অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹವಾಮಾನ ಬದಲಾವಣೆ

ಹವಾಮಾನ ಬದಲಾವಣೆ

ಹವಾಮಾನ ಬದಲಾವಣೆ ನಾವು ಬೇಸಗೆಯಲ್ಲಿ ಸೆಖೆಯನ್ನೂ ಚಳಿಗಾಲದಲ್ಲಿ ಥಂಡಿಯನ್ನೂ ಅನುಭವಿಸುತ್ತೇವೆ. ಇವು ನಮ್ಮ ಅನುಭವಕ್ಕೆ ನಿಲುಕುವ ವಿಭಿನ್ನ ಹವಾಮಾನ ಸ್ಥಿತಿಗಳಾಗಿವೆ. ಒಂದು ಸ್ಥಳದಲ್ಲಿ ನಿರ್ದಿಷ್ಟ ಕಾಲಾವಧಿಯಲ್ಲಿ ಇರುವ ಸರಾಸರಿ ವಾತಾವರಣ ಪರಿಸ್ಥಿತಿಯು ಹವಾಮಾನ ಎಂದು ಕರೆಯಲ್ಪಡುತ್ತದೆ. ಮಳೆ, ಬಿಸಿಲು, ವಾಯುಭಾರ, ಗಾಳಿ ಹಾಗೂ ಉಷ್ಣತೆಗಳ ಆಧಾರದ ಮೇಲೆ ಆಯಾ ಸ್ಥಳದ ಹವಾಮಾನವನ್ನು ನಿರ್ಧರಿಸಲಾಗುತ್ತದೆ. ವಾತಾವರಣದಲ್ಲಿನ ಬದಲಾವಣೆಯು ಆಕಸ್ಮಿಕವಾಗಿ ಆಗಬಹುದು ಮತ್ತು ಸರಿಯಾಗಿ ಗಮನಿಸಿದರೆ, ದೀರ್ಘಕಾಲ ತೆಗೆದುಕೊಳ್ಳುವುದರಿಂದ ಅಸಾಧಾರಣವೂ ಆಗಿರುವುದು. ಭೂವಾತಾವರಣದಲ್ಲಿ ಹಲವಾರು ಬದಲಾವಣೆಗಳಾಗಿದ್ದು, ಎಲ್ಲ ಬಗೆಯ ಜೀವಿಗಳೂ ಈ ಬದಲಾವಣೆಗೆ ಸಹಜವಾಗಿ ಒಗ್ಗಿಕೊಂಡಿರುವವು. ಕಳೆದ 150-200 ವರ್ಷಗಳಿಂದೀಚೆ ಈ ಬದಲಾವಣೆಯು ವೇಗ ಪಡೆದುಕೊಂಡಿದ್ದು, ಹಲವು ಬಗೆಯ ಪ್ರಾಣಿ ಹಾಗೂ ಸಸ್ಯ ಪ್ರಭೇದಗಳು ಅದಕ್ಕೆ ಒಗ್ಗಿಕೊಳ್ಳಲಾಗದೆ ನಶಿಸಿಹೋಗಿರುವವು. ಇಂತಹ ಬದಲಾವಣೆಗೆ ಮಾನವನ ಚಟುವಟಿಕೆಗಳೇ ಮುಖ್ಯ ಕಾರಣ ಎಂದು ಹೇಳಲಾಗುತ್ತದೆ. ಹವಾಮಾನ ಬದಲಾವಣೆಯ ಕಾರಣಗಳು ಹವಾಮಾನ ಬದಲಾವಣೆಗೆ ಮುಖ್ಯವಾಗಿ ಎರಡು ಕಾರಣಗಳನ್ನು ಗುರುತಿಸಲಾಗಿದೆ. - ನೈಸರ್ಗಿಕ ಹಾಗೂ ಮಾನವ ನಿರ್ಮಿತ I. ನೈಸರ್ಗಿಕ ಕಾರಣಗಳು ಹವಾಮಾನ ಬದಲಾವಣೆಗೆ ಹಲವು ಅಂಶಗಳು ಕಾರಣವಾಗಿವೆ. ಅವುಗಳಲ್ಲಿ ಮುಖ್ಯವಾದವು- ಖಂಡಗಳ ಅಲೆತ, ಸಾಗರ ಪ್ರವಾಹ ಮತ್ತು ಭೂಮಿಯ ವಾಲಿಕೆ ಖಂಡಗಳ ಅಲೆತ ನಾವು ಇಂದು ನೋಡುತ್ತಿರುವ ಖಂಡಗಳು ಕೋಟ್ಯಂತರ ವರ್ಷಗಳ ಹಿಂದೆ ಭೂಮಿಯ ಚಲನೆಯಿಂದ ಉಂಟಾದುದಾಗಿವೆ. ಈ ಖಂಡಾತರದಿಂದಾಗಿ ಜಲಮೂಲಗಳು, ಭೂಪ್ರದೇಶ, ಸಾಗರದ ಪಾತ್ರಗಳು ಹಾಗೂ ವಾಯುವಿನ ಚಲನೆಗಳಲ್ಲಿ ವ್ಯತ್ಯಾಸಗಳುಂಟಾದವು. ಈ ಬದಲಾವಣೆಗಳು ಹವಾಗುಣದ ಮೇಲೆ ಪರಿಣಾಮ ಬೀರಿದವು. ಇಂದಿಗೂ ಈ ಖಂಡಗಳ ಅಲೆತ ಜಾರಿಯಲ್ಲಿದೆ. ಜ್ವಾಲಾಮುಖಿಗಳು ಜ್ವಾಲಾಮುಖಿ ಸ್ಫೋಟಗೊಂಡಾಗ, ಅದು ಭಾರೀ ಪ್ರಮಾಣದಲ್ಲಿ ಸಲ್ಫರ್ ಡೈಯಾಕ್ಸೈಡ್, ನೀರಾವಿ, ಧೂಳು ಮತ್ತು ಬೂದಿಗಳನ್ನು ವಾತಾವರಣಕ್ಕೆ ಎರಚುತ್ತದೆ. ಜ್ವಾಲಾಮುಖಿಯ ಚಟುವಟಿಕೆಗಳು ಕೆಲವು ದಿನಗಳ ವರೆಗೆ ಮಾತ್ರ ಇದ್ದರೂ ಅದು ಉಗುಳುವ ಅನಿಲಗಳು ಮತ್ತು ಧೂಳು ದೀರ್ಘ ಕಾಲದವರೆಗೆ ಹವಾಗುಣದ ಮೇಲೆ ತಮ್ಮ ಪ್ರಭಾವ ಬೀರುತ್ತವೆ. ಅನಿಲಗಳು ಮತ್ತು ಧೂಳಿನ ಕಣಗಳು ಸೂರ್ಯಕಿರಣಗಳನ್ನು ಮರೆಮಾಚುವುದರಿಂದ ವಾತಾವರಣವು ಶೀತಲವಾಗುತ್ತದೆ. ಭೂಮಿಯ ವಾಲಿಕೆ ಭೂಮಿಯು ತನ್ನ ಅಕ್ಷಕ್ಕೆ 23.5° ಕೋನದಲ್ಲಿ ವಾಲಿಕೊಂಡಿದೆ. ಈ ವಾಲಿಕೆಯಲ್ಲಿನ ವ್ಯತ್ಯಾಸಗಳು ಋತುಮಾನಗಳ ಅವಧಿಯಲ್ಲಿ ಬದಲಾವಣೆಯನ್ನು ಉಂಟುಮಾಡುತ್ತವೆ. ಹೆಚ್ಚಿನ ಪ್ರಮಾಣದ ವಾಲಿಕೆಯು ತೀಕ್ಷ್ಣ ಸೆಖೆ ಹಾಗೂ ಕಡುಚಳಿಗಾಲಗಳನ್ನು ಉಂಟುಮಾಡಿದರೆ, ಕಡಿಮೆ ವಾಲಿಕೆಯು ಬೇಸಿಗೆಯನ್ನು ತಂಪಾಗಿಯೂ ಚಳಿಗಾಲವನ್ನು ಬೆಚ್ಚಗೆ ಇರುವಂತೆಯೂ ಮಾಡುತ್ತದೆ. ಸಾಗರ ಪ್ರವಾಹಗಳು ಸಾಗರಗಳು ಹವಾಗುಣ ವ್ಯವಸ್ಥೆಯ ಅತಿ ಮುಖ್ಯ ಅಂಶಗಳಾಗಿವೆ. ಅವು ಭೂಮಿಯ 71% ಭಾಗವನ್ನು ಆವರಿಸಿವೆ. ಸಾಗರಗಳು ವಾತಾವರಣದ ಎರಡುಪಟ್ಟು ಹೆಚ್ಚು ಸೂರ್ಯನ ಕಿರಣಗಳನ್ನು ಹೀರಿಕೊಳ್ಳುತ್ತವೆ.

ಹವಾಮಾನ ಬದಲಾವಣೆ ನಮ್ಮ ಮೇಲೆ ಹೇಗೆ ಪರಿಣಾಮ ಉಂಟು ಮಾಡುತ್ತದೆ?

ಹವಾಗುಣ ಬದಲಾವಣೆಯು ಮಾನವನ ಪಾಲಿಗೆ ದೊಡ್ಡ ಬೆದರಿಕೆಯಾಗಿದೆ. ಭೂಮಿಯ ಸರಾಸರಿ ಹೊರಮೈ ಉಷ್ಣತೆಯು 19 ನೇ ಶತಮಾನದ ಅಂತ್ಯದಿಂದೀಚೆಗೆ 0.3-0.6 0 ಸೆಂ. ನಷ್ಟು ಹೆಚ್ಚಿದೆ. ಈ ಮಟ್ಟದ ಹೆಚ್ಚುವಿಕೆಯು ನಮಗೆ ಅಲ್ಪವಾಗಿ ತೋರಬಹುದಾದರೂ ಅದು ಕೆಳಗೆ ಹೇಳಲಾಗಿರುವಂತ ಭಾರೀ ದುರಂತಗಳಿಗೆ ಎಡೆಮಾಡಿಕೊಡಬಲ್ಲದಾಗಿದೆ. ಕೃಷಿ ಜನಸಂಖ್ಯಾ ಹೆಚ್ಚಳವು ಆಹಾರದ ಬೇಡಿಕೆಯನ್ನೂ ಹೆಚ್ಚಿಸಿದೆ. ಇದು ನೈಸರ್ಗಿಕ ಸಂಪನ್ಮೂಲಗಳ ಮೇಲೆ ಒತ್ತಡವನ್ನು ಹೇರುವ ಮೂಲಕ ಪರಿಣಾಮ ಬೀರುತ್ತದೆ. ಹವಾಮಾನ ಬದಲಾವಣೆಯು ಕೃಷಿಗಾರಿಕೆಯ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳನ್ನು ಉಂಟುಮಾಡುತ್ತದೆ. ಉಷ್ಣತೆ ಮತ್ತು ಮಳೆಯಲ್ಲಿನ ವ್ಯತ್ಯಾಸದಂತಹ ನೇರ ಪರಿಣಾಮಗಳೂ ಮಣ್ಣಿನ ಗುಣಮಟ್ಟದಲ್ಲಿ ಇಳಿಕೆ, ಕೀಟಗಳು ಮತ್ತು ಕಾಯಿಲೆಗಳಂತಹ ಪರೋಕ್ಷ ಪರಿಣಾಮಗಳೂ ಇದರಿಂದ ಉಂಟಾಗುತ್ತವೆ. ಭಾರತದಲ್ಲಿ ಧಾನ್ಯಗಳ ಪ್ರಮಾಣದಲ್ಲಿ ಭಾರೀ ಇಳಿಕೆ ಯಾಗಲಿದೆ ಎಂದು ಹೇಳಲಾಗುತ್ತಿದೆ. ಮಿತಿಮೀರಿದ ಉಷ್ಣತೆ, ವಿಪರೀತ ಮಳೆ, ನೆರೆಪ್ರವಾಹಗಳು, ಬರಗಾಲಗಳೇ ಮೊದಲಾದವು ಕೂಡ ಬೆಳೆ ಉತ್ಪಾದನೆಯ ಮೇಲೆ ದುಷ್ಪರಿಣಾಮ ಬೀರುತ್ತವೆ. ಹವೆ ಬಿಸಿ ಹವಾಗುಣವು ಮಳೆಯ ವಿನ್ಯಾಸದಲ್ಲಿ ಬದಲಾವಣೆಯನ್ನು ತರುತ್ತದೆ. ಇದರಿಂದಾಗಿ ಕ್ಷಾಮ ಮತ್ತು ಪ್ರವಾಹಗಳು ಉಂಟಾಗುತ್ತವೆ. ಧೃವ ಪ್ರದೇಶಗಳಲ್ಲಿನ ಮಂಜು ಚಪ್ಪಡಿಗಳು ಕರಗಿ ಹರಿಯುವ ಮೂಲಕ ಸಮುದ್ರ ಮಟ್ಟದಲ್ಲಿ ಏರಿಕೆ ಉಂಟಾಗುತ್ತದೆ. ಉಷ್ಣತೆಯ ವ್ಯತ್ಯಯದಿಂದಾಗಿ ಕಳೆದ ಕೆಲವು ವರ್ಷಗಳಿಂದ ಬಿರುಗಾಳಿ ಮತ್ತು ಸುಂಟರಗಾಳಿಗಳ ಹಾವಳಿ ಹೆಚ್ಚಾಗಿದೆ. ಸಮುದ್ರ ಮಟ್ಟದ ಏರಿಕೆ ಹವಾಗುಣದ ವ್ಯತ್ಯಯದ ಪರಿಣಾಮಗಳಲ್ಲಿ ಸಮುದ್ರ ಮಟ್ಟದ ಏರಿಕೆಯೂ ಒಂದು. ಸಾಗರಗಳ ಕಾಯುವಿಕೆ ಹಾಗೂ ಧೃವ ಪ್ರದೇಶಗಳ ಮಂಜು ಕರಗಿ ಹರಿಯುವುದರ ಪರಿಣಾಮವಾಗಿ ಮುಂದಿನ ಶತಮಾನದ ವೇಳೆಗೆ ಸಮುದ್ರ ಮಟ್ಟವು ಸರಾಸರಿ ಅರ್ಧ ಮೀಟರ್ನಷ್ಟು ಏರಲಿದೆ ಎಂದು ಊಹಿಸಲಾಗಿದೆ. ಸಮುದ್ರ ಮಟ್ಟದ ಏರುವಿಕೆಯು ಕರಾವಳಿ ಪ್ರದೇಶಗಳ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಉಂಟುಮಾಡಬಹುದು. ಕಡಲ್ಕೊರೆತ, ನಿರಂತರ ಪ್ರವಾಹ, ಉಪ್ಪುನೀರಿನ ಒಳನುಗ್ಗುವಿಕೆಯೇ ಮೊದಲಾದ ಹಾನಿಗಳು ಉಂಟಾಗಬಹುದು. ಇವೆಲ್ಲವೂ ಕರಾವಳಿ ಪ್ರದೇಶದ ಕೃಷಿಗಾರಿಕೆ, ಕುಡಿಯುವ ಜಲಮೂಲಗಳು, ಮೀನುಗಾರಿಕೆ, ಮಾನವ ವಸತಿ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವವು. ಆರೋಗ್ಯ ಭೂತಾಪಮಾನ ಏರಿಕೆಯಿಂದ ಮಾನವ ಆರೋಗ್ಯದ ಮೇಲೆ ನೇರ ಪರಿಣಾಮಗಳುಂಟಾಗುತ್ತವೆ. ಉಷ್ಣಕ್ಕೆ ಸಂಬಂಧಿಸಿದ ನಿರ್ಜಲತೆ, ಸೋಂಕು ರೋಗಗಳ ಹರಡುವಿಕೆ, ಅಪೌಷ್ಟಿಕತೆ ಹಾಗೂ ಸಾರ್ವಜನಿಕ ಆರೋಗ್ಯ ವಿನ್ಯಾಸದಲ್ಲಿ ತೊಡಕುಗಳು ಉಂಟಾಗುತ್ತವೆ. ಅರಣ್ಯ ಮತ್ತು ವನ್ಯಜೀವಿಗಳು ನೈಸರ್ಗಿಕ ಪರಿಸರದಲ್ಲಿರುವ ಗಿದಮರಗಳು ಹಾಗೂ ಪ್ರಾಣಿಗಳು ಹವಾಮಾನ ಬದಲಾವಣೆಗೆ ಸೂಕ್ಷ್ಮವಾಗಿ ಸ್ಪಂದಿಸುತ್ತವೆ. ಹವಾಗುಣ ಬದಲಾವಣೆಯ ಪ್ರಮಾಣವು ಏರುತ್ತ ಸಾಗಿದ್ದೇ ಆದಲ್ಲಿ, ಹಲವಾರು ಜಾತಿಗಳ ಸಸ್ಯ ಸಂಕುಲ ಹಾಗೂ ಪ್ರಾಣಿಗಳು ನಾಶವಾಗಿ ಹೋಗುವ ಸಾಧ್ಯತೆಗಳು ಇಲ್ಲದಿಲ್ಲ.

ಮುಂಜಾಗ್ರತಾ ಕ್ರಮಗಳು

ನವೀಕರಿಸಲಾಗದ ಇಂಧನ ಮೂಲಗಳ (ಪಳೆಯುಳಿಕೆ ಇಂಧನಗಳು) ಬಳಕೆಯಲ್ಲಿ ಕಡಿತ ಮಾಡುವುದು ನವೀಕರಿಸಬಹುದಾದ ಸೌರಶಕ್ತಿ, ಪವನ ಶಕ್ತಿ ಮೊದಲಾದವುಗಳ ವ್ಯಾಪಕ ಬಳಕೆ ಸಸ್ಯ ಸಂಪತ್ತನ್ನು ರಕ್ಷಿಸುವುದು ಮತ್ತೆ ಹೆಚ್ಚು ಮರ ಗಿಡಗಳನ್ನು ಬೆಳೆಸುವುದು ಪ್ಲಾಸ್ಟಿಕ್ನಂತಹ ಕೊಳೆಯಲಾರದ ವಸ್ತುಗಳ ವಿವೇಚನಾಹೀನ ಬಳಕೆಯನ್ನು ಸಾಧ್ಯವಾದಷ್ಟು ತಗ್ಗಿಸುವುದು

ಮೂಲ: ಪೋರ್ಟಲ್ ತಂಡ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate