ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಾಧಕರ ಮೂಲೆ / ಅಲ್ಲೂರಿ ಸೀತಾರಾಮರಾಜು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಅಲ್ಲೂರಿ ಸೀತಾರಾಮರಾಜು

ಅಲ್ಲೂರಿ ಸೀತಾರಾಮರಾಜು ಕುರಿತು ಇಲ್ಲಿ ತಿಳಿಸಲಾಗಿದೆ.

ಸ್ವತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ ಕ್ರಾಂತಿಕಾರಿ ಯುವಕರ ಹೆಸರು ಹೇಳಿ ಎಂದು ನೀವು ಯಾರನ್ನಾದರೂ ಕೇಳಿದರೆ ಸಾಕು, ಭಗತ್ ಸಿಂಗ್, ಚಂದ್ರ ಸುಭಾಷ್ ಶೇಖರ್ ಆಜಾದ್, ಖುದೀರಾಮ್ ಬೋಸ್, ಅಶ್ಫಕುಲ್ಲ ಖಾನ್ ,ಸುಖ್ ದೇವ್, ಖುದೀರಾಮ ಬೋಸ್ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ.. ಈ ಹೋರಾಟಗಾರರು ಉತ್ತರ ಭಾರತದಲ್ಲಿ ಹುಟ್ಟಿ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿ ಹುತಾತ್ಮರಾದರು ಆದರೆ ಒಮ್ಮೆ ಯೋಚಿಸಿ ನೋಡಿ ಈ ಪಟ್ಟಿಯಲ್ಲಿ ದಕ್ಷಿಣದವರ ಹೆಸರು ಎಲ್ಲಿಯೂ ಕಂಡು ಬರುವುದಿಲ್ಲ ಎಂದು ನಿಮಗೆ ಅನಿಸುವುದಿಲ್ಲವೇ . ಹೌದು , ಆದರೆ ನಿಮ ಗೊತ್ತಿದೆಯೋ ಇಲ್ಲವೂ ಇವರೆಲ್ಲರಂತೆ ನಮ್ಮ ದಕ್ಷಿಣ ಭಾರತದಲ್ಲಿಯೂ ಸಹ  ಆಂಗ್ಲರಿಗೆ ಸಡ್ಡು ಹೊಡೆದು ನಿಂತು ಅವರಿಗೆ ತಕ್ಕ ಪಾಠ ಕಲಿಸಿದ  ಅಪ್ರತಿಮ ಕ್ರಾಂತಿಕಾರಿ ಸ್ವತಂತ್ರ ಹೋರಾಟಗಾರನೋರ್ವನಿದ್ದ, ಅವನ ಬೇಹುಗಾರಿಗೆ ಜಾಲ ಮತ್ತು ಹೋರಾಡುವ ಪರಿಯನ್ನು ನೋಡಿ ಆಂಗ್ಲರು ಅವನನ್ನು ಹಿಡಿಯಲಾಗದೆ ಸುಸ್ತಾಗಿದ್ದರು ಆ ಮಹಾನ್ ಕ್ರಾಂತಿಕಾರಿ ಮತ್ತಾರು ಅಲ್ಲ  ' ಅಲ್ಲೂರಿ ಸೀತಾರಾಮರಾಜು '.

ಭಾರತ ಖಂಡದಲ್ಲಿ ಬಂಗಾಳ ಮತ್ತು ಪಂಜಾಬಿನಲ್ಲಿ ಆಂಗ್ಲರ ವಿರುದ್ದ ಕ್ರಾಂತಿಕಾರಿಗಳ ಚಟುವಟಿಕೆ ತೀವ್ರವಾಗಿತ್ತು. ಇದೆ ಸಮಯಕ್ಕೆ ದೇಶ ಪರ್ಯಟನೆಯಲ್ಲಿ ತೊಡಗಿದ್ದಾಗ ರಾಜುಗೆ ಹಲವಾರು ಕ್ರಾಂತಿಕಾರಿ ನಾಯಕರ ಪರಿಚಯವಾಯಿತು ಇದೆ ಸೀತಾರಾಮ ರಾಜು ಅವರ ಕ್ರಾಂತಿಕಾರಿ ಚಳುವಳಿಗೆ ಮುನ್ನುಡಿ ಬರೆಯಿತು.

ದೇಶ ಪರ್ಯಟನೆ ಮಾಡಿದಾಗ ರಾಜುವಿಗೆ ಸ್ವತಂತ್ರಕ್ಕಾಗಿ ಹೋರಾಟ ಮಾಡಬೇಕು ಹಾಗೂ  ದೇಶ ಸೇವೆ , ಜನ ಸೇವೆ ಮಾಡುವ ಧಾರ್ಮಿಕ  ಮನೋಭಾವ ಮೂಡಿತ್ತು.  ತಕ್ಷಣವೇ ಆಂಧ್ರದ ಕೃಷ್ಣ ದೇವಿ ಪೇಟೆಯ ನೀಲಕಂಠೇಶ್ವರ ದೇವಸ್ಥಾನದಲ್ಲಿ ಬಿಡುಬಿಟ್ಟು ತನ್ನ ಸಾಧನೆಯಲ್ಲಿ ತೊಡಗಿದರು. ಕಾವಿ ಧರಿಸಿ ಜನ ಸೇವೆಯಲ್ಲಿ ತೊಡಗಿದರು.

ಒಮ್ಮೆ ಆಂಗ್ಲ ಸರ್ಕಾರ ನರಸಿಪಟ್ಟಣದಿಂದ ಮನ್ಯಮ್ ಗುಡ್ಡಗಳ ಮೂಲಕ ಚಿಂತಪಲ್ಲಿಗೆ ರಸ್ತೆ ನಿರ್ಮಿಸಬೇಕೆಂದು ನಿರ್ಧಾರ ಮಾಡಿದರು. ಆದರೆ ಈ ರಸ್ತೆ ನಿರ್ಮಾಣದ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಈ ಕಾರ್ಯಕ್ಕೆ ಮಾರ್ಗ ಮಧ್ಯದಲ್ಲಿ ಬರುವ ಮರ ಉರುಳಿಸಿ , ಬಂಡೆಗಳನ್ನು ಒಡೆದು ದಾರಿ ನಿರ್ಮಿಸಲು ಅದೇ ಕಾಡಿನ ಕೊಯ ಆದಿವಾಸಿಗಳಿಗೆ ಆರು ಆಣೆ ದಿನಗೂಲಿ ಕೊಟ್ಟು ದುಡಿಸಿ ಕೊಳ್ಳುವ ಯೋಜನೆ ನಿರ್ಮಿಸಿದರು. ಆದರೆ ಯೋಜನೆ ಆರಂಭವಾದ ನಂತರ ಆಂಗ್ಲರು ಎರಡು ಆಣೆ ಕೊಡಲು ಆರಂಭಿಸಿದರು , ದಿನಗೂಲಿಗೆ ಬಂದ ಕೊಯ ಜನರಿಗೆ ರಕ್ತ ಬರುವಂತೆ ಹೊಡೆದು ಆ ಜಾಗಕ್ಕೆ ಮೆಣಸಿನ ಪುಡಿ ಮೆತ್ತುತ್ತಿದ್ದರು.  ಈ ಅನ್ಯಾಯವನ್ನು ಕೊಯ ಆದಿವಾಸಿಗಳು ಸೀತಾರಾಮ ರಾಜು ಅವರ ಹತ್ತಿರ ತೋಡಿಕೊಳ್ಳುತ್ತಿದ್ದರು. ಸಮಚಿತ್ತದಿಂದ ಅವರ ನೋವನ್ನು ಅಲಿಸುತ್ತಿದ್ದರೂ  ಮನದಲ್ಲಿ ರಕ್ತ ಕುದಿಯುತ್ತಿತ್ತು ಆದರೂ ಸರಿಯಾದ ಸಮಯ ಬರಲೆಂದು ಕಾಯುತ್ತಿದ್ದರು. ಕೊಯ ಜನರ ಬಲಿಷ್ಠ ದಂಡನ್ನು ಕಟ್ಟಿ ಆಂಗ್ಲರಿಗೆ ಬುದ್ದಿ ಕಲಿಸಬೇಕು ಎಂದು ಯೋಜನೆ ಸಿದ್ದ ಪಡಿಸಿದರು. ಅದೇ ಸಮಯಕ್ಕೆ ದೇಶದಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿ ಆರಂಭಿಸಿದರು. ಆಂಗ್ಲರು ಕಾದಿರಿಸಿದ್ದ ಅರಣ್ಯಕ್ಕೆ ನುಗ್ಗಿ ಮರಗಳನ್ನು ಕಡಿದು ಕಾನೂನು ಉಲ್ಲಂಗನೆ ಮಾಡಿ, ಇಲ್ಲಿನ ಸರ್ವಸ್ವವೂ ನಮ್ಮದು ಎಂದು ಸಾರೋಣ ಎಂದು ಕಾಡಿಗೆ ನುಗ್ಗಿದರು. ಆಂಗ್ಲ ಪೊಲೀಸರು ರಾಜುವನ್ನು ಬಂಧಿಸಿ ಸೆರೆಮನೆಯಲ್ಲಿ ಇಟ್ಟರು. ಇಡಿ ಕೊಯ ಆದಿವಾಸಿಗಳು ತಮ್ಮ ಸ್ವಾಮಿಯನ್ನು ಬಿಡಿಸಿ ಕೊಂಡು ಬರುತ್ತೇವೆ ಎಂದು ಪ್ರತಿಜ್ಞೆ ಮಾಡಿ ಸೆರೆಮನೆಯ ಕಡೆ ನುಗ್ಗಿದರು ಅದೇ ಸಮಯಕ್ಕೆ ರಾಜುವಿನ ವಿರುದ್ದ ಸರಿಯಾದ ಪುರಾವೆಗಳು ಸಿಗದೇ   ಆಂಗ್ಲರು ರಾಜುವನ್ನು ಬಿಡುಗಡೆ ಮಾಡಿದರು.  ಇದೇ ಸಮಯಕ್ಕೆ  ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ನಿಲ್ಲಿಸಿದರು , ಈ ಸುದ್ದಿ ತಿಳಿದ ರಾಜುಗೆ ಬಹಳ ನೋವಾಯಿತು ಆದರೆ ತನ್ನ ಹೋರಾಟವನ್ನು ತಾನು ಮುಂದುವರಿಸಬೇಕೆಂದು ತನ್ನ ಸಂಗಡಿಗರಿಗೆ ಹುರಿದುಂಬಿಸಿ ಗೇರಿಲ್ಲ ಯುದ್ದದ ಶಿಕ್ಷಣವನ್ನು ನೀಡತೊಡಗಿದನು.

ಕಾಡಿನ ಆದಿವಾಸಿಗಳು ಅಂದರೆ ಕೇವಲ ಬಿಲ್ಲು ಬಾಣ , ಗದೆ, ಭರ್ಜಿಗಳೆ ಇವರ ಆಯುಧಗಳು ಆದರೆ ಆಂಗ್ಲರ ವಿರುದ್ದ ಗೆಲ್ಲಲು ಬಂದೂಕುಗಳು ಬೇಕಿದ್ದವು. ಹಾಗಾಗಿ ಪೊಲೀಸು ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಹೊತ್ತು ತರುವುದು ಎಂದು ನಿಶ್ಚಯ ಮಾಡಿ ಸೇನೆಯನ್ನು ಸಿದ್ದ ಮಾಡಿದನು. ಇದಕ್ಕಾಗಿ ಒಂದು ಬೇಹುಗಾರಿಕ ತಂಡವನ್ನು ರೂಪಿಸಿ ಒಂದೊಂದೇ ಠಾಣೆಗೆ ನುಗ್ಗಿ ಶಸ್ತ್ರ ಸಂಗ್ರಹಣೆಯಲ್ಲಿ ತೊಡಗಿದನು. ಠಾಣೆಗೆ ನುಗ್ಗಿದ ಸಮಯದಲ್ಲಿ ಬಂಧನದಲ್ಲಿದ್ದ ಹಲವಾರು ಕ್ರಾಂತಿಕಾರಿಗಳನ್ನು ಬಿಡುಗಡೆ ಮಾಡಿ ತನ್ನ ಸೈನ್ಯಕ್ಕೆ ಸೇರಿಸಿಕೊಂಡನು. ಈತ ಎಲ್ಲಿ ಯಾವಾಗ ಯಾವ ಠಾಣೆಯ ಮೇಲೆ ಏರುಗುತ್ತಾನೆ ಎನ್ನುವ ಮಾಹಿತಿ ಮುಂಚೆಯೇ ಕೊಟ್ಟರು ಪೊಲೀಸರ ಕೈಗೆ ಸಹ  ಸಿಗದಂತೆ ತಪ್ಪಿಸಿಕೊಳ್ಳುತ್ತಿದ್ದದು ವಿಶೇಷವಾಗಿತ್ತು. ಮೂರು ದಿನಗಳಲ್ಲಿ ಮೂರು ಪೊಲೀಸು ಠಾಣೆಗೆ ನುಗ್ಗಿದ ಸುದ್ದಿ ದೇಶಾದ್ಯಂತ ಹರಡಿತು ಆಂಗ್ಲ ಸರ್ಕಾರ ಕೆಂಡಮಂಡಲವಾಯಿತು.

ರಾಜುವಿನ ಶಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಯಿತು. ಆದರೆ ಪೆದ್ದಗಡ್ಡೆ ಪಾಲೆಮ್ ಎನ್ನುವ ಹೋರಾಟದಲ್ಲಿ ಮೊದಲ ಸೋಲಾಯಿತು, ರಾಜುಗೆ ಗಾಯವಾಯಿತು. ಆಂಗ್ಲ ಸರ್ಕಾರ ರಾಜು ಮತ್ತು ಅವನ ಸೇನೆಯ ಇತರೆ ಕ್ರಾಂತಿಕಾರಿಗಳ ತಲೆ ಹಿಡಿದು ಕೊಟ್ಟವರಿಗೆ ಬಹುಮಾನ ಘೋಷಣೆ  ಮಾಡಿದರು. ರಾಜು ಸ್ವಲ್ಪ ಸಮಯ ಸುಮ್ಮನಿರಬೇಕೆಂದು ನಿರ್ಧಾರ ಮಾಡಿದನು. ಸ್ವಲ್ಪ ಸಮಯದ ನಂತರ  ಮತ್ತೆ ದಾಳಿ ಆರಂಭಿಸಿದಾಗ  ವಿಜಯಲಕ್ಷ್ಮಿ ಮತ್ತೆ ಒಲಿಯ ತೊಡಗಿದಳು ಆದರೆ ಅವನ ಬಲಗೈ ಬಂಟ ಗಾಮು ಮಲ್ಲುದೋರ ಪೊಲೀಸರಿಗೆ ಸಿಕ್ಕಿ ಬಿದ್ದನು. ರಾಜುವನ್ನು ಹಿಡಿಯಲೇ ಬೇಕು ಎಂದು ಆಂಗ್ಲ ಸರ್ಕಾರ ರುಥರ್ ಫೋರ್ಡ್ ಎನ್ನುವ ಕ್ರೂರತೆಗೆ  ಹೆಸರುವಾಸಿಯಾಗಿದ್ದ ಅಧಿಕಾರಿಯನ್ನು ನೇಮಿಸಿದರು. ಆಂಗ್ಲರ ಸೇನೆ ಮತ್ತೆ ರಾಜುವಿನ ಸೇನೆಯ ಮೇಲೆ ಭಾರಿ ಯುದ್ದ ನಡೆಯಿತು ಮತ್ತೆ ಆಂಗ್ಲರ ಸೇನೆಗೆ ಸೋಲಾಯಿತು, ಆದರೆ ರಾಜುವಿನ ಹಲವಾರು ಸಂಗಡಿಗರು ಹೊರಡುತ್ತಲೇ ವೀರ ಸ್ವರ್ಗವನ್ನು ಪಡೆದದ್ದನ್ನು ನೋಡಿ ರಾಜುಗೆ ಬಹಳ ನೋವಾಯಿತು.

ಕೊಯ ಆದಿವಾಸಿಗಳ ಹಳ್ಳಿಗಳಿಗೆ  ನುಗ್ಗಿ ಅತ್ಯಾಚಾರ , ಬಲಾತ್ಕಾರ , ಹಿಂಸಾ ಕೃತ್ಯಗಳನ್ನು ಆಂಗ್ಲರು ಆರಂಭಿಸಿದರು. ಈ ಅನಾಗರೀಕತೆಯನ್ನು ಕಂಡು ಕೆಂಡಮಂಡಲವಾದ ರಾಜು ಹೇಗಾದರೂ ಮಾಡಿ ನಿಲ್ಲಿಸಬೇಕು ಎಂದು ಯೋಚಿಸಿದ. ಇದೇ ವೇಳೆ ಆಂಗ್ಲರು ತಾವು ಸಂಧಿಗೆ ಸಿದ್ದವೆಂದು ಸಂಧಾನದ ನೆಪವೊಡ್ಡಿ ರಾಜುವನ್ನು ತಮ್ಮ ಶಿಬಿರಕ್ಕೆ ಕರೆಸಿಕೊಂಡರು.  ತನ್ನ ಬಲಿದಾನವಾದರೂ ಚಿಂತೆಯಿಲ್ಲ ನನ್ನ ನಂಬಿದವರನ್ನು ನಾನು ಉಳಿಸಬೇಕು ಎಂದು ರಾಜು ಒಪ್ಪಿ ನಿರಾಯುಧನಾಗಿ ಆಂಗ್ಲ ಅಧಿಕಾರಿಗಳು ಬೀಡುಬಿಟ್ಟಿದ್ದ ಸ್ಥಳಕ್ಕೆ ಬಂದನು. ತಕ್ಷಣೆವೇ ರಾಜುವನ್ನು ಪೊಲೀಸರು ಬಂಧಿಸಿ ಆಂಗ್ಲ ಅಧಿಕಾರಿ ಗೂಡಲ್ ಬಳಿ ಕರೆತಂದರು. ಆದರೆ ರಾಜು ಸಂಧಿ ಎಂದು ಕರೆದು ನನ್ನನ್ನು ಬಂಧಿಸಿದ್ದು ಧರ್ಮವಲ್ಲ ಎಂದು ಪ್ರತಿಭಟಿಸಿದನು.  ಆಗ ಗೂಡಲ್  ರಾಜುವನ್ನು ಒಂದು ಹುಣಸೆ ಮರಕ್ಕೆ ಕಟ್ಟಿ ಹಾಕಿವಂತೆ ಸೂಚಿಸಿ ಕಡೆಗೆ ಫೈಯರಿಂಗ್ಗೆ  ಆದೇಶ   ಕೊಟ್ಟನು ಒಮ್ಮೆಗೆ  ಎಲ್ಲರೂ ರಾಜುವಿನ ಮೇಲೆ ಗುಂಡಿನ ಮಳೆಗೆರೆದರು. ರಾಜು ಕಟ್ಟ ಕಡೆಯದಾಗಿ ' ವಂದೇ ಮಾತರಂ ' ಎಂದು ಹೇಳುತ್ತಾ  ಭಾರತಾಂಬೆಯ ಮಡಿಲು ಸೇರಿ ಅಮರರಾದರು.

ರಾಜುವಿನ ಬಲಿದಾನವನ್ನು ಕಂಡು ಸುಭಾಷ್ ಚಂದ್ರ ಬೋಸರು  ರಾಜು ಕುರಿತು ಹೀಗೆ ಹೇಳಿದ್ದರು " ರಾಜು ಇನ್ನಾವ ದೇಶದಲ್ಲಿ ಹುಟ್ಟಿದ್ದರೆ, ಇಲ್ಲಿಗಿಂತಲೂ ಹೆಚ್ಚು ಗೌರವ ಪಡೆಯುತ್ತಿದ್ದ " ಈ ಮಾತಿನಲ್ಲಿ ಎಂತಹ ಅರ್ಥವಿದೆ  ಅಲ್ಲವೇ . ಬನ್ನಿ ಸ್ನೇಹಿತರೇ ದೇಶಕ್ಕಾಗಿ , ತನ್ನ ಜನರ ಹಿತಕ್ಕಾಗಿ ಬಲಿದಾನ ಮಾಡಿದ ಅಲ್ಲೂರಿ ಸೀತಾರಾಮ ರಾಜು ಅವರನ್ನು ಒಮ್ಮೆ ನೆನೆಯೋಣ.

ಕೊಡುಗೆದಾರರು : ಮಧು ಚಂದ್ರ
2.89189189189
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top