অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಇ ಜೀವಸತ್ವ

ಇ ಜೀವಸತ್ವ

ಹೊಸ ತಲೆಮಾರಿನ ಬಹುಮುಖ್ಯ ಸಮಸ್ಯೆಗಳಲ್ಲಿ ನೆನಪಿನ ಶಕ್ತಿಯ ಕೊರತೆಯೂ ಒಂದು. ಎಷ್ಟೇ ನೆನಪಿನಲ್ಲಿಟ್ಟುಕೊಳ್ಳಬೇಕೆಂದರೂ ನೆನಪಿರೋಲ್ಲ. ಆಧುನಿಕ ತಂತ್ರಜ್ಞಾನಗಳು ಮನುಷ್ಯನಿಗೆ ಸಾಕಷ್ಟು ಅನುಕೂಲ ಕಲ್ಪಿಸಿರುವುದರಿಂದ ಯಾವುದಕ್ಕೂ ಕಷ್ಟಪಡುವ ಪ್ರಮೇಯವೇ ಇಲ್ಲ. ಹೀಗೆ ಆಧುನಿಕತೆ ಬೆಳೆಯುತ್ತಾ ಮನುಷ್ಯ ಮತ್ತಷ್ಟು ಸೋಮಾರಿಯಾಗುತ್ತಲೇ ಇದ್ದಾನೆ. ಯಂತ್ರಗಳ ಮೇಲಿನ ಅತಿಯಾದ ಅವಲಂಬನೆ ಮನುಷ್ಯನ ಸಾಮರ್ಥ್ಯವನ್ನೇ ಕಡಿಮೆ ಮಾಡಿದೆ. ಯಾವುದೇ ಒಂದು ಪುಟ್ಟ ವಿಷಯವನ್ನು ನೆನಪಿಸಿಕೊಳ್ಳುವುದಕ್ಕೆ ಮನುಷ್ಯ ಹರಸಾಹಸ ಪಡುವಂತಾಗಿದ್ದಾನೆ. ಹೀಗಾಗಿ ನೆನಪಿನ ಶಕ್ತಿ ಹೆಚ್ಚಿಸುವುದಕ್ಕಾಗಿಯೇ ಹಲವಾರು ಮಾತ್ರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನೆನಪಿನ ಶಕ್ತಿ ಹೆಚ್ಚಿಸುವುದಕ್ಕೆ ಮಾತ್ರೆ ತಿನ್ನುವ ಬದಲಿಗೆ ಇ ಜೀವಸತ್ವ ಹೆಚ್ಚಿರುವ ಆಹಾರಗಳನ್ನು ಸೇವಿಸುವುದು ಒಳ್ಳೆಯದೆಂದು ಇತ್ತೀಚಿನ ಸಂಶೋಧನೆಯೊಂದು ಹೇಳಿದೆ. ಇ ಜೀವಸತ್ವದಲ್ಲಿರುವ ಟೊಕೊಫೇರೋಲ್ಸ್ ಎಂಬ ಅಂಶ ನೆನಪಿನ ಶಕ್ತಿಯನ್ನು ಉದ್ದೀಪನಗೊಳಿಸುತ್ತದೆ. ವಿಟಾಮಿನ್ ಇ ಕೊರತೆಯಿಂದಲೇ ಹಲವರಿಗೆ ಬಹುಬೇಗನೇ ಮರವಿನ ರೋಗ ಆರಂಭವಾಗುತ್ತಿದೆ ಎಂಬುದೂ ಈ ಸಂಶೋಧನೆಯಿಂದ ದೃಢಪಟ್ಟಿದೆ. ಆದ್ದರಿಂದ ಇ ಜೀವಸತ್ವವುಳ್ಳ ಆಹಾರ ಸೇವನೆ ಅಗತ್ಯ ಎಂದು ಈ ಸಂಶೋಧನೆ ಹೇಳಿದೆ. ಇ ಜೀವಸತ್ವ ಹೆಚ್ಚಿರುವ ಕೆಲವು ಆಹಾರ ಪದಾರ್ಥಗಳು ಇಲ್ಲಿವೆ:

  • ಸಾಸಿವೆ ಎಲೆಯಲ್ಲಿ ಇ ಜೀವಸತ್ವ ಹೇರಳವಾಗಿರುವುದರಿಂದ ಅದನ್ನು ಆಹಾರದಲ್ಲಿ ಬಳಸಬೇಕು. ಆದರೆ ಅತಿಯಾಗಿ ಬೇಯಿಸುವುದರಿಂದ ಅದರಲ್ಲಿರುವ ಸತ್ವ ಹೊರಟುಹೋಗುತ್ತದೆ. ಪಾಲಾಕ್ ಸೊಪ್ಪಿನಲ್ಲಿ ಇ ಜೀವಸತ್ವ ಮಾತ್ರವಲ್ಲದೆ ಹಲವು ಪೌಷ್ಟಿಕಾಂಶಗಳಿರುವುದರಿಂದ ಸಲಾಡ್‌ಗಳಲ್ಲಿ ಇದನ್ನು ಬಳಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.
  • ಬಾದಾಮಿ, ಗೋಡಂಬಿ ಮುಂತಾದ ಒಣ ಹಣ್ಣುಗಳಲ್ಲಿಯೂ ಇ ಜೀವಸತ್ವ ಯಥೇಚ್ಛವಾಗಿರುತ್ತದೆ.
  • ಪಪ್ಪಾಯ ಮತ್ತು ಕಿವಿ ಹಣ್ಣುಗಳ ಸೇವನೆಯೂ ಒಳ್ಳೆಯದು.
  • ಕೋಸಿನಲ್ಲಿಯೂ ಇ ಜೀವಸತ್ವ ಹೆಚ್ಚಿರುತ್ತದೆ. ಹಸಿಯಾಗಿ ತಿನ್ನುವುದಕ್ಕೆ ರುಚಿಯಾಗದಿದ್ದರೂ ಬೇಯಿಸಿ ತಿನ್ನುವುದಕ್ಕಿಂತ ಹಾಗೆಯೇ ತಿನ್ನುವುದೇ ಒಳ್ಳೆಯದು.
  • ಗೋಧಿಯಲ್ಲಿಯೂ ಇ ಜೀವಸತ್ವ ಹೆಚ್ಚಿರುತ್ತದೆ.
  • ಸೂರ್ಯಕಾಂತಿ ಬೀಜಗಳು ಇ ಜೀವಸತ್ವದ ಆಗರವಾಗಿವೆ.

ವಿಟಾಮಿನ್ ಇ ಕೇವಲ ನೆನಪಿನ ಶಕ್ತಿ ಹೆಚ್ಚಿಸುವುದಕ್ಕಷ್ಟೇ ಅಲ್ಲದೆ, ಚರ್ಮದ ಕಾಂತಿಯನ್ನು ಹೆಚ್ಚಿಸುವುದಕ್ಕೂ ಸಹಕಾರಿಯಾಗಿದೆ. ಸೌಂದರ್ಯ ವರ್ಧಕವಾಗಿಯೂ ಇ ಜೀವಸತ್ವ ಕೆಲಸ ನಿರ್ವಹಿಸುತ್ತದೆ.

ಮೂಲ: ವಿಕ್ರಮ

ಕೊನೆಯ ಮಾರ್ಪಾಟು : 3/4/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate