অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಸುರಕ್ಷಿತ ಅಣು ಶಕ್ತಿ: ಥೋರಿಯಮ್

ಭಾರತೀಯ ವಿಜ್ಞಾನಿಗಳು ಅತ್ಯಂತ ಸುರಕ್ಷಿತವಾದ ಅಣುಸ್ಥಾವರವನ್ನು ರೂಪಿಸಿದ್ದು, ಇಷ್ಟರಲ್ಲೇ ಅಂತಹ ಒಂದು ಘಟಕವನ್ನು ಮುಂಬೈ ಬಳಿಯ ತಾರಾಪುರದಲ್ಲಿ ಸ್ಥಾಪಿಸಲಿದ್ದಾರೆ ಎಂಬ ಸುದ್ದಿ ಕೆಲವೇ ದಿನಗಳ ಹಿಂದೆ ದಿನ ಪತ್ರಿಕೆಗಳಲ್ಲಿ ನಾವು ಓದಿದ್ದೇವೆ.

ಇಂದು ನಾಗರೀಕ ಸಮಾಜದಲ್ಲಿ ನಮಗೆ ಅಪಾರ ಪ್ರಮಾಣದ ಇಂಧನ ಬೇಕು. ದಿನೇ ದಿನೇ ಮನುಷ್ಯನ ಇಂಧನದ ಅಗತ್ಯಗಳು ಹೆಚ್ಚುತ್ತಲೇ ಇವೆ.  ಈಗ ಅಸಾಂಪ್ರದಾಯಿಕ ಇಂಧನ ಮೂಲಗಳತ್ತ ಜನ ನೋಡಲು ಪ್ರಯತ್ನಿಸುತ್ತಿದ್ದಾರೆ. ಪವನ ಶಕ್ತಿ ಹಾಗೂ ಸೌರ ಶಕ್ತಿಯ ಉತ್ಪಾದನೆಗೆ ತನ್ನದೇ ಆದ ಮಿತಿಗಳುಂಟು. ಪೆಟ್ರೋಲಿಯಂ ಇಂಧನವು ಇನ್ನು ಇಪ್ಪತ್ತು ವರ್ಷಗಳು ಬಂದರೆ ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಅವಲಂಬಿಸಬಹುದಾದ ದೊಡ್ಡ ಪ್ರಮಾಣದ ಇಂಧನದ ಅಗತ್ಯ ತುರ್ತಾಗಿದೆ.

ಚೆರ್ನೋಬಿಲ್, ಥ್ರೀ-ಮೈಲ್-ಐಲ್ಯಾಂಡ್, ಹಾಗೂ ಫುಕೋಶೀಮಾದಂತಹ ಅಣುಸ್ಥಾವರ ದುರಂತಗಳನ್ನು ನೋಡಿ, ಅನುಭವಿಸಿದ ನಂತರ, “ಅಣುಸ್ಥಾವರ” ಹಾಗೂ “ಸುರಕ್ಷಿತ” ಇವೆರಡೂ  ಒಂದೇ ಉಸಿರಿನಲ್ಲಿ ಹೇಳಲು ಸಾಧ್ಯವಿರದ ಇಜ್ಜೋಡು  ಪದಗಳು ಎನಿಸಿವೆ. ಶಿವರಾಮ ಕಾರಂತರಿಗೂ ಅಣುಸ್ಥಾವರಗಳ ಸುರಕ್ಷೆಯ ಬಗ್ಗೆ ಎನೂ ಭರವಸೆ ಇರಲಿಲ್ಲ. ಪರಿಸರವಾದಿಗಳಿಗೆ ಬೆಂಬಲ ನೀಡಿ ಕೈಗಾ ಅಣುಸ್ಥಾವರದ ಸ್ಥಾಪನೆಯ ವಿರುದ್ಧ ಹೋರಾಟ ನಡೆಸಿದ್ದು ನಮಗೆಲ್ಲಾ ನೆನಪಿದೆ.   ಜೊತೆಗೆ ವಿಶ್ವದ ಒಟ್ಟು ಸಂಪನ್ಮೂಲದಲ್ಲಿ ಕೇವಲ 1.5% ರಷ್ಟು ಯುರೇನಿಯಂ ಹೊಂದಿರುವ ಭಾರತಕ್ಕೆ ಕಚ್ಚಾ ಸಾಮಗ್ರಿ ಆಮದು ಮಾಡಿಯಾದರೂ  ಅಣುಸ್ಥಾವರ ನಡೆಸಬೇಕೆಂಬ ವ್ಯಾಮೋಹವೇಕೆ ಎಂದೂ ಅನಿಸುತ್ತದೆ.

ಆದರೆ, ಇಂದು ಲಭ್ಯವಿರುವ ಅಣು ತಂತ್ರಜ್ಞಾನವು ಒದಗಿಸಬಲ್ಲ ಸುರಕ್ಷೆಗಿಂತಲೂ 200 ಪಟ್ಟು ಹೆಚ್ಚು ಕ್ಷೇಮವಾಗಿ ಅಣುಶಕ್ತಿಯನ್ನು ತಯಾರಿಸಬಲ್ಲ ಅಣುಸ್ಥಾವರಗಳನ್ನು ನಿರ್ಮಿಸಬಹುದು. ಆದರೆ ಅದರಲ್ಲಿ ಬಳಸುವ ಇಂಧನ ಯುರೇನಿಯಂ ಅಲ್ಲ, ಥೋರಿಯಂ.
ಥೋರಿಯಂ ಶಕ್ತಿ ಸಾಮಥ್ರ್ಯಗಳನ್ನು ಮೊದಲು ನೋಡೋಣ. ಐದು ಸಾವಿರ ಟನ್ ಯುರೇನಿಯಂ, ಐದು ಬಿಲಿಯನ್ ಟನ್‍ಗಳಷ್ಟು ಕಲ್ಲಿದ್ದಲು ಹಾಗೂ  31 ಬಿಲಿಯನ್ ಬ್ಯಾರಲ್‍ಗಳಷ್ಟು ಪೆಟ್ರೋಲಿಯಂ ತೈಲ ಹಾಗೂ ಐದು ಟ್ರಿಲಿಯನ್ ಘನ ಮೀಟರ್‍ಗಳಷ್ಟು ನೈಸರ್ಗಿಕ ಅನಿಲ ಇವೆಲ್ಲವೂ ಒಟ್ತಿಗೆ ನೀಡಬಲ್ಲ ಶಕ್ತಿಯನ್ನು ಕೇವಲ ಐನೂರು ಟನ್ ಥೋರಿಯಮ್ ನೀಡಬಲ್ಲದು.

ಯುರೇನಿಯಂ, ಚಿನ್ನ ಅಥವಾ ಪ್ಲಾಟಿನಂನಷ್ಟು ಅಪರೂಪ ಹಾಗೂ ದುಬಾರಿ ವಸ್ತುವಾದರೆ, ಥೋರಿಯಂ, ಸೀಸ (ಲೆಡ್) ದಷ್ಟು ಅಗ್ಗ ಮತ್ತು ಹೇರಳವಾಗಿ ಸಿಗಬಲ್ಲ  ವಸ್ತು. ಕೇವಲ ಒಂದೇ ಒಂದು ರೇರ್ ಅರ್ಥ್ ಗಣಿಯಲ್ಲಿ ಸಿಗಬಹುದಾದ ಥೋರಿಯಮ್ ಇಡೀ ಪ್ರಪಂಚದ ಇಂಧನ ಅವಶ್ಯಕತೆಗಳನ್ನು ಪೂರೈಸ ಬಲ್ಲದು.

ಥೋರಿಯಂನ ಅರ್ಥ ಆಯುಷ್ಯ 14 ಬಿಲಿಯನ್ ವರ್ಷಗಳು. ಹೀಗಾಗಿ ಅದು ಅತ್ಯಂತ ಕನಿಷ್ಟ ರೇಡಿಯೋ ಆ್ಯಕ್ಟಿವ್ ಆಗಿರುತ್ತದೆ. ಥೋರಿಯಂ ನಿಂದ ಪರಮಾಣು ಆಯುಧಗಳನ್ನು ಮಾಡಲು ಸಾಧ್ಯವಿಲ್ಲ!!  ಭೂಮಿಯಲ್ಲಿ ಸೀಸ (ಲೆಡ್) ಸಿಗುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಥೋರಿಯಂ ಲಭ್ಯವಿದೆ. ಭೂಮಿಯಲ್ಲಿ ಲಭ್ಯವಿರುವ ಥೋರಿಯಂ ಶಕ್ತಿ ಮೌಲ್ಯವು ಭೂಮಿಯಲ್ಲಿರುವ ಎಲ್ಲಾ ಯುರೇನಿಯಂ, ಹಾಗೂ ಪೆಟ್ರೋಲಿಯಂ ಇಂಧನಗಳ ಒಟ್ಟು ಸಾಮಥ್ರ್ಯಕ್ಕಿಂತ  ಹೆಚ್ಚು. ಕೇವಲ ಒಂದು ಟನ್ ಥೋರಿಯಂ 200 ಟನ್ ಗಳಷ್ಟು ಯುರೇನಿಯಂ ನಷ್ಟು ಸಮಾನ. ಒಂದು ಪೌಂಡ್ ಥೋರಿಯಂ ಶಕ್ತಿಯು ಮೂರು ಮಿಲಿಯನ್ ಪೌಂಡ್ ಕಲ್ಲಿದ್ದಲಿಗೆ ಸಮ!!

ಸರಾಸರಿ ಒಬ್ಬ ಅಮೆರಿಕನ್ ಒಂದು ವರ್ಷದ ಕಾಲದಲ್ಲಿ ಬಳಸುವ ವಿದ್ಯುತ್‍ನ ಪ್ರಮಾಣದಷ್ಟು ಇಂಧನವನ್ನು  ಒಂದು ಒಳ್ಳೆಯ ಸೇಬಿನ ಗಾತ್ರದ (3.5” ಡಯಾಮೀಟರ್) ಥೋರಿಯಂನಿಂದ  ಎಂಟು ಸಾವಿರ ವರ್ಷಗಳ ಕಾಲ ಪಡೆಯಬಹುದು.
ಥೋರಿಯಂ ಪ್ಲಾಸ್ಮಾ ಬ್ಯಾಟರಿ ಹೊಂದಿದ  ಕಾರನ್ನು ನೀವು ಕೊಂಡರೆ, ಶೋ ರೂಮಿನಿಂದ ಹೊರ ಬಂದಾಗಿನಿಂದ ಆ ಕಾರು ಜೀರ್ಣಾವಸ್ಥೆಗೆ ಬರುವ ವರೆಗೂ ನೀವು ಮತ್ತೆ ಪೆಟ್ರೋಲ್ ಬಂಕ್ ಕಡೆ ತೆಲೆ ಹಾಕುವ ಅಗತ್ಯವಿರುವುದಿಲ್ಲ!

ಏನಿದು ಥೋರಿಯಂ?


ಥೋರಿಯಂ, ನೈಸರ್ಗಿಕವಾಗಿ ಸಿಗುವ ಸ್ವಲ್ಪ ಪ್ರಮಾಣದಲ್ಲಿ ರೇಡಿಯೋ ಆ್ಯಕ್ಟಿವ್ ಆದ ಲೋಹ.  ಇದು ಶುಧ್ಧವಾಗಿರುವಾಗ ಬೆಳ್ಳಿಯಂತೆ ಅನೇಕ ತಿಂಗಳುಗಳ ಕಾಲ ಹೊಳೆಯುತ್ತಲಿರುತ್ತದೆ. ಆದರೆ ತುಕ್ಕು ಹಿಡಿದರೆ (ಗಾಳಿಯ ಪ್ರಭಾವದಿಂದ, ಥೋರಿಯಂ ಕ್ರಮೇಣ ತನ್ನ ಹೊಳಪನ್ನು ಕಳೆದುಕೊಂಡು, ಬೂದು ಬಣ್ಣಕ್ಕೂ, ಕಪ್ಪು ಬಣ್ಣಕ್ಕೂ ತಿರುಗುತ್ತದೆ. ಇದು ಅರೆ-ಆಯಸ್ಕಾಂತೀಯ ಗುಣವನ್ನು ಹೊಂದಿದೆ. ಥೋರಿಯಂ ಆಕ್ಸೈಡ್ ಅನ್ನು ಥೋರಿಯಾ ಎಂದೂ ಕರೆಯುತ್ತಾರೆ. ಇದರ ಕುದಿಯುವ ತಾಪಮಾನ 3,300 ಡಿಗ್ರಿ ಸೆಂಟಿಗ್ರೇಡ್.

ಚರಿತ್ರೆ


ನೋರ್ಸ್ ಸಂಸ್ಕೃತಿಯಲ್ಲಿ ಗುಡುಗಿನ ದೇವತೆ “ಥೋರ್” ನಿಂದ ಬಂದ ಹೆಸರು ಥೋರಿಯಮ್. ಸ್ವೀಡನ್ನಿನ ರಸಾಯನ ಶಾಸ್ತ್ರದ ವಿಜ್ಞಾನಿ ಜಾನ್ಸ್ ಜ್ಯಾಕಬ್ ಬರ್ಝಿಲಿಯಸ್ ಥೋರಿಯಮ್ ಅನ್ನು 1828ರಲ್ಲಿ ಕಂಡುಹಿಡಿದ. 1885ರಲ್ಲಿ ಲ್ಯಾಂಟರ್ನ್ ನಲ್ಲಿ ಬಳಸುವ ಮ್ಯಾಂಟಲ್ ಮಾಡಲು ಇದನ್ನು ಬಳಸಿದ ನಂತರ ಬೇರೆ ಯಾವ ಪ್ರಯೋಜನವೂ ಇದರಿಂದ ಕಂಡುಕೊಂಡಿರಲಿಲ್ಲ.

ಇದರ ಪ್ರಯೋಜನಗಳು ಏನು?

ಗ್ಯಾಸ್ ಲೈಟುಗಳಲ್ಲಿ ಮ್ಯಾಂಟಲ್ ಆಗಿ ಬಳಸುವುದು ಇದನ್ನೇ. ಮೆಗ್ನಿಶಿಯಮ್ ತಯಾರಿಕೆಯಲ್ಲಿ ಮಿಶ್ರ ಲೋಹವಾಗಿ ಇದನ್ನು ಬಳಸುತ್ತಾರೆ.  ವಿದ್ಯುನ್ಮಾನ ವಸ್ತುಗಳಲ್ಲಿ ಟಂಗ್‍ಸ್ಟನ್ ವಯರನ್ನು ಥೋರಿಯಂ ನಲ್ಲಿ ಲೇಪನ ಮಾಡುತ್ತಾರೆ. ಎಲಕ್ಟ್ರೋಡ್ ಗಳ ವೆಲ್ಡಿಂಗ್ ನಲ್ಲಿ ಹಾಗೂ ಶಾಖನಿರೋಧಕ ಪಿಂಗಾಣಿವಸ್ತುಗಳಲ್ಲಿ ಬಳಸಲಾಗುತ್ತದೆ.  ಅತಿ ಹೆಚ್ಚು ಉಷ್ಣವನ್ನು ತಡೆದುಕೊಳ್ಳಬಲ್ಲ ಪ್ರಯೋಗಾಲಯ ಪಾತ್ರೆಗಳನ್ನು ತಯಾರಿಸಲು ಬಳಸಲಾಗುತ್ತದೆ. ಕ್ಯಾಮರಾಗಳಿಗೆ ಬಳಸುವ ಉತ್ತಮ ಗುಣಮಟ್ಟದ ಗಾಜಿನ ಮಸೂರಗಳನ್ನು ಹಾಗೂ ಇತರ ವೈಜ್ಞಾನಿಕ ಉಪಕರಣಗಳನ್ನು ತಯಾರಿಸಲು ಬಳಸುತ್ತಾರೆ. ಅಮೋನಿಯಾವನ್ನು ನೈಟ್ರಿಕ್ ಆಸಿಡ್ ಆಗಿ ಪರಿವರ್ತಿಸುವಲ್ಲಿ ವೇಗ ವರ್ಧಕವಾಗಿ ಬಳಸಲಾಗುತ್ತದೆ. ಪ್ರಾಚೀನ ಪಳೆಯುಳಿಕೆಗಳ ಕಾಲ ನಿರ್ಣಯಮಾಡಲು ಬಳಸಲಾಗುತ್ತದೆ.

ಪರಮಾಣು ಶಕ್ತಿ ಉತ್ಪಾದನೆಯ ಪ್ರಯೋಜನದ ಮುಂದೆ ಇದರ ಬೇರೆ  ಯಾವ   ಪ್ರಯೋಜನಗಳೂ ಗೌಣವಾಗಿ ಕಾಣುತ್ತದೆ.


ಥೋರಿಯಂ ಎಲ್ಲಿ ಲಭ್ಯ?


ಕಳೆದ 4.5 ಬಿಲಿಯನ್ ವರ್ಷಗಳಿಂದ ಥೋರಿಯಂ ಭೂಮಿಯ ಸೃಷ್ಟಿಗಿಂತಲೂ ಮೊದಲಿನಿಂದಲೂ ಇದೆ. ಅದರ ರೇಡಿಯೋ ಆಕ್ಟಿವ್ ಸವೆತದಿಂದ ಭೂಮಿಯ ಆಂತರಿಕ ಶಾಖ ಉಂಟಾಯಿತು ಎಂದು ನಂಬಲಾಗಿದೆ. ಥೋರಿಯಂ ಎಲ್ಲ ಖಂಡಗಳಲ್ಲೂ ಲಭ್ಯ.  ಸಮುದ್ರದ ತೀರದ ಮರಳಿನಲ್ಲಿ, ಕಲ್ಲುಗಳಲ್ಲಿ ಹಾಗೂ ರೇರ್ ಅರ್ಥ್‍ಗಳಲ್ಲಿ  (ಮೋನಝೈಟ್‍ನಲ್ಲಿ) ಥೋರಿಯಂ ಲಭ್ಯ. ಇದರ ಗಣಿಗಾರಿಕೆ ಹಾಗೂ ಶುದ್ಧೀಕರಣ ಬಹಳ ಸುಲಭ.
ಸತತ ಲೋಡ್ ಶೆಡ್ಡಿಂಗ್, ದುಬಾರಿ ವಿದ್ಯುತ್ ಬಿಲ್‍ಗಳು, ಸೌದೆ, ಕಲ್ಲಿದ್ದಲು ಉರವಲಿನಿಂದ ವಾಯುಪ್ರದೂಷ, ವಿದ್ಯುತ್ತಿಲ್ಲದೆ ನೀರಿನ ಅಸಮರ್ಪಕ ಪೂರೈಕೆ, ಇಂತಹ ಅನೇಕ ಸಮಸ್ಯೆಗಳನ್ನು  ಎದುರಿಸುತ್ತಿರುವ ಭಾರತದಲ್ಲಿ ಪ್ರಪಂಚದ ಅತ್ಯಧಿಕ ಪ್ರಮಾಣದಲ್ಲಿ ಥೋರಿಯಂ ಇದೆ ಎಂಬುದು ಎಂತಹ ವ್ಯಂಗ್ಯ! ಥೋರಿಯಂ ಮಟ್ಟಿಗೆ ಹೇಳುವುದಾದರೆ, ಭಾರತವೇ ಸೌದೀ ಅರೇಬಿಯ.


ಅಂದಾಜು  ಟನ್ನುಗಳಲ್ಲಿ (2011)

ದೇಶ ನಿಕ್ಷೇಪ
ಭಾರತ 963,000
ಅಮೆರಿಕ 440,000
ಆಸ್ಟ್ರೇಲಿಯ 300,000
ಕೆನಡಾ 100,000
ದಕ್ಷಿಣ ಆಫ್ರಿಕಾ 35,000
ಬ್ರೆಝಿಲ್ 16,000
ಮಲೇಶಿಯಾ 4,500
ಇತರ 90,000
ಒಟ್ಟು 1,913,000

ಸುರಕ್ಷೆ:


ಥೋರಿಯಂ ಅಣುಸ್ಥಾವರಗಳು, ಯುರೇನಿಯಂ ಅಣುಸ್ಥಾವರಗಳ ಹಾಗೆ ‘ಮೆಲ್ಟ್-ಡೌನ್’ ಆಗುವುದಿಲ್ಲ.  ಯುರೇನಿಯಂ ಅಣು ಸ್ಥಾವರಗಳಲ್ಲಿ ಅತಿಯಾದ ಒತ್ತಡ ಹಾಗೂ ಅತ್ಯಧಿಕ ತಾಪಮಾನಗಳು ಇರುತ್ತವೆ. ಇದರಿಂದ ಶೀತಲೀಕರನದ ಪೈಪುಗಳಲ್ಲಿ ಸೋರಿಕೆ ಕಂಡುಬರುತ್ತದೆ. ನಿಯಂತ್ರಿಸಲಾಗದ ಅಟಾಮಿಕ್ ಸ್ಫೋಟಗಳಿಗೆ ಒಳಪಡುವ ಯುರೇನಿಯಂನಿಂದ ಇದುವರೆಗೆ ಆಗಿರುವ ದುರಂತಗಳಂತೆ ಥೋರಿಯಂ ಅಣುಸ್ಥಾವರದಲ್ಲಿ ಆಗುವುದಿಲ್ಲ.  ಏಕೆಂದರೆ, ಇದಕ್ಕೆ ಸಾಧಾರನ ಗಾಳಿಯ ಒತ್ತಡವಿದ್ದರೆ ಸಾಕು. ಅಂತಹ ಅಪಾಯದ ಪರಿಸ್ಥಿತಿ ಬಂದರೆ, ತಾನೇ ತಾನಾಗಿ ಶಟ್_ಡೌನ್ ಆಗುವ ವ್ಯವಸ್ಥೆ ಇರುತ್ತದೆ. ಯುರೇನಿಯಂ ಅಣುಸ್ಥಾವರದ ಹಾಗೆ ಇಲ್ಲ್ ಪವರ್ ರಾಡ್‍ಗಳನ್ನು ಬಳಸದೆ,  ದ್ರವರೂಪದ ಥೋರಿಯಮ್ಮನು ಬಳಸಲಾಗುತ್ತದೆ. ಹೀಗಾಗಿ ಅವಗಢಗಳು ಉಂಟಾಗುವ ಸಾಧ್ಯತೆ ಬಂದಾಗ ದ್ರವ ಥೋರಿಯಂ ತೊಂದರೆ ಮಾಡದೆ  ಡ್ರೈನ್ ಆಗಿ ಹೋಗುವಂತೆ ಸ್ವಯಂಚಾಲಿತ ತೂಬುಗಳ ವ್ಯವಸ್ಥೆ ಇರುತ್ತವೆ. ಯುರೇನಿಯಂ ಅಣುಸ್ಥಾವರಗಳು ಕೇವಲ 5% ಶಕ್ತಿಯನ್ನು ಬಳಸಿಕೊಳ್ಳುತ್ತದೆ. ನಂತರ ತ್ಯಾಜ್ಯದಲ್ಲಿ ಶೇ. 95 ರಷ್ಟು ಶಕ್ತಿ ಇನ್ನೂ ಉಳಿದಿರುತ್ತದೆ. ಇದರಿಂದಲೇ ತ್ಯಾಜ್ಯದ ವಿಲೇವಾರಿ ಸಮಸ್ಯೆ, ವಿಕಿರಣಗಳ ಬಾಧೆ ಉಂಟಾಗುವುದು. ಆದರೆ ಥೋರಿಯಂ ತ್ಯಾಜ್ಯದಲ್ಲಿ ಈ ರೀತಿಯ ಸಮಸ್ಯೆ ಇರುವುದಿಲ್ಲ. ಅದನ್ನು ಪುನರ್-ಬಳಕೆ (ರೀಸೈಕಲ್) ಮಾಡಬಹುದು. ಹೀಗೆ ರೀ ಸೈಕಲ್ ಮಾಡಿದರೆ ತ್ಯಾಜ್ಯದ ಜೀವಿತಾವಧಿಯನ್ನು 300 ವರ್ಷಗಳಷ್ಟು ಕಡಿಮೆ ಮಾಡಬಹುದು. ಜನ ನಿಬಿಡ ನಗರ ಪ್ರದೇಶಗಳಲ್ಲೇ ಇದರ ಸ್ಥಾವರಗಳನ್ನು ಕಟ್ಟಿಕೊಂಡಿದ್ದರೂ ಯಾವುದೇ ರೀತಿಯ ತೊಂದರೆ ಇರುವುದಿಲ್ಲ.


ರಾಜಕೀಯ ಪಿತೂರಿ
ಇಷ್ಟೆಲ್ಲಾ ಸದ್ಗುಣ ಸಂಪನ್ನನಾದ ಥೋರಿಯಂ ಬಗ್ಗೆ ನಾವು ಹೆಚ್ಚಾಗಿ ಏಕೆ ಕೇಳುತ್ತಿಲ್ಲ? ಚರಿತ್ರೆಯಲ್ಲಿ ಅನೇಕ ನಿಗೂಢ ಘಟನೆಗಳು ನಡೆದಿವೆ, ಅನೇಕ ರಾಜಕೀಯ ನಿರ್ಧಾರಗಳನ್ನೂ ಒಳಗೊಂಡಂತೆ, ಯು.ಎಫ್.ಓ. ಗಳಿಂದ ಹಿಡಿದು ಅತೀಂದ್ರಿಯ ಶಕ್ತಿಗಳ ತನಕ,  ಎಷ್ಟೋ ಪ್ರಶ್ನೆಗಳಿಗೆ ಉತ್ತರ ದೊರೆತಿಲ್ಲ.
ಪ್ರಪಂಚದಲ್ಲಿ ತಯಾರಿಸಿದ ಮೊಟ್ಟ ಮೊದಲ ಕಾರು ವಿದ್ಯುತ್ ಕಾರ್ ಎಂದು ಬಹಳಷ್ಟು ಜನರಿಗೆ ತಿಳಿದಿಲ್ಲ. ಜನರಲ್ ಮೋಟಾರ್ಸ್ ನವರು ತಯಾರಿಸಿ ಭೋಗ್ಯಕ್ಕೆ ಮಾರುತ್ತಿದ್ದ ಸುಮಾರು ಐದು ಸಾವಿರ ವಿದ್ಯುತ್ ಕಾರುಗಳನ್ನು ಹಿಂದೆ ಪಡೆದು ಕ್ರಷ್ ಮಾಡಿ ಧ್ವಂಸ ಮಾಡಿದುದರ ಹಿಂದೆ ಪೆಟ್ರೋಲ್ ಮಾಫಿಯಾದ ಕೈವಾಡ ಇದ್ದಿತು. ಒಂದು ವೇಳೆ ಜನರಲ್ ಮೋಟಾರ್ಸ್ ನವರು ತೈಲ ವ್ಯಾಪಾರಿಗಳ ಪ್ರಲೋಭನೆಗೆ ಬೀಳದೆ ಇದ್ದಿದ್ದರೆ, ಇಂದು ಪ್ರಪಂಚಲ್ಲಿ ಎಲ್ಲೆಡೆ  ಮಾಲಿನ್ಯ ರಹಿತವಾದ ವಿದ್ಯುತ್ ಕಾರುಗಳೇ ಇರುತ್ತಿದ್ದವು ಹಾಗೂ ಅರಬ್ ದೇಶಗಳ ಮೇಲೆ ಈ ರೀತಿಯ ಅವಲಂಬನೆ ಆಗುತ್ತಿರಲಿಲ್ಲ.

1960ರ ದಶಕದಲ್ಲೇ ಥೋರಿಯಮ್ ಮೋಲ್ಟನ್ ಸಾಲ್ಟ್ ರಿಯಾಕ್ಟರ್ ಅಣು ಸ್ಥಾವರವನ್ನು ಅಮೆರಿಕದ ಓಕ್ ರಿಜ್ ನ್ಯಾಷನಲ್ ಲ್ಯಾಬೊರೆಟರಿಯಲ್ಲಿ ಥೋರಿಯಂ ಅಣುಸ್ಥಾವರವನ್ನು ಸ್ಥಾಪಿಸಿದರು. ಆದರೆ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ ಅದಕ್ಕೆ ನೀಡುತ್ತಿದ್ದ ಆರ್ಥಿಕ ಬೆಂಬಲವನ್ನು ನಿಲ್ಲಿಸಿದನು. ಅಣುಸ್ಥಾವರಗಳನ್ನು ಸಾರ್ವಜನಿಕg ಹಿತಕ್ಕಾಗಿ ಬಳಸಬೇಕೆಂಬ ಉದ್ದೇಶ ಅಮೆರಿಕದಂತಹ ದೇಶಕ್ಕೂ ಇರಲಿಲ್ಲ. ಅದು  ಮುಖ್ಯವಾಗಿ ತನ್ನ ಸೇನಾ ಶಕ್ತಿಯ ವರ್ಧನೆಗೆ ಮಾತ್ರ ಬಳಸಬೇಕು ಎಂದು ಭಾವಿಸಿತ್ತು. ಥೋರಿಯಂ ನಲ್ಲಿ ಅಣುಬಾಂಬ್ ನಂತಹ ವಿಧ್ವಂಸಕ ಶಸ್ತ್ರಾಸ್ತ್ರಗಳನ್ನು ಮಾಡಲು ಸಾಧ್ಯವಿಲ್ಲವೆಂದು ತಿಳಿದಾಗ ಕ್ರಮೇಣ ಅದಕ್ಕೆ ಉತ್ತೇಜನ ನೀಡುವುದನ್ನು ನಿಲ್ಲಿಸಲಾಯಿತು.
ಒಂದು ವೇಳೆ ಅದನ್ನು ಮುಂದುವರೆಸಿಕೊಂಡು ಹೋಗಿದ್ದಿದ್ದರೆ, ಚೆರ್ನೋಬಿಲ್, ಫುಕೋಶೀಮಾದಂತಹ ದುರಂತಗಳು ಸಂಭವಿಸುತ್ತಲೇ ಇರಲಿಲ್ಲ. ನಮ್ಮ ಪ್ರಪಂಚ ಈ ವೇಳೆಗೆ ಇನ್ನಷ್ಟು ಸುಭಿಕ್ಷವಾಗಿರುತ್ತಿತ್ತು. ಆದರೆ ಮತ್ತೆ ಸಾಂಪ್ರದಾಯಿಕ ಇಂಧನಗಳಾದ ಪೆಟ್ರೋಲಿಯಂ ತೈಲಗಳಿಗೆ ಭಾರೀ ಹೊಡೆತ ಬೀಳುತ್ತಿತ್ತು. ಹೀಗಾಗಿ ಅರಬ್ ಪ್ರಪಂಚ ಇದು ಊರ್ಜಿತವಾಗದಂತೆ ತನ್ನ ಶಕ್ತಿ ಪ್ರದರ್ಶನ ಮಾಡಿದೆ.

ಇಂದಿನ ಭಾರತ

ನಮ್ಮ ದೇಶವನ್ನು ವಿಜ್ಞಾನಿಗಳು ಉದ್ಧಾರ ಮಾಡಬಲ್ಲರು. ರಾಜಕಾರಣಿಗಳು ಅವರ ಉದ್ದೇಶಗಳನ್ನು ಹಾಳುಗೆಡವದಿದ್ದರೆ ಅದೇ ಒಂದು ದೊಡ್ಡ ಉಪಕಾರ. ಅದೃಷ್ಟವಶಾತ್, ಪ್ರಪಂಚದ ಬೇರೆಲ್ಲೂ ಇರದ ಪ್ರಮಾಣದಲ್ಲಿ  ಥೋರಿಯಂ ನಿಕ್ಷೇಪಗಳು ಹೊಂದಿದೆ. ಈಗಷ್ಟೇ  ಅಪಾಯರಹಿತ ಅಣು ಸ್ಥಾವರಗಳನ್ನು ರೂಪಿಸುವಲ್ಲಿ ಯಶಸ್ವಿಯಾಗಿರುವ ನಮ್ಮ ವಿಜ್ಞಾನಿಗಳಿಗೆ , ಅದನ್ನು ಕಾರ್ಯರೂಪಕ್ಕೆ ತರಲು ಸಾಕಷ್ಟು ಸಮಯ ಬೇಕಿದೆ. ಸರ್ಕಾರಗಳು ಈ ಬೆಳವಣಿಗೆಗೆ ಬೇಕಿರುವ ಅನುದಾನಗಳನ್ನು ನೀಡುವ ಔದಾರ್ಯತೆ ಮತ್ತು ದೂರದೃಷ್ಟಿಯನ್ನು ಹೊಂದಿರಬೇಕಿದೆ.  ತೈಲ ಇಂಧನಕ್ಕೆ ನಮ್ಮ ದೇಶ ವ್ಯಯ ಮಾಡುತ್ತಿರುವ ಹಣ ಉಳಿದರೆ, ಹಾಗೂ ಥೋರಿಯಂ ಅನ್ನು ಕಚ್ಚಾ ವಸ್ತುವಾಗಿ ರಫ್ತು ಮಾಡುವ ಬದಲು ಇಂಧನದ ರೂಪದಲ್ಲಿ ನೆರೆ ದೇಶಗಳಿಗೆ ಮಾರಾಟ ಮಾಡಿದರೆ ನಮ್ಮ ಆರ್ಥಿಕ ಸ್ಥಿತಿ ಉತ್ತಮಗೊಳ್ಳುವುದರಲ್ಲಿ ಅನುಮಾನವಿಲ್ಲ.  ಆದರೆ ಎಲ್ಲವೂ ಸರಾಗವಾಗಿ ನಡೆದರೆ ಅದನ್ನು ಭಾರತ ಎನ್ನಲು ಆಗುವುದಿಲ್ಲ.

ಅಕ್ರಮ ಗಣಿಗಾರಿಕೆ.- ಲೂಟಿ

ದಕ್ಷಿಣ ಅಮೆರಿಕಾದಲ್ಲಿ ಬೊಲೀವಿಯ ಒಂದು ಸುಂದರ ದೇಶ. ಆದರೆ ಆರ್ಥಿಕವಾಗಿ ಅದು ಎಂದೂ ಮುಂದೆ ಬಂದಿಲ್ಲ. ವಿಶ್ವದಲ್ಲೇ ಅತ್ಯಂತ ಹೆಚ್ಚು ಪ್ರಮಾಣದ ಲಿಥಿಯಮ್ ಹೊಂದಿರುವ ಬೊಲಿವಿಯಾ ಸರ್ಕಾರ ಬುದ್ಧಿವಂತಿಕೆ ತೋರಿ ತನ್ನ ಇಂಧನಗಳ ಸೂಕ್ತ ಬಳಕೆ ಮಾಡಿದರೆ ಹೇಗೆ ಉತ್ತಮ ಸ್ಥಿತಿಗೆ ಬರಬಹುದೋ, ಅದೇ ರೀತಿ ನಮ್ಮ ದೇಶದ ಥೋರಿಯಂ ನಿಕ್ಷೇಪಗಳನ್ನು ರಾಷ್ಟ್ರವು ತಕ್ಷಣ ತನ್ನ ವಶಕ್ಕೆ ಪಡೆದು, ತಾರಾಪುರ ಅಣುಸ್ಥಾವರದ ಮಾದರಿಯಲ್ಲೇ ಇನ್ನೂ ಅನೇಕ ಅಣುಸ್ಥಾವರಗಳನ್ನು ಕೇರಳ ಹಾಗೂ ಆಂಧ್ರವನ್ನು ಒಳಗೊಂಡಂತೆ ಪೂರ್ವ ಕರಾವಳಿಯ ಉದ್ದಕ್ಕೂ  ಸ್ಥಾಪಿಸಿದರೆ ನಮ್ಮ ದೇಶ ಸುಭಿಕ್ಷವಾಗುವುದರಲ್ಲಿ ಅನುಮಾನವಿಲ್ಲ.


ಭಾರತದಲ್ಲಿ ಅನೈತಿಕ ಗಣಿಗಾರಿಕೆ:

ಒಬ್ಬ ಸಾಧಾರಣ ವ್ಯಕ್ತಿಯ ಕಲ್ಪನೆಗೂ ನಿಲುಕದ ಪ್ರಮಾಣದಲ್ಲಿ ಅವ್ಯವಹಾರವು ದಕ್ಷಿಣ ಭಾರತದಲ್ಲಿ  ನಡೆದಿದ್ದರೂ ಇದು ಯಾವ ಅಲೆಗಳನ್ನೂ ಎಬ್ಬಿಸದೇ ಗುಟ್ಟಾಗಿ ಮುಚ್ಚಿಹೋಗಿದೆ. ಎನ್.ಡಿ.ಎ. ಸರ್ಕಾರ ಕೇಂದ್ರಲ್ಲಿದ್ದಾಗ,  ಮೋನಝೈಟ್, ಝೆರ್ಕಾನ್, ಸಿಲಿಮನೈಟ್, ಗಾರ್ನೆಟ್,  ಇಲ್ಮೆನೈಟ್, ನಂತಹ ಹೆವಿ ಮಿನರಲ್‍ಗಳು ತಮಿಳುನಾಡು ಹಾಗೂ ಕೇರಳ ಕರಾವಳಿಯ ಮರಳಿನಲ್ಲಿ ಶ್ರೀಮಂತವಾಗಿ ದೊರೆಯುತ್ತದೆ.
ಇದರಲ್ಲಿ ಪರಮಾಣು ಶಕ್ತಿ ನೀಡಬಲ್ಲ ಥೋರಿಯಮ್ ಹೇರಳವಾಗಿರುತ್ತದೆ.  ಉಕ್ಕು, ವಿದ್ಯುನ್ಮಾನ, ಆಭರಣ ತಯಾರಿಕೆ, ಹಾಗು ಪಿಂಗಾಣಿ ತಯಾರಿಕೆಯಲ್ಲಿ ಇವುಗಳ ಪಾತ್ರ ಪ್ರಮುಖವಾದದ್ದು.

ಐ.ಇ.ಆರ್. ಎಲ್. ಹೊರತು ಪಡಿಸಿ ಇವುಗಳ ಗಣಿಗಾರಿಕೆ ಬೇರೆ ಯಾರೂ ಮಾಡುವಂತಿಲ್ಲ. 1998ರಲ್ಲಿ ಮರಳು ಗಣಿಗಾರಿಕೆಯನ್ನು ಖಾಸಗೀಯವರಿಗೆ ಬಿಟ್ಟುಕೊಟ್ಟಿತು. ಇದಕ್ಕೆ ಎರಡು ಪರವಾನಗಿಗಳು ಬೇಕಿತ್ತು. ಒಂದು ಮರಳು ಗಣಿಗಾರಿಕೆ ಮಾಡುವುದಕ್ಕೆ, ಹಾಗೂ ಅಣು ವಸ್ತುಗಳನ್ನು ನಿಭಾಯಿಸಲು,  ಮರಳ ಗಣಿಗಾರಿಕೆ ವೇಳೆ ಸಿಕ್ಕ ಮೋನಝೈಟ್ ಅನ್ನು  ಸಂರಕ್ಷಿತ ಸ್ಥಳದಲ್ಲಿ ರಾಶಿ ಹಾಕಿ, ಮರಳನ್ನು ತೆಗೆದುಕೊಂಡು ಹೋಗಬಹುದಿತ್ತು.  2006 ರಲ್ಲಿ ಈ ನಿಯಮವನ್ನು ಇನ್ನಷ್ಟು ಸರಳೀಕರಿಸಿ,  ಮೇಲೆ ತಿಳಿಸಿದ ರೇರ್ ಅರ್ಥ್ ಗಳ ಪಟ್ಟಿಯಿಂದ  ಅನೇಕ ಹೆಸರುಗಳನ್ನು ತೆಗೆದು, ಒಂದೇ ಪರವಾನಗಿ ಸಾಕಾಗುವಂತೆ ಮಾಡಿದರು.
ಇದರ ಪರಿಣಾಮವಾಗಿ ಖಾಸಗೀ ಗಣೀಮಾಲೀಕರು, ಮೋನೋಝೈಟ್ ಒಂದನ್ನು ಬಿಟ್ಟು ಬೇರೆ ಎಲ್ಲ ಮಿನರಲ್ ಹಾಗೂ  ಮರಳನ್ನು   ರಫ್ತು ಮಾಡಬಹುದಾಯಿತು. ಆದರೆ ಖಾಸಗೀ ಕಂಪನಿಯೊಂದು ಅನೈತಿಕವಾಗಿ ಥೋರಿಯಂ ರಫ್ತು ಮಾಡುತ್ತಿದೆ.  2002ರಿಂದ 2012 ರೊಳಗೆ ಸುಮಾರು 2.1 ಮಿಲಿಯನ್ ಟನ್ ಗಳಷ್ಟು ಥೋರಿಯಂ ಸಂಪನ್ನ ಮರಳು ನಾಪತ್ತೆಯಾಗಿದೆ.

ಅಂದರೆ, ಸುಮಾರು 2,35,000 ಟನ್‍ಗಳ ಥೋರಿಯಂ.
ಇಂಧನದ ಲೆಕ್ಕದಲ್ಲಿ ಹೇಳುವುದಾದರೆ, ಇಂದು ಇಡೀ ಭಾರತ  ಬಳಸುತ್ತಿರುವ ಇಂಧನದ ಪ್ರಮಾಣದಲ್ಲಿ, ಇನ್ನು 700 ವರ್ಷಗಳ ಕಾಲ ಬಳಸಬಹುದಾದಷ್ಟು ಪ್ರಮಾಣದ ಥೋರಿಯಂ ಲೂಟಿಯಾಗಿದೆ. ಇನ್ನೊಂದು ರೀತಿ ಹೇಳುವುದಾದರೆ, ಇಷ್ಟು ಇಂಧನದಲ್ಲಿ ಇಡೀ ಪ್ರಪಂಚದ ಎಲ್ಲ ಇಂಧನ ಅಗತ್ಯಗಳನ್ನೂ  36 ವರ್ಷಗಳಕಾಲ ನಿಭಾಯಿಸಬಹುದಿತ್ತು.

ಅಣುಶಕ್ತಿ ವಿಭಾಗಕ್ಕೆ ಸಂಬಂಧಿಸಿದ ಐ.ಆರ್.ಇ.ಎಲ್. (ಇಂಡಿಯನ್ ರೇರ್ ಅರ್ಥ್ ಲಿಮಿಟೆಡ್) ಎಂಬ ಸಾರ್ವಜನಿಕ ವಲಯವು ಥೋರಿಯಮ್ ಸಮೃದ್ಧವಾಗಿರುವ ಮೋನಝೈಟ್ ಮರಳನ್ನು ಗಣಿಗಾರಿಕೆ ಮಾಡಿ ಕೇವಲ ಮೂರು ವರ್ಷಗಳಲ್ಲಿ 5 ಟನ್‍ಗಳಷ್ಟನ್ನು  ರಫ್ತು ಮಾಡಿದೆ. ವಿಜ್ಞಾನಿಗಳಿಗೆ, ಸರ್ಕಾರಕ್ಕೆ ತನ್ನ ನಿಕ್ಷೇಪಗಳ ಮಹತ್ವ ತಿಳಿಯುವುದಕ್ಕಿಂತ ಮೊದಲು ಗಣಿ-ಧಣಿಗಳಿಗೆ ತಿಳಿದುಹೋಗಿ ದೇಶದ ಸಂಪತ್ತನ್ನು ಅವರ ಸ್ವಾರ್ಥಕ್ಕಾಗಿ ಲೂಟಿ ಹೊಡೆದು ಮಾರಿಕೊಳ್ಳುತ್ತಿರುವುದು ನಮ್ಮ ದೇಶದ ದುರಂತ.

ಥೋರಿಯಂ ನಮ್ಮ ದೇಶದ ಆರ್ಥಿಕಸ್ಥಿತಿಯನ್ನು ವಿಶ್ವದ ಮುಂದುವರೆದ ದೇಶಗಳ ಮಟ್ಟಕ್ಕೆ ಕೊಂಡೊಯ್ಯ ಬಲ್ಲ ಸಂಪತ್ತು. ಮುಂಬೈ ಬಳಿಯ ಅಣುಸ್ಥಾವರವು ನಿಧಾನವಾಗಿ ತಲೆಯೆತ್ತಿ ಕಾರ್ಯಾಚರಣೆ ಪ್ರಾರಂಭವಾಗುವ ಹೊತ್ತಿಗೆ ನಮ್ಮ ದೇಶದ ಥೋರಿಯಂ ಚೈನಾ ಸೇರಿದ್ದರೆ, ಮತ್ತೆ  ಮೇಲೇರುವ ಅವಕಾಶ ತಪ್ಪಿಹೋಗುತ್ತದೆ.
ಕಡೇಪಕ್ಷ ಆರು ಕಂಪನಿಗಳು ಈ ರಫ್ತಿನಲ್ಲಿ  ತೊಡಗಿದೆ.

ಹಿಂದೂಸ್ಥಾನ್ ಮೈಕ ಮಾರ್ಟ್,
ಸ್ವರ್ನಿಮ ಮೆಟಲ್ಸ್ ಪ್ರೈವೇಟ್ ಲಿಮಿಟೆಡ್,
ವಿ. ಆರ್. ಎಸ್. ಟ್ರೇಡಿಂಗ್ ಪ್ರೈವೇಟ್ ಲಿಮಿಟೆಡ್,
ಎಸ್. ಎನ್. ಇಂಡಸ್ಟ್ರೀಸ್, ಪ್ರೈ. ಲಿ,
ಎಸ್, ಜೆ, ಎಂಟರ್ ಪ್ರೈಸಸ್,  
ವಿವೇಕಾನಂದ ಗ್ರೂಪ್,

ಕಲ್ಯಾಣ್ ಇಂಟರ್‍ನ್ಯಾಶನಲ್ ಕಂಪನಿಗಳು ರಾಜಾರೋಷವಾಗಿ ವೆಬ್ ಸೈಟ್‍ಗಳಲ್ಲಿ ತಮ್ಮ ದಂಧೆಯ ಜಾಹೀರಾತುಗಳನ್ನು ಮಾಡಿಕೊಳ್ಳುತ್ತಿದ್ದಾರೆ. ದೇಶ ಅದನ್ನು ಮೌನವಾಗಿ ನೋಡುತ್ತಿದೆ. ಅರವತ್ತು ಲಕ್ಷ  ಕೋಟಿ ರೂಪಾಯಿಗಳ ಮೊತ್ತದ ಥೋರಿಯಂ ಅಕ್ರಮ  ಗಣಿಗಾರಿಕೆ ಮತ್ತು ರಫ್ತು ಪ್ರಕರಣ ಇನ್ನೂ ವಿಚಾರಣೆ ಆಗಬೇಕಿದೆ. ಬೆಳಕಿಗೆಗ್ ಬಂದದ್ದು ಇಷ್ಟಾದರೆ ಬೆಳಕಿಗೆ ಬಾರದೆ ಇನ್ನೆಷ್ಟು ನಡೆದು ಹೋಗಿದೆಯೋ ದೇವರೇ ಬಲ್ಲ.
ಎಚ್ಚೆತ್ತುಕೊಂಡರೆ ಇಂತಹ ಉತ್ತಮ ಅವಕಾ±ದಿಂದÀ ನಮ್ಮ ಭಾರತವನ್ನು  ಉಜ್ವಲವಾಗುವುದರಲ್ಲಿ ಅನುಮಾನವಿಲ್ಲ.© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate