ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಾಧಕರ ಮೂಲೆ / ಪಂಡಿತ್ ಗೇಂದಲಾಲ್ ದೀಕ್ಷಿತ್
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಪಂಡಿತ್ ಗೇಂದಲಾಲ್ ದೀಕ್ಷಿತ್

ಪಂಡಿತ್ ಗೇಂದಲಾಲ್ ದೀಕ್ಷಿತ್ ಕುರಿತು ಇಲ್ಲಿ ತಿಳಿಸಲಾಗಿದೆ.

ಆಗಸ್ಟ್ ೧೫ ೧೯೪೭ರಂದು ನಮಗೆ ಅಂದರೆ ಭಾರತೀಯರಿಗೆ ಸ್ವತಂತ್ರ ಸಿಕ್ಕಿತು ಅದಕ್ಕೆಲ್ಲ ಮುಂಚೆ ನಮ್ಮನ್ನು ಕೆಂಪು ಮೂತಿಯ ಆಂಗ್ಲರು ಅಳುತ್ತಿದ್ದರು ಎಂದು ನಮ್ಗೆಲ್ಲಾ ತಿಳಿದೇಯಿದೆ. ಈ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನ ಮಾಡಿ ಹುತಾತ್ಮರಾದವರು ಹಲವರು ಆದರೆ ನಮ್ಮವರಿಗೆ ತಿಳಿದಿರುವುದು ಕೆಲವೇ ಮಂದಿ ಮಾತ್ರ. ನಿಮಗೆಲ್ಲ ತಿಳಿದಂತೆ ಸ್ವತಂತ್ರ ಚಳುವಳಿ ಆರಂಭವಾಗಿದ್ದು ೧೮೫೭ರಂದು ಅಂತ್ಯವಾಗಿದ್ದು ೧೯೪೭ರ ಆಗಸ್ಟ್ ೧೫ರ ಮುಸುಕಿನಲ್ಲಿಯೆಂದು. ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಭಾರತದ ಇತಿಹಾಸದ ಪ್ರಮುಖರ ಪರಿಚಯದ ಸರಣಿಯನ್ನು ಮುಂದುವರೆಸುವ ಸಂದರ್ಭ ಮತ್ತೆ ಬಂದೊದಗಿದೆ. ಹಾಗಾಗಿ ಈ ಸರಣಿಯು ಮುಂದುವರಿದ ಭಾಗವಾಗಿ ಮುಂದಿನ ನಾಲ್ಕು ವಾರಗಳು ಸಹ ಬ್ಲಾಗ್ನ ಲೇಖನಗಳು ಈ  ಮಹಾತ್ಮರಿಗೆ ಮೀಸಲು.

ಆಂಗ್ಲರ ನಡೆಸುತ್ತಿದ್ದ ದೌರ್ಜನ್ಯ, ಅತ್ಯಾಚಾರವನ್ನು ಸಹಿಸಲಾದಾಗ ಭಾರತೀಯ ಬಿಸಿ ರಕ್ತದ ತರುಣರು ಆಂಗ್ಲರ ವಿರುದ್ಧ  ಕೇವಲ ಶಾಂತಿ ಮಾರ್ಗ ಅನುಸರಿಸಿ ಸ್ವತಂತ್ರ ಪಡೆಯಲಾಗುವುದಿಲ್ಲ ಎಂದು ಅರಿತು ಬಾಂಬು, ಬಂದೂಕು ಮತ್ತು ಶಕ್ತಿ ಬಳಸಿ ರಕ್ತ ಹರಿಸುವ ಕ್ರಾಂತಿಕಾರಿ ನಿರ್ಧಾರ ಮಾಡಿದರು. ಇಂತಹ ನಿರ್ಧಾರಕ್ಕೆ ಹಣವನ್ನು ಹೊಂದಿಸುವುದು ಭಾರಿ ಸವಾಲಿನ ಕೆಲಸವಾಗಿತ್ತು. ಅತ್ತ ಬಲವಿಲ್ಲದ(ಜನ ಬಲ),ಇತ್ತ ಹಣವಿಲ್ಲದ  ಭಾರತೀಯ ತರುಣನೋರ್ವ ಈ ಕ್ರಾಂತಿಕಾರಿ ಯೋಜನೆಗೆ ತನ್ನನ್ನೇ ತಾನು ಸಮರ್ಪಿಸಿಕೊಂಡಿದ್ದ. ತನ್ನ  ಯೋಜನೆಗೆ  ಹಣ ಹೊಂದಿಸಲು ಈ ಯುವಕ ಮೊದಲಿಗೆ ಸುಶಿಕ್ಷಿತರು ಹಾಗು ಉಳ್ಳವರ ಹತ್ತಿರ ಸಹಾಯಕ್ಕೆ ಅಂಗಲಾಚಿದ ಆದರೆ ಅವರಾರು ಅವನ ನೆರವಿಗೆ ಬರಲು ನಿರಾಕರಿಸಿದರು. ಛಲಬಿಡದ ಆ ಯುವಕ ಮಾಡಿದ್ದೇನು ಗೊತ್ತೇ, ಸಮಾಜದಿಂದ ತಿರಸ್ಕೃತವಾದ ಹೆಸರು ಕೇಳಿದರೆ ಭಯ ಬೀಳುವಂತಿರುವ ಭಯಂಕರ ಡಕಾಯಿತರರ ಸ್ನೇಹ ಸಂಪಾದಿಸಿ ಅವರನ್ನು ಭಾರತ  ಮಾತೆಯನ್ನು ಆಂಗ್ಲರ ಬಂಧನದಿಂದ ಬಿಡಿಸುವ ಯೋಜನೆಗೆ ಸಿದ್ಧಪಡಿಸುತ್ತಾನೆ ಆ ಯುವಕ ಮತ್ತಾರು ಅಲ್ಲ ' ಪಂಡಿತ್ ಗೇಂದಲಾಲ್ ದೀಕ್ಷಿತ್ ' ಹಾಗೂ  ಆ ಡಕಾಯಿತರು ಮತ್ತಾರು ಅಲ್ಲ ಚಂಬಲ್ ಕಣಿವೆಯ ಡಕಾಯಿತರು .


ನವೆಂಬರ್ ೩೦ ೧೮೯೦ರಲ್ಲಿ ಆಗ್ರಾ ಜಿಲ್ಲೆಯ ಮಯೀ ಎಂಬ ಗ್ರಾಮದ ಜಮೀನುದಾರ ಬೋಲನಾತ್ ದೀಕ್ಷಿತ್ ಹಾಗೂ ವಿಚಿತ್ರಾದೇವಿಯ ಮಗನಾಗಿ ಗೇಂದಲಾಲ್ ದೀಕ್ಷಿತ್ ಭಾರತ ಮಾತೆಯ ಸೇವೆಗಾಗಿ ಜನ್ಮತಾಳಿದರು. ತನ್ನ ಮೂರನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡ ಗೇಂದಲಾಲ್ ತಂದೆಯ ಆಶ್ರಯದಲ್ಲೇ ಬೆಳೆದು ದೊಡ್ಡವನಾದ.

೧೯೦೫ ರಲ್ಲಿ ಆಂಗ್ಲರು ಬಂಗಾಳವನ್ನು ವಿಭಜಿಸಿದರು.ಬಂಗಾಳವನ್ನು ವಿಭಜಿಸಿದರೆ  ಅಣ್ಣ ತಮ್ಮಂದಿರ ಹಾಗೆ ಸಹಬಾಳ್ವೆಯಿಂದ ಜೀವನ ಸಾಗಿಸುತ್ತಿದ್ದವರನ್ನು ಬೇರೆ ಬೇರೆ ಮಾಡಿದರೆ ಸ್ವತಂತ್ರ ಚಳುವಳಿಯನ್ನು ಹತ್ತಿಕ್ಕಬಹುದು ಎಂಬುದೇ ಈ ಕುತಂತ್ರ. ಈ ವಿಭಜನೆಯ  ಮೂಲ ಉದ್ದೇಶವನ್ನು ಅರಿತ ಭಾರತೀಯರು ಆಂಗ್ಲ ಸರ್ಕಾರದ ವಿರುದ್ದ ಸಮರ ಸಾರಿದರು. ವಿದೇಶಿ ವಸ್ತುಗಳನ್ನು ಬೆಂಕಿಗೆ ಹಾಕಿ  ಆಂಗ್ಲರನ್ನು ಭಾರತದಿಂದ ತೊಲಗಿಸುವ ಸಂಕಲ್ಪವನ್ನು ತೊಟ್ಟು ಚಳುವಳಿಗೆ ಧುಮುಕಿದರು. ಸ್ವದೇಶಿ ಚಳುವಳಿ ಮೆಲ್ಲಗೆ ದೇಶದೆಲ್ಲಡೇ ವ್ಯಾಪಿಸ ತೊಡಗಿದಾಗ ಗೇಂದಲಾಲಗೂ ಸಹ ತಾನು ನನ್ನ ದೇಶದ ಸ್ವತಂತ್ರಕ್ಕಾಗಿ ಏನಾದರೂ ಮಾಡಬೇಕು ಎಂಬ ದೇಶಭಕ್ತಿ ಉಕ್ಕಿ ಹರಿಯಿತು.

ಅದೇ ಸಮಯಕ್ಕೆ ಲೋಕಮಾನ್ಯ ತಿಲಕರು ನಡೆಸುತ್ತಿದ್ದ ಶಿವಾಜಿ ಉತ್ಸವ ಹಾಗೂ ತಿಲಕರ ಲೇಖನಗಳು ಗೇಂದಾಲಾಲ್  ಮನದ ಮೇಲೆ ವ್ಯಾಪಕ ಪರಿಣಾಮ ಬೀರತೊಡಗಿದವು. ನಾನು ಸಹ ಶಿವಾಜಿಯ ಹಾಗೆ ಶತ್ರುಗಳನ್ನು ಉಪಾಯವಾಗಿ ನಾಶ ಮಾಡಬೇಕು ಎಂದು ಶಿವಾಜಿ ಹೆಸರಿನಲ್ಲಿ ಶಿವಾಜಿ ಸಮಿತಿ ಎಂದು ಸಂಸ್ಥೆ ಸ್ಥಾಪಿಸಿ ಯುವಕರಲ್ಲಿ ದೇಶ ಭಕ್ತಿ ಹುಟ್ಟಿಸುವ ಕಾರ್ಯಕ್ಕೆ ಮುನ್ನುಡಿ ಬರೆದನು.

ತನ್ನ ಕಾರ್ಯ  ಸಾಧಿಸಲು ವಿದ್ಯಾವಂತರು ಹಾಗೂ ಉಳ್ಳವರ ಹತ್ತಿರ ಆರ್ಥಿಕ  ನೆರವಿಗಾಗಿ ಸಹಾಯ ಹಸ್ತ ಚಾಚುತ್ತಾನೆ. ಅವರು ಇವನ ಕ್ರಾಂತಿಕಾರಿ ಯೋಜನೆಗಳಿಗೆ ಆಸ್ಪದ ನೀಡದೆಯಿರುವುದನ್ನು ಕಂಡು ನಿರಾಶನಾಗುತ್ತಾನೆ. ಆರ್ಥಿಕ ಸಹಾಯ ಬೇಡ ಕಡೆ ಪಕ್ಷ ಧೈರ್ಯವಂತರ ಬೆಂಬಲ ಸಾಕು ಎಂದು ಬಲಿಷ್ಟರ ಮುಂದೆ ಸಹಾಯ ಕೇಳುತ್ತಾನೆ ಮತ್ತದೇ ನಿರಾಸೆ. ಹೀಗಿರುವಾಗ ಚಂಬಲ್ ಕಣಿವೆಯ ಡಕಾಯಿತರ ನೆನಪಾಗಿ ಅವರ ಬೆಂಬಲ ಪಡೆಯುವ ಯೋಜನೆಗೆ ಚಾಲನೆ ನೀಡುತ್ತಾನೆ.
ಈ ಡಕಾಯಿತರು ಇರುವುದು ಕಾಡಿನಲ್ಲಿ ಅವರನ್ನು ಭೇಟಿ ಮಾಡುವುದು ಅಸಾಧ್ಯದ ಕೆಲಸ, ಅಕಸ್ಮಾತ್ ಅವರನ್ನು ಭೇಟಿ ಮಾಡಿದಾಗ ಅವರಿಗೇನಾದರು ಅನುಮಾನ ಬಂದರೆ ಗುಂಡಿಟ್ಟು ಕೊಲ್ಲುವುದಕ್ಕೂ ಹೇಸುವುದಿಲ್ಲ ಈ ಡಕಾಯಿತರು. ಎಂಬ ಆತಂಕ ಬೇರೆ .

ಅದಕ್ಕೆ ಸಮಯಕ್ಕೆ ಶಿವಾಜಿ ಸಮಿತಿಯಲ್ಲಿ ದೇಶಪ್ರೇಮಿ ಯುವಕರನ್ನು ನಿಧಾನವಾಗಿ ಸೇರ್ಪಡೆಗೊಳ್ಳುತ್ತಿದ್ದರು ಹಾಗೂ ಇವರಿಗೆ ಪಿಸ್ತೂಲು ಮತ್ತು ಇತರೆ ಆಯುಧಗಳನ್ನು ಬಳಸುವ ವಿಧಾನದ ತರಬೇತಿಯನ್ನು ನೀಡುತ್ತಿದ್ದರು. ಶಿವಾಜಿ ಸಮಿತಿಗೆ ಲಕ್ಷ್ಮಣನಂದ ಎಂಬುವ ಯುವಕ ಸೇರ್ಪಡೆಗೊಂಡನು ಈತನ ಸೇರ್ಪಡೆಯೊಂದಿಗೆ ಶಿವಾಜಿ ಸಮಿತಿಗೆ ಆನೆಬಲ ಬಂದಂತಾಯಿತು. ಗೇಂದಾಲಾಲನಿಗೆ ಪಂಚಮ ಸಿಂಗ್ ಎಂಬ ಡಕಾಯಿತನ ಪರಿಚವಾಯಿತು , ಪಂಚಮ ಸಿಂಗನ ಜೊತೆ ಅವನ ಅನುಯಾಯಿಗಳು ಸಹ ಶಿವಾಜಿ ಸಮಿತಿಗೆ ಸೇರ್ಪಡೆಯಾದರು. ಪಂಚಮಸಿಂಗ್ ಹಾಗೂ ಲಕ್ಷ್ಮಣಾನಂದರ ಜೊತೆಗೂಡಿ ಐನೂರು  ಸಾಹಸಿಗಳ ಸೈನ್ಯವನ್ನು ಆಂಗ್ಲರ ಹೆಡೆಮುರಿಯಲು ಕಟ್ಟಿದನು.

ನಿಧಾನವಾಗಿ ಆಂಗ್ಲ ಸರ್ಕಾರದ ಕಾರ್ಯಕ್ರಮಕ್ಕೆ ಅಡ್ಡಿ ಮಾಡಿ ಆಂಗ್ಲರ ವಿರುದ್ದ ಜನರನ್ನು ಪ್ರಚೋದಿಸ ತೊಡಗಿದನು.  ಗೇಂದಾಲಾಲ ಸೈನ್ಯವನ್ನು ಸದೆಬಡಿಯಲು ಆಂಗ್ಲ ಸರ್ಕಾರಕ್ಕೆ ಆಗಲಿಲ್ಲ . ಗೇಂದಾಲಾಲನ ಕಾರ್ಯಾಚರಣೆಯ ವ್ಯಾಪ್ತಿ ನಿಧಾನವಾಗಿ ಗ್ವಾಲಿಯರ್ , ಮೈನಪುರಿ, ಪಾರ ಹೀಗೆ ಸುತ್ತಮುತ್ತ ಪ್ರದೇಶದಲೆಲ್ಲಾ ವ್ಯಾಪಿಸಿತು. ಶಿವಾಜಿ ಸಮಿತಿಯು ಆಂಗ್ಲ ಸೈನಿಕರ ಮೇಲೆ ನುಗ್ಗುವುದು ಕ್ಷಣಮಾತ್ರದಲ್ಲಿ ಅವರನ್ನೆಲ್ಲ ಧ್ವಂಸ ಮಾಡುವುದು.  ಇದರಿಂದ ಆಂಗ್ಲ ಸರ್ಕಾರದ ಕಣ್ಣು ಕೆಂಪಾಗತೊಡಗಿತು ಶಿವಾಜಿ ಸಮಿತಿಯಲ್ಲಿರುವವರೆನೆಲ್ಲ ದೇಶದ್ರೋಹಿಗಳು ಎಂದು ಸಾರಿ ಶಿವಾಜಿ ಸಮಿತಿಯವರನ್ನು ಹಿಡಿಯುವ ಯೋಜನೆಗೆ ಆಂಗ್ಲರು ರೂಪುರೇಷೆ ಹಾಕಿದರು.

ಒಮ್ಮೆ ಗ್ವಾಲಿಯರ್ನ ಭಿಂಡ್ ಕಾಡಿನಲ್ಲಿ ಗೇಂದಾಲಾಲನ ದೊಡ್ಡ ಗುಂಪು ಸತತವಾಗಿ ಮೂರು ದಿನಗಳವರೆಗೂ ನಡೆಯುತ್ತಿತ್ತು, ಎಷ್ಟೇ ಮುಂದುವರಿದರೂ ಕಾಡು ಮುಗಿಯಲೇಯಿಲ್ಲ . ಹಾಗಾಗಿ ಗುಂಪಿಗೆ ಊಟವಿಲ್ಲ ಎಲ್ಲರೂ ಹಸಿವಿನಿಂದ ಬಸವಳಿದಿದ್ದರು. ಇಂತಹ ಸಮಯದಲ್ಲಿ ಹಿಂದೂ ಸಿಂಗ್ ಎನ್ನುವವನು ಊಟ ತರುತ್ತೇನೆ ಎಂದು ಎಲ್ಲರಿಗೂ ತಂದು ಕೊಟ್ಟನು. ಅವನು ಕೊಟ್ಟ ಊಟವನ್ನು ತಿಂದ ಕೆಲವರು ತೆಲೆ ತಿರುಗುತ್ತಿದೆ ಎಂದು ಹೇಳುತ್ತಾ ನಿದ್ದೆಗೆ ಜಾರುತ್ತಿದ್ದರು. ಲಕ್ಷಣಾನಂದಗೆ ತಮಗಾದ ಮೋಸದ ಅರಿವಾಯಿತು ತಕ್ಷಣ ಹಿಂದೂಸಿಂಗ್ ಕಡೆಗೆ ತಿರುಗಿ ಗುಂಡುಹಾರಿಸಿಬಿಟ್ಟನು. ಗುಂಡಿನ ಶಬ್ಧ ಕೇಳುತ್ತಿದ್ದಂತೆ ಕ್ಷಣಮಾತ್ರದಲ್ಲಿ ಆಂಗ್ಲ ಪೊಲೀಸರು ಸುತ್ತುವರಿದರು. ಗೇಂದಲಾಲನ ಸೈನಿಕರು ವಿಷ ಬೆರೆಸಿದ ಊಟ ತಿಂದರು ದೇಶಕ್ಕಾಗಿ ಹೋರಾಟ ಮಾಡಿದರಾದರು ಆಂಗ್ಲರ ಕೈ ಮೇಲಾಯಿತು. ಗೇಂದಲಾಲನ ಜೊತೆ ಬದುಕಿ ಉಳಿದವರನ್ನು ಪೊಲೀಸರು ಸೆರೆ ಹಿಡಿದರು.
ಸೆರೆಮನೆಯಲ್ಲಿ ಗೇಂದಲಾಲ ಮತ್ತು ಅವನ ಸಂಗಡಿಗರಿಗೆ ತಮ್ಮ ಗುಂಪಿನ ಬಗ್ಗೆ ಮಾಫಿ ಸಾಕ್ಷಿ  ಆಗುವಂತೆ ಪೀಡಿಸಿ ತಮ್ಮ ಗುಂಪಿನ ನಾಯಕನನ್ನು ಯಾರು ಎಂದು ತೋರಿಸುವಂತೆ ಚಿತ್ರವಿಚಿತ್ರ ಹಿಂಸೆ ನೀಡಿದರು. ಆದರೆ ಯಾರೊಬ್ಬರು ಬಾಯಿ ಬಿಡಲಿಲ್ಲ. ಆದರೆ ಕಡೆಗೆ ಸೋಮನಾಥ ಎಂಬುವ ಕ್ರಾಂತಿಕಾರಿ ಗೇಂದಲಾಲನ ಬಗ್ಗೆ ಬಾಯಿಬಿಟ್ಟನು. ಗೇಂದಾಲಲನನ್ನು ಗುರುತಿಸಿದ ಪೊಲೀಸರು ಮಾಫಿ ಸಾಕ್ಷಿಯಾಗುವಂತೆ ಚಿತ್ರ ಹಿಂಸೆ ನೀಡಿದರು.

ಗೇಂದಲಾಲನು ಸೆರೆಮನೆಯಿಂದ ತಪ್ಪಿಸಿಕೊಂಡು ಹೋಗಿ ಮತ್ತೆ ಸಂಘಟನೆ ಮಾಡುವ ಯೋಜನೆ ನಿರೂಪಿಸುವ ಸಲುವಾಗಿ ನಾನು ಮಾಫಿ ಸಾಕ್ಷಿಯಾಗುತ್ತೇನೆ ಎಂದನು. ಪೊಲೀಸರು ಆತನನ್ನು ಸೆರೆಮನೆಯಿಂದ ಬಿಡುಗಡೆ ಮಾಡಿ ಪೊಲೀಸು ಅಧಿಕಾರಿಯ ಮನೆಯಲ್ಲಿ ಗೃಹಬಂಧನದಲ್ಲಿಟ್ಟರು. ಅಂದು ಪೊಲೀಸರಿಂದ ತಪ್ಪಿಸಿಕೊಂಡ ಗೇಂದಲಾಲ ಮತ್ತೆ ಸಿಗಲೇಯಿಲ್ಲ. ಊರೂರು ಅಲೆದಾಡುತ್ತಾ ಗೇಂದಲಾಲ್ ತನ್ನ ಮನೆಗೆ ಬಂದ ಆದರೆ ತನ್ನ ಮನೆಯಲ್ಲಿ ನಿರೀಕ್ಷಿಸಿದ ಪ್ರತಿಕ್ರಿಯೆ ಸಿಗಲಿಲ್ಲ ಅಲ್ಲಿಂದ ಮತ್ತೆ ದೂರ ಹೋದ.  ಕಡೆಗೆ ತನ್ನ ಮಿತ್ರನಿಗೆ ಕಾಗದ ಬರೆದು ತನ್ನ ಹೆಂಡತಿಯನ್ನು ತಾನಿರುವ ಕಡೆ  ಕರೆದುಕೊಂಡು ಬರುವಂತೆ ಸೂಚಿಸಿದರು.

ಸೆರೆಮನೆಯಲ್ಲಿದ್ದಾಗ ಗೇಂದಲಾಲನಿಗೆ ಕ್ಷಯ ರೋಗವು ಆರಂಭದ ಹಂತದಲ್ಲಿತ್ತು ,ಹೆಂಡತಿ ಬಂದು ಆರೈಕೆ ಮಾಡಿದರು ಗುಣವಾಗದೆ ಅದು ನಿಧಾನವಾಗಿ ದೇಹವನ್ನು ವ್ಯಾಪಿಸುತ್ತಾ  ಗೇಂದಲಾಲನನ್ನು ದುರ್ಬಲನನ್ನಾಗಿ ಮಾಡಿ ಸಾವಿನ ಅಂಚಿಗೆ ತಳ್ಳಿತ್ತು. ಇದಲ್ಲದೆ ಗೇಂದಲಾಲನನ್ನು ಪೊಲೀಸರು ಹುಡುಕುತ್ತಲೆಯಿದ್ದರು, ಇದನ್ನು ಅರಿತ ಅವನ ಮಿತ್ರ ಗೇಂದಲಾಲ ಸತ್ತರೆ ಅವನ ಶವ ಸಂಸ್ಕಾರ ಮಾಡುವುದು ಅಪಾಯದ ಕೆಲಸವೆಂದು ಅರಿತು ದೆಹಲಿಯ ಇರ್ವಿನ್ ಆಸ್ಪತ್ರೆಗೆ  ಅನಾಥ ರೋಗಿಯೆಂದು ಸೇರಿಸಿದನು.  ಕಡೆಗೆ 1920 ಡಿಸೆಂಬರ್ 21ರಂದು ಗೇಂದಲಾಲ ಭಾರತ ಮಾತೆಯಲ್ಲಿ ಲೀನನಾದರು.

ನಾನು ಸತ್ತರೂ ನನ್ನ ಆತ್ಮ ಈ ನೆಲದಲ್ಲಿ ಹುಟ್ಟಬೇಕು. ನನ್ನ ತಾಯಿ ಸ್ವತಂತ್ರಳಾಗುವವರೆಗೂ ಕಾದಡುತ್ತಾ ಹೋರಾಡಿ ಮಡಿಯಬೇಕು ಎಂಬ ಆಸೆ ಹೊತ್ತಿದ್ದ ಗೇಂದಲಾಲ ಕಡೆಗೆ ಅನಾಥನೆಂಬ ಹಣೆ ಪಟ್ಟಿಯೊತ್ತು ನಮ್ಮವರಿಗೆ ಅಪರಿಚಿತನಾಗಿ ಮರೆಯಾದನು.

ಕೊಡುಗೆದಾರರು : ಮಧು ಚಂದ್ರ

3.02702702703
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top