ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ

ನಾಗರೀಕ ಸನ್ನದು

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ

ಬೆ.ವಿ.ಕಂಪನಿಯ ಪೀಠಿಕೆ ಮತ್ತು ಹಿನ್ನೆಲೆ

ಕರ್ನಾಟಕ ಸರ್ಕಾರವು, 1999ರಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ಸುಧಾರಣಾ ಅಧಿನಿಯಮವನ್ನು ಕಾಯಿದೆಯಾಗಿಸಿ ಕರ್ನಾಟಕ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಯ ಪ್ರಕ್ರಿಯೆಯನ್ನು ಜಾರಿಗೊಳಿಸಿತು. ಮೊದಲ ಹಂತವಾಗಿ, ಕರ್ನಾಟಕ ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಹಾಗೂ ವಿತರಣೆಯ ಜವಾಬ್ದಾರಿಯನ್ನು ಹೊಂದಿದ್ದ ಹಿಂದಿನ ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯನ್ನು, ದಿನಾಂಕ 01.08.1999ರಿಂದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವೆಂದು (ಕವಿಪ್ರನಿನಿ) ನಿಗಮೀಕರಣಗೊಳಿಸಿತು. ಕವಿಪ್ರನಿನಿಯು ವಿದ್ಯುತ್ ಪ್ರಸರಣ ಸಂಸ್ಥೆಯಾಗಿ ಉಳಿದುಕೊಂಡಿತು. ವಿದ್ಯುತ್ ವಿತರಣೆಯನ್ನು ದಿನಾಂಕ 01.06.2002ರಿಂದ ಜಾರಿಗೆ ಬರುವಂತೆ ನಾಲ್ಕು ಪ್ರಾದೇಶಿಕ ವಿತರಣಾ ಕಂಪೆನಿಗಳಿಗೆ, ಅಂದರೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಬೆಸ್ಕಾಂ), ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪೆನಿ(ಹೆಸ್ಕಾಂ), ಮಂಗಳೂರು ವಿದ್ಯುತ್ ಸರಬರಾಜು ಕಂಪೆನಿ(ಮೆಸ್ಕಾಂ) ಮತ್ತು ಗುಲಬರ್ಗಾ ವಿದ್ಯುತ್ ಸರಬರಾಜು ಕಂಪೆನಿ (ಜೆಸ್ಕಾಂ) ಗಳಿಗೆ  ವಹಿಸಲಾಯಿತು. ಮಂಗಳೂರು ವಿದ್ಯುತ್ ಸರಬರಾಜು ಕಂಪನಿಯ ವ್ಯಾಪ್ತಿಯನ್ನು ವಿಭಜಿಸಿ, ದಿನಾಂಕ 01.04.2005ರಿಂದ ಮೈಸೂರಿನಲ್ಲಿ ಚಾಮುಂಡೇಶ್ವರಿ ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಎಂಬ ಮತ್ತೊಂದು ವಿದ್ಯುತ್ ವಿತರಣಾ ಕಂಪೆನಿಯನ್ನು ರಚಿಸಲಾಯಿತು.

ಸುಧಾರಣಾ ಪ್ರಕ್ರಿಯೆಯ ಅಂಗವಾಗಿ ದಿನಾಂಕ 01.06.2002 ರಿಂದ ಅಸ್ತಿತ್ವಕ್ಕೆ ಬಂದ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಗೆ, ಬೆಂಗಳೂರು ನಗರ/ಗ್ರಾಮೀಣ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಿಗೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿಯನ್ನು ವಹಿಸಲಾಗಿದೆ.

ದೃಷ್ಟಿ

ವಿದ್ಯುತ್ ವಿತರಣೆ  ಕ್ಷೇತ್ರದ ಗ್ರಾಹಕರನ್ನು ಸಂತೃಪ್ತಿ ಪಡಿಸುವಲ್ಲಿ,ದಕ್ಷಿಣ ಏಷ್ಯಾದಲ್ಲೇ ಪ್ರಥಮ ಸ್ಥಾನವನ್ನು ಹೊಂದುವುದು.

ಧ್ಯೇಯ

ಗ್ರಾಹಕರ ಸಂತೃಪ್ತಿಯನ್ನು, ಸಂಸ್ಥೆಯ ವ್ಯವಹಾರದಲ್ಲಿ ನಿರಂತರ ಲಾಭವನ್ನು ಖಚಿತಪಡಿಸಿಕೊಳ್ಳುವುದು.

 • ಸಿಬ್ಬಂದಿಯ ಸಮಗ್ರ ಸಂತೃಪ್ತಿಯನ್ನು ಖಚಿತಪಡಿಸಿಕೊಳ್ಳುವ ಮೂಲಕ.
 • ಸಂಸ್ಥೆಯ ಬೆಳವಣಿಗೆಗೆ ಅನುಗುಣವಾಗಿ ತನ್ನ ಮೂಲ ಸೌಕರ್ಯಗಳನ್ನು ಅಭಿವೃದ್ಧಿಗೊಳಿಸಿ ವಿಶ್ವಾಸಾರ್ಹ ಹಾಗೂ ಗುಣಮಟ್ಟದ ವಿದ್ಯುತ್ ಸರಬರಾಜು ನೀಡುವುದನ್ನು ಖಚಿತಪಡಿಸಿಕೊಳ್ಳುವ ಮೂಲಕ.
 • ಸಂವಹನ ಮಾಧ್ಯಮದಲ್ಲಿ ಅತ್ಯುತ್ತಮ ತಾಂತ್ರಿಕತೆಯ ಬಳಕೆ ಹಾಗೂ ವಿದ್ಯುತ್ ಕ್ಷೇತ್ರದಲ್ಲಿ ಅಳವಡಿಸಲಾದ ಉತ್ತಮ ಅಭ್ಯಾಸಗಳ ಬಳಕೆಯ ಮೂಲಕ.

ನಾಗರೀಕ ಸನ್ನದಿನ ಉದ್ದೇಶ

ಪ್ರಮಾಣಿತ ಗುಣಮಟ್ಟ ಹಾಗೂ ಸೇವೆಯನ್ನು ಒದಗಿಸುವಲ್ಲಿ ಕಾಲಮಿತಿ, ಗ್ರಾಹಕರ ದೂರುಗಳಿಗೆ ಪರಿಹಾರ ವಿಧಾನಗಳು, ಪಾರದರ್ಶಕತೆ ಹಾಗೂ ಹೊಣೆಗಾರಿಕೆಯ ಸಂಬಂಧವಾಗಿ ಬೆ.ವಿ.ಕಂಪನಿಯ ಬದ್ಧತೆಯನ್ನು ಈ ಗ್ರಾಹಕ ಸನ್ನದು ಪ್ರತಿನಿಧಿಸುತ್ತದೆ. ಬೆ.ವಿ.ಕಂಪನಿಯ ಸಾರ್ವಜನಿಕ ಸೇವೆಗಳ ನೀಡುವಿಕೆಯ ಬಗ್ಗೆ ನಾಗರೀಕರಲ್ಲಿ ತಿಳಿವಳಿಕೆಯನ್ನು ಮೂಡಿಸಿ ಅವರನ್ನು ಸಶಕ್ತರನ್ನಾಗಿಸುವುದು ಈ ಗ್ರಾಹಕ ಸನ್ನದಿನ ಮುಖ್ಯ ಉದ್ದೇಶವಾಗಿದೆ. ಗ್ರಾಹಕರ ಅಗತ್ಯತೆ ಹಾಗೂ ನಿರೀಕ್ಷೆಯನ್ನು ಗಮನದಲ್ಲಿಟ್ಟುಕೊಂಡು ಸೇವಾ ಗುಣಮಟ್ಟವನ್ನು ಕಾಯ್ದುಕೊಳ್ಳುವುದರೊಂದಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಬೆ.ವಿ.ಕಂಪನಿಯ ಬದ್ಧತೆ ಹಾಗೂ ಉದ್ದೇಶವನ್ನು ಈ ದಸ್ತಾವೇಜು ಘೋಷಿಸುತ್ತದೆ.

ದಸ್ತಾವೇಜು ನಾಗರೀಕ ಸನ್ನದು

 • ಬೆ.ವಿ.ಕಂಪನಿಯ ಸೇವೆಗಳ ಮಾಹಿತಿಯನ್ನು ಒದಗಿಸುತ್ತದೆ.
 • ಸೇವಾ ಗುಣಮಟ್ಟ, ದೂರುಗಳ ನಿರ್ವಹಣೆ ಹಾಗೂ ಪರಿಹಾರ ಕ್ರಮಗಳು, ಪ್ರಾಥಮಿಕ ಹೊಣೆಗಾರಿಕಾ ಕೇಂದ್ರಗಳು ಹಾಗೂ ನಂತರದ ಉನ್ನತ ಅಧಿಕಾರಿಗಳ ವಿವರಗಳನ್ನು ನಿಗದಿಪಡಿಸುತ್ತದೆ.
 • ದೂರು ಪರಿಹಾರ ವಿಧಾನಗಳ ವಿವರಗಳನ್ನು ಒದಗಿಸುತ್ತದೆ.
 • ಸನ್ನದಿನ ನಿರ್ದೇಶನಗಳನ್ನು ಜವಾಬ್ದಾರಿಯುತವಾಗಿ ಅನುಷ್ಠಾನಗೊಳಿಸಿ ಬೆ.ವಿ.ಕಂ ನ ಗ್ರಾಹಕರಿಗೆ ಗುಣಮಟ್ಟದ ಸೇವೆಯನ್ನು ಒದಗಿಸುವಲ್ಲಿ ಇರುವ ಸೇವೆಗಳು, ವ್ಯವಸ್ಥೆಗಳು ಮತ್ತು ಸಿಬ್ಬಂದಿ ಕೇಂದ್ರ ಕಚೇರಿಯಿಂದ ಕಾರ್ಯಕ್ಷೇತ್ರ ಮಟ್ಟದವರೆಗಿನ ಸಂಪರ್ಕ ವ್ಯಕ್ತಿಗಳ ಮಾಹಿತಿಯನ್ನು ಒದಗಿಸುವ ಸಂಪನ್ಮೂಲ ಕೈಪಿಡಿಯಂತೆ ಕಾರ್ಯನಿರ್ವಹಿಸುತ್ತದೆ.

ಭಾಗೀದಾರರು

 • ಬೆ.ವಿ.ಕಂಪನಿಯ ಎಲ್ಲ ಗ್ರಾಹಕರು
 • ಬೆ.ವಿ.ಕಂಪನಿಯ ಎಲ್ಲ ಉದ್ಯೋಗಿಗಳು
 • ಕ.ವಿ.ನಿ.ಆ, ಕ.ವಿ.ಪ್ರ.ನಿ.ನಿ, ಕೇಂ.ವಿ.ನಿ.ಆ, ವಿದ್ಯುತ್ ಪರಿವೀಕ್ಷಕ ಇಲಾಖೆ ಮತ್ತು ರಾಜ್ಯದಲ್ಲಿರುವ ಇತರ ವಿದ್ಯುತ್ ಸರಬರಾಜು ಕಂಪನಿಗಳು.
 • ಕರ್ನಾಟಕ ಸರ್ಕಾರ – ಇಂಧನ ಇಲಾಖೆ
 • ಭಾರತ ಸರ್ಕಾರ – ಇಂಧನ ಸಚಿವಾಲಯ
 • ಮಾರಾಟಗಾರರು, ಸರಬರಾಜುದಾರರು ಹಾಗೂ ಬೆ.ವಿ.ಕಂಪನಿಯ ಗುತ್ತಿಗೆದಾರರು
 • ಬೆ.ವಿ.ಕಂಪನಿಯ ಅಧಿಕಾರಿ/ನೌಕರರ ಸಂಘ ಸಂಸ್ಥೆಗಳು ಮತ್ತು ಇತರ ನಾಗರಿಕ ಸಂಘ ಸಂಸ್ಥೆಗಳು, ಬೆ.ವಿ.ಕಂಪನಿ ಯೊಂದಿಗೆ ಸಂಬಂಧ ಹೊಂದಿರುವ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಅಥವಾ ಸಂಶೋಧನಾ ಕೇಂದ್ರಗಳು.

ಗ್ರಾಹಕ  ಎಂದರೆ,  2003ರ ವಿದ್ಯುಚ್ಛಕ್ತಿ ಅಧಿನಿಯಮದ ಅಡಿಯಲ್ಲಿ ಅಥವಾ ಸದ್ಯದಲ್ಲಿ ಜಾರಿಯಲ್ಲಿರುವ ಇತರ ಯಾವುದೇ ಕಾನೂನಿನ ಅಡಿಯಲ್ಲಿ ಲೈಸೆನ್ಸುದಾರರೊಬ್ಬರಿಂದ ತನ್ನ ಸ್ವಂತ ಬಳಕೆಗಾಗಿ ವಿದ್ಯುತ್ ಸರಬರಾಜು ಪಡೆಯುತ್ತಿರುವ ವ್ಯಕ್ತಿ ಹಾಗೂ ಲೈಸೆನ್ಸುದಾರರ  ಕಾರ್ಯವ್ಯವಹಾರದೊಂದಿಗೆ ವಿದ್ಯುತ್ ಸ್ವೀಕರಿಸುವ ಉದ್ದೇಶಕ್ಕಾಗಿ ಸದ್ಯದಲ್ಲಿ ಸಂಪರ್ಕ ಪಡೆದಿರುವ ಯಾವುದೇ ವ್ಯಕ್ತಿಯ ಆವರಣವೂ ಒಳಪಡುತ್ತದೆ.

ಸಾಂಸ್ಥಿಕ ರಚನೆ

 • ವಲಯ ಕಚೇರಿಗೆ ಮುಖ್ಯ ಇಂಜಿನಿಯರ್ (ವಿ) ಹುದ್ದೆಯ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ.
 • ವೃತ್ತ ಕಚೇರಿಗೆ ಅಧೀಕ್ಷಕ ಇಂಜಿನಿಯರ್ (ವಿ) ಹುದ್ದೆಯ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ.
 • ವಿಭಾಗೀಯ ಕಚೇರಿಗೆ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಹುದ್ದೆಯ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ.
 • ಉಪವಿಭಾಗ ಕಚೇರಿಗೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ವಿ) ಹುದ್ದೆಯ ಅಧಿಕಾರಿಯು ಮುಖ್ಯಸ್ಥರಾಗಿರುತ್ತಾರೆ.

ಗ್ರಾಹಕರ ಕುಂದುಕೊರತೆಗಳ ನಿವಾರಣೆಗಾಗಿ ಬೆ.ವಿ.ಕಂಪನಿಯು ಹಲವಾರು ವ್ಯವಸ್ಥೆಗಳನ್ನು ರೂಪಿಸಿದೆ

ಸಾರ್ವಜನಿಕ ದೂರು ಪರಿಹಾರ ವ್ಯವಸ್ಥೆ(ಪಿ.ಜಿ.ಆರ್.ಎಸ್)

ಇದು ಒಂದು ಬಹುಅಂಶಿಕ ಸಾರ್ವಜನಿಕ ದೂರು ಪರಿಹಾರ ತಂತ್ರಾಂಶದ ವ್ಯವಸ್ಥೆಯಾಗಿದ್ದು, ದೂರು ಪರಿಹಾರ ಕ್ರಮಗಳನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ವಿದ್ಯುಚ್ಛಕ್ತಿ ಸಂಬಂಧಿತ ದೂರುಗಳಿಗೆ ಕ್ರಮ ಕೈಗೊಳ್ಳುವುದು ಹಾಗೂ 24*7 ಅವಧಿಯ ಅಡಚಣೆರಹಿತ ವಿದ್ಯುತ್ ಸರಬರಾಜು ಮಾಡಲು ಈ ತಂತ್ರಾಂಶವನ್ನು ವಿನ್ಯಾಸಗೊಳಿಸಲಾಗಿದೆ.

ವೆಬ್ ಆಧಾರಿತವಾದ ಈ ಪಿ.ಜಿ.ಆರ್.ಎಸ್. ತಂತ್ರಾಂಶವನ್ನು, ದೂರು ಸಲ್ಲಿಸುವುದಕ್ಕಾಗಿ ಯಾವುದೇ ಸ್ಥಳದಿಂದಾಗಲಿ ಅಂತರ್ಜಾಲದ ಮೂಲಕ ಬಳಸಬಹುದಾಗಿದೆ. ಬಳಕೆದಾರರ ಹೆಸರು ಹಾಗೂ ಸಂಕೇತಪದ ರಹಿತವಾಗಿ ಯಾವುದೇ ಗ್ರಾಹಕರಾಗಲಿ, ತಮ್ಮ ಸ್ವಂತ ಗಣಕ ಯಂತ್ರ ಅಥವಾ ಕೈಯಿಂದ ಬಳಸುವ ಮೊಬೈಲ್ ಸಾಧನದ ಮೂಲಕ  ಈ ಪಿ.ಜಿ.ಆರ್.ಎಸ್. ಜಾಲತಾಣದಲ್ಲಿ ಅಂತರ್ಜಾಲದ ಮೂಲಕ ತಮ್ಮ ದೂರನ್ನು ಕೇಂದ್ರ ದತ್ತಮಾಹಿತಿ ಘಟಕಕ್ಕೆ ಸಲ್ಲಿಸಬಹುದಾಗಿದೆ. ಪ್ರತಿಕ್ರಿಯೆಗಾಗಿ ಒಂದು ಡಾಕೆಟ್ ಸಂಖ್ಯೆಯ ಮೂಲಕ ಗ್ರಾಹಕರ ದೂರನ್ನು ಸ್ವೀಕರಿಸಲಾಗುತ್ತದೆ.

ಗ್ರಾಹಕರ ಅನುಕೂಲಕ್ಕಾಗಿ ಈ ಗ್ರಾಹಕ ಸಹಾಯವಾಣಿ ಶಾಖೆಯಲ್ಲಿ, 150 ಗ್ರಾಹಕ ನೆರವು ಕಾರ್ಯವಾಹಿ ಸಿಬ್ಬಂದಿ, 12 ತಂಡದÀ ನಾಯಕರು ಹಾಗೂ 4 ತಂಡದ ವ್ಯವಸ್ಥಾಪಕರು, ಮತ್ತು ನೆರವು ಸಿಬ್ಬಂದಿಯೊಂದಿಗೆ ಪಾಳಿಯ ಸಹಾಯಕ ಇಂಜಿನಿಯರ್(ವಿ)ರವರು ನಿರ್ವಹಣಕಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಾಜಿನಗರದಲ್ಲಿ 15 ಮಾರ್ಗಗಳುಳ್ಳ ಸಹಾಯವಾಣಿ ಶಾಖೆಯು ಕಾರ್ಯನಿರ್ವಹಣೆಯಲ್ಲಿದ್ದು, ಈ ಶಾಖೆಯಲ್ಲಿ 4 ತಂಡದ ನಾಯಕರು ಹಾಗೂ 4 ತಂಡದÀ ವ್ಯವಸ್ಥಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ.

 • ಬೆ.ವಿ.ಕಂಪನಿಯು ತನ್ನ ಸಹಾಯವಾಣಿ ಶಾಖೆಯನ್ನು ವಿನೂತನ ತಂತ್ರಜ್ಞಾನಗಳಿಂದ ಸಜ್ಜುಗೊಳಿಸಿದ್ದು,
 • ಶಾಖೆಯಲ್ಲಿ ಕಾರ್ಯವಾಹಿ ಸಿಬ್ಬಂದಿ ಹಾಗೂ ಗ್ರಾಹಕರ ಸಂವಾದವನ್ನು ಧ್ವನಿಮುದ್ರಿಸಿಕೊಳ್ಳಲಾಗುತ್ತದೆ.
 • ಈ ವ್ಯವಸ್ಥೆಯ ಮೂಲಕ ಬೆ.ವಿ.ಕಂಪನಿಯು ಕರೆಗಳ ಪರಿಶೋಧನೆಯಾಗುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದು,
 • ಇದರಿಂದ ಗ್ರಾಹಕರಿಗೆ ಒದಗಿಸುತ್ತಿರುವ ಸೇವಾಗುಣಮಟ್ಟವೂ ಸಹ ಉತ್ತಮಗೊಳ್ಳುತ್ತದೆ.

ಗ್ರಾಹಕ ಸಂವಾದ ಸಭೆ

 • ಗ್ರಾಹಕರಿಗೆ ಉತ್ತಮ ಸೇವೆ ಒದಗಿಸಲು ಮತ್ತು ದೂರುಗಳನ್ನು ಯುಕ್ತ ಕಾಲಮಿತಿಯೊಳಗೆ ವಿಲೇವಾರಿ ಮಾಡಲು ಎಲ್ಲ ಉಪವಿಭಾಗಗಳಲ್ಲಿ ಗ್ರಾಹಕ ಸಂವಾದ ಸಭೆಯನ್ನು ಗ್ರಾಹಕರ ದೂರುಗಳಿಗೆ ಸ್ಪಂದಿಸಲು ಪ್ರತಿ ತಿಂಗಳೂ ಏರ್ಪಡಿಸಲಾಗುತ್ತದೆ.
 • ಸಭೆಯ ಸ್ಥಳ, ದಿನಾಂಕ, ಸಮಯ ಇವುಗಳ ಮಾಹಿತಿಯನ್ನು ಆಯಾ ಉಪವಿಭಾಗವು ಮುಂಚಿತವಾಗಿ ಸ್ಥಳೀಯ ವಾರ್ತಾ ಪತ್ರಿಕೆ, ಕರಪತ್ರ, ಪ್ರಕಟಣ ಫಲಕ ಹಾಗೂ ವಿದ್ಯುನ್ಮಾನ ಮಾಧ್ಯಮದ ಮೂಲಕ ಪ್ರಕಟಿಸುತ್ತದೆ.
 • ಗ್ರಾಹಕ ಸಂವಾದ ಸಭೆಯ ಬಗ್ಗೆ ಮುಂಚಿತವಾಗಿ ತಿಳಿದುಕೊಳ್ಳಲು, ಸಭೆಯ ಮಾಹಿತಿಯು ಜಾಲತಾಣದಲ್ಲಿ ಲಭ್ಯವಿರುತ್ತದೆ.
 • ಈ ಸಭೆಯು ಗ್ರಾಹಕರ ಭಾಗವಸುವಿಕೆಯದ್ದಾಗಿದೆ. ಈ ಸಭೆಯಲ್ಲಿ ಗ್ರಾಹಕರು ತಮ್ಮ ದೂರುಗಳನ್ನು ವ್ಯಕ್ತಪಡಿಸಬಹುದು. ಗ್ರಾಹಕರ ದೂರುಗಳನ್ನು ಆಲಿಸಿ, ಸಭೆಯ ನಡಾವಳಿಯನ್ನು ದಾಖಲಿಸಲಾಗುತ್ತದೆ, ವೀಡಿಯೋ ಚಿತ್ರಣ ಮಾಡಿ ಯು-ಟ್ಯೂಬ್‍ನಲ್ಲಿ ಅಳವಡಿಸಲಾಗುತ್ತದೆ. ಗ್ರಾಹಕರಿಗೆ ಅವರ ದೂರುಗಳ ಬಗ್ಗೆ ಕ್ರಮ ತೆಗೆದುಕೊಳ್ಳುವ ಅವಧಿಯನ್ನು ಸೂಚಿಸುವ ಬಗ್ಗೆ ಸ್ವೀಕೃತಿ ಪತ್ರ ನೀಡಲಾಗುತ್ತದೆ.
 • ಗ್ರಾಹಕ ಸಂವಾದ ಸಭೆಯಲ್ಲಿ ದೂರನ್ನು ದಾಖಲಿಸಿದೊಡನೆ, ಉಪವಿಭಾಗ ಮಟ್ಟದಲ್ಲಿ ದೂರಿನ ಬಗ್ಗೆ ವಿಚಾರಣೆ ನಡೆಸಲಾಗುತ್ತದೆ. ನಿಗದಿತ ಅವಧಿಯೊಳಗೆ ದೂರಿಗೆ ಸ್ಪಂದಿಸಿ ಕ್ರಮ ತೆಗೆದುಕೊಳ್ಳದಿದ್ದರೆ, ಅಂತಹ ದೂರನ್ನು ನಂತರದ ಉನ್ನತ ಅಧಿಕಾರಿಗೆ ಮಂಡಿಸಲಾಗುತ್ತದೆ.
 • ಒದಗಿಸಿರುವ ಸೇವೆಯ ಬಗ್ಗೆ ಗ್ರಾಹಕರು ತೃಪ್ತರಾಗದಿದ್ದರೆ, ಗ್ರಾಹಕರು ತಮ್ಮ ದೂರನ್ನು ಅರೆನ್ಯಾಯಿಕ ಮಂಡಳಿಯಾದ ಗ್ರಾಹಕ ದೂರು ನಿವಾರಣಾ ವೇದಿಕೆಗೆ ಮೇಲ್ಮನವಿ ಸಲ್ಲಿಸಬಹುದಾಗಿದೆ.

ಗ್ರಾಹಕರ ಕುಂದುಕೊರತೆ ನಿವಾರಣೆ ವೇದಿಕೆ

ವಿದ್ಯುಚ್ಛಕ್ತಿ ಅಧಿನಿಯಮ, 2003 ದಿನಾಂಕ 10.06.2003ರಿಂದ ಜಾರಿಗೆ ಬಂದಿರುತ್ತದೆ. ವಿದ್ಯುಚ್ಛಕ್ತಿ ಅಧಿನಿಯಮದ ಪರಿಚ್ಛೇದ 42ರ ಉಪ ಪರಿಚ್ಛೇದ (5), (6) ಮತ್ತು (7) ರೊಂದಿಗೆ ಓದಿಕೊಳ್ಳಲಾದ ಪರಿಚ್ಛೇದ 181ರ ಪ್ರಕಾರ ಆಯೋಗಕ್ಕೆ ದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆ ಮತ್ತು ಸಾರ್ವಜನಿಕ ತನಿಖಾಧಿಕಾರಿಗೆ ಸಂಬಂಧಿತ ನಿಯಮಗಳನ್ನು ಹೊರಡಿಸಲಾಗಿದೆ. ವಿದ್ಯುತ್ ಗ್ರಾಹಕರ ಹಿತವನ್ನು ಕಾಪಾಡುವುದು ಹಾಗೂ ಗ್ರಾಹಕರು ತಮ್ಮ ದೂರನ್ನು ವೇದಿಕೆ ಹಾಗೂ ಸಾರ್ವಜನಿಕ ತನಿಖಾಧಿಕಾರಿಯವರಿಗೆ ಸಲ್ಲಿಸಿ ಶೀಘ್ರ ಪರಿಹಾರ ಪಡೆಯಲು ಅವಕಾಶ ಒದಗಿಸುವುದು ಈ ನಿಯಮಗಳ ಉದ್ದೇಶವಾಗಿದೆ.

ಬೆ.ವಿ.ಕಂಪನಿಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಕೋಲಾರ, ಚಿಕ್ಕಬಳ್ಳಾಫುರ, ತುಮಕೂರು, ದಾವಣಗೆರೆ ಹಾಗೂ ಚಿತ್ರದುರ್ಗದಲ್ಲಿ ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆಯನ್ನು ಸ್ಥಾಪಿಸಿದ್ದು, ವೇದಿಕೆಯು ಕೆಳಕಂಡ ಸದಸ್ಯರನ್ನೊಳಗೊಂಡಿರುತ್ತದೆ.

ಸಾರ್ವಜನಿಕ ತನಿಖಾಧಿಕಾರಿ

ಕೇಂದ್ರೀಯ ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆಯ ಆದೇಶದ ಬಗ್ಗೆ ತೃಪ್ತರಾಗದಿದ್ದಲ್ಲಿ ಗ್ರಾಹಕರು, ತಮ್ಮ ಅಹವಾಲನ್ನು ಕ.ವಿ.ನಿ.ಆಯೋಗವು ನೇಮಕಗೊಳಿಸಿರುವ ಸಾರ್ವಜನಿಕ ತನಿಖಾಧಿಕಾರಿಯವರಿಗೆ ಸಲ್ಲಿಸಬಹುದಾಗಿದೆ. ಈ ಅಹವಾಲನ್ನು ಕೇಂದ್ರೀಯ ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆಯು ನೀಡಿದ ತೀರ್ಪಿನ ದಿನಾಂಕದಿಂದ 30 ದಿನಗಳೊಳಗೆ ಸಲ್ಲಿಸತಕ್ಕದ್ದು.

ಸೇವೆ ಸ್ವೀಕರಿಸಿದವರಿಂದ/ಗ್ರಾಹಕರಿಂದ ನಿರೀಕ್ಷೆ

 • ವೈರಿಂಗ್ ಇತರೆ ವಿದ್ಯುತ್ ಕೆಲಸಗಳನ್ನು ಪರವಾನಗಿ ಪಡೆದ ವಿದ್ಯುತ್ ಗುತ್ತಿಗೆದಾರರು ವಿನ್ಯಾಸಗೊಳಿಸಿ ನಿರ್ವಹಿಸಿರುವುದನ್ನು ಖಚಿತಪಡಿಸಿಕೊಳ್ಳಿ. ಕೆಲಸ ಮುಗಿದ ಕೂಡಲೇ ಕಾರ್ಯ ಸಮಾಪನಾ ದೃಢೀಕರಣವನ್ನು  ಅವರಿಂದ ಪಡೆದುಕೊಳ್ಳಿ. ಈ ದೃಢೀಕರಣದಲ್ಲಿ ಗುತ್ತಿಗೆದಾರರ ಪರವಾನಗಿ ವಿವರಗಳಿರತಕ್ಕದ್ದು.
 • ಪ್ರಸ್ತಾವನೆ/ಮನವಿಗಳು ಎಲ್ಲ ರೀತಿಯಲ್ಲಿ ಪೂರ್ಣವಾಗಿರತಕ್ಕದ್ದು, ಒದಗಿಸುವ ದಸ್ತಾವೇಜುಗಳು ಸ್ಪಷ್ಟ ಹಾಗೂ ಸರಿಯಾಗಿರತಕ್ಕದ್ದು ಹಾಗೂ ಮಾಹಿತಿ ನಂಬಲರ್ಹವಾಗಿರಬೇಕು.
 • ಯಾವುದೇ ನೆರವಿಗಾಗಿ ಬೆ.ವಿ.ಕಂಪನಿಯ ಸಂಬಂಧಿತ ವ್ಯಾಪ್ತಿಯ ಕಚೇರಿಯನ್ನು ಸಂಪರ್ಕಿಸಿ, ಮಧ್ಯವರ್ತಿಗಳ ನೆರವು ಪಡೆಯಬೇಡಿ.
 • ವಿದ್ಯುತ್ ಅಪಘಾತ ಹಾಗೂ ಹಾನಿಯನ್ನು ತಪ್ಪಿಸಲು, ತೆರೆದ ವಾಹಕಗಳು,ಸ್ಥಾಪನಗಳು, ವಿದ್ಯುತ್ ಉಪಕರಣಗಳಿಂದ ಸುರಕ್ಷಿತ ದೂರದಲ್ಲಿರುವಂತಹ ಎಲ್ಲ ಸುರಕ್ಷಾ ಸೂತ್ರಗಳನ್ನು ಅನುಸರಿಸುವುದನ್ನು ಖಚಿತಪಡಿಸಿಕೊಳ್ಳುವುದು.
 • ನೀವು ಹಾಗೂ ಇತರ ಗ್ರಾಹಕರು ಸೂಕ್ತ ರೀತಿಯ ಸೇವೆಯನ್ನು ಪಡೆಯಲು ಬೆ.ವಿ.ಕಂಪನಿಯ ಉದ್ಯೋಗಿಗಳೊಡನೆ ಸಮಾಲೋಚಿಸಿ ಮತ್ತು ಸಹಕರಿಸಿ.
 • ನಿಮಗೆ ಗೋಚರವಾದ ಯಾವುದೇ ಅಸುರಕ್ಷಿತ ಸ್ಥಿತಿಯಲ್ಲಿರುವ ವಿದ್ಯುತ್ ವ್ಯವಸ್ಥೆಯ ಬಗ್ಗೆ ವರದಿ ನೀಡಿ, ಇದರಿಂದ ಅಡಚಣೆ , ಅಪಾಯಗಳನ್ನು ತಪ್ಪಿಸಬಹುದು.
 • ನಿಮ್ಮ ಹತ್ತಿರದ ಉಪವಿಭಾಗದಲ್ಲಿ ನಡೆಸುವ ಗ್ರಾಹಕ ಸಂವಾದ ಸಭೆಯಲ್ಲಿ ಪಾಲ್ಗೊಳ್ಳಿ, ಉತ್ತಮ ಗುಣಮಟ್ಟದ ಸೇವೆಯನ್ನು ಒದಗಿಸಲು ಅಮೂಲ್ಯ ಸಲಹೆ/ಹಿಂಮಾಹಿತಿಗಳನ್ನು ನೀಡಿ
 • ಸೇವೆಯ ಬಗ್ಗೆ ಯಾವುದೇ ತೊಂದರೆ ಇದ್ದರೆ, ನಮ್ಮ ಗ್ರಾಹಕ ಪ್ರತಿಕ್ರಿಯಾ ಕೇಂದ್ರದ ಸಂಖ್ಯೆ 1912ಕ್ಕೆ ದೂರು ನೀಡಿ.
 • ವಿದ್ಯುತ್ ಬಿಲ್ಲುಗಳನ್ನು ಸಕಾಲದಲ್ಲಿ ಪಾವತಿಸಿ, ವಿದ್ಯುತ್ ಸರಬರಾಜಿನ ನಿಲುಗಡೆಯನ್ನು ತಪ್ಪಿಸಿ.
 • ನಾಗರೀಕರು/ಗ್ರಾಹಕರು ನಮ್ಮ ಪಾಲುದಾರರು. ಆದ್ದರಿಂದ ನಿಮಗೆ ಒದಗಿಸುತ್ತಿರುವ ಸೇವೆಯಲ್ಲಿ ಯಾವುದೇ ಬದಲಾವಣೆಯ  ಅವಶ್ಯಕತೆ ಕಂಡುಬಂದಲ್ಲಿ ನಮ್ಮನ್ನು ಸಂಪರ್ಕಿಸಿ, ದಂಡ ವಿಧಿಸುವಿಕೆಯನ್ನು ತಪ್ಪಿಸಿ.

ಮೂಲ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ

2.83333333333
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
Back to top