ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕುಂಬಳಕಾಯಿ

ವಾಸ್ತವದಲ್ಲಿ ಕುಂಬಳ ಕಾಯಿಯಲ್ಲಿರುವ ಪೋಷಕಾಂಶಗಳು ಮತ್ತು ಮುಖ್ಯವಾಗಿ ಇದು ಗಾಯಗಳನ್ನು ಮತ್ತು ಅನಾರೋಗ್ಯಕ್ಕೆ ತುತ್ತಾದ ಶರೀರ ಶೀಘ್ರವಾಗಿ ವಾಸಿ ಮಾಡುವ ಗುಣದ ಮೂಲಕ ಒಂದು ಶ್ರೀಮಂತ ಆಹಾರವಾಗಿದೆ.

ಬಹುಪಯೋಗಿ ಔಷಧಿಗಳ ಸಂಜೀವಿನಿ 'ಕುಂಬಳಕಾಯಿ'

ಶ್ರೀಮಂತರು ಧರಿಸಿದ್ದೆಲ್ಲಾ ಬಂಗಾರ, ಬಡವರು ಧರಿಸಿದ್ದು ಕಾಗೆ ಬಂಗಾರ ಎಂದೇ ನಾವೆಲ್ಲಾ ನಂಬಿದ್ದೇವೆ. ಬಡವರು ಬಂಗಾರ ಧರಿಸಿದರೂ ಶ್ರೀಮಂತರು ಕಾಗೆಬಂಗಾರ ಧರಿಸಿದರೂ ಸುಲಭವಾಗಿ ನಾವು ಒಪ್ಪುವುದಿಲ್ಲ. ಅಂತೆಯೇ ಚಿನ್ನದ ಬಣ್ಣದ ಕುಂಬಳ ಕಾಯಿಗೂ ನಾವು ತೋರುವುದು ಅಸಡ್ಡೆಯೇ. ಏಕೆಂದರೆ ಇದು ಸುಲಭದರದಲ್ಲಿ ಮತ್ತು ವರ್ಷದ ಬಹುತೇಕ ದಿನಗಳಲ್ಲಿ ಎಲ್ಲಾ ಕಡೆ ಸಿಗುವುದರಿಂದ ಇದನ್ನು ಬಡವರ ತರಕಾರಿ ಎಂದೇ ತಿಳಿದುಬಿಟ್ಟಿದ್ದೇವೆ. ವಾಸ್ತವದಲ್ಲಿ ಕುಂಬಳ ಕಾಯಿಯಲ್ಲಿರುವ ಪೋಷಕಾಂಶಗಳು ಮತ್ತು ಮುಖ್ಯವಾಗಿ ಇದು ಗಾಯಗಳನ್ನು ಮತ್ತು ಅನಾರೋಗ್ಯಕ್ಕೆ ತುತ್ತಾದ ಶರೀರ ಶೀಘ್ರವಾಗಿ ವಾಸಿ ಮಾಡುವ ಗುಣದ ಮೂಲಕ ಒಂದು ಶ್ರೀಮಂತ ಆಹಾರವಾಗಿದೆ. Cucurbita ಎಂಬ ಪಂಗಡಕ್ಕೆ ಸೇರಿದ ಕುಂಬಳ ಕಾಯಿಯನ್ನು ಉದ್ದನಾಗಿ (ತೊಟ್ಟಿನಿಂದ ಕೆಳಗೆ ಬರುವಂತೆ ಕತ್ತರಿಸಿದರೆ) ಕನ್ನಡದ ಐ ಅಕ್ಷರದ ಆಕಾರದಲ್ಲಿರುತ್ತದೆ.

ಅಪ್ಪಟ ಬಂಗಾರದ ಹಳದಿಯಿಂದ ಹಿಡಿದು ಬಿಳಿಯ ಅಥವಾ ಬೂದು ಬಣ್ಣದವರೆಗೂ, ಕೆಲವೊಮ್ಮೆ ಗಾಢ ಹಸಿರುಬಣ್ಣದ ಹೊರಕವಚವಿದ್ದರೆ ಒಳಭಾಗ ತೆಳುಹಳದಿಯಿಂದ ಹಿಡಿದು ಕೆಂಪು ಅಥವಾ ತೆಳುವಾದ ಅಥವಾ ಗಾಢ ಹಸಿರು ಬಣ್ಣವನ್ನು ಹೊಂದಿರುತ್ತದೆ. ಒಳಭಾಗದಲ್ಲಿ ಟೊಳ್ಳಾಗಿದ್ದು ಬೀಜಗಳು ಅಂಟಿಕೊಂಡಂತಿರುತ್ತವೆ. ಈ ಬೀಜಗಳನ್ನು ಒಣಗಿಸಿದ ಬಳಿಕ ದೊರಕುವ ತಿರುಳು ಹಲವು ಪೋಷಕಾಂಶಗಳ ಆಗರವಾಗಿದೆ. ತರಕಾರಿಯಾಗಿ ಕುಂಬಳ ಕಾಯಿ ಕೊಂಚ ಸಿಹಿಯಾಗಿರುವುದರಿಂದ ಹಲವು ಸಿಹಿತಿಂಡಿಗಳ ತಯಾರಿಕೆಯಲ್ಲಿಯೂ ಬಳಕೆಯಾಗುತ್ತದೆ. ಇದರ ತಿರುಳಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ carotenoid ಎಂಬ ಪೋಷಕಾಂಶಗಳಿವೆ. ಇವು ಮುಖ್ಯವಾಗಿ ಚರ್ಮ ಮತ್ತು ಉಗುರುಗಳಿಗೆ ಉತ್ತಮವಾಗಿವೆ. ಕುಂಬಳ ಕಾಯಿಯ ಆರೋಗ್ಯಕರ ಗುಣಗಳಲ್ಲಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ. ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸುತ್ತದೆ ಕ್ಯಾರೆಟ್ ಗಳಲ್ಲಿರುವಂತೆ ಕುಂಬಳಕಾಯಿಯಲ್ಲೂ ಬೀಟಾ ಕ್ಯಾರೋಟಿನ್ ಎಂಬ ಪೋಷಕಾಂಶವಿದ್ದು ಕಣ್ಣಿನ ಆರೋಗ್ಯಕ್ಕೆ ಪೂರಕವಾಗಿದೆ. ಈ ತರಕಾರಿಗೆ ಚಿನ್ನದ ಬಣ್ಣ ಬರಲು ಈ ಪೋಷಕಾಂಶವೇ ಕಾರಣ. ಬೀಟಾ ಕ್ಯೋರೋಟಿನ್ ನಮ್ಮ ಜೀರ್ಣಾಂಗದಲ್ಲಿ ಜೀರ್ಣಗೊಂಡ ಬಳಿಕ ರೆಟಿನಾಲ್ ಎಂಬ ಪೋಷಕಾಂಶವಾಗಿ ಮಾರ್ಪಾಡು ಪಡೆಯುತ್ತದೆ. ಇದೊಂದು ವಿಟಮಿನ್ ಎ ಆಗಿದ್ದು ಕಣ್ಣಿಗೆ ಅತ್ಯುತ್ತಮವಾದ ಪೋಷಕಾಂಶವಾಗಿದೆ.

ಈ ಪೋಷಕಾಂಶ ರಕ್ತದ ಮೂಲಕ ಕಣ್ಣುಗಳಿಗೆ ತಲುಪಿದ ಬಳಿಕ ಕಣ್ಣಿನಲ್ಲಿರುವ retinitis pigmentosa ಎಂಬ ವ್ಯಾಧಿಯನ್ನು ಕಡಿಮೆಗೊಳಿಸುತ್ತದೆ. (ಈ ವ್ಯಾಧಿಯವರು ಪ್ರಖರ ಬೆಳಕನ್ನು ಮಾತ್ರ ನೋಡಬಲ್ಲರು. ಕಡಿಮೆ ಬೆಳಕು ಮತ್ತು ರಾತ್ರಿಹೊತ್ತಿನ ಮಂದ ಬೆಳಕಿನಲ್ಲಿ ನೋಡಲು ಅಸಮರ್ಥರಾಗುತ್ತಾರೆ) ವಾಸ್ತವವಾಗಿ ಈ ತೊಂದರೆ ಇರುವ ಕಣ್ಣು ನಿಧಾನವಾಗಿ ಅಂಧತ್ವದತ್ತ ಜಾರುತ್ತಿರುತ್ತದೆ. ಆದ್ದರಿಂದ ಈ ವ್ಯಾಧಿ ಇರುವವರು ನಿಯಮಿತವಾಗಿ ಕುಂಬಳಕಾಯಿಯನ್ನು ಸೇವಿಸುತ್ತಾ ಬಂದರೆ ವ್ಯಾಧಿಯನ್ನು ನಿಯಂತ್ರಣದಲ್ಲಿರಿಸುವುದರ ಜೊತೆಗೇ ಕಣ್ಣಿನ ಮೊದಲಿನ ಸ್ಥಿತಿಯನ್ನು ಪಡೆಯುವ ಸಾಧ್ಯತೆಗಳೂ ಹೆಚ್ಚಾಗುತ್ತವೆ. ಇದಕ್ಕಾಗಿ ಪ್ರತಿದಿನ ಒಂದು ಕಪ್ ಕುಂಬಳ ಕಾಯಿಯ ರಸವನ್ನು ಕುಡಿಯುವುದು ಅಗತ್ಯವಾಗಿದೆ. ಚರ್ಮದ ಕಾಂತಿಗೆ ಕುಂಬಳ ಕಾಯಿ ಉತ್ತಮವಾಗಿದೆ ಕುಂಬಳ ಕಾಯಿಯಲ್ಲಿರುವ ಬೀಟಾ ಕ್ಯಾರೋಟಿನ್ ಜೀರ್ಣಗೊಂಡ ಬಳೀಕ ಲಭ್ಯವಾಗುವ ರೆಟಿನಾಲ್ ಚರ್ಮಕ್ಕೂ ಉತ್ತಮವಾದ ಪೋಷಕಾಂಶವಾಗಿದೆ. ಇದು ಚರ್ಮಕ್ಕೆ ಅಗತ್ಯವಾದ ಆರ್ದ್ರತೆ ಮತ್ತು ಸೆಳೆತಗಳನ್ನು ನೀಡುವ ಮೂಲಕ ಚರ್ಮ ಕಾಂತಿಯುಕ್ತವಾಗಿದ್ದು ನೆರಿಗೆರಹಿತವಾಗಿರುತ್ತದೆ. ಚರ್ಮದಲ್ಲಿ ಕಂಡುಬರುವ ಮೊಡವೆ ಮತ್ತು ದದ್ದುಗಳ, ಸೋರಿಯಾಸಿಸ್ (psoriasis) ಎಂಬ ಚರ್ಮವ್ಯಾಧಿಗಳ ನಿವಾರಣೆಗೆ ವೈದ್ಯರು ಕ್ಯಾರೋಟಿನ್ ಯುಕ್ತ ಔಷಧಿಗಳನ್ನು ನೀಡುತ್ತಾರೆ. ಕುಂಬಳ ಕಾಯಿಯನ್ನು ನಿತ್ಯದ ಆಹಾರದಲ್ಲಿ ಸೇವಿಸುತ್ತಾ ಬರುವುದರಿಂದ ಚರ್ಮದ ಸಕಲ ತೊಂದರೆಗಳಿಗೆ ನೈಸರ್ಗಿಕ ಪರಿಹಾರ ದೊರಕುತ್ತದೆ.

ಮೂತ್ರವರ್ಧಕವಾಗಿ ಕುಂಬಳ ಕಾಯಿಯ ಬಳಕೆ ನಿಸರ್ಗದಲ್ಲಿ ಅತ್ಯುತ್ತಮವಾದ ಮೂತ್ರವರ್ಧಕ ಎಂದರೆ ಎಳನೀರು. ಆದರೆ ಎಳನೀರು ಎಲ್ಲಾ ಸಮಯದಲ್ಲಿ ಸಿಗದೇ ಇದ್ದಲ್ಲಿ ಅದರ ಬಳಿಕ ಸ್ಥಾನ ಪಡೆದಿರುವ ಕುಂಬಳ ಕಾಯಿಯನ್ನು ಉಪಯೋಗಿಸಬಹುದು. ಇದರಿಂದ ಶರೀರದಲ್ಲಿರುವ ವಿಷಕಾರಿ ವಸ್ತುಗಳು ಮತ್ತು ಅನಗತ್ಯ ತ್ಯಾಜ್ಯಗಳು ಶೀಘ್ರವಾಗಿ ದೇಹದಿಂದ ಹೊರಹೋಗಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಕುಂಬಳಕಾಯಿ ಒಂದು ನೈಸರ್ಗಿಕವಾದ ನಿರ್ವಿಷಗೊಳಿಸುವ ಆಹಾರವಾಗಿದೆ. ಹೃದಯದ ಆರೋಗ್ಯಕ್ಕೂ ಉತ್ತಮವಾದ ಕುಂಬಳ ಕಾಯಿ ಕುಂಬಳ ಕಾಯಿಯಲ್ಲಿ ಉತ್ತಮ ಪ್ರಮಾಣದ ಪೊಟ್ಯಾಶಿಯಂ ಮತ್ತು ಕರಗುವ ನಾರು ಇದೆ. ಪೊಟ್ಯಾಶಿಯಂ ಹೃದಯದ ಕಾರ್ಯನಿರ್ವಹಣೆಗೆ ಅಗತ್ಯವಾದ ಪೋಷಕಾಂಶವಾಗಿದೆ. ಕುಂಬಳ ಕಾಯಿಯ ಒಣಗಿಸಿದ ಬೀಜಗಳ ತಿರುಳಿನಲ್ಲಿ ಒಮೆಗಾ-3 ಕೊಬ್ಬಿನ ತೈಲವಿದೆ. ಇದೂ ಸಹಾ ಹೃದಯಕ್ಕೆ ಉತ್ತಮವಾದ ಪೋಷಕಾಂಶವಾಗಿದೆ. ಜೊತೆಗೇ ಈ ಪೋಷಕಾಂಶಗಳು ಮೆದುಳನ್ನು ಚುರುಕುಗೊಳಿಸಲು ನೆರವಾಗುತ್ತವೆ. ಈ ಬೀಜಗಳಲ್ಲಿ ಕಬ್ಬಿಣ, ಪ್ರೋಟೀನುಗಳೂ ಉತ್ತಮ ಪ್ರಮಾಣದಲ್ಲಿದ್ದು ಆರೋಗ್ಯಕ್ಕೆ ಪೂರಕವಾಗಿದೆ. ಕುಂಬಳ ಕಾಯಿ ಬೀಜಗಳಿಂದ ಸುಖವಾದ ನಿದ್ದೆ ಬರುತ್ತದೆ ಉತ್ತಮ ಆರೋಗ್ಯಕ್ಕೆ ಸುಖವಾದ (ಅಂದರೆ ತಡೆರಹಿತವಾದ ಮತ್ತು ಗಾಢವಾದ) ನಿದ್ದೆ ಅವಶ್ಯವಾಗಿದೆ. ನಿದ್ದೆಯ ಕೊರತೆಯಿಂದಾಗಿ ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕುಂಬಳಕಾಯಿಯ ಬೀಜಗಳಲ್ಲಿ ಟ್ರಿಪ್ಟೋಫಾನ್ (tryptophan) ಎಂಬ ಅಮೈನೋ ಆಮ್ಲವಿದೆ. ಈ ಆಮ್ಲ ಸುಖವಾದ ನಿದ್ದೆಯನ್ನು ನೀಡಲು ಸಮರ್ಥವಾದ ನೈಸರ್ಗಿಕ ಪೋಷಕಾಂಶವಾಗಿದೆ. ಇದಕ್ಕಾಗಿ ರಾತ್ರಿ ಊಟದ ಬಳಿಕ ಕೆಲವು ಬೀಜಗಳನ್ನು ಸೇವಿಸಿ ಕೊಂಚ ದೂರ (ಸುಮಾರು ಇಪ್ಪತ್ತು ನಿಮಿಷಗಳು) ನಡೆದು ಹಿಂದಿರುಗಿ ಮುಖ ಮತ್ತು ಪಾದಗಳನ್ನು ತಣ್ಣೀರಿನಿಂದ ತೊಳೆದುಕೊಂಡು ಪವಡಿಸುವ ಮೂಲಕ ಕೆಲವೇ ನಿಮಿಷಗಳಲ್ಲಿ ಗಾಢ ನಿದ್ದೆಗೆ ಜಾರಬಹುದು.

ಮೂಲ : ಬೋಲ್ಡ್ ಸ್ಕೈ(http://kannada.boldsky.com/ )

2.98823529412
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top