ಹೇಳುತ್ತಾರೆ. ಈ ಪ್ರದೇಶದ ಜನರು ಪ್ರತಿವರ್ಷ ಮಾಗಿ ಕಾಲದಲ್ಲಿ ನಡೆಯುವ ರಥೋತ್ಸವದ ಮುನ್ನಾ ದಿನ ತಾಯಿಗೆ 108 ತರಕಾರಿಗಳಿಂದ ಖಾದ್ಯ ತಯಾರಿಸಿ ಸಮರ್ಪಿಸುವ ಮೂಲಕ ಕೃತಜ್ಞತೆ ಅರ್ಪಿಸುತ್ತಾರೆ. ಈ ಋಣ ಸಂದಾಯ ಪಲ್ಲೇದ ಹಬ್ಬ ಎಂದೇ ಖ್ಯಾತವಾಗಿದೆ. ದೇವಿ ಶಾಂಕಾಂಬರಿ ಆದ ಬಗ್ಗೆ ಸ್ಕಂದ ಪುರಾಣ, ಪದ್ಮಪುರಾಣಗಳಲ್ಲಿ ಉಲ್ಲಖವಿದೆಯೆಂತಲೂ ಹಿರೀಕರು ಹೇಳುತ್ತಾರೆ. ಈ ಊರಿನ ಸುತ್ತ ಅರಣ್ಯವಿದೆ, ತೆಂಗು, ಬಾಳೆ, ವೀಳೆಯದೆಲೆಯ ಬನಗಳಿವೆ. ಸನಿಹದಲ್ಲೇ ಸರಸ್ವತಿ ಹೊಳೆಯೂ ಹರಿಯುತ್ತದೆ.
ಸುಂದರ ಕೋಟೆಯಂತೆ ಭಾಸವಾಗುವ ಪ್ರವೇಶ ದ್ವಾರ ದಾಟಿ ಒಳಹೊಕ್ಕರೆ ದೇವಾಲಯ ಕಾಣಸಿಗುತ್ತದೆ. ದೇವಾಲಯದ ಎದುರು ಸುಂದರವಾದ ಕೊಳವಿದೆ. 360 ಅಡಿಗಳ ಚಚ್ಚೌಕಾಕಾರದ ಈ ಕಲ್ಯಾಣಿಯ ಸೌಂದರ್ಯ ನೋಡಲು ಎರಡು ಕಣ್ಣು ಸಾಲದು. ಈ ಕೊಳ ಬನಶಂಕರಿಯಲ್ಲಿ ನೋಡಲೇ ಬೇಕಾದ ರಮಣೀಯ ತಾಣ.
ಕಲ್ಯಾಣಿಯ ಸೊಬಗನ್ನು ಕಣ್ತುಂಬಿಕೊಂಡು ದೇವಾಲಯ ಪ್ರವೇಶಿಸಿದರೆ ದ್ರಾವಿಡ ಶೈಲಿಯಲ್ಲಿರುವ ಮನೋಹರವಾದ ದೇವಾಲಯದ ಸೌಂದರ್ಯ ಕಣ್ಮನ ಸೆಳೆಯುತ್ತದೆ. ಕಲ್ಯಾಣ ಚಾಲುಕ್ಯರ ದೊರೆ 1ನೇ ಜಗದೇಕಮಲ್ಲನ ಕಾಲದಲ್ಲಿ ಈ ದೇವಾಲಯ ನಿರ್ಮಾಣವಾಗಿದೆ, ಕ್ರಿ.ಶ.603ರಲ್ಲಿ ದೇವಿಯ ಪ್ರತಿಷ್ಠಾಪನೆ ಮಾಡಲಾಗಿದೆ ಎಂಬುದನ್ನು ಇಲ್ಲಿರುವ ಶಾಸನಗಳು ಸಾರುತ್ತವೆ.
ದೇವಾಲಯದ ಆವರಣದಲ್ಲಿರುವ ಸ್ತಂಭಗಳು ನಯನ ಮನೋಹರವಾಗಿವೆ. ಗರ್ಭಗುಡಿಯಲ್ಲಿ ಗರ್ಜಿಸುತ್ತಿರುವ ಸಿಂಹದ ಮೇಲೆ ವಿರಾಜಮಾನಳಾದ ಪಾರ್ವತಿಯ ಸುಂದರ ಮೂರ್ತಿಯಿದೆ. ದೇವಿಗೆ ಶರಣು ಹೋದರೆ ಸಕಲ ಅಭಿಷ್ಟಗಳೂ ಈಡೇರುತ್ತವೆ ಎಂಬುದು ಭಕ್ತರ ನಂಬಿಕೆ. ವರ್ಷಕ್ಕೊಮ್ಮೆ ನಡೆಯುವ ಬನಶಂಕರಿ ಜಾತ್ರೆ ಜಗದ್ವಿಖ್ಯಾತವಾಗಿದೆ. ಅಂದು ಊರಿಗೆ ಊರೇ ತಳಿರು ತೋರಣಗಳಿಂದ ಅಲಂಕೃತವಾಗುತ್ತದೆ. ದೂರದೂರುಗಳಿಂದ ಆಗಮಿಸುವ ಭಕ್ತರು ಇಲ್ಲಿ ಬಂದು ಬಿಡಾರ ಹೂಡಿ ದೇವಿಯನ್ನು ಪೂಜಿಸುತ್ತಾರೆ. ಬನಶಂಕರಿ ನವದುರ್ಗೆಯರ 6ನೇ ಅವತಾರವಾಗಿದೆ.
ಬನಶಂಕರಿ ಬೆಂಗಳೂರಿನಿಂದ 425 ಕಿಲೋ ಮೀಟರ್ ದೂರದಲ್ಲಿದೆ.
ಕರ್ನಾಟಕ ಶಿಲ್ಪಕಲೆಗಳ ತವರು. ಸೋಮನಾಥಪುರ, ಬೇಲೂರು ಹಳೆಬೀಡಿನ ದೇವಾಲಯಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ. ಬೇಲೂರು ಹಳೇಬೀಡಿನ ದೇವಾಲಯಗಳ ಸೂಕ್ಷ್ಮ ಕಲಾ ಶ್ರೀಮಂತಿಕೆಯನ್ನೇ ತಮ್ಮಲ್ಲೂ ಅಡಗಿಸಿಕೊಂಡ ನೂರಾರು ದೇವಾಲಯಗಳು ಕರ್ನಾಟಕದಲ್ಲಿವೆ. ಆದರೆ ಅವುಗಳಲ್ಲಿ ಬಹಳಷ್ಟು ದೇವಾಲಯಗಳು ಹೆಚ್ಚಿನ ಪ್ರವಾಸಿಗರ ಗಮನಕ್ಕೆ ಬಾರದೆ ಎಲೆಮರೆಯ ಕಾಯಿಯಂತೆ, ವನಸುಮದಂತಿವೆ. ಇಂಥ ಶಿಲ್ಪಕಲಾವೈಭವವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಹೆಚ್ಚು ಜನರ ಗಮನಕ್ಕೆ ಬಾರದ ತಾಣವೇ ತುರುವೇಕೆರೆ, ಬಾಣಸಂದ್ರ ಬಳಿ ಇರುವ ತಿಪಟೂರು ತಾಲೂಕಿಗೆ ಸೇರಿದ ಅರಳುಗುಪ್ಪೆ.
ಅರಳುಗುಪ್ಪೆಯಲ್ಲಿರುವ ಕೇಶವ ದೇವಾಲಯ ಬೇಲೂರು ದೇವಾಲಯಗಳಷ್ಟು ದೊಡ್ಡದಲ್ಲದಿದ್ದರೂ ಶಿಲ್ಪಕಲಾವೈಭವದಲ್ಲಿ ಬೇಲೂರಿಗೇನೂ ಕಡಿಮೆ ಇಲ್ಲ.ಅರಳುಗುಪ್ಪೆ ಒಂದು ಪುಟ್ಟ ಗ್ರಾಮ. ಇಲ್ಲಿ 13ನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಿದ ಸುಂದರ ದೇವಾಲಯವಿದೆ. ಹೊನ್ನೊಜನನೆಂಬ ಶಿಲ್ಪಿ ಈ ದೇವಾಲಯ ನಿರ್ಮಾಣದ ರೂವಾರಿ ಎನ್ನುತ್ತದೆ ಇತಿಹಾಸ.
ಈ ದೇವಾಲಯದ ಒಂದೊಂದೂ ಭಿತ್ತಿಯೂ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಕಣ್ಮನ ಸೆಳೆಯುತ್ತವೆ. ವಿಷ್ಣುವಿನ ದಶಾವತಾರದ ಕೆತ್ತನೆಗಳು ಇಲ್ಲಿವೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ದೇವಾಲಯವನ್ನು ಪ್ರಮುಖ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದ್ದರೂ ಸೂಕ್ತ, ಸಂರಕ್ಷಣೆ ಇಲ್ಲದ ಕಾರಣ ಸುಂದರ ವಿಗ್ರಹಗಳ ಮುಖ ವಿರೂಪಗೊಂಡಿದೆ. ತುಂಟು ಹುಡುಗರು ಕಲ್ಲಿನಿಂದ ಅತ್ಯಂತ ಮನೋಹರವಾದ ಶಿಲ್ಪಗಳ ಮುಖವನ್ನು ಜಜ್ಜಿ ಹಾಳು ಮಾಡಿದ್ದಾರೆ.
ಹಿಂಬದಿಯಲ್ಲಿರುವ ಗೋಪುರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೋಮನಾಥಪುರದಲ್ಲಿಯೇ ನಾವಿದ್ದೇವೇನೋ ಎಂಬ ಭ್ರಮೆ ಮೂಡುತ್ತದೆ. ಏಕಕೂಟದ ಈ ದೇವಾಲಯಕ್ಕೆ ಪೂರ್ವದಿಂದ ಪ್ರವೇಶದ್ವಾರವಿದೆ. ನಕ್ಷತ್ರಾಕಾರದ ಜಗತಿಯ ಮೇಲೆ ನಿಂತಿರುವ ದೇವಾಲಯದಲ್ಲಿ ಎಲ್ಲ ದೇವಾಲಯಗಳಂತೆ ಇಲ್ಲಿಯೂ ಗರ್ಭಗುಡಿ, ಸುಕನಾಸಿ, ನವರಂಗಗಳಿವೆ. ದೇವಾಲಯದ ಒಳ ಭಾಗದಲ್ಲಿ 9 ಸೂಕ್ಷ್ಮ ಕೆತ್ತನೆಯಿಂದ ಕೂಡಿದ ಕಂಬಗಳಿದ್ದು, ತೂಗಾಡುವ ಹೂಮೊಗ್ಗನ್ನು ಶಿಲ್ಪಿ ಅತ್ಯಂತ ಕಲಾತ್ಮಕವಾಗಿ ಕೆತ್ತಿದ್ದಾನೆ. ಗರ್ಭಗುಡಿಯಲ್ಲಿ ಅತ್ಯಂತ ಮನಮೋಹಕವಾದ ಕೇಶವನ ವಿಗ್ರಹವಿದೆ.
ರಾಮಾಯಣದ ಕಥಾನಕಗಳನ್ನು ಶಿಲ್ಪಿ ಪೂರ್ವದ ಭಿತ್ತಿಯಲ್ಲಿ ಚಿತ್ರಿಸಿದ್ದಾನೆ. ಇಲ್ಲಿರುವ ಪಟ್ಟಿಕೆಗಳಲ್ಲಿ ಕಾಲ್ಪನಿಕ ಮೃಗ, ಮಕರ, ಹಂಸ, ಆನೆ, ಕುದುರೆಗಳ ಶಿಲ್ಪಗಳಿವೆ. ಇಂದು ಸರಕು ಸಾಗಣೆಗೆ ಅತ್ಯಗತ್ಯ ಹಾಗೂ ಅವಶ್ಯಕವಾದ ಲಾರಿಯ ಕಲ್ಪನೆ ನಮ್ಮ ಪೂರ್ವಕರಿಗೆ ಬಹಳ ಹಿಂದೆಯೇ ಇತ್ತೆಂಬುದು ಇಲ್ಲಿನ ಭಿತ್ತಿಯಲ್ಲಿರುವ ಕುದುರೆಗಳು ಎಳೆಯುತ್ತಿರುವ ನಾಲ್ಕು ಚಕ್ರದ ಉದ್ದದ ಸರಕು ಸಾಗಣೆ ಶಿಲ್ಪದಿಂದ ವೇದ್ಯವಾಗುತ್ತದೆ.
ದೇವಾಲಯದ ಎಲ್ಲ ಭಿತ್ತಿಗಳೂ ಕಲಾನೈಪುಣ್ಯತೆಗೆ ಸಾಕ್ಷಿಯಾಗಿದ್ದು, ಹಿರಣ್ಯಕಶುಪಿವಿನ ಕರುಳು ಬಗೆದು ಮಾಲೆ ಹಾಕಿಕೊಳ್ಳುತ್ತಿರುವ ಉಗ್ರನರಸಿಂಹನ ಕೆತ್ತನೆಯಂತೂ ಮನಮೋಹಕವಾಗಿದೆ. ಬಾಲಕೃಷ್ಣನ ಲೀಲೆಗಳು, ಯಕ್ಷ, ಕಿನ್ನರ, ಗಾಂಧರ್ವರ ಕೆತ್ತನೆಗಳು, ನಾಟ್ಯ ಗಣಪ, ಲಕ್ಷ್ಮಿ ಹಾಗೂ 6ಭುಜಗಳ ಸರಸ್ವತಿಯ ಮೂರ್ತಿಗಳು ಮನಸೂರೆಗೊಳ್ಳುತ್ತವೆ. ಶಿಲ್ಪಿ ಇಲ್ಲಿ ನವರಸಗಳನ್ನು ತನ್ನ ಶಿಲ್ಪದಲ್ಲಿ ಒಡಮೂಡಿಸಿದ್ದಾನೆ.
ಇಷ್ಟೆಲ್ಲಾ ಕಲಾ ವೈಭವವಿದ್ದರೂ ಈ ದೇವಾಲಯ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗದಿರುವುದು ದುರ್ದೈವವೇ ಸರಿ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಈ ಊರಿಗೆ ತಲುಪಲು ರಸ್ತೆ ಸಂಪರ್ಕವೂ ಚೆನ್ನಾಗಿಲ್ಲ. ಈ ದೇವಾಲಯವೇನಾದರೂ ಬೇಲೂರು, ಹಳೆಬೀಡು, ಶ್ರವಣಬೆಳಗೊಳದ ಸುತ್ತಮುತ್ತ ಇದ್ದಿದ್ದರೆ ಇದರ ಸ್ವರೂಪವೇ ಬದಲಾಗುತ್ತಿತ್ತು.
ಹೋಗುವುದು ಹೇಗೆ ಅರಳುಗುಪ್ಪೆಗೆ ಹೋಗಬೇಕೆಂದರೆ ರೈಲು ಪ್ರಯಾಣವೇ ಸೂಕ್ತ. ಬೆಂಗಳೂರು ಶಿವಮೊಗ್ಗ ಪ್ಯಾಸೆಂಜರ್ ರೈಲು ಅರಳುಗುಪ್ಪೆಯಲ್ಲಿ ನಿಲ್ಲುತ್ತದೆ. ಬೆಂಗಳೂರಿನಿಂದ ಬೆಳಗ್ಗೆ 6-30ಕ್ಕೆ ಹೊರಡುತ್ತದೆ. ಬೆಂಗಳೂರು ತಿಪಟೂರು ನಡುವೆ ಕಿಬ್ಬನಹಳ್ಳಿ (ಕೆ.ಬಿ) ಕ್ರಾಸ್ ನಲ್ಲಿ ಇಳಿದು, ಆಟೋ ಮಾಡಿಕೊಂಡು ಅರಳುಗುಪ್ಪೆಗೆ ಹೋಗಬಹುದು.
ಶಿಲಾವೈಭವದಿಂದ ಮನಸೆಳೆವ ಪಟ್ಟದಕಲ್ಲು
ಬಾದಾಮಿಯ ಚಾಳುಕ್ಯರ ಕಲಾರಾಧನೆಗೆ ಸಾಕ್ಷಿಯಾಗಿ ನಿಂತಿರುವ ಶಿಲ್ಪಕಲಾ ಶ್ರೀಮಂತಿಕೆಯ ನಗರಿ ಪಟ್ಟದಕಲ್ಲು. ಬಾದಾಮಿಯಿಂದ ಕೇವಲ 22 ಕಿ.ಮೀ. ದೂರದಲ್ಲಿರುವ ಪಟ್ಟದಕಲ್ಲು ವಿಶ್ವ ಪರಂಪರೆಯ ತಾಣವೂ ಹೌದು.
ಮಲಪ್ರಭ ನದಿಯ ದಂಡೆಯಲ್ಲಿರುವ ಈ ತಾಣ ಪ್ರಾಗೈತಿಹಾಸಿಕ ಕಾಲದಿಂದಲೂ ಜನವಸತಿಯ ಸ್ಥಳವಾಗಿತ್ತು ಎಂದು ಸಂಶೋಧನೆಗಳಿಂದ ಸ್ಥಿರಪಟ್ಟಿದೆ. ಬಹು ಪುರಾತನವಾದ ಈ ಊರು ಶಿಲಾಯುಗದೊಂದಿಗೂ ತನ್ನ ನಂಟು ಇಟ್ಟುಕೊಂಡಿದೆ. ಇಲ್ಲಿ ಹಳೆಯ ಶಿಲಾಯುಗದ ಶಿಲಾಯುಧಗಳೂ, ಕಲ್ಗೋರಿಗಳೂ ದೊರೆತಿದ್ದು ಪ್ರಾಗೈತಿಹಾಸಿಕ ಸಂಶೋಧನೆಗೆ ಆಕರ ಸ್ಥಳವಾಗಿದೆ.
ಈ ಪ್ರದೇಶ ಸಂಪೂರ್ಣವಾಗಿ ಕೆಂಪು ಶಿಲೆಗಳಿಂದ ಕೂಡಿರುವ ಕಾರಣ ಇದಕ್ಕೆ ಕಿಸುವೊಳಲ್ ಎಂದು ಹೆಸರಿತ್ತು. ಚಾಳುಕ್ಯರು ಇಲ್ಲಿ ತಮ್ಮ ಪಟ್ಟಬಂಧ ಮಹೋತ್ಸವ ಆಚರಿಸಿಕೊಂಡಿದ್ದರಿಂದ ಇದಕ್ಕೆ ಪಟ್ಟದ ಕಿಸುವೊಳಲ್ ಎಂದು ಹೆಸರಾಯ್ತು ಇದು ಶಾಸನಗಳಲ್ಲೂ ದಾಖಲಾಗಿದೆ. ಕಾಲಾನಂತರ ಇದು ಪಟ್ಟದ ಕಲ್ಲು ಎಂದು ಖ್ಯಾತವಾಯ್ತು. ಇಲ್ಲಿ ಮಲಪ್ರಭೆ ಉತ್ತರ ಮುಖವಾಗಿ ಹರಿಯುವ ಕಾರಣ ಇದು ಒಂದು ಪವಿತ್ರ ಕ್ಷೇತ್ರ ಎನಿಸಿದೆ. ಇದಕ್ಕೆ ದಕ್ಷಿಣ ಕಾಶಿ ಎಂಬ ಹೆಸರೂ ಇದೆ. ಚಾಳುಕ್ಯರ ಕಾಲದಲ್ಲಿ ಇಲ್ಲಿ ಭವ್ಯ ಶಿಲಾವೈಭವದ ದೇವಾಲಯಗಳು ನಿರ್ಮಾಣವಾದ ಹಿನ್ನೆಲೆಯಲ್ಲಿ ಇಂದು ಇದೊಂದು ಪಾರಂಪರಿಕ ಹಾಗೂ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.
ಇತಿಹಾಸ ಅಧ್ಯಯನಿಗಳಿಗೆ ಸಂಶೋಧನಾ ಸ್ಥಳವಾಗಿ, ಯಾತ್ರಿಕರಿಗೆ ಪುಣ್ಯಕ್ಷೇತ್ರವಾಗಿ, ಪ್ರವಾಸಿಗರಿಗೆ ಪ್ರವಾಸಿ ತಾಣವಾಗಿ ಇಂದಿಗೂ ಪಟ್ಟದಕಲ್ಲು ತನ್ನ ಮಹತ್ವ ಉಳಿಸಿಕೊಂಡಿದೆ. ಇಲ್ಲಿ ಒಂಬತ್ತು ಶೈವ ದೇಗುಲ, ಒಂದು ಜಿನಾಲಯ ಇದೆ. ಈ ದೇಗುಲಗಳ ಪೈಕಿ ರಾಣಿ ಲೋಕಮಹಾದೇವಿ ಕಟ್ಟಿಸಿದ ವಿರೂಪಾಕ್ಷ ದೇವಾಲಯ ಅತ್ಯಂತ ಸುಂದರವಾಗಿದ್ದು, ವಿಶಾಲವಾಗಿದೆ. ಬಾದಾಮಿಯ ಚಾಳುಕ್ಯರ ಕಾಲದ ದೇವಾಲಯಗಳ ಪೈಕಿ ಇದು ಅತ್ಯಂತ ದೊಡ್ಡದು ಎಂದು ಹೇಳಲಾಗುತ್ತದೆ. ಇಲ್ಲಿನ ಭಿತ್ತಿಗಳಲ್ಲಿ (ಗೋಡೆ) ಪುರಾಣದ ಕತೆಗಳನ್ನಾಧರಿಸಿದ ಸುಂದರ ಶಿಲ್ಪಕಲಾ ಕೆತ್ತನೆಗಳಿವೆ. ರಾಣಿ ತ್ರೈಲೋಕ್ಯ ಮಹಾದೇವಿ ಕಟ್ಟಿಸಿದ ಮಲ್ಲಿಕಾರ್ಜುನ ದೇವಾಲಯ ಇದೇ ಆವರಣದಲ್ಲಿದ್ದು ಅದೂ ಸಹ ಶಿಲ್ಪಕಲಾಶ್ರೀಮಂತಿಕೆಯಿಂದ ಕೂಡಿದೆ. ಆದರೆ ಹಲವು ಶಿಲ್ಪಗಳು ಭಗ್ನಗೊಂಡಿವೆ. ಗಳಗನಾಥ ದೇವಾಲಯ ನೋಡಲು ಸುಂದರವಾಗಿದ್ದು, ಇಲ್ಲಿನ ದಕ್ಷಿಣ ಭಾಗದಲ್ಲಿರುವ ಮಂಟಪದಲ್ಲಿ ಭಗ್ನವಾಗಿರುವ ಎಂಟು ಕೈಗಳುಳ್ಳ ಅಂಧಕಾಸುರಾಂತಕ (ಶಿವ)ನ ಮೂರ್ತಿಯಿದೆ. ಇಷ್ಟು ಸುಂದರವಾದ ಮೂರ್ತಿ ಭಗ್ನವಾಗಿರುವುದನ್ನು ಕಂಡಾಗ ಮನ ಕಲಕುತ್ತದೆ. ಗರ್ಭಗುಡಿಯ ವಿಭಾಗಗಳ ಪಟ್ಟಿಕೆಗಳಲ್ಲಿ ಕುಸ್ತಿಯಾಟ, ಗಂಡಭೇರುಂಡ, ಕೋತಿ ಮರಕ್ಕೆ ಸಿಕ್ಕಿಸಿದ ಬೆಣೆ ಕಿತ್ತು ಬಾಲ ಸಿಕ್ಕಿಸಿಕೊಂಡ ಪ್ರಸಂಗವನ್ನೂ ಕೆತ್ತಲಾಗಿದೆ. ಸಂಗಮೇಶ್ವರ, ಪಾಪನಾಥ ದೇವಾಲಯಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಈ ದೇಗುಲಗಳಲ್ಲಿರುವ ವಾಸ್ತು ಶಿಲ್ಪ , ಛಾವಣಿಯ ಒಳ ಶಿಲ್ಪಗಳು ಮನಸೂರೆಗೊಳ್ಳುತ್ತದೆ.
8ನೇ ಶತಮಾನದ ಜಂಭುಲಿಂಗ, ಕಾಡಸಿದ್ಧೇಶ್ವರ ದೇವಾಲಯಗಳು ಇಲ್ಲಿನ ಪ್ರಮುಖ ದೇವಾಲಯಗಳಾಗಿವೆ. ಕ್ರಿ.ಶ.696-733ರ ಅವಧಿಯಲ್ಲಿ ದೊರೆ ವಿಜಯಾದಿತ್ಯನ ಕಾಲದಲ್ಲಿ ಸಂಗಮೇಶ್ವರ ದೇವಾಲಯ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತದೆ. ಇಲ್ಲಿನ ಪಂಪಾನಾಥ ದೇವಾಲಯದಲ್ಲಿ ಕಲಾತ್ಮಕವಾದ 16 ಕಂಬಗಳ ಸಭಾಂಗಣವಿದ್ದು ಇದು ಈ ಕ್ಷೇತ್ರದ ಅತ್ಯಂತ ಪ್ರಮುಖ ತಾಣವಾಗಿದೆ.
ದ್ರಾವಿಡ, ನಾಗರಶೈಲಿಯ ದೇವಾಲಯಗಳನ್ನು ಹಾಗೂ ಅವುಗಳಲ್ಲಿರುವ ಅನುಪಮ ಸೌಂದರ್ಯವನ್ನು ಒಂದೇ ಸ್ಥಳದಲ್ಲೇ ಕಾಣಬೇಕೆಂದರೆ, ಕರ್ನಾಟಕದಲ್ಲಿ ವಾಸ್ತುಶಿಲ್ಪ ಬೆಳೆದ ಬಗೆಯ ಬಗ್ಗೆ ಅಧ್ಯಯನ ಮಾಡಬೇಕಾದರೆ ಪಟ್ಟದಕಲ್ಲಿಗೇ ಹೋಗಬೇಕು. ಬೆಂಗಳೂರಿನಿಂದ 480, ಬಾಗಲಕೋಟೆಯಿಂದ 40 ಹಾಗೂ ಬಿಜಾಪುರದಿಂದ ಪಟ್ಟದ ಕಲ್ಲಿಗೆ 134 ಕಿಲೋ ಮೀಟರ್.
ಗಂಗ, ಕದಂಬ, ಹೊಯ್ಸಳ, ಚಾಲುಕ್ಯ, ವಿಜಯನಗರದರಸರು, ಮೈಸೂರು ಒಡೆಯರು, ರಾಷ್ಟ್ರಕೂಟರಾಳಿದ ಕರುನಾಡು ಕಲೆಗಳ ಬೀಡು. ಬಹುತೇಕ ಎಲ್ಲ ಅರಸು ಮನೆತನದವರೂ ತಮ್ಮ ತಮ್ಮ ರಾಜ್ಯದಲ್ಲಿ ಭವ್ಯ ದೇವಾಲಯಗಳನ್ನು ನಿರ್ಮಿಸಿ ತಾವು ಕಲೋಪಾಸಕರು ಎಂಬುದನ್ನು ಸಾಬೀತು ಮಾಡಿದ್ದಾರೆ. ಇದರ ಫಲವಾಗಿಯೇ ಇಂದಿಗೂ ಶಿಲ್ಪಕಲಾ ಕ್ಷೇತ್ರದಲ್ಲಿ ಕರ್ನಾಟಕ ವಿಶ್ವಭೂಪಟದಲ್ಲಿ ಶಾಶ್ವತ ಸ್ಥಾನ ಪಡೆದಿದೆ.
ಕರುನಾಡ ಶಿಲ್ಪಕಲಾವೈಭವಕ್ಕೆ ಚಾಲುಕ್ಯರ ಕೊಡುಗೆ ಅಪಾರ. ಹೊಯ್ಸಳರ ಬೇಲೂರು -ಹಳೇಬೀಡಿನಂತೆಯೇ ವಾಸ್ತು ವೈಭವ, ಕಲಾಶ್ರೀಮಂತಿಕೆಯನ್ನು ಚಾಲುಕ್ಯರ ರಾಜಧಾನಿ ಬಾದಾಮಿ, ಸನಿಹದಲ್ಲೇ ಇರುವ ಬನಶಂಕರಿ,ಐಹೊಳೆ, ಪಟ್ಟದಕಲ್ಲುಗಳ ದೇವಾಲಯದಲ್ಲಿಯೂ ಕಾಣಬಹುದು.
ಬಾದಾಮಿ: ಬಾದಾಮಿ ಇತಿಹಾಸ ಪ್ರಸಿದ್ಧವಾದ ಪ್ರಾಚೀನ ಸ್ಥಳ. ಇದಕ್ಕೆ ವಾತಾಪಿ ಎಂಬ ಹೆಸರಿತ್ತು. 6ನೇ ಶತಮಾನದಿಂದ 8ನೇ ಶತಮಾನದ ಅವಧಿಯಲ್ಲಿ ಕರುನಾಡನ್ನಾಳಿದ ಹೆಮ್ಮೆಯ ಕಲ್ಯಾಣದ ಚಾಲುಕ್ಯರು ಈ ಊರನ್ನು ಅಭಿವೃದ್ಧಿಪಡಿಸಿ ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು. ಈ ಅರಸರು ಇಲ್ಲಿ ಹೆಬ್ಬಂಡೆಗಳನ್ನು ಕೊರೆದು ಗುಹಾಂತರ ದೇವಾಲಯಗಳನ್ನು ನಿರ್ಮಿಸಿದರು. ಈ ಗುಹಾಂತರ ದೇವಾಲಯಗಳಲ್ಲಿ ಇರುವ ಚಿತ್ರಕಲೆಗಳು ಬಾದಾಮಿ ಚಾಲುಕ್ಯರ ಕಲಾರಾಧನೆ ಹಾಗೂ ಸೌಂದರ್ಯ ಪ್ರeಗೆ ಹಿಡಿದ ಕೈಗನ್ನಡಿಯಾಗಿ ಇಂದು ಪ್ರವಾಸಿ ತಾಣಗಳ ಪೈಕಿ ಪ್ರಮುಖವಾಗಿದೆ. ಎರಡು ಬೃಹತ್ ಪರ್ವತಗಳ ಕಡಿದಾದ ಕಣಿವೆ ಪ್ರದೇಶದಲ್ಲಿರುವ ಗುಹಾಂತರ್ಗತ ದೇಗುಲಗಳು ಕೆಂಪು ಶಿಲೆಗಳಿಂದ ನಿರ್ಮಿತವಾಗಿದ್ದು ನಯನ ಮನೋಹರವಾಗಿವೆ. ಆದರೆ ಈ ಕಲಾ ವೈಭವವನ್ನು ಕಣ್ತುಂಬಿಕೊಳ್ಳಲು ಮೆಟ್ಟಿಲುಗಳೇರಿ ಮೇಲೆ ಹೋಗುಬೇಕು ಅಷ್ಟೇ.
ಇತಿಹಾಸ: ಚಾಲುಕ್ಯರು ತಮ್ಮ ಸಾಮ್ರಾಜ್ಯವನ್ನು ಕಟ್ಟಿ, ಬಾದಾಮಿಯನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳುವ ಮೊದಲೇ ಇದು ಒಂದು ಪ್ರಸಿದ್ಧ ವಾಣಿಜ್ಯ ಕೇಂದ್ರವಾಗಿತ್ತು ಎಂಬುದು ಗ್ರೀಕ್ ಭೂಗೋಳಕಾರ ಟಾಲೆಮಿ ಉಲ್ಲೇಖದಿಂದ ತಿಳಿದುಬರುತ್ತದೆ. ಇದಕ್ಕೆ ಪೂರಕವಾಗಿ ಸರೋವರದ ಉತ್ತರ ಭಾಗದಲ್ಲಿ ಕಿ.ಪೂ. ೩ನೇ ಶತಮಾನಕ್ಕೆ ಸೇರಿದ ಮಣ್ಣಿನ ಪಾತ್ರೆಗಳು, ಕಟ್ಟಡ ಅವಶೇಷಗಳು ದೊರೆತಿವೆ.
ಬಾಗಲಕೋಟೆಯಿಂದ 35 ಕಿ.ಮೀ. ದೂರದಲ್ಲಿರುವ ಬಾದಾಮಿಯ ಮಾಲಗಿತ್ತಿ ದೇವಾಲಯ, ಶಿವಾಲಯ ಹಾಗೂ ಮೇಣಬಸದಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಎರಡು ಬಳಪದ ಕಲ್ಲಿನ ಬೆಟ್ಟಗಳ ನಡುವಿನ ಕಂದಕಗಳ ನಡುವೆ ಇರುವ ಬಾದಾಮಿಯಲ್ಲಿ ಶೈವ ಗುಹಾಲಯ, ವೈಷ್ಣವ ಗುಹಾಲಯ, ವಿಷ್ಣುಗುಹೆ ಹಾಗೂ ಜೈನಗುಹೆಗಳು ತುಂಬಾ ಪ್ರಸಿದ್ಧವಾಗಿವೆ. ವಿವಿಧ ನೃತ್ಯಭಂಗಿಯಲ್ಲಿರುವ ಶಿಲ್ಪಕಲಾ ಕೆತ್ತನೆಗಳು ಮನಸೆಳೆಯುತ್ತವೆ. ಮೇಣಬಸದಿಯಲ್ಲಿ ನಾಲ್ಕು ಲಯಣಗಳಿದ್ದು, ಒಂದನೆ ಲಯಣದಲ್ಲಿರುವ ಅರ್ಧನಾರೀಶ್ವರ, ಚಾವಣಿಯ ಗಂಧರ್ವ ದಂಪತಿ, ಎರಡನೇ ಲಯಣದ ಚಾವಣಿಯ ಅಲಂಕರಣ, ಮೂರನೇ ಲಯಣದ ಶೇಷಶಾಯಿ ವಿಷ್ಣು ಪ್ರಮುಖವಾದ ಶಿಲ್ಪಗಳು. ಶೇಷಶಾಯಿ ವಿಷ್ಣುವನ್ನು ಪಾರ್ಶ್ವನಾಥನ ವಿಗ್ರಹ ಎಂದೂ ಸಂಶೋಧಕರು ಹೇಳುತ್ತಾರೆ. ಕಲ್ಲನ್ನು ಕೊರೆದು ನಿರ್ಮಿಸಿದ ಬೃಹತ್ ಶಿವಲಿಂಗ... ಹೀಗೆ ಹಲವು ಮನೋಹರ ಕೆತ್ತನೆಗಳು ಈ ಗುಹಾಲಯಗಳಲ್ಲಿವೆ. ವೈಷ್ಣವ ಲಯಣದ ಮಧ್ಯೆ ನೈಸರ್ಗಿಕ ಗುಹೆಯೂ ಇದೆ. ಇಲ್ಲಿ ಬೋಸತ್ವ, ಪದ್ಮಪಾಣಿಯ ಉಬ್ಬುಶಿಲ್ಪಗಳಿವೆ. ಮೂರನೇ ಲಯಣದಲ್ಲಿ ವಿಷ್ಣು, ಭೂವರಹ, ನರಸಿಂಹ, ಹರಿಹರ, ಬ್ರಹ್ಮ, ವಿಷ್ಣು, ಶಿವ, ಸಮುದ್ರ ಮಥನ, ಕೃಷ್ಣಲೀಲೆ ಮೊದಲಾದ ಚಿತ್ರ ಪಟ್ಟಿಕೆಗಳು ಪುರಾಣದ ಕಥೆಗಳನ್ನೇ ಹೇಳುತ್ತಾ ನಿಂತಿವೆ.
ಸಾಲು ಭಂಜಿಕೆಗಳಿಂದ ರಮಣೀಯವಾಗಿರುವ ದೇವಾಲಯಗಳ 3ನೇ ಗುಹೆಯಲ್ಲಿರುವ ವಹಾವಿಷ್ಣುವಿನ ವಿಗ್ರಹ ಅತ್ಯಂತ ಮನೋಹರವಾದ ಬೃಹತ್ ಶಿಲ್ಪವಾದರೆ, ಮೊದಲ ಗುಹೆಯಲ್ಲಿರುವ 18 ಬಾಹುಗಳ ನಟರಾಜ ಶಿಲ್ಪ ನಯನ ಮನೋಹರವಾಗಿದೆ.
ಭೂತನಾಥನ ಕೆರೆ, ನದಿತಟದಲ್ಲಿರುವ ಶಿವ, ವಿಷ್ಣು ದೇವಾಲಯ, ಭೂತನಾಥನ ದೇವಾಲಯಗಳು ರುದ್ರ ರಮಣೀಯವಾಗಿವೆ. ಬದಾಮಿಯ ಉತ್ತರ ಬೆಟ್ಟದಲ್ಲಿ ಬಾವನ್ ಬಂಡೆ ಕೋಟೆ ಹಾಗೂ ದಕ್ಷಿಣದಲ್ಲಿ ರಣಮಂಡಲ ಕೋಟೆ ಇದೆ. ರಾಷ್ಟ್ರಕೂಟರು, ವಿಜಯನಗರದರಸರು ಮತ್ತು ಟಿಪ್ಪೂಸುಲ್ತಾನರ ಕಾಲದಲ್ಲಿ ಈ ಕೋಟೆ ವಿಸ್ತರಿಸಿದ ಎನ್ನುತ್ತದೆ ಇತಿಹಾಸ.
ಕಲೋಪಾಸಕರಿಗೆ ರಮಣೀಯ ತಾಣವಾಗಿ, ಶಾಸನಾಧ್ಯಯನಿಗಳಿಗೆ ಆಕರವಾಗಿ, ಆಸ್ತಿಕರಿಗೆ ಪುಣ್ಯಕ್ಷೇತ್ರವಾಗಿರುವ ಬಾದಾಮಿ ಕರುನಾಡ ಇತಿಹಾಸದಲ್ಲಿ ಶ್ರೇಷ್ಠ ಸ್ಥಾನ ಪಡೆದಿದೆ. ಬೆಂಗಳೂರಿನಿಂದ ಬಾದಾಮಿಗೆ 420 ಕಿಲೋ ಮೀಟರ್.
ಭಾರತೀಯ ದೇವಾಲಯಗಳ ಪೈಕಿ ವಾಸ್ತು ಶಿಲ್ಪದ ತವರು ಎಂದೇ ಖ್ಯಾತವಾದ್ದು ಐಹೊಳೆ. ಬಾದಾಮಿ ಚಾಳುಕ್ಯರ ಕಾಲದಲ್ಲಿ ವೈಭವೋಪೇತವಾಗಿ ಮೆರೆದ ಈ ಗ್ರಾಮ ಇಂದು ವಿಶ್ವವಿಖ್ಯಾತವಾಗಲು ಇಲ್ಲಿನ ಕೋಟೆಯ ಒಳಗೆ ಹಾಗೂ ಹೊರಗೆ ಹರಡಿಕೊಂಡಿರುವ ಶಿಲ್ಪಕಲಾಶ್ರೀಮಂತಿಕೆಯ 125ಕ್ಕೂ ಹೆಚ್ಚು ಚಿಕ್ಕ ದೊಡ್ಡ ದೇವಾಲಯಗಳೇ ಕಾರಣ. ಹೀಗಾಗೆ ಈ ಊರನ್ನು ಹಿಂದೂ ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲೆಂದೇ ಕರೆಯುತ್ತಾರೆ.
ಇತಿಹಾಸ: ಮಲಪ್ರಭಾ ನದಿಯ ಬಲದಂಡೆಯ ಮೇಲೆ ಪ್ರಶಾಂತವಾಗಿ ಮಲಗಿರುವಂತೆ ತೋರುವ ನಿಸರ್ಗ ರಮಣೀಯ ತಾಣಕ್ಕೆ ಹಿಂದೆ ಅಯ್ಯೋಹೊಳೆ ಎಂದು ಹೆಸರಿತ್ತಂತೆ. ಅಯ್ಯ ಅಥವಾ ಅಯ್ಯನೋರು ಎಂದರೆ ಗುರುಗಳು, ಪಂಡಿತರು ಎಂದು ಅರ್ಥ. ಈ ಊರು ವಿದ್ಯಾಕೇಂದ್ರವಾಗಿ ಅಯ್ಯಗಳಿಂದ ತುಂಬಿದ್ದ ಕಾರಣ ಇದಕ್ಕೆ ಆ ಹೆಸರು ಬಂದಿತ್ತೆಂಬ ವಾದವಿದೆ. ಮತ್ತೊಂದು ಕಥೆಯ ರೀತ್ಯ ಕ್ಷತ್ರಿಯರ ರುಂಡ ಚೆಂಡಾಡಿದ ಪರಶುರಾಮ ಮಲಪ್ರಭೆಯ ಹೊಳೆಯಲ್ಲಿ ತನ್ನ ಪರಶುವನ್ನು ತೊಳೆದಾಗ ಇಡೀ ನದಿ ನೀರು ಕೆಂಪಾಯಿತು. ಮುಂಜಾನೆ ಈ ನೀರು ಕಂಡ ಮಹಿಳೆಯರು ಅಯ್ಯಯ್ಯೋ ಹೊಳೆ ಎಂದು ಉದ್ಗರಿಸಿದರು. ಹೀಗಾಗೆ ಈ ಊರು ಐಹೊಳೆಯಾಯ್ತು.
ಐಹೊಳೆ ಅತ್ಯಂತ ಪ್ರಾಚೀನ ಗ್ರಾಮ. ಇಲ್ಲಿ ಕ್ರಿ.ಪೂ. 6-7ನೇನೇ ಶತಮಾನದಲ್ಲಿ ಅಂದರೆ ಕಬ್ಬಿಣದ ಯುಗದಲ್ಲೇ ಇಲ್ಲಿ ಜನವಸತಿ ಇತ್ತೆಂದು ಪ್ರಾಗೈತಿಹಾಸಿಕ ಸಂಶೋಧಕರು ಅಂದಾಜು ಮಾಡಿದ್ದಾರೆ. ಇಲ್ಲಿ ಉಸಗು ಕಲ್ಲಿನಿಂದ ಮತ್ತು ಕತ್ತರಿಸಿದ ಬಂಡೆಗಳನ್ನು ಗಾರೆ, ಮಣ್ಣಿನ ನೆರವಿಲ್ಲದೆ ಒಂದರ ಮೇಲೊಂದು ಇಟ್ಟು ನಿರ್ಮಿಸಿದ ಕೋಟೆಯಿದೆ. ಇದನ್ನು ಸುಮಾರು ಕ್ರಿ.ಶ. 6ನೇ ಶತಮಾನದಲ್ಲಿ ನಿರ್ಮಿಸಿರಬಹುದು ಎಂದು ಹೇಳಲಾಗಿದ್ದು ಕರ್ನಾಟಕದಲ್ಲಿ ಉಳಿದಿರುವ ಶಿಲಾಕೋಟೆಗಳ ಪೈಕಿ ಇದು ಅತ್ಯಂತ ಪ್ರಾಚೀನವಾದ್ದಾಗಿದೆ. ಕೋಟೆಯ ಸುತ್ತ ಕಂದಕ ಇರುವುದನ್ನು ಈಗಲೂ ಗುರುತಿಸಬಹುದಾಗಿದ್ದು, ಕೋಟೆಯ ಅವಶೇಷಗಳನ್ನು ಕಾಣಬಹುದು.
ವಾಸ್ತುಶಿಲ್ಪ: ಐಹೊಳೆಯ ಕೋಟೆಯನ್ನು ಉತ್ತರ ರಸ್ತೆಯಿಂದ ಪ್ರವೇಶಿಸುತ್ತಿದ್ದಂತೆಯೇ ಕಾಣುವ ಕ್ರಿಸ್ತ ಶಕ 5ನೇ ಶತಮಾನದಲ್ಲಿ ನಿರ್ಮಿಸಲಾಗಿರುವ ಸುಂದರ ಹಾಗೂ ಮನಮೋಹಕ ಕೆತ್ತನೆಗಳಿಂದ ಕಂಗೊಳಿಸುವ ದುರ್ಗೆಯ ಮಂದಿರ ಮನಸೆಳೆಯುತ್ತದೆ.
ದೇವಾಲಯದ ಮುಖಮಂಟಪದ ಭಿತ್ತಿಯ ಅಡ್ಡಪಟ್ಟಿಕೆಗಳಲ್ಲಿ ರಾಮಲಕ್ಷ್ಮಣ ಸೀತಾಮಾತೆಯನ್ನು ಗುಹ -ನಾವೆಯ ನೆರವಿನಿಂದ ನದಿ ದಾಟಿಸಿದ ಸುಂದರ ಉಬ್ಬುಶಿಲ್ಪವಿದೆ. ಪುರಾಣ, ಪುಣ್ಯಕಥೆಗಳ ಹಲವು ಕಥಾನಕಗಳು ಇಲ್ಲಿವೆ.
ಐಹೊಳೆಯ ದೇವಾಲಯಗಳನ್ನು ಪುರಾತತ್ವ ಸರ್ವೇಕ್ಷಣ ಇಲಾಖೆ 22 ವಿಭಾಗಳಾಗಿ ವಿಂಗಡಿಸಿದೆ. ಇದರಲ್ಲಿ ಹುಚ್ಚಿಮಲ್ಲಿಗುಡಿ, ಲಡಖಾನ್ ಗುಡಿ, ಹುಚ್ಚಪ್ಪಯ್ಯಮಠ, ಗಳಗನಾಥ, ರಾವಲ್ ಪಹಡಿ, ಗುಹಾಂತರ ದೇವಾಲಯ, ಜೈನರ ಮೇಗುತಿ ದೇವಾಲಯ, ಎರಡು ಅಂತಸ್ತಿನ ಜೈನ ದೇವಾಲಯ ಪ್ರಮುಖ ಆಕರ್ಷಣೆ.
ಬೆಂಗಳೂರಿನಿಂದ 460, ಬಿಜಾಪುರದಿಂದ 110 ಹಾಗೂ ಬಾದಾಮಿಯಿಂದ 40 ಕಿ.ಮೀಟರ್ ದೂರದಲ್ಲಿರುವ ಈ ಸುಂದರ ತಾಣ ಕರುನಾಡ ಕಲಾಶ್ರೀಮಂತಿಕೆಗೆ ಸಾಕ್ಷಿಯಾಗಿದೆ.
ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು....ರಾಷ್ಟ್ರಕವಿ ಕುವೆಂಪು ತಮ್ಮ ಭಾವಪೂರ್ಣ ಕವನದ ಒಂದೇ ಒಂದು ಸಾಲಿನಲ್ಲಿ ಕರ್ನಾಟಕದ ಶಿಲ್ಪಕಲೆಗೆ ಸೂಕ್ತ ಗೌರವ ಮನ್ನಣೆ ನೀಡಿದ್ದಾರೆ. ಕರ್ನಾಟಕ ಕಲೆಗಳ ತವರು,ಶಿಲ್ಪಕಲೆಗಳ ಬೀಡು, ಬೇಲೂರು, ಹಳೆಬೀಡು, ಸೋಮನಾಥಪುರಗಳನ್ನು ನೋಡಿದಾಗ ಕುವೆಂಪು ಹೇಳಿದಂತೆ ಪ್ರತಿಯೊಬ್ಬ ಪ್ರವಾಸಿಗನೂ ಶಿಲ್ಪಿಯ ಕಲಾತ್ಮಕತೆಗೆ ತಲೆ ಬಾಗಿಯೇ ಬಾಗುತ್ತಾನೆ.
ಇಂಥ ಒಂದು ಕಲಾಶ್ರೀಮಂತಿಕೆಯ ತಾಣ ಮೈಸೂರಿಗೆ 38 ಕಿ.ಮೀ. ದೂರದಲ್ಲಿರುವ ಸೋಮನಾಥಪುರ. ಪ್ರಶಾಂತ ಪರಿಸರದಲ್ಲಿರುವ ಈ ಶಿಲ್ಪಕಲಾವೈಭವದ ದೇಗುಲವನ್ನು ಪ್ರವೇಶಿಸಿದರೆ ಆಗುವ ಸಂತೋಷ ಅಪರಿಮಿತ. ಹಲ್ಲುಹಾಸಿನ ನಡುವೆ ಸಾಗಿ ನಾಲ್ಕು ಮೆಟ್ಟಿಲೇರುತ್ತಿದ್ದಂತೆಯೇ ಹೊಸದೊಂದು ಶಿಲ್ಪಕಲಾಲೋಕವೇ ತೆರೆದುಕೊಳ್ಳುತ್ತದೆ. ಜೀವಕಳೆಯಿಂದ ಕಂಗೊಳಿಸುತ್ತಿರುವ ಶಿಲ್ಪವೈಭವವನ್ನು ಕಂಡಾಗ ರೋಮಾಂಚನವಾಗುತ್ತದೆ. ಶಿಲ್ಪಿಯ ಜಾಣ್ಮೆ, ಚಾಕಚಕ್ಯತೆ ಕೌಶಲಕ್ಕೆ ಶಿರಬಾಗುತ್ತದೆ.
ಐತಿಹ್ಯ: 13ನೆಯ ಶತಮಾನದಲ್ಲಿ ಸೋಮನಾಥಪುರ ಒಂದು ಪುಟ್ಟ ಅಗ್ರಹಾರವಾಗಿತ್ತು. ಚತುರ್ವೇದಿಮಂಗಲ ವಿದ್ಯಾನಿಧಿಪ್ರಸನ್ನ ಸೋಮನಾಥಪುರ ಎಂಬುದು ಇದರ ಪೂರ್ವ ಹೆಸರು. ಇಲ್ಲಿರುವ 7 ಶಾಸನಗಳು ಈ ಅಪೂರ್ವ ದೇವಾಲಯದ ಬಗ್ಗೆ ಹಾಗೂ ಕಲೆಗೆ ಹಾಗೂ ವಿದ್ಯೆಗೆ ಆಗರವಾಗಿದ್ದ ಈ ಊರಿನ ಬಗ್ಗೆ ಮಹತ್ವದ ಮಾಹಿತಿ ಒದಗಿಸುತ್ತವೆ. ಹೊಯ್ಸಳರ ದೊರೆ ಮುಮ್ಮಡಿ ನರಸಿಂಹನ ದಂಡನಾಯಕನಾಗಿದ್ದ ಸೋಮನಾಥ 1258ರ ಸುಮಾರಿನಲ್ಲಿ ನಿರ್ಮಿಸಿ, ತನ್ನ ಹೆಸರನ್ನೇ ಇಟ್ಟು ಸೋಮನಾಥಪುರವೆಂದು ಕರೆದ. ಪ್ರಶಾಂತವಾಗಿ ಕಾವೇರಿ ನದಿ ಹರಿಯುವ ಈ ಸ್ಥಳದಲ್ಲಿ ಹಲವು ದೇವಾಲಯಗಳನ್ನು ನಿರ್ಮಿಸಿದ ಎನ್ನುತ್ತದೆ ಇತಿಹಾಸ.
ವಿಶಾಲವಾದ ಸ್ಥಳದಲ್ಲಿ ನಕ್ಷತ್ರಾಕಾರದ ಜಗತಿಯ ಮೇಲೆ ನಿರ್ಮಿಸಲಾಗಿರುವ ಈ ದೇಗುಲ ಪೂರ್ವಾಭಿಮುಖವಾಗಿದ್ದು ಜಗತಿಯ ಸುತ್ತಲೂ ಇಡೀ ದೇವಾಲಯವನ್ನೇ ಆನೆಗಳು ಹೊತ್ತಿವೆಯೇನೋ ಎಂದು ಭಾಸವಾಗುವಂತೆ ಸುಂದರ ಗಜಶಿಲ್ಪಗಳನ್ನು ಕೆತ್ತಲಾಗಿದೆ.
ದೇವಾಲಯದ ಆವರಣ ಭಿತ್ತಿಗಳ ಏಳಂಗುಲದ ಪಟ್ಟಿಕೆಗಳಲ್ಲಿ ರಾಮಾಯಣ, ಭಾಗವತ, ಮಹಾಭಾರತದ ಕಥೆಯನ್ನು ವರ್ಣಿಸುವ ಶಿಲ್ಪಗಳಿಂದ ತುಂಬಿದೆ. ಆನೆ, ಅಶ್ವಾರೋಹಿಗಳು, ಲತೆ, ಮಕರ, ಹಂಸಗಳಿವೆ. ಗರ್ಭಗುಡಿಯ ಸುತ್ತಲೂ ಹೊರಭಾಗದಲ್ಲಿ ನಾರಸಿಂಹ, ಮನ್ಮಥ, ಇಂದ್ರ, ಸರಸ್ವತಿ, ಮಹಿಷಾಸುರ ಮರ್ದಿನಿ ಮೊದಲಾದ ಸುಂದರವಾದ 194 ದೊಡ್ಡ ಶಿಲ್ಪಗಳಿವೆ. ಈ ವಿಗ್ರಹಗಳ ಪೀಠದ ಮೇಲೆ ಮಲ್ಲಿತಮ್ಮ, ಚೌಡಯ್ಯ, ಬಾಲಯ್ಯ, ಮಸಣಿತಮ್ಮ, ಲೋಹಿತ ಮೊದಲಾದ ಹೆಸರುಗಳಿದ್ದು, ಇವರೆ ಇವನ್ನು ಕೆತ್ತಿದ್ದು ಎಂದು ಸೂಚಿಸಲಾಗಿದೆ.
ಶಿಖರಪ್ರಾಯ: ಸೋಮನಾಥಪುರದ ದೇವಾಲಯದ ಸೌಂದರ್ಯಕ್ಕೆ ಶಿಖರಪ್ರಾಯವಾಗಿರುವುದು ಮೂರು ಶಿಖರಗಳೇ. ಹೀಗಾಗೇ ಇದನ್ನು ತ್ರಿಕುಟಾಚಲವೆನ್ನುತ್ತಾರೆ. ಹದಿನಾರು ಕೋಣಗಳ ನಕ್ಷತ್ರಾಕಾರದ ವಿನ್ಯಾಸದ ಮೇಲೆ ರಚಿತವಾಗಿರುವ ಶಿಖರಗಳು ದೇವಾಲಯ ರಮ್ಯತೆಯನ್ನು ನೂರ್ಮಡಿಗೊಳಿಸಿವೆ. ಎಲ್ಲ ಹೊಯ್ಸಳ ದೇವಾಲಯದಲ್ಲಿರುವಂತೆ ಮುಖಮಂಟಪ, ನವರಂಗ, ಗರ್ಭಗೃಹ,ಸುಖನಾಸಿಗಳು ಇಲ್ಲೂ ಇವೆ. ಮಧ್ಯದ ಭುನವೇಶ್ವರಿಯಲ್ಲಿ ಅಷ್ಟದಿಕ್ಪಾಲಕರು, ಅದರ ಮೇಲೆ 32 ತೊಲೆಗಳಿಂದ ಮಾಡಿದ ಕಮಾನು, ಅದರ ಮಧ್ಯದಲ್ಲಿ ತೂಗಾಡುವ ರೀತಿಯ ಕಮಲದ ಮೊಗ್ಗು ಮನಮೋಹಕ. ಈ ದೇವಾಲಯದಲ್ಲಿ ಮೂರು ಗರ್ಭಗೃಹಗಳಿದ್ದು, ಉತ್ತರ ಗರ್ಭಗೃಹದಲ್ಲಿ ಜನಾರ್ದನ ದಕ್ಷಿಣ ಗರ್ಭಗೃಹದಲ್ಲಿ ತ್ರಿಭಂಗಿಯಲ್ಲಿ ನಿಂತ ವೇಣುಗೋಪಾಲ ವಿಗ್ರಹ ಇದೆ. ಮಧ್ಯದ ಗರ್ಭಗೃಹದಲ್ಲಿ ಯಾವ ವಿಗ್ರಹವೂ ಇಲ್ಲ. ಹಿಂದೆ ಇಲ್ಲಿ ವಿಗ್ರಹ ಇತ್ತೆಂದು ಹೇಳಲಾಗುತ್ತದೆ.
ಈ ಶಿಲ್ಪಕಲಾಮಯ ದೇಗುಲದ ಪ್ರಮುಖವಾದ ತಾಂಡವ ಗಣಪತಿಯ ಶಿಲ್ಪ ಗಮನಾರ್ಹವಾದುದು. ಕೇಶವ ದೇವಾಲಯಕ್ಕೆ ಈಶಾನ್ಯದಲ್ಲಿ ಪಂಚಲಿಂಗೇಶ್ವರ ದೇವಾಲಯವಿದೆ. ಹೊಯ್ಸಳ ದೇವಾಲಯಗಳಲ್ಲಿಯೇ ಇದೊಂದು ಅಪೂರ್ವ ಮಾದರಿ.
ಇಂದು ಈ ದೇವಾಲಯದಲ್ಲಿ ಹಲವು ಭಗ್ನಗೊಂಡ ವಿಗ್ರಹಗಳನ್ನು ಕಂಡಾಗ ಮನಸ್ಸು ವ್ಯಾಕುಲಗೊಳ್ಳುತ್ತದೆ. 19ನೆಯ ಶತಮಾನದಲ್ಲಿ ಆಂಗ್ಲವಿದ್ವಾಂಸರು ಈ ದೇವಾಲಯದ ಶಿಲ್ಪಕಲಾವೈಭವ ಕಂಡು ಅದರ ಮಾಹಿತಿ ಮುದ್ರಿಸಿದ ಕಾರಣ, ಅಂದಿನ ಮೈಸೂರು ಅರಸರು ಈ ದೇವಾಲಯವನ್ನು ಸ್ವಲ್ಪಮಟ್ಟಿಗೆ ಅಭಿವೃದ್ಧಿಪಡಿಸಿದರು. 1924ರಲ್ಲಿ ಬಿದ್ದುಹೋಗಿದ್ದ ಗೋಡೆಗಳ ದುರಸ್ತಿ ಮಾಡಿ, ದೇವಾಲಯ ಶಿಥಿಲವಾಗದಂತೆ ಭದ್ರಗೊಳಿಸಲಾಯಿತು. 1953ರಲ್ಲಿ ಈ ದೇವಾಲಯದ ಒಳಭಾಗದ ಅಪರಿಮಿತ ಸೌಂದರ್ಯವನ್ನು ಪ್ರವಾಸಿಗರು ಕಣ್ತುಂಬಿಕೊಳ್ಳಲೆಂದು ವಿದ್ಯುದ್ದೀಪದ ವ್ಯವಸ್ಥೆ ಮಾಡಲಾಗಿದೆ.
ಹೋಗುವುದು ಹೇಗೆ? ಮೈಸೂರಿನಿಂದ ಸೋಮನಾಥಪುರಕ್ಕೆ 42 ಕಿ.ಮೀ. ಬೆಂಗಳೂರಿನಿಂದ ಇಲ್ಲಿಗೆ 125 ಕಿ.ಮೀ. ನೇರ ಬಸ್ ಸೌಕರ್ಯವೂ ಇದೆ.
ಕರ್ನಾಟಕ ಪ್ರವಾಸ ಎಂದೊಡನೆ ಮೊದಲ ಕಣ್ಮುಂದೆ ನಿಲ್ಲುವುದು ಮೈಸೂರು. ಮೈಸೂರಿನ ಆಕರ್ಷಣೆಯೇ ಅಂತದ್ದು. ಮೈಸೂರು ತನ್ನ ಸುಂದರ ಅರಮನೆಗಳು,ಭವ್ಯವಾದ ಪುರಾತನ ಹಾಗೂ ಐತಿಹಾಸಿಕ ಮಹತ್ವಗಳು,ವಿಖ್ಯಾತ ಮೃಗಾಲಯ, ಮೈಸೂರರಸರ ಅಧಿದೇವತೆ ಚಾಮುಂಡೇಶ್ವರಿ ನೆಲೆಸಿಹ ಬೆಟ್ಟ ಹಾಗೂ ಸನಿಹದಲ್ಲೇ ಇರುವ ಜಗದ್ವಿಖ್ಯಾತ ಕೆ.ಆರ್.ಎಸ್. ಹಾಗೂ ಬೃಂದಾವನ ಗಾರ್ಡನ್‌ನಿಂದ ಪ್ರವಾಸಿಗರ ಸ್ವರ್ಗ ಎನಿಸಿದೆ. ಇದಕ್ಕೆ ತಂಪಾದ ಮೈಸೂರು ಹವೆಯೂ ಪುಷ್ಟಿ ನೀಡಿದೆ.
ದಕ್ಷಿಣ ಭಾರತದ ಇತಿಹಾಸದಲ್ಲಿ ಮೈಸೂರಿಗೆ ವಿಶಿಷ್ಠ ಸ್ಥಾನವಿದೆ. ಮೈಸೂರು ದಸರ ವಿಶ್ವ ವಿಖ್ಯಾತವಾಗಿದೆ. ವಿಜಯನಗರದರಸರು, ಮೈಸೂರು ಒಡೆಯರು, ಟಿಪ್ಪು ಆಳಿದ ಮೈಸೂರಿಗೆ ಇತಿಹಾಸದಲ್ಲೂ ಪ್ರಾಮುಖ್ಯತೆ ಇದೆ. ಪ್ರವಾಸ ದೃಷ್ಟಿಯಿಂದ ಹೇಳುವುದಾದರೆ ಮೈಸೂರು ನೋಡಲೇಬೇಕಾದ ಸ್ಥಳ.
ಮೈಸೂರು ಅರಮನೆ: ಇಂಡೋ ಸಾರ್‌ಸಾನಿಕ್ ಶೈಲಿಯಲ್ಲಿ 1897-1912ರ ಅವಧಿಯಲ್ಲಿ ನಿರ್ಮಾಣವಾದ ಭವ್ಯವಾದ ಅರಮನೆ ಮೈಸೂರಿನ ಪ್ರಧಾನ ಆಕರ್ಷಣೆಗಳಲ್ಲಿ ಮೊದಲನೆಯದು. ಮೈಸೂರಿಗೆ ಅರಮನೆಗಳ ನಗರಿ ಎಂದು ಹೆಸರು ಬರಲು ಮೂರು ಅಂತಸ್ತಿನ ಈ ಭವ್ಯ ಸೌಧದ ಕೊಡುಗೆ ಅಪಾರ. ಚಚ್ಚೌಕದ ಕಂಬಗಳು, ಮೇಲೆ ಸುಂದರ ವಿನ್ಯಾಸದ ಗೋಪುರ, ವಿಶಾಲವಾದ ಮೈದಾನ, ಸುಂದರ ಹಾಗೂ ಮನಮೋಹಕ ಶಿಲ್ಪಗಳಿಂದ, ನುಣುಪಾದ ನೆಲಹಾಸು, ಗಾಜಿನ ಅಲಂಕಾರಿಕ ವಿನ್ಯಾಸದಿಂದ ಕೂಡಿದ ದರ್ಬಾರ್ ಹಾಲ್, ಅರಮನೆಯ ಸುತ್ತ ಇರುವ ಸಿಂಹ ಲಾಂಛನಗಳು, ಸುಂದರ ಶಿಲ್ಪದ ಪ್ರವೇಶದ್ವಾರದ ನೋಟವೇ ಒಂದು ಸೊಬಗು. ಈ ಸೊಬಗು, ದಸರೆಯ ಕಾಲದಲ್ಲಿ, ಸರ್ಕಾರಿ ರಜಾದಿನಗಳಂದು ಹಾಗೂ ಭಾನುವಾರ ಸಂಜೆ 7ರಿಂದ 8 ಗಂಟೆ ಅವಧಿಯಲ್ಲಿ ನೂರ್ಮಡಿಯಾಗುತ್ತದೆ. ಆಗ ಮೈಸೂರು ಅರಮನೆಯ 97ಸಾವಿರಕ್ಕೂ ಹೆಚ್ಚು ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತದೆ. ಅಂದ ಹಾಗೆ ಮೈಸೂರು ಅರಮನೆಯ ವೀಕ್ಷಣೆಗೆ ಅವಕಾಶವುಂಟು. ಇದಕ್ಕೆ ಪ್ರವೇಶದರವೂ ಇದೆ.
ಚಾಮುಂಡಿ ಬೆಟ್ಟ: ಮೈಸೂರು ಒಡೆಯರ ಅಧಿದೇವತೆ ಚಾಮುಂಡೇಶ್ವರಿ. ತಾಯಿ ಚಾಮುಂಡಿ ನೆಲೆಸಿಹ ಬೆಟ್ಟ ಚಾಮುಂಡಿ ಬೆಟ್ಟ ಎಂದೇ ಹೆಸರಾಗಿದೆ. ಮೈಸೂರಿನಿಂದ 13 ಕಿ.ಮೀ. ದೂರದಲ್ಲಿರುವ ಇಲ್ಲಿಗೆ ವಾಹನ ಸೌಕರ್ಯವಿದೆ. ಜೊತೆಗೆ ಊರಿನಿಂದ ನಡೆದು ಹೋಗಲು ಒಡೆಯರು ನಿರ್ಮಿಸಿದ 1000 ಮೆಟ್ಟಿಲುಗಳೂ ಇವೆ. ಇಲ್ಲಿ 11ನೆ ಶತಮಾನದಲ್ಲೇ ದೇವಾಲಯವಿತ್ತು. ಬೆಟ್ಟದಲ್ಲಿ ದುರ್ಗೆಯಿಂದ ಹತನಾದ ರಕ್ಕಸ ಮಹಿಷಾಸುರನ ಸುಂದರ ಮೂರ್ತಿಯಿದೆ. ಬೆಟ್ಟ ಇಳಿಯುವ ಹಾದಿಯಲ್ಲಿ 4.8 ಮೀಟರ್ ಎತ್ತರದ ಬೃಹತ್ ನಂದಿಯ ವಿಗ್ರಹವಿದೆ.
ಮೈಸೂರು ಮೃಗಾಲಯ: ಮೈಸೂರಿನ ಆಕರ್ಷಣೆಗಳಲ್ಲಿ ಮತ್ತೊಂದು ಪ್ರಮುಖ ಸ್ಥಳ ಜಯಚಾಮರಾಜೇಂದ್ರ ಮೃಗಾಲಯ, 1892ರಲ್ಲಿ ಸ್ಥಾಪನೆಯಾದ ಈ ಮೃಗಾಲಯದಲ್ಲಿ ಆಫ್ರಿಕಾ ಆನೆ, ಭಾರತೀಯ ಆನೆ, ಸಿಂಹ, ಕರಡಿ, ಹುಲಿ, ಒಂಟೆ, ಹೇಸರಗತ್ತೆ, ಜಿರಾಫೆ, ನೀರಾನೆ,ಖೇಂಡಾಮೃಗ, ಬಿಳಿ ನವಿಲು, ಬಿಳಿ ಕಾಗೆಯೇ ಮೊದಲಾದ ನೂರಾರು ಪ್ರಬೇಧದ ಪ್ರಾಣಿಗಳು, ಪಕ್ಷಿಗಳಿವೆ. ಇಲ್ಲಿರುವ ಹಲವು ಪ್ರಾಣಿಗಳು ಸಂತಾನೋತ್ಪತ್ತಿ ಮಾಡುವುದು ಈ ಮೃಗಾಲಯದ ವಿಶೇಷ.
ಜಗನ್ಮೋಹನ ಅರಮನೆ: 1861ರಲ್ಲಿ ಕೃಷ್ಣರಾಜ ಒಡೆಯರು ನಿರ್ಮಿಸಿದ ಜಗನ್ಮೋಹನ ಅರಮನೆ ಜಗತ್ತನ್ನೇ ಸನ್ಮೋಹನಗೊಳಿಸುವಂತ ಸುಂದರ ಕಲಾಕೃತಿಗಳಿಂದ ಕೂಡಿದ ಒಂದು ವಸ್ತು ಸಂಗ್ರಹಾಲಯ. ಮೂರು ಅಂಸ್ತುಗಳ ಈ ಭವ್ಯ ಬಂಗಲೆಯಲ್ಲಿ ನೂರಾರು ಕಲಾತ್ಮಕ ಕೃತಿಗಳು, ಸೈನಿಕರು ಪಥಸಂಚಲನ ಮಾಡುವ ಗಂಟೆ ಹೊಡೆಯುವ ಗಡಿಯಾರ, ರಾಜಾ ರವಿವರ್ಮನ ಹಲವಾರು ಕಲಾತ್ಮಕ ತೈಲವರ್ಣಚಿತ್ರಗಳು ಇವೆ.
ಲಲಿತ ಮಹಲ್: ಮೈಸೂರು ಅರಮನೆಯಿಂದ 7 ಕಿ.ಮೀ. ದೂರದಲ್ಲಿರುವ ಲಲಿತ ಮಹಲ್ ಅರಮನೆ ಐರೋಪ್ಯ ಶೈಲಿಯ ಎರಡು ಅಂತಸ್ತಿನ ಭವ್ಯ ಕಟ್ಟಡ. 1931ರಲ್ಲಿ ಒಡೆಯರು ನಿರ್ಮಿಸಿದ ಶ್ವೇತವರ್ಣದ ಈ ಸೌಧ ಹೊರ ದೇಶದಿಂದ ಬರುವ ಅತಿಥಿಗಳ ಬಿಡಾರಕ್ಕಾಗಿಯೇ ನಿರ್ಮಿಸಿದ ಸೌಧ. ಇಂದು ಇದು ಪಾರಂಪರಿಕ ತಾಣದ ಜೊತೆಗೆ ವೈಭವದ ಹೊಟೆಲ್ ಆಗಿದ್ದು ಇಲ್ಲಿ ತಂಗಲೂ ಅವಕಾಶವಿದೆ.
ಸೇಂಟ್ ಫಿಲೋಮಿನಾ ಚರ್ಚ್: 175 ಅಡಿ ಎತ್ತರದ ಎರಡು ಸುಂದರ ಗೋಪುರಗಳಿಂದ ಕೂಡಿದ ಸುಂದರ ಚರ್ಚ್. ಇದನ್ನು ಫ್ರೆಂಚ್ ಶಿಲ್ಪಿಗಳು ಸುಂದರವಾಗಿ ವಿನ್ಯಾಸಗೊಳಿಸಿದ್ದು, ಮೈಸೂರು ಮಹಾರಾಜರಾಗಿದ್ದ ಕೃಷ್ಣರಾಜ ಒಡೆಯರ್ ಅವರು ಇದಕ್ಕೆ ಶಿಲಾನ್ಯಾಸ ಮಾಡಿದ್ದರು.
ಇದಲ್ಲದೆ ಮೈಸೂರಿನಲ್ಲಿ ನೋಡಬೇಕಾದ ಹಲವಾರು ತಾಣಗಳಿದ್ದು ಇವುಗಳಲ್ಲಿ ಮೈಸೂರು ವಿಶ್ವವಿದ್ಯಾಲಯ, ವಿ.ವಿ. ಆವರಣದಲ್ಲಿರುವ ಜನಪದ ಸಂಗ್ರಹಾಲಯ,ರೈಲ್ವೆ ಮ್ಯೂಸಿಯಂ, ಕಾರಂಜಿ ಕೆರೆ, ಕುವೆಂಪು ಅವರ ಸೂರ್ತಿ ತಾಣ ಕುಕ್ಕರಹಳ್ಳಿ ಕೆರೆ.
ಶ್ರೀರಂಗಪಟ್ಟಣ ಎಂದೊಡನೆ ಕಣ್ಣೆದುರು ನಿಲ್ಲುವುದು ಮೈಸೂರು ಹುಲಿ ಟಿಪ್ಪೂ ಸುಪ್ತಾನರ ಚಿತ್ರ. ಪಟ್ಟಣ ಖ್ಯಾತವಾಗಿದ್ದೂ ಟಿಪ್ಪುವಿನಿಂದಲೇ. ಮೈಸೂರು -ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿ ಕಾವೇರಿ ನಂದಿಯಿಂದ ಆವೃತವಾದ ದ್ವೀಪವೇ ಶ್ರೀರಂಗಪಟ್ಟಣ.
ಇತಿಹಾಸ: ಗೌತಮಕ್ಷೇತ್ರ ಎಂದೇ ಹೆಸರಾದ ಇಲ್ಲಿ ಕಾವೇರಿ ತೀರದಲ್ಲಿ ಮಲಗಿರುವ ಶ್ರೀರಂಗನಾಥ ಸ್ವಾಮಿಯ ಪುರಾತನ ದೇವಾಲಯವಿದೆ. ಗೌತಮ ಋಷಿಗಳು ಇಲ್ಲಿ ಶ್ರೀರಂಗನಾಥನ ಪೂಜಿಸುತ್ತಾ ವಾಸಿಸಿದ್ದರಂತೆ. ಕ್ರಿ.ಶ.894ರಲ್ಲಿ ಗಂಗರ ಸಾಮಂತರಾಜ ತಿರುಮಲಯ್ಯ ಇಲ್ಲಿ ರಂಗನಾಥಸ್ವಾಮಿಯ ಭವ್ಯ ದೇವಾಲಯ ನಿರ್ಮಿಸಿ ಶ್ರೀರಂಗಪುರ ಎಂದು ಹೆಸರಿಟ್ಟ. ನಂತರ ಈ ಊರು ಹೊಯ್ಸಳರು, ಮೈಸೂರರಸರು, ವಿಜಯನಗರದರಸರ ಆಳ್ವಿಕೆಗೂ ಒಳಪಟ್ಟಿತ್ತು. 1761ರಲ್ಲಿ ಪಟ್ಟಣ ಹೈದರಾಲಿಯ ವಶವಾಯ್ತು. ಆದರೆ ಇದು ಅಭಿವೃದ್ಧಿಹೊಂದಿದ್ದು ಟಿಪ್ಪುವಿನ ಆಳ್ವಿಕೆಯಲ್ಲಿ. 1799ರಲ್ಲಿ ಮೈಸೂರು ಹುಲಿ ಟಿಪ್ಪು ಅಳಿದ ನಂತರ ಪಟ್ಟಣ ಬ್ರಿಟಿಷರ ವಶವಾಯ್ತು.
ರಂಗನಾಥ ದೇವಾಲಯ: ದ್ರಾವಿಡ ಶೈಲಿಯ ರಂಗನಾಥ ದೇಗುಲ ಹೊಯ್ಸಳರ ಕಾಲದ್ದು. ಏಳು ಹೆಡೆಯ ಸರ್ಪದ ಮೇಲೆ ರಂಗನಾಥ ಮಲಗಿರುವ ಹಾಗೂ ಪಾದದ ಬಳಿ ಲಕ್ಷ್ಮೀದೇವಿ ವಿಗ್ರಹವಿದೆ. ಗೌತಮ ಋಷಿಗಳ ವಿಗ್ರಹವೂ ಇದೆ. ಪ್ರಾಕಾರದಲ್ಲಿ ಹಲವು ದೇವಾಲಯಗಳಿದ್ದು ಗಂಗಾಧರ ಹಾಗೂ ನರಸಿಂಹ ದೇವಾಲಯ ಪ್ರಮುಖವಾದ್ದು. ಆಂಜನೇಯನ ಆಳೆತ್ತರದ ಮೂರ್ತಿ ಸುಂದರವಾಗಿದೆ. ದೇಗುಲದ ಹೊರಗೆ ಗಂಜೀಫಾ ಕಲೆಯ ಆರ್ಟ್ ಗ್ಯಾಲರಿ ಇದೆ.
ಕೋಟೆ : ಶ್ರೀರಂಗಪಟ್ಟಣವನ್ನು ಶತ್ರುಗಳಿಂದ ರಕ್ಷಿಸಲು ಸುತ್ತಲೂ ನಿರ್ಮಿಸಲಾಗಿರುವ ಕೋಟೆಯನ್ನು ಇಂದಿಗೂ ನೋಡಬಹುದು. ಈ ಕೋಟೆಯ ಸುತ್ತಲೂ ಕಂದಕ ತೋಡಲಾಗಿದ್ದು ಇದರಲ್ಲಿ ಕಾವೇರಿ ನೀರು ಸದಾ ಹರಿಯುತ್ತಿತ್ತು. ಹೀಗಾಗಿ ಕೋಟೆಯಪ್ರವೇಶ ಬಹಳ ದುರ್ಗಮವಾಗಿತ್ತು. ಟಿಪ್ಪೂ ವಾಸಿಸುತ್ತಿದ್ದನೆಂದು ಹೇಳಲಾಗುವ ಲಾಲ್‌ಮಹಲ್ ಸಂಪೂರ್ಣ ನಾಶವಾಗಿದೆ. ಇನ್ಮನ್ ಮತ್ತು ಕರ್ನಲ್ ಬೆಯಲಿಯನ್ನು ಬಂಸಿಟ್ಟಿದ್ದ ನೆಲಮಾಳಿಗೆ ಬಂದೀಖಾನೆಗಳಿವೆ. ಕೋಟೆಯ ಒಳಗೆ ಟಿಪ್ಪು 1787ರಲ್ಲಿ ಕಟ್ಟಿಸಿದ ಎರಡು ದೊಡ್ಡ ಮಿನಾರಗಳಿಂದ ಕೂಡಿದ ಜುಮ್ಮ ಮಸೀದಿ ಇದೆ. ಮಿನಾರ ಗೋಪರಕ್ಕೆ ಹೋಗಲು ಮೆಟ್ಟಿಲುಗಳಿವೆ.
ದರಿಯಾ ದೌಲತ್ : ಕೋಟೆಯ ಹೊರಗೆ ತೋಟದ ಒಳಗೆ ಪಾರಸಿ ಅರಮನೆ ಮಾದರಿಯಲ್ಲಿ ನಿರ್ಮಿಸಿರುವ ದರಿಯಾದೌಲತ್ ಬೇಸಿಗೆ ಅರಮನೆ ಇದೆ. ದರಿಯಾದೌಲತ್ ಎಂದರೆ ಸಮುದ್ರದ ಸಂಪತ್ತು ಎಂದು ಅರ್ಥ. ಟಿಪ್ಪೂ ತನ್ನ ಸಾಮ್ರಾಜ್ಯವನ್ನು ಸಮುದ್ರದವರೆಗೆ ವಿಸ್ತರಿಸಿದ ನೆನಪಿನಲ್ಲಿ ಕಟ್ಟಿಸಿರುವ ಈ ಅರಮನೆ ಟಿಪ್ಪೂ ಸಾಹಸದ ಚಿತ್ರಕಲೆಗಳಿಂದ ಕೂಡಿದ್ದು ಮನಸೆಳೆಯುತ್ತದೆ. ಸರ್ಕಾರ ಇದನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸಿ ಸಂರಕ್ಷಿಸಿದೆ.
ಕಾವೇರಿ: ಇಲ್ಲಿ ಕಾವೇರಿ ಪಶ್ಚಿಮಾಭಿಮುಖವಾಗಿ ಹರಿಯುವ ಕಾರಣ ಪಶ್ಚಿಮ ವಾಹಿನಿ ಎಂದೇ ಖ್ಯಾತವಾಗಿದೆ. ಕಾವೇರಿ ಹರಿವ ಮಾರ್ಗದಲ್ಲಿ ಮೂರು ರಂಗನಾಥ ಸ್ವಾಮಿ ದೇವಾಲಯಗಳಿದ್ದು ಇದು ಆದಿ ರಂಗ (ಮೊದಲನೆಯದು) ಮಧ್ಯ ರಂಗ ಶಿವನಸಮುದ್ರದ ಬಳಿ ಇದೆ. ಅಂತ್ಯರಂಗ ತಮಿಳುನಾಡಿನ ಶ್ರೀರಂಗಂನಲ್ಲಿದೆ. ಮೈಸೂರಿಗೆ 16 ಕಿಲೋ ಮೀಟರ್ ದೂರದಲ್ಲಿರುವ ಪಟ್ಟಣದಿಂದ ಬೆಂಗಳೂರಿಗೆ 125 ಕಿ.ಮೀ.
ಮೂಲ : ಕನ್ನಡ ರತ್ನ
ಕೊನೆಯ ಮಾರ್ಪಾಟು : 6/19/2020