ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಶಿಕ್ಷಣ / ಸಾಧಕರ ಮೂಲೆ / ವಚನಕಾರರು ತಮ್ಮ ವಚನಗಳಲ್ಲಿ ’ಓದು’ ಪದವನ್ನು ಬಳಸಿದ ರೀತಿ
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ವಚನಕಾರರು ತಮ್ಮ ವಚನಗಳಲ್ಲಿ ’ಓದು’ ಪದವನ್ನು ಬಳಸಿದ ರೀತಿ

ಕನ್ನಡ ಸಾಹಿತ್ಯದ ಪ್ರಮುಖ ರೂಪಗಳಲ್ಲಿ ವಚನವೂ ಒಂದು. ಸಾಮಾನ್ಯವಾಗಿ ವಚನ ಎಂದರೆ ಮಾತು, ಭಾಷೆ, ಪ್ರಮಾಣ ಎಂಬರ್ಥಗಳಿವೆ.

ವಚನಕಾರರು ತಮ್ಮ ವಚನಗಳಲ್ಲಿ ’ಓದು’ ಪದವನ್ನು ಬಳಸಿದ ರೀತಿ

ಕನ್ನಡ ಸಾಹಿತ್ಯದ ಪ್ರಮುಖ ರೂಪಗಳಲ್ಲಿ ವಚನವೂ ಒಂದು. ಸಾಮಾನ್ಯವಾಗಿ ವಚನ ಎಂದರೆ ಮಾತು, ಭಾಷೆ, ಪ್ರಮಾಣ ಎಂಬರ್ಥಗಳಿವೆ. ವಚನವೆಂಬುದು ಓದಿದರೆ ಗದ್ಯವಾಗುವ, ಹಾಡಿದರೆ ಹಾಡಾಗುವ ಕನ್ನಡ ಸಾಹಿತ್ಯದ ವಿಶಿಷ್ಟ ಕಾವ್ಯ ಪ್ರಕಾರ ಎಂದರೆ ತಪ್ಪಾಗಲಾರದು. ೧೨ನೇ ಶತಮಾನವು ಐತಿಹಾಸಿಕವಾಗಿ ಮಹತ್ವದ ಕಾಲಘಟ್ಟವಾದುದಲ್ಲದೆ, ಕನ್ನಡ ಸಾಹಿತ್ಯದ ಇತಿಹಾಸದಲ್ಲು ಒಂದು ಪ್ರಮುಖ ಕಾಲಮಾನವಾಗಿದೆ. ಈ ಕಾಲದಲ್ಲಿನ ಶರಣರ ಆಂದೋಲನ ಮತ್ತು ಅಭಿವ್ಯಕ್ತಿಗೆ ಸಂಗಾತಿಯಾದುದು ’ವಚನ’. ಇಂದೊಂದು ಆತ್ಮವಿಮರ್ಶೆಯ ಪ್ರಭಾವಶಾಲಿ ಮಾಧ್ಯಮವಾಗಿ ಸ್ವತಂತ್ರವಾಗಿ ಬೆಳೆದು ಕನ್ನಡ ಸಾಹಿತ್ಯದ ಜೊತೆಗೆ ಇತರ ಭಾಷಾ ಸಾಹಿತ್ಯದ ಮೇಲೆ ಪ್ರಭಾವ ಬೀರಿ ವಿಶ್ವ ಸಾಹಿತ್ಯದಲ್ಲಿ ಒಂದು ಅವಿಭಾಜ್ಯ ಅಂಗವಾಗಿ ಪರಿಣಮಿಸಿದೆ. ದೇವರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು, ಅಂಬಿಗರ ಚೌಡಯ್ಯ, ನಿಜಗುಣ ಶಿವಯೋಗೆ, ಚೆನ್ನ ಬಸವಣ್ಣ, ಅಕ್ಕ ಮಹಾದೇವಿ, ಮಾದಾರ ಚೆನ್ನಯ್ಯ, ಡೋಹಾರ ಕಕ್ಕಯ್ಯ, ಮಡಿವಾಳ ಮಾಚಯ್ಯ ಮೊದಲಾದ ೧೨೫ ಕ್ಕೂ ಹೆಚ್ಚು ಜನ ಶರಣರು ಸುಮಾರು ೪೫-೫೦ಕ್ಕೂ ಹೆಚ್ಚು ವಿಧದ ಕಸುಬುಗಳಲ್ಲಿ ತೊಡಗಿದ್ದು, ತಮ್ಮ ಅಭಿವ್ಯಕ್ತಿಯ ಮಾಧ್ಯಮವಾಗಿ ’ವಚನಗಳ’ ರಚನೆಯನ್ನು ಮಾಡಿದರು. ವಚನಕಾರರು ತಮ್ಮ ಅನುಭವವನ್ನು ತಮ್ಮ ರಚನೆಯ ಮೂಲಕ ಹೇಳಿಕೊಳ್ಳುತ್ತಿದ್ದುದರಿಂದ ’ವಚನ’ ಒಂದು ಚಳುವಳಿಯೂ ಆಯಿತು.

ವಚನಕಾರರು ತಮ್ಮ ರಚನೆಯಲ್ಲಿ ಹೇಳಿಕೊಳ್ಳದೆ ಇರುವ ವಿಚಾರವೇ ಇಲ್ಲ. ಅದು ಸಾಮಾನ್ಯದಿಂದ ಹಿಡಿದು ಎಲ್ಲಾ ವಿಚಾರಗಳನ್ನು ಒಳಗೊಂಡಿರುತ್ತದೆ.ಎಲ್ಲಾ ವಿಚಾರಗಳ ’ಸರ್ವವ್ಯಾಪಿತ್ವವನ್ನು’ ವಚನಗಳಲ್ಲಿ ಕಾಣಬಹುದು. ಅಂತಹ ಒಂದು ವಿಚಾರ ’ಓದು’ .ವಚನಕಾರರು ತಮ್ಮ ವಚನಗಳಲ್ಲಿ ’ಓದು’ ಪದವನ್ನು ಬಳಸಿದ ರೀತಿ ವಿಶಿಷ್ಟವಾದುದಾಗಿದ್ದು,  ಈ ಮುಂದಿನ ಆಯ್ದ ಕೆಲವು ವಚನಕಾರರ ವಚನಗಳಲ್ಲಿ ಅದನ್ನು ಕಾಣಬಹುದು.

ಬಳ್ಳೇಶ ಮಲ್ಲಯ್ಯ

ಧರೆಯೊಳಗೆ ಚೋದ್ಯವ ನೋಡಿರೆ :
ಒಂದು ಹರಿಣಿಯ ಮೃಗವು ಓದು ಬಲ್ಲುದಾ ?
ಚೆಲುವ ಗಿಳಿಯಲ್ಲಿ ವಿಪರೀತ ಕೊಂಬು ಕೊಂಬುಗಳುಂಟು.
ಇಂಬು ಕಾಲಲ್ಲಿ ಮುಖವು.
ಜಂಬುದ್ವೀಪದ ಬೆಳಗಿನುದಯದಾಹಾರವದಕೆ.
ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು
ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ.                           -           ಸಮಗ್ರ ವಚನ ಸಂಪುಟ: 8

ಅಲ್ಲಮಪ್ರಭುದೇವರು

ಆದಿ ಅನಾದಿ ಹದಿನಾಲ್ಕುಲೋಕ ಕಾಲ ಕಲ್ಪಿತ ಮಂತ್ರ ತಂತ್ರ
ಓದು, ನೇಮ, ಸಂಧ್ಯಾ ಸಮಾಧಿ ಮೌಂಜಿ ಕರ್ಮ
ನೀರು ನೇಣು ಯಜ್ಞೋಪವೀತ ಹುಟ್ಟದಂದು
ಒಬ್ಬ ಶರಣ ಭಕ್ತಿಯ ಮಾಡುತ್ತಿಪ್ಪುದ ಕಂಡೆನಯ್ಯಾ.
ಆ ಶರಣನ ಭಕ್ತಿಯೆಂಬ ಚಿತ್ಪಿಂಡದೊಳಗೆ
ಎರಡುಸಾವಿರದೆಂಟುನೂರು ಕೋಟಿ ಯೋಜನದುದ್ದದೊಂದು
ಮಹಾಲೋಕದಿಂದತ್ತಲರಿಯದಿಪ್ಪ
ಷಡುಸಾದಾಖ್ಯನಾಯಕರ ಹೆಂಡಿರೆಲ್ಲಾ
ಮೊಲೆದೆಗೆದು (ಓಲೆದೆಗೆದು?) ಹೋಯಿತ್ತ ಕಂಡೆ ಗುಹೇಶ್ವರಾ.                -           ಸಮಗ್ರ ವಚನ ಸಂಪುಟ: 2

ಅಲ್ಲಮಪ್ರಭುದೇವರು

ನಾದಬಿಂದುಗಳಿಲ್ಲದಂದು ನಿರ್ಭಯನೆಂಬ
ಗಣೇಶ್ವರನು,
ಉತ್ಪತ್ತಿ ಸ್ಥಿತಿ ಲಯವಿಲ್ಲದಂದು ಅಕ್ಷಯನೆಂಬ ಗಣೇಶ್ವರನು,
ಓದು ವೇದಂಗಳಿಲ್ಲದಂದು ಓಂಕಾರನೆಂಬ ಗಣೇಶ್ವರನು,
ಯುಗಜುಗಂಗಳಿಲ್ಲದಂದು ಊಧ್ರ್ವಮುಖನೆಂಬ ಗಣೇಶ್ವರನು,
ಗುಹೇಶ್ವರಲಿಂಗವಿಲ್ಲದಂದು ನಿರ್ಮಾಯನೆಂಬ ಗಣೇಶ್ವರನು.                 -           ಸಮಗ್ರ ವಚನ ಸಂಪುಟ: 2

ಆದಯ್ಯ

ಕಂಡೆ ಕಾಣೆನೆಂಬುದು ಕಂಗಳ ಭ್ರಮೆ,
ಕೂಡಿದೆನಗಲಿದೆನೆಂಬುದು ಕಾಯ ಭ್ರಮೆ,
ಅರಿದೆ ಮರೆದೆನೆಂಬುದು ಚಿದೋಹಂ ಭ್ರಮೆ,
ಓದು ವೇದಂಗಳ ಜಿನುಗು ಉದುಮನದ ಭ್ರಮೆ,
ಇಹ ಪರಂಗಳನಾಸೆಗೆಯ್ವುದು ಜೀವ ಭ್ರಮೆ,
ಸೌರಾಷ್ಟ್ರ ಸೋಮೇಶ್ವರನೆಂಬುದು ಸಕಲಭ್ರಮೆ.                                  -           ಸಮಗ್ರ ವಚನ ಸಂಪುಟ: 6

ಸೊಡ್ಡಳ ಬಾಚರಸ

ಶಿವಯೆಂದೋದದವನ ಓದು, ಗಿಳಿಯೋದು.
ಶಿವ ನಿಮ್ಮನಾರಾಧಿಸದವನ ಮನೆ, ಕೆಮ್ಮನೆ.
ಶಿವ ನಿಮ್ಮ ನೋಡದವನ ಕಣ್ಣು, ಹೀಲಿಯ ಕಣ್ಣು.
ಶಿವ ನಿಮ್ಮ ಹಾಡದವನ ಬಾಯಿ, ಕನ್ನಡದ ಬಾಯಿ.
ಶಿವ ನಿಮ್ಮ ಹೊಗಳದವನ ಬಾಯ ನಾಲಗೆ,
ಬಚ್ಚಲ ತಂಪಿನ ಜವುಗಿನಲ್ಲಿ ಹುಟ್ಟಿದ ಜಿಗುಳಿಯಯ್ಯಾ.
ಶಿವ ನಿಮಗೆರಗದ ಕರ್ಮಿ, ಶೂಲದ ಹೆಣ.
ಶಿವ ನಿಮ್ಮ ನೆನೆಯದವನ ದೇಹ, ಸಂದೇಹ.
ಶಿವ ನಿಮ್ಮ ಭಕ್ತನಲ್ಲದವನ ಸಿರಿಯು,
ವಿದ್ಯೆ ಬುದ್ಧಿ ಕುಲ ಧನ ಶಬ್ದದ ಮೇಲಣ ತೊಡಿಗೆ. ಅಂತವನೇತಕ್ಕೆ ಬಾತೆ ?
ಇದು ಕಾರಣ, ಭವಘೋರಕ್ಕಾರದೆ ಶರಣುಹೊಕ್ಕೆನಯ್ಯಾ.
ಸೊಡ್ಡಳಾ, ಇನ್ನು ಭವಬಂಧನ ನಮಗಿಲ್ಲವಯ್ಯಾ.                                 -           ಸಮಗ್ರ ವಚನ ಸಂಪುಟ: 9

ಚೆನ್ನಬಸವಣ್ಣ

ಓದಿದ ವೇದದಲ್ಲಿ ಏನಹುದಯ್ಯಾ ? ಓದಿಸಬಾರದಂಥ ಲಿಂಗಸ್ಥಲ.
ಸಾಧಿಸಿದ ಶಾಸ್ತ್ರದಲೇನಹುದಯ್ಯಾ ? ಸಾಧ್ಯವಾಗದಂಥ ಜಂಗಮಸ್ಥಲ.
ತರ್ಕಿಸಿದ ತರ್ಕದಲ್ಲಿ ಏನಹುದಯ್ಯಾ ? ತರ್ಕಕ್ಕಗೋಚರವಹಂಥ
ಪ್ರಸಾದಿಸ್ಥಲ.
ಓದು ವೇದಶಾಸ್ತ್ರ ತರ್ಕಕ್ಕಗೋಚರ
ಕೂಡಲಚೆನ್ನಸಂಗಾ ನಿಮ್ಮ ಶರಣ.                                        -           ಸಮಗ್ರ ವಚನ ಸಂಪುಟ: 3

ಸ್ವತಂತ್ರ ಸಿದ್ಧಲಿಂಗ

ಅಂಧಕನ ಮುಂದೆ ನೃತ್ಯ ಬಹುರೂಪವನಾಡಿದಡೇನು
ಕಂಡು ಪರಿಣಾಮಿಸಬಲ್ಲನೆ ಹೇಳಾ?
ಬಧಿರನ ಮುಂದೆ ಸಂಗೀತ ಸಾಹಿತ್ಯವನೋದಿದಡೇನು
ಕೇಳಿ ತಿಳಿದು ಪರಿಣಾಮಿಸಬಲ್ಲನೆ ಹೇಳಾ?
ಜ್ಞಾನಾನುಭಾವವಿಲ್ಲದವರು ಏನನೋದಿ ಏನ ಕೇಳಿ ಏನು?
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನನರಿಯದವರ ಓದು ಕೇಳಿಕೆ,
ಬಧಿರಾಂಧಕರ ಕೇಳಿಕೆ ನೋಟದಂತಾಗಿತ್ತು.                           -           ಸಮಗ್ರ ವಚನ ಸಂಪುಟ: 11

ಕಾಡಸಿದ್ಧೇಶ್ವರ

ಹಗಲೋದಿ ಬ್ರಹ್ಮಂಗೆ ಪೇಳಿದೆ,
ಇರುಳೋದಿ ವಿಷ್ಣುವಿಂಗೆ ಪೇಳಿದೆ,
ಉಭಯವಿಲ್ಲದ ವೇಳೆಯಲ್ಲಿ ಓದಿ ರುದ್ರಂಗೆ ಪೇಳಿದೆ,
ಎನ್ನ ಓದು ಕೇಳಿ ನಿದ್ರೆಯ ಕಳೆದು
ಜಾಗ್ರದಲ್ಲಿ ಕುಳಿತಿರ್ಪರು ನೋಡೆಂದನಯ್ಯಾ
ಕಾಡನೊಳಗಾದ ಶಂಕರಪ್ರಿಯ ಚನ್ನಕದಂಬಲಿಂಗ
ನಿರ್ಮಾಯಪ್ರಭುವೆ.                                                          -           ಸಮಗ್ರ ವಚನ ಸಂಪುಟ: 10

ಉರಿಲಿಂಗಪೆದ್ದಿ

ವೇದವನೋದಿ ಕೇಳಿ
ವೇದದ ವರ್ಮವನರಿದ ಫಲ ದಾಸೋಹವಯ್ಯಾ.
ಶಾಸ್ತ್ರವನೋದಿ ಕೇಳಿ
ಶಾಸ್ತ್ರದ ವರ್ಮವನರಿದ ಫಲ ದಾಸೋಹವಯ್ಯಾ.
ಪುರಾಣವನೋದಿ ಕೇಳಿ
ಪುರಾಣದ ವರ್ಮವನರಿದ ಫಲ ದಾಸೋಹವಯ್ಯಾ.
ಆಗಮವನೋದಿ ಕೇಳಿ
ಆಗಮದ ವರ್ಮವನರಿದ ಫಲ ದಾಸೋಹವಯ್ಯಾ.
ಪುರಾತನರ ಗೀತ ವಚನ ಪ್ರಸಂಗಾನುಭವದಲ್ಲಿ ದೃಷ್ಟಫಲ
ದಾಸೋಹವಯ್ಯಾ.
ವೇದಶಾಸ್ತ್ರ ಪುರಾಣ ಆಗಮ ಪುರಾತನರ ಗೀತದ ವಚನ ಪ್ರಸಂಗವನರಿದು
ದಾಸೋಹವಿಲ್ಲದಿದ್ದಡೆ ಆ ಓದು ಗಿಳಿ ಓದಿದಂತೆ.
ಆ ಕೇಳುವೆ, ಮರುಳ ಕೇಳುವೆಯಂತೆ.
ಅವನೇತಕ್ಕೂ ಬಾರ್ತೆಯಲ್ಲಯ್ಯಾ,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.                                         -           ಸಮಗ್ರ ವಚನ ಸಂಪುಟ: 6

ತೆಲುಗೇಶ ಮಸಣಯ್ಯ

ಅಖಂಡಿತವ ಕಂಡೆನೆಂಬೆ;
ಕಂಡಡೆ ಖಂಡಿಯಾಗಿ ಬ್ರಹ್ಮಾಂಡವಿರಬೇಕು.
ಓದಿದೆನೋದಿದೆನೆಂದೆಂಬೆ
ನಿನ್ನ ಓದು ವಾದಿಂಗೆ ಹೋಯಿತ್ತು.
ಅರಿದೆನರಿದೆನೆಂದೆಂಬೆ
ಅರಿದುದನೆಲ್ಲವನರಿದೆ, ಅರಿಯದುದಕ್ಕೆಂತೊ?
ನವನಾಳವನು ಕಟ್ಟಿ ವಿಕಳನಾಗಲುಬೇಡ.
ಬಳಸಿ ಬಟ್ಟೆಯ ಕಾಣದೆ ಬಾಯ ಬಾಗಿಲ ಹೊದ್ದೆ.
ಮಕ್ಕಳ ತೊಟ್ಟಿಲ ಮೇಲೆ ಕಟ್ಟಿದ ಕೆಂಪಿನ ಹಣ್ಣ
ಪಟ್ಟಿರ್ದು ನಿಲುಕಲು ಬಾರದು
ನೇಹ ನೆಲೆಗೊಳ್ಳದಾಗಿ ನಿಜಭಾವ ನಿಜರೂಪು ನಿಜಭುಜವಿಜಯನು
ಗಜೆಬಜೆಯಿಲ್ಲದ ಮನಕ್ಕೆ ಸಹಜವ ತೆಲುಗೇಶ ತೋರಿದ.                       -           ಸಮಗ್ರ ವಚನ ಸಂಪುಟ: 7

ಹೇಮಗಲ್ಲ ಹಂಪ

ವೇದಕ್ಕೆಯಾ [ಮುಖ್ಯ] ಶ್ರೀವಿಭೂತಿ,
ಶಾಸ್ತ್ರಕ್ಕೆಯಾ ಮುಖ್ಯ ಶ್ರೀವಿಭೂತಿ,
ಪೌರಾಣಕ್ಕೆ[ಯಾ] ಮುಖ್ಯ ಶ್ರೀವಿಭೂತಿ,
ಆಗಮಕ್ಕೆಯಾ ಮುಖ್ಯ ಶ್ರೀವಿಭೂತಿ.
ವೇದಾಗಮಶಾಸ್ತ್ರಪುರಾಣವನೋದುವ ವಿಪ್ರನಾದರೂ ಆಗಲಿ,
ಶ್ರೀವಿಭೂತಿ ಶ್ರೀ ಪಂಚಾ[ಕ್ಷ]ರಿಯಿಲ್ಲದೆ ಓದಿದ ಓದು ವ್ಯರ್ಥ.
ಶ್ರೀವಿಭೂತಿಯ ಧರಿಸಿ, ಶ್ರೀ ಪಂಚಾಕ್ಷರಿಯ ನೆನೆದು,
ಏಳು ಜನ್ಮದಲ್ಲಿ ಹೊರೆಯ ಕಳೆದು, ಶಿವದೇಹಿಯಾದೆನು ನೋಡಾ.
ಅದು ಎಂತೆಂದರೆ :
ಸಾಕ್ಷಿ :``ನಮಃ ಶಿವಾಯೇತಿ ಮಂತ್ರಂ ಯಂ ಕರೋತಿ ತ್ರಿಪುಂಡ್ರಕಂ |
ಸಪ್ತಜನ್ಮಕೃತಂ ಪಾಪಂ ತತ್‍ಕ್ಷಣೇನ ವಿನಶ್ಯತಿ ||''
ಎಂದುದಾಗಿ,
ಪರಮಾತ್ಮನ ಸ್ವರೂಪವುಳ್ಳ ಶ್ರೀ ವಿಭೂತಿಯ ಸರ್ವಾಂಗವೆಲ್ಲಕೆಯೂ
ಉದ್ಧೂಳನವ ಮಾಡಿ ಪರಮಪದದಲ್ಲಿ ಓಲಾಡುತಿದ್ದೆನು ಕಾಣಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.                                  -           ಸಮಗ್ರ ವಚನ ಸಂಪುಟ: 14

ಗ್ರಂಥ ಋಣ:

  • ಸಮಗ್ರ ವಚನ ಸಂಪುಟ(ಎಲ್ಲ)
  • ಅಂತರ್ ಜಾಲ ಮಾಹಿತಿ
  • ಕನ್ನಡ ಸಾಹಿತ್ಯ ಕೋಶ – ರಾಜಪ್ಪ ದಳವಾಯಿ
  • ಕನ್ನಡ ವಿಶ್ವಕೋಶ – ಮೈಸೂರು ವಿಶ್ವವಿದ್ಯಾಲಯ
2.97590361446
ಸ್ಟಾರ್‌ಗಳನ್ನು ಜಾರಿಸಿ ನಂತರ ಕ್ಲಿಕ್‌ ಮಾಡಿ
kumar Jun 11, 2016 04:58 PM

ಬಹಳ ಚನ್ನಾಗಿದೆ

suresh kumar Dec 05, 2015 04:22 PM

ಬಹಳ ಚನ್ನಾಗಿದೆ ಇಂತಹ ಮಾಹಿತಿ ಗಳನ್ನೂ ಇನ್ನಸ್ಟು ಪ್ರಕಟಿಸಿ

ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top