অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹಣ್ಣುಗಳ ಪರಿಣಾಮ

ಅಪ್ಪಿತಪ್ಪಿಯೂ ಭರ್ಜರಿ ಊಟದ ಬಳಿಕ ಹಣ್ಣುಗಳನ್ನು ಸೇವಿಸಬೇಡಿ


ನಮಗೆ ಅಗತ್ಯವಾದ ಹಲವು ಪೋಷಕಾಂಶಗಳು ಹಣ್ಣುಗಳ ಮೂಲಕ ದೊರಕುತ್ತದೆ. ಆದರೆ ಎಲ್ಲಾ ಹಣ್ಣುಗಳಲ್ಲಿ ಎಲ್ಲಾ ಪೋಷಕಾಂಶಗಳು ಏಕಪ್ರಕಾರವಾಗಿರುವುದಿಲ್ಲ. ಆ ಪ್ರಕಾರ ಕೇವಲ ಒಂದೇ ಪ್ರಕಾರದ ಆಹಾರವನ್ನು ನಾವು ಸೇವಿಸುವ ಬದಲು ಬೇರೆ ಬೇರೆ ಹೊತ್ತಿನಲ್ಲಿ ಬೇರೆ ಬೇರೆ ಹಣ್ಣುಗಳನ್ನು ಸೇವಿಸುವುದರಿಂದ ಎಲ್ಲಾ ಹಣ್ಣುಗಳ ಗರಿಷ್ಟ ಉಪಯೋಗವನ್ನು ಪಡೆಯಬಹುದು. ಆದರೆ ಹಣ್ಣುಗಳನ್ನು ಯಾವುದೇ ಹೊತ್ತಿನಲ್ಲಿ ಮನಬಂದಂತೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಉದಾಹರಣೆಗೆ ಊಟದ ಬಳಿಕ ಹಲಸಿನ ಹಣ್ಣು ತಿನ್ನುವುದು ಅತಿಸಾರಕ್ಕೆ ಆಹ್ವಾನ (ಸ್ವಾತಂತ್ರ್ಯಪೂರ್ವದಲ್ಲಿ ಹಲಸಿನ ಹಣ್ಣು ತಿಂದು ರೈಲು ಹತ್ತಿದ್ದ ಭಾರತದ ಹಳ್ಳಿಗರೊಬ್ಬರು ನಿಲ್ದಾಣವೊಂದರಲ್ಲಿ ಶೌಚಕ್ಕೆಂದು ಇಳಿದು ಹಿಂದಿರುಗುವಷ್ಟರಲ್ಲಿ ರೈಲು ಹೊರಟು ಹೋಗಿತ್ತು. ಈ ಬಗ್ಗೆ ನೀಡಿದ ದೂರನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟಿಷ್ ಸರ್ಕಾರ ರೈಲುಗಳಲ್ಲಿಯೇ ಶೌಚಾಲಯವನ್ನು ನಿರ್ಮಿಸಿರುವುದು ಈಗ ಇತಿಹಾಸ).

ಆದ್ದರಿಂದ ಹಣ್ಣುಗಳನ್ನು ಸೇವಿಸುವುದಕ್ಕಿಂತಲೂ ಯಾವಾಗ ಮತ್ತು ಯಾವ ಪ್ರಮಾಣದಲ್ಲಿ ತಿನ್ನಬೇಕು ಎಂದು ಅರಿಯುವುದು ಆರೋಗ್ಯದ ಗುಟ್ಟು. ಹಣ್ಣುಗಳ ಬಗ್ಗೆ ಪ್ರತಿ ಪ್ರದೇಶದಲ್ಲಿಯೂ ಬೇರೆ ಬೇರೆಯಾದ ನಂಬುಗೆಗಳಿವೆ. ಕೆಲವರು ಖಾಲಿಹೊಟ್ಟೆಯಲ್ಲಿ ತಿಂದರೆ ಉತ್ತಮ ಎಂದರೆ ಇನ್ನೊಬ್ಬರು ಇದಕ್ಕೆ ತದ್ವಿರುದ್ದವಾಗಿ ಖಾಲಿ ಹೊಟ್ಟೆಯಲ್ಲಿ ಎಂದೂ ತಿನ್ನಬಾರದು ಎಂದು ಸಲಹೆ ನೀಡುತ್ತಾರೆ. ಹಾಗಾದರೆ ಸರಿ ಯಾವುದು? ಯಾವುದನ್ನು ಅನುಸರಿಸಬೇಕು? ಎಷ್ಟು ತಿನ್ನಬೇಕು? ಅಷ್ಟಕ್ಕೂ ದುಬಾರಿಯಾಗಿರುವ ಹಣ್ಣುಗಳನ್ನು ತಿನ್ನಲೇ ಬೇಕೇ? ತಿನ್ನದಿದ್ದರೆ ಏನು ನಷ್ಟ? ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಬೇಕೇ? ಸಿಪ್ಪೆ ರಹಿತವಾಗಿಸಿಯೇ? ಹಣ್ಣುಗಳನ್ನು ಇತರ ಅಡುಗೆಗಳೊಂದಿಗೆ ಬೇಯಿಸಿ ತಿಂದರೆ ಉತ್ತಮವೇ ಅಲ್ಲವೇ? ಇಂತಹ ಹತ್ತು ಹಲವು ಪ್ರಶ್ನೆಗಳಿಗೆ ವಿಜ್ಞಾನ ಯಾವ ಉತ್ತರ ನೀಡುತ್ತದೆ ಎಂಬುದನ್ನು ಇಲ್ಲಿ ಸಂಗ್ರಹಿಸಲಾಗಿದೆ.

ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತಿಂದರೇ ಹೆಚ್ಚು ಪ್ರಯೋಜನಕಾರಿಯಾಗಿದೆ

 

 

ನಮ್ಮ ಹೊಟ್ಟೆಯಲ್ಲಿರುವ ಆಹಾರ ಸುಮಾರು ಮೂರು ಘಂಟೆಗಳ ಬಳಿಕ ಕರುಳುಗಳಿಗೆ ರವಾನೆಯಾಗುವ ಮೂಲಕ ಖಾಲಿಯಾಗುತ್ತದೆ. ಆದರೆ ಈ ಸಮಯದಲ್ಲಿ ಆಹಾರ ಸೇವಿಸುವುದು ಒಳ್ಳೆಯದಲ್ಲ. ಏಕೆಂದರೆ ಖಾಲಿಯಾದ ಬಳಿಕ ಜಠರ ರಸ ಸ್ರವಿಸಿ ಮುಂದಿನ ಆಹಾರದ ಜೀರ್ಣಕ್ರಿಯೆಗೆ ಸಿದ್ಧಪಡಿಸಲು ಕೊಂಚ ಸಮಯದ ಅಗತ್ಯವಿದೆ ಅಂದರೆ ಸುಮಾರು ಎರಡು ಘಂಟೆ. ಈ ಆವಧಿಯನ್ನು ಅನುಸರಿಸಿಯೇ ನಮ್ಮ ಬೆಳಿಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಸಂಜೆಯ ತಿಂಡಿ ಮತ್ತು ರಾತ್ರಿಯ ಊಟಗಳನ್ನು ನಿಗದಿಪಡಿಸಲಾಗಿದೆ. ಅಂತೆಯೇ ಹಣ್ಣುಗಳನ್ನೂ ಹಿಂದಿನ ಊಟದ ಸುಮಾರು ಐದು ಘಂಟೆಗಳ ಬಳಿಕ ಸೇವಿಸಿದರೆ ಹಣ್ಣಿನಲ್ಲಿರುವ ಪೋಷಕಾಂಶಗಳ ಗರಿಷ್ಟ ಪ್ರಯೋಜನವನ್ನು ಪಡೆಯಬಹುದು.

ಭರ್ಜರಿ ಊಟದ ಬಳಿಕ ಹಣ್ಣುಗಳ ಸೇವನೆ ಬೇಡ ಭರ್ಜರಿ ಊಟದ ಬಳಿಕ ಕೆಲವು ಸಂಪ್ರದಾಯಗಳಲ್ಲಿ ಹಣ್ಣುಗಳನ್ನು ಸೇವಿಸಲು ನೀಡುತ್ತಾರೆ. ಮಲೆನಾಡಿನಲ್ಲಿ ಪ್ರತಿ ಊಟದ ಬಳಿಕ ಬಾಳೆಹಣ್ಣು ಸೇವಿಸುವುದು ಊಟದ ಒಂದು ಅಂಗವೇ ಆಗಿದೆ. ಆದರೆ ವಿಜ್ಞಾನ ಭಾರೀ ಊಟದ ಬಳಿಕ ಹಣ್ಣುಗಳನ್ನು ಸೇವಿಸುವುದು ವಿಹಿತವಲ್ಲ ಎನ್ನುತ್ತದೆ. ಏಕೆಂದರೆ ಭರ್ಜರಿ ಊಟದ ಬಳಿಕ ಜಠರರಸ ಆ ಊಟವನ್ನು ಜೀರ್ಣಗೊಳಿಸಲು ಹೆಚ್ಚು ಬಳಕೆಯಾಗುವುದರಿಂದ ಬಳಿಕ ಆಗಮನವಾದ

ಹಣ್ಣುಗಳನ್ನು ಜೀರ್ಣಿಸಲು ವಿಫಲವಾಗುತ್ತದೆ. ಈ ಹಣ್ಣುಗಳು ನಿಧಾನವಾಗಿ ಕೊಳೆಯಲು ಆರಂಭಿಸುತ್ತವೆ. ಇದರಿಂದ ಹುಳಿತೇಗು, ಅಜೀರ್ಣ, ಹೊಟ್ಟೆಯಲ್ಲಿ ಉರಿ ಮೊದಲಾದ ತೊಂದರೆಗಳು ಎದುರಾಗುತ್ತವೆ. ಆದರೆ ಬಾಳೆಹಣ್ಣಿನಲ್ಲಿ ಈ ಪ್ರಮಾಣ ಕನಿಷ್ಟವಿರುತ್ತದೆ. ಸೇಬು ಮತ್ತು ಆಮ್ಲೀಯ ಹಣ್ಣುಗಳು (ಕಿತ್ತಳೆ, ಮೂಸಂಬಿ ಮೊದಲಾದವು) ಗರಿಷ್ಟ ತೊಂದರೆ ನೀಡುತ್ತವೆ. ಹಾಗಾಗಿ ಊಟದ ಪ್ರಮಾಣ ಕಡಿಮೆಯಿದ್ದು ನಾರಿನ ಹಣ್ಣುಗಳನ್ನು ಮಾತ್ರ ಸೇವಿಸುವುದು ಉತ್ತಮ. ಬಾಳೆ, ಪೊಪ್ಪಾಯಿ, ಕಲ್ಲಂಗಡಿ, ತರಬೂಜ ಮೊದಲಾದ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ಅಲ್ಪಪ್ರಮಾಣದಲ್ಲಿ ಸೇವಿಸಬಹುದು. ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಅತ್ಯಂತ ಸೂಕ್ತ ಸಮಯ ಬೆಳಿಗ್ಗೆದ್ದ ಬಳಿಕ ಪ್ರಾತಃವಿಧಿಗಳನ್ನು ಪೂರೈಸಿ ಕೊಂಚ ವ್ಯಾಯಾಮ, ಸ್ನಾನ ಮುಗಿಸಿದ ಬಳಿಕ ಯಾವುದೇ ಹಣ್ಣನ್ನು ತಿಂದರೂ ಅದರಲ್ಲಿರುವ ಪೋಷಕಾಂಶಗಳ ಗರಿಷ್ಟ ಲಾಭವನ್ನು ಪಡೆಯಬಹುದು ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ. ಅಂತೆಯೇ ಎರಡು ಪ್ರಮುಖ ಊಟಗಳ ನಡುವಣ ಸಮಯದಲ್ಲಿ (ಅಂದರೆ ಬೆಳಗ್ಗಿನ ಉಪಾಹಾರ ಮತ್ತು ಮದ್ಯಾಹ್ನದ ಊಟದ ನಡುವೆ, ಮಧ್ಯಾಹ್ನದ ಊಟ ಮತ್ತು ರಾತ್ರಿಯೂಟದ ನಡುವೆ) ಅಲ್ಪ ಪ್ರಮಾಣದಲ್ಲಿ ಹಣ್ಣುಗಳನ್ನು ಸೇವಿಸಬಹುದು ಎಂದು ಅವರು ಸಲಹೆ ನೀಡುತ್ತಾರೆ. ನಿಮ್ಮ ಆರೋಗ್ಯವನ್ನು ಅನುಸರಿಸಿ ಸೂಕ್ತ ಹಣ್ಣುಗಳನ್ನು ಆಯ್ಕೆಮಾಡಿಕೊಳ್ಳಿರಿ ಮಧುಮೇಹಿಗಳಿಗೆ ಸಕ್ಕರೆ ಹೇಗೆ ನಿಷೇಧವೋ ಅಂತೆಯೇ ಸಕ್ಕರೆಯ ಅಂಶ ಹೆಚ್ಚಿರುವ ಹಣ್ಣುಗಳೂ ನಿಷೇಧವಾಗಿದೆ. ವೈದ್ಯರು ಪ್ರತಿ ರೋಗಿಯ ಆರೋಗ್ಯದ ಅಂಕಿ ಅಂಶಗಳನ್ನು ತಾಳೆಹಾಕಿ ಯಾವ ಹಣ್ಣುಗಳು ಸೂಕ್ತ ಎಂದು ಸಲಹೆ ನೀಡುತ್ತಾರೆ. ಆ ಸಲಹೆಯಂತೆಯೇ ಹಣ್ಣುಗಳನ್ನು ಸೂಕ್ತ ಸಮಯದಲ್ಲಿ ಸೇವಿಸುವು ವಿಹಿತ. ಅಂತೆಯೇ, ಹೊಟ್ಟೆಯಲ್ಲಿ ತೊಂದರೆ ಇರುವವರು ಆಮ್ಲೀಯ ಹಣ್ಣುಗಳು, ಅಂದರೆ ಕಿತ್ತಳೆ, ಮೂಸಂಬಿ ಚಕ್ಕೋತ ಮೊದಲಾದ ಹಣ್ಣುಗಳನ್ನು ಸೇವಿಸಬಾರದು. ತೂಕ ಇಳಿಸುವ ನಿಟ್ಟಿನಲ್ಲಿರುವವರು ಹಣ್ಣುಗಳನ್ನು ಅಲ್ಪ ಪ್ರಮಾಣದಲ್ಲಿ ಮತ್ತು ಹಸಿಯಾಗಿ ತಿನ್ನಬಹುದಾದ ತರಕಾರಿಗಳನ್ನು ಸಾಲಾಡ್ ರೂಪದಲ್ಲಿ ಹೆಚ್ಚು ಸೇವಿಸಬೇಕು. ಹಣ್ಣುಗಳನ್ನು ಜ್ಯೂಸ್ ಮಾಡಿಕೊಂಡು ಕುಡಿದರೆ ಹೆಚ್ಚು ಲಾಭಕರ

ಹಣ್ಣುಗಳನ್ನು ಹಾಗೇ ತಿನ್ನುವುದು ಉತ್ತಮವಾದರೂ ಜೀರ್ಣಕ್ರಿಯೆ ಸುಲಭವಾಗಲು ಮಿಕ್ಸಿಯಲ್ಲಿ ಜ್ಯೂಸ್ ಮಾಡಿಕೊಳ್ಳುವುದು ಉತ್ತಮ ಎಂದು ಆಹಾರತಜ್ಞರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಜ್ಯೂಸ್ ಮಾಡುವ ಮೂಲಕ ತಿರುಳು, ಬೀಜ (ತಿನ್ನುವಂತಿದ್ದರೆ) ಮತ್ತು ನಾರು ಅತಿ ಚಿಕ್ಕದಾಗಿ ಕತ್ತರಿಸಲ್ಪಟ್ಟು ಜೀರ್ಣಕ್ರಿಯೆಯನ್ನು ಸುಲಭಗೊಳಿಸುತ್ತವೆ. ಅಲ್ಲದೇ ವಿವಿಧ ಹಣ್ಣುಗಳ ಮಿಶ್ರಣದ ಮೂಲಕ ಬೇರೆ ಬೇರೆ ಬಣ್ಣಗಳಿಂದ ತುಂಬಿದ ಜ್ಯೂಸ್ ನೋಡುತ್ತಿದ್ದಂತೆಯೇ ಕುಡಿಯಲು ಮನಸ್ಸಾಗುತ್ತದೆ. ಈ ಮೂಲಕ ಲಭ್ಯವಾದ ಶಕ್ತಿ ಇಡಿಯ ದಿನದ ಚೈತನ್ಯವನ್ನು ಉಳಿಸಿಕೊಳ್ಳುತ್ತದೆ. ಹಣ್ಣುಗಳ ಸಮರ್ಪಕ ಸೇವನೆ ಹಣ್ಣುಗಳನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ದಿನಕ್ಕೆ ಅವಶ್ಯವಿರುವ ಪೋಷಕಾಂಶಗಳು ಮತ್ತು ಶಕ್ತಿ ಲಭ್ಯವಾಗುತ್ತದೆ. ದೇಹದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತವೆ. ಮೆದುಳು, ಹೃದಯ, ಮೂತ್ರಪಿಂಡ ಮೊದಲಾದ ಅಂಗಗಳ ಕಾರ್ಯಕ್ಷಮತೆ ಹೆಚ್ಚುತ್ತದೆ. ಅನಾರೋಗ್ಯಕ್ಕೆ ಕಾರಣವಾದ ಫ್ರೀ ರ್‍ಯಾಡಿಕಲ್ ಕಣಗಳನ್ನು ದೂರವಾಗಿಸುತ್ತದೆ. ಈ ಎಲ್ಲಾ ಪ್ರಯೋಜನಗಳನ್ನು ಪಡೆಯಲು ವಿವಿಧ ಹಣ್ಣುಗಳನ್ನು ಸಮರ್ಪಕವಾದ ಸಮಯದಲ್ಲಿ ಸೇವಿಸುವುದು ಅಗತ್ಯವಾಗಿದೆ. ಬೆಳಗ್ಗಿನ ಹೊತ್ತು ಖಾಲಿಹೊಟ್ಟೆಯಲ್ಲಿ ಎಳನೀರು ಹಾಗೂ ಕಿತ್ತಳೆ, ಸೇಬು, ಸ್ಟ್ರಾಬೆರಿ ಮೊದಲಾದ ಹುಳಿಯಿರುವ ಹಣ್ಣುಗಳ ಸೇವನೆ ವಿಹಿತ. ಎರಡು ಊಟಗಳ ನಡುವೆ ಮಾವು, ಮೊದಲಾದ ಸಕ್ಕರೆ ಅಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸಬಹುದು. ರಾತ್ರಿಯೂಟದ ಬಳಿಕ ಕಲ್ಲಂಗಡಿ, ತರಬೂಜ ಮೊದಲಾದ ನೀರಿನಂಶ ಹೆಚ್ಚಿರುವ ಹಣ್ಣುಗಳನ್ನು ಸೇವಿಸಬಹುದು.

ಮೂಲ : ಬೋಲ್ಡ್ ಸ್ಕೈ

ಕೊನೆಯ ಮಾರ್ಪಾಟು : 6/30/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate