অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಬಹೂಪಯೋಗಿ ಸೌತೆ

ಬಹೂಪಯೋಗಿ ಸೌತೆ

ದಕ್ಷಿಣ ಏಷಿಯಾ ಮೂಲದಿಂದ ಬಂದ ಸೌತೆಕಾಯಿ ಈಗ ವಿಶ್ವವ್ಯಾಪಿ. ಜಗತ್ತಿನ ಎಲ್ಲ ಭಾಗಗಳಲ್ಲೂ ಬೆಳೆಯುವ ಸೌತೆಕಾಯಿ, ಆರೋಗ್ಯಪೂರ್ಣ ಜೀವನಕ್ಕೆ ಅತ್ಯಂತ ಸಮೃದ್ಧ ತರಕಾರಿ.  ಸಂಪೂರ್ಣ ಆರೋಗ್ಯಕ್ಕೆ ಅದರ ಸೇವನೆ ತುಂಬ ಸಹಕಾರಿ.  ನೀವು ಕಾಯಪಲ್ಲೆ ಮಾರುಕಟ್ಟೆಗೆ ಹೋದಾಗ ಸೌತೆಕಾಯಿ ಖರೀದಿಸುವದನ್ನು ಮರೆಯಬೇಡಿ.  ಜೊತೆಗೆ ಅದು ಸಾವಯವ ಕೃಷಿಯಲ್ಲಿ ಬೆಳೆದದ್ದು ಎಂಬುದನ್ನು ಖಾತ್ರಿ ಮಾಡಿಕೊಳ್ಳಿ.  ಅದಕ್ಕಿಂತಲೂ ಉತ್ತಮ ಎಂದರೆ ನೀವೇ ನಿಮ್ಮ ಹಿತ್ತಲಲ್ಲಿಯೋ ಇಲ್ಲವೆ ಟೆರಸ್ ಮೇಲೋ ಸವತೆ ಬಳ್ಳಿಯನ್ನು ಬೆಳೆಯುವದು ಸೂಕ್ತ.  ಹೀಗಾದರೆ, ನೀವು ಸೌತೆಕಾಯಿಯನ್ನು ಯಾವ ಕ್ರಿಮಿನಾಶಕ ಹಾಗು ರಾಸಾಯನಿಕವೂ ಇಲ್ಲದೇ ಬೆಳೆಯಬಹುದು.

ಪ್ರತಿಶತ ೯೦ರಷ್ಟು ನೀರಿನ ಅಂಶ ಹೊಂದಿದ ಸೌತೆಕಾಯಿ ನಿಮ್ಮ ದೇಹದ ನಿರ್ಜಲೀಕರಣವನ್ನು ಯಶಸ್ವಿಯಾಗಿ ನೀಗಿಸುತ್ತದೆ. ಶರೀರವನ್ನು ತಂಪುಗೊಳಿಸಿ ಮನಸ್ಸಿಗೆ ಉತ್ಸಾಹವನ್ನು ತುಂಬುತ್ತದೆ.  ಹೊಟ್ಟೆಯುರಿ, ಎದೆಯುರಿಗಳನ್ನು ಶಮನಗೊಳಿಸುತ್ತದೆ.  ನೀವು ಸ್ಥೂಲ ಕಾಯದವರಾಗಿದ್ದರೆ ಸೌತೆಕಾಯಿ ಸೇವನೆ ತುಂಬ ಪರಿಣಾಮಕಾರಿ.  ನಿತ್ಯ ಸೇವನೆಯಿಂದ ನಿಮ್ಮ ತೂಕವನ್ನು ತಕ್ಕ ಮಟ್ಟಿಗೆ ಕಡಿಮೆಗೊಳಿಸಿಕೊಳ್ಳಬಹುದು.

ಸೌತೆಕಾಯಿಯನ್ನು ಸೃಷ್ಟಿಯ ಪೊರಕೆ ಎನ್ನುತ್ತಾರೆ.  ಅದು ಶರೀರದಲ್ಲಿನ ಅನುಪಯುಕ್ತ ಹಾಗು ವಿಷಕಾರಕ ವಸ್ತುಗಳನ್ನು ಗುಡಿಸಿ ಹೊರಹಾಕುತ್ತದೆ.  ನಿತ್ಯ ಸೇವನೆಯಿಂದ ಮೂತ್ರ ಪಿಂಡದಲ್ಲಿನ ಕಲ್ಲುಗಳು ಕರಗುತ್ತವೆ.  ಎದೆ, ಗರ್ಭಾಶಯ, ಅಂಡಾಶಯ, ಪ್ರಾಸ್ಟೇಟ ಮುಂತಾದ ಕ್ಯಾನ್ಸರ್‌ಗಳಿಗೆ, ಶರೀರ ಒಳಗಾಗುವದನ್ನು ಅದು ತಪ್ಪಿಸುತ್ತದೆ. ಈ ವಿಷಯವನ್ನು ಅನೇಕ ಸಂಶೋಧನೆಗಳು ದೃಢಪಡಿಸಿವೆ.
ನಿಮ್ಮ ಬಾಯಿವಾಸನೆಗೆ ಸೌತೆಕಾಯಿಯ ತೆಳುವಾದ ಹೋಳನ್ನು ನಾಲಿಗೆಯ ಮೇಲೆ ಇಟ್ಟುಕೊಂಡು ಬಾಯಿಯ ಮೇಲಿನ ಅಂಗಳಕ್ಕೆ ಒತ್ತಿರಿ.  ಹಾಗೆಯೇ ಒಂದರ್ಧ ನಿಮಿಷ ಒತ್ತುತ್ತಿರಿ.  ಅದು ನಿಮ್ಮ ಬಾಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.

ಸೌತೆಕಾಯಿಯಲ್ಲಿನ ಹೆಚ್ಚು ನೀರಿನ ಪ್ರಮಾಣ ಹಾಗು ಕಡಿಮೆ ಕ್ಯಾಲೋರಿಯಿಂದಾಗಿ ಅದು ಪಚನ ಕ್ರಿಯೆಗೆ ತುಂಬ ಅನಕೂಲಕರ.  ಅದರಲ್ಲಿನ ನಾರಿನ ಅಂಶ ಮಲಬದ್ಧತೆಯಿಂದ ಬಳಲುವವರಿಗೆ ವರದಾನವಾಗಿದೆ.  ಸಕ್ಕರೆ ಕಾಯಿಲೆಯಿಂದ ಬಳಲುವವರಿಗೆ ಅದು ಅತ್ಯಂತ ಉಪಯುಕ್ತ ಆಹಾರ.  ಸೌತೆಕಾಯಿ ರಸ ಇನ್ಸುಲಿನ್ ಉತ್ಪಾದಿಸಲು ಮೇದೋಜ್ಜೀರಕ ಗ್ರಂಥಿಗೆ ಸಹಾಯ ಮಾಡುತ್ತದೆ.  ಜೊತೆಗೆ ಅದು ದೇಹದಲ್ಲಿನ ಕೊಲೆಸ್ಟ್ರಾಲ್ ಪ್ರಮಾಣವನ್ನು ತಗ್ಗಿಸಲು ತುಂಬ ಸಹಕಾರಿ.  ಇದರಲ್ಲಿ ಪೊಟ್ಯಾಸಿಯಂ ಹಾಗು ಮ್ಯಾಗ್ನೇಸಿಯಂ ಇರುವದರಿಂದ ರಕ್ತದ ಒತ್ತಡವನ್ನು ಅದು ನಿಯತ್ರಿಸಬಲ್ಲದು.  ಹೆಚ್ಚು ಹಾಗು ಕಡಿಮೆ ರಕ್ತದ ಒತ್ತಡ ಉಳ್ಳವರಗೆ ಸೌತೆಕಾಯಿ ಸೇವನೆ ತುಂಬ ಪ್ರಯೋಜನಕಾರಿ.  ಏಡ್ಸ ಮೊದಲಾದ ಕಾಯಿಲೆಗಳಿಂದ ಸೊರಗಿದವರಿಗೆ ಸೌತೆಕಾಯಿ ಅಮೃತ ಸಮಾನ.

ಬೆಳಿಗ್ಗೆ ಎದ್ದೊಡನೆ ತಲೆ ನೋಯುತ್ತಿದೆಯೇ?  ಕಣ್ಣಿಗೆ ಕತ್ತಲೆ ಬಂದಂತಾಗುತ್ತಿದೆಯೇ?  ದಿನವೂ ಸಂಜೆ ಒಂದಿಷ್ಟು ಸೌತೆಕಾಯಿ ಸೇವಿಸಿ.  ಅದರಲ್ಲಿರುವ ಸಕ್ಕರೆ, ಬಿ ಜೀವನಸತ್ವ, ಎಲೆಕ್ಟ್ರೋಲೈಟ ಮುಂತಾದವುಗಳು ನಿಮ್ಮ ದೇಹಕ್ಕೆ ಅವಶ್ಯ ಇರುವ ಪೋಷಕಾಂಶಗಳನ್ನು ಒದಗಿಸಿ ನಿಮ್ಮ ಸಮಸ್ಯೆಗಳನ್ನು ನೀಗಿಸಬಲ್ಲವು.  ವಾತ ಪ್ರಕೋಪ, ಸಂದು-ಕೀಲು ನೋವುಗಳಲ್ಲೂ ಸೌತೆಕಾಯಿ ಸೇವನೆ ತುಂಬ ಪ್ರಯೋಜನಕಾರಿ.

ಚರ್ಮ ಉರಿ ಹಾಗು ಸನ್‌ಬರ್ನ್ಸಗಳಲ್ಲಿ ಸೌತೆಕಾಯಿ ರಸ ತುಂಬ ಪ್ರಯೋಜನಕ್ಕೆ ಬರುತ್ತದೆ.  ಕಣ್ಣುಗಳ ಉರಿತ/ನೋವು ಇದ್ದರೆ ಕಣ್ಣು ಮುಚ್ಚಿ, ಕಣ್ಣಿನ ರೆಪ್ಪೆಯ ಮೇಲೆ ಸೌತೆಕಾಯಿಯ ಹೋಳುಗಳನ್ನು ಇಡಿ.  ಅದು ನಿಮ್ಮ ತೊಂದರೆಯನ್ನು ನಿವಾರಿಸಬಲ್ಲದು.  ಸವತೆಕಾಯಲ್ಲಿರುವ ಸಿಲಿಕಾನ್ ಹಾಗು ಸಲ್ಫರ್ ಕೇಶವರ್ಧನೆಗೂ ಸಹಕಾರಿ.

ಬರೀ ಆರೋಗ್ಯದ ವಿಷಯದಲ್ಲಿ ಮಾತ್ರ ಅಲ್ಲ ಬೇರೆ ವಿಷಯದಲ್ಲೂ ಸೌತೆಕಾಯಿಂದ ಪ್ರಯೋಜನ ಪಡೆಯಬಹುದು.  ನಿಮ್ಮ ಮನೆಯ ಕನ್ನಡಿ ಕಲೆಗಳಿಂದ ಮಂಕಾಗಿದ್ದರೆ, ಅದನ್ನು ಸೌತೆಕಾಯಿ ಹೋಳುಗಳಿಂದ ತಿಕ್ಕಿ ಸ್ವಚ್ಛಗೊಳಿಸಬಹುದು.  ನಿಮ್ಮ ಮನೆಯ ಬಾಗಿಲು-ಕಿಡಕಿಗಳ ಹಿಂಜಿಸ್‌ಗಳು, ಮುಚ್ಚುವಾಗ ತೆರೆಯುವಾಗ ಕರ್ಣಕಠೋರವಾದ ಕೀಜಲು ಸ್ವರವನ್ನು ಹೊರಡಿಸುತ್ತಿದ್ದರೆ; ಸೌತೆಕಾಯಿ ಅದಕ್ಕೂ ಪರಿಹಾರ ನೀಡಬಲ್ಲದು.  ಹಿಂಜಿಸ್ಸುಗಳಿಗೆ ಸೌತೆಕಾಯಿ ರಸವನ್ನು ಸವರಿ.  ಬಾಗಿಲುಗಳು ಸದ್ದಿಲ್ಲದೇ ಮುಚ್ಚಿ ತೆರೆಯುತ್ತವೆ.

ಮೂಲ :ಪ್ರಜಾವಾಣಿ

ಕೊನೆಯ ಮಾರ್ಪಾಟು : 3/5/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate