ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಉಚಿತ ಹಾಗೂ ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಕಾಯಿದೆ 2009ರ ಅಧ್ಯಾಯ 3ನೇ ಸೆಕ್ಷನ್ (6) ರನ್ವಯ ಮಕ್ಕಳ ವಾಸಸ್ಥಳದ ಹತ್ತಿರವಿರುವ ಸೂಚಿಸಲ್ಪಟ್ಟ ನೆರೆಹೊರೆಯ ಪ್ರದೇಶಗಳಲ್ಲಿ ಸ್ಥಾಪಿಸುವುದು ಸಂಬಂಧಿಸಿದ ರಾಜ್ಯ ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಅದರಂತೆ ರಾಜ್ಯ ಸರ್ಕಾರವು “ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ಅಧಿನಿಯಮಕ್ಕೆ ಸಂಬಂಧಿಸಿದ ನಿಯಮಗಳನ್ನು” 2012 ನಲ್ಲಿ ರೂಪಿಸಿದ್ದು, ನಿಯಮ 4(1)(ಎ), 4(1)(ಬಿ) ಮತ್ತು 4(1)(ಸಿ) ಪ್ರಕಾರ ನೆರೆಹೊರೆಯ ಶಾಲೆಯನ್ನು ಈ ಕೆಳಗಿನಂತೆ ವ್ಯಾಖ್ಯಾನಿಸಲಾಗಿದೆ.
4(1)(ಎ): ಸಾಮಾನ್ಯವಾಗಿ 1 ರಿಂದ 5ನೇ ತರಗತಿ ಮಕ್ಕಳಿಗಾಗಿ ತಮ್ಮ ವಾಸಸ್ಥಳದಿಂದ 1.ಕಿ.ಮೀ ವ್ಯಾಪ್ತಿಯ ನಡಿಗೆಯ ದೂರದ ನೆರೆಹೊರೆಯ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸುವುದು.
4(1)(ಬಿ): ಸಾಮಾನ್ಯವಾಗಿ 6 ರಿಂದ 7ನೇ ತರಗತಿ ಮಕ್ಕಳಿಗಾಗಿ ತಮ್ಮ ವಾಸಸ್ಥಳದಿಂದ 3 ಕಿ.ಮೀ ವ್ಯಾಪ್ತಿಯ ನಡಿಗೆಯ ದೂರದ ನೆರೆಹೊರೆಯ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸುವುದು.
4(1)(ಸಿ): ಸಾಮಾನ್ಯವಾಗಿ 8ನೇ ತರಗತಿ ಮಕ್ಕಳಿಗಾಗಿ ತಮ್ಮ ವಾಸಸ್ಥಳದಿಂದ 5 ಕಿ.ಮೀ ವ್ಯಾಪ್ತಿಯ ನಡಿಗೆಯ ದೂರದ ನೆರೆಹೊರೆಯ ಪ್ರದೇಶದಲ್ಲಿ ಶಾಲೆಯನ್ನು ಸ್ಥಾಪಿಸುವುದು.
ಆದರೆ ನಗರ ಪಾಲಿಕೆಗಳು ಸ್ಥಳೀಯ ಪ್ರಾಧಿಕಾರಗಳಾಗಿರುವ ನಗರ ಪ್ರದೇಶಗಳಲ್ಲಿ ಸ್ಥಳೀಯ ಆಡಳಿತದ ಉದ್ದೇಶಕ್ಕಾಗಿ ಸೂಚಿಸಲ್ಪಟ್ಟ ವಾರ್ಡ್ ಕ್ಷೇತ್ರವು ನೆರೆಹೊರೆಯ ಕ್ಷೇತ್ರವಾಗಿರುತ್ತದೆ.
ರಾಜ್ಯದ ಆರ್.ಟಿ.ಇ ನಿಯಮ 4(2) ರನ್ವಯ “7ನೇ ತರಗತಿಯವರೆಗೆ ಇರುವ ಶಾಲೆಗಳಲ್ಲಿ 8ನೇ ತರಗತಿಯನ್ನು ಹಂತ ಹಂತವಾಗಿ ಪ್ರಾರಂಭಿಸಲು ರಾಜ್ಯ ಸರ್ಕಾರವು ತನ್ನ ಆರ್ಥಿಕ ಸಾಮರ್ಥ್ಯ ಹಾಗೂ ಅಭಿವೃದ್ದಿಯ ಮಿತಿಯೊಳಗೆ ಶ್ರಮಿಸುತ್ತದೆ.” ಆದರಂತೆ ಪ್ರತಿ ಜಿಲ್ಲೆಯಲ್ಲಿ ಗ್ರಾಮಾಂತರ ಹಾಗೂ ನಗರಗಳ ಜನವಸತಿ ಪ್ರದೇಶಗಳ ನೆರೆಹೊರೆಯ ಪ್ರದೇಶಗಳಲ್ಲಿ ಸರ್ಕಾರಿ, ಸರ್ಕಾರದಿಂದ ಅನುದಾನ ಪಡೆದ ಮತ್ತು ಅನುದಾನ ರಹಿತ ಶಾಲೆಗಳ ಲಭ್ಯತೆಯನ್ನು ಗುರುತಿಸಲು ಶಾಲಾ ಮ್ಯಾಪಿಂಗ್ ಕಾರ್ಯವನ್ನು ಕೈಗೊಳ್ಳಲಾಗಿದೆ. ಈ ಕಾರ್ಯದಿಂದ ಹೊಸ ಶಾಲೆಗಳ ಪ್ರಾರಂಭ, ಶಾಲೆಗಳ ಉನ್ನತೀಕರಣ ಹಾಗೂ ಸಾರಿಗೆ/ಬೆಂಗಾವಲು ಸೌಲಭ್ಯದ ಅಗತ್ಯತೆಯನ್ನು ಗುರುತಿಸಲಾಗಿರುತ್ತದೆ
ಮೂಲ : ಎಸ್ ಎಸ್ ಏ ಕರ್ನಾಟಕ
ಕೊನೆಯ ಮಾರ್ಪಾಟು : 4/25/2020