ದ್ರವೀಕೃತ ಪೆಟ್ರೋಲಿಯಮ್ ಅನಿಲ (ಎಲ್ಪಿಜಿ) ಮತ್ತು ಅದರ ಉಪಯೋಗ
ಎಲ್ಪಿಜಿ ಎಂದರೇನು?
ದ್ರವೀಕೃತ ಪೆಟ್ರೋಲಿಯಮ್ ಅನಿಲ (ಎಲ್ಪಿಜಿ), ವಾತಾವರಣದ ಉಷ್ಣತೆ ಮತ್ತು ಒತ್ತಡದಲ್ಲಿ ಅನಿಲರೂಪದಲ್ಲಿ ಲಭ್ಯವಿರುವ ಹೈಡ್ರೋಕಾರ್ಬನ್ನುಗಳ ಮಿಶ್ರಣವಾಗಿದೆ. ಇದನ್ನು ಸುಲಭವಾಗಿ ದಾಸ್ತಾನು ಮತ್ತು ಸಾಗಣೆ ಮಾಡುವ ಉದ್ದೇಶದಿಂದ ಒತ್ತಡಪಾತ್ರೆ (ಪ್ರೆಶುರೈಸ್ಡ್ ವೆಸಲ್)ಗಳಲ್ಲಿ ಒತ್ತಡ ಹಾಯಿಸಿ ದ್ರವರೂಪಕ್ಕೆ ತರಲಾಗುತ್ತದೆ. ಇದನ್ನು ಕಚ್ಚಾ ತೈಲದ ಶುದ್ಧೀಕರಣ ಅಥವಾ ನೈಸರ್ಗಿಕ ಅನಿಲದ ವಿಭಜನೆಯಿಂದ ಪಡೆಯಬಹುದಾಗಿದೆ. ಎಲ್ಪಿಜಿಯಲ್ಲಿ ಬ್ಯೂಟೇನ್ ಮತ್ತು ಪ್ರೋಪೇನ್ ಹೈಡ್ರೋಕಾರ್ಬನ್ ಸಂರಚನೆಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಉಳಿದಂತೆ ಐಸೋ-ಬ್ಯೂಟೇನ್, ಬ್ಯುಟೈಲೀನ್, ಎನ್-ಬ್ಯೂಟೇನ್, ಪ್ರೊಪೈಲೀನ್ ಮೊದಲಾದವುಗಳು ಅತ್ಯಲ್ಪ ಪ್ರಮಾಣದಲ್ಲಿರುತ್ತವೆ.
ಎಲ್ಪಿಜಿಯ ಉಪಯೋಗಗಳೇನು?
ಎಲ್ಪಿಜಿಯು ಅತ್ಯಂತ ಸುರಕ್ಷಿತ, ಆರ್ಥಿಕ ಮತ್ತು ಪರಿಸರ ಸ್ನೇಹಿ ಹಾಗೂ ಆರೋಗ್ಯಕರ ಅಡುಗೆ ಅನಿಲಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿದೆ. ಮನೆಬಳಕೆಯ ಹೊರತಾಗಿ ಎಲ್ಪಿಜಿಯನ್ನು ಹಲವಾರು ಉತ್ಪಾದನಾ ಮತ್ತು ವಾಣಿಜ್ಯ ಘಟಕಗಳಲ್ಲಿಯೂ ಬಳಸಲಾಗುತ್ತದೆ.
ಮಾರುಕಟ್ಟೆಯಲ್ಲಿ ಎಲ್ಪಿಜಿ ಸಿಲೆಂಡರ್ಗಳು ಯಾವ ನಿರ್ದಿಷ್ಟ ಗಾತ್ರಗಳಲ್ಲಿ ದೊರೆಯುತ್ತವೆ?
ಗ್ರಾಮೀಣ ಪ್ರದೇಶಗಳು, ಗುಡ್ಡಗಾಡು ಮತ್ತು ಸಾಗಾಣಿಕೆಗೆ ಕಷ್ಟವೆನಿಸುವ ಪ್ರದೇಶಗಳಲ್ಲಿ ದೊರೆಯುವ ಸಿಲಿಂಡರ್ಗಳು ಸಾಮಾನ್ಯವಾಗಿ 5ಕಿ.ಗ್ರಾಂ. ತೂಕದ್ದಾಗಿರುತ್ತವೆ ಮತ್ತು ಮನೆಬಳಕೆಯ ಸಿಲಿಂಡರ್ಗಳು ಸಾಮಾನ್ಯವಾಗಿ 14.2ಕಿ.ಗ್ರಾಂ. ತೂಕದ್ದಾಗಿರುತ್ತವೆ. ವಾಣಿಜ್ಯ ಮತ್ತು ಉತ್ಪಾದನಾ ಕ್ಷೇತ್ರಗಳಿಗೆ 19 ಮತ್ತು 47.5 ಕಿ.ಗ್ರಾಂ. ತೂಕದ ಸಿಲಿಂಡರ್ಗಳು ಲಭ್ಯ. ಕೆಲವು ಖಾಸಗಿ ಸಂಸ್ಥೆಗಳು ಮನೆಬಳಕೆಗೆ 12ಕಿ.ಗ್ರಾಂ. ತೂಕದ ಸಿಲಿಂಡರ್ಗಳನ್ನು ಒದಗಿಸುತ್ತವೆ.
ಮನೆಬಳಕೆಯ ಸಿಲಿಂಡರ್ಗಳನ್ನು ವಾಹನ ಚಾಲನೆಗೆ ಅಥವಾ ಅದರಿಂದ ಚಲಾಯಿಸಬಹುದಾದ ಇನ್ನಿತರ ವಸ್ತುಗಳಲ್ಲಿ ಬಳಸಬಹುದೇ? ಮನೆಬಳಕೆಯಿಂದ ಹೊರತಾದ ಇತರ ಉದ್ದೇಶಗಳಿಗೆ ಬಳಸಬಹುದೇ?
ಇಲ್ಲ. ವಾಹನಗಳಿಗೆ ಮತ್ತು ಇತರ ಉದ್ದೇಶಗಳಿಗೆ ಎಲ್ಪಿಜಿ ಬಳಸುವುದನ್ನು ಎಲ್ಪಿಜಿ ನಿಯಂತ್ರಣ ಆದೇಶದ ಅನ್ವಯ ನಿಷೇಧಿಸಲಾಗಿದೆ.
ಭಾರತದಲ್ಲಿ ಮನೆಬಳಕೆಯ ಎಲ್ಪಿಜಿ ಮಾರುಕಟ್ಟೆಯಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳು ಯಾವುವು?
ಸಾರ್ವಜನಿಕ ವಲಯದಲ್ಲಿ ಪ್ರಮುಖವಾಗಿರುವ ಕೆಲವು ಸಂಸ್ಥೆಗಳೆಂದರೆ
ಖಾಸಗಿ ವಲಯದ ಸಂಸ್ಥೆಗಳಿಗೆ ಉದಾಹರಣೆ:
ಹೊಸತಾಗಿ ಎಲ್ಪಿಜಿ ಸಂಪರ್ಕ (ಕನೆಕ್ಷನ್) ಪಡೆಯಲು ಅನುಸರಿಸಬೇಕಾದ ಪ್ರಕ್ರಿಯೆಗಳೇನು?
- ಮನೆಬಳಕೆಗಾಗಿ ಸಂಪರ್ಕ ಪಡೆಯಲು ಮಾರುಕಟ್ಟೆಯಲ್ಲಿರುವ ಯಾವುದೇ ಡೊಮೆಸ್ಟಿಕ್ ಎಲ್ಪಿಜಿ ಡೀಲರ್ ಅನ್ನು ಭೇಟಿ ಮಾಡಿ. ನಿಮ್ಮ ಪ್ರದೇಶಕ್ಕೆ ಹತ್ತಿರ ಇರುವ ಡೀಲರ್ ಅನ್ನು ಪತ್ತೆ ಮಾಡಲು ಆಯಾ ಕಂಪೆನಿಯ ಅಂತರ್ಜಾಲ ತಾಣಗಳನ್ನು ವೀಕ್ಷಿಸಿ.
- ಹೊಸ ಸಂಪರ್ಕಕ್ಕೆ ಅರ್ಜಿ ಹಾಕುವಾಗ ಮನೆವಿಳಾಸದ ಅಧಿಕೃತತೆಗಾಗಿ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ. ಈ ಕೆಳಗಿನವುಗಳಲ್ಲಿ ಯಾವುದಾದರೊಂದು ದಾಖಲೆಯ ಪ್ರತಿಯನ್ನು ನೀವು ಸಲ್ಲಿಸಬೇಕಾಗುತ್ತದೆ:
- ಪಡಿತರ ಚೀಟಿ, ಎಲೆಕ್ಟ್ರಿಸಿಟಿ ಬಿಲ್, ಟೆಲಿಫೋನ್ ಬಿಲ್, ಪಾಸ್ಪೋರ್ಟ್, ಉದ್ಯೋಗ ಪ್ರಮಾಣಪತ್ರ, ಫ್ಲ್ಯಾಟ್ ಮಂಜೂರಾತಿ/ಒಡೆತನದ ಪತ್ರ, ಮನೆ ನೋಂದಣಿಯ ದಾಖಲೆಗಳು, ಎಲ್ಐಸಿ ಪಾಲಿಸಿ, ಮತದಾರರ ಗುರುತಿನ ಚೀಟಿ, ಬಾಡಿಗೆ ರಸೀತಿ, ಆದಾಯ ತೆರಿಗೆ ಇಲಾಖೆಯಿಂದ ಜಾರಿಗೊಳಿಸಿದ ಪ್ಯಾನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್. ಕೆಲವು ರಾಜ್ಯಗಳಲ್ಲಿ ಹೊಸ ಸಂಪರ್ಕ ಪಡೆಯಲು ಪಡಿತರ ಚೀಟಿ ಹೊಂದಿರಬೇಕಾದುದು ಕಡ್ಡಾಯ.
- ಸಿಲಿಂಡರ್ ಮತ್ತು ರೆಗ್ಯುಲೇಟರ್ಗಳಿಗಾಗಿ ಸುರಕ್ಷತಾ ಮೊತ್ತವನ್ನು ಮುಂಚಿತವಾಗಿ ನೀಡಬೇಕಾಗುವುದು. ಈ ಮೊತ್ತಕ್ಕೆ ಪ್ರತಿಯಾಗಿ ಚಂದಾದಾರಿಕೆಯ ವೋಚರ್ ಅನ್ನು ನೀಡಲಾಗುತ್ತದೆ. ಈ ವೋಚರ್ ಅನ್ನು ಜೋಪಾನವಾಗಿ ಕಾಯ್ದಿಡಬೇಕು. ಮುಂದೆ ಸಂಪರ್ಕ ವರ್ಗಾವಣೆ ಮಾಡಬೇಕಾದಲ್ಲಿ ಅಗತ್ಯ ಬೀಳುತ್ತದೆ
ಡೊಮೆಸ್ಟಿಕ್ (ಮನೆಬಳಕೆಯ) ಎಲ್ಪಿಜಿ ಸಂಪರ್ಕ ವರ್ಗಾವಣೆಯ ಪ್ರಕ್ರಿಯೆಗಳೇನು?
- ನಗರದ ವ್ಯಾಪ್ತಿಯಲ್ಲಿ ಅಥವಾ ನಗರಕ್ಕೆ ಹೊಂದಿಕೊಂಡಂತೆ ಇರುವ ಸ್ಥಳಕ್ಕೆ ವರ್ಗಾವಣೆ ಹಾಲಿ ವಿತರಕರು ನೀವು ಕೊಡಮಾಡುವ ಸಬ್ಸ್ಕ್ರಿಪ್ಶನ್ ವೋಚರ್ (SV)ನ, ಅಂದರೆ, ವಂತಿಗೆ ರಸೀತಿಯ ಆಧಾರದ ಮೇಲೆ ವರ್ಗಾವಣೆ ದಾಖಲೆಯನ್ನು ಜಾರಿ ಮಾಡುವರು. ವರ್ಗಾವಣೆ ದಾಖಲೆಯೊಂದಿಗೆ ವಂತಿಗೆ ರಸೀತಿಯನ್ನು (ಸಬ್ಸ್ಕ್ರಿಪ್ಶನ್ ವೋಚರ್) ಹೊಸ ವಿತರಕರಿಗೆ ಸಲ್ಲಿಸಬೇಕು. ಹೊಸ ವಿತರಕರು ಮೂಲ ವಂತಿಗೆ ರಸೀತಿಯನ್ನು ಮರಳಿಸಿ, ವರ್ಗಾವಣೆಯನ್ನು ಜಾರಿಮಾಡುವರು. ವರ್ಗಾವಣೆ ಮತ್ತು ವಂತಿಗೆ ರಸೀತಿಯ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಂಡಿರಬೇಕು. ಈ ಸಂದರ್ಭದಲ್ಲಿ ಯಾವುದೇ ಸಲಕರಣೆಯನ್ನು (ಸಿಲಿಂಡರ್+ ರೆಗ್ಯುಲೇಟರ್) ಒಪ್ಪಿಸುವ ಅಗತ್ಯ ಇರುವುದಿಲ್ಲ. ಅದನ್ನು ಗ್ರಾಹಕರು ತಾವು ವರ್ಗಾವಣೆಗೊಂಡ ನೂತನ ಸ್ಥಳಕ್ಕೆ ಕೊಂಡೊಯ್ಯಬಹುದು.
- ದೂರದ ಸ್ಥಳಕ್ಕೆ ಸಂಪರ್ಕ ವರ್ಗಾವಣೆ ಸಬ್ಸ್ಕ್ರಿಪ್ಶನ್ ವೋಚರ್ ಜೊತೆಗೆ ಕೋರಿಕೆ ಪತ್ರವನ್ನು ನೀಡಿದಲ್ಲಿ, ಹಾಲಿ ವಿತರಕರು ಟರ್ಮಿನೇಶನ್ವೋಚರ್(TV) ಅನ್ನು ಅಂದರೆ, ಸಮಾಪ್ತಿ ರಸೀತಿಯನ್ನು ಜಾರಿ ಮಾಡುವರು. ಗ್ರಾಹಕರಿಗೆ ವಂತಿಗೆ ರಸೀತಿಯಲ್ಲಿ ನಮೂದಿತವಾದ ಠೇವಣಿಯ (ಡಿಪಾಸಿಟ್) ಮೊತ್ತವನ್ನು ಮರುಪಾವತಿಸಲಾಗುವುದು. ಈ ಸಂದರ್ಭದಲ್ಲಿ ಎಲ್ಲ ಸಲಕರಣೆಗಳನ್ನು (ಸಿಲಿಂಡರ್ ಮತ್ತು ರೆಗ್ಯುಲೇಟರ್) ಹಿಂದಿರುಗಿಸಬೇಕಾಗುವುದು. ಸಮಾಪ್ತಿ ರಸೀತಿಯಲ್ಲಿ ನಮೂದಿತವಾದ ಹಿಂದಿನ ಠೇವಣಿಯ (ಡಿಪಾಸಿಟ್) ಮೊತ್ತವನ್ನೇ ಹೊಸ ಸ್ಥಳದಲ್ಲಿಯೂ ಪಾವತಿಸಿ ಪುನಃ ಸಂಪರ್ಕವನ್ನು ಪಡೆಯಬಹುದು. ಆದರೆ ಈಗ ಹೊಸ ವಂತಿಗೆ ರಸೀತಿ ಯನ್ನು ಪಡೆದು ಜೋಪಾನವಾಗಿ ಇಟ್ಟುಕೊಳ್ಳುವುದನ್ನು ದಯವಿಟ್ಟು ಮರೆಯಬೇಡಿ.
ಎಲ್ಪಿಜಿ ಸಂಪರ್ಕ ನೀಡುವ ಸಂದರ್ಭದಲ್ಲಿ ಅಗತ್ಯವಾಗಿ ನೆನಪಿಟ್ಟುಕೊಳ್ಳಬೇಕಾದ ಅಂಶಗಳು ಯಾವುವು?
ಎಲ್ಲಕ್ಕಿಂತ ಮೊದಲು ಯಾವ ಸ್ಥಳದಲ್ಲಿ ಗ್ಯಾಸ್ ಅನ್ನು ಇರಿಸಲಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಕೆಳಗೆ ನೀಡಲಾಗಿರುವ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ, ಅದುವೇ ಅಡುಗೆಮನೆಯಲ್ಲಿ ಸಂಭವಿಸಬಹುದಾದ ಅವಘಡಗಳಿಗೆ ನೀವು ಒದಗಿಸುವ ಸುರಕ್ಷತೆಯಾಗಿ ಪರಿಣಮಿಸುತ್ತದೆ. ಎಲ್ಪಿಜಿಯನ್ನು ಬಳಸಲಿರುವ ಕೋಣೆ/ ಅಡುಗೆಮನೆಯಲ್ಲಿ ಗವಾಕ್ಷಿಗಳ ವ್ಯವಸ್ಥೆ ಅಗತ್ಯವಾಗಿ ಇರಲೇಬೇಕು. ಕಿಟಕಿ, ಬಾಗಿಲುಗಳನ್ನು ಸದಾ ಮುಚ್ಚಿಯೇ ಇರುವ ಕೋಣೆಗಳಲ್ಲಿ ಎಲ್ಪಿಜಿ ಬಳಸಬಾರದು. ಅನುಕೂಲಕರ ಜಾಗದಲ್ಲಿಯೇ ಒಲೆ ಮತ್ತು ಸಿಲಿಂಡರನ್ನು ಜೋಡಿಸಬೇಕು. ಸಿಲಿಂಡರ್, ರೆಗ್ಯುಲೇಟರ್, ರಬ್ಬರ್ ಟ್ಯೂಬ್- ಇವೆಲ್ಲವೂ ಸುಲಭವಾಗಿ ಕೈಗೆಟುಕುವಂತಿರಬೇಕು ಸಿಲಿಂಡರ್ಗಳನ್ನು ನೆಲದ ಮಟ್ಟದಲ್ಲಿಯೇ ಇರಿಸಬೇಕು. ಯಾವ ಕಾರಣಕ್ಕೂ ನೆಲಕ್ಕಿಂತ ಕೆಳಮಟ್ಟದಲ್ಲಾಗಲೀ, ಕಪಾಟಿ (ಗೂಡು)ನಲ್ಲಾಗಲೀ, ಅಡಿಪಾಯದ ಮಟ್ಟವೇ ಮೊದಲಾದ ಕಡೆಗಳಲ್ಲಾಗಲೀ ಇರಿಸಲೇಕೂಡದು. ಸಿಲಿಂಡರ್ಗಳನ್ನು ಗೂಡಿನಲ್ಲಿ (ಕಪ್ಬೋರ್ಡ್) ಇರಿಸುವುದೇ ಆದರೆ, ಅದರ ಎರಡೂ ಕಡೆಗಳಲ್ಲಿ- ನೆಲದ ಮಟ್ಟದಲ್ಲಿ ಮತ್ತು ಮೇಲ್ಭಾಗದಲ್ಲಿ ಗವಾಕ್ಷಿಗಳ ವ್ಯವಸ್ಥೆ ಮಾಡಬೇಕು. ಅರ್ಧದಷ್ಟಾದರೂ ಅಂತರ ಇರುವಂತೆ ನೋಡಿಕೊಳ್ಳಬೇಕು. ಒಲೆಯನ್ನು ನೆಲದ ಮೇಲೆ ಜೋಡಿಸಬೇಡಿ. ಒಲೆ ಯಾವಾಗಲೂ ಮೇಜಿನ ಮೇಲೆ ಇಲ್ಲವೇ ಕಟ್ಟೆಯ ಮೇಲೆ ಇರಿಸಲ್ಪಡಬೇಕು. ನಿಂತುಕೊಂಡು ಅಡುಗೆ ಮಾಡಲು ಅನುಕೂಲಕರವಾಗಿರಬೇಕು. ಮರದ ಮೇಜಿನ ಮೇಲೆ ಒಲೆ ಇರಿಸಬೇಡಿ. ಅನಿವಾರ್ಯವಾದಲ್ಲಿ, ಮೇಜಿನ ಮೇಲೆ ಕಲ್ನಾರಿನ (ಅಸ್ಬೆಸ್ಟಸ್) ಶೀಟ್ ಅನ್ನು ಹೊದೆಸಿ, ಅನಂತರ ಅದರ ಮೇಲೆ ಒಲೆ ಇರಿಸಿ. ಒಲೆಯನ್ನು ನೇರವಾಗಿ ಕಿಟಕಿಯ ಎದುರು ಇರಿಸಬೇಡಿ. ಬಲವಾದ ಗಾಳಿ ಬೀಸಿ ಒಲೆಯ ಉರಿ ಆರಿಹೋಗಬಹುದು. ಇದರಿಂದ ಕೋಣೆಯೊಳಗೆ ಎಲ್ಪಿಜಿ ದಟ್ಟಣೆಗೊಳ್ಳುವ ಅಪಾಯವಿರುತ್ತದೆ ಒಲೆಯನ್ನು ಮೇಜು ಅಥವಾ ಕಟ್ಟೆಯ ಮೇಲೆ, ಅದರ ಒಂದು ಬದಿ ಗೋಡೆಗೆ ತಗಲುವಂತೆ ಇರಿಸಬೇಕು. ಒಲೆಯ ಹಿಂಭಾಗವು ಗೋಡೆಗೆ ತಾಕಿಕೊಂಡಂತೆ ಇರಬೇಕು. ಗೋಡೆಯ ಈ ಭಾಗದಲ್ಲಿ ಯಾವುದೇ ಶೆಲ್ಫ್ ಅಥವಾ ಸ್ಟ್ಯಾಂಡ್ಗಳು ಇರಬಾರದು. ಆಕಸ್ಮಿಕವಾಗಿ ಒಲೆಯ ಬೆಂಕಿಯು ಗೋಡೆಗೆ ತಗುಲಿದರೆ, ಆ ಗೋಡೆಯ ಮೇಲಿನ ವಸ್ತುಗಳಿಗೆ ಬೆಂಕಿ ಹಿಡಿದು ಹಬ್ಬುವ ಅಪಾಯಗಳಿರುತ್ತವೆ. ಒಂದು ಕೋಣೆಯಲ್ಲಿ ಎರಡಕ್ಕಿಂತ ಹೆಚ್ಚು ಸಿಲಿಂಡರ್ಗಳನ್ನು ಇರಿಸಬಾರದು. ಎರಡು ಸಿಲಿಂಡರ್ಗಳನ್ನು ಇರಿಸಲು ಕೂಡ ಕೋಣೆಯು ಕನಿಷ್ಠ 10 ಚದರ ಅಡಿಯಷ್ಟು ಸ್ಥಳವನ್ನು ಹೊಂದಿರುವುದು ಅಗತ್ಯ. ಯಾವಾಗಲೂ ಸಿಲಿಂಡರ್ ಅನ್ನು ನೇರವಾಗಿ, ಅದರ ಮುಚ್ಚಳವು ಮೇಲ್ಭಾಗದಲ್ಲಿ ಬರುವಂತೆ ಇರಿಸಬೇಕು. ಸಿಲಿಂಡರ್ ಅನ್ನು ಬೇರೆ ಯಾವುದೇ ಭಂಗಿಯಲ್ಲಿ ಇಟ್ಟರೆ, ದ್ರವರೂಪಿ ಎಲ್ಪಿಜಿಯು ಮುಚ್ಚಲದ ಮೂಲಕ ಹೊರನುಗ್ಗಿ ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸುವ ಸಾಧ್ಯತೆಗಳಿವೆ. ಎಲೆಕ್ಟ್ರಿಕ್ ಓವನ್, ಸೀಮೆಎಣ್ಣೆ ಒಲೆ (ಸ್ಟವ್) ಮೊದಲಾದ ಶಾಖೋತ್ಪಾದಕ ವಸ್ತುಗಳನ್ನು ಗ್ಯಾಸ್ ಸಲಕರಣೆಗಳಿಂದ ಒಂದು ಮೀಟರ್ ಅಂತರದ ಒಳಗೆ ಇರಿಸಕೂಡದು. ಸಿಲಿಂಡರ್ ಅನ್ನು ಬಿಸಿಲು, ಮಳೆ, ಧೂಳು ಮತ್ತು ಶಾಖಗಳಿಗೆ ತೆರೆದಿಡಬೇಡಿ. ಸಿಲಿಂಡರ್ ಮೇಲೆ ಯಾವುದೇ ಪಾತ್ರೆ, ಬಟ್ಟೆಗಳನ್ನು ಇರಿಸಬೇಡಿ. ಯಾವಾಗಲೂ ಭದ್ರತಾ (ಸೆಕ್ಯುರಿಟಿ/ಸೇಫ್ಟಿ) ಮುಚ್ಚಳವನ್ನು ಸಿಲಿಂಡರ್ನ ಬಾಯಿಗೆ ಹೊಂದಿಕೊಂಡಂತೆ ಕಟ್ಟಿಯೇ ಇಡಿ. ಅನಿಲ ಸೋರಿಕೆಯಾಗುವ ಸಂದರ್ಭದಲ್ಲಿ ಈ ಮುಚ್ಚಳವನ್ನು ಸಿಲಿಂಡರ್ನ ಬಾಯಿಗೆ ಗಟ್ಟಿಯಾಗಿ ಮುಚ್ಚಿ, ಮುಂದಿನ ಅಪಾಯವನ್ನು ತಡೆಗಟ್ಟಬಹುದು. ಖಾಲಿ ಅಥವಾ ಭರ್ತಿ ಸಿಲಿಂಡರ್ಗಳನ್ನು ಮುಚ್ಚಲ ಹಾಕದೆ ಇರಿಸಬೇಡಿ. ಪ್ರೆಶರ್ ರೆಗ್ಯುಲೇಟರ್ ಅನ್ನು ಬಳಸುವ ಸಂದರ್ಭದಲ್ಲಿ, ಅದರ ಮೇಲ್ಭಾಗದ ಸಂಕೇತ ತಟ್ಟೆಯಲ್ಲಿ ನೀಡಲಾಗಿರುವ ನಿರ್ದೇಶನಗಳನ್ನು ತಪ್ಪದೆ ಅನುಸರಿಸಿ.
ಎಲ್ಪಿಜಿ ಸಿಲಿಂಡರ್ ಬಳಸುವಾಗ ಅನುಸರಿಸಬೇಕಾದ ಸಾಮಾನ್ಯ ಅಂಶಗಳು ಯಾವುವು?
- ಖಾಲಿ ಸಿಲಿಂಡರ್ ಅನ್ನು ಬೇರ್ಪಡಿಸುವಾಗ ಅಡುಗೆಕೋಣೆ ಮತ್ತು ಅದಕ್ಕೆ ಹೊಂದಿಕೊಂಡ ಕೋಣೆಯಲ್ಲಿನ ಊದುಬತ್ತಿ, ಮೇಣದ ಬತ್ತಿ (ಕ್ಯಾಂಡಲ್), ದೀಪಗಳೆಲ್ಲವನ್ನೂ ಆರಿಸಿಕೊಳ್ಳಿ. ಒಲೆಯ ಮೇಲಿನ ಎಲ್ಲ ಬಿರಡೆಗಳನ್ನೂ ಆರಿಸಿ. ರೆಗ್ಯುಲೇಟರಿನ ಬಿರಡೆಯನ್ನು ‘ಆನ್’ ದಿಕ್ಕಿನಿಂದ ‘ಆಫ್’ ದಿಕ್ಕಿಗೆ ತಿರುಗಿಸಿ. ರೆಗ್ಯುಲೇಟರ್ ಅನ್ನು ಗಟ್ಟಿಯಾಗಿ ಹಿಡಿದು ಬುಶ್ (ಲಾಕ್ ಮಾಡುವ ಕಪ್ಪು ಬಣ್ಣದ ಪ್ಲ್ಯಾಸ್ಟಿಕ್ ರಿಂಗ್) ಅನ್ನು ಮೇಲಕ್ಕೆಳೆಯಿರಿ ಮತ್ತು ಹಗುರಾಗಿ ಒತ್ತಿ ತಿರುಗಿಸಿ ರೆಗ್ಯುಲೇಟರ್ ಅನ್ನು ಎತ್ತಿ ಹಿಡಿಯಿರಿ. ಈಗ ರೆಗ್ಯುಲೇಟರ್ ಸಿಲಿಂಡರಿನ ಬಾಯಿಯಿಂದ ಬೇರ್ಪಡುತ್ತದೆ. ಸಿಲಿಂಡರಿನ ಬಾಯಿಗೆ ಸುರಕ್ಷತಾ ಮುಚ್ಚಳವನ್ನು ಮುಚ್ಚಿ. ಅದನ್ನು ಗಟ್ಟಿಯಾಗಿ ಕೆಳಮುಖವಾಗಿ ಒತ್ತಿ. ‘ಕ್ಲಿಕ್’ ಶಬ್ದ ಸ್ಪಷ್ಟವಾಗಿ ಕೇಳುವಂತೆ ಅಮುಕಿರಿ. ಈಗ ಖಾಲಿ ಸಿಲಿಂಡರ್ ಅನ್ನು ಪ್ರತ್ಯೇಕವಾಗಿ ತೆಗೆದಿರಿಸಬಹುದು.
- ಭರ್ತಿ ಸಿಲಿಂಡರ್ ಅನ್ನು ಸೇರಿಸುವುದು ಸುರಕ್ಷತಾ ಮುಚ್ಚಳವನ್ನು ತೆಗೆಯಲು, ಅದನ್ನು ಕೆಳಮುಖವಾಗಿ ಒತ್ತಿ, ದಾರವನ್ನು ಎಳೆಯಿರಿ. ಅದನ್ನು ಎಳೆಯುತ್ತಲೇ ಸಿಲಿಂಡರಿನ ಬಾಯಿಯಿಂದ ಮುಚ್ಚಳವನ್ನು ಮೇಲಕ್ಕೆತ್ತಿ. ಸಿಲಿಂಡರ್ ಬಾಯಿಯ ಒಳಗೆ ಸೀಲಿಂಗ್ ರಿಂಗ್ ಇದೆಯೇ ಎನ್ನುವುದನ್ನು ಕಿರುಬೆರಳು ತೂರಿಸಿ ಖಾತ್ರಿಪಡಿಸಿಕೊಳ್ಳಿ. ಸೀಲಿಂಗ್ ರಿಂಗ್ ಕಂಡುಬರದಿದ್ದರೆ ಆ ಸಿಲಿಂಡರ್ ಅನ್ನು ಬಳಸಬೇಡಿ. ಸುರಕ್ಷತಾ ಮುಚ್ಚಳವನ್ನು ಹಾಗೆಯೇ ಮುಚ್ಚಿ, ಬೇರೆ ಸಿಲಿಂಡರ್ ಪಡೆಯಲು ನಿಮ್ಮ ವಿತರಕರನ್ನು ಸಂಪರ್ಕಿಸಿ.
- ಭರ್ತಿ ಸಿಲಿಂಡರ್ ಮೇಲೆ ರೆಗ್ಯುಲೇಟರ್ ಅನ್ನು ಕೂಡಿಸಲು ಕೆಳಗಿನ ಮಾರ್ಗಗಳನ್ನು ಅನುಸರಿಸಿ : ರೆಗ್ಯುಲೇಟರ್ನ ಬಿರಡೆ ‘ಆಫ್’ ದಿಕ್ಕಿನಲ್ಲಿ ಇದೆಯೇ ಎಂದು ಖಾತ್ರಿಪಡಿಸಿಕೊಳ್ಳಿ ರೆಗ್ಯುಲೇಟರ್ ಅನ್ನು ಗಟ್ಟಿಯಾಗಿ ಹಿಡಿದು ಪ್ಲಾಸ್ಟಿಕ್ ಬುಶ್ ಅನ್ನು ಮೇಲಕ್ಕೆಳೆಯಿರಿ. ಸಿಲಿಂಡರ್ ಬಾಯಿಯ ಮೇಲೆ ರೆಗ್ಯುಲೇಟರ್ ಅನ್ನು ನೇರವಾಗಿ ಇಡಿರಿ. ಅದನ್ನು ಕೆಳಮುಖವಾಗಿ, ಸಿಲಿಂಡರಿನ ಬಾಯಿಯ ಷಟ್ಕೋನದ ಅಂಚನ್ನು ಸೇರುವವರೆಗೂ ಹಗುರವಾದ ತಿರುಗಿಸುತ್ತ ಒತ್ತಿರಿ. ಕಪ್ಪು ಪ್ಲಾಸ್ಟಿಕ್ ಬುಶ್ ಅನ್ನು ಬಿಟ್ಟು, ಅದನ್ನು ಕೆಳಮುಖವಾಗಿ ಒತ್ತಿರಿ. (ನೀವೀಗ ‘ಕ್ಲಿಕ್’ ಶಬ್ದವನ್ನು ಕೇಳುವಿರಿ) ಈಗ ಪ್ರೆಶರ್ ರೆಗ್ಯುಲೇಟರ್ ಸಿಲಿಂಡರಿನ ಜೊತೆ ಸೇರಿಕೊಂಡಿತು.
- ಬರ್ನರ್ ಹೊತ್ತಿಸುವುದು ಒಲೆಯ ಬಿರಡೆಯು ‘ಆನ್’ ಸ್ಥಿತಿಯಲ್ಲಿದ್ದರೆ ಗಡಿಯಾರದ ವಿರುದ್ಧ ದಿಕ್ಕಿನಲ್ಲಿ ತಿರುಗಿಸಿ. ಹೊತ್ತಿಸಿದ ಬೆಂಕಿಕಡ್ಡಿಯನ್ನು ಒಲೆಯ ಬರ್ನರ್ ಬಳಿ ಹಿಡಿದು ಬಿರಡೆಯನ್ನು ‘ಆನ್’ ಸ್ಥಿತಿಗೆ ತಿರುಗಿಸಿ.
- ಇತರೆ ಅಡುಗೆ ಮಾಡುವಾಗ ನೈಲಾನ್ ಅಥವಾ ಆ ಬಗೆಯ ಬಟ್ಟೆಗಳನ್ನು ಧರಿಸಬೇಡಿ. ಬಳಕೆಯಲ್ಲಿರುವಾಗ ಅಡುಗೆ ಇಂಧನ ಸಲಕರಣೆಗಳ ಮೇಲೆ ಗಮನವಿಡದೆ ಇರಬೇಡಿ. ಯಾವ ಕಾರಣಕ್ಕೂ ನೀವೇ ಆಗಲೀ, ಪೊಳ್ಳು ಮೆಕ್ಯಾನಿಕ್ಗಳ ಮೂಲಕವಾಗಲೀ, ಗ್ಯಾಸ್ ಸಲಕರಣೆಗಳನ್ನು ರಿಪೇರಿ ಮಾಡುವ, ಪರೀಕ್ಷಿಸುವ ಅಥವಾ ಹೊಂದಿಸುವ ಕೆಲಸಕ್ಕೆ ಕೈಹಾಕಬೇಡಿ. ರಾತ್ರಿಯ ವೇಳೆ, ಅಡುಗೆ ಕಾರ್ಯಗಳೆಲ್ಲ ಮುಗಿದ ನಂತರ ರೆಗ್ಯುಲೇಟರ್ ಅನ್ನು ಎಂದಿಗೂ ‘ಆನ್’ ಸ್ಥಿತಿಯಲ್ಲಿಡಬೇಡಿ. ಒಲೆ ಹೊತ್ತಿಸುವ ಮುನ್ನ ಅಡುಗೆ ಅನಿಲ ಸೋರುತ್ತಿದೆಯೇ ಎಂದು ವಾಸನೆ ಮೂಲಕ ಗ್ರಹಿಸಿ ಪರೀಕ್ಷಿಸಿಕೊಳ್ಳಿ. ಇಲಿ, ಜಿರಳೆ ಮೊದಲಾದವುಗಳು ಬರಲಾರದಂತೆ ಎಷ್ಟು ಸಾಧ್ಯವೋ ಅಷ್ಟು ಅಡುಗೆಮನೆಯನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿ.
ಗ್ರಾಹಕರು ಅನುಸರಿಸಬೇಕಾದ ಸಾಮಾನ್ಯ ಸುರಕ್ಷತಾ ಕ್ರಮಗಳು ಯಾವುವು?
- ರಬ್ಬರ್ ಟ್ಯೂಬ್ ಹಾಗೂ ಪ್ರೆಶರ್ ರೆಗ್ಯುಲೇಟರ್ ಕುರಿತಂತೆ ನೆನಪಿನಲ್ಲಿಡಬೇಕಾದ ವಿಷಯಗಳು ಅಗತ್ಯವಾಗಿ ಇವುಗಳು ಪ್ರಮಾಣೀಕೃತ ಗುಣಮಟ್ಟದ್ದಾಗಿರಬೇಕು (ಐಎಸ್ಐ/ ಬಿಐಎಸ್ ಮುದ್ರೆ ಹೊಂದಿರಬೇಕು). ಬಿಐಎಸ್ ಪ್ರಮಾಣ ಮುದ್ರೆ ಹೊಂದಿದ ರಬ್ಬರ್ ಟ್ಯೂಬ್ ಮತ್ತು ಎಲ್ಪಿಜಿ ರೆಗ್ಯುಲೇಟರ್ಗಹಳನ್ನು ಅಧಿಕೃತ ವಿತರಕರಿಂದಲೇ ಪಡೆಯಬೇಕು. ಟ್ಯೂಬ್ ಸಾಧ್ಯವಾದಷ್ಟೂ ಚಿಕ್ಕದಾಗಿರಬೇಕು. ಇದರ ಗರಿಷ್ಠ ಉದ್ದ 1.5ಮೀಟರ್ನಷ್ಟು ಇರಬೇಕು ನಿಮ್ಮ ಸಲಕರಣೆಗಳ ನಳಿಕೆ ಮತ್ತು ರೆಗ್ಯುಲೇಟರ್ ಹಾಗೂ ರಬ್ಬರ್ ಟ್ಯೂಬ್ಗಳ ತುದಿಗಳು ಸಮಾನ ಅಂಚುಗಳನ್ನು ಹೊಂದಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಈ ಬಗ್ಗೆ ನಿಮ್ಮ ವಿತರಕರು ನಿಮಗೆ ಸಲಹೆ ನೀಡುವರು. ಇವುಗಳನ್ನು ತಪಾಸಣೆಗೆ ಅನುಕೂಲವಾಗುವಂತೆ ಇರಿಸಬೇಕು ಬೆಂಕಿ ಮತ್ತು ಶಾಖಗಳು ತಗುಲದಂತೆ ದೂರದಲ್ಲಿ ಇರಿಸಬೇಕು. ರಬ್ಬರ್ ಟ್ಯೂಬನ್ನು ಒಲೆಯ ಸಂಪೂರ್ಣ ಮೂತಿ ಮತ್ತು ರೆಗ್ಯುಲೇಟರ್ಗಳು ಮುಚ್ಚುವಂತೆ ಜೋಡಿಸಬೇಕು. ಒಲೆಯ ಬರ್ನರ್ನಿಂದಾಗಿ ಅದು ಬಿಸಿಯಾಗಿದೆಯೇ ಎನ್ನುವುದನ್ನು ಪರೀಕ್ಷಿಸುತ್ತಿರಬೇಕು. ಮತ್ತು ಟ್ಯೂಬ್ ಎಲ್ಲಾದರೂ ತಿರುಚಿಕೊಂಡಿದೆಯೇ ಅಥವಾ ಮಡಚಿಕೊಂಡಿದೆಯೇ ಎಂದು ಗಮನಿಸುತ್ತಿರಬೇಕು. ಅದನ್ನು ಶುಚಿಗೊಳಿಸಲು ಒದ್ದೆಬಟ್ಟೆಯನ್ನು ಮಾತ್ರ ಬಳಸಬೇಕು. ಮೂತಿಯೊಳಗೆ ಟ್ಯೂಬನ್ನು ಸುಲಭವಾಗಿ ಜಾರಿಸಿ ತೂರಿಸಲು ಸೋಪನ್ನು ಬಳಸಬಾರದು. ವಿಶೇಷವಾಗಿ ಟ್ಯೂಬಿನ ತುದಿಗಳಲ್ಲಿ ಏನಾದರೂ ಬಿರುಕು, ತೂತು, ಪೆಡಸು, ಸವೆತಗಳಾಗಿವೆಯೇ ಎಂದು ನಿಯಮಿತವಾಗಿ ಪರೀಕ್ಷಿಸುತ್ತಿರಬೇಕು. ಮುಂಚಿತವಾಗಿ ಸಾಧ್ಯವಾಗದೆ ಹೋದರೆ, ಕೊನೆಯ ಪಕ್ಷ 2 ವರ್ಷಗಳಿಗೆ ಒಮ್ಮೆಯಾದರೂ ಟ್ಯೂಬನ್ನು ಬದಲಿಸಬೇಕು. ರಬ್ಬರ್ ಟ್ಯೂಬಿನ ಮೇಲೆ ಬೇರೆ ಯಾವುದೇ ವಸ್ತುವಿನ ಹೊದಿಕೆ ಹಾಕಬಾರದು
- ಗ್ಯಾಸ್ ಸಿಲಿಂಡರನ್ನು ಪಡೆಯುವಾಗ ನೆನಪಿಡಬೇಕಾದ ಅಂಶಗಳು ನಿಮಗೆ ಬಟವಾಡೆಯಾದ ಸಿಲಿಂಡರಿನ ಮೇಲೆ ಕಂಪೆನಿಯ ಮುದ್ರೆ ಮತ್ತು ಸುರಕ್ಷಾ ಮುಚ್ಚಳಗಳಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ. ಅದರ ಬಳಕೆಯ ಬಗ್ಗೆ ನಿಮಗೆ ಅರಿವು ಇಲ್ಲವಾದಲ್ಲಿ, ಬಟವಾಡೆ ಮಾಡಿದ ವ್ಯಕ್ತಿಯ ಬಳಿ ಪ್ರಾಯೋಗಿಕವಾಗಿ ತೋರಿಸುವಂತೆ ಕೇಳಿ ತಿಳಿದುಕೊಳ್ಳಿ. ಸಿಲಿಂಡರ್ ಅನ್ನು ನೆಲದ ಮಟ್ಟಕ್ಕೆ, ಸಮತಟ್ಟಾದ ಜಾಗದಲ್ಲಿಯೇ ಇರಿಸಬೇಕು.
- ಗ್ಯಾಸ್ ಸಿಲಿಂಡರ್ ಅನ್ನು ಉಪಯೋಗಿಸುವ ಮುನ್ನ ನೆನಪಿನಲ್ಲಿ ಇರಿಸಿಕೊಳ್ಳಬೇಕಾದ ಅಂಶಗಳು ಸಿಲಿಂಡರ್ನ ಕವಾಟದ ಒಳಗೆ ರಬ್ಬರ್ 'o' ರಿಂಗ್ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ. ನೋಟ, ವಾಸನೆ ಅಥವಾ ಸೋಪ್ ದ್ರಾವಣದ (ಸಲ್ಯೂಶನ್) ಮೂಲಕ ಸೋರುವಿಕೆಯ ಲಕ್ಷಣಗಳೇನಾದರೂ ಕಂಡುಬರುತ್ತಿದೆಯೇ ಪರಿಶೀಲಿಸಿ. ಬೆಂಕಿಕಡ್ಡಿಯನ್ನು ಗೀರಿ ಸೋರುವಿಕೆಯನ್ನು ಪರೀಕ್ಷಿಸುವ ಕೆಲಸವನ್ನು ಖಂಡಿತಾ ಮಾಡಬೇಡಿ. ಯಾವಾಗಲೂ ಸಿಲಿಂಡರನ್ನು ನೇರವಾಗಿ, ಮೇಲ್ಮುಖವಾಗಿ, ಚೆನ್ನಾಗಿ ಗಾಳಿ ಬೆಳಕು ಇರುವ, ಸಮತಟ್ಟಾದ ಪ್ರದೇಶದಲ್ಲಿ ಇರಿಸಿ. ಎಲ್ಪಿಜಿ ಸಿಲಿಂಡರ್ ಅನ್ನು ಮುಚ್ಚಿದ ಗೂಡಿನೊಳಗೆ ಇಡಬೇಡಿ. ಎಲ್ಪಿಲಜಿ ಒಲೆಯನ್ನು ಯಾವಾಗಲೂ ಸಿಲಿಂಡರ್ಗಿಂತ ಮೇಲಿರುವ ಅಡುಗೆಕಟ್ಟೆಯ ಮೇಲೆಯೇ ಇರಿಸಬೇಕು. ಸಿಲಿಂಡರ್ ಅನ್ನು ಶಾಖ ಹೊಮ್ಮಿಸುವ ಇತರ ವಸ್ತುಗಳಿಂದ ದೂರದಲ್ಲಿಯೇ ಇಡಬೇಕು.
- ಗ್ಯಾಸ್ ಸಿಲಿಂಡರಿನ ಬಳಕೆಯ ಅನಂತರ ನೆನಪಿನಲ್ಲಿಡಬೇಕಾದ ಅಂಶಗಳು ಸಿಲಿಂಡರ್ ಅನ್ನು ಬಳಸದೆ ಇರುವಾಗ ರೆಗ್ಯುಲೇಟರ್ ಬಿರಡೆಯನ್ನು 'ಆಫ್' ಸ್ಥಿತಿಯಲ್ಲಿಡಿ. ಖಾಲಿ ಸಿಲಿಂಡರ್ಗಳನ್ನು ತಣ್ಣನೆಯ, ಚೆನ್ನಾಗಿ ಗಾಳಿಯಾಡುವ ಜಾಗದಲ್ಲಿ, ಸುರಕ್ಷಾ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ ಇರಿಸಬೇಕು.
ಅಡುಗೆ ಅನಿಲದ ವಾಸನೆ ಬಂದಲ್ಲಿ ಏನು ಮಾಡಬೇಕು?
ಅನಿಲ ರೂಪದಲ್ಲಿ ಎಲ್ಪಿಜಿ ಬಣ್ಣ ಹಾಗೂ ವಾಸನಾರಹಿತವಾಗಿ ಇರುತ್ತದೆ. ಆದ್ದರಿಂದ ಸೋರುವಿಕೆಯನ್ನು ಪತ್ತೆಹಚ್ಚಲು ಅನುಕೂಲವಾಗಲೆಂಬ ಉದ್ದೇಶದಿಂದ ವಿಶೇಷ ವಾಸನೆಯನ್ನು ಅದಕ್ಕೆ ಸೇರಿಸಲಾಗಿರುತ್ತದೆ. 1/5 ರಷ್ಟು ಕಡಿಮೆ ಸ್ಫೋಟದ ಮಿತಿಯಲ್ಲಿ ಸಾಂದ್ರೀಕರಣಗೊಂಡ ಇದರ ವಾಸನೆಯನ್ನು ಗಾಳಿಯಲ್ಲಿ ಪತ್ತೆಹಚ್ಚಬಹುದು. ಅನಿಲದ ವಾಸನೆ ಅನುಭವಕ್ಕೆ ಬಂದಲ್ಲಿ, ಗಾಬರಿಯಾಗಬೇಡಿ. ವಿದ್ಯುತ್ ಸಲಕರಣೆಗಳನ್ನು ಹೊತ್ತಿಸಬೇಡಿ. ಹೊರಭಾಗದಿಂದಲೇ ವಿದ್ಯುತ್ ಪೂರೈಕೆಯ ಮುಖ್ಯ ಸ್ವಿಚ್ ಅನ್ನು ನಿಷ್ಕ್ರಿಯಗೊಳಿಸಿ. ಒಲೆಯ ಬಿರಡೆಗಳು 'ಆಫ್' ಸ್ಥಿತಿಯಲ್ಲಿವೆಯೇ ಎಂದು ಪರಿಶೀಲಿಸಿ. ಎಲ್ಪಿಜಿಯ ಸೋರಿಕೆಯನ್ನು ಪತ್ತೆ ಮಾಡಲೂ ಕೂಡ ಬೆಂಕಿ ಕಡ್ಡಿಯನ್ನು ಗೀರಬೇಡಿ. ಹೊತ್ತಿಸಿಟ್ಟ ಊದುಬತ್ತಿ, ದೀಪ ಮೊದಲಾದ ಎಲ್ಲ ಬಗೆಯ ಬೆಂಕಿಯನ್ನೂ ಆರಿಸಿಬಿಡಿ. ಪ್ರೆಶರ್ ರೆಗ್ಯುಲೇಟರ್ ಅನ್ನು, ಬಿರಡೆಯನ್ನು ಗಡಿಯಾರದ ದಿಕ್ಕಿನಲ್ಲಿ ತಿರುಗಿಸಿ 'ಆಫ್' ಸ್ಥಿತಿಗೆ ತರುವ ಮೂಲಕ ಬಂದ್ ಮಾಡಿ. ಎಲ್ಲ ಕಿಟಕಿ ಬಾಗಿಲುಗಳನ್ನು ತೆರೆಯಿರಿ, ವಾಸನೆ ದಟ್ಟವಾಗತೊಡಗಿದರೆ, ಕಛೇರಿ ವೇಳೆಯಲ್ಲಿ ನಿಮ್ಮ ಅನಿಲ ವಿತರಕರಿಗೆ ಕರೆಮಾಡಿ ಸಹಾಯ ಪಡೆಯಿರಿ. ಕಛೇರಿಯ ಸಮಯದ ನಂತರ ಮತ್ತು ರಜಾ ದಿನಗಳಲ್ಲಿ ಅಗತ್ಯ ಉಂಟಾದಾಗ ನಿಮ್ಮ ಹತ್ತಿರದ ತುರ್ತುಸೇವಾ ಘಟಕಕ್ಕೆ ಕರೆಮಾಡಿ, ಅನುಭವಿ ವ್ಯಕ್ತಿಗಳು ರೆಗ್ಯುಲೇಟರ್ ಅನ್ನು ಪ್ರತ್ಯೇಕಿಸಿ ಕವಾಟವನ್ನು ಸುರಕ್ಷಾ ಮುಚ್ಚಳದಿಂದ ಭದ್ರಪಡಿಸಬಲ್ಲರು
ಆಕರ: ತೈಲ ಮಾರುಕಟ್ಟೆ ಏಜೆನ್ಸಿಗಳ ಅಂತರ್ಜಾಲ ತಾಣಗಳು
ಎಲ್ ಪಿ ಜಿ ಸಿಲೆಂಡರಿನ ಅವಧಿ ಮುಕ್ತಾಯದ ದಿನಾಂಖ
ಸಿಲೆಂಡರಿನ ಮರುತುಂಬುವಿಕೆ ಮತ್ತು ತದನಂತರದ ವಿತರಣೆಗೆ ಮುನ್ನ ಸಿಲೆಂಡರುಗಳನ್ನು ಕಾಲಕಾಲಕ್ಕೆ ನಿಯಮಿತ ಪರಿಶೀಲನೆಗೆ ಒಳಪಡಿಸಬೇಕಾಗುತ್ತದೆ ಎಂಬ ವಿಷಯವು ಬಹಳಷ್ಟು ಜನರಿಗೆ ತಿಳಿದಿರುವುದಿಲ್ಲ. ಲ್ ಪಿ ಜಿ ಸಿಲೆಂಡರಿನ ಮೂರು ಲಂಬ ವಾದ ಪ್ಲೇಟ್ ನ ಒಂದು ಪ್ಲೇಟ್ ನಲ್ಲಿ ಅದರ ಎಚ್ಚರಿಕೆಯ ದಿನಾಂಖವನ್ನು ನಮೂದಿಸಲಾಗಿರುತ್ತದೆ. ದಿನಾಂಖವನ್ನು ಅಕ್ಷರ ಮತ್ತು ಸಂಖ್ಯೆಯ ಮೂಲಕ , A ಅಥವಾ B ಅಥವಾ C ಅಥವಾ D ಮತ್ತು ಎರಡು ಅಂಕೆಯ ಸಂಖ್ಯೆಯಿಂದ ನಮೂದಿಸಲಾಗುತ್ತದೆ. ಈ ಅಕ್ಷರಗಳು ತ್ರೈಮಾಸಿಕವನ್ನು ಸೂಚಿಸುತ್ತದೆ. — A ತ್ರೈಮಾಸಿಕದ ಕೊನೆ ಮಾರ್ಚಿ, B ತ್ರೈಮಾಸಿಕದ ಕೊನೆ ಜೂನ್ ಈ ರೀತಿ. ಹಾಗೆಯೇ ನಮೂದಿಸಿರುವ ಅಂಕೆಯು ನಿಯಮಿತ ಪರಿಶೀಲನೆಗೆ ಒಳಗಾಗಬೇಕಾಗಿರುವ ವರ್ಷವನ್ನು ಸೂಚಿಸುತ್ತದೆ. ಬಳಕೆದಾರರು ತಮಕೆ ಪೂರೈಕೆಯಾಗಿರುವ ಸಿಲೆಂಡರ್ ನಿಯಮಿತ ಪರಿಶೀಲನೆಗೆ ಒಳಪಡಬೇಕಾಗಿದೆ ಎಂದು ಕಂಡು ಬಂದಲ್ಲಿ, ಆಹಾರ ಮತ್ತು ಸಾರ್ವಜನಿಕ ಪೂರೈಕೆ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಪ್ರಧಾನ ಸ್ಪೋಟಕ ನಿಯಂತ್ರಾಧಿಕಾರಿ ಅಥವಾ ಪೆಟ್ರೋಲಿಯಂ ಮತ್ತು ಸ್ಪೋಟಕ ಸುರಕ್ಷಣಾ ಸಂಘಕ್ಕೆ ಮಾಹಿತಿ ನೀಡಬಹುದು
ಮೂಲ : (http://peso.gov.in)
ಮೂಲ : ದಿ ಹಿಂದು
ಪುನರುತ್ಪಾದಿತ ಕಾಗದ
ಪುನರುತ್ಪಾದಿತ ಕಾಗದವು ಕಡಿಮೆ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸುತ್ತದೆ ಮತ್ತು ಕಾಗದ ತಯಾರಿಕಾ ಪ್ರಕ್ರಿಯೆಯಲ್ಲಿ ಕಡಿಮೆ ವಿಷಕಾರಕ ರಾಸಾಯನಿಕಗಳನ್ನು ಹೊರಸೂಸುತ್ತವೆ. ಶೇ100 ರದ್ದಿ ಕಾಗದದಿಂದ ತಯಾರಿಸಲಾಗುವ ಒಂದು ಟನ್ ಕಾಗದವು-
- 15ಕ್ಕೂ ಹೆಚ್ಚು ಮರಗಳನ್ನು ಉಳಿಸುತ್ತದೆ.
- 2,500 ಕಿಲೋ ವ್ಯಾಟ್ ಗಂಟೆಯಷ್ಟು ಶಕ್ತಿಯನ್ನು ಉಳಿಸುತ್ತದೆ.
- 20,000 ಲೀಟರ್‌ನಷ್ಟು ನೀರನ್ನು ಉಳಿಸುತ್ತದೆ.
- 25 ಕಿಲೋಗ್ರಾಮ್‌ನಷ್ಟು ವಾಯು ಮಾಲಿನ್ಯಕಾರಕಗಳನ್ನು ಕಡಿತಗೊಳಿಸುತ್ತದೆ.
ಮೂಲ: ಪೋರ್ಟಲ್ ತಂಡ