ದೈತ್ಯಗಾತ್ರದ ವಿಮಾನಗಳು, ಭಾರಿ ಹಡಗುಗಳು ಹಾಗೂ ಬೃಹತ್ ಶಕ್ತಿ ಸ್ಥಾವರದಲ್ಲಿ ಯಂತ್ರಗಳನ್ನು ‘ಸೂಪರ್ ಅಲಾಯ್’ ಎಂಬ ವಿಶೇಷ ಗುಣ ಹೊಂದಿದ ವಿಶಿಷ್ಟ ಮಿಶ್ರಲೋಹದಿಂದ ತಯಾರಿಸಲಾಗುತ್ತದೆ. ಈ ಮೂಲವಸ್ತು ೧,೫೦೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನದಂತಹ ಪ್ರತಿಕೂಲ ವಾತಾವರಣದಲ್ಲೂ ತನ್ನ ಸದೃಢತೆಯನ್ನು ಕಾಯ್ದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತದೆ.
ಆದರೆ ಕೆಲವು ರಾಸಾಯನಿಕ ಕ್ರಿಯೆಗಳು ಈ ‘ಸೂಪರ್ ಅಲಾಯ್’ಗಳ ಸಾಮರ್ಥ್ಯಕ್ಕೆ ಕುಂದು ತರಬಲ್ಲವು. ಉದಾಹರಣೆಗೆ, ಪ್ರಸ್ತುತ ಹೆಚ್ಚಾಗಿ ಬಳಸುವ ನಿಕ್ಕಲ್ ಧಾತುವನ್ನು ಆಧರಿಸಿದ ‘ಸೂಪರ್ ಅಲಾಯ್’ಗಳು ಗಂಧಕಯುಕ್ತ ವಾತಾವರಣಕ್ಕೆ ತೆರೆದುಕೊಂಡಾಗ ಕ್ರಮೇಣ ತಮ್ಮ ವಿಶಿಷ್ಟ ಗುಣ ಕಳೆದುಕೊಳ್ಳಲು ಆರಂಭಿಸುತ್ತವೆ. ಇನ್ನೊಂದು ಹೆಚ್ಚು ಬೆಲೆಯ ಇಂಧನದ ಬೇಡಿಕೆಯಿಂದಾಗಿ ವಿಮಾನಯಾನ ಉದ್ಯಮ ಕೆಳದರ್ಜೆಯ ಇಂಧನವನ್ನು ಬಳಸುವುದು ಅನಿವಾರ್ಯ ಸ್ಥಿತಿ ನಿರ್ಮಾಣವಾಗುತ್ತಿದೆ.
ಕೋಬಾಲ್ಟ್ ಆಧರಿತ ವಸ್ತುವನ್ನು ವೈಮಾನಿಕ ಇಂಜಿನ್ನುಗಳ ಪ್ರಮುಖ ಭಾಗಗಳ ತಯಾರಿಕೆಗೆ ಬಳಸಿಕೊಳ್ಳುವ ಸಾಧ್ಯತೆಯ ಬಗೆಗೆ ಅನೇಕ ವರ್ಷಗಳಿಂದಲೂ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಲೇ ಇದ್ದಾರೆ. ಕೋಬಾಲ್ಟ್ ರಾಸಾಯನಿಕವಾಗಿ ಗಂಧಕದೊಂದಿಗೆ ಬೆರೆಯದೇ ಇದ್ದರೂ ಹೆಚ್ಚಿನ ತಾಪಮಾನಗಳಲ್ಲಿ ತನ್ನ ದೃಢತೆಯನ್ನು ಕಳೆದುಕೊಂಡುಬಿಡುತ್ತದೆ.
ಹೆಚ್ಚಿನ ತಾಪಮಾನಗಳಲ್ಲೂ ಸದೃಢವಾಗಿ ಉಳಿಯಬಲ್ಲ ಕೋಬಾಲ್ಟ್ ಆಧರಿಸಿದ ಸೂಪರ್ ಅಲಾಯ್‌ಅನ್ನು ೨೦೦೬ರಲ್ಲಿ ಜಪಾನಿನ ತಂಡವೊಂದು ಅಭಿವೃದ್ಧಿಪಡಿಸಿತ್ತು. ಆದರೆ, ಅದರಲ್ಲಿ ಭಾರದ ಲೋಹಗಳಲ್ಲೊಂದಾದ ಟಂಗ್‌ಸ್ಟನ್ ಕೂಡ ಸೇರಿತ್ತು. ತೂಕದ ದೃಷ್ಟಿಯಿಂದ ವೈಮಾನಿಕ ಕ್ಷೇತ್ರದಲ್ಲಿ ಬಳಸಲು ಅದು ತಕ್ಕದಾಗಿರಲಿಲ್ಲ.
ಭಾರತೀಯ ವಿಜ್ಞಾನ ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ ಕೋಬಾಲ್ಟ್ ಆಧರಿತ ‘ಸೂಪರ್ ಅಲಾಯ್’ಗಳು ಹೆಚ್ಚಿನ ತಾಪಮಾನಗಳಲ್ಲಿಯೂ ನಿಕ್ಕಲ್ ಆಧರಿತ ‘ಸೂಪರ್ ಅಲಾಯ್’ಗಳಷ್ಟೇ ಸದೃಢವಾಗಿದ್ದು ಗಂಧಕಯುಕ್ತ ರಾಸಾಯನಿಕಗಳಿಗೂ ಪ್ರತಿರೋಧ ಒಡ್ಡುವ ಗುಣ ಹೊಂದಿದೆ. ಅಲ್ಲದೇ ಟಂಗ್‌ಸ್ಟನ್ ಲೋಹದ ಅಂಶಗಳಿಂದಲೂ ಸಂಪೂರ್ಣ ಮುಕ್ತವಾಗಿದೆ.
ಈ ಸಂಶೋಧನೆಯು ಭಾರತದಲ್ಲಿ ಇಲ್ಲಿಯವರೆಗೆ ‘ಸೂಪರ್ ಅಲಾಯ್’ಗಳನ್ನು ಅಭಿವೃದ್ಧಿಪಡಿಸಿದ ಗುರುತರ ಹೆಜ್ಜೆಯಾಗಿದೆ.
‘ಈ ವರ್ಗದ ‘ಸೂಪರ್ ಅಲಾಯ್’ಗಳು ಪ್ರಸ್ತುತ ಲಭ್ಯವಿರುವ ‘ಸೂಪರ್ ಅಲಾಯ್’ಗಳಿಗೆ ಉತ್ತಮ ಪೈಪೋಟಿ ನೀಡಬಲ್ಲವು. ಸಧೃಡತೆ, ಮೃದುತ್ವ, ಗಂಧಕ ಹಾಗೂ ತುಕ್ಕು ಪ್ರತಿರೋದಕ ಗುಣಗಳಲ್ಲಿ ಇವು ಉಳಿದವುಗಳಿಗಿಂತ ಒಟ್ಟು ತುಲನೆಯಲ್ಲಿ ಉತ್ತಮವಾಗಿವೆ.
೧೯೮೦ರ ಅರೆಸ್ಫಟಿಕ (quasicrystal) ಬಗೆಗಿನ ಸಂಶೋಧನೆಯ ನಂತರ ಅತ್ಯಂತ ಹರ್ಷಕೊಟ್ಟ ಸಂಶೋಧನೆ ಇದಾಗಿದೆ’ ಎಂದು ಸಂಶೋಧಕರ ತಂಡದ ಮುಖ್ಯಸ್ಥ ಪ್ರೊ. ಕೆ. ಚಟ್ಟೋಪಾಧ್ಯಾಯರು ಪುಳಕಿತರಾಗಿ ಹೇಳುತ್ತಾರೆ.
ಕೊಡುಗೆದಾರರು : ಭಾರತ್ ಕುಮಾರ್ , ವಿಜ್ಞಾನಲೋಕ
ಕೊನೆಯ ಮಾರ್ಪಾಟು : 2/15/2020