ವಿಶ್ವವಿಖ್ಯಾತ ಗಣಿತಜ್ಞ ದಿವಂಗತ ಶ್ರೀನಿವಾಸ ರಾಮಾನುಜನ್ ನೆನಪಿನಲ್ಲಿ ಇಂದು (ಡಿಸೆಂಬರ್ ೨೨) 'ರಾಷ್ಟ್ರೀಯ ಗಣಿತ ದಿನ'ವಾಗಿ ಆಚರಿಸುತ್ತಿದ್ದೇವೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು 2014 ರಲ್ಲಿ ಘೋಷಿಸಿದ್ದಾರೆ.
ಶ್ರೀನಿವಾಸ ಅಯ್ಯ೦ಗಾರ್ ರಾಮಾನುಜನ್(ಡಿಸ೦ಬರ್ ೨೨, ೧೮೮೭ - ಏಪ್ರಿಲ್ ೨೬, ೧೯೨೦) ವಿಶ್ವದ ಶ್ರೇಷ್ಠ ಗಣಿತಜ್ಞರೆಂದು ಪ್ರಖ್ಯಾತರಾಗಿದ್ದಾರೆ. “ಪ್ರತಿ ಧನಪೂರ್ಣಾಂಶವೂ ರಾಮಾನುಜನ್ನರ ವೈಯಕ್ತಿಕ ಮಿತ್ರರುಗಳಲ್ಲೊಂದು” ಎಂಬುದು ಲೋಕದಲ್ಲಿ ವಿಖ್ಯಾತ ನುಡಿ. ಅವರಿಗೆ “ಸಂಖ್ಯೆಗಳ ವೈಲಕ್ಷಣಗಳನ್ನು ನಂಬಲಸಾಧ್ಯವಾದಂಥ ರೀತಿಯಲ್ಲಿ ನೆನಪಿಡುವ’ ಅಪೂರ್ವ ಸಾಮರ್ಥ್ಯವಿತ್ತು.
ಶ್ರೀನಿವಾಸ ರಾಮಾನುಜನ್ ಅವರ ಸಂಖ್ಯಾಪ್ರೇಮ ಲೋಕವಿದಿತ. ಅದರ ಒಂದು ಕಥೆ ಹೀಗಿದೆ:
ಶ್ರೀನಿವಾಸ ರಾಮಾನುಜನ್ ಆಸ್ಪತ್ರೆಯಲ್ಲಿದ್ದಾಗ ನಡೆದ ಒಂದು ಪ್ರಸಂಗ ಸ್ವಾರಸ್ಯಕರವಾಗಿದೆ. ಹಾರ್ಡಿ ಅವರ ಕುಶಲ ವಿಚಾರಿಸುವ ಸಲುವಾಗಿ ಆಸ್ಪತ್ರೆಗೆ ಬಂದರು. ಅದೇಕೋ ಹಾರ್ಡಿಯವರ ಮುಖ ಪೇಚಿನಿಂದ ಕೂಡಿತ್ತು. ಆದರೆ ರಾಮಾನುಜನ್ ಗೆಲುವಾಗಿ ನಗುನಗುತ್ತಲೇ ಇದ್ದರು.
'ಸಾರ್, ತಾವು ಏಕೆ ಇಂದು ಪೆಚ್ಚಾಗಿದ್ದೀರಿ?' ಎಂದು ಗಣಿತಪಟು ಪ್ರೊಫೆಸರನ್ನು ಕೇಳಿಯೇಬಿಟ್ಟರು. ತಮ್ಮ ಆರೋಗ್ಯದ ಬಗ್ಗೆ ಪ್ರೊಫೆಸರ್ ಬಹಳ ವ್ಯಾಕುಲಗೊಂಡಿದ್ದಾರೋ ಎನ್ನುವ ಚಿಂತೆ ರಾಮಾನುಜನ್‌ಗೆ.
'ಏನಿಲ್ಲ, ನಾನು ಬಂದ ಟ್ಯಾಕ್ಸಿಯ ಸಂಖ್ಯೆ ಸ್ವಲ್ಪವೂ ಸ್ವಾರಸ್ಯವಿಲ್ಲದ್ದು. ಅದು ಅನಿಷ್ಟ ಸಂಖ್ಯೆಯೇ ಹೌದು' ಎಂದರು ಹಾರ್ಡಿ.
'ಏನು ಆ ಸಂಖ್ಯೆ ಹೇಳಿ?'
'1729'.
ಪ್ರೊಫೆಸರ್ ಹಾರ್ಡಿ ಹಾಗೆ ಹೇಳುವುದೇ ತಡ ರಾಮಾನುಜನ್‌ಗೆ ಸ್ವಲ್ಪ ಸಿಟ್ಟೇ ಬಂದಿತೆನ್ನಬೇಕು.
'ಛೇ! ಖಂಡಿತವಾಗಿಯೂ ಹಾಗೆನ್ನಬೇಡಿ ಸಾರ್. ಅದಕ್ಕಿಂತಲೂ ಒಳ್ಳೆಯ ಸಂಖ್ಯೆ ಅತಿ ಅಪರೂಪವೇ. 1729 ಅದೃಷ್ಟದ ಸಂಖ್ಯೆಯೇ" ಎಂದರು ರಾಮಾನುಜನ್.
'ಅದು ಹೇಗೆ ವಿವರಿಸಿ? ಹೇಳಿ ಕೇಳಿ ಅದು ಬೆಸ ಸಂಖ್ಯೆ ಎಂದ ಮೇಲೆ ಅದಕ್ಕೆ ಯಾವ ಆಕರ್ಷಣೆ ತಾನೆ ಇರಲು ಸಾಧ್ಯ ರಾಮಾನುಜನ್?'
'ಸಾರ್, 1729ಕ್ಕೆ ಕೆದಕಿದಷ್ಟೂ ಸೊಗಸುತನವಿದೆ. ದಯವಿಟ್ಟು ಇಗೋ ನೋಡಿ ಪ್ರೊಫೆಸರ್ ಅದರ ಬಹುರೂಪಗಳಲ್ಲಿ ಕೆಲವನ್ನು;
1729 = 10×10×10+9×9×9
19 ರಿಂದ 1729ನ್ನು ಭಾಗಿಸಬಹುದು.
'ಸಾಕು ವಿಶ್ರಮಿಸಿಕೊಳ್ಳಿ. ನಂತರ ಚರ್ಚಿಸೋಣ'.ಎಂದರು ಹಾರ್ಡಿ
ಮೂಲ : ಟೀಚರ್ಸ್ ಆಫ್ ಇಂಡಿಯಾ
ಕೊನೆಯ ಮಾರ್ಪಾಟು : 6/9/2020