অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಎಲೆ ಎಲೆ ಎಂಥಾ ಸಾಧನೆ!

ಎಲೆ ಎಲೆ ಎಂಥಾ ಸಾಧನೆ!

ಎಲೆ ಎಲೆ ಎಂಥಾ ಸಾಧನೆ!
ಒಂದು 1/2 ಎಚ್.ಪಿ. ಮೋಟರು ಕಿರೋ ಎಂದು ಸದ್ದು ಮಾಡುತ್ತಾ ಧಾರಾಳವಾಗಿ ವಿದ್ಯುತ್ತನ್ನು ಹೀರುತ್ತಾ ಮುಕ್ಕಲು ಗಂಟೆಯಲ್ಲಿ ಸಂಪಿನಲ್ಲಿದ್ದ ನೀರನ್ನು ಮನೆಯ ಮೇಲಿನ ಟ್ಯಾಂಕಿಗೆ ತುಂಬಿಸುತ್ತದೆ.  ಅಬ್ಬಾ ಏನು ತಂತ್ರಜ್ಞಾನ? ನೀರು ಸೇದುವಂತಿಲ್ಲ, ನೀರು ಹೊರುವಂತಿಲ್ಲ ಅನಾಯಾಸವಾಗಿ ಅಷ್ಟೊಂದು ನೀರು ಮೇಲೆ ಸೇರಿತಲ್ಲ ಮನುಷ್ಯನದೆಷ್ಟು ಬುದ್ಧಿವಂತ!! ಎಂದು ಮನುಷ್ಯನನ್ನು ಶ್ಲಾಘಿಸುತ್ತೆವೆ.

ಆದರೆ  ಪೈಪೇ ಇರದೆ,  ವಿದ್ಯುತ್ ಬಳಸದೇ, ಸದ್ದು ಮಾಡದೇ,  ಓವರ್‍ಹೆಡ್ ಟ್ಯಾಂಕೂ ಇಲ್ಲದೆ, ಒಂದು ಕನ್ನಂಬಾಡಿ ಕಟ್ಟೆಯನ್ನು  ತುಂಬಿಸುವಷ್ಟು ನೀರನ್ನು  ನೂರಾರು ಅಡಿಗಳ ಎತ್ತರದ ಮೋಡಗಳಲ್ಲಿ ಶೇಖರಿಸಿಡುವ ಪ್ರಕೃತಿಯ ಮೇಧಾ ಶಕ್ತಿಯನ್ನು ಮೆಚ್ಚುವವರಾರು? ನೊಬೆಲ್  ಬಹುಮಾನ ನೀಡುವವರಾರು?

ಪ್ರಕೃತಿ ನಮಗೆ ಯಾವಾಗಲೂ ಗುರುವಾಗಿ, ಸ್ಪೂರ್ಥಿದಾಯಕವಾಗಿ ಮೌನವಾಗಿ ಸಲಹೆ ಸೂಚನೆಗಳನ್ನು ಕೊಡುತ್ತಲೇ ಬಂದಿದೆ.  ಮನುಷ್ಯನ ಅನೇಕ ಅನ್ವೇಷಣೆಗಳು  ಪ್ರಕೃತಿಯಿಂದ ನೇರವಾಗಿ  ಕೃತಿಚೌರ್ಯ ಮಾಡಿರುವುದು. ರಸ್ತೆ ಹೆದ್ದಾರಿಗಳಲ್ಲಿ ರಸ್ತೆಯ ಪಥಗಳ ನಡುವೆ, ವಾಹನಗಳ ಹಿಂಭಾಗದಲ್ಲಿ ಹಾಕಿರುವ ಪ್ರತಿಫಲಕಗಳನ್ನು ಕ್ಯಾಟ್ಸ್ ಐ ರಿಫ್ಲೆಕ್ಟರ್ಸ್ ಎನ್ನುತ್ತಾರೆ.

ಕತ್ತಲೆಯಲ್ಲಿ ಸ್ವಲ್ಪವೇ ಬೆಳಕಿದ್ದರೂ ಸಹ ಬೆಕ್ಕಿನ (ಬಹುತೇಕ ಎಲ್ಲ ಪ್ರಾಣಿಗಳ) ಕಣ್ಣುಗಳು ಪ್ರತಿಫಲಿಸುವುದನ್ನು ನೋಡಿರಬಹುದು. ಟ್ಯಾಪಿಟಂ ಲುಸಿಡಿಯಂ ಎಂಬ  ಕಣ್ಣಿನ ಹಿಂದಿರುವ ಬೆಳಕನ್ನು ಪ್ರತಿಫಲಿಸುವ  ಪಟಲವನ್ನು  ಅನುಸರಿಸಿ, ಪರ್ಸಿ ಷಾ ಎಂಬ  ವಿಜ್ಞಾನಿ 1935ರಲ್ಲಿ ರಿಫ್ಲೆಕ್ಟರ್ಸ್ ಕಂಡುಹಿಡಿದ.  ಹಾಗೆಯೇ,  ಸ್ವಿಟ್ಸರ್‍ಲ್ಯಾಂಡಿನ ಜಾರ್ಜ್ ಡಿ ಮೆಸ್ತ್ರಲ್ ಎಂಬ ಎಲಕ್ಟ್ರಿಕಲ್ ಎಂಜಿನಿಯರ್ ತನ್ನ  ನಾಯಿಯೊಂದಿಗೆ ಹೋಗಿ ಬೇಟೆಯಾಡಿ ಬಂದ ನಂತರ ತನ್ನ ಬಟ್ಟೆಗೂ ನಾಯಿಯ ಮೈಮೇಲಿನ ರೋಮಗಳಿಗೂ  ಬಲವಾಗಿ ಕಚ್ಚಿಕೊಂಡಿದ್ದ ಬರ್‍ಡಾಕ್ ಸಸ್ಯದ ಬರ್ ಬೀಜಗಳನ್ನು ಗಮನಿಸಿದ.  ಅವುಗಳಿಗೆ ಕೊಂಡಿಯಂತಹ ತುದಿಗಳಿದ್ದವು. ತನ್ನ ಬಟ್ಟೆ  ಹಾಗೂ  ನಾಯಿ ರೋಮಗಳು ಅದನ್ನು ಹಿಡಿವ ಲೂಪ್‍ಗಳಂತೆ ಇದ್ದವು. ಇದನ್ನು ಗಮನಿಸಿ ಪರ್ರೆಂದು ಹರಿದಂತೆ ಕೀಳಬಲ್ಲ ಮತ್ತೆ ಮತ್ತೆ ಅಂಟಿಸಬಲ್ಲ ವೆಲ್‍ಕ್ರೋ ಕಂಡುಹಿಡಿದ.  ಕ್ಯಾಮರಾ ತಂತ್ರಜ್ಞಾನ ಕಣ್ಣನ್ನು ಅನುಕರಿಸಿ ಮಾಡಿರುವುದು ಎಂದು ಎಲ್ಲರಿಗೂ ಗೊತ್ತಿದೆ.

ಹೀಗೆ  ಪ್ರಕೃತಿಯ ಅತ್ಯುತ್ತಮ ಉಪಾಯಗಳನ್ನು ಅಧ್ಯಯನ ಮಾಡಿ ಅದನ್ನು  ಅನುಕರಿಸಿ ಮನುಷ್ಯನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ತಂತ್ರಕ್ಕೆ ಬಯೋಮಿಮಿಕ್ರಿ ಎಂದು ಹೆಸರು. (ಜೀವಾನುಕರಣೆ) ಬಯೋಮಿಮಿಕ್ರಿಯ ಹಿಂದಿರುವ ಮೂಲಭೂತ ಕಲ್ಪನೆಯೆಂದರೆ, 3.8 ಬಿಲಿಯನ್ ವರ್ಷಗಳ ದೀರ್ಘ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಕೃತಿಯ ವೈಫಲ್ಯಗಳು ಪಳೆಯುಳಿಕೆಗಳಾಗಿವೆ, ಹಾಗೂ ಅದರ ಯಶಸ್ಸು ಇಂದು ನಮ್ಮ ಸುತ್ತಮುತ್ತಲಿದೆ.  ಪ್ರಕೃತಿಯು ನಮ್ಮ ಎಲ್ಲ ಸಮಸ್ಯೆಗಳಿಗೂ ಈಗಾಗಲೇ ಪರಿಹಾರವನ್ನು ಕೊಟ್ಟುಬಿಟ್ಟಿದೆ.  ಪ್ರಾಣಿಗಳು, ಸಸ್ಯಗಳು, ಮತ್ತು ಮೈಕ್ರೋಬುಗಳ ಭಾಷೆಯಲ್ಲಿ ಈ ಉತ್ತರಗಳಿವೆ.   ಬದುಕಿ ಉಳಿಯಬಲ್ಲ ತಂತ್ರಗಳು, ಇಂಧನವನ್ನು ತಯಾರಿಸುವ ತಂತ್ರಗಳು ಎಲ್ಲವೂ  ಪ್ರಕೃತಿ ನಮಗೆ  ಹೇಳಿಕೊಡುತ್ತದೆ—ಕಲಿಯಲು ಸಿದ್ಧವಿದ್ದರೆ.

ಸಸ್ಯಗಳು ಕ್ಲೋರೊಫಿಲ್ ನೆರವಿನಿಂದ  ವಾಯುವಿನಲ್ಲಿರುವ  ಕಾರ್ಬನ್ ಡೈ ಆಕ್ಸೈಡ್‍ಅನ್ನು ಮತ್ತು ನೀರನ್ನು  ಸೌರ ಶಕ್ತಿಯ ನೆರವಿನಿಂದ ಸಂಕೀರ್ಣ ಕಾರ್ಬನಿನ ಸಂಯುಕ್ತಗಳನ್ನು  ಉತ್ಪತ್ತಿ ಮಾಡುವ  ಜೀವ ರಸಾಯನ ಕ್ರಿಯೆಯನ್ನು  ದ್ಯುತಿಸಂಶ್ಲೇಷಣೆ ಎನ್ನುತ್ತಾರೆ.  ಇದು ಹೊಸದೇನಲ್ಲ. ಅನೇಕ ವರ್ಷಗಳಿಂದ ಮಕ್ಕಳು ತಮ್ಮ ಪಾಠಗಳಲ್ಲಿ ಓದುತ್ತಲೇ ಇದ್ದಾರೆ. ಆದರೆ ಇದನ್ನು ಮನುಷ್ಯ ಕೃತಕವಾಗಿ ಮಾಡಿದರೆ?

ಮೆಸ್ಯಾಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಯ  ಡೇನಿಯಲ್ ಜಿ ನೋಸೆರ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಡೇನಿಯಲ್ ಜಿ ನಾಸೆರ  ಕಂಡು ಹಿಡಿದ ಕೃತಕ ಎಲೆಯನ್ನು  ನೀರಿನಲ್ಲಿ ಮುಳುಗಿಸಿ ಸೂರ್ಯನ ಬೆಳಕಿನಲ್ಲಿ ಇಟ್ಟರೆ, ನೀರನ್ನು ವಿಭಜಿಸಿ ಆಮ್ಲಜನಕವನ್ನು ಒಂದು ಕಡೆ ಹಾಗೂ ಜಲಜನಕವನ್ನು ಮತ್ತೊಂದು ಕಡೆಯಿಂದಲೂ ಕೊಡುತ್ತದೆ. ಇದಕ್ಕೆ ಯವ ವಯರುಗಳ ಅಗತ್ಯವಿಲ್ಲ ಅಥವಾ ದುಬಾರಿ ಪ್ಲಾಟಿನಂ ಅಗತ್ಯವಿಲ್ಲ.

2003ರಲ್ಲಿ ಜಾರ್ಜ್ ಬುಷ್ ಹೇಳಿದ್ದರು, ‘ ಇಂದು ಹುಟ್ಟಿದ ಮಗು ಓಡಿಸಿಕೊಂಡು ಹೋಗುವ ಮೊದಲ ಕಾರು ಹೈಡ್ರೋಜಿನ್ ಇಂಧನದಿಂದ  ಓಡುವ ಮಾಲಿನ್ಯರಹಿತವಾದ  ಕಾರಾಗಿರುತ್ತದೆ. 2020ರವೇಳೆಗೆ ಇಂತಹ ತಂತ್ರಜ್ಞಾನ  ತಲುಪಲೆಂದು,  ಇದರ ಸಮ್ಶೋಧನೆಗಾಗಿ 1.2 ಬಿಲಿಯನ್ ಅಮೇರಿಕನ್ ಡಾಲರ್‍ಗಳ ಧನಸಹಾಯವನ್ನು ಮಂಜೂರು ಮಾಡಿದ್ದರು.
ಫ್ಯುಯಲ್ ಸೆಲ್ ತಂತ್ರಜ್ಞಾನ ಹೊಸದೇನಲ್ಲವಾದರೂ ಅದರಲ್ಲಿ  ಇತರ ಇಂಧನದ ಅಗತ್ಯ ಇದ್ದೇ ಇತ್ತು.  ಹೈಡ್ರೋಜಿನ್ ಫ್ಯುಯಲ್ ಸೆಲ್ ಮೊದಮೊದಲು ಜನಪ್ರಿಯವಾಗುವ ಲಕ್ಷಣಗಳನ್ನು ತೋರಿದರೂ ನಂತರ ಬಯೋ ಫ್ಯುಯಲ್ ಹಾಗೂ ಬ್ಯಾಟರೀ ಚಾಲಿತ ವಿದ್ಯುತ್ ವಾಹನಗಳು ಬಂದ ನಂತರ ನೇಪಥ್ಯಕ್ಕೆ  ಸರಿಯಿತು.  ಹೈಡ್ರೋಜಿನ್ ತಯಾರಿಸಲು ದುಬಾರಿಯಾದ ಪ್ಲಾಟಿನಂ ಬೇಕಿತ್ತು. ಇದರಿಂದ ಉತ್ಪಾದನಾ ವೆಚ್ಚ ಹೆಚ್ಚಿ ಮುಂದಿನ ಸಂಶೋಧನೆಗೆ ಉತ್ತೇಜನ ಸಿಗದಂತಾಯಿತು. ಈಗ ಅತಿ ಅಗ್ಗವಾಗಿ ಹೈಡ್ರೋಜಿನ್  ಉತ್ಪಾದಿಸುವ ಕೃತಕ ಎಲೆಯನ್ನು ಕಂಡುಹಿಡಿದಿರುವುದು ಮತ್ತೆ  ಹೈಡ್ರೋಜಿನ್ ಫ್ಯುಯಲ್ ಸೆಲ್‍ಗಳಿಗೆ ಮತ್ತೆ ಜೀವ ಬಂದಂತಾಗಿದೆ.

KIA, Renault, Honda, General Motors, Ford, Nissan, Toyota ಮುಂತಾದ ಪ್ರಖ್ಯಾತ ಕಂಪನಿಗಳು 2015ರ ವೇಳೆಗೆ ಜನರು ಫ್ಯುಯೆಲ್ ಸೆಲ್ ಕಾರುಗಳನ್ನು ಬುಕ್ ಮಾಡಬಹುದು. ಎಮ್ಬ ಭರವಸೆ ನೀಡಿದ್ದಾರೆ.  ಕಾರ್ ತಯಾರಕರಿಗೆ  ಒಂದು ಭರವಸನೀಯ , ಅಗ್ಗದ ಫ್ಯುಯಲ್ ಸೆಲ್ ಬೇಕಿತ್ತು. ಸಿಲಿಕಾನ್, ಕೋಬಾಲ್ಟ್ ಮತ್ತು ನಿಕಲ್ ನಂತಹ ಅತಿ ಅಗ್ಗದ ಹಾಗು ಹೇರಳವಾಗಿ ಪ್ರಕೃತಿಯಲ್ಲಿ ಸಿಗುವವಸ್ತುಗಳನ್ನು ಬಳಸಿ  ಕೃತಕ ಎಲೆ ಮಾಡಲಾಗಿದೆ. ಇದಕ್ಕೆ ಸಾಮಾನ್ಯ ನೀರು ಸಾಕು.  ಒಂದು ಇಸ್ಪೀಟ್ ಎಲೆಯ ಗಾತ್ರದ ಕೃತಕ ಎಲೆ ಒಂದು ಇಡೀ ಹಗಲು ಮತ್ತು ರಾತ್ರಿ ಕಾಲ ವಿದ್ಯುತ್ ಅಗತ್ಯಗಳನ್ನು ಪೂರೈಸುತ್ತದೆ.  ಇದಕ್ಕೆ ಬೇಕಾಗುವ ನೀರು ಕೇವಲ ಒಂದು ಗ್ಯಾಲನ್ ನೀರು.
2015ರ ವೇಳೆಗೆ ಪ್ರಪಂಚಕ್ಕೆ  ಪ್ರತಿದಿನ 14 ಟೆರಾ ವಾಟ್‍ಗಳಷ್ಟು ವಿದ್ಯುತ್ ಬೇಕಾಗುತ್ತದೆ.  ಈ ಅಗತ್ಯವನ್ನು ಮನೆಗೊಂದು  ಕೃತಕ ಎಲೆ ನೀಡಿ, ನೀಗಿಸಬಹುದು.

ಕೃತಕ ಎಲೆ:


ಎಂ.ಐ.ಟಿಯ ವಿಜ್ಞಾನಿ ಡೇನಿಯಲ್  ನೋಸೆರ  ಹಾಗೂ ಅವರ ಸಂಗಡಿಗರು ಕೃತಕ ಎಲೆಯನ್ನು ಸೃಷ್ಟಿಸಿದ್ದಾರೆ ಎಂದು ನೇಚರ್ ಪತ್ರಿಕೆ ಇತ್ತೀಚೆಗೆ ವರದಿ ಮಾಡಿದೆ.  ಕೇವಲ ಒಂದು ಬಕೆಟ್ ನೀರಿನಲ್ಲಿ ಒಂದು ಕೃತಕ ಎಲೆಯನ್ನು ಮುಳುಗಿಸಿ ಸೂರ್ಯನ ಬೆಳಕಿನಲ್ಲಿ ಇಟ್ಟರೆ ಸಾಕು ಒಂದು ಕಡೆಯಿಂದ ಆಮ್ಲಜನಕವೂ ಮತ್ತೊಂದು ಕಡೆಯಿಂದ ಜಲಜನಕವೂ ಗುಳ್ಳೆ ಗುಳ್ಳೆಯಾಗಿ ಬಿಡುಗಡೆಯಾಗುತ್ತವೆ. ಇದಕ್ಕೆ ಯವುದೇ ರೀತಿಯ ವಯರುಗಳ ಅಗತ್ಯವಿಲ್ಲ.  ನೋಸೆರನ ಎಲೆಯಲ್ಲಿ ಈ ಪ್ರಕ್ರಿಯೆ ನಡೆಯಲು ಎರಡು ವೇಗ ವರ್ಧಕಗಳು ಬೇಕಾಗುತ್ತವೆ. ಸೋಲಾರ್ ಪ್ಯಾನೆಲ್‍ನಲ್ಲಿ ಹೇಗೆ ಸೌರ ಶಕ್ತಿ ಸೆರೆ ಹಿಡಿಯಲಾಗುತ್ತದೋ ಇಲ್ಲೂ ಹಾಗೆಯೇ ಸಿಲಿಕಾನ್ ವಸ್ತುಗಳನ್ನು ಬಳಸಲಾಗುತ್ತದೆ.  ಆದರೆ ಇಲ್ಲಿ ವಯರುಗಳ  ಬದಲು ವೇಗವರ್ಧಕಗಳನ್ನು  ಹಚ್ಚಲಾದ ಸಿಲಿಕಾನ್ ತಂತುಗಳನ್ನು ನೀರಿನಲ್ಲಿ ಮುಳುಗಿಸಿಡಬೇಕು.

ಹೀಗೆ ಬಿಡುಗಡೆಯಾದ ಹೈಡ್ರೋಜಿನ್‍ಅನ್ನು ಫ್ಯುಯಲ್ ಸೆಲ್‍ಗಳ ಕಚ್ಚಾ ವಸ್ತುವಾಗಿ ಬಳಸಿ ವಿದ್ಯುತ್ ಉತ್ಪದಿಸಬಹುದು. ಇದಕ್ಕೆ ಯಾವುದೇ ರೀತಿಯ ನೀರು ಇದ್ದರೂ ನಡೆಯುತ್ತದೆ.  ಅತಿ ಶುಚಿಯಾದ ನೀರೇ ಬೇಕೆಂದೇನೂ ಇಲ್ಲ. ವಿಜ್ಞಾನಿಗಳಿಗೆ ಈಗಿರುವ ಸಮಸ್ಯೆ ಏನೆಂದರೆ, ಇದನ್ನು ಪ್ರಯೋಗಾಲಯದಿಂದ ಮನೆಯ ಛಾವಣಿಗೆ ಅಥವಾ ವಾಹನದೊಳಕ್ಕೆ ಹೇಗೆ ಕೊಂಡೊಯ್ಯುವುದು ಎಂಬುದು.  ಮನೆಯ ಮೇಲೆ ಗಾಜಿನ ತೊಟ್ಟಿಯಲ್ಲಿ ನೀರು, ಅದರಲ್ಲಿ ಈ ಮಾಯಾ ಎಲೆ. ಸೂರ್ಯನ ಬಿಸಿಲಿನ ಸಹಾಯದಿಂದ ಈ ಎಲೆ ನೀರನ್ನು  ಆಕ್ಸಿಜನ್ ಹಾಗೂ ಹೈಡ್ರೋಜಿನ್ ಆಗಿ ವಿಭಜಿಸುತ್ತದೆ.  ಹೀಗೆ ಬಿಡುಗಡೆಯಾದ ಹೈಡ್ರೋಜಿನ್‍ಅನ್ನು ಹೇಗೆ ಸಂಗ್ರಹಿಸಿ ಫ್ಯುಯಲ್ ಸೆಲ್‍ಗೆ ಒದಗಿಸ ಬೇಕೆಂದು ಅದರ ಸಂಗ್ರಹ ಮತ್ತು ರವಾನೆ ಬಗ್ಗೆ ವಿನ್ಯಸ ನಡೆಯುತ್ತಿದೆ.
ಇಂದು ಸೌರ ಶಕ್ತಿಯನ್ನು ಫೆÇೀಟೋ ವೋಲ್ಟಾಯಿಕ್ ಪ್ಯಾನೆಲ್‍ಗಳ ಬ್ಯಾಟರಿಯಲ್ಲಿ ಶೇಖರಿಸಲಾಗುತ್ತಿದೆ. ಆದರೆ ಅದು ತುಮ್ಬಾ ದುಬಾರಿಯಾಗಲು ಅದರ ವಯರಿಂಗ್ ಮತ್ತು ಪ್ಯಾಕೇಜಿಂಗ್ ಕಾರಣವಾಗುತ್ತಿದೆ.  ಕೃತಕ ಎಲೆಯಲ್ಲಿ ಈ ಸಮಸ್ಯೆ ಇಲ್ಲವೇ ಇಲ್ಲ. ಹೀಗಾಗಿ ಇದು ಅಗ್ಗವಾಗುವ ಸಂಶಯವಿಲ್ಲ. ನೈಸರ್ಗಿಕ ವಾದ ಎಲೆಯ ಮೇಲೆ ಬೀಳುವ ಸೂರ್ಯನ ಬೆಳಕಿನ ಕೇವಲ ಶೇಕಡಾ ಒಂದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಶಕ್ತಿಯಾಗಿ ಪರಿವರ್ತಿಸುತ್ತದೆ. ಆದರೆ ಕೃತಕ ಎಲೆಯ ಸಾಮಥ್ರ್ಯ ಶೇ. ಐದರಷ್ಟು ಇದೆ ಎಂದು ನೇಚರ್ ಪತ್ರಿಕೆ ವರದಿ ಮಾಡಿದೆ.

ನೀರನ್ನು ಬೇರ್ಪಡಿಸುವ ಎಲೆಕ್ಟ್ರೋಲೈಸರ್‍ಗಳು ನೀರಿನಲ್ಲಿರುವ ಫಾಸ್ಫೇಟ್ ಮತ್ತು ಬೋರೇಟ್‍ಗಳ ಪ್ರಭಾವದಿಂದ ಬೇಗ ನಿಶ್ಪ್ರ ಯೋಜಕವಾಗಿ ಬಿಡುತ್ತವೆ. ಆದರೆ ಈ ವೇಗ ವರ್ಧಕಗಳಿಗೆ  ಸ್ವತಹ  ತಾವೇ ಸರಿಹೋಗುವ ಸಾಮಥ್ರ್ಯವನ್ನು ಹೊಂದಿದೆ.  ಸನ್ ಕ್ಯಟಲಿಟಿಕ್ಸ್ ಕಂಪೆನಿಯನ್ನು ಸ್ಥಾಪಿಸಿಸ್ರುವ  ನೋಸೆರ  ಕೃತಕ ಎಲೆಯ ಪೇಟೆಂಟ್ ಪಡೆದಿದ್ದಾರೆ.  ಇವರೊಂದಿಗೆ ಟಾಟಾ ಗ್ರೂಪ್ ನವರು ಒಂದು ಒಪ್ಪಂದಕ್ಕೆ ಬಂದಿದ್ದಾರೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಬಹಿರಂಗ ಪಡಿಸಿಲ್ಲವಾದರೂ, 15 ಮಿಲಿಯನ್  ಅಮೆರಿಕನ್ ಡಾಲರ್6ಗಳ ನೆರವು ನೋಸೆರಾ ಸಂಶೋಧನೆಗೆ ನೀಡಿದ್ದಾರೆ.
ಈ ವರ್ಷದ ಮಾರ್ಚಿ 31ರಂದು ನಡೆದ ಈ ಒಪ್ಪಂದದ ಪ್ರಕಾರ ಹೈಡ್ರೋಜಿನ್ ಅನ್ನು  ಕಂಪ್ರೆಸ್ಡ್ ರೂಪದಲ್ಲಿ ಕಾರಿನಲ್ಲಿ ಹಿಡಿಸಬಹುದಾದ ಗಾತ್ರದ ಕೋಶದಲ್ಲಿ ಕ್ಷೇಮವಾಗಿ ಹಿಡಿದಿಟ್ಟು ಅದನ್ನು ಇಂಧನವಾಗಿ ಬಳಸುವ ತಂತ್ರಜ್ಞಾನದಮೇಲೆ ಟಾಟಾ ಗ್ರೂಪಿಗೆ ನಿಯಂತ್ರಣವಿರುತ್ತದೆ.  ವಿಶ್ವದ ಅತಿ ಅಗ್ಗದ ಕಾರನ್ನು  ತಯಾರಿಸಿ ದಾಖಲೆ ಮಾಡಿರುವ ರತನ್ ಟಾಟಾ ಖ್ಯಾತಿಗೆ  ಇಂಧನವಾಗಿ ನೀರನ್ನು ಬಳಸುವ ಕಾರನ್ನು ಮಾರುಕಟ್ಟೆಗೆ ತಂದವರೆಂಬ ಹೆಗ್ಗಳಿಕೆಯೂ ಬರಬಹುದು.  ನೋಸೆರಾ ನ ಸಂಶೋಧನೆಯನ್ನು ಮಾರುಕಟ್ಟೆಗೆ ತರುವ ಒಪ್ಪಂದವನ್ನು ಮಾಡಿಕೊಂಡಿರುವ ಟಾಟಾ ಗ್ರೂಪ್‍ಗೆ ಇನ್ನೊಂದು ವರ್ಷದಲ್ಲಿ ಚಿಕ್ಕ ರೆಪ್ರೆಜಿರೇಟರ್ ಗಾತ್ರದ  ಪವರ್ ಪ್ಲಾಂಟ್‍ಅನ್ನು  ಸಿದ್ಧಪಡಿಸಿ ಕೊಡಲಾಗುತ್ತದೆ.  ಈ ಒಪ್ಪಂದದಿಂದ ಸಮಾಧಾನಕರ ಫಲಿತಾಂಶ ದೊರೆತರೆ  ಅದು ಟಾಟಾ-ನೋಸೆರಾ ದಿಗ್ವಿಜಯ ಮಾತ್ರವಲ್ಲ ಇಡೀ ಮನುಕುಲದ ದಿಗ್ಚಿಜಯವೇ ಆಗುತ್ತದೆ.
ಈ ಎಲೆ ತಂತ್ರಜ್ಞಾನವು ಸ್ಥಾವರ ರಚನೆಗಳಿಗೆ ( ಮನೆ, ಫ್ಯಾಕ್ಟರಿ ಇತ್ಯಾದಿ) ಹೆಚ್ಚು ಸೂಕ್ತವಾಗಿದ್ದಂತೆ ಕಂಡುಬರುತ್ತದೆ. ಆದರೂ ಹೌಡ್ರೋಜಿನ್ ಫ್ಯುಯಲ್ ಸೆಲ್ ವಾಹನಗಳತ್ತ ಟಾಟಾ ಗ್ರೂಪಿಗೆ ಹೆಚ್ಚು ಆಸಕ್ತಿ ಇರುವುದು ಸಹಜ.

-ಲೇಖನ
ಡಾ|| ಉದಯರವಿ ಶಾಸ್ತ್ರೀ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate