ಆರೋಗ್ಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುವ ಬ್ಯಾಕ್ಟಿರಿಯಾಗಳ ಸೇವನೆ! ಈ ಮಾಹಿತಿ ಮೇಲ್ನೋಟಕ್ಕೆ ತೀರಾ ವಿಚಿತ್ರವಾಗಿ ಕಾಣಬಹುದು. ಆದರೆ ಇತ್ತೀಚಿನ ದಿನಗಳಲ್ಲಿ ಹೀಗೆ ನಮ್ಮ ಆರೋಗ್ಯವನ್ನು ಸುಧಾರಿಸುವ ಪ್ರೊಬಯೊಟಿಕ್ಸ್ ಎಂಬ ಜೀವಿಗಳತ್ತ ಒಲವು ಹೆಚ್ಚಿದೆ. ಅನಿವಾರ್ಯ ಕಾರಣಗಳಿಂದ ನಮ್ಮ ದೇಹವನ್ನು ಸೇರುವ ಆ್ಯಂಟಿಬಯೊಟಿಕ್ಸ್ ನಿಂದ ಉಂಟಾಗುವ ನಷ್ಟವನ್ನು ತುಂಬಿಕೊಡುವಲ್ಲಿ ಇವು ಪರಿಣಾಮಕಾರಿ ಪಾತ್ರ ವಹಿಸುತ್ತವೆ. ಅಲ್ಲದೇ, ಆರೋಗ್ಯ ಸ್ನೇಹಿ ಬ್ಯಾಕ್ಟೀರಿಯಾಗಳ ಸಮತೋಲನ ಕದಡಿದಾಗ ಉಂಟಾಗುವ ಕೆಲವು ಜೀರ್ಣಾಂಗ ತೊಂದರೆಗಳನ್ನೂ ಸಹ ಪ್ರೊಬಯೊಟಿಕ್ಸ್ ಗುಣಪಡಿಸುತ್ತವೆ ಎಂದು ವೈದ್ಯಕೀಯ ವಲಯ ಹೆಳುತ್ತಿದೆ. ಈ ಜೀವಿಗಳ ಸೇವನೆ ಹೇಗೆ, ಏನು? ಇಲ್ಲಿದೆ ಮಾಹಿತಿ.
* ಪ್ರೊಬಯೊಟಿಕ್ಸ್ ಎಂದರೇನು? ಪ್ರಯೋಜನವನ್ನು ವಿವರಿಸಿ.
ಪ್ರೊಬಯೊಟಿಕ್ಸ್ ಎಂದರೆ ಆತಿಥೇಯ ಜೀವಿಗಳ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುವ ಜೀವಂತ ಸೂಕ್ಷ್ಮಜೀವಿಗಳು. ಇವು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವ ಒಂದು ರೀತಿಯ ಕ್ರಿಮಿಗಳು. ಅನೇಕ ರೀತಿಯಲ್ಲಿ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಪೌಷ್ಟಿಕಾಂಶಗಳ ಹೀರುವಿಕೆಯನ್ನು ಹಾಗೂ ವಿಟಮಿನ್ ಗಳ ಸಂಶ್ಲೇಷಣೆಯನ್ನು ಸುಧಾರಿಸುತ್ತವೆ. ಇವು ನೈಸರ್ಗಿಕವಾಗಿ ಮಾನವನ ದೇಹದಲ್ಲಿ ಹುಟ್ಟಿನಿಂದಲೇ ಇರುತ್ತವೆ. ಬೆಳೆದಂತೆಲ್ಲ ಕಾರಣಾಂತರಗಳಿಂದ ಇವುಗಳ ಪ್ರಮಾಣ ಕುಗ್ಗಬಹುದು. ಆಗ ಅನೇಕ ಆರೋಗ್ಯ ಸಮಸ್ಯೆಗಳು ಹುಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪ್ರೊಬಯೊಟಿಕ್ಸ್ ಸೇವನೆಗೆ ಇಂದು ಹೆಚ್ಚಿನ ಆದ್ಯತೆ ದೊರೆಯುತ್ತಿದೆ. ಔಷಧಿ, ಮಾತ್ರೆಗಳ ರೂಪದಲ್ಲಿಯೂ ಪ್ರೊಬಯೊಟಿಕ್ಸ್ ನೀಡಲಾಗುತ್ತದೆ. ಅಲ್ಲದೇ, ಕೆಲವು ಆಹಾರಗಳಲ್ಲಿಯೂ ಇವುಗಳ ಸಂಖ್ಯೆಯನ್ನು ಹೆಚ್ಚಿಸುವ ಗುಣವಿರುತ್ತದೆ.
*ಪ್ರೊಬಯೊಟಿಕ್ಸ್ ನೈಸರ್ಗಿಕವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ತಿಳಿಸಿ.
ಸೋಯಾ ಹಾಲು, ಸೋಯಾ ಉತ್ಪನ್ನಗಳು , ಮೊಸರು, ಮಜ್ಜಿಗೆ, ಯೋಗರ್ಟ್, ಹುಳಿ ಕ್ರೀಮ್, ಹಾಲು ಎಲೆಕೋಸು ಇತ್ಯಾದಿ.
*ಪ್ರೊಬಯಾಟಿಕ್ಸ್ ಆರೋಗ್ಯಕ್ಕೆ ಪೂರಕವಾಗಿ ಹೇಗೆ ಕೆಲಸ ಮಾಡುತ್ತವೆ?
ಬಲವಾದ ಪ್ರತಿಜೀವಕ ಔಷಧಗಳು (antibiotics ) ಅಥವಾ ಇತರೆ ಔಷಧಗಳ ವಿಪರೀತ ಸೇವನೆ, ಅತಿಯಾದ ಮದ್ಯ ಸೇವನೆ, ಒತ್ತಡ ಮುಂತಾದ ಕಾರಣಗಳಿಂದ ಮನುಷ್ಯನ ದೇಹ ಸಹಿಷ್ಣತೆಯನ್ನು ಕಳೆದುಕೊಳ್ಳುತ್ತದೆ.
ರೋಗಗಳ ಚಿಕಿತ್ಸೆಗಾಗಿಯೇ ಪ್ರತಿಜೀವಕಗಳನ್ನು (antibiotics ) ಶಿಫಾರಸು ಮಾಡಲಾಗುತ್ತದೆ ಆದರೂ, ಅವುಗಳ ಪುನರಾವರ್ತಿತ ಸೇವನೆ ದೇಹದಲ್ಲಿನ ಒಳ್ಳೆಯ ಬ್ಯಾಕ್ಟೀರಿಯಾಗಳನ್ನು ಹಾಳು ಮಾಡುತ್ತದೆ. ಇದರಿಂದ ರೋಗ ನಿರೋಧಕ ಶಕ್ತಿ ಕುಗ್ಗುತ್ತದೆ ಅಲ್ಲದೇ, ದೇಹದಲ್ಲಿ ಜೀರ್ಣಕ್ರಿಯೆ ಮತ್ತು ಪೌಷ್ಟಿಕಾಂಶಗಳ ಹೀರುವಿಕೆಯ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಸ್ಥಿತಿಯಲ್ಲಿ ಪ್ರೊಬಯೊಟಿಕ್ಸ್ ಅತ್ಯಂತ ಪರಿಣಾಮಕಾರಿ ಪಾತ್ರ ವಹಿಸುತ್ತವೆ.
* ಪ್ರೊಬಯಾಟಿಕ್ ಯಾವ ರೋಗಗಳನ್ನು ಗುಣಪಡಿಸಲು ಸಹಾಯಕ?
* ಬಾಲ್ಯಾವಸ್ಥೆಯ ಅತಿಸಾರ
* ಪ್ರತಿಜೀವಕ ಸಂಬಂಧಿತ ಅತಿಸಾರ ಮತ್ತು ಸಾಂಕ್ರಾಮಿಕ ಅತಿಸಾರ
*ಅಲ್ಸರೇಟಿವ್ ಕೊಲೈಟಿಸ್
* ನೆಕ್ರೋರೋಟೈಸಿಂಗ್ ಎಂಟೆರಾಕಾಲೈಟ್ ಸೋಂಕು
* ಆಹಾರ ಅಲರ್ಜಿ
* ಉರಿಯೂತದ ಕರುಳಿನ ರೋಗಕ್ಕೆ
* ಕರುಳಿನ ಗಂಭೀರ ಸೋಂಕು
* ಹೆಚ್ಚಾಗಿ ಶಿಶುಗಳಲ್ಲಿ ಕಂಡುಬರುವ ಒಂದು ರೀತಿಯ ಕರುಳಿನ ಉರಿಯೂತ
* ಹಸುವಿನ ಹಾಲಿನ ಅಲರ್ಜಿಗಳಿಂದ ಉಂಟಾಗುವ ಎಸ್ಜಿಮಾ
*ಶಿಶುಗಳಿಗೆ ಪ್ರೊಬಯಾಟಿಕ್ಸ್ ನೀಡುವುದರಿಂದಾಗುವ ಲಾಭಗಳೇನು?
ಗರ್ಭಿಣಿಯಾಗಿದ್ದಾಗ ಪ್ರೊಬಯಾಟಿಕ್ಸ್ ಸೇವಿಸಿದ ತಾಯಂದಿರ ಮಕ್ಕಳು ಅಲರ್ಜಿಗಳಿಗೆ ಒಳಗಾಗುವ ಸಾಧ್ಯತೆ ಇತರೆ ಮಕ್ಕಳಿಗಿಂತ ಕಡಿಮೆ ಎನ್ನುವುದನ್ನು ಅಧ್ಯಯನಗಳು ದೃಢೀಕರಿಸಿವೆ.
ಮೊದಲ ಎರಡು ವರ್ಷಗಳ ಅವಧಿಯಲ್ಲಿ ಮಕ್ಕಳ ಪ್ರತಿರಕ್ಷಣಾ ವ್ಯವಸ್ಥೆ ಸರಿಯಾಗಿ ಅಭಿವೃದ್ಧಿ ಹೊಂದಿರುವುದಿಲ್ಲ. ಈ ಹಂತದಲ್ಲಿ ಮಕ್ಕಳು ಅತಿಸಾರದಂತಹ ರೋಗಗಳಿಗೆ ಬೀಳುವ ಸಾಧ್ಯತೆ ಅತ್ಯಂತ ಹೆಚ್ಚಾಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಪ್ರೊಬಯಾಟಿಕ್ ಹೆಚ್ಚು ಅಗತ್ಯವಿದೆ ಎಂದೇ ಹೇಳಬಹುದು. ಆದರೆ ಇದು ನೈಸರ್ಗಿಕವಾಗಿ ತಾಯಿಯ ಹಾಲಿನಲ್ಲಿ ದೊರೆಯುತ್ತವೆ.
*ಯಾವುದೇ ಒಂದು ಸಂದರ್ಭ ಅಥವಾ ಸ್ಥಿತಿಯಲ್ಲಿ ಇವು ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಇದೆಯೇ?
ಇವು ಬಹುತೇಕ ಸುರಕ್ಷಿತ ಎಂದು ಹೇಳಲಾಗಿದ್ದರೂ ವೈಜ್ಞಾನಿಕವಾಗಿ ಈ ಬಗ್ಗೆ ಪೂರ್ಣಪ್ರಮಾಣದಲ್ಲಿ ಅಧ್ಯಯನಗಳು ನಡೆದಿಲ್ಲ. ಇವುಗಳನ್ನು ಯಾವಾಗ, ಯಾರು, ಹೇಗೆ, ಎಷ್ಟು ಪ್ರಮಾಣದಲ್ಲಿ ತೆಗೆದುಕೊಳ್ಳಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಂಡಲ್ಲಿ ಅಡ್ಡ ಪರಿಣಾಮಗಳನ್ನು ಬಹುತೇಕ ತಡೆಗಟ್ಟಬಹುದು.
*ಗರ್ಭಿಣಿಯರು ಪ್ರೊಬಯಾಟಿಕ್ಸ್ ಆಹಾರ ಅಥವಾ
ಸಪ್ಲಿಮೆಂಟ್ ಗಳನ್ನು ಸೇವಿಸಬಹುದೇ?
ಖಂಡಿತ, ಗರ್ಭಿಣಿಯರು ನಿಯಮಿತವಾಗಿ ಪ್ರೊಬಯಾಟಿಕ್ಸ್ ಸೇವಿಸುವುದರಿಂದ ಸಣ್ಣ ಜೀರ್ಣಾಂಗದ ತೊಂದರೆಗಳನ್ನು ತಡೆಯಲು ಸಹಾಯವಾಗುತ್ತದೆ. ಅಲ್ಲದೇ ಇದು ಶಿಶುಗಳ ಬೆಳವಣಿಗೆಗೂ ಪೂರಕ.
*ಮುನ್ನೆಚ್ಚರಿಕೆ ಕ್ರಮಗಳನ್ನು ತಿಳಿಸಿ
ಪ್ರೊಬಯಾಟಿಕ್ಸ್ ಆಹಾರಗಳನ್ನು ಸೇವಿಸುವ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ ಮಾತ್ರೆ, ಕ್ಯಾಪ್ಸೂಲ್, ಪೌಡರ್ ರೂಪದಲ್ಲಿ ಇವುಗಳನ್ನು ಸೇವಿಸುವಾಗ ತಜ್ಞ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆ ಅಥವಾ ಗಂಭೀರ ಅಸ್ವಸ್ಥತೆಯಲ್ಲಿರುವ ಜನರಿಗೆ ಇದು ಮಾರಕವಾಗಿ ಪರಿಣಮಿಸಬಹುದು.
ಕೊನೆಯ ಮಾರ್ಪಾಟು : 7/4/2020