ಧಾರ್ಮಿಕ ಮತ್ತು ಭಕ್ತಿ ಪ್ರಧಾನ ಆರಾಧನಾ ವಿಧಾನಕ್ಕೆ ಬದ್ಧವಾದ ಧಾರ್ಮಿಕ ಕಾಲಘಟ್ಟದಲ್ಲಿ ಇಂದು ನಾವಿದ್ದೇವೆ. ಯಾವ ಉದ್ದೇಶವನ್ನಿಟ್ಟುಕೊಂಡು ಶ್ರೀಕ್ಷೇತ್ರ ಧರ್ಮಸ್ಥಳ ಆರಂಭವಾಯಿತೊ ಅವೆಲ್ಲವನ್ನೂ ಯಶಸ್ವಿಯಾಗಿ ಅನುಷ್ಠಾನ ಮಾಡುವ ಜತೆಗೆ, ದೇವಳಗಳು ಜನರ ಸರ್ವಾಂಗೀಣ ಪ್ರಗತಿಗೆ ದುಡಿಯಬೇಕು ಎಂಬ ನಿಟ್ಟಿನಲ್ಲಿ ಪೂಜ್ಯ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಇಡೀ ದೇಶದಲ್ಲೇ ಒಂದು ದಿಟ್ಟ ಹೆಜ್ಜೆ ಇಟ್ಟು ನಮ್ಮ ನಡುವೆ ಅನನ್ಯರಾಗುತ್ತಾರೆ.ಅಷ್ಟೇ ಅಲ್ಲ, ಈ ನಿಟ್ಟಿನಲ್ಲಿ ಬಹುಮುಖಿ ಕಾರ್ಯವನ್ನೂ ಕೈಗೊಂಡಿದ್ದಾರೆ.
ಹೆಗ್ಗಡೆಯವರ ಈ ಸಾಧನೆಯ ಮಾರ್ಗ ಬಹಳ ಸಂಕೀರ್ಣ ಮತ್ತು ಅತ್ಯಂತ ಕಷ್ಟದ ಕೆಲಸವಾಗಿದೆ. ಆದರೂ ಇದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುತ್ತ ಬಂದಿರುವುದರಿಂದಲೇ ನಮ್ಮೆಲ್ಲರ ನಡುವೆ ಅವರು ಅನನ್ಯರಾಗಿದ್ದಾರೆ. ಇಂಥ ವ್ಯಕ್ತಿತ್ವಕ್ಕೆ 'ಪದ್ಮ ವಿಭೂಷಣ' ಸಲ್ಲುವ ಮೂಲಕ ಆ ಪ್ರಶಸ್ತಿಯೇ ಅರ್ಥವಂತಿಕೆ ಯನ್ನೂ, ಸಾರ್ಥಕತೆಯನ್ನೂ ಪಡೆದಿದೆ. ಹೆಗ್ಗಡೆಯವರ ಮುಂದಿನ ಯೋಜನೆಗಳನ್ನು ಇನ್ನಷ್ಟು ಯಶಸ್ವಿಯಾಗಿಸುವ ನಿಟ್ಟಿನಲ್ಲಿ ಇದು ಅವರಿಗೆ ಪ್ರೋತ್ಸಾಹದಾಯಕವಾಗಿ ಪರಿಣಮಿಸಲಿದೆ. ಸಮಾಜ ಮುಖಿ ಯಾದ ಅವರ ಮುಂದಿನ ಕಾರ್ಯಗತಿಯು ಅವರಿಗೆ ಮುಂದೆ 'ಭಾರತರತ್ನ' ಗೌರವವನ್ನು ತಂದುಕೊಟ್ಟರೆ ಸಾರ್ಥಕ ಎಂಬುದು ನನ್ನ ಅನಿಸಿಕೆ ಹಾಗೂ ಹಾರೈಕೆ.
ನಾನು ಪೂಜ್ಯ ಹೆಗ್ಗಡೆಯವರನ್ನು ದೀರ್ಘಕಾಲದಿಂದ ಅತ್ಯಂತ ಸಮೀಪವರ್ತಿಯಾಗಿ ನೋಡುತ್ತ ಬಂದಿದ್ದೇನೆ. 'ಜನರ ಸೇವೆಯೇ ಜನಾರ್ದನನ ಸೇವೆ' ಎಂಬ ಅವರ ಮನೋದೃಷ್ಟಿ ಮತ್ತು ಕಾರ್ಯಕ್ಷಮತೆಯನ್ನು ಕಂಡು ನಾನು ಆಶ್ಚರ್ಯಚಕಿತನಾಗಿದ್ದೇನೆ. ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ಅವರು ಈಗ ನಮ್ಮ ರಾಜ್ಯದ 25 ಜಿಲ್ಲೆಗಳನ್ನು ತನ್ನ ಕಾರ್ಯಕ್ಷೇತ್ರವಾಗಿ ತೆಗೆದುಕೊಂಡಿದ್ದಾರೆ. ಇನ್ನುಒಂದೆರಡು ವರ್ಷಗಳಲ್ಲಿ ಸಮಗ್ರ ಕರ್ನಾಟಕವೇ ಅವರ ಕಾರ್ಯಕ್ಷೇತ್ರವಾಗುವ ಭರವಸೆ ನನಗಿದೆ. ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ತನ್ನ ಕೃಪೆಗೊಳಗಾದವರು ಎಂದು ಅವರು ಯಾವತ್ತೂ ಭಾವಿಸಿದ್ದೇ ಇಲ್ಲ. ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಸತ್ಪ್ರಜೆಗಳಾಗಿ, ಸಬಲರಾಗಿ, ಈ ದೇಶವನ್ನು ಕಟ್ಟುವ ಶಕ್ತಿಗಳು ಎಂದು ಹೆಗ್ಗಡೆ ನಂಬುತ್ತಾರೆ. ಹಾಗೆ ಗ್ರಾಮೀಣ ಜನರಲ್ಲಿ ಇಂಥದೊಂದು ಆತ್ಮಸ್ಥೈರ್ಯವನ್ನು, ಕ್ರಿಯಾಶೀಲತೆಯನ್ನು ಪ್ರೇರೇಪಿಸುವುದೇ ಗ್ರಾಮೀಣಾಭಿವೃದ್ಧಿ ಯೋಜನೆಯ ಬಹಳ ಮುಖ್ಯ ಗುರಿ. ಈ ಯೋಜನೆಯ ಎಲ್ಲ ಸದಸ್ಯರೂ ತಮ್ಮ ಸತ್ಸಂಕಲ್ಪದ ಹಾಗೂ ಯಶಸ್ಸಿನ ಪಾಲುದಾರರು ಎಂದು ಹೆಗ್ಗಡೆಯವರು ನಂಬಿದ್ದಾರೆ. ಪ್ರತಿಯೊಬ್ಬರನ್ನೂ ಸಬಲರನ್ನಾಗಿಸಿ, ಶಕ್ತಿಶಾಲಿಯಾಗಿಸಿ, ತಮ್ಮ ಕಾಲ ಮೇಲೆ ತಾವು ನಿಂತು ದೇಶದ ಪ್ರಗತಿಯಲ್ಲಿ ಪಾಲುದಾರರನ್ನಾಗಿ ಮಾಡುವುದು ಅವರ ಉದ್ದೇಶ. ಈ ಕಾರಣಕ್ಕಾಗಿ ಸದಸ್ಯರೆಲ್ಲ ತನ್ನ ಪರಿವಾರದ ಸದಸ್ಯರೆಂದೇ ಕಾಣುತ್ತಾರೆ.
ನಾನು ಹೆಗ್ಗಡೆ ಅವರನ್ನು ಎಳವೆಯಿಂದಲೂ ಕಂಡಿದ್ದೇನೆ. ಅವರು ಶ್ರೀಕ್ಷೇತ್ರದ ಧರ್ಮಾಧಿಕಾರಿಗಳಾಗಿ ಪಟ್ಟಾಭಿಷಿಕ್ತರಾದ ನಂತರ ವೀರೇಂದ್ರ ಹೆಗ್ಗಡೆ ಅವರ ಚಿಂತನೆಯ ಗತಿಯೇ ಬದಲಾಯಿತು. 'ಸರ್ವಜನ ಹಿತಾಯ, ಸರ್ವಜನ ಸುಖಾಯ' ಎಂಬ ಉದ್ದೇಶಕ್ಕಾಗಿ ತನ್ನ ಬದುಕನ್ನು ಹೆಗ್ಗಡೆ ಆ ದಿನದಿಂದ ಮುಡಿಪಾಗಿಟ್ಟರು ಎಂದು ನನಗೆ ಅನಿಸುತ್ತಿದೆ. ಪ್ರತಿದಿನ ಧರ್ಮಸ್ಥಳಕ್ಕೆ ಬರುವ ಸಾವಿರಾರು ಮಂದಿ ಆರ್ತರು, ದುಃಖಿಗಳು ಹೆಗ್ಗಡೆಯವರಲ್ಲಿ ತಮ್ಮ ಕಷ್ಟಕೋಟಲೆಗಳನ್ನು ನಿವೇದಿಸಿಕೊಳ್ಳುತ್ತಾರೆ. ಆಗ ಹೆಗ್ಗಡೆಯವರು ನೀಡುವ ಸಾಂತ್ವನದ ಮಾತುಗಳು, ಭರವಸೆಗಳು ಬದುಕಿನ ಊರುಗೋಲಾದ ಅದೆಷ್ಟೋ ನಿದರ್ಶನಗಳನ್ನು ನಾನು ಕೊಡಬಲ್ಲೆ. ನಮ್ಮೆಲ್ಲರ ಅದೃಷ್ಟಕ್ಕೆ, ಅವರ ಸೋದರ ಮಾವನವರ ಮಗಳು ಹೇಮಾವತಿ ಅವರೊಂದಿಗೆ ಹೆಗ್ಗಡೆಯವರ ವಿವಾಹವಾಯಿತು. ಸಹಧರ್ಮಿಣಿಯಾಗಿ ಬಂದ ಅವರು, ತಮ್ಮ ಹೆಸರಿಗೆ ನೂರಕ್ಕೆ ನೂರರಷ್ಟು ಅರ್ಥವನ್ನು ತಂದು ಕೊಟ್ಟರು. ಪೂಜ್ಯ ಹೆಗ್ಗಡೆಯವರ ಭಾವನೆಗಳಿಗೆ ಪೂರಕವಾಗಿರುವ ಹೇಮಾವತಿಯವರು ಅವರ ಸಾಧನೆಯ ಶಕ್ತಿಯೂ ಆಗಿದ್ದಾರೆ. ಗ್ರಾಮೀಣಾಭಿವೃದ್ಧಿ ಕಾರ್ಯದ ಯಶಸ್ಸಿನ ಹಿಂದೆ ಅವರ ಪಾತ್ರವೂ ಬಹುದೊಡ್ಡದು. ಬಹಳ ಮುಖ್ಯವಾಗಿ ಮಹಿಳಾ ಸಬಲೀಕರಣ, ಕೌಟುಂಬಿಕ ಸಾಮರಸ್ಯ ಕುರಿತು ಹೇಮಾವತಿ ಅವರ ಕಾರ್ಯವೈಖರಿ ನಿಜಕ್ಕೂ ಅನನ್ಯವಾದುದು. ಹೆಗ್ಗಡೆಯವರ ಇಡೀ ಕುಟುಂಬ, ಸಹೋದರರೂ ಕೂಡ ಅವರ ಎಲ್ಲ ಸಾಮಾಜಿಕ ಕೆಲಸ ಕಾರ್ಯಗಳಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದು ನಾಡಿನ ಭಾಗ್ಯ.
ಹೆಗ್ಗಡೆ ಅವರದು ಬಹುಮುಖಿ ಆಸಕ್ತಿಯ ವ್ಯಕ್ತಿತ್ವ. ಅವರು 'ರುಡ್‌ಸೆಟ್' ಯೋಜನೆಯ ಮೂಲಕ ದೇಶದ ಸಾವಿರಾರು ಅರೆಬರೆ ಶಿಕ್ಷಣ ಪಡೆದ ಯುವಕರಿಗೆ ಸ್ವಉದ್ಯೋಗ ತರಬೇತಿ ಕೊಡಿಸುವ ಜತೆಗೆ ಆರ್ಥಿಕ ಸಹಾಯವನ್ನು ಬ್ಯಾಂಕ್ ಮೂಲಕ ಒದಗಿಸಿಕೊಟ್ಟಿದ್ದಾರೆ. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಪಾನ ನಿರೋಧವನ್ನು ಪ್ರತಿಪಾದಿಸುವ ಹೆಗ್ಗಡೆಯವರು ಜನಜಾಗೃತಿ ವೇದಿಕೆ ಮೂಲಕ ಮದ್ಯವರ್ಜನೆ ಶಿಬಿರಗಳನ್ನು ಏರ್ಪಡಿಸಿ 68 ಸಾವಿರ ಜನರನ್ನು ಕುಡಿತದ ಚಟದಿಂದ ಹೊರತಂದು, ಆ ಕುಟುಂಬಗಳಿಗೆ ಬೆಳಕನ್ನೂ, ಸಂತೋಷವನ್ನೂ ಪುನಃ ಒದಗಿಸಿದ್ದಾರೆ.
25 ವರ್ಷಗಳ ಹಿಂದೆ ಚಾರಿತ್ರಿಕ ಹಾಗೂ ಕಲಾತ್ಮಕ ದೇವಾಲಯಗಳ ಜೀರ್ಣೋದ್ಧಾರದ ಉದ್ದೇಶದಿಂದಲೇ ಧರ್ಮೋತ್ಥಾನ ಟ್ರಸ್ಟ್ ಆರಂಭಿಸಿ, ಜೀರ್ಣಾವಸ್ಥೆಯಲ್ಲಿದ್ದ 200 ದೇಗುಲಗಳನ್ನು ಮರುಸೃಷ್ಟಿಸಿ ಸ್ಥಳೀಯರ ಸುಪರ್ದಿಗೆ ಒಪ್ಪಿಸಿದ್ದಾರೆ. ಜತೆಗೆ ಈವರೆಗೆ ನಾಡಿನಾದ್ಯಂತದ ಸುಮಾರು 1,700 ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಸಹಾಯಧನ ನೀಡಿದ್ದಾರೆ. ಹೀಗೆ ಹೊಸ ಕಲ್ಪನೆಯನ್ನು ಕಾರ್ಯಗತ ಮಾಡುತ್ತ ಒಟ್ಟೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ನಿರಂತರವಾಗಿ ಅವರು ಮುಂದುವರಿಸಿದ್ದಾರೆ.
ಹತ್ತಾರು ಕೆಲಸಗಳ ನಡುವೆಯೂ ತಮ್ಮ ಆಸಕ್ತಿಯ ಕ್ಷೇತ್ರವಾದ ಫೋಟೋಗ್ರಫಿಯಲ್ಲೂ ಅವರು ಪರಿಣತಿ ಸಾಧಿಸಿದ್ದಾರೆ. ಈ ಕಾರಣಕ್ಕೂ ನಮ್ಮ ಗಮನ ಸೆಳೆಯುವ ಹೆಗ್ಗಡೆಯವರು ಒಬ್ಬ ಮಾತೃ ಹೃದಯಿ ಎಂದು ಅದೆಷ್ಟೋ ಬಾರಿ ಅನಿಸುತ್ತದೆ. ಜನಸೇವೆಯಲ್ಲಿ ನಿರಂತರವಾಗಿ ನಿರತರಾಗಿ, ಅತ್ಯಂತ ಆದರ್ಶಪ್ರಾಯವಾಗಿ ಒಂದು ಧಾರ್ಮಿಕ ಕ್ಷೇತ್ರವನ್ನು ಮುನ್ನಡೆಸುತ್ತಿರುವ ವೀರೇಂದ್ರ ಹೆಗ್ಗಡೆ ಅವರಿಗೆ 'ಪದ್ಮ ವಿಭೂಷಣ' ಬರುವ ಮೂಲಕ ಆ ಪ್ರಶಸ್ತಿಗೆ ಒಂದು ಬೆಲೆ ಸಂದಿದೆ ಎಂದು ನನ್ನ ನಂಬಿಕೆ.
ಹೆಜ್ಜೆ ಗುರುತುಗಳು
1985: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
1993: ಅಂದಿನ ರಾಷ್ಟ್ರಪತಿಯಿಂದ 'ರಾಜರ್ಷಿ' ಗೌರವ
1994: ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ
1994: ಮಂಗಳೂರು ವಿವಿ ಡಾಕ್ಟರೇಟ್
2004: 'ವರ್ಷದ ಕನ್ನಡಿಗ' ಪ್ರಶಸ್ತಿ
2011: 'ಕರ್ನಾಟಕ ರತ್ನ' ಗೌರವ
2011: ಸರ್ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ
2012: ಗ್ರಾಮಾಭಿವೃದ್ಧಿ ಯೋಜನೆಗಾಗಿ ಹಸಿರು ಆಸ್ಕರ್ ಎಂದೇ ಹೆಸರಾದ 'ಆಶ್ಡೆನ್ ಸುಸ್ಥಿರ ಇಂಧನ ಕಾರ್ಯಕ್ರಮ ಪ್ರಶಸ್ತಿ'
2013: ದೇವಿ ಅಹಲ್ಯಾಬಾಯಿ ಪುರಸ್ಕಾರ
ಮೂಲ : ವಿಜಯ ಕರ್ನಾಟಕ
ಕೊನೆಯ ಮಾರ್ಪಾಟು : 5/8/2020