অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಜೈವಿಕ ಇಂಧನ ಪ್ರಯೊಜನಗಳು

ಜೈವಿಕ ಇಂಧನ ಪ್ರಯೊಜನಗಳು

ಜೈವಿಕ ಇಂಧನ ತಂತ್ರಾಂಶ

ತಲತಲಾಂತರದಿಂದ ಹೊಂಗೆ, ಹಿಪ್ಪೆ, ಬೇವಿನ ಬೀಜಗಳಿಂದ ಗಾಣದಲ್ಲಿ ಎಣ್ಣೆ ತೆಗೆದು ವಿವಿಧ ಕೆಲಸಗಳಿಗೆ ಉಪಯೋಗಿಸಲಾಗುತ್ತಿದೆ. ಅದರಲ್ಲಿ ದೀಪಗಳನ್ನು ಉರಿಸುವುದು ಒಂದು ಮುಖ್ಯ ಉಪಯೋಗವಾಗಿತ್ತು. ಈಗಲೂ ಸಹ ಹಳ್ಳಿಗಳಲ್ಲಿ ರೈತರು ತಮ್ಮ ಹೊಲಗದ್ದೆಯ ಬದುಗಳಲ್ಲಿ, ಬೆಳೆದ ಹೊಂಗೆ, ಹಿಪ್ಪೆ, ಬೇವಿನ ಬೀಜಗಳನ್ನು ಸಂಗ್ರಹಿಸಿ, ಹತ್ತಿರದಲ್ಲಿರುವ ಗಾಣದಲ್ಲಿ ಎಣ್ಣೆಯನ್ನು ತೆಗೆದು ವಿವಿಧ ಬಗೆಯಲ್ಲಿ ಉಪಯೋಗಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಈ ಎಣ್ಣೆಗಳನ್ನು ಸ್ವಲ್ಪ ಮಟ್ಟಿಗೆ ಶುದ್ಧೀಕರಿಸಿ, ಟ್ರಾಕ್ಟರ್, ನೀರೆತ್ತುವ ಪಂಪುಗಳ ಇಂಜಿನ್ ಓಡಿಸಲು ಹಾಗೂ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಾಗಿದೆ. ಗಾಣದಲ್ಲಿ ಎಣ್ಣೆ ಬೀಜಗಳಿಂದ ಸಂಪೂರ್ಣ ಎಣ್ಣೆ ತೆಗೆಯುವುದು ಕಷ್ಟಕರ. ಆದರೆ ಆಧುನಿಕ ಯಂತ್ರೋಪಕರಣಗಳ ಸಹಾಯದಿಂದ ಶೇ. 94 ರಷ್ಟು ಎಣ್ಣೆ ಅಂಶವನ್ನು ಬೀಜದಿಂದ ಬೇರ್ಪಡಿಸಬಹುದು. ಒಂದು ಪ್ರದೇಶದಲ್ಲಿ ಅಥವಾ ಹಳ್ಳಿಯ ಸುತ್ತ ಮುತ್ತ ಇರುವ ಜೈವಿಕ ಇಂಧನದ ಮರಗಳ ಸಂಖ್ಯೆ ಮತ್ತು ಅಲ್ಲಿ ಸಿಗುವ ಎಣ್ಣೆ ಬೀಜದ ಪ್ರಮಾಣದ ಮೇಲೆ ಎಷ್ಟು ಸಾಮರ್ಥ್ಯದ ಯಂತ್ರವನ್ನು ಸ್ಥಾಪಿಸಬಹುದೆಂದು ನಿರ್ಧರಿಸಬಹುದು.

ಅಲ್ಲಿ ತೆಗೆದ ಎಣ್ಣೆಯನ್ನು ಮೊದಲು ಅಲ್ಲಿನ ರೈತರ ಉಪಯೋಗಕ್ಕೆ ಕೊಡಬೇಕು. ಅಂದರೆ ಅವರು ಬೀಜದಿಂದ ನೇರವಾಗಿ ತೆಗೆದ ಎಣ್ಣೆಯನ್ನು ಶೋಧಿಸಿ ಡೀಸೆಲ್ ಜೊತೆ ಬೆರೆಸಿ, ಅವರ ಟ್ರಾಕ್ಟರ್, ನೀರೆತ್ತುವ ಇಂಜಿನ್ ಹಾಗೂ ಟಿಲ್ಲರ್‌ಗಳಿಗೆ ಉಪಯೋಗಿಸಬಹುದು. ಹೆಚ್ಚಿನ ಎಣ್ಣೆಯನ್ನು ನಂತರ ಶೋಧಿಸಿ ಟ್ರಾನ್ಸ್‌ಸ್ಟೆರಿಫಿಕೇಷನ್ ಮೂಲಕ ಜೈವಿಕ ಇಂಧನವನ್ನಾಗಿ ಪರಿವರ್ತಿಸಲಾಗುವುದು.

ಜೈವಿಕ ಇಂಧನಗಳ ಮರಗಳಿಂದ ಸಂಗ್ರಹಿಸಿದ ಹಣ್ಣುಗಳಿಂದ ತಿರುಳು ಹಾಗೂ ಬೀಜವನ್ನು ಬೇರ್ಪಡಿಸಿ ವಿಂಗಡನೆ ಮಾಡಬೇಕು. ಈ ಬೀಜಗಳನ್ನು ತೇವಾಂಶವಿಲ್ಲದಂತೆ ಸಂಗ್ರಹಿಸಬೇಕು. ತೇವಾಂಶವು ಬೀಜಕ್ಕೆ ಗಮಟುವಾಸನೆ ಬರಿಸಿ ಎಣ್ಣೆಯ ಗುಣಮಟ್ಟವನ್ನು ಹಾಳು ಮಾಡುತ್ತದೆ.

ಎಣ್ಣೆ ತೆಗೆಯಲು ಯಂತ್ರಕ್ಕೆ ಬೀಜವನ್ನು ಹಾಕುವ ಮೊದಲು ಬೀಜದ ಕವಚವನ್ನು ತೆಗೆದು ಗ್ರೈಂಡರ್ ಸಹಾಯದಿಂದ ಪುಡಿಮಾಡಿದರೆ ಹೆಚ್ಚಿನ ಎಣ್ಣೆ ಅಂಶವನ್ನು ತೆಗೆಯಬಹುದು. ಹೀಗೆ ಪುಡಿ ಮಾಡಿದ ಬೀಜಗಳಿಂದ ಯಂತ್ರದ ಸಹಾಯದಿಂದ ಕಚ್ಚಾ ಎಣ್ಣೆಯನ್ನು ತೆಗೆದು ಅದರಲ್ಲಿರುವ ಕಲ್ಮಶಗಳನ್ನು ಶುದ್ಧೀಕರಣ ಮಾಡಬೇಕು. ಎಣ್ಣೆ ತೆಗೆದ ನಂತರ ಉಳಿಯುವ ಹಿಂಡಿಯನ್ನು ಸಾವಯವ ಗೊಬ್ಬರವಾಗಿ ಉಪಯೋಗಿಸಬಹುದು.

ರೈತರಿಗೆ ಆಗುವ ಪ್ರಯೊಜನಗಳು

  • ಜೈವಿಕ ಇಂಧನ ಬೀಜಗಳಿಂದ ನಿರಂತರ ಹೆಚ್ಚುವರಿ ಆದಾಯ.
  • ಬೀಜ ಸಂಸ್ಕರಣದ ನಂತರ ದೊರಕುವ ಹಿಂಡಿಯಿಂದ ಮತ್ತು ಹಸಿರೆಲೆ ಗೊಬ್ಬರದಿಂದ ಕೃಷಿ ಜಮೀನಿಗೆ ಅಗತ್ಯವಿರುವ ಸಾವಯವ ಗೊಬ್ಬರದ ಲಭ್ಯತೆ.
  • ಔಷಧೀಯ ಗುಣ ಮತ್ತು ಬೆಳೆಗಳಿಗೆ ತಗಲುವ ರೋಗ ಮತ್ತು ಕೀಟ ನಿಯಂತ್ರಕ ಗುಣದ ಲಾಭ.
  • ಹೂ ಬಿಡುವ ಸಮಯದಲ್ಲಿ ಜೇನು ಕೃಷಿಗೆ ಸಹಾಯಕಾರಿ.
  • ಜಮೀನಿನ ಫಲವತ್ತಾದ ಮೇಲ್ಮಣ್ಣಿನ ಭೂ ಸವಕಳಿ ತಡೆಗಟ್ಟವುದು.
  • ಈ ಸಸಿಗಳ ಬೇರುಗಳ ಮುಖಾಂತರ ಭೂಮಿಗೆ ಹೆಚ್ಚುವರಿ ಸಾರಜನಕವನ್ನು ಒದಗಸುವುದು.
  • ಕಸಿ ಮಾಡಿದ ಸಸಿ ನೆಡುವುದರಿಂದ ಮರವಾಗಿ ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ವಾರ್ಷಿಕ ರೆಂಬೆ, ಕೊಂಬೆಗಳನ್ನು ಕಡಿಯುವುದರಿಂದ ರೈತರ ಬೆಳೆಗಳಿಗೆ ನೆರಳು ಬೀಳುವುದಿಲ್ಲ.
  • ಜಮೀನಿನ ಬದುಗುಂಟ ಸಸಿ ನೆಡುವಿಕೆಯಿಂದ ಆಹಾರ ಉತ್ಪಾದನೆಯಲ್ಲಿ ಹೆಚ್ಚಳ.

ಸಮಾಜಕ್ಕೆ ಆಗುವ ಪ್ರಯೋಜನಗಳು

  • ಹೆಚ್ಚಿನ ಮರಗಳನ್ನು ಬೆಳೆಸುವಿಕೆಯಿಂದ ಗ್ರಾಮೀಣ ಸೌಂದರ್ಯ ಅಭಿವೃದ್ಧಿ.
  • ಹೆಚ್ಚಿನ ಮರಗಳಿದ್ದಲ್ಲಿ ಉತ್ತಮ ಮಳೆ ಮತ್ತು ಇದರಿಂದಾಗಿ ಉತ್ತಮ ಬೆಳೆ.
  • ಪಶು ಪಕ್ಷಿಗಳಿಗೆ  ಉತ್ತಮ ಆಸರೆ.
  • ಕಡಿದ ಸಣ್ಣ ಪುಟ್ಟ ರೆಂಬೆ ಕೊಂಬೆಗಳಿಂದ ಗ್ರಾಮೀಣ ಮಹಿಳೆಯರಿಗೆ ಉರುವಲಿನ ಆಸರೆ.

ಪರಿಸರಕ್ಕಾಗುವ ಲಾಭಗಳು

  • ಪರಿಸರ ಮಾಲಿನ್ಯ ತಡೆಗಟ್ಟುವುದು.
  • ಜಾಗತಿಕ ತಾಪಮಾನ ನಿಯಂತ್ರಿಸುವಲ್ಲಿ ಮಹತ್ತರ ಪಾತ್ರ ವಹಿಸುವಿಕೆ.
  • ಅಂತರ್ಜಲ ಪುನಶ್ಚೇತನಕ್ಕೆ ಸಹಕಾರಿ.
  • ರಾಸಾಯನಿಕ ಗೊಬ್ಬರಗಳಿಂದ ಆಗುವ ದುಷ್ಪರಿಣಾಮಗಳನ್ನು ತಡೆಗಟ್ಟವುದು.

ಪೆಟ್ರೋಲ್‌ಗಿಂತ ಒಳ್ಳೆಯ ಇಂಧನ

  • ಹಲವು ಸಂಶೋಧನೆಗಳಿಂದ ಜೈವಿಕ ಇಂಧನ ಪೆಟ್ರೋಲಿಯಂ ಇಂಧನಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕಾರ್ಬನ್ ಆಕ್ಸೈಡ್‌ಗಳನ್ನು ವಾತಾವರಣಕ್ಕೆ ಬಿಡುತ್ತದೆ ಎಂದು ಕಂಡುಬಂದಿದೆ.
  • ಪೆಟ್ರೋಲಿಯಂ ಇಂಧನ ವಾತಾವರಣಕ್ಕೆ ಕಾರ್ಬನ್ ಡೈಆಕ್ಸೈಡ್‌ನ್ನು ಹೆಚ್ಚಿನ ಪ್ರಮಾಣದಲ್ಲಿ ಸೇರಿಸುತ್ತಾ ಹೋಗುತ್ತದೆ. ಆದರೆ, ಜೈವಿಕ ಇಂಧನ ಸಸ್ಯಗಳು ವಾತಾವರಣದಲ್ಲಿನ ಕಾರ್ಬನ್ ಡೈಆಕ್ಸೈಡ್‌ನ ಕೆಲವು ಭಾಗವನ್ನು ತಾವೇ ಪುನ: ಬಳಸಿಕೊಳ್ಳುತ್ತವೆ.
  • ಜೈವಿಕ ಇಂಧನವು ಪರಿಸರ ಸ್ನೇಹಿ ಹಾಗೂ ನವೀಕರಿಸಬಹುದಾದ ಇಂಧನ.
  • ಇಂಜಿನ್ ಮಾರ್ಪಾಟಿನ ಅಗತ್ಯವಿಲ್ಲ.
  • ಜೈವಿಕ ಇಂಧನದಲ್ಲಿ ಗಂಧಕದ ಪ್ರಮಾಣ ಅತ್ಯಂತ ಕಡಿಮೆ.
  • ಸುರಕ್ಷಿತ ನಿರ್ವಹಣೆ, ಸಂಗ್ರಹಣೆ ಮತ್ತು ಸಾಗಾಣಿಕೆ.
  • ಇಂಜಿನ್‌ನ ಕಾರ್ಯಕ್ಷಮತೆ ಹೆಚ್ಚಿಸಿ, ಇಂಜಿನ್‌ನ ಬಾಳಿಕೆಯನ್ನು ಹೆಚ್ಚಿಸುತ್ತದೆ.
  • ಹೈಡ್ರೋಕಾರ್ಬನ್, ಸುಡದ ಇಂಗಾಲದ ಕಣಗಳ ಉಗುಳುವಿಕೆಯಲ್ಲಿ ಇಳಿಮುಖ.
  • ಜೈವಿಕ ಇಂಧನದ ಮರಗಳನ್ನು ಬೆಳೆಯುವುದರಿಂದ  ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿನ ತೇವಾಂಶ ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿರಿಸಬಹುದು.

ಲಾಭಗಳು

  • ಜೈವಿಕ ಇಂಧನ ಬೀಜಗಳಿಂದ ನಿರಂತರ ಹೆಚ್ಚುವರಿ ಆದಾಯ
  • ಬೀಜ ಸಂಸ್ಕರಣದ ನಂತರ ದೊರಕುವ ಹಿಂಡಿಯಿಂದ ಮತ್ತು ಹಸಿರೆಲೆ ಗೊಬ್ಬರದಿಂದ ಕೃಷಿ ಜಮೀನಿಗೆ ಅಗತ್ಯವಿರುವ ಸಾವಯವ ಗೊಬ್ಬರದ ಲಭ್ಯತೆ.
  • ಔಷಧೀಯ ಗುಣ ಮತ್ತು ಬೆಳೆಗಳಿಗೆ ತಗಲುವ ರೋಗ ಮತ್ತು ಕೀಟ ನಿಯಂತ್ರಕ ಗುಣದ ಲಾಭ.
  • ಹೂ ಬಿಡುವ ಸಮಯದಲ್ಲಿ ಜೇನು ಕೃಷಿಗೆ ಸಹಾಯಕಾರಿ.
  • ಜಮೀನಿನ ಫಲವತ್ತಾದ ಮೇಲ್ಮಣ್ಣಿನ ಭೂ ಸವಕಳಿ ತಡೆಗಟ್ಟವುದು
  • ಈ ಸಸಿಗಳ ಬೇರುಗಳ ಮುಖಾಂತರ ಭೂಮಿಗೆ ಹೆಚ್ಚುವರಿ ಸಾರಜನಕವನ್ನು ಒದಗಸುವುದು.
  • ಕಸಿ ಮಾಡಿದ ಸಸಿ ನೆಡುವುದರಿಂದ ಮರವಾಗಿ ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ವಾರ್ಷಿಕ ರೆಂಬೆ, ಕೊಂಬೆಗಳನ್ನು ಕಡಿಯುವುದರಿಂದ ರೈತರ ಬೆಳೆಗಳಿಗೆ ನೆರಳು ಬೀಳುವುದಿಲ್ಲ.
  • ಜಮೀನಿನ ಬದುಗುಂಟ ಸಸಿ ನೆಡುವಿಕೆಯಿಂದ ಆಹಾರ ಉತ್ಪಾದನೆಯಲ್ಲಿ ಹೆಚ್ಚಳ.

ಜೈವಿಕ ಇಂಧನ ಮರದ ಬೀಜಗಳಿಗೆ ಪ್ರಸ್ತುತ ನಿಗದಿತ ಬೆಲೆ ಇಲ್ಲ. ಮಾರುಕಟ್ಟೆಯಲ್ಲಿ ಬೀಜಗಳ ಬೆಲೆಯನ್ನು ಪೂರೈಕೆ ಹಾಗೂ ಬೇಡಿಕೆಯ ಆಧಾರದ ಮೇಲೆ ನಿಗದಿಪಡಿಸಲಾಗುವುದು. ಆದರೆ, ಮುಂದಿನ ದಿನಗಳಲ್ಲಿ ಎಣ್ಣೆ ಬೀಜಗಳಿಗೆ, ಜೈವಿಕ ಇಂಧನ ಮತ್ತು ಜೈವಿಕ ಇಂಧನ ಉಪ-ಉತ್ಪನ್ನಗಳಿಗೆ ನಿಶ್ಚಿತವಾದ ಮಾರುಕಟ್ಟೆ ನಿರ್ಮಾಣವಾಗುವುದರಲ್ಲಿ  ಯಾವ ಸಂಶಯವೂ ಇಲ್ಲ.

ಆದುದರಿಂದ ಈ ನಿಟ್ಟಿನಲ್ಲಿ ಸಂಘಟಿತವಾದ ಬೀಜಸಂಗ್ರಹಣಾ ಜಾಲ ಹಳ್ಳಿಗಳಲ್ಲಿ ಪ್ರಾರಂಭವಾಗಬೇಕಾಗಿದೆ. ಈ ಸಂಗ್ರಹಣಾ ಜಾಲವು ಈಗ ಪ್ರಚಲಿತದಲ್ಲಿರುವ ಹಾಲು ಒಕ್ಕೂಟದ ಮಾದರಿಯಲ್ಲಿ ಕೆಲಸ ಮಾಡಬಹುದು. ಹೀಗೆ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಹೋಬಳಿ ಮಟ್ಟದಲ್ಲಿ ಅಥವಾ ತಾಲ್ಲೂಕು ಮಟ್ಟದಲ್ಲಿ ಎಣ್ಣೆ ತೆಗೆಯುವ ಯಂತ್ರವನ್ನು ಸ್ಥಾಪಿಸಿ, ತೆಗೆದಂತಹ ಎಣ್ಣೆಯನ್ನು ಮತ್ತು ಹಿಂಡಿಯನ್ನು ಪುನಃ ಇದೇ ಸಹಕಾರ ಸಂಘದ ಸದಸ್ಯರುಗಳಿಗೆ ಮೊದಲು ಕೊಡುವ ವ್ಯವಸ್ಥೆ ಮಾಡಬಹುದು. ಈ ಎಣ್ಣೆಯನ್ನು ರೈತರು ಡೀಸಲ್ ಜೊತೆ ಶೇ. 10 ರಿಂದ 20 ರವರೆಗೆ ಮಿಶ್ರಣಮಾಡಿ ಟ್ರ್ಯಾಕ್ಟರ್, ಟಿಲ್ಲರ್ ಮತ್ತು ಪಂಪ್‌ಸೆಟ್‌ಗಳಿಗೆ ಬಳಸಬಹುದು. ನಂತರ ಉಳಿದ ಹೆಚ್ಚಿನ ಎಣ್ಣೆಯನ್ನು ಜೈವಿಕ ಡೀಸಲ್ ಉತ್ಪಾದಿಸಲು ಕಾರ್ಖಾನೆಗಳಿಗೆ ಕಳುಹಿಸಬಹುದು.  ಸಹಕಾರ ಸಂಘದ ಮಾದರಿಯಲ್ಲಿ ಜೈವಿಕ ಇಂಧನ ಮರಗಳ ಬೀಜಗಳನ್ನು ಸಂಗ್ರಹಿಸುವುದರಿಂದ ಮಧ್ಯವರ್ತಿಗಳನ್ನು ದೂರ ಮಾಡಬಹುದು. ಹಾಗೂ ಸಣ್ಣ ಪ್ರಮಾಣದಲ್ಲಿ ಜೈವಿಕ ಇಂಧನ ಉತ್ಪಾದಿಸುವ ಯಂತ್ರಗಳನ್ನು ಕೃಷಿ ವಿಶ್ವ ವಿದ್ಯಾಲಯದಿಂದ ಅಭಿವೃದ್ಧಿ ಪಡಿಸಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚುವರಿ ಉದ್ಯೋಗಾವಕಾಶಗಳ ಸೃಜನೆ ಹಾಗೂ ಆದಾಯ ತರಬಲ್ಲ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಿದೆ.

ಇದರಿಂದ ನಿಗದಿತ ಬೆಲೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಬೀಜಗಳನ್ನು ಶೇಖರಣೆ ಮಾಡಲು ಸಹಾಯಕವಾಗುತ್ತದೆ. ಈ ರೀತಿಯಲ್ಲಿ ಸಂಗ್ರಹಿಸಿದ ಜೈವಿಕ ಇಂಧನದ ಬೀಜಗಳನ್ನು ಸಂಸ್ಕರಿಸಲು ಈ ಕೆಳಗಿನ ವಿಧದಲ್ಲಿ ಯೋಜನೆ ಹಾಕಬಹುದು :

  • ಸಂಗ್ರಹಿಸಿದ ಬೀಜಗಳನ್ನು ಕಾರ್ಖಾನೆಗೆ ಮಾರುವುದು.
  • ಗ್ರಾಮೀಣ ಮಟ್ಟದಲ್ಲಿಯೇ ಎಣ್ಣೆ ತೆಗೆಯುವ ಘಟಕಗಳನ್ನು ಸ್ಥಾಪಿಸುವುದು.
  • ಎಣ್ಣೆಯನ್ನು ಮತ್ತು ಹಿಂಡಿಯನ್ನು ಆ ಹಳ್ಳಿಯ ಸಂಘದ ಸದಸ್ಯರು ಖರೀದಿಸಿ ಉಪಯೋಗಿಸಬಹುದು.
  • ಹೆಚ್ಚಿಗೆ ಉಳಿದ ಎಣ್ಣೆಯನ್ನು ಶುದ್ಧೀಕರಿಸಿ ಜೈವಿಕ ಡೀಸಲ್ ಮಾಡಲು ವ್ಯವಸ್ಥಿತ ಕಾರ್ಖಾನೆಗೆ ಮಾರಾಟ ಮಾಡುವುದು.

ಮಾರುಕಟ್ಟೆ ವ್ಯವಸ್ಥೆಯ ಸ್ಥಾಪನೆ

  • ರೈತರಿಂದ ಉತ್ಪನ್ನಗಳನ್ನು ಶೇಖರಿಸಿ ಗ್ರಾಮಮಟ್ಟದಲ್ಲಿ ವಿಲೇವಾರಿ ಮಾಡುವ ವ್ಯವಸ್ಥೆ.
  • ಖಚಿತ ಮತ್ತು ನಿಗದಿತ ಬೆಲೆಯನ್ನು ಒದಗಿಸುವ ವ್ಯವಸ್ಥೆ.
  • ಹಾಲು ಉತ್ಪಾದನಾ ಸಂಘಗಳ ಮಾದರಿಯಲ್ಲಿ ಮಾರುಕಟ್ಟೆ ಜಾಲವನ್ನು ಸ್ಥಾಪಿಸುವುದು.

ಉತ್ಪಾದನಾ ಘಟಕಗಳ ಸ್ಥಾಪನೆ

  • ಗೃಹ ಮಟ್ಟದಲ್ಲ್ಲಿ ಬೀಜಗಳಿಂದ ಎಣ್ಣೆಯನ್ನು ಹೊರತೆಗೆಯುವ ಯಂತ್ರಗಳ ಬಳಕೆ.
  • ಗ್ರಾಮ, ಹೋಬಳಿ ಹಾಗೂ ತಾಲ್ಲೂಕುಮಟ್ಟದಲ್ಲಿ ಗುಣಮಟ್ಟದ ಎಣ್ಣೆಗಾಣಗಳನ್ನು ಸ್ಥಾಪಿಸುವುದು.
  • ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ಜೈವಿಕ ಇಂಧನವನ್ನು ಉತ್ಪತ್ತಿಮಾಡುವ ಘಟಕಗಳ ನಿರ್ಮಾಣ.

ಜೈವಿಕ ಇಂಧನಗಳನ್ನು ಖರೀದಿ ಮಾಡುವ ಸಂಸ್ಥೆಗಳು

  • ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ.
  • ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ.
  • ದಕ್ಷಿಣ ರೈಲು ಸಂಸ್ಥೆ.
  • ಭಾರತೀಯ ತೈಲ ನಿಗಮ.
  • ಕೃಷಿ ವಿಜ್ಞಾನ ಕೇಂದ್ರಗಳು.
  • ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಬೆಂಗಳೂರು.

ಜೈವಿಕ ಇಂಧನ ಬೀಜ ಉತ್ಪಾದನಾ/ಸಂಗ್ರಹಗಾರರ ಸಂಘ

ಇತ್ತೀಚಿನ ವರ್ಷಗಳಲ್ಲಿ ಜೈವಿಕ ಇಂಧನ ತಯಾರಿಕೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಬೆಳೆಯುತ್ತಿರುವ ಹೊಂಗೆ, ಬೇವು, ಬೇಲಿಹರಳು (ಜಟ್ರೋಪ), ಹಿಪ್ಪೆ ಹಾಗೂ ಇತರೆ ತತ್ಸಂಬಂಧ ಗಿಡಗಳಿಂದ ಬರುವ ಬೀಜ ಸಂಗ್ರಹಣೆಗೆ ಹೆಚ್ಚು ಒತ್ತು ಕೊಡಲಾಗುತ್ತಿದೆ.  ಈ ಗಿಡಗಳ ಬೀಜ ಮಾರಾಟದಿಂದ ರೈತರಿಗೆ ಅನುಕೂಲ ಹಾಗೂ ಉತ್ತಮ ಆದಾಯ ತರುವ ಸಾಧ್ಯತೆಗಳು ಹೆಚ್ಚಾಗಿವೆ. ಆದಕಾರಣ ಗ್ರಾಮಮಟ್ಟದಲ್ಲಿ ಆಸಕ್ತ ರೈತರ/ರೈತ ಕುಟುಂಬಗಳ ಸಂಘಟನೆಯ ಮೂಲಕ ಜೈವಿಕ ಇಂಧನ ಗಿಡಗಳಿಂದ ಎಣ್ಣೆ ಬೀಜಸಂಗ್ರಹಣೆ ಮಾಡಿ ಮಾರಾಟ ಮಾಡುವ ವ್ಯವಸ್ಥೆ ಅವಶ್ಯಕವಾಗಿದೆ.

ಇತ್ತೀಚಿನ ದಿನದವರೆಗೆ ಈ ಬೀಜ ಸಂಗ್ರಹಣೆ ಹಾಗೂ ಮಾರಾಟ ವ್ಯಕ್ತಿಗತ ಕಾರ್ಯಕ್ರಮವಾಗಿದ್ದು ಇದೀಗ ಸಾಮೂಹಿಕವಾಗಿ ಬೀಜ ಸಂಗ್ರಹಿಸಿ ಮಾರಾಟ ಮಾಡುವ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳುವ ಅವಶ್ಯಕತೆ ಕಂಡು ಬಂದಿದೆ.

ಈ ವ್ಯವಸ್ಥೆಯಿಂದ ರೈತರಿಗೆ ಒಳ್ಳೆಯ ನಿಶ್ಚಿತ ಬೆಲೆ, ಗ್ರಾಮದಲ್ಲಿ ಬೀಜಗಳ ವಿಲೇವಾರಿ ಹಾಗೂ ಎಲ್ಲಾ ಉತ್ಪನ್ನಗಳನ್ನು ಸಂಪೂರ್ಣವಾಗಿ ಮಾರಾಟ ಮಾಡುವ ಅನುಕೂಲತೆಗಳು ಹೆಚ್ಚಾಗಿವೆ.

ಈ ನಿಟ್ಟಿನಲ್ಲಿ ಒಂದು ವ್ಯವಸ್ಥಿತ ಮಾರುಕಟ್ಟೆಯನ್ನು ರೂಪಿಸಲು ಹಾಗೂ ಹೆಚ್ಚು ಬೇಡಿಕೆಯುಳ್ಳ ಎಣ್ಣೆ ಬೀಜಗಳನ್ನು ಸಮೀಪದಲ್ಲೆ ಸ್ಥಾಪಿಸಲಾಗುವ ಎಣ್ಣೆ ತೆಗೆಯುವ / ಜೈವಿಕ ಡೀಸೆಲ್ ತಯಾರಿಸುವ ಕೇಂದ್ರಕ್ಕೆ ಒದಗಿಸುವ ಕಾರ್ಯಕ್ರಮವನ್ನು ರೂಪಿಸಲಾಗುತ್ತಿದೆ.

ಪ್ರಸ್ತುತದಲ್ಲಿ ಉತ್ಪಾದನೆಯ ಪ್ರಮಾಣಕ್ಕೆ ಅನುಗುಣವಾಗಿ ಎಣ್ಣೆ ಗಿರಣಿಗಳನ್ನು ಸ್ಥಾಪಿಸಲಾಗುತ್ತದೆ.  ಹಾಗೂ ಮಾರುಕಟ್ಟೆ ವ್ಯವಸ್ಥೆಗಾಗಿ ಸಾರ್ವಜನಿಕ ವಲಯದ ಉದ್ದಿಮೆಗಳಾದ ರೈಲ್ವೆ ಇಲಾಖೆ, ಸಾರಿಗೆ ಸಂಸ್ಥೆ ಇತರೆ ಸಾರ್ವಜನಿಕ ಉದ್ದಿಮೆಗಳು ಇತ್ಯಾದಿಗಳ ಜೊತೆ ಸೂಕ್ತ ಒಪ್ಪಂದಗಳನ್ನು ಮಾಡಲಾಗುತ್ತದೆ.

ರೈತರ ಸಹಕಾರ ಸಂಘ, ಖಾಸಗಿ ಉದ್ದಿಮೆದಾರರು ಇತರೆ ಸಂಘ ಸಂಸ್ಥೆಗಳು ಜೈವಿಕ ಇಂಧನ ತಯಾರಿಸಲು ಮುಂದೆ ಬರುತ್ತಿದ್ದಾರೆ.  ಇವುಗಳಿಗೆ ವ್ಯವಸ್ಥಿತವಾಗಿ ಬೀಜಗಳ ಪೂರೈಕೆ ಆಗಬೇಕಾಗಿದೆ, ಹಾಗೂ ಮುಂಬರುವ ದಿವಸಗಳಲ್ಲಿ ಉತ್ಪಾದನೆ ಹೆಚ್ಚಾಗುವಲ್ಲಿ ರೈತರ ಪಾತ್ರ ಗಣನೀಯವಾಗಿರುವುದು.

ಈ ಕಾರ್ಯಕ್ರಮದಿಂದ ರೈತರಿಗೆ ಹೆಚ್ಚು ಲಾಭ.  ವರ್ಷವಿಡೀ (ಪ್ರತಿ ತಿಂಗಳು) ನಿರ್ದಿಷ್ಟ ಪ್ರಮಾಣದ ಆದಾಯವನ್ನು ತರುವ  ನಿಟ್ಟಿನಲ್ಲಿ ಈ ಸಂಘಗಳ ರಚನೆ ಅಮೂಲ್ಯವಾದದ್ದು.

ಸಂಘಗಳ ರಚನೆ ಉದ್ದೇಶ :

  • ರೈತರ ಹಿಡುವಳಿಯಲ್ಲಿ ಬೆಳೆದಿರುವ ಎಣ್ಣೆ ಬೀಜಗಳ ಗಿಡಗಳಿಂದ ಬೀಜ ಸಂಗ್ರಹಣೆ.
  • ಸಾಮೂಹಿಕವಾಗಿ ಗ್ರಾಮದ ರೈತರ ಉತ್ಪತ್ತಿಯನ್ನು ಮಾರಾಟ ಮಾಡುವುದು.
  • ಮಧ್ಯವರ್ತಿಗಳಿಂದ ರೈತರಿಗಾಗುವ ಶೋಷಣೆ ತಡೆಯುವುದು ಹಾಗೂ ಬೆಳೆ ಬೆಳೆದ ರೈತನಿಗೆ ಅಧಿಕ ಲಾಭ ಒದಗಿಸುವುದು.
  • ಎಲ್ಲಾ ಸದಸ್ಯರಿಗೂ ಏಕ ರೂಪ ಬೆಲೆ ದೊರಕಿಸುವುದು.
  • ಎಲ್ಲಾ ಉತ್ಪತ್ತಿಯನ್ನು ಮಾರಾಟ ಮಾಡಲು ಅನುವು ಮಾಡಿಕೊಳ್ಳುವುದು.
  • ಆಸಕ್ತ ರೈತರು ಬೀಜಗಳಿಂದ ಗೃಹ ಮಟ್ಟದಲ್ಲಿ ಎಣ್ಣೆ ತೆಗೆಯುವುದು ಮತ್ತು ಮಾರಾಟ ಮಾಡುವುದು.
  • ಹೆಚ್ಚಿನ ಬೀಜ ಉತ್ಪತ್ತಿಯಾದಲ್ಲಿ ಸಂಘವು ತನ್ನದೇ ಆದ ಎಣ್ಣೆ ಉತ್ಪಾದನ ಘಟಕ ಪ್ರಾರಂಭಿಸುವುದು.
  • ಎಣ್ಣೆ ಹಾಗೂ ಹಿಂಡಿಯನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದು ಹಾಗೂ ಹೆಚ್ಚಿನ ಆದಾಯ ಗಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರರಾಗುವುದು.
  • ಗ್ರಾಮ ಸಂಘಗಳ ಒಕ್ಕೂಟವನ್ನು ನಂತರದ ದಿನಗಳಲ್ಲಿ ಗ್ರಾಮಪಂಚಾಯಿತಿ ಅಥವಾ ಹೋಬಳಿ ಮಟ್ಟದಲ್ಲಿ ರಚಿಸುವುದು.
  • ಪ್ರಾರಂಭಿಕ ಹಂತದಲ್ಲಿ ಗ್ರಾಮಮಟ್ಟದ ವ್ಯವಸ್ಥೆಯನ್ನು ರಚಿಸುವುದು.

ಸದಸ್ಯತ್ವ ಹಾಗೂ ರಚನೆ :

  • ಗ್ರಾಮದ ಎಲ್ಲಾ ಹಿಡುವಳಿದಾರರು ಸಂಘದ ಸದಸ್ಯರಾಗಲು ಅರ್ಹತೆಯುಳ್ಳವರಾಗಿರುತ್ತಾರೆ.
  • ಹತ್ತು ಜನ ಸದಸ್ಯರುಗಳು ಸಂಘದ ಪದಾಧಿಕಾರಿಗಳಾಗಿದ್ದು, ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಶ್ರಮಿಸುವುದು.
  • ಪದಾಧಿಕಾರಿಗಳಲ್ಲಿ ಓರ್ವ ಅಧ್ಯಕ್ಷರು, ಓರ್ವ ಉಪಾಧ್ಯಕ್ಷರು, ಓರ್ವ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಹಾಗೂ ಖಜಾಂಚಿಗಳು ದೈನಂದಿನ ಕಾರ್ಯಕ್ರಮಗಳನ್ನು ನೋಡಿಕೊಳ್ಳುವುದು.
  • ಪದಾಧಿಕಾರಿಗಳು ಪ್ರತಿ ತಿಂಗಳು ಸಭೆ ನಡೆಸಿ ಸಂಘದ ಕಾರ್ಯಚಟುವಟಿಕೆಗಳನ್ನು ಪರಾಮರ್ಶಿಸುವುದು.
  • ಆಗಿಂದಾಗ್ಗೆ ಹಾಗೂ ವರ್ಷದಲ್ಲಿ ಎರಡು ಬಾರಿ ನಿಶ್ಚಿತ ದಿನದಂದು (ಜೂನ್ ಹಾಗೂ ಡಿಸೆಂಬರ್) ಎಲ್ಲಾ ಸದಸ್ಯರುಗಳಿಗೂ ಸಂಘದ ಕೆಲಸಕಾರ್ಯ ಹಾಗೂ ಇತರೆ ವಿಚಾರಗಳನ್ನು ತಿಳಿಸುವುದು.

ಕಾರ್ಯಕ್ರಮಗಳು :

  • ಸಂಘದ ಸದಸ್ಯರುಗಳು ಎಣ್ಣೆ ಬೀಜ ಸಂಗ್ರಹಿಸಿ ಸೂಕ್ತ ಸಮಯದಲ್ಲಿ (ದಿವಸಕ್ಕೆ ಒಂದು ಬಾರಿ) ಉತ್ಪತ್ತಿಯನ್ನು ಒಟ್ಟು ಮಾಡಿ ಮಾರಾಟದ ವ್ಯವಸ್ಥೆಯನ್ನು ಮಾಡುವುದು.
  • ಮಾರಾಟದ ಮೊಬಲಗನ್ನು ಸದಸ್ಯರುಗಳಿಗೆ ಹಂಚಿ ಶೇಕಡ ೨ ರಷ್ಟನ್ನು ಸಂಘದ ಕಾರ್ಯಚಟುವಟಿಕೆಗಳಿಗೆ ಉಪಯೋಗಿಸುವುದು.
  • ಇತರೆ ಸಂಘಗಳು ಹಾಗೂ ಎಣ್ಣೆ ಉತ್ಪಾದನಾ ಘಟಕಗಳೊಡನೆ ಸಂಬಂಧ ಇರಿಸಿಕೊಂಡು ಬೆಲೆಯ ಸ್ಥಿರತೆಯನ್ನು ಕಾಪಾಡುವುದು.
  • ಸಂಘದ ಸದಸ್ಯರುಗಳು ತಮ್ಮ ಉತ್ಪಾದನೆ ಹೆಚ್ಚಿಸುವಲ್ಲಿ ಕಾರ್ಯತತ್ಪರರಾಗುವುದು.
  • ಯಾವುದೇ ರೀತಿಯಲ್ಲಿ ಕೃಷಿಗೆ ಧಕ್ಕೆಯಾಗದಂತೆ ಎಣ್ಣೆ ಬೀಜ ಗಿಡಗಳನ್ನು ಬೆಳೆಸುವುದು (ಬದು, ಬಂಜರು, ಹಿತ್ತಲು, ಕೊರಕಲು, ಬೇಲಿ ಇತ್ಯಾದಿ ಪ್ರದೇಶದಲ್ಲಿ ಮಾತ್ರ ಬೆಳೆಸುವುದು)
  • ಮಿಶ್ರ ಬೆಳೆಯಾಗಿ ಪುಂಡಿ, ಹರಳು ತರಹದ ಅಲ್ಪಾವದಿ ಬೆಳೆಗಳನ್ನು ರೈತರು ಬೆಳೆಯಲು ಪ್ರೋತ್ಸಾಹಿಸುವುದು.

ಇತರೆ ಕಾರ್ಯಗಳು

  • ಕೃಷಿ ಇಲಾಖೆ, ಜೈವಿಕ ಇಂಧನ ಉದ್ಯಾನ, ಮಡೆನೂರು, ಎಣ್ಣೆ ಉತ್ಪಾದನೆ ಗಿರಣಿಗಳು, ಪೂರಕ ಇಲಾಖೆಗಳೊಡನೆ ಸಂಪರ್ಕವಿರಿಸಿಕೊಳ್ಳುವುದು
  • ರೈತರಿಗೆ ಮಾಹಿತಿ ಒದಗಿಸುವುದು, ಉತ್ತಮ ಜಾತಿ ಗಿಡಗಳನ್ನು ಪಡೆದು ನೆಡಲು ಪ್ರೇರೇಪಿಸುವುದು, ಬೀಜ ಕೊಯ್ಲು ಸಮಯ, ಸಂಗ್ರಹ ಹಾಗೂ ಮಾರಾಟಕ್ಕೆ ಯೋಗ್ಯವಾದ ಸಂಸ್ಕರಿಸುವ ಕಾರ್ಯವನ್ನು ನಡೆಸಿಕೊಂಡು ಬರುವುದು
  • ಜೈವಿಕ ಇಂಧನ ಉದ್ಯಾನ, ಮಡೆನೂರು ಕೃಷಿ ಸಂಶೋಧನಾ ಕೇಂದ್ರ, ಕೃಷಿ ವಿಜ್ಞಾನ ಕೇಂದ್ರಗಳಿಂದ ಸೂಕ್ತ ಸಮಯಗಳಲ್ಲಿ ಮಾಹಿತಿ ಮತ್ತು ಸಹಕಾರವನ್ನು ಪಡೆಯಲು ಶ್ರಮಿಸುವುದು.

ಕಾರ್ಯಕ್ರಮ ಅನುಷ್ಠಾನ

ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅರಣ್ಯೀಕರಣ ಚಟುವಟಿಕೆಗೆ ಶೇ. 20ಕ್ಕೆ ಕಡಿಮೆಯಿಲ್ಲದಂತೆ ಅನುದಾನ ವೆಚ್ಚ ಭರಸಿ ಅರಣ್ಯೀಕರಣ ಕಾಮಗಾರಿಗಳನ್ನು ನಿರ್ವಹಿಸಲು ಅವಕಾಶಗಳಿವೆ. ಕಾರ್ಯಕ್ರಮದಡಿ ಗ್ರಾಮ ಪಂಚಾಯಿತಿಗಳು, ತಾಲೂಕು ಪಂಚಾಯಿತಿಗಳು, ಜಿಲ್ಲಾ ಪಂಚಾಯಿತಿಗಳು ಹಾಗೂ ಅರಣ್ಯ ಇಲಾಖೆ ನಿರ್ವಹಿಸಬೇಕಿರುವ ಕರ್ತವ್ಯಗಳು ಇಂತಿವೆ:

ಗ್ರಾಮ ಪಂಚಾಯಿತಿ ನಿರ್ವಹಿಸಬೇಕಾದ ಕರ್ತವ್ಯಗಳು

  • ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದಿಂದ ಗ್ರಾಮ ಪಂಚಾಯಿತಿ ಗ್ರಾಮದ ವ್ಯಾಪ್ತಿಯಲ್ಲಿ ಪ್ರಚಾರಾಂದೋಲನ ಕೈಗೊಳ್ಳಲು ಕಾರ್ಯಕ್ರಮ ರೂಪಿಸುವುದು ಹಾಗೂ ಪ್ರಚಾರಾಂದೋಲನ ಕೈಗೊಳ್ಳವುದು.
  • ರೈತರಿಗೆ ಅರಿವು ಮೂಡಿಸಲು ಎಲ್ ಸಿಡಿ ಪ್ರೊಜೆಕ್ಟರ್ ಮೂಲಕ ಡಿವಿಡಿ ಸಿನಿಮಾ, ನೃತ್ಯ ರೂಪಕ, ಬೀದಿ ನಾಟಕ, ಕಲಾ ಜಾಥಾ ಇತ್ಯಾದಿಗಳನ್ನು ಏರ್ಪಡಿಸುವುದು.
  • ಈ ಸಂಬಂಧ ಪ್ರತಿ ಪಂಚಾಯ್ತಿಯಿಂದ ಕರಪತ್ರ ಸಿದ್ದಪಡಿಸಿ ಹಂಚುವುದು.
  • ಯಾವುದೇ ದೂರುಗಳಿಗೆ ಅವಕಾಶವಿಲ್ಲದಂತೆ ಈ ಕಾರ್ಯಕ್ರಮಗಳನ್ನು ಮಳೆಗಾಲ ಮುಗಿಯುವದರೊಳಗಾಗಿ ಪೂರ್ಣಗೊಳಿಸುವುದು.
  • ಈ ಸಂಬಂಧ ಆಯಾ ಹಣಕಾಸಿನ ವರ್ಷದ ಷೆಲ್ಫ್ ಆಫ್ ಪ್ರಾಜೆಕ್ಟ್‌ನಲ್ಲಿ ಕಾರ್ಯಕ್ರಮ ಸೇರಿಸುವುದು, ಅಲ್ಲದೇ ಆರ್ಥಿಕ ವರ್ಷದಲ್ಲಿ ಕೈಗೊಳ್ಳಬೇಕಿರುವ ಜೈವಿಕ ಇಂಧನ ಕಾರ್ಯಕ್ರಮಗಳ ಬಗ್ಗೆ ಗ್ರಾಮ ಸಭೆಯಲ್ಲಿ ಮಂಡಿಸಿ ಅನುಮತಿ ಕೋರುವುದು.
  • ಗ್ರಾಮ ಪಂಚಾಯಿತಿವಾರು ಕಂದಾಯ ಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ, ಜಲಾನಯನ ಇಲಾಖೆ, ತೋಟಗಾರಿಕಾ ಇಲಾಖೆಗಳನ್ನೊಳಗೊಂಡಂತೆ ನೋಡಲ್ ಅಧಿಕಾರಿಗಳನ್ನೊಳ ತಂಡ ರಚಿಸಿ, ಸದರಿ ತಂಡದೊಡನೆ ಉತ್ತಮ ಬಾಂಧವ್ಯ ಇರಿಸಿಕೊಂಡು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದು.
  • ರೈತರ ಜಮೀನಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಸಿ ನೆಟ್ಟುಕೊಳ್ಳಲು ಇಚ್ಛಿಸುವ ರೈತರಿಂದ ಮುಂಚಿತವಾಗಿ ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಯನ್ನು ಪಡೆಯುವುದು. ಅರ್ಜಿಯನ್ನು ಗ್ರಾಮ ಪಂಚಾಯಿತಿವತಿಯಿಂದಲೇ ವಿತರಿಸುವುದು. ಸ್ವೀಕೃತ ಅರ್ಜಿಗಳನ್ನು ಅನುಕ್ರಮವಾಗಿ ವಹಿಯಲ್ಲಿ ದಾಖಲಿಸುವುದು. ಮೊದಲು ನೊಂದಾಯಿಸಿದವರಿಗೆ ಪ್ರಥಮ ಆದ್ಯತೆ ನೀಡುವುದು.
  • ಸ್ವೀಕರಿಸಿದ ಅರ್ಜಿಗಳ ಪರಿಶೀಲನೆ ನಡೆಸಿ ರೈತರು ಕೋರಿರುವ ಸಸಿಗಳ ಸಂಖ್ಯೆಯ ಪಟ್ಟಿ ತಯಾರಿಸಿ ಸಾಮಾಜಿಕ ಅರಣ್ಯ ಹಾಗೂ ಪ್ರಾದೇಶಿಕ ಅರಣ್ಯ ವಲಯ ಅರಣ್ಯಾಧಿಕಾರಿಗಳಿಗೆ ಸಮನಾಗಿ ಕಾರ್ಯ ಹಂಚಿಕೆ ಮಾಡಿ ಏಪ್ರಿಲ್ ತಿಂಗಳಲ್ಲಿ ನೀಡಬೇಕು. ವಲಯ ಅರಣ್ಯಾಧಿಕಾರಿ ರೈತರ ಭೂಮಿಯಲ್ಲಿ ನಾಟಿ ಮಾಡಬಹುದಾದ ಸಸಿಗಳ ಸಂಖ್ಯೆಯ ಸಾಧ್ಯತೆಯನ್ನು ಪರಿಶೀಲಿಸಿ, ಸಸಿಗಳ ಪಟ್ಟಿಯನ್ನು ಪಂಚಾಯಿತಿ ಕಾರ್ಯದರ್ಶಿಗೆ ಸಲ್ಲಿಸಬೇಕು. ಈ ಸಂಖ್ಯೆಗೆ ಮಾತ್ರ ಗುಂಡಿ ತೆಗೆಯಬೇಕು. ಹಾಗೂ ಅಷ್ಟಕ್ಕೇ ಮಾತ್ರ ಮೇ ತಿಂಗಳಲ್ಲಿ ಜಾಬ್ ಕಾರ್ಡ್ ಪಡೆಯುವುದು ಪಂಚಾಯಿತಿ ಕಾರ್ಯದರ್ಶಿಯ ಜವಾಬ್ದಾರಿಯಾಗಿರುತ್ತದೆ. ಇಷ್ಟು ಗುಂಡಿಗಳಿಗೆ ಮಳೆಗಾಲದಲ್ಲಿ ಸಸಿಗಳನ್ನು ವಲಯ ಅರಣ್ಯ ಅಧಿಕಾರಿಗಳ ನರ್ಸರಿಯಿಂದ ಫಲಾನುಭವಿಗಳಿಗೆ ತಲುಪಿಸಿ, ಅಷ್ಟಕ್ಕೇ ಮಾತ್ರ ಹಣ ಪಾವತಿಯನ್ನು ಡಿ.ಡಿ. ಮೂಲಕ ಮಾತ್ರವೇ ಫಲಾನುಭವಿಗಳಿಗೆ ಹತ್ತಿರವಿರುವ ಬ್ಯಾಂಕಿಗೆ ನೀಡಿ, ಆಯಾ ಜಾಬ್ ಕಾರ್ಡ್ ಅವರ ಖಾತೆಗೆ ಇಂತಿಷ್ಟು ಹಣ ವರ್ಗಾಯಿಸಬೇಕೆಂದು ಬ್ಯಾಂಕಿಗೆ ಸೂಚಿಸಬೇಕು.
  • ಒಬ್ಬ ರೈತನಿಗೆ ಎರಡೂವರೆ ಎಕರೆ ಪ್ರದೇಶದಲ್ಲಿ ಗರಿಷ್ಠ 100 ಗಿಡಗಳನ್ನು ಬೆಳೆಸಲು ಅವಕಾಶ ನೀಡುವುದು. ಅಂದರೆ ಎಕರೆ ಒಂದಕ್ಕೆ ೪೦ ಗಿಡಗಳಂತೆ ನೀಡುವುದು.
  • ರೈತರು ತಮ್ಮ ಜಮೀನಿನ ಬದುವಿನಲ್ಲಿ  2 X 2 X 2 ಅಡಿ ಅಳತೆಯ ಗುಂಡಿಗಳನ್ನು ತಗೆದುಕೊಂಡಿದ್ದಾರೆಯೇ? ಎಂಬುದನ್ನು ಪರಿಶೀಲಿಸುವುದು.
  • ಜಾಬ್ ಕಾರ್ಡ್(ಗ್ರಾಮ ಪಂಚಾಯಿತಿಯಲ್ಲಿ ನೊಂದಾಯಿಸಿದ ಬಗ್ಗೆ ನೀಡುವ ಗುರುತಿನ ಚೀಟಿ) ಹೊಂದಿಲ್ಲದ ರೈತರು ತಮ್ಮ ಹೆಸರಿನಲ್ಲಿ ನೊಂದಾಯಿಸಿದರೆ ಅವರಿಗೆ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ನೊಂದಾಯಿಸಿಕೊಂಡು ಜಾಬ್ ಕಾರ್ಡ್ ನೀಡುವುದು ಮತ್ತು ಅವರ ಹೆಸರಿನಲ್ಲಿ ಬ್ಯಾಂಕ್ ಖಾತೆ  ತೆರೆಯುವುದು.
  • 2X2X2 ಅಡಿ ಗುಂಡಿ ತಗೆದುಕೊಂಡು ಗಿಡ ನೆಟ್ಟ ಕೂಡಲೇ ಸಂಬಂಧಿಸಿದ ರೈತರ ಖಾತೆಗೆ ಗಿಡ ಒಂದಕ್ಕೆ ರೂ 25.00 ರಂತೆ ಜಮಾ ಮಾಡುವುದು ಹಾಗೂ ಗ್ರಾಮ ಪಂಚಾಯತ್/ತಾಲೂಕು ಪಂಚಾಯತ್ ನಲ್ಲಿ ಎಂಇಎಸ್ ಮಂಡಿಸುವುದು. ಎಂಇಎಸ್ ಆದೇಶದ ಪ್ರತಿಯನ್ನು ಸಂಬಂಧಿಸಿದ ರೈತರಿಗೆ ನೀಡುವುದು.
  • ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಿರ್ವಹಿಸಬೇಕಾದ ಎಲ್ಲಾ ದಾಖಲೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ದೃಡೀಕರಿಸುವುದು.
  • ಪ್ರತಿ ಹಂತದಲ್ಲಿ ದಾಖಲೀಕರಣ ಸಲುವಾಗಿ ಡಿಜಿಟಲ್ ಫೋಟೋ ತೆಗೆದು ನಿರ್ವಹಿಸುವುದು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಇಂತಹ ಕಾರ್ಯಕ್ರಮಗಳನ್ನು ನಿರ್ವಹಿಸಲು ಚಾಲ್ತಿಯಲ್ಲಿರುವ ಮಾರ್ಗ ಸೂಚಿಗಳನ್ವಯ ಮೇಟ್ (MATE) ಗಳನ್ನು ವರ್ಷ ಪೂರ್ತಿ ಅವಧಿಗೆ ನಿಯೋಜಿಸತಕ್ಕದ್ದು. ಮೇಟ್‌ಗಳನ್ನು ಸಾಧ್ಯವಾದಷ್ಟು ಸ್ವಯಂ ಸೇವಾ ಸಂಸ್ಥೆಗಳಿಂದ ಪಡೆದು ನಿಯುಕ್ತಿಗೊಳಿಸುವುದು ಸೂಕ್ತವಾಗಿದೆ. ಇದರಿಂದ ನಿಯುಕ್ತಿಗೊಳಿಸಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ನಿರ್ವಹಣಾ ಉಸ್ತಿವಾರಿ ಕಾರ್ಯ ಸುಲಭವಾಗುತ್ತದೆ.
  • ಅರಣ್ಯ ಇಲಾಖೆಯವರು/ಅಥವಾ ಜಿಲ್ಲಾಡಳಿತ ಮೂಲಕ ಬೆಳೆಸಿ ಒದಗಿಸಿದ ಹೊಂಗೆ ಸಸಿಗಳನ್ನು ಗ್ರಾಮವಾರು, ರೈತವಾರು ವಿತರಿಸಿದ ಬಗ್ಗೆ ವಹಿಯಲ್ಲಿ ದಾಖಲಿಸಿ, ನೋಡಲ್ ಅಧಿಕಾರಿಗಳಿಂದ ಧೃಡೀಕರಿಸುವುದು.

ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯವರು ನಿರ್ವಹಿಸಬೇಕಾದ ಕರ್ತವ್ಯಗಳು

 

  • ಗ್ರಾಮ ಪಂಚಾಯ್ತಿಗಳು ಜೈವಿಕ ಇಂಧನ ಸಸಿಗಳ ಬೇಡಿಕೆ ಅರಣ್ಯ ಇಲಾಖೆಗೆ ಸಲ್ಲಿಸಿವೆಯೇ? ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳವುದು.
  • ಗ್ರಾಮ ಪಂಚಾಯ್ತಿ ಕಾರ್ಯಯೋಜನೆಯಲ್ಲಿ ಜೈವಿಕ ಇಂಧನ ಕಾರ್ಯಕ್ರಮ ಹಮ್ಮಿಕೊಂಡಿರುವ ಬಗ್ಗೆ ಖಚಿತಪಡಿಸಿ ಕೊಳ್ಳತಕ್ಕದ್ದು.
  • ಪ್ರತಿ ಪಂಚಾಯಿತಿಗೆ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ, ಅವರಿಂದ ಕರಾರು ಪತ್ರ/ಒಡಂಬಡಿಕೆ ಮಾಡಿಸಿಕೊಂಡು, ಅದರಂತೆ ಕೆಲಸ ನಿರ್ವಹಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಿವುದು. ಪ್ರತಿ ಪಂಚಾಯ್ತಿಗೆ ಪ್ರಚಾರಾಂದೋಲನಕ್ಕಾಗಿ ಸಲುವಾಗಿ ಒಂದು ವಾಹನ, ಒಂದು ಎಲ್‌ಸಿಡಿ ಪ್ರೋಜೆಕ್ಟರ್  ಹಾಗೂ ಸ್ಕ್ರೀನ್ ಒದಗಿಸುವುದು. ಗ್ರಾಮವಾರು ಪ್ರಚಾರಾಂದೋಲನ ಕಾರ್ಯಕ್ರಮ ರೂಪಿಸಿ ಅದರಂತೆ ಪ್ರಚಾರಾಂದೋಲನ ನಡೆಯುತ್ತಿದೆಯೇ? ಎಂಬ ಬಗ್ಗೆ ನಿಗವಹಿಸುವುದು.
  • ಸ್ವಯಂ ಸೇವಾ ಸಂಸ್ಥೆಗಳು ಹಾಗೂ ರಚಿಸಲಾದ ಅಧಿಕಾರಿಗಳ ತಂಡ ಪ್ರಚಾರಾಂದೋಲನ ಕೆಲಸ ನಿರ್ವಹಿಸುತ್ತಿದ್ದಾರೆಯೇ? ಎಂಬ ಬಗ್ಗೆ ಪರಿಶೀಲಿಸುವುದು.
  • ನೊಂದಣಿ ಮಾಡಿದ ಎಲ್ಲಾ ರೈತರಿಗೆ ಸಮಯಾನುಸಾರ ಸಸಿಗಳ ವಿತರಣೆ ಮಾಡುವುದು.

 

  • ಅರಣ್ಯ ಇಲಾಖೆಯಿಂದ ಗ್ರಾಮವಾರು ಸಸಿ ಒದಗಿಸುವ ಕಾರ್ಯ ಮತ್ತು ಸಮರ್ಪಕವಾಗಿ ವಿತರಣೆಯಾಗುವ ಬಗ್ಗೆ ನಿಗಾವಹಿಸುವುದು.
  • ಸಮಯಾನುಸಾರ ಯೋಜನೆಯಡಿ ಅನುದಾನ ಬಿಡುಗಡೆ ಮಾಡುವುದು.
  • ಗುಂಡಿ ತೆಗೆದು ಸಸಿಗಳನ್ನು ನೆಟ್ಟಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸುವುದು.
  • ಕಾರ್ಯ ಪೂರ್ಣಗೊಳಿಸಿದ ರೈತರಿಗೆ ನಿಗದಿಪಡಿಸಿದ ಕೂಲಿ (ಅನುದಾನ) ದೊರೆತಿದೆಯೇ ಎಂಬ ಬಗ್ಗೆ ಪರಿಶೀಲನೆ ನಡೆಸಿ ಖಚಿತಪಡಿಸಿಕೊಳ್ಳುವುದು.
  • ನೊಂದಣಿಯಾದ ಎಲ್ಲಾ ರೈತರಿಗೂ ಜಾಬ್ ಕಾರ್ಡ್ ವಿತರಣೆಯಾದ ಬಗ್ಗೆ ಪರಿಶೀಲನೆ ನಡೆಸಿ, ಎಲಲ್ರಿಗೂ ಜಾಬ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದು.

ಜಿಲ್ಲಾ ಪಂಚಾಯತ್‌ಗಳ ಕರ್ತವ್ಯಗಳು

  • ವಿವಿಧ ಇಲಾಖೆಗಳಿಂದಾಯ್ದ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅದಿಕಾರಿಯಾಗಿ ಪ್ರತಿ ತಾಲ್ಲೂಕಿಗೆ ಒಬ್ಬರಂತೆ ನಿಯೋಜಿಸುವುದು ಉದಾಹರಣೆಗೆ, ಮಹಿಳಾ ಅಭಿವೃದ್ಧಿ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತ ಇಲಾಖೆಯ ಜಿಲ್ಲಾ ಅಧಿಕಾರಿ ಇತ್ಯಾದಿ.
  • ಕಾರ್ಯಕ್ರಮದಡಿ ಪಾಲ್ಗೊಳ್ಳುವ ಸ್ವಯಂ ಸೇವಾ ಸಂಸ್ಥೆಯು ಹೆಚ್ಚಿನ ಮುತುವರ್ಜಿ ವಹಿಸಿ ಕಾರ್ಯಕೈಗೊಳ್ಳಬೇಕಿರುತ್ತದೆ. ಈ ಸಂಬಂಧ ಸ್ವಯಂ ಸೇವಾ ಸಂಸ್ಥೆ ಹಾಗೂ ಸಂಬಂಧಿಸಿದ ತಾಲೂಕು ಪಂಚಾಯತ್‌ನ ಕಾರ್ಯನಿರ್ವಾಹಕ ಅಧಿಕಾರಿಗಳು ಅನುಬಂಧ – 3 ರಲ್ಲಿ ತೋರಿಸಿರುವಂತೆ ಒಡಂಬಡಿಕೆ ಮಾಡಿಕೊಳ್ಳಬೇಕಿರುತ್ತದೆ. ಈ ಬಗ್ಗೆ ಪರಿಶೀಲಿಸಿ ಒಡಂಬಡಿಕೆ ಮಾಡಿಕೊಳ್ಳುವಂತೆ ಕ್ರಮ ಜರುಗಿಸುವುದು.
  • ತಾಲೂಕಿನಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗೊಂಡ ಕಾರ್ಯಕ್ರಮದ ಉಸ್ತುವಾರಿ, ನೋಡಲ್ ಅಧಿಕಾರಿಗಳು ಕೈಗೊಂಡ ಕ್ರಮ, ಅರಣ್ಯ ಇಲಾಖೆ ಕೈಗೊಳ್ಳಬೇಕಿರುವ ಕ್ರಮಗಳ ಪ್ರಗತಿ ಪರೀಶೀಲನೆ ಹಾಗೂ ಸಮಯನುಸಾರ ಅನುದಾನ ವಿನಿಯೋಗದ ಬಗ್ಗೆ ಖಚಿತಪಡಿಸಿಕೊಳ್ಳುವುದು.
  • ಗ್ರಾಮ ಪಂಚಾಯ್ತಿಗಳ ಬೇಡಿಕೆ ಪರಿಗಣಿಸಿ ಹೆಚ್ಚುವರಿ ಜೈವಿಕ ಇಂಧನ ಸಸಿಗಳನ್ನು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಬೆಳೆಸಲು (Under Material Component) ಪರವಾನಿಗೆ ನೀಡುವುದು.
  • ಮಾಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚಾಲ್ತಿಯಲ್ಲಿರುವ ಮಾರ್ಗಸೂಚಿಗಳನ್ವಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜೈವಿಕ ಇಂಧನ ಸಸಿಗಳ ಪರಿವೀಕ್ಷಣೆ, ದಾಖಲಾತಿ ನಿರ್ವಹಣೆ ಹಾಗು ಇತರ ಚಟುವಟಿಕೆಗಳಿಗಾಗಿ ವರ್ಷವಿಡೀ ಮೇಟ್ (MATE) ಗಳನ್ನು ನಿಯೋಜಿಸಲು ಗ್ರಾಮ ಪಂಚಾಯಿತಿಗಳಿಗೆ ಸೂಚಿಸತಕ್ಕದ್ದು.
  • ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡಬೇಕಿರುವ ಸೂಕ್ತ ಸಂಭಾವನೆಯನ್ನು ಆಯಾ ಜಿಲ್ಲಾ ಪಂಚಾಯತ್‌ಗಳು ನಿಗದಿಪಡಿಸುವುದು. ಮಾಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಚಾಲ್ತಿಯಲ್ಲಿರುವ ನಿಯಮಾವಳಿಗನುಗುಣವಾಗಿ ನಿರ್ಧರಿಸತಕ್ಕದ್ದು.

ಅರಣ್ಯ ಇಲಾಖೆಯವರು ನಿರ್ವಹಸಬೇಕಾದ ಕ್ರಮಗಳು

  • ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರಾಂದೋಲನ ಸಮರ್ಪಕವಾಗಿ ನಡೆಯುತ್ತಿದೆಯೇ ಎಂಬ ಬಗ್ಗೆ ನಿಗಾವಹಿಸುವುದು.
  • ರೈತರ ನೊಂದಣಿ ಮತ್ತು ಸಸಿಗಳ ಕೋರಿಕೆಯ ಬಗ್ಗೆ ಗ್ರಾಮ ಪಂಚಾಯ್ತಿಗಳಿಂದ ಮಾಹಿತಿ ಸಂಗ್ರಹಿಸುವುದು.
  • ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮವಾರು ಹೊಂಗೆ ಸಸಿಗಳ ಬೇಡಿಕೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯ್ತಿಯಿಂದ ಪಡೆದು ಅದರಂತೆ ಗ್ರಾಮವಾರು ಸಸಿಗಳನ್ನು ಆಯಾ ಗ್ರಾಮಗಳಿಗೆ ಪೂರೈಸಿ, ಸಂಬಂಧಿಸಿದ ಗ್ರಾಮ ಪಂಚಾಯ್ತಿ ನೋಡಲ್ ಅಧಿಕಾರಿ ಹಾಗೂ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯಿಂದ ಸಹಿ ಪಡೆಯುವುದು.
  • ರೈತರು ಗುಂಡಿಗಳನ್ನು ನಿಯಮಾನುಸಾರ ತೋಡಿಕೊಂಡಿದ್ದಾರೆಯೇ ? ಹಾಗೂ ಸಸಿಗಳನ್ನು ನಿಗದಿಪಡಿಸಿದಂತೆ ನೆಟ್ಟಿದ್ದಾರೆಯೇ ? ಎಂಬ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯವಿರುವಲ್ಲಿ ಸೂಕ್ತ ತಾಂತ್ರಿಕ ಸಲಹೆ ನೀಡುವುದು.
  • ಸಸಿಗಳು ಹಾಳಾಗದಂತೆ ಎಚ್ಚರವಹಿಸುವುದು.

ನೋಡಲ್ ಅಧಿಕಾರಿಯ ಕರ್ತವ್ಯಗಳು

  • ರೈತರು ಸಲ್ಲಿಸಿರುವ ಅರ್ಜಿಗಳನ್ನು ಗ್ರಾಮ ಪಂಚಾಯ್ತಿಗಳು ಸ್ವೀಕರಿಸಿವೆಯೇ,ಸ್ವೀಕರಿಸಲಾದ ಅರ್ಜಿಗಳನ್ನು ಆದ್ಯತಾನುಸಾರ ಅನುಕ್ರಮವಾಗಿ ದಾಖಲಿಸಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸುವುದು.
  • ಸಸಿ ನೆಡುವ ಕಾರ್ಯಕ್ರಮಕ್ಕೆ ನೇಮಿಸಲಾದ ತಂಡ ಕರ್ತವ್ಯ ನಿರ್ವಹಿಸುತ್ತಿದೆಯೇ? ರೈತರಿಗೆ ಸಸಿಗಳು ಸಕಾಲದಲ್ಲಿ ಪೂರೈಕೆ ಆಗಿವೆಯೇ? ಎಂಬ ಬಗ್ಗೆ ಪರಿಶೀಲಿಸಿ ಮಾರ್ಗದರ್ಶನ ನೀಡುವುದು ಹಾಗೂ ವಿವಿಧ ಇಲಾಖೆಗಳ ಸಮನ್ವಯ ಕಾರ್ಯಕೈಗೊಳ್ಳವುದು.
  • ರೈತರು ಗುಂಡಿ ತೋಡಿ ಸಸಿಗಳನ್ನು ನೆಟ್ಟಿದ್ದಾರೆಯೇ? ಸಮಯಾನುಸಾರ ನಿಗದಿತ ಅನುದಾನ ರೈತರಿಗೆ ಸಂದಾಯವಾಗಿದೆಯೇ? ಇತ್ಯಾದಿ ವಿವರಗಳನ್ನು ಪಡೆಯುವುದು.
  • ಗ್ರಾಮ ಪಂಚಾಯ್ತಿಗಳು ತಮ್ಮ ಕಾರ್ಯಯೋಜನೆಗಳಲ್ಲಿ ಜೈವಿಕ ಇಂಧನ ಕಾರ್ಯ ಹಮ್ಮಿಕೊಂಡಿರುವ ಬಗ್ಗೆ ಖಚಿತ ಪಡಿಸಿಕೊಂಡು ಸಸಿಗಳ ಬೇಡಿಕೆಯನ್ನು ಅರಣ್ಯ ಇಲಾಖೆಗೆ ಸಲ್ಲಿಸುವಂತೆ ಮಾಡುವುದು.
  • ಕಾರ್ಯಕ್ರಮ ಅನುಷ್ಠಾನದಲ್ಲಿ ಯವುದಾದರೂ ನ್ಯೂನತೆ ಅಥವಾ ಅಸಹಕಾರ ಕಂಡು ಬಂದಲ್ಲಿ, ಕೂಡಲೇ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿತಕ್ಕದ್ದು.

ಸ್ವಯಂ ಸೇವಾ ಸಂಸ್ಥೆಗಳ ಕರ್ತವ್ಯಗಳು

  • ಗ್ರಾಮ ಪಂಚಾಯ್ತಿಯ ವ್ಯಾಪ್ತಿಯ ಗ್ರಾಮಗಳಲ್ಲಿ ಪ್ರಚಾರಾಂದೋಲನ ಕೈಗೊಳ್ಳಲು ಕಾರ್ಯಕಮ್ರ ರೂಪಿಸಿ ಅದರಂತೆ ಈಗಾಗಲೇ ರಚಿಸಲಾದ ನೋಡಲ್ ಅಧಿಕಾರಿಗಳ ತಂಡದೊಂದಿಗೆ ಎಲ್.ಸಿ.ಡಿ. ಪ್ರೊಜೆಕ್ಟರ್‌ನೊಂದಿಗೆ ಸಾಯಂಕಾಲ ಹಾಗೂ ಹೆಚ್ಚು ಜನ ಸೇರುವಲ್ಲಿ ಪ್ರಚಾರಾಂದೋಲನ ಕಾರ್ಯ ಕೈಗೊಳ್ಳವುದು.
  • ಪ್ರಚಾರಾಂದೋಲನದಲ್ಲಿ ಹೊಂಗೆ ಹಾಗೂ ಇತರೆ ಜೈವಿಕ ಇಂಧನ ಸಸಿಗಳನ್ನು ನೆಡುವುದರ ಜೊತೆಯಲ್ಲಿ ನೆಟ್ಟ ಸಸಿಗಳ ಮಧ್ಯದಲ್ಲಿ, ಬದುಗಳ ಮೇಲೆ ಹಿತ್ತಲ ಔಡಲ(ಛಿಚಿsಣoಡಿ) ಬೀಜಗಳನ್ನು ಬಿತ್ತಲು ರೈತರಿಗೆ ತಿಳುವಳಿಕೆ ನೀಡುವುದು ಹಾಗೂ ಮನವೊಲಿಸುವುದು.
  • ರೈತರಿಂದ ಸಸಿ ನೆಡುವ ಸಲುವಾಗಿ ಅರ್ಜಿ ನಮೂನೆಯಲ್ಲಿ ಅರ್ಜಿಗಳನ್ನು ಪಡೆದು ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ನೀಡುವುದು.
  • ರೈತರು ತಮ್ಮ ಜಮೀನಿನಲ್ಲಿ ಗುಂಡಿ ತೋಡಿಕೊಳ್ಳುವಂತೆ ಪ್ರೇರೆಪಿಸುವುದು.
  • 2 x 2 x 2 ಅಡಿ ಗುಂಡಿ ತಗೆದುಕೊಂಡ ಕೂಡಲೇ ನೋಡಲ್ ಅಧಿಕಾರಿ/ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆಯೊಂದಿಗೆ ಪರಿಶೀಲಿಸಿ ದೃಡೀಕರಿಸುವುದು.
  • ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಿಗೆ ಹೊಂಗೆ ಸಸಿಗಳು/ಇತರೆ ಜೈವಿಕ ಇಂಧನ ಸಸಿಗಳು ಪೂರೈಕೆಯಾಗಿವೆಯೇ ಎಂಬುದನ್ನು ಪರಿಶೀಲಿಸಿವುದು.
  • ರೈತರಿಗೆ ನಿಗದಿಪಡಿಸಿದಂತೆ ಸಸಿಗಳು ಪೂರೈಕೆಯಾಗಿವೆಯೇ? ಎಂಬ ಖಚಿತ ಮಾಡಿಕೊಳ್ಳುವುದು.
  • ರೈತರು ತೋಡಿದ ಗುಂಡಿಗಳಲ್ಲಿ ಗಿಡ ನೆಟ್ಟ ಕೂಡಲೇ ದೃಢೀಕರಿಸಿ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಗೆ ನೀಡುವುದು.
  • ಸಸಿ ನೆಟ್ಟ ದಿನದಿಂದ ಮೊದಲ ಬೇಸಿಗೆ ಕಳೆಯುವವರೆಗೆ ಗಿಡಗಳ ನಿರ್ವಹಣೆ ಬಗ್ಗೆ ಉಸ್ತುವಾರಿ ನಡೆಸುವುದು.
  • ಪ್ರತಿ ಹಂತದಲ್ಲಿಯೂ ಫೋಟೋ ಹಾಗೂ ದಾಖಲೆಗಳನ್ನು ನಿರ್ವಹಿಸುವುದು.
  • ಸ್ವಯಂ ಸೇವಾ ಸಂಸ್ಥೆಗೆ ನಿರ್ಧರಿಸಿದ ಸಂಭಾವನೆಯನ್ನು ಪಡೆಯಲು ವೋಚರ್ ತಯಾರಿಸಿ ಪಾವತಿಗಾಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಸಲ್ಲಿಸುವುದು.

ಕಾರ್ಯಕ್ರಮದ ಅನುಷ್ಠಾನಕ್ಕಾಗಿ ವಿವಿಧ ಹಂತಗಳಲ್ಲಿ ಕೈಗೊಳ್ಳಬೇಕಿರುವ ಕ್ರಮದ ವಿವರ

1. ಗ್ರಾಮ ಸಭೆಯಲ್ಲಿ ಹಸಿರು ಹೊನ್ನು ಕಾರ್ಯಕ್ರಮದ ಬಗ್ಗೆ ಚರ್ಚೆ ಹಾಗೂ ಗುರಿ ನಿಗದಿ ಪಡಿಸಿಕೊಳ್ಳುವುದು ಹಾಗೂ ಅರಣ್ಯ ಇಲಾಖೆಗೆ ಸಸಿಗಳ ಬೇಡಿಕೆ ತಿಳಿಸುವುದು (ಗ್ರಾ.ಪಂ. ಗಳಿಂದ).

ತಿಂಗಳು : ಆಕ್ಟೋಬರ್ ಮಾಹೆಯಲ್ಲಿ

2. ಗ್ರಾಮ ಪಂಚಾಯ್ತಿಯ ಕಾರ್ಯಯೋಜನೆಯಲ್ಲಿ ಹಸಿರು ಹೊನ್ನು ಕಾರ್ಯಕ್ರಮ ನಿಗದಿ ಪಡಿಸುವುದು ಮತ್ತು ಜಿಲ್ಲಾ ಪಂಚಾಯತ್‌ಗಳಿಂದ ನೋಡಲ್ ಅಧಿಕಾರಿ ನೇಮಕ (ಗ್ರಾಮ ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ)

ತಿಂಗಳು : ನವೆಂಬರ ಮತ್ತು ಡಿಸೆಂಬರ್‌ಮಾಹೆಗಳಲ್ಲಿ

3. ಸ್ವಯಂ ಸೇವಾ ಸಂಸ್ಥೆ ಗುರುತಿಸುವುದು ಹಾಗೂ (ಅನುಬಂಧ-೩ರಂತೆ) ಒಡಂಬಡಿಕೆ ಮಾಡಿಕೊಳ್ಳುವುದು ಸ್ವಯಂ ಸೇವಾ ಸಂಸ್ಥೆಗಳಿಗೆ ಹಾಗೂ ಅನುಷ್ಠಾನಾಧಿಕಾರಿಗಳಿಗೆ ಜಿಲ್ಲಾ ಮಟ್ಟದಲ್ಲಿ ತರಬೇತಿ ಏರ್ಪಡಿಸುವುದು. (ಜಿ.ಪಂ. ಹಾಗೂ ತಾ.ಪಂ.ಗಳಿಂದ)

ತಿಂಗಳು : ಜನವರಿ ಮತ್ತು ಫೆಬ್ರವರಿ ಮಾಹೆಗಳಲ್ಲಿ

4. ಸ್ವಯಂ ಸೇವಾ ಸಂಸ್ಥೆಯಿಂದ ಪ್ರಚಾರಾಂದೋಲನ ಹಾಗೂ ರೈತರಿಂದ ಭರ್ತಿ ಮಾಡಿದ ಅರ್ಜಿಗಳನ್ನು ಪಡೆದು ಗ್ರಾಮ ಪಂಚಾಯ್ತಿಗೆ ಸಲ್ಲಿಸುವುದು. (ಅನುಬಂಧ-೨ ರಂತೆ) (ಸ್ವಯಂ ಸೇವಾ ಸಂಸ್ಥೆ/ತಾಲೂಕು ಪಂಚಾಯತ್‌ಗಳಿಂದ)           ತಿಂಗಳು : ಎಪ್ರಿಲ್ ಮತ್ತು ಮೇ ಮಾಹೆಯಲ್ಲಿ

5. ಗ್ರಾಮ ಪಂಚಾಯ್ತಿಯಿಂದ ಫಲಾನುಭವಿಗಳ ಪಟ್ಟಿ ಪ್ರಕಟಣೆ ಹಾಗೂ ಫಲಾನುಭವಿಗಳು ತಮ್ಮ ಹೊಲಗಳಲ್ಲಿ ಸಸಿ ನೆಡಲು ಗುಂಡಿ ತಗೆಯುವ ಕಾರ್ಯ. (ಗ್ರಾಮ ಪಂಚಾಯ್ತಿ/ಫಲನುಭವಿಗಳಿಂದ)

ತಿಂಗಳು : ಮೇ ಮಾಹೆಯಲ್ಲಿ

6. ನೋಡಲ್ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಹಾಗೂಅರಣ್ಯ ಇಲಾಖೆಯಿಂದ ಸಸಿಗಳ ಪೂರೈಕೆ (ನೋಡಲ್ ಅಧಿಕಾರಿ/ಅರಣ್ಯ ಇಲಾಖೆಗಳಿಂದ)

ತಿಂಗಳು : ಮೇ/ಜೂನ್/ಜುಲೈಮಾಹೆಗಳಲ್ಲಿ

7. ಫಲಾನುಭವಿಗಳಿಂದ ಸಸಿ ನೆಡುವ ಕಾರ್ಯ.(ಸ್ವಯಂ ಸೇವಾ ಸಂಸ್ಥೆ/ಅರಣ್ಯ ಇಲಾಖೆಗಳಿಂದ ಪರಿಶೀಲನೆ, ದಾಖಲಾತಿ)

ತಿಂಗಳು : ಜೂನ್/ಜುಲೈ/ಆಗಸ್ಟ್‌ಮಾಹೆಗಳಲ್ಲಿ

8. ಜಿಲ್ಲಾ ಪಂಚಾಯತ್‌ಗಳಿಗೆ ಅಂತಿಮ ಪ್ರಗತಿ ವರದಿ ಸಲ್ಲಿಕೆ (ತಾಲೂಕು ಪಂಚಾಯತ್‌ಗಳಿಂದ)

ತಿಂಗಳು : ಆಕ್ಟೋಬರ್ ಮಾಹೆಯಲ್ಲಿ

ಕಾರ್ಯಕ್ರಮ ಉಸ್ತುವಾರಿ ಮತ್ತು ಮೌಲ್ಯಮಾಪನ

ಕಾರ್ಯಕ್ರಮದ ಉಸ್ತುವಾರಿ ಮತ್ತು ಮೌಲ್ಯ ಮಾಪನವನ್ನು ಈ ಕೆಳಗಿನಂತೆ ನಿರ್ವಹಿಸುವುದು

  • ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ- ಶೇ.100 ರಷ್ಟು ಉಸ್ತುವಾರಿಯನ್ನು ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಹಾಗೂ ಸಂಬಂಧಿಸಿದ ವನಪಾಲಕರು/ವಲಯ ಅರಣ್ಯಾಧಿಕಾರಿ ನಿರ್ವಹಿಸತಕ್ಕದ್ದು.
  • ತಾಲೂಕು ಮಟ್ಟದಲ್ಲಿ- ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ, ಪಂಚಾಯಿತಿಯ ವಿಸ್ತರಣಾಧಿಕಾರಿ ಹಾಗೂ ವಲಯ ಅರಣ್ಯಾಧಿಕಾರಿಗಳು/ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಲಯ) ಕನಿಷ್ಟ ಶೇ.10 ರಷ್ಟು ಉಸ್ತುವಾರಿ ನಿರ್ವಹಿಸತಕ್ಕದ್ದು.
  • ಜಿಲ್ಲಾ ಮಟ್ಟದಲ್ಲಿ- ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತಿಯ ಉಪ ಕಾರ್ಯದರ್ಶಿ ಅಭಿವೃದ್ಧಿ, ಉಪ ಅರಣ್ಯ ಸಂರಕ್ಷಣಾಧಿಕಾರಿ(ಪ್ರಾದೇಶಿಕ ಹಾಗೂ ಸಾಮಾಜಿಕ ಅರಣ್ಯ ವಲಯ) ಹಾಗೂ ಜಿಲ್ಲಾ ಪಂಚಾಯ್ತಿ ಸೂಚಿಸಿದ ನೋಡಲ್ ಅಧಿಕಾರಿಗಳು ಕನಿಷ್ಟ ಶೇ. 5 ರಷ್ಟು ಉಸ್ತುವಾರಿ ನಿರ್ವಹಿಸತಕ್ಕದ್ದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಕಾರ್ಯಕ್ರಮ ಅನುಷ್ಠಾನಗೊಳಿಸಲು ಸಮನ್ವಯ ಸಮಿತಿ* ಸಭೆಗಳನ್ನು ಉಪ ಕಾರ್ಯದರ್ಶಿ (ಅಭಿವೃದ್ಧಿ) ಅವರ ಅಧ್ಯಕ್ಷತೆಯಲ್ಲಿ ನಡೆಸಿ ಕಾರ್ಯಕ್ರಮಕ್ಕೆ ಚಾಲನೆ ನೀಡುವುದು.
  • ಸಂಪೂರ್ಣ ಮೌಲ್ಯ ಮಾಪನವನ್ನು ಜಿಲ್ಲಾ ಪಂಚಾಯ್ತಿಯ ಮುಖ್ಯ ಯೋಜನಾಧಿಕಾರಿ ನಿರ್ವಹಿಸತಕ್ಕದ್ದು.
  • ರಾಜ್ಯ ಮಟ್ಟದಲ್ಲಿ – ಜೈವಿಕ ಇಂಧನ ಕಾರ್ಯಪಡೆ, ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ(ಕೇಂದ್ರ ಸ್ಥಾನ), ನಿರ್ದೇಶಕರು, ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಇವರುಗಳು ಆಗಿಂದಾಗ್ಯೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ, ಪ್ರಗತಿ ಪರಿಶೀಲನೆ ಮಾಡಿ, ಸಲಹೆ ಸೂಚನೆಗಳನ್ನು ಅನುಷ್ಠಾನಾಧಿಕಾರಿಗಳಿಗೆ/ಜಿಲ್ಲಾ ಪಂಚಾಯ್ತಿಗಳಿಗೆ ನೀಡತಕ್ಕದ್ದು.
  • ತಾಲೂಕುವಾರು ಸಮನ್ವಯ ಸಮಿತಿಯನ್ನು ರಚಿಸುವುದು. ಈ ಸಮಿತಿಗೆ  ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನಿಯೋಜಿಸಿ ಕಾರ್ಯಕ್ರಮದ ಉಸ್ತುವಾರಿ ಜವಾಬ್ದಾರಿ ನೀಡುವುದು.

ಜೈವಿಕ ಇಂಧನ ಜಿಲ್ಲಾ ಉಸ್ತುವಾರಿ ಸಮಿತಿ

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಮೂಲಕ ಕಾರ್ಯಕ್ರಮಗಳನ್ನು  ಹಾಗೂ ಚಟುವಟಿಕೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಜಿಲ್ಲಾ ಮಟ್ಟದಲ್ಲಿ ಇತರೆ ಇಲಾಖೆಗಳೊಂದಿಗೆ ಸಮನ್ವಯ, ಯೋಜನೆಯ ಅನುಷ್ಠಾನದಲ್ಲಿ ಕಂಡು ಬರುವ ಪ್ರಾಯೋಗಿಕ ನ್ಯೂನತೆ, ಜೈವಿಕ ಇಂಧನ ಕುರಿತು ಜಾಗೃತಿ ಮೂಡಿಸಲು ಗ್ರಾಮ ಪಂಚಾಯಿತಿಗಳಿಗೆ ಸಲಹೆ, ಸಮುದಾಯಗಳ ಪಾಲ್ಗೊಳ್ಳುವಿಕೆ, ಎನ್.ಆರ್.ಇ.ಜಿ.ಎ. ಅನುದಾನ ಹೆಚ್ಚು ಹೆಚ್ಚಾಗಿ ಗ್ರಾಮೀಣ ರೈತಾಪಿ ಜನರಿಗೆ ಉಪಯೋಗಿಸಲು ಮಾರ್ಗದರ್ಶನ ಇತ್ಯಾದಿಗಳ ಕುರಿತಂತೆ ಪರಿಶೀಲಿಸಲು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಜೈವಿಕ ಇಂಧನ ಸಮಿತಿಯನ್ನು ದಿನಾಂಕ 30.01.2012 ರಿಂದ ಜಾರಿಯಾಗುವಂತೆ ರಚಿಸಲಾಗಿದೆ.

ಈ ಸಮಿತಿಯ ಸದಸ್ಯರುಗಳು ಕೆಳಗಿನಂತಿರುತ್ತಾರೆ.

ಕ್ರ.ಸಂ

ಅಧಿಕಾರಿಗಳ ಹೆಸರು ಮತ್ತು ಪದನಾಮ

ಸ್ಥಾನ

1 ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಅಧ್ಯಕ್ಷರು
2 ಉಪ ಅರಣ್ಯ ಸಂರಕ್ಷಣಾಧಿಕಾರಿ (ಸಾಮಾಜಿಕ) ಸದಸ್ಯ ಸಮಾವೇಷಕ
3 ಉಪ ಅರಣ್ಯ ಸಂರಕ್ಷಣಾಧಿಕಾರಿ (ಪ್ರಾದೇಶಿಕ) ಸದಸ್ಯರು
4 ಜಂಟಿ ನಿರ್ದೇಶಕರು, ಕೃಷಿ ಇಲಾಖೆ ಸದಸ್ಯರು
5 ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಸದಸ್ಯರು
6 ಜಂಟಿ ನಿರ್ದೇಶಕರು, ರೇಷ್ಮೆ ಇಲಾಖೆ ಸದಸ್ಯರು
7 ಗೌರವ ಕಾರ್ಯದರ್ಶಿ, ಜಿಲ್ಲಾ ವಿಜ್ಞಾನ ಕೇಂದ್ರ ಸದಸ್ಯರು
8 ನೋಡಲ್ ಅಧಿಕಾರಿ/ಅಧಿಕಾರಿಗಳು, ಕೆ.ಎಸ್.ಬಿ.ಡಿ.ಬಿ., ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಸದಸ್ಯರು
9 ಕೆ.ಎಸ್.ಬಿ.ಡಿ.ಬಿ.ಯ ಪ್ರತಿನಿಧಿಗಳು/ಲೀಡ್ ಎನ್.ಜಿ.ಓ ಸದಸ್ಯರು
10 ಸಮಗ್ರ ಗ್ರಾಮೀಣ ಇಂಧನ ಕಾರ್ಯಕ್ರಮ ಯೋಜನಾ ಅಭಿಯಂತರು ಹಾಗೂ ಜಿಲ್ಲಾ ಜೈವಿಕ ಇಂಧನ ಮಂಡಳಿಯ ಉಸ್ತುವಾರಿ ಹಾಗೂ ಸಮನ್ವಯಾಧಿಕಾರಿ ಸಹ-ಸಮಾವೇಷಕ (co-convener)

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ರಾಜ್ಯದ ಜಿಲ್ಲಾ ಪಂಚಾಯತ್‌ಗಳಲ್ಲಿ ಗ್ರಾಮೀಣ ಇಂಧನ ಕಾರ್ಯಕ್ರಮದ ಉಸ್ತುವಾರಿ ನಿರ್ವಹಿಸುತ್ತಿರುವ ಸಮಗ್ರ ಗ್ರಾಮೀಣ ಇಂಧನ ಕಾರ್ಯಕ್ರಮ ಯೋಜನಾ ಅಭಿಯಂತರಿಗೆ ಹೆಚ್ಚುವರಿಯಾಗಿ ಜಿಲ್ಲಾ ಜೈವಿಕ ಇಂಧನ ಅಭಿವೃದ್ಧಿ ಕಾರ್ಯಕ್ರಮದ ಉಸ್ತುವಾರಿ ಹಾಗೂ ಸಮನ್ವಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಲು ಹೊರಡಿಸಿರುವ ಆದೇಶದ ಹಿನ್ನಲೆಯಲ್ಲಿ ಈ ಎಲ್ಲಾ ಅಭಿಯಂತರರು ಗ್ರಾಮೀಣ ಇಂಧನ ಕಾರ್ಯಕ್ರಮದ ಸಮರ್ಪಕ/ಯಶಸ್ವಿ ಅನುಷ್ಠಾನಕ್ಕೆ ಚ್ಯುತಿ ಬಾರದಂತೆ ಸದರಿ ಕಾರ್ಯಕ್ರಮದ ಉಸ್ತುವಾರಿಯೊಂದಿಗೆ ಹೆಚ್ಚುವರಿಯಾಗಿ ಜಿಲ್ಲಾ ಇಂಧನ ಅಭಿವೃದ್ಧಿ ಕಾರ್ಯಕ್ರಮದ ಉಸ್ತುವಾರಿ ಹಾಗೂ ಸಮನ್ವಯಾಧಿಕಾರಿಯಾಗಿ ಕೆಳಗಿನ ಚಟುವಟಿಕೆಗಳನ್ನು ಈ ಕೆಳಕಂಡ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸಬೇಕಾಗುತ್ತದೆ.

  • ಜೈವಿಕ ಇಂಧನ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಗಳನ್ನು ನಿಗದಿತವಾಗಿ ಏರ್ಪಡಿಸಲು ಕ್ರಮ ಕೈಗೊಳ್ಳುವುದು.
  • ಗ್ರಾಮ ಅರಣ್ಯ ಸಮಿತಿ, ವಿವಿಧ ವಿದ್ಯಾ ಸಂಸ್ಥೆಗಳ ಪ್ರತಿನಿಧಿ ಹಾಗೂ ಕೆರೆ ಬಳಕೆದಾರರ ಸಂಘಗಳ ಪ್ರತಿನಿಧಿಗಳನ್ನು ಜಿಲ್ಲಾ ಜೈವಿಕ ಇಂಧನ ಉಸ್ತುವಾರಿ ಸಮಿತಿಗೆ ಆಯ್ಕೆ ಮಾಡಲು ಕ್ರಮ ಜರುಗಿಸುವುದು.
  • ಜೈವಿಕ ಇಂಧನ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಜಿಲ್ಲಾ ಉಸ್ತುವಾರಿ ಸಮಿತಿ ಸಹಯೋಗದೊಂದಿಗೆ ಜಿಲ್ಲೆಯ ಮಧ್ಯಮ ಹಾಗೂ ದೀರ್ಘಕಾಲೀನ ಜೈವಿಕ ಇಂಧನ ಯೋಜನೆ ರೂಪಿಸುವುದು ಹಾಗೂ ಜಿಲ್ಲೆಯ ವಾರ್ಷಿಕ ಕ್ರಿಯಾ ಯೀಜನೆ ಸಿದ್ಧಪಡಿಸಿ ಜಿಲ್ಲಾ ಪಂಚಾಯಿತಿಗೆ ಹಾಗೂ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಸಲ್ಲಿಸುವುದು.
  • ಜೈವಿಕ ಇಂಧನ ಕಾರ್ಯಕ್ರಮಗಳಾದ ಹಸಿರಿ ಹೊನ್ನು, ಬರಡು ಬಂಗಾರ, ಸುವರ್ಣ ಭೂಮಿ ಯೋಜನೆ ಹಾಗೂ ಇತರೆ ಯೋಜನೆಗಳ ಅನುಷ್ಠಾನದ ಉಸ್ತುವಾರಿ ಕಾರ್ಯ ನಡೆಸಿ, ಪ್ರಗತಿ ಪರಿಶೀಲಿಸಲು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಹಾಗೂ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಗೆ ಪ್ರತಿ ಮಾಹೆ ಅಂಕಿ/ಅಂಶಗಳ ಪ್ರಗತಿ ವರದಿ ಸಲ್ಲಿಸುವುದು.
  • ಜಿಲ್ಲೆಯಲ್ಲಿ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ಗುರುತಿಸಲಾದ ಸ್ವಯಂ ಸೇವಾ ಸಂಸ್ಥೆಗಳು ಕೈಗೊಳ್ಳಬೇಕಾದ ಮಾಹಿತಿ ಹಾಗೂ ಪ್ರಚಾರ ಕಾರ್ಯಕ್ರಮಗಳಿಗೆ ಉಸ್ತುವಾರಿ ಹಾಗೂ ಮಾರ್ಗದರ್ಶನ ನೀಡುವುದು.
  • ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಸ್ಥಾಪಿಸಲಾದ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರಗಳೊಂದಿಗೆ ನಿಕಟ ಸಂಪರ್ಕ ಹೊಂದಿ, ಜಿಲ್ಲೆಯಲ್ಲಿ ಜೈವಿಕ ಇಂಧನ ಉದ್ಯಮದ ಬೆಳವಣಿಗೆಗೆ ಅಗತ್ಯವಿರುವ ವಿವಿಧ ತರಬೇತಿ, ಪ್ರಾತ್ಯಕ್ಷಿಕೆ, ಕಾರ್ಯಾಗಾರ, ಪ್ರದರ್ಶನ ಏರ್ಪಡಿಸಲು ಸಹಕರಿಸುವುದು.
  • ಗ್ರಾಮ ಪಂಚಾಯಿತಿಗಳ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಅರಣ್ಯೀಕರಣದಡಿ ಜೈವಿಕ ಇಂಧನ ಸಸಿಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರೂಬ, ಇತ್ಯಾದಿ ವಿವಿಧ ಜೈವಿಕ ಸಸಿ ಬೆಳೆಸಿ ನೆಡಲು ಸಮನ್ವಯ ಕಾರ್ಯಕೈಗೊಳ್ಳುವುದು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಸಾಧ್ಯವಾದಷ್ಟು ಹೆಚ್ಚಿನ ಅನುದಾನ ವಿನಿಯೋಗಿಸಿಕೊಂಡು ಜೈವಿಕ ಇಂಧನ ಸಸಿ ಬೆಳೆಸಲು ಹಾಗೂ ನೆಡಲು ಗ್ರಾಮ ಪಂಚಾಯತ್‌ಗಳ ಮನವೊಲಿಸುವುದು.
  • ಜೈವಿಕ ಇಂಧನ ಬೀಜ ಖರೀದಿಗೆ, ಪ್ರತಿ ಜಿಲ್ಲೆಯಲ್ಲಿ ಜೈವಿಕ ಇಂಧನ ಬೀಜ ಖರೀದಿ ಕೇಂದ್ರಗಳನ್ನು ನಿರ್ಮಿಸಿದ್ದು, ಗ್ರಾಮೀಣ ಪ್ರದೇಶದ ರೈತರು ಈ ಕೇಂದ್ರಕ್ಕೆ ಬೀಜಗಳನ್ನು ಒದಗಿಸುವಲ್ಲಿ ಹಾಗೂ ಜೈವಿಕ ಹಿಂಡಿಯನ್ನು ಗೊಬ್ಬರವಾಗಿ ಉಪಯೋಗಿಸುವಲ್ಲಿ ಸಮನ್ವಯ ಕಾರ್ಯ ಕೈಗೊಳ್ಳುವುದು.
  • ಕೃಷಿ, ಅರಣ್ಯ, ಪರಿಸರ, ಜಲಾನಯನ ಹಾಗೂ ಇತರ ಇಲಾಖೆಗಳ ಕಾರ್ಯಕ್ರಮಗಳೊಂದಿಗೆ ಜೈವಿಕ ಇಂಧನ ಕಾರ್ಯಕ್ರಮ ಅನುಷ್ಠಾನಗೊಳಿಸುವುದು ಹಾಗೂ ಜಿಲ್ಲಾ ಪಂಚಾಯತ್‌ನ ಮುಖ್ಯ ಯೋಜನಾಧಿಕಾರಿಗಳಿಗೆ, ಮುಖ್ಯ ಲೆಕ್ಕಾಧಿಕಾರಿಗಳಿಗೆ ಅಗತ್ಯವೆನಿಸುವ ಮಾಹಿತಿ ನೀಡುವುದು.
  • ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯಿಂದ ನೀಡಲಾಗುವ ಸೂಚನೆ ಮಾರ್ಗಸೂಚಿ, ಮಾರ್ಗದರ್ಶನದಂತೆ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಕ್ರಮ ಕೈಗೊಳಿಸುವುದು.

ನಮ್ಮ ದೇಶದಲ್ಲಿ ಜೈವಿಕ ಇಂಧನ ಉತ್ಪಾದನೆಗಾಗಿ ಬೇಕಾದ ಸಸ್ಯಗಳನ್ನು ಬೆಳೆಸಲು ಪಶ್ಚಿಮ ಘಟ್ಟಗಳು ಮತ್ತು ಮೈದಾನ ಪ್ರದೇಶಗಳ ಲಭ್ಯವಿದೆ. ಅಲ್ಲದೇ ಈ ಸಸ್ಯಗಳನ್ನು ರೈತರು ಜಮೀನಿನ ಬದುಗಳಲ್ಲಿ, ಹಿತ್ತಲು ಹಾಗೂ ಬಂಜರು ಭೂಮಿಯಲ್ಲಿ ಬೆಳೆಯಬಹುದಾಗಿದೆ. ಕರ್ನಾಟಕ ರಾಜ್ಯದಲ್ಲಿ ಸುಮಾರು 13.5 ಲಕ್ಷ ಹೆಕ್ಟೇರು ಬಂಜರು/ಅರೆ ಬಂಜರು ಭೂಮಿ ಲಭ್ಯವಿದೆ ಎಂದು ಅಂದಾಜು ಮಾಡಲಾಗಿದೆ. ನೈಸರ್ಗಿಕವಾಗಿ ಬೆಳೆಯುವ ಮರಗಿಡಗಳಿಂದ ದೊರೆಯುವ ಬೀಜಗಳಿಂದ ಬರುವ ಎಣ್ಣೆಯನ್ನು ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದಾಗಿದೆ. ನಮ್ಮ ದೇಶದಲ್ಲಿ 150ಕ್ಕಿಂತಲೂ ಹೆಚ್ಚು ಮರಗಳಿಂದ ದೊರೆಯುವ ಎಣ್ಣೆ ಬೀಜವನ್ನು ಜೈವಿಕ ಇಂಧನವಾಗಿ ಬಳಸಬಹುದಾಗಿದೆ. ಪ್ರಮುಖವಾಗಿ ಹೊಂಗೆ, ಜಟ್ರೋಪ, ಬೇವು, ಹಿಪ್ಪೆ ಸಿಮರೂಬ ಇನ್ನಿತರ ಸಸ್ಯಗಳನ್ನು ಬೆಳೆದು ಬಯೋಡೀಸೆಲ್ ಉತ್ಪಾದನೆಗಾಗಿ ಬಳಸಿಕೊಳ್ಳಬಹುದಾಗಿದೆ.

ಕಬ್ಬು, ಮೆಕ್ಕೆಜೋಳ, ಮುಸುಕಿನ ಜೋಳ, ಬೀಟ್‌ರೂಟ್‌ನಂತಹ ಬೆಳೆಗಳನ್ನು ಎಥೆನಾಲ್ ಉತ್ಪಾದನೆಗಾಗಿ ಬಳಸಬಹುದಾಗಿದೆ. ಈನಿಟ್ಟಿನಲ್ಲಿ ರೈತರ ಪಾಲ್ಗೊಳ್ಳವಿಕೆ ಪ್ರಮುಖ ಪಾತ್ರವಹಿಸುತ್ತದೆ. ಕಬ್ಬಿನಿಂದ ಸಕ್ಕರೆ ತಯಾರಿಸಿದ ನಂತರದಲ್ಲಿ ಉಳಿಯುವ ಕಾಕಂಬಿ (Molaces) ನಿಂದ, ಕೃಷಿ ತ್ಯಾಜ್ಯ ವಸ್ತುಗಳಿಂದ, ಗೋವಿನ ಜೋಳ ಮತ್ತು ಇತರೆ ನಾರಿನಂಶ ಜಾಸ್ತಿ ಇರುವ ವಸ್ತುಗಳಿಂದ ಎಥೆನಾಲ್ ತಯಾರಿಸಬಹುದಾಗಿದೆ. ಅಲ್ಲದೇ ಮಳೆಯಾಧಾರಿತ ಕೃಷಿ ಕ್ಷೇತ್ರಗಳಲ್ಲಿ ಹರಳು, ಪುಂಡಿಯಂತಹ ಕಡಿಮೆ ಅವಧಿಯಲ್ಲಿ ಬೆಳೆಯಬಹುದಾದ ಎಣ್ಣೆ ಕಾಳುಗಳನ್ನು ಸಹ ಜೈವಿಕ ಇಂಧನ ತಯಾರಿಕೆಯಲ್ಲಿ ಬಳಸಬಹುದು.

ಜೈವಿಕ ಇಂಧನ ಉತ್ಪಾದನೆಗಾಗಿ ಬೇಕಾಗಿರುವ ಕಚ್ಚಾ ವಸ್ತುಗಳಿಗೆ ಕೃಷಿಯೇ ಮೂಲವಾಗಿದೆ. ಆದ್ದರಿಂದ ರೈತರ ಪಾಲ್ಗೊಳ್ಳುವಿಕೆ ಅತ್ಯಗತ್ಯ. ರೈತರು ತಮ್ಮ ಜಮೀನಿನ ಬದುಗಳಲ್ಲಿ, ಹಿತ್ತಲು, ಬಂಜರು ಭೂಮಿಗಳಲ್ಲಿ ಈ ಮರಗಳನ್ನು ಬೆಳೆಸಬಹುದಾಗಿದೆ. ಇದರಿಂದ ಬೆಳೆಗಳಿಗೆ ಬೇಕಾದ ನೆರಳು ದೊರೆಯುವುದು, ಹಸಿರೆಲೆ ಗೊಬ್ಬರ ಜೊತೆಗೆ ಎಣ್ಣೆ ತೆಗೆದು ಬರುವ ಹಿಂಡಿಯನ್ನು ತಮ್ಮ ಭೂಮಿಗೆ ಬಳಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುವುದಲ್ಲದೇ, ನೈಸರ್ಗಿಕ ಸಮತೋಲನವನ್ನೂ ಕಾಪಾಡಬಹುದು. ಇದರಿಂದ ರೈತರು ಹೆಚ್ಚಿನ ಆದಾಯವನ್ನು ಗಳಿಸಬಹುದಾಗಿದೆ. ರೈತರು ತಮ್ಮ ಬಿಡುವಿನ ವೇಳೆಯಲ್ಲಿ ಎಣ್ಣೆ ತೆಗೆದು ಮಾರುವುದರಿಂದಲೂ ಹೆಚ್ಚುವರಿ ಆದಾಯಗಳಿಸಬಹುದು, ಜೊತೆಗೆ ಉದ್ಯೋಗವೂ ದೊರೆತಂತಾಗುವುದು. ಸಣ್ಣ, ಅತೀಸಣ್ಣ ರೈತರು ತಮ್ಮ ಹೊಲದ ಬದುಗಳ ಮೇಲೆ, ಬೇಲಿಯ ಸುತ್ತ ಮುತ್ತ ಮತ್ತು ಮನೆಯ ಹಿತ್ತಲಿನಲ್ಲಿ ಕೆಲವು ಗಿಡಗಳನ್ನು ಬೆಳೆಯಬಹುದು. ದೊಡ್ಡ ರೈತರು ತಮ್ಮ ಜಮೀನಿನ ಸ್ವಲ್ಪ ಭಾಗದಲ್ಲಿ ಮಿಶ್ರ ತೋಪಿನ ಮಾದರಿಯಲ್ಲಿ ಬೆಳೆಯಬಹುದು. ಬಂಜರು, ಕೊರಕಲು, ಮತ್ತು ವ್ಯವಸಾಯ ಮಾಡದೇ ಇರುವ ಜಾಗದಲ್ಲಿ ಜೈವಿಕ ಇಂಧನ ಮರಗಳನ್ನು ಮಿಶ್ರತೋಪನ್ನಾಗಿ ಬೆಳೆಯಬಹುದು.

ಇಂತಹ ಕಾರ್ಯಯೋಜನೆಯಿಂದ ಪ್ರತಿ ರೈತ ತಿಂಗಳಿಗೆ ರೂ. 200 ರಿಂದ ರೂ. 2000 ದಷ್ಟು ಹೆಚ್ಚುವರಿ ಆದಾಯವನ್ನು (1-10 ಎಕರೆ ಜಮೀನಿನಿಂದ 6-8 ತಿಂಗಳವರೆಗೆ ಲಭ್ಯವಿರುತ್ತದೆ) ಗಳಿಸಬಹುದಾಗಿದೆ. ಈ ಕಾರ್ಯಕ್ರಮದಿಂದ ಪ್ರತಿ ಕುಟುಂಬಕ್ಕೆ ವರ್ಷಕ್ಕೆ 15 ರಿಂದ 30 ದಿನಗಳ ಉದ್ಯೋಗವನ್ನು ದೊರಕಿಸಬಹುದು.

ಕೃಷಿ ಅಭಿವೃದ್ಧಿಗಾಗಿ ರೈತರಿಗೆ ಅಗತ್ಯವಿರುವ ಪ್ರಮುಖವಾದ ವಸ್ತುಗಳಲ್ಲಿ ಗೊಬ್ಬರವೂ ಒಂದಾಗಿದೆ. ಪ್ರಸ್ತುತ ಅಧಿಕ ರಾಸಾಯನಿಕ ಬಳಕೆಯಿಂದ ಮಣ್ಣಿನ ಗುಣಮಟ್ಟ ಕಡಿಮೆಯಾಗುತ್ತಿದ್ದು ಅಧಿಕ ಕ್ಷಾರತೆ ಹೊಂದುತ್ತಿದೆ. ಇದೇ ರೀತಿ ಮುಂದಿವರಿದಿದ್ದಲ್ಲಿ ಮುಂಬರುವ ದಿನಗಳಲ್ಲಿ ಮಣ್ಣಿನ ಗುಣಮಟ್ಟ ಸಂಪೂರ್ಣ ಹಾಳಾಗಿ ಮುಂದೊಂದು ದಿನ ಕೃಷಿಗೆ ಯೋಗ್ಯವಾಗಿರದೆ ಬಂಜರು ಭೂಮಿಯಾಗುವ ದಿನ ಎದುರಿಸಬೇಕಾಗುತ್ತದೆ. ಆದುದರಿಂದ ರೈತ ಸಾವಯವ ಕೃಷಿ ಕಡೆ ಹೆಚ್ಚಿನ ಒಲವು ತೋರಿಸಬೇಕಾಗಿದೆ. ಜೈವಿಕ ಇಂಧನ ಕೃಷಿಯಲ್ಲಿ ತೊಡಗುವ ರೈತರುಗಳಿಗೆ ಮುಖ್ಯವಾಗಿ ಕೃಷಿಗೆ ಅಗತ್ಯವಿರುವ ಸಾವಯವ ಗೊಬ್ಬರ ಲಭಿಸಿದಂತಾಗುತ್ತದೆ. ರಾಸಾಯನಿಕ ಗೊಬ್ಬರಕ್ಕಾಗಿ ಸಾಲ ಮಾಡಿ ಗೊಬ್ಬರ ಖರೀದಿಸದೆ ಹಾಗೂ ಅದರ ಮೇಲೆ ಅವಲಂಭಿಸದೆ ಜೈವಿಕ ಇಂಧನ ಕೃಷಿಯೊಂದಿಗೆ ಸಾವಯವ ಗೊಬ್ಬರವೂ ಪುಕ್ಕಟೆಯಾಗಿ ಪಡೆಯಬಹುದಾಗಿದೆ. ಪ್ರತಿ 1ಕೆ.ಜಿ. ಎಣ್ಣೆ ಉತ್ಪಾದಿಸುವುದರೊಂದಿಗೆ ರೈತನಿಗೆ 2 ಕೆ.ಜಿ. ಹಿಂಡಿ ಸಾವಯವ ಗೊಬ್ಬರವಾಗಿ ಪಡೆಯುತ್ತಾನೆ. ಇದರಿಂದ ರಾಸಾಯನಿಕ ಗೊಬ್ಬರಕ್ಕಾಗಿ ಖರ್ಚು ಮಾಡಬೇಕಿರುವ ಹಣ ಉಳಿತಾಯ ಮಾಡುವುದರೊಂದಿಗೆ ತಲೆತಲಾಂತರದಿಂದ ಪಡೆದ ಭೂಮಿಯ ಮಣ್ಣಿನ ಸಾರಾಂಶವನ್ನು ಸಹ ಸಾವಯವ ಗೊಬ್ಬರದಿಂದ ಪಡೆದಂತಾಗುತ್ತದೆ.

ಜೈವಿಕ ಇಂಧನ ಯೋಜನೆಯ ಅನುಷ್ಠಾನದಿಂದಾಗುವ ಲಾಭಗಳು


  • ಎಣ್ಣೆಬೀಜಗಳ ಮಾರಾಟದಿಂದ ರೈತರಿಗೆ ನೇರ ಆರ್ಥಿಕ ಲಾಭ.
  • ಗೃಹ-ಪ್ರಮಾಣದ ಎಣ್ಣೆ-ಉತ್ಪಾದನಾ ಘಟಕದ ಬಳಕೆಯಿಂದ ರೈತರಿಗೆ ಹೆಚ್ಚುವರಿ ಆದಾಯ – ಮಾರಾಟಕ್ಕೆ ಯೋಗ್ಯವಾದ ಗುಣಮಟ್ಟದ ಎಣ್ಣೆ ಹಾಗೂ ಹಿಂಡಿಯ ಬಳಕೆಯಿಂದ ಮಣ್ಣಿನ ಫಲವತ್ತತೆಯಲ್ಲಿ ಹೆಚ್ಚಳ.
  • ಗ್ರಾಮೀಣ ಮಟ್ಟದಲ್ಲಿ ಜನರಿಗೆ ಉದ್ಯೋಗಾವಕಾಶಗಳ ನಿರ್ಮಾಣ.
  • ಗ್ರಾಮೀಣ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆ ಮಾಡಬಹುದು.
  • ಅರಣ್ಯ ವಿಸ್ತೀರ್ಣದ ಹೆಚ್ಚಳದಿಂದ ಸುಸ್ಥಿರ ಪರಿಸರದ ನಿರ್ಮಾಣವಾಗುವುದು.
  • ಹಳ್ಳಿಗಳಲ್ಲಿ ಜೈವಿಕ ಇಂಧನವನ್ನು ತಮ್ಮ ಟ್ರಾಕ್ಟರ್, ನೀರೆತ್ತುವ ಪಂಪುಗಳು, ಜನರೇಟರ್‌ಗಳಲ್ಲಿ ಬಳಸಬಹುದು.
  • ಮಣ್ಣು ಮತ್ತು ನೀರಿನ ಸಂರಕ್ಷಣೆಯಲ್ಲಿ ಗಣನೀಯವಾದ ಪಾತ್ರ ವಹಿಸುವುದು.
  • ವಾಯು ಮಾಲಿನ್ಯ, ಪರಿಸರ ಮಾಲಿನ್ಯ ಹಾಗೂ ವಾತಾವರಣದ ತಾಪಮಾನದಲ್ಲಿ ಇಳಿಮುಖ.
  • ಪೆಟ್ರೋಲಿಯಂ ಇಂಧನದ ಬಳಕೆಯಲ್ಲಿ ಉಳಿತಾಯ ಮತ್ತು ಆಮದು ಮಾಡಿಕೊಳ್ಳಲು ತಗಲುವ ವಿದೇಶಿ ವಿನಿಮಯದಲ್ಲಿ ಗಮನಾರ್ಹ ಉಳಿತಾಯ.
  • ಜೈವಿಕ ಇಂಧನದ ಮರಗಳನ್ನು ಬೆಳೆಯುವುದರಿಂದ ಮಣ್ಣಿನ ಸವಕಳಿಯನ್ನು ತಡೆಯಬಹುದು ಮತ್ತು ಮಣ್ಣಿ ತೇವಾಂಶ ಕಾಪಾಡುವುದರೊಂದಿಗೆ ಆ ಪ್ರದೇಶವನ್ನು ನಿತ್ಯ ಹಸಿರಾಗಿರಿಸಬಹುದು.

ಮೂಲ : ಕರ್ನಾಟಕ  ಜೈವಿಕ ಇಂಧನ ಅಭಿವೃದ್ಧಿ ಇಲಾಖೆ

ಕೊನೆಯ ಮಾರ್ಪಾಟು : 2/29/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate