ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ಆಹಾರ ಕ್ರಮಗಳು / ಚಳಿಗಾಲದ ಆಹಾರಗಳು
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಚಳಿಗಾಲದ ಆಹಾರಗಳು

ಚಳಿಗಾಲದ ಆಹಾರಗಳ ಬಗ್ಗೆ

ಯಾವುದೇ ತಜ್ಞ ವೈದ್ಯರನ್ನು ಕೇಳಿದರೆ ಸಮಸ್ಯೆಗಳಿಗೆ ಕಾರಣ ನಮ್ಮ ಜೀವನ ಶೈಲಿಯೇ ಎಂಬ ಉಪಸಂಹಾರಕ್ಕೆ ಬರುವುದನ್ನು ಕಾಣುತ್ತೇವೆ. ನಮ್ಮ ದಿನಚರಿಯಲ್ಲೊಂದು ಶಿಸ್ತಿಲ್ಲದಿರುವುದು, ಆಹಾರ ಶೈಲಿಯಲ್ಲಿ ಕ್ರಮಬದ್ಧವಾದ ರೀತಿ ಇಲ್ಲದಿರುವುದು ಮತ್ತು ಆಯಾ ಕಾಲಕ್ಕೆ ಅಗತ್ಯವಾದ, ಆಯಾ ಕಾಲದಲ್ಲಿ ಮಾತ್ರ ಸಿಗುವ ಆಹಾರಗಳನ್ನು ಸೇವಿಸುವ ಬದಲು ನಮ್ಮ ನಾಲಿಗೆಗೆ ಬೇಕೆನ್ನಿಸಿದ ಆಹಾರವನ್ನೇ ಸೇವಿಸುವುದು… ಇವೆಲ್ಲವೂ ದೇಹಾರೋಗ್ಯದ ಅಸಮತೋಲನಕ್ಕೆ ಮುಖ್ಯ ಕಾರಣ. ಬೇಸಿಗೆಯಲ್ಲಿ ಸೇವಿಸುವ ಆಹಾರಕ್ಕೂ, ಚಳಿಗಾಲದಲ್ಲಿ ಸೇವಿಸಬೇಕಾದ ಆಹಾರಕ್ಕೂ ಬಹಳಷ್ಟು ವ್ಯತ್ಯಾಸಗಳಿರುತ್ತವೆ. ಕೆಲವನ್ನು ಚಳಿಗಾಲದಲ್ಲೇ ಸೇವಿಸಬೇಕೆಂದು ನಮ್ಮ ಹಿರಿಯರು ಮಾಡಿದ ಪದ್ಧತಿಗಳನ್ನು ಮೂಢ ನಂಬಿಕೆ ಎಂದೇ ನಾವು ತಾತ್ಸಾರ ಮಾಡಿದ್ದೇವೆ. ಆದರೆ ಅವುಗಳಿಗಿರುವ ವೈಜ್ಞಾನಿಕ ಕಾರಣಗಳನ್ನು ಅರಿತರೆ ಮಾತ್ರವೇ ಅವುಗಳ ಹಿಂದಿರುವ ದೇಹ ಸ್ವಾಸ್ಥ್ಯದ ಉದ್ದೇಶ ಮನದಟ್ಟಾಗುತ್ತದೆ.
ಚಳಿಗಾಲದಲ್ಲಿ ಮಾತ್ರ ಸಿಗುವ ಕೆಲವು ಹಣ್ಣು-ತರಕಾರಿಗಳು ಆ ಹವೆಯಲ್ಲಿ ದೇಹದ ಆರೋಗ್ಯಕ್ಕೆ ಒಳ್ಳೆಯದಾಗಿವೆ. ಚಳಿಗಾಲದಲ್ಲಿ ದೇಹದ ಆರೋಗ್ಯದ ಮೇಲೆ ಹೆಚ್ಚು ಪ್ರಭಾವ ಬೀರುವ, ದೇಹದ ಸ್ವಾಸ್ಥ್ಯವನ್ನು ಹೆಚ್ಚಿಸುವ ಹತ್ತು ಆಹಾರಪದಾರ್ಥಗಳು ಇಲ್ಲಿವೆ…

1. ಕಿತ್ತಳೆ: ಚಳಿಗಾಲದಲ್ಲಿ ದೇಹಕ್ಕೆ ಸಿ ವಿಟಾಮಿನ್ ಹೆಚ್ಚು ಅಗತ್ಯವಿರುವುದರಿಂದ ಕಿತ್ತಳೆ ಹಣ್ಣನ್ನು ಈ ಸಮಯದಲ್ಲಿ ತಿನ್ನುವುದು ಬಹಳ ಒಳ್ಳೆಯದು. ಚಳಿಗಾಲದಲ್ಲಿ ಹೇರಳವಾಗಿ ದೊರಕುವ ಕಿತ್ತಳೆಯಲ್ಲಿ ಸಿಟ್ರಸ್ ಆಮ್ಲವಿರುತ್ತದೆ. ಇದು ‘ಸಿ’ ಜೀವಸತ್ವದ ತವರೂರು. ದೇಹದಲ್ಲಿರುವ ರೋಗಾಣುಗಳ ವಿರುದ್ಧ ಹೋರಾಡುವಲ್ಲಿ ಇದರ ಪಾತ್ರ ಮಹತ್ವದ್ದು.
2. ಸೇಬು: ಪ್ರತಿ ದಿನ ಒಂದು ಸೇಬನ್ನು ತಿನ್ನುವುದರಿಂದ ವೈದ್ಯರನ್ನು ದೂರವಿಡಬಹುದು ಎಂಬ ಮಾತನ್ನು ನಾವು ಹಲವೆಡೆ ಕೇಳಿದ್ದೇವೆ. ಬಹಳ ದುಬಾರಿ ಹಣ್ಣು ಎಂದೇ ಖ್ಯಾತಿಯಾದ ಸೇಬು ಚಳಿಗಾಲದ ಸಮಯದಲ್ಲಿ ಯಥೇಚ್ಛವಾಗಿ ಸಿಗುತ್ತದೆ. ಪ್ರತಿ ದಿನ ಊಟದ ನಂತರ ಸೇಬು ಸೇವಿಸುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು.

3. ಕ್ಯಾರೆಟ್: ಪ್ರತಿ ದಿನ ಒಂದಾದರೂ ಹಸಿ ಕ್ಯಾರೆಟ್ ಸೇವನೆ ಈ ಸಮಯದಲ್ಲಿ ಬಹಳ ಒಳ್ಳೆಯದು. ವಿಟಾಮಿನ್ ಎ ಇದರಲ್ಲಿ ಹೇರಳವಾಗಿರುವುದಲ್ಲದೆ, ವಿಟಾಮಿನ್ ಬಿ, ಸಿ, ಡಿ, ಇ, ಕೆ ಗಳು ಕೂಡ ಕ್ಯಾರೆಟ್‌ನಲ್ಲಿರುವುದರಿಂದ ಏಕಕಾಲದಲ್ಲಿ ದೇಹಕ್ಕೆ ಹಲವು ವಿಟಾಮಿನ್‌ಗಳು ಸಿಕ್ಕಂತಾಗುತ್ತದೆ. ಕ್ಯಾಲ್ಷಿಯಂ ಅಂಶಗಳು ಸಹ ಇದರಲ್ಲಿ ಹೇರಳವಾಗಿರುತ್ತವೆ. ಅಲ್ಲದೆ ಕೊಬ್ಬಿನಂಶವನ್ನು ಕಡಿಮೆಗೊಳಿಸುವ ಶಕ್ತಿಯೂ ಕ್ಯಾರೆಟ್‌ಗಿದೆ.

4. ಸಾಸಿವೆ ಎಲೆ: ಸಾಸಿವೆಯಲ್ಲಿ ಚಳಿಗಾಲಕ್ಕೆ ದೇಹಕ್ಕೆ ಅಗತ್ಯವಾಗಿ ಬೇಕಾದ ಸಾಕಷ್ಟು ಪೋಷಕಾಂಶಗಳಿರುತ್ತವೆ. ಸಾಸಿವೆ ಗಿಡದ ಚಿಗುರೆಲೆಗಳು ಪಂಜಾಬಿನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿವೆ. ಇವನ್ನು ಹಸಿಯಾಗಿಯೇ ಸೇವಿಸುವುದರಿಂದ ಇದರಲ್ಲಿರುವ ವಿಟಾಮಿನ್‌ಗಳು, ಮಿನರಲ್‌ಗಳು ಮತ್ತು ಕ್ಯಾರೊಟಿನ್‌ಗಳು ದೇಹ ಸೇರಿ ಆರೋಗ್ಯವನ್ನು ಸುಸ್ಥಿತಿಯಲ್ಲಿಡುತ್ತವೆ.

5. ಬಟಾಣಿ: ಪಲಾವ್ ಅಥವಾ ಮತ್ತಿತರ ತಿಂಡಿಗಳಲ್ಲಿ ಬಟಾಣಿ ಬಳಸುವುದು ಚಳಿಗಾಲದಲ್ಲಿ ದೇಹಕ್ಕೆ ಉತ್ತಮ. ಇದು ಹೊಟ್ಟೆಯ ಕ್ಯಾನ್ಸರ್ ಅನ್ನೂ ನಿಯಂತ್ರಿಸುವ ಶಕ್ತಿ ಹೊಂದಿದೆ.

6. ಕೋಸು: ನವಿಲು ಕೋಸು ಸಹ ಚಳಿಗಾಲದಲ್ಲಿ ಅತ್ಯಂತ ಆರೋಗ್ಯಕರ ತರಕಾರಿ. ಇದನ್ನು ಬೇಯಿಸಿ ತಿನ್ನುವುದರಿಂದ ಇದರಲ್ಲಿನ ಪೋಷಕಾಂಶಗಳು ಮರೆಯಾಗಬಹುದು. ಆದ್ದರಿಂದ ಎಳೆಯ ಗೆಡ್ಡೆಗಳನ್ನು ಹಸಿಯಾಗಿಯೇ ತಿನ್ನುವುದು ಒಳ್ಳೆಯದು. ಮಧುಮೇಹಕ್ಕೆ ಇದು ಒಳ್ಳೆಯ ಮದ್ದೂ ಹೌದು.
7. ಮೆಂತ್ಯ ಸೊಪ್ಪು: ಮೆಂತ್ಯ ಸೊಪ್ಪಿನಲ್ಲಿಯೂ ಸಾಕಷ್ಟು ಪ್ರಮಾಣದ ವಿಟಾಮಿನ್, ಮಿನರಲ್ ಅಂಶಗಳಿರುವುದರಿಂದ ವಿಶೇಷವಾಗಿ ಚಳಿಗಾಲದಲ್ಲಿ ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಸ್ವಲ್ಪ ಪ್ರಮಾಣದ ಕಹಿ ಅಂಶವನ್ನು ಹೊಂದಿರುವುದರಿಂದ ಮಧುಮೇಹ ರೋಗಕ್ಕೂ ಇದು ರಾಮಬಾಣವೆನ್ನಿಸಿದೆ.
8. ಮೂಲಂಗಿ: ಮೂಲಂಗಿ ಪೊಟ್ಯಾಶಿಯಂ ಮತ್ತು ಫೋಲಿಕ್ ಆಮ್ಲಗಳ ಆಗರ. ಚಳಿಗಾಲದಲ್ಲಿ ಮಾರುಕಟ್ಟೆಯಲ್ಲಿ ಹೆಚ್ಚಾಗಿ ಕಾಣಸಿಗುವ ಅದು ಆ ಅವಧಿಯಲ್ಲಿ ತಿಂದರೇ ಹೆಚ್ಚು ಉಪಯೋಗಕಾರಿ. ಇದನ್ನೂ ಸಹ ಬೇಯಿಸಿ ತಿನ್ನುವುದಕ್ಕಿಂತ ಹಸಿಯಾಗಿಯೇ ತಿಂದರೆ ಒಳ್ಳೆಯದು.
9. ಬಸಳೆ ಮತ್ತು ಪಾಲಾಕ್ ಸೊಪ್ಪು: ಇದು ಅತ್ಯಂತ ಆರೋಗ್ಯಕರ ಸೊಪ್ಪು ಎಂಬ ಖ್ಯಾತಿ ಪಡೆದಿರುವುದರಿಂದ ಚಳಿಗಾಲದಲ್ಲಿ ಇದರ ಸೇವನೆ ಅತ್ಯಂತ ಒಳ್ಳೆಯದು.

10. ಕಡಲೆಬೀಜ: ವಿಟಾಮಿನ್, ಪೊಟ್ಯಾಶಿಯಂ, ಪ್ರೋಟಿನ್, ಕಾರ್ಬೊಹೈಡ್ರೆಟ್, ಕ್ಯಾಲ್ಷಿಯಂ…ಅಂಶಗಳು ಕಡಲೆಕಾಯಿಯಲ್ಲಿ ಹೇರಳವಾಗಿರುವುದರಿಂದ ಚಳಿಗಾಲದಲ್ಲಿ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಇದು ನೀಡುತ್ತದೆ. ಹಸಿಯಾಗಿ ತಿಂದರೆ ಮತ್ತಷ್ಟು ಒಳ್ಳೆಯದು.

ಮೂಲ: ವಿಕ್ರಮ

2.95294117647
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top