অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಯೂನಾನಿ

ಯೂನಾನಿ

  1. ಪರಿಚಯ
  2. ಯೂನಾನಿ ಪದ್ಧತಿಯ ತತ್ವ ಹಾಗೂ ಪರಿಕಲ್ಪನೆಗಳು
  3. ಮಾನವ ದೇಹವು ಈ ಕೆಳಗಿನ ಏಳು ಅಂಶಗಳಿಂದ ಮಾಡಲ್ಪಟ್ಟಿದೆ ಎಂದು ಭಾವಿಸಲಾಗಿದೆ:
  4. ಅರ್ಖಾಂ (ಮೂಲವಸ್ತುಗಳು)
  5. ಮಿಝಾಜ್ (ದೇಹಪ್ರಕೃತಿ)
  6. ಅಖ್ಲತ್ (ಹ್ಯೂಮರ್ ಗಳು)
  7. ಆಝಾ (ಅಂಗಾಂಗಗಳು)
  8. ಅರ್ವಾಹ್ (ಚೇತನ)
  9. ಮೂರು ವಿಧವಾದ ಶಕ್ತಿಗಳು ಇವೆ
  10. ಅಫಾಲ್ (ಕ್ರಿಯೆಗಳು)
  11. ಚಿಕಿತ್ಸಾ ಕ್ರಮಗಳು
  12. ಡಿಯಟೋ ಥೆರಪಿ (ಇಲಾಝ್ ಬಿಲ್- ಗಿಝಾ)
  13. ಔಷಧೀಯ ಚಿಕಿತ್ಸೆ (ಇಲಾಜ್-ಬಿಲ್-ದವಾ)
  14. ಶಸ್ತ್ರ ಚಿಕಿತ್ಸೆ (ಇಲಾಜ್ ಬಿಲ್-ಯಾದ್)
  15. ಯೂನಾನಿಯಲ್ಲಿ ಔಷಧ ನಿಯಂತ್ರಣ
  16. ಯೂನಾನಿ ಔಷಧದ ಸೂತ್ರ ಸಂಹಿತೆ
  17. ಔಷಧಶಾಸ್ತ್ರದ ಪ್ರಯೋಗಾಲಯ
  18. ಯೂನಾನಿಯಲ್ಲಿ ಸಂಶೋಧನೆ
  19. ಕೇಂದ್ರ ಯೂನಾನಿ ವೈದ್ಯಕೀಯ ಸಂಶೋಧನಾ ಮಂಡಲಿ
  20. ಯೂನಾನಿ ಆಸ್ಪತ್ರೆಗಳು ಮತ್ತು ಔಷಧಾಲಯಗಳು
  21. ಯೂನಾನಿಯಲ್ಲಿ ಶಿಕ್ಷಣ
  22. ರಾಷ್ಟ್ರೀಯ ಯೂನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು

ಪರಿಚಯ

ಯೂನಾನಿ ವೈದ್ಯಕೀಯ ಪದ್ಧತಿಯು ಭಾರತದಲ್ಲಿ ಸುದೀರ್ಘವಾದ ಹಾಗೂ ಪರಿಣಾಮಕಾರಿಯಾದ ದಾಖಲೆಯನ್ನು ಹೊಂದಿದೆ. ಸುಮಾರು ಹನ್ನೊಂದನೆಯ ಶತಮಾನದಲ್ಲಿ ಭಾರತಲ್ಲಿ ಇದು ಅರಬರಿಂದ ಮತ್ತು ಪರ್ಷಿಯನ್ನರಿಂದ ಪರಿಚಯಿಸಲ್ಪಟ್ಟಿತು. ಇಂದು ಯೂನಾನಿ ಪದ್ಧತಿಯನ್ನು ಬಳಸುವ ದೇಶಗಳಲ್ಲಿ ಭಾರತವು ಒಂದಾಗಿದೆ. ಇಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯ ಯೂನಾನಿ ವೈದ್ಯಕೀಯ ಪದ್ಧತಿಯ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಹಾಗೂ ಆರೋಗ್ಯ ಶುಶ್ರೂಷೆಯ ಕೇಂದ್ರಗಳು ಇವೆ.

ಹೆಸರೇ ಸೂಚಿಸುವಂತೆ, ಯೂನಾನಿ ಪದ್ಧತಿಯು ಗ್ರೀಕ್ ದೇಶದಲ್ಲಿ ಆರಂಭವಾಯಿತು. ಈ ಪದ್ಧತಿಯ ಅಡಿಪಾಯವನ್ನು ನಿರ್ಮಿಸಿದವನು ಹಿಪ್ಪೋಕ್ರೇಟಸ್. ಈ ಪದ್ಧತಿಯ ಇಂದಿನ ಸ್ಥಿತಿಗೆ ಅರಬರು ಕಾರಣ. ಅವರು ಗ್ರೀಕ್ ಭಾಷೆಯಲ್ಲಿದ್ದ ಇದರ ಸಾಹಿತ್ಯವನ್ನು ಅರಬ್ ಭಾಷೆಗೆ ತರ್ಜುಮೆಗೊಳಿಸಿ ಅದರ ಉಳಿವಿಗೆ ಕಾರಣರಾದರಲ್ಲದೆ, ಈ ಪದ್ಧತಿಗೆ ತಮ್ಮದೇ ಕಾಣಿಕೆಯನ್ನು ನೀಡಿ ಅದನ್ನು ಶ್ರೀಮಂತಗೊಳಿಸಿದರು. ಈ ಪ್ರಕ್ರಿಯೆಯಲ್ಲಿ, ಅವರು ಭೌತಶಾಸ್ತ್ರ, ರಸಾಯನ ಶಾಸ್ತ್ರ, ಸಸ್ಯ ಶಾಸ್ತ್ರ, ಅಂಗರಚನಾ ಶಾಸ್ತ್ರ, ಶರೀರ ಕ್ರಿಯಾ ಶಾಸ್ತ್ರ, ರೋಗಶಾಸ್ತ್ರ, ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಬಹುವಾಗಿ ಬಳಕೆ ಮಾಡಿದರು

ಬೇರ ಬೇರೆ ಪ್ರದೇಶಗಳ, ಅಂದರೆ, ಈಜಿಪ್ಟ್, ಸಿರಿಯಾ, ಪರ್ಷಿಯಾ, ಭಾರತ ಮತ್ತು ಚೈನಾ ಹಾಗೂ ಇತರ ಮಧ್ಯ ಪೂರ್ವ ರಾಷ್ಟ್ರಗಳಲ್ಲಿ ಜಾರಿಯಲ್ಲಿದ್ದ ಆಗಿನ ಕಾಲದ ಸಾಂಪ್ರದಾಯಿಕ ವೈದ್ಯ ಪದ್ಧತಿಯಿಂದ ಉತ್ತಮ ಅಂಶಗಳನ್ನು ತನ್ನದಾಗಿಸಿಕೊಂಡು ಈ ಪದ್ಧತಿಯು ಶ್ರೀಮಂತಗೊಂಡಿತು. ಭಾರತದಲ್ಲಿ, ಅರಬರಿಂದ ಯೂನಾನಿ ಪದ್ಧತಿಯು ಪರಿಚಯಸಲ್ಪಟ್ಟು ಬಲವಾಗಿ ಬೇರೂರಿತು. ದೆಹಲಿಯ ಸುಲ್ತಾನರು(ಅರಸರು) ಯೂನಾನಿ ಪದ್ಧತಿಯ ಪಂಡಿತರಿಗೆ ಬೆಂಬಲ ನೀಡಿದ್ದು ಮಾತ್ರವಲ್ಲದೆ, ಕೆಲವರನ್ನು ರಾಷ್ಟ್ರದ ನೌಕರರಾಗಿಯೂ ಮತ್ತು ರಾಜವೈದ್ಯರಾಗಿಯೂ ನೇಮಿಸಿಕೊಂಡಿದ್ದರು..

ಬ್ರಿಟಿಷರ ಆಡಳಿತದ ಅವಧಿಯಲ್ಲಿ ಭಾರತದಲ್ಲಿ ಈ ಪದ್ಧತಿಯು ಭಾರೀ ಹಿನ್ನಡೆ ಕಂಡಿತು. ಅಲೋಪತಿಯನ್ನು ಆ ಅವಧಿಯಲ್ಲಿ ಪರಿಚಯಿಸಲಾಯಿತು ಮತ್ತು ಅದು ಹೆಚ್ಚು ಪ್ರಾಶಸ್ತ್ಯ ಪಡೆದುಕೊಂಡಿತು. ಪರಿಣಾಮವಾಗಿ ಯೂನಾನಿ ವೈದ್ಯಕೀಯ ಪದ್ಧತಿಯ ಅಧ್ಯಯನ, ಸಂಶೋಧನೆ ಮತ್ತು ಆಚರಣೆಗಳು ಕುಂಠಿತಗೊಂಡವು. ಸುಮಾರು ಎರಡು ಶತಮಾನಗಳವರೆಗೆ ಯೂನಾನಿ ಪದ್ಧತಿಯ ಜೊತೆಗೆ ಇತರ ಎಲ್ಲಾ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳು ಕಡೆಗಣಿಸಲ್ಪಟ್ಟವು. ರಾಷ್ಟ್ರದ (ಆಡಳಿತ ರೂಢರ) ಬೆಂಬಲವನ್ನು ಹಿಂತೆಗೆದುಕೊಂಡಿದ್ದರೂ, ಜನರು ಈ ಪದ್ಧತಿಯಲ್ಲಿ ನಂಬಿಕೆ ಕಳೆದುಕೊಂಡಿರದ ಕಾರಣ, ಅದು ಹೆಚ್ಚು ಹಾನಿಯುಂಟುಮಾಡುವುದರಲ್ಲಿ ಸೋತಿತು ಹಾಗೂ ಈ ಪದ್ಧತಿಯು ನಿರಂತರವಾಗಿ ಆಚರಣೆಯಲ್ಲಿತ್ತು. ದೆಹಲಿಯ ಶರೀಫೀ ಮನೆತನ, ಲಖ್ನೌನ ಅಝೀಝೀ ಮನೆತನ ಮತ್ತು ಹೈದರಾಬಾದಿನ ನಿಜಾಮರ ಪ್ರಯತ್ನಗಳಿಂದಾಗಿ ಬ್ರಿಟಿಷರ ಆಡಳಿತ ಕಾಲದಲ್ಲೂ ಈ ಪದ್ಧತಿಯು ಅಳಿಯದೆ ಉಳಿಯಲು ಸಾಧ್ಯವಾಯಿತು.

ಸ್ವತಂತ್ರ್ಯಾನಂತರ, ಕೇಂದ್ರ ಸರಕಾರ ಹಾಗೂ ಜನತೆಯ ಬೆಂಬಲದೊಂದಿಗೆ, ಇತರ ಸಾಂಪ್ರದಾಯಿಕ ವೈದ್ಯ ಪದ್ಧತಿಗಳೊಂದಿಗೆ ಯೂನಾನಿ ಪದ್ಧತಿಯೂ ಚೇತರಿಸಿಕೊಂಡಿತು. ಭಾರತ ಸರಕಾರವು ಈ ಪದ್ಧತಿಯ ಸರ್ವತೋಮುಖ ಅಭಿವೃದ್ಧಿಗೆ ಹಲವಾರು ಅಗತ್ಯ ಕ್ರಮಗಳನ್ನು ಕೈಗೊಂಡಿತು. ಅದರ ಶಿಕ್ಷಣ ಹಾಗೂ ತರಬೇತಿಯನ್ನು ನಿಯಂತ್ರಿಸಲು ಮತ್ತು ಉತ್ತೇಜಿಸಲು ಸೂಕ್ತ ಕಾನೂನುಗಳನ್ನು ಜಾರಿಗೆ ತಂದಿತು. ಅದು ಸಂಶೋಧನಾ ಸಂಸ್ಥೆಗಳನ್ನು, ಪರೀಕ್ಷಾ ಪ್ರಯೋಗಾಲಯಗಳನ್ನು ಮತ್ತು ಔಷಧಗಳ ಉತ್ಪಾದನೆಗೆ ಮತ್ತು ಈ ವೈದ್ಯ ಪದ್ಧತಿಯ ಆಚರಣೆಗೆ ಗುಣಮಟ್ಟವಿರುವ ನಿಯಮಾವಳಿಗಳನ್ನು ಸಂಸ್ಥಾಪಿಸಿತು. ತನ್ನ ಮಾನ್ಯತೆ ಪಡೆದಿರುವ ವೈದ್ಯವೃತ್ತಿನಿರತರು, ಆಸ್ಪತ್ರೆಗಳು ಮತ್ತು ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಿಂದ ಕೂಡಿದ ಈ ವೈದ್ಯ ಪದ್ಧತಿಯು, ಇಂದು, ಆರೋಗ್ಯ ಸೇವೆಗಳನ್ನು ಒದಗಿಸುವ ರಾಷ್ಟ್ರೀಯ ಪದ್ಧತಿಯ ಅವಿಭಾಜ್ಯ ಅಂಶವಾಗಿ ಹೊರಹೊಮ್ಮಿದೆ.

ಯೂನಾನಿ ಪದ್ಧತಿಯ ತತ್ವ ಹಾಗೂ ಪರಿಕಲ್ಪನೆಗಳು

ಯೂನಾನಿ ಪದ್ಧತಿಯ ಮೂಲಭೂತ ತತ್ವವು ಹಿಪ್ಪೊಕ್ರೆಟಸನ ಜನಜಿನಿತವಾದ ನಾಲ್ಕು ಹ್ಯೂಮರ (ಶರೀರದಲ್ಲಿನ ದ್ರವ) ಗಳ ತತ್ವದ ಮೇಲೆ ಆಧಾರಿತವಾಗಿದೆ. ಇದು, ದೇಹದಲ್ಲಿ ನಾಲ್ಕು ಹ್ಯೂಮರಗಳಾದ (ಶರೀರದಲ್ಲಿನ ದ್ರವ) ರಕ್ತ, ಕಫ, ಹಳದಿ ಪಿತ್ತ ಮತ್ತು ಕಪ್ಪು ಪಿತ್ತವಿದೆ, ಎಂದು ಪರಿಗಣಿಸುತ್ತದೆ.

ಮಾನವ ದೇಹವು ಈ ಕೆಳಗಿನ ಏಳು ಅಂಶಗಳಿಂದ ಮಾಡಲ್ಪಟ್ಟಿದೆ ಎಂದು ಭಾವಿಸಲಾಗಿದೆ:

  • ಅರ್ಕಾನ್ (ಮೂಲವಸ್ತುಗಳು)
  • ಮಿಝಾಜ್ (ಪ್ರಕೃತಿ)
  • ಅಖ್ಲತ್ ( ಧಾತುಗಳು)
  • ಆಝಾ (ಅಂಗಾಂಗಗಳು)
  • ಅರ್ವಾಹ್ (ಚೇತನ)
  • ಖುವಾ (ಸಹಜಶಕ್ತಿ)
  • ಅಫಾಲ್ (ಕ್ರಿಯೆಗಳು

ಅರ್ಖಾಂ (ಮೂಲವಸ್ತುಗಳು)

ಮಾನವ ದೇಹವು ನಾಲ್ಕು ಮೂಲವಸ್ತುಗಳನ್ನು ಒಳಗೊಂಡಿದೆ. ಪ್ರತಿಯೊಂದೂ ಈ ಕೆಳಗಿನಂತೆ ತನ್ನದೇ ಪ್ರಕೃತಿಯನ್ನು ಒಳಗೊಂಡಿದೆ:

ಮಿಝಾಜ್ (ದೇಹಪ್ರಕೃತಿ)

ಯೂನಾನಿ ಪದ್ಧತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯ ಪ್ರಕೃತಿಯು ಅಪೂರ್ವವಾದುದರಿಂದ, ಅದು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ವ್ಯಕ್ತಿಯ ಪ್ರಕೃತಿಯು ಮೂಲವಸ್ತುಗಳ ಪರಸ್ಪರ ಕ್ರಿಯೆಗಳ ಪರಿಣಾಮವೆಂದು ನಂಬಲಾಗಿದೆ. ಈ ಪ್ರಕೃತಿಗಳು ಸಮಾನವಾಗಿರಬಹುದು. ಇಲ್ಲಿ ಬಳಸಿದ ನಾಲ್ಕು ಮೂಲವಸ್ತುಗಳು ಸಮ ಪ್ರಮಾಣದಲ್ಲಿರುತ್ತವೆ. ಆದರೆ ಈ ಸ್ಥಿತಿಯು ವಾಸ್ತವವಾಗಿ ಇರುವುದಿಲ್ಲ. ದೇಹ ಪ್ರಕೃತಿಯು ಸಮಾನವಾಗಿರಲೂಬಹುದು. ಅಂದರೆ, ನ್ಯಾಯಬದ್ಧವಾದ ಮತ್ತು ಅಗತ್ಯ ಪ್ರಮಾಣದ ಪ್ರಕೃತಿಯ ಉಪಸ್ಥಿತಿ. ಕೊನೆಯದಾಗಿ, ಪ್ರಕೃತಿಗಳು ಅಸಮಾನವಾಗಿರಬಹುದು. ಅಂತಹ ಸಂದರ್ಭಗಳಲ್ಲಿ, ಮಾನವ ದೇಹದ ಆರೋಗ್ಯಕರ ಕಾರ್ಯನಿರ್ವಹಣೆಯ ಅಗತ್ಯಗಳಿಗೆ ಅನುಸಾರವಾಗಿ ದೇಹ ಪ್ರಕೃತಿಗಳ ನ್ಯಾಯಬದ್ಧವಾದ ಹಂಚುವಿಕೆಯ ಕೊರತೆಯಿರುತ್ತದೆ.

ಅಖ್ಲತ್ (ಹ್ಯೂಮರ್ ಗಳು)

ಹ್ಯೂಮರ್ ಗಳು ದೇಹದ ತೇವವಿರುವ ಹಾಗೂ ದ್ರವ ಭಾಗಗಳಾಗಿವೆ. ಅವುಗಳು ವಸ್ತುಗಳ ಚಯಾಪಚಯ ಕ್ರಿಯೆಯು ನಡೆದು, ಅವುಗಳು ಮಾರ್ಪಾಡುಗೊಂಡ ನಂತರ ಉತ್ಪನ್ನವಾಗುತ್ತವೆ. ಅವುಗಳು ದೇಹಕ್ಕೆ ಪೌಷ್ಠಿಕತೆ ನೀಡುವುದರೊಂದಿಗೆ, ಬೆಳವಣಿಗೆ ಮತ್ತು ದುರಸ್ತಿಯ ಕೆಲಸಗಳನ್ನು ನಿರ್ವಹಿಸಿ, ಶಕ್ತಿಯನ್ನು ಉತ್ಪಾದಿಸುತ್ತವೆ ಹಾಗೂ ಈ ಮೂಲಕ ವ್ಯಕ್ತಿ ಹಾಗೂ ಆತನ ಪ್ರಬೇಧದ ಉಳಿವಿಗೆ ಕಾರಣವಾಗುತ್ತವೆ. ಧಾತುಗಳು ವಿವಿಧ ಅಂಗಾಂಗಗಳಲ್ಲಿನ ತೇವಾಂಶವನ್ನು ನಿರ್ವಹಿಸಿ ದೇಹಕ್ಕೆ ಪೌಷ್ಠಿಕಾಂಶಗಳನ್ನೂ ಒದಗಿಸುವ ಕೆಲಸವನ್ನು ಮಾಡುತ್ತದೆ. ಹ್ಯೂಮರ್ ಗಳು ದೇಹದ ವಿವಿಧ ಅಂಗಾಂಗಗಳಲ್ಲಿ ತೇವಾಂಶವನ್ನು ಕಾಪಾಡಿಕೊಳ್ಳುವ ಹೊಣೆಯನ್ನು ಹೊರುತ್ತವೆ. ಜೊತೆಗೆ ಪೌಷ್ಠಿಕತೆಯನ್ನೂ ಒದಗಿಸುತ್ತವೆ. ಆಹಾರವು ನಾಲ್ಕು ವಿಧವಾದ ಜೀರ್ಣ ಪ್ರಕ್ರಿಯೆಗೆ ಒಳಗಾಗುತ್ತದೆ: (1) ಜಠರದ ಜೀರ್ಣಕ್ರಿಯೆ- ಇಲ್ಲಿ ಆಹಾರವು ಕೈಮ್ (ಅಮ್ಲಪಿಷ್ಟ) ಆಗಿ ಮತ್ತು ಕೈಲ್ (ದುಗ್ಧರಸ) ಆಗಿ ಪರಿವರ್ತನೆಗೊಂಡು ಮೀಸೆಂಟರಿಯ ರಕ್ತನಾಳಗಳಿಂದ ಪಿತ್ತಜನಕಾಂಗಕ್ಕೆ ಒಯ್ಯಲ್ಪಡುತ್ತದೆ. (2)ಯಕೃತ್ತಿನ ಜೀರ್ಣಕ್ರಿಯೆ-ಇಲ್ಲಿ ಕೈಲ್ (ದುಗ್ಧರಸ) ಭಿನ್ನ ಪ್ರಮಾಣದಲ್ಲಿ ನಾಲ್ಕು ಧಾತುಗಳಾಗಿ ಪರಿವರ್ತನೆಗೊಳ್ಳುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣ ರಕ್ತವಾಗಿ ರೂಪಾಂತರಗೊಳ್ಳುತ್ತದೆ. ಹೀಗೆ, ಪಿತ್ತಜನಕಾಂಗದಿಂದ ಹೊರಬರುವ ರಕ್ತವು ದೇಹದ ಇತರ ಧಾತುಗಳಾದ ಕಫ, ಹಳದಿ ಪಿತ್ತ, ಮತ್ತು ಕರಿಪಿತ್ತಗಳೊಂದಿಗೆ ಸಮ್ಮಿಶ್ರಗೊಳ್ಳುತ್ತದೆ, ಮೂರು ಹಾಗೂ ನಾಲ್ಕನೆಯ ಹಂತಗಳು (3)ನಾಳಗಳು ಮತ್ತು (4)ಅಂಗಾಂಶ ಜೀರ್ಣಕ್ರಿಯೆಯೆಂದು ಕರೆಯಲ್ಪಡುತ್ತವೆ. ಹ್ಯೂಮರ್ ಗಳು ರಕ್ತನಾಳಗಳಲ್ಲಿ ಹರಿಯುತ್ತಿರುವಾಗ, ಪ್ರತಿಯೊಂದು ಅಂಗಾಂಶವು ತನ್ನ ಆಕರ್ಷಣಾ ಶಕ್ತಿಯಿಂದ ಅದರ ಪೌಷ್ಠಿಕತೆಯನ್ನು ಹೀರಿಕೊಂಡು, ತನ್ನ ಹಿಡಿತದಲ್ಲಿಟ್ಟುಕೊಳ್ಳುವ ಶಕ್ತಿಯಿಂದ ತನ್ನೊಳಗೆ ಹಿಡಿದಿಡುತ್ತದೆ. ನಂತರ, ಜೀರ್ಣಕ್ರಿಯಾ ಶಕ್ತಿಯು ದೇಹಗತವಾಗುವ ಶಕ್ತಿಯೊಂದಿಗೆ ಸೇರಿಕೊಂಡು, ಅದನ್ನು ಅಂಗಾಂಶಗಳಾಗಿ ರೂಪಾಂತರಗೊಳಿಸುತ್ತದೆ, ಹ್ಯೂಮರ್ ನಲ್ಲಿರುವ ತ್ಯಾಜ್ಯವಸ್ತುವು ಹೊರತಳ್ಳುವ ಶಕ್ತಿಯಿಂದ ವಿಸರ್ಜಿಸಲ್ಪಡುತ್ತದೆ. ಈ ಪದ್ಧತಿಗೆ ಅನುಸಾರವಾಗಿ, ಹ್ಯೂಮರ್ ನ ಸಮತೋಲನದಲ್ಲಿ ಯಾವುದೇ ವ್ಯತ್ಯಾಸವಾದಾಗ, ಅದು ರೋಗ ಅಥವಾ ಖಾಯಿಲೆಗೆ ಕಾರಣವಾಗುತ್ತದೆ. ಆದುದರಿಂದ, ಚಿಕಿತ್ಸೆಯು, ಹ್ಯೂಮರ್ ಗಳ ಸಮತೋಲನವನ್ನು ಕಾಪಾಡುವುದಕ್ಕೆ ಪ್ರಾಶಸ್ತ್ಯ ನೀಡುತ್ತದೆ.

ಆಝಾ (ಅಂಗಾಂಗಗಳು)

ಇವುಗಳು ಮಾನವ ದೇಹದ ವಿಭಿನ್ನ ಅಂಗಾಂಗಗಳು. ಪ್ರತಿಯೊಂದು ಅಂಗಾಂಗದ ಆರೋಗ್ಯ ಅಥವಾ ಖಾಯಿಲೆಯು ಸಂಪೂರ್ಣ ದೇಹದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಅರ್ವಾಹ್ (ಚೇತನ)

ಚೇತನವು ಅನಿಲ ವಸ್ತುವಾಗಿದ್ದು, ಒಳತೆಗೆದುಕೊಂಡ ಗಾಳಿಯಿಂದ ಪಡೆಯಲಾಗಿದೆ. ಅದು ದೇಹದ ಎಲ್ಲಾ ಚಯಾಪಚಯ ಕ್ರಿಯೆಗಳಲ್ಲಿ ನೆರವಾಗುತ್ತದೆ. ಅದು ಅಖ್ಲತ್ ಲತೀಫ಼ಾ (ಹ್ಯೂಮರ್ )ಗಳನ್ನು ದಹಿಸಿ ಎಲ್ಲ ತರದ ಖುವಾಗಳನ್ನೂ (ಶಕ್ತಿ), ಎಲ್ಲಾ ಅಂಗಾಂಗಳಿಗೆ ಹುರುಪು ತುಂಬುವ ಹರಾತ್ ಗರೀಝಿಯಾಗಳನ್ನೂ ಉತ್ಪಾದಿಸುತ್ತದೆ. ಇವುಗಳು ಜೀವಶಕ್ತಿಯೆಂದು ಪರಿಗಣಿಸಲಾಗಿವೆ, ಆದುದರಿಂದ, ರೋಗ ನಿರ್ಧಾರ ಹಾಗೂ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇವು ವಿಭಿನ್ನ ಶಕ್ತಿಗಳ ಸಾಗಾಣಿಕಾದಾರರಾಗಿದ್ದು, ಸಂಪೂರ್ಣ ದೇಹ ವ್ಯವಸ್ಥೆಯನ್ನು ರಚಿಸಿ, ಅವುಗಳ ಭಾಗಗಳು ಕ್ರಿಯಾತ್ಮಕವಾಗುವಂತೆ ಮಾಡುತ್ತವೆ.

ಮೂರು ವಿಧವಾದ ಶಕ್ತಿಗಳು ಇವೆ

  1. ಖುವಾ ತಬಿಯಾಹ್ ಅಥವಾ ಸ್ವಾಭಾವಿಕ ಶಕ್ತಿಯು ಚಯಾಪಚಯ ಹಾಗೂ ಸಂತಾನೋತ್ಪತ್ತಿಯ ಶಕ್ತಿ. ಪಿತ್ತಜನಕಾಂಗವು ಈ ಶಕ್ತಿಯ ಕೇಂದ್ರಸ್ಥಾನವಾಗಿದ್ದು, ದೇಹದ ಎಲ್ಲಾ ಅಂಗಾಂಶಗಳಲ್ಲೂ ಈ ಪ್ರಕ್ರಿಯೆಯು ನಡೆಯುತ್ತದೆ. ಚಯಾಪಚಯ ಕ್ರಿಯೆಯು ಮಾನವ ದೇಹದ ಬೆಳವಣಿಗೆ ಮತ್ತು ಪೌಷ್ಠಿಕತೆಗೆ ಸಂಬಂಧಪಟ್ಟಿದೆ. ಪೌಷ್ಟಿಕಾಂಶವು ಆಹಾರದೊಂದಿಗೆ ಬರುತ್ತದೆ ಮತ್ತು ದೇಹದ ಎಲ್ಲಾ ಭಾಗಗಳಿಗೆ ಒಯ್ಯಲ್ಪಡುತ್ತದೆ. ಅದೇ, ಬೆಳವಣಿಗೆಯ ಶಕ್ತಿಯು ಮಾನವ ಜೀವಿಯ ರಚನೆ ಮತ್ತು ಬೆಳವಣಿಗೆಗೆ ಕಾರಣವಾಗಿದೆ
  2. ಖುವಾ ನಫ್ಸನಿಯಾಹ್ ಅಥವಾ ಅತೀಂದ್ರಿಯ ಶಕ್ತಿ ಅಂದರೆ, ಮನಃ ಶಕ್ತಿ ಮತ್ತು ಅತೀಂದ್ರಿಯ ಶಕ್ತಿಯ ಕುರಿತು ಹೇಳುತ್ತದೆ. ಅದು ಮಿದುಳಿನೊಳಗೆ ಸ್ಥಿತವಾಗಿದೆ ಮತ್ತು ಗ್ರಹಣ ಶಕ್ತಿ ಮತ್ತು ಪ್ರೇರಣಾ ಶಕ್ತಿಗೆ ಹೊಣೆಯಾಗಿದೆ. ಗ್ರಹಣ ಶಕ್ತಿಯು ಅಚ್ಚು ಅಥವಾ ಇಂದ್ರಿಯ ಜ್ಞಾನವನ್ನು ಸಾಗಿಸುತ್ತದೆ ಮತ್ತು ಪ್ರೇರಣಾ ಶಕ್ತಿಯು ಇಂದ್ರಿಯ ಜ್ಞಾನಕ್ಕೆ ಪ್ರತಿಕ್ರಿಯೆಯಾಗಿ ಚಲನೆಯನ್ನು ತರುತ್ತದೆ.
  3. ಖುವಾ ಹೈವಾನಿಯಾಹ್ ಅಥವಾ ಚೇತನಾ ಶಕ್ತಿ ಜೀವವನ್ನು ನಿರ್ವಹಿಸುವುದಕ್ಕೆ ಹೊಣೆಯಾಗಿದ್ದು, ಅತೀಂದ್ರಿಯ ಶಕ್ತಿಯ ಪರಿಣಾಮವನ್ನು ಸ್ವೀಕರಿಸಲು ಸುಶಕ್ತವಾಗಿಸುತ್ತದೆ. ಈ ಶಕ್ತಿಯು ಹೃದಯದಲ್ಲಿದೆ. ಇದು ಅಂಗಾಂಶಗಳಲ್ಲಿ ಜೀವವು ಹರಿಯುತ್ತಿರುವಂತೆ ನೋಡಿಕೊಳ್ಳುತ್ತದೆ.

ಅಫಾಲ್ (ಕ್ರಿಯೆಗಳು)

ಈ ಅಂಶವು ದೇಹದ ಎಲ್ಲ ಅಂಗಾಂಗಗಳ ಚಲನೆ ಹಾಗೂ ಚಟುವಟಿಕೆಗಳಿಗೆ ಸಂಬಂಧಪಟ್ಟಿದೆ. ಆರೋಗ್ಯವಂತ ದೇಹದಲ್ಲಿ ಎಲ್ಲಾ ಅಂಗಾಂಗಗಳು ಸರಿಯಾದ ಆಕಾರವನ್ನು ಹೊಂದಿದ್ದು, ಅವುಗಳು ತಮ್ಮ ತಮ್ಮ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸುತ್ತವೆ. ಆದುದರಿಂದ ಮಾನವ ದೇಹದ ಎಲ್ಲ ಅಂಗಾಂಗಗಳ ಕಾರ್ಯವೈಖರಿಯ ಕುರಿತಾದ ಸಮಗ್ರ ಅರಿವಿರುವುದು ಅಗತ್ಯವಾಗುತ್ತದೆ.

ಆರೋಗ್ಯ:ಆರೋಗ್ಯವು ಮಾನವ ದೇಹದ ಸ್ಥಿತಿಯ ಕುರಿತು ಹೇಳುತ್ತದೆ. ಇಲ್ಲಿ ದೇಹದ ಎಲ್ಲಾ ಕ್ರಿಯೆಗಳು ಸಹಜವಾದ ಸ್ಥಿತಿಯಲ್ಲಿ ನಡೆಯುತ್ತಿರುತ್ತವೆ. ಖಾಯಿಲೆಯು ಆರೋಗ್ಯದ ವಿರುದ್ಧ-ದೇಹ ಸ್ಥಿತಿಯಾಗಿದ್ದು, ಇಲ್ಲಿ, ಒಂದು ಅಥವಾ ಹೆಚ್ಚಿನ ಅಂಗಗಳು ತಮ್ಮ ಕಾರ್ಯಚಟುವಟಿಕೆಯಲ್ಲಿ ಅಸಹಜವಾಗಿ ವರ್ತಿಸುತ್ತಿರುತ್ತವೆ.

ರೋಗನಿರ್ಧಾರ:ಯೂನಾನಿ ಪದ್ಧತಿಯಲ್ಲಿ ರೋಗ ನಿರ್ಧಾರ ಪ್ರಕ್ರಿಯೆಯು ವೀಕ್ಷಣೆ ಮತ್ತು ದೈಹಿಕ ತಪಾಸಣೆಯ ಮೇಲೆ ಹೊಂದಿಕೊಂಡಿದೆ. ವ್ಯಕ್ತಿಯಲ್ಲಿ ಕಂಡುಬರುವ ಯಾವುದೇ ಖಾಯಿಲೆಯು ಈ ಕೆಳಗಿನ ಅಂಶಗಳ ಪರಿಣಾಮವೆಂದು ಪರಿಗಣಿಸಲಾಗುತ್ತದೆ:

  • ಆತ ಮಾಡಲ್ಪಟ್ಟ ವಸ್ತು
  • ಆತನಲ್ಲಿರುವ ವಿಭಿನ್ನ ಶಕ್ತಿಗಳ ಪ್ರಕೃತಿ, ರಚನೆ ಮತ್ತು ಶಕ್ತಿಗಳು
  • ಆತನ ಮೇಲೆ ಕೆಲಸಮಾಡುತ್ತಿರುವ ಬಾಹ್ಯ ಅಂಶಗಳು; ಮತ್ತು
  • ಆತನ ದೈಹಿಕ ಕ್ರಿಯೆಗಳನ್ನು ನಿರ್ವಹಿಸಲು ಮತ್ತು ಸಾಧ್ಯವಾದಷ್ಟು ಮಟ್ಟಿಗೆ ಯಾವುದೇ ಅಡೆತಡೆಗಳನ್ನು ತೊಲಗಿಸಲು, ಪ್ರಾಕೃತಿಕವಾದ ಪ್ರಯತ್ನಗಳು

ಪರಸ್ಪರ ಅಂತರ್-ಸಂಬಂಧಹೊಂದಿದ ಎಲ್ಲಾ ಅಂಶಗಳನ್ನು ಮನದಲ್ಲಿಟ್ಟುಕೊಂಡು, ಅಸೌಖ್ಯದ ಕಾರಣ ಮತ್ತು ಸ್ವಭಾವವನ್ನು ಕಂಡುಕೊಂಡು ಅದರ ಚಿಕಿತ್ಸೆಯನ್ನೂ ನಿರ್ಧರಿಸಲಾಗುತ್ತದೆ. ರೋಗನಿರ್ಧಾರವು ಅಸೌಖ್ಯದ ಕಾರಣಗಳನ್ನು ವಿವರವಾಗಿ ತನಿಖೆ ಮಾಡುವುದನ್ನು ಒಳಗೊಂಡಿದೆ. ಇದಕ್ಕಾಗಿ, ವೈದ್ಯರು, ನಾಡಿ (ನಬ್ಝ್) ಪರೀಕ್ಷೆ ಮತ್ತು ಮೂತ್ರ ಹಾಗೂ ಮಲ ಪರೀಕ್ಷೆಯನ್ನು ನೆಡೆಸುತ್ತಾರೆ. ಹೃದಯದ ಸಿಸ್ಟಾಲಿಕ್ ಮತ್ತು ಡಯಾಸ್ಟಾಲಿಕ್ ನ ಪರಿಣಾಮವಾಗಿ ಅಪಧಮನಿಗಳಲ್ಲಿ ರಕ್ತ ನುಗ್ಗಿ ಬರುವಾಗ, ನಡೆಯುವ ಹಿಗ್ಗುವಿಕೆ ಮತ್ತು ಕುಗ್ಗುವಿಕೆಯ ಸ್ಪಂದನವೇ ನಾಡಿ. ನಾಡಿ ಪರೀಕ್ಷೆ, ಮೂತ್ರ ಹಾಗೂ ಮಲದ ದೈಹಿಕ ಪರೀಕ್ಷೆಗಳಲ್ಲದೆ, ಇತರ ಸಾಂಪ್ರದಾಯಿಕ ವಿಧಗಳಾದ, ತನಿಖೆ, ಮಿಡಿತ, ಸಂಘರ್ಷಣೆ, ಮತ್ತು ಆಚ್ಛಾದನಗಳನ್ನೂ ರೋಗನಿರ್ಧಾರದಲ್ಲಿ ಬಳಸಲಾಗುತ್ತದೆ.

ರೋಗವನ್ನು (ಖಾಯಿಲೆಯನ್ನು) ತಡೆಗಟ್ಟುವಿಕೆ>

ರೋಗವನ್ನು ಗುಣಮಾಡುವುದರೊಂದಿಗೆ ರೋಗವನ್ನು ತಡೆಗಟ್ಟುವುದೂ ಈ ವೈದ್ಯಕೀಯ ಪದ್ಧತಿಯ ಒಂದು ಭಾಗವಾಗಿದೆ. ಈ ಪದ್ಧತಿಯ ಆರಂಭದ ಹಂತದಲ್ಲೇ ಮಾನವ ದೇಹದ ಆರೋಗ್ಯದ ಮೇಲೆ, ಅದರ ಸುತ್ತುಮುತ್ತಲಿನ ಪರಿಸರ ಹಾಗೂ ಪಾರಿಸಾರಿಕ ವ್ಯವಸ್ಥೆಗಳ ಪರಿಣಾಮಗಳನ್ನು ಗುರುತಿಸಲಾಗಿತ್ತು. ನೀರು, ಆಹಾರ ಮತ್ತು ಗಾಳಿಯನ್ನು ಮಾಲಿನ್ಯ ಮುಕ್ತವಾಗಿರಿಸುವುದರ ಮೇಲೆ ಒತ್ತುಕೊಡಲಾಗಿದೆ. ಆರೋಗ್ಯ ರಕ್ಷಣೆಗೆ ಮತ್ತು ರೋಗಗಳ ತಡೆಗಟ್ಟುವಿಕೆಗೆ ಆರು ಮುಖ್ಯ ಅಗತ್ಯ (ಅಸ್ಬಾಬ್ ಸಿತ್ತಾ ಎ ಝರೋರಿಯಯಾಹ್)ಗಳೆಂದರೆ:

  • ಗಾಳಿ
  • ಆಹಾರ ಮತ್ತು ನೀರು
  • ದೈಹಿಕ ಚಲನೆ ಮತ್ತು ವಿಶ್ರಾಂತಿ
  • ಅತೀಂದ್ರಿಯ ಚಲನೆ ಮತ್ತು ವಿಶ್ರಾಂತಿ
  • ನಿದ್ರೆ ಮತ್ತು ಎಚ್ಚರಿಕೆ
  • ವಿಸರ್ಜನೆ ಮತ್ತು ಹಿಡಿದಿಟ್ಟುಕೊಳ್ಳುವಿಕೆ

ಉತ್ತಮವಾದ ಶುದ್ಧ ಗಾಳಿಯು ದೇಹದ ಆರೋಗ್ಯಕ್ಕೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಅವಿಸೆನ್ನಾ ಎನ್ನುವ ಹೆಸರುವಾಸಿಯಾದ ಅರಬ್ ವೈದ್ಯನು ಪರಿಸರ ಬದಲಾವಣೆಯು ರೋಗಿಯನ್ನು ಹಲವು ಖಾಯಿಲೆಗಳಿಂದ ಮುಕ್ತಗೊಳಿಸುತ್ತದೆ ಎಂಬುದನ್ನು ಕಂಡುಕೊಂಡಿದ್ದನು. ಆತ, ತೆರೆದ, ಮುಕ್ತವಾಗಿ ಗಾಳಿಯಾಡಲು ಅವಕಾಶವಿರುವ ವಾಸದ ಮನೆಗಳನ್ನು ಕಟ್ಟುವುದಕ್ಕೆ ಒತ್ತು ನೀಡುತ್ತಿದ್ದನು.

ಜನರು ಕೊಳೆಯುವಿಕೆಯಿಂದ ಹಾಗೂ ರೋಗಾಣುಗಳಿಂದ ಮುಕ್ತವಾಗಿರುವ, ತಾಜಾ ಆಹಾರವನ್ನು ಸೇವಿಸುವುದನ್ನು ಶಿಫಾರಸು ಮಾಡಲಾಗಿದೆ. ಕೊಳಕು ನೀರು ರೋಗಗಳ ವಾಹಕವೆಂದು ಪರಿಗಣಿಸಲಾಗಿದೆ. ಆದುದರಿಂದ, ಈ ಪದ್ಧತಿಯು, ನೀರನ್ನು ಎಲ್ಲಾ ತರಹರ ಕಲ್ಮಶಗಳಿಂದ ಮುಕ್ತವಾಗಿರಿಸಬೇಕು ಎನ್ನುತ್ತದೆ.

ವಿರಾಮ ಹಾಗೂ ವ್ಯಾಯಾಮವು ಉತ್ತಮ ಆರೋಗ್ಯದ ನಿರ್ವಹಣೆಗೆ ಅಗತ್ಯವೆಂದು ಪರಿಗಣಿಸಲಾಗಿದೆ. ವ್ಯಾಯಾಮವು ಸ್ನಾಯುಗಳ ಬೆಳವಣಿಗೆ ಹಾಗೂ ಪೌಷ್ಠಿಕತೆಗೆ ಸಹಕಾರಿಯಾಗುವುದಲ್ಲದೆ, ರಕ್ತದ ಪೂರೈಕೆಯನ್ನು ಹೆಚ್ಚಿಸುತ್ತದೆ ಹಾಗೂ ವಿಸರ್ಜನಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ಅದು ಹೃದಯ ಮತ್ತು ಪಿತ್ತಜನಕಾಂಗವನ್ನೂ ಸುಸ್ಥಿತಿಯಲ್ಲಿಡುತ್ತದೆ.

ಈ ಪದ್ಧತಿಯು ಆರೋಗ್ಯದ ಮೇಲೆ ಸಂತಸ, ದುಃಖ, ಮತ್ತು ಕೋಪ ಇವೇ ಮೊದಲಾದ ಮಾನಸಿಕ ಅಂಶಗಳ ಪ್ರಭಾವದ ಕುರಿತೂ ದಾಖಲೆಗಳನ್ನು ಮಾಡಿದೆ. ಯೂನಾನಿ ಪದ್ಧತಿಯೊಳಗೆ ಮಾನಸಿಕೆ ಚಿಕಿತ್ಸೆಯೆಂಬ ವಿಭಾಗವೇ ಇದೆ. ಅದು ಆ ವಿಷಯವಾಗಿ ವಿವರವಾಗಿ ಹೇಳುತ್ತದೆ.

ಉತ್ತಮ ಆರೋಗ್ಯಕ್ಕೆ ಸಹಜ ನಿದ್ದೆ ಮತ್ತು ಎಚ್ಚರದ ಸ್ಥಿತಿಗಳ ಅಗತ್ಯವಿದೆ ಎಂದು ಪರಿಗಣಿಸಲಾಗಿದೆ. ನಿದ್ದೆಯು ದೈಹಿಕ ಹಾಗೂ ಮಾನಸಿಕ ವಿಶ್ರಾಂತಿಯನ್ನು ನೀಡುತ್ತದೆ. ಇವುಗಳ ಕೊರತೆಯು ಶಕ್ತಿಯನ್ನು ಕುಂದಿಸಿ, ಮಾನಸಿಕ ಅಸೌಖ್ಯತೆಯನ್ನು ತರುವುದರ ಜೊತೆಗೆ ಜೀರ್ಣಕ್ರಿಯೆಯಲ್ಲೂ ವ್ಯತ್ಯಾಸವಾಗುತ್ತದೆ.

ಸರಿಯಾದ ಮತ್ತು ಸಹಜವಾದ ವಿಸರ್ಜನಾ ಪ್ರಕ್ರಿಯೆಗಳು ಆರೋಗ್ಯ ರಕ್ಷಣೆಗೆ ಅಗತ್ಯ. ಶರೀರದ ತ್ಯಾಜ್ಯ ವಸ್ತುಗಳು ಸಂಪೂರ್ಣವಾಗಿ ವಿಸರ್ಜಿಸಲ್ಪಡದಿದ್ದರೆ, ಅಥವಾ ಯಾವುದೇ ರೀತಿಯ ಅಡ್ಡಿ ಅಥವಾ ಅಡೆತಡೆಯಿದ್ದರೆ, ಅದು ಖಾಯಿಲೆ ಅಥವಾ ಅಸೌಖ್ಯಕ್ಕೆ ಕಾರಣವಾಗುತ್ತದೆ.

ಚಿಕಿತ್ಸಾ ಕ್ರಮಗಳು

ಈ ಪದ್ಧತಿಯಲ್ಲಿ ರೋಗಿಯ ಸಂಪೂರ್ಣ ವ್ಯಕ್ತಿತ್ವವನ್ನು ಪರಿಗಣಿಸಲಾಗುತ್ತದೆ. ಪ್ರತಿಯೊಬ್ಬವ್ಯಕ್ತಿಯೂ ತನ್ನದೇ ಆದ ಮೂಲಭೂತವಾದ ರಚನೆ, ದೈಹಿಕ ಲಕ್ಷಣ, ಆತ್ಮ ರಕ್ಷಣಾ ಕ್ರಮ, ಪರಿಸರಕ್ಕೆ ಪ್ರತಿಕ್ರಯಿಸುವ ವಿಧಾನ, ಹಾಗೂ ಇಷ್ಟಾನಿಷ್ಟಗಳನ್ನು ಹೊಂದಿರುತ್ತಾನೆ.

ಯೂನಾನಿ ಪದ್ಧತಿಯು ಈ ಕೆಳಗಿನ ವಿಧಗಳ ಚಿಕಿತ್ಸಾಕ್ರಮಗಳನ್ನು ಒಳಗೊಂಡಿದೆ:

ವ್ಯವಸ್ಥಿತ/ ಶಿಸ್ತುಬದ್ಧ ಚಿಕಿತ್ಸೆ (ಇಲಾಜ್ ಬಿಲ್- ತದ್ಬಿರ್)

ಇದು ಒಂದು ವಿಶೇಷವಾದ ಚಿಕಿತ್ಸಾ ತಂತ್ರ/ ಚಿಕಿತ್ಸಾ ಕ್ರಮದ ದೈಹಿಕ ವಿಧಾನವಾಗಿದ್ದು, ದೇಹದ ತ್ಯಾಜ್ಯವಸ್ತುಗಳನ್ನು ವಿಸರ್ಜಿಸುವುದರ ಮೂಲಕ, ರಕ್ಷಣಾ ವ್ಯವಸ್ಥೆಯನ್ನು ಸುಧಾರಿಸುತ್ತದೆ ಮತ್ತು ಆರೋಗ್ಯ ರಕ್ಷಣೆ ಮಾಡುವುದರ ಮೂಲಕ ದೇಹರಚನೆಯನ್ನು ಸುಧಾರಿಸುತ್ತದೆ. ಇವುಗಳು ಜನಜನಿತವಾಗಿರುವ “ನಿರ್ವಿಷೀಕರಣ” ವಿಧಾನಗಳು.

ವ್ಯವಸ್ಥಿತ/ ಶಿಸ್ತುಬದ್ಧ ಚಿಕಿತ್ಸೆಯ ಪ್ರಮುಖ ತಂತ್ರಗಳು ಮತ್ತು ಅವುಗಳು ಯಾವ ರೀತಿಯ ಅಸೌಖ್ಯಕ್ಕೆ ಪರಿಣಾಮಕಾರಿ ಎನ್ನುವುದನ್ನು ಈ ಕೆಳಗೆ ವಿಷದೀಕರಿಸಲಾಗಿದೆ:

  1. ವೆನೆಸೆಕ್ಷಿಯೋ (ಫ಼ಾಸ್ದ್):ಈ ರೀತಿಯ ಚಿಕಿತ್ಸೆಯು ಪರಿಣಾಮಕಾರಿಯಾಗಿರುವುದು:
  • ರಕ್ತ ಸಂಬಂಧೀ ಸಮಸ್ಯೆಗಳ ಸರಿಪಡಿಸುವಿಕೆ ಮತ್ತು ಅತಿ ರಕ್ತದೊತ್ತಡದಿಂದ ಬಿಡುಗಡೆ.
  • ರಕ್ತದಲ್ಲಿ ವಿಷಗಳ ಪರಿಣಾಮವನ್ನು ಮತ್ತು ತ್ಯಾಜ್ಯಗಳು ಸಂಗ್ರಹವಾಗುವುದನ್ನು ತಡೆಗಟ್ಟುವುದು.
  • ದೇಹದ ವಿಭಿನ್ನ ಭಾಗಗಳಿಂದ ತ್ಯಾಜ್ಯ ವಸ್ತುಗಳ ವಿಸರ್ಜನೆ.
  • ಚಯಾಪಚಯ ಕ್ರಿಯೆಗಳ ಪ್ರಚೋದನೆ
  • ಋತುಸ್ರಾವದ ಕೆಲವೊಂದು ನಿಗದಿತ ಸಮಸ್ಯೆಗಳಿಗೆ ಪರಿಹಾರ.
  • ದೇಹಪ್ರಕೃತಿಯಲ್ಲಿನ ಶಾಖದ ವಸ್ತುಗಳ ಸರಿಪಡಿಸುವಿಕೆ.
  1. ಕಪ್ಪಿಂಗ್ (ಅಲ್- ಹಿಜ್ಮಾ): ಈ ವಿಧಾನವು ಬಳಕೆಯಾಗುವುದು:
  • ತ್ಯಾಜ್ಯ ವಸ್ತುಗಳನ್ನು ಬೇರ್ಪಡಿಸಿ ತ್ವಚೆಯನ್ನು ಸ್ವಚ್ಛಗೊಳಿಸುವುದು.
  • ಅಧಿಕ ಋತುಸ್ರಾವ ಅಥವಾ ನಾಸಿಕ ರಕ್ತಸ್ರಾವವನ್ನು ತಡೆಗಟ್ಟುವುದು.
  • ಪಿತ್ತಜನಕಾಂಗದ ಖಾಯಿಲೆಗಳನ್ನುಸರಿಪಡಿಸುವುದು.
  • ಮಲೇರಿಯಾ ಮತ್ತು ಗುಲ್ಮದ ತೊಂದರೆಗಳನ್ನು ದೂರಮಾಡುವುದು.
  • ಮೂಲವ್ಯಾಧಿ, ವೃಷಣ ಮತ್ತು ಗರ್ಭಕೋಶದ ಉರಿಯೂತ, ಸ್ಕೇಬಿಸ್ ಮತ್ತು ಕುರುಗಳ ಚಿಕಿತ್ಸೆ.
  1. ಬೆವರುವಿಕೆ (ತಾರೀಖ್):ತ್ವಚೆ, ರಕ್ತ ಹಾಗೂ ಇತರ ಭಾಗಗಳಲ್ಲಿನ ತ್ಯಾಜ್ಯ ವಸ್ತುಗಳು ಸಹಜವಾದ ಬೆವರುವ ಪ್ರಕ್ರಿಯೆಯ ಮೂಲಕ ವಿಸರ್ಜಿಸಲ್ಪಡುತ್ತವೆ. ಅದು ಹೆಚ್ಚಿನ ಶಾಖವನ್ನು ತಗ್ಗಿಸಲು ನೆರವಾಗುತ್ತದೆ. ಒಣ ಅಥವಾ ತೇವವಿರುವ ಶಾಖಕೊಡುವುದು, ಬೆಚ್ಚಗಿನ ನೀರಿನ ಸ್ನಾನ, ಅಂಗಮರ್ದನ (ಮಾಲೀಸು), ಬಿಸಿಗಾಳಿಯಿರುವ ಕೋಣೆಯಲ್ಲಿ ರೋಗಿಯನ್ನಿರಿಸುವುದು ಇವು ಸ್ವೇದಕಾರಿ ಚಿಕಿತ್ಸೆಯ ಕೆಲವು ವಿಧಗಳು.
  2. ಮೂತ್ರವರ್ದನ (ಇದ್ರಾರ್- ಇ-ಬೌಲ್):ವಿಷಕಾರೀ ವಸ್ತುಗಳು, ತ್ಯಾಜ್ಯ ಉತ್ಪನ್ನಗಳು ಮತ್ತು ಹೆಚ್ಚವರಿ ಹ್ಯೂಮರ್ ಗಳು ಮೂತ್ರದ ಮೂಲಕ ವಿಸರ್ಜಿಸಲ್ಪಡುತ್ತವೆ. ಇವುಗಳು ಹೃದಯ ಸಂಬಂಧೀ, ಪಿತ್ತಜನಕಾಂಗ ಸಂಬಂಧೀ, ಮತ್ತು ಶ್ವಾಸಕೋಶ ಸಂಬಂಧೀ ಖಾಯಿಲೆಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕೆಲವೊಮ್ಮೆ ರೋಗಿಯನ್ನು ಶೀತಲವಾದ ಕೋಣೆಯಲ್ಲಿರಿಸಿ, ಶೀತಲ ನೀರನ್ನು ಅವರ ಮೇಲೆ ಹಾಕುವುದರ ಮೂಲಕ ಮೂತ್ರವರ್ಧನೆಯನ್ನು ಸಾಧ್ಯವಾಗಿಸಲಾಗುತ್ತದೆ.
  • ತ್ಯಾಜ್ಯವಸ್ತುವನ್ನು ಪರಿಹರಿಸುವುದು ಮತ್ತು ಬೆವರುವಿಕೆಯನ್ನು ಹೆಚ್ಚಿಸುವುದು
  • ತಿಳಿಯಾದ ಶಾಖವನ್ನು ಒದಗಿಸುವುದು
  • ಪೌಷ್ಠಿಕತೆಯನ್ನು ಹೆಚ್ಚಿಸುವುದು
  • ಕೊಬ್ಬನ್ನು ಕರಗಿಸುವುದು
  • ಕೊಬ್ಬನ್ನು ಹೆಚ್ಚಿಸುವುದು

ಸಹಜವಾದ ಆರೋಗ್ಯದಲ್ಲಿ ತಣ್ಣನೆಯ ಸ್ನಾನವು ಹೆಚ್ಚು ಶ್ರೇಯಸ್ಕರ. ಸಾಮಾನ್ಯವಾಗಿ ಪಾರ್ಶ್ವವಾಯು, ಸ್ನಾಯುಗಳ ಶಕ್ತಿಹೀನತೆ,ಇಂತಾದ ಸಂದರ್ಭಗಳಲ್ಲಿ ಮಾಲೀಸು/ ಅಂಗಮರ್ದನ ಮಾಡಿದ ನಂತರ ಬಿಸಿ ಸ್ನಾನವನ್ನು ಬಳಸಲಾಗುತ್ತದೆ.

  1. ಅಂಗಮರ್ದನ/ ಮಾಲೀಸು (ದಾಲ್ಕ್ಮಾಲಿಶ್): ಮೃದುವಾದ ಅಂಗಮರ್ದನವು ನಿದ್ರಾಕಾರಿಯಾಗಿದೆ ಹಾಗೂ ಸಮಾಧಾನಕರವಾಗಿರುತ್ತದೆ. ಒಣ ಹಾಗೂ ದೃಢ ಅಂಗಮರ್ದನವು ತಡೆನಿವಾರಕವಾಗಿ ಕೆಲಸಮಾಡುತ್ತದೆ ಮತ್ತು ರಕ್ತದ ಪೂರೈಕೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ತೈಲ ಮಾಲೀಸು ಸ್ನಾಯುಗಳನ್ನು ಸಡಿಲಗೊಳಿಸಿ, ತ್ವಚೆಯನ್ನು ಮೃದುವಾಗಿಸುತ್ತದೆ.
  2. ಕಿರಿಕಿರಿಯನ್ನು ಪ್ರತಿಕೂಲಗೊಳಿಸುವುದು:ಯಾತನೆ, ಉರಿಯ ಅನುಭವ, ಮತ್ತು ಕಿರಿಕಿರಿ ಅನ್ನಿಸುವಾಗ ಈ ವಿಧಾನವು ಉಪಶಮನ ನೀಡುತ್ತದೆ. ಜೊತೆಗೆ ಅದು ಉರಿಯೂತವನ್ನು ಕುಗ್ಗಿಸಿ ಗೆಡ್ಡೆಗಳನ್ನು ಗುಣಪಡಿಸುತ್ತದೆ.
  3. ಸುಡುವಿಕೆ/ದಹನ (ಅಮಾಲ್-ಇ-ಕಏ):ಒಂದು ಅಂಗದ ವಿಷಕಾರೀ ಹಾನಿಕರ ಅರ್ಬುದವು ಇನ್ನೊಂದು ಅಂಗಕ್ಕೆ ಹರಡುವುದನ್ನು ತಡೆಯುತ್ತದೆ. ಕಟಿಯ ಸಂಧಿಯ ನೋವಿಗೆ ಈ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ. ಈ ತಂತ್ರದಲ್ಲಿ, ಕೆಲವು ದೇಹದ ರಚನೆಗಳಿಗೆ ತಾಕಿಕೊಂಡಿರುವ ರೋಗಕಾರಕ ಪದಾರ್ಥಗಳನ್ನು ಹೊರತೆಗೆಯಲಾಗುತ್ತದೆ ಅಥವ ಪರಿಹರಿಸಲ್ಪಡುತ್ತವೆ.
  4. ಶುದ್ದೀಕರಣ (ಇಶಾಲ್):ಕರುಳಿನ ಶುದ್ಧೀಕರಣಕ್ಕೆ ಯೂನಾನಿ ಪದ್ಧತಿಯು ಹಲವು ವಿರೇಚಕಗಳನ್ನು ಬಳಸುತ್ತದೆ. ಈ ಪದ್ಧತಿಯನ್ನು ಬಳಸುವುದಕ್ಕೆ ಲಿಖಿತ ನಿಯಮಗಳಿವೆ. ಇವು ಸಹಜ ಚಯಾಪಚಯ ಕ್ರಿಯೆಯ ಮೇಲೆ ಪ್ರಭಾವ ಬೀರುತ್ತವೆ
  5. ವಾಂತಿ (ಖಾಐ):ತಲೆನೋವು, ಅರೆತಲೆನೋವು (ಮೈಗ್ರೇನ್), ಗಲಗ್ರಂಥಿಯ ಉರಿಯೂತ (ಟಾನ್ಸಿಲೈಟಿಸ್), ಬ್ರಾಂಕೋನ್ಯುಮೋನಿಯಾ ಮತ್ತು ಬ್ರಾಂಕಿಯಲ್ ಆಸ್ತ್ಮಾಗಳನ್ನು ಗುಣಪಡಿಸಲು ವಮನಕಾರಿಗಳನ್ನು ಬಳಸಲಾಗುತ್ತದೆ. ಇದು ಮಾನಸಿಕ ಅಸ್ವಸ್ಥತೆಗಳಾದ ಗೀಳು (ಮೇನಿಯಾ) ಮತ್ತು ವಿಷಾದ ಜಾಡ್ಯ (ಮೆಲಾಂಕೋಲಿಯಾ) ಗಳನ್ನೂ ಗುಣಪಡಿಸುತ್ತದೆ.
  6. ವ್ಯಾಯಾಮ (ರಿಯಾಜತ್):ದೈಹಿಕ ವ್ಯಾಯಾಮವು ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಹಾಗೂ ಕೆಲವು ನಿರ್ದಿಷ್ಟ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಅದು ಜಠರಕ್ಕೆ ಉತ್ತಮವೆಂದೂ ಮತ್ತು ಜೀರ್ಣಕ್ರಿಯೆಯನ್ನು ಬಲಪಡಿಸಲು ಉತ್ತಮವೆಂದೂ ಹೇಳಲಾಗುತ್ತದೆ. ವಿವಿಧ ವ್ಯಾಯಾಮಗಳನ್ನು ಮಾಡಲು ನಿರ್ದಿಷ್ಟ ನಿಯಮಗಳು. ಸರಿಯಾದ ಸಮಯ, ಮತ್ತು ಸ್ಥಿತಿಗಳು ಇವೆ.
  7. ಒಸರಿಸುವಿಕೆ (ತಲೀಖ್ಎ-ಅಲಾಕ್):ಈ ವಿಧಾನವನ್ನು ರಕ್ತದಿಂದ ಕೆಟ್ಟ ಅಂಶಗಳನ್ನು ಹೊರತೆಗೆಯಲು ಬಳಸಲಾಗುತ್ತದೆ. ಇದು ಚರ್ಮ ವ್ಯಾಧಿಗಳಲ್ಲಿ ಮತ್ತು ರಿಂಗ್ ವರ್ಮ್ (ಶಿಲೀಂದ್ರದಿಂದ ಬರುವ ರೋಗ), ಇತ್ಯಾದಿಗಳಲ್ಲಿ ಬಹಳ ಪರಿಣಾಮಕಾರಿ. ಈ ವಿಧಾನವನ್ನು ಅಳವಡಿಸಲು ನಿಗದಿತ ಸ್ಥಿತಿಗಳನ್ನು ಪದ್ಧತಿಯು ಸ್ಪಷ್ಟಪಡಿಸಿದೆ.

ಡಿಯಟೋ ಥೆರಪಿ (ಇಲಾಝ್ ಬಿಲ್- ಗಿಝಾ)

ಯೂನಾನಿ ಚಿಕಿತ್ಸೆಯಲ್ಲಿ, ಆಹಾರವು ಮಹತ್ತರ ಪಾತ್ರ ವಹಿಸುತ್ತದೆ. ಆಹಾರದ ಗುಣಮಟ್ಟ ಮತ್ತು ಪ್ರಮಾಣವನ್ನು ನಿಯಂತ್ರಿಸುವ ಮೂಲಕ ಹಲವಾರು ಅಸ್ವಸ್ಥತೆಗಳನ್ನು ಗುಣಪಡಿಸಲು ಸಾಧ್ಯವಿದೆ. ಇವುಗಳ ಕುರಿತು ಹಲವಾರು ಪ್ರಕಟಿತ ಪುಸ್ತಕಗಳಿದ್ದು, ಅವು ನಿರ್ದಿಷ್ಟ ರೋಗಕ್ಕೆ ಸಂಬಂಧಿಸಿದಂತೆ ನಿಗದಿತ ಆಹಾರ ಕ್ರಮದ ಕುರಿತಾಗಿವೆ. ಕೆಲವು ಆಹಾರಗಳು ವಿರೇಚಕಗಳು, ಮೂತ್ರವರ್ಧಕಗಳು ಮತ್ತು ಬೆವರುವರ್ಧಕಗಳಾಗಿವೆ.

ಔಷಧೀಯ ಚಿಕಿತ್ಸೆ (ಇಲಾಜ್-ಬಿಲ್-ದವಾ)

ಈ ರೀತಿಯ ಚಿಕಿತ್ಸೆಯು ಸ್ವಾಭಾವಿಕವಾಗಿ ಲಭ್ಯವಿರುವ, ಬಹುಪಾಲು ಸಸ್ಯಜನ್ಯ ಔಷಧಿಗಳ ಬಳಕೆಯನ್ನು ಮಾಡುತ್ತದೆ. ಪ್ರಾಣಿಜನ್ಯ ಹಾಗೂ ಖನಿಜಾಧಾರಿತ ಔಷಧಿಗಳೂ ಬಳಕೆಯಾಗುತ್ತವೆ. ಸ್ವಾಭಾವಿಕ ಔಷಧಿಗಳು ಮಾತ್ರ ಬಳಕೆಯಾಗುತ್ತವೆ ಯಾಕೆಂದರೆ, ಅವುಗಳು ಸ್ಥಳೀಯವಾಗಿ ಲಭ್ಯವಿದ್ದು, ಬಳಕೆಯಾನಂತರ ದೇಹದ ಮೇಲೆ ಯಾವುದೇ ಅಡ್ಡಪರಿಣಾಮ ಉಂಟುಮಾಡುವುದಿಲ್ಲ. ಯೂನಾನೀ ಔಷಧಿಯು, ಔಷಧಿಗಳಿಗೆ ತಮ್ಮದೇ ಆದ ಪ್ರಕೃತಿಯಿದೆ ಎಂದು ಪರಿಗಣಿಸತ್ತದೆ. ಈ ಪದ್ಧತಿಯಲ್ಲಿ ವ್ಯಕ್ತಿಯ ಪ್ರಕೃತಿಗೆ ಹೆಚ್ಚಿನ ಮಹತ್ವ ನೀಡಿರುವುದರಿಂದ, ಆ ಔಷಧಗಳು ಆ ಪ್ರಕೃತಿಯ ವ್ಯಕ್ತಿಗಳಿಗೆ ಸರಿಯಾಗಿ ಹೊಂದುತ್ತದೆ. ಆದುದರಿಂದ ಗುಣಮುಖರಾಗುವ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸುತ್ತದೆ ಹಾಗೂ ಪ್ರತಿಕ್ರಿಯೆಯ ಅಪಾಯಗಳನ್ನೂ ತೊಡೆದುಹಾಕುತ್ತದೆ. ಔಷಧಿಗಳು ತಮ್ಮ ಪ್ರಕೃತಿಯ ಸ್ವಭವಗಳಾದ ಉಷ್ಣ, ಶೀತ, ತೇವಾಂಶಭರಿತ, ಶುಷ್ಕವಾಗಿರುವ ಮೂಲಕ ಕೆಲಸ ಮಾಡುತ್ತವೆ. ವಾಸ್ತವವಾಗಿ, ಔಷಧಿಗಳು ತಮ್ಮ ಪ್ರಕೃತಿಯ ಆಧಾರದ ಮೇಲೆ ನಾಲ್ಕು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿವೆ. ಹಾಗೂ ವೈದ್ಯರು ಔಷಧಳನ್ನು ಸೂಚಿಸುವಾಗ ಅವುಗಳ ತೀಕ್ಷ್ಣತೆ, ರೋಗಿಯ ವಯಸ್ಸು, ಮತ್ತು ಪ್ರಕೃತಿ, ರೋಗದ ಸ್ವಭಾವ ಮತ್ತು ತೀವ್ರತೆಯನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ. ಔಷಧಗಳು ಪುಡಿಯ ರೂಪದಲ್ಲಿ, ಕಷಾಯವಾಗಿ, ಒಳ ಸುರಿಯುವಿಕೆ (ಇನ್ ಫ್ಯೂಶನ್), ಜವಾರಶ್, ಮಜೂನ್, ಖಮೀರಾ, ಔಧ ಷರಬತ್ತು (ಸಿರಪ್) ಹಾಗೂ ಗುಳಿಗೆ, ಇತ್ಯಾದಿಗಳ ರೂಪದಲ್ಲಿರುತ್ತವೆ. ಪರ್ಯಾಯ ಔಷಧಗಳನ್ನು ಸೂಚಿಸಲು ಈ ಪದ್ಧತಿಯು ಕೆಲವು ನಿಯಮಗಳನ್ನು ನಿಗದಪಡಿಸಿದೆ.

ಶಸ್ತ್ರ ಚಿಕಿತ್ಸೆ (ಇಲಾಜ್ ಬಿಲ್-ಯಾದ್)

ಯೂನಾನಿ ಪದ್ಧತಿಯು ಈ ರೀತಿಯ ಚಿಕಿತ್ಸೆಯ ಜನಕವೆಂದು ಪರಿಗಣಿಸಲ್ಪಟ್ಟಿದ್ದರೂ, ತನ್ನದೇ ಆದ ಚಿಕಿತ್ಸಾ ಸಲಕರಣೆಗಳನ್ನು ಅಭಿವೃದ್ಧಿಪಡಿಸಿದ್ದರೂ, ಈ ರೀತಿಯ ಚಿಕಿತ್ಸೆಗೆ ಕೆಲವೇ ಕೆಲವು ಉಪಯೋಗಗಳಿವೆ. ಪ್ರಸ್ತುತ ಈ ಪದ್ಧತಿಯಲ್ಲಿ ಕೇವಲ ಲಘು ಶಸ್ತ್ರಚಿಕಿತ್ಸೆಗಳು ಮಾತ್ರ ಬಳಕೆಯಲ್ಲಿವೆ.

ಯೂನಾನಿಯಲ್ಲಿ ಔಷಧ ನಿಯಂತ್ರಣ

ಭಾರತದಲ್ಲಿ, ಯೂನಾನಿ ಔಷಧಗಳ ತಯಾರಿಯು ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆ, 1940 ಮತ್ತು ಆಗಾಗ ಅದರೊಳಗೆ ಕಾಲಕಾಲಕ್ಕೆ ತಿದ್ದುಪಡಿಯಾಗುತ್ತಿರುವ ನಿಯಮಗಳ ಪರಿಮಿತಿಗೆ ಒಳಪಟ್ಟಿದೆ. ಭಾರತ ಸರಕಾರದಿಂದ ರಚಿಸಲ್ಪಟ್ಟ ಔಷಧಗಳ ತಾಂತ್ರಿಕ ಸಲಹಾ ಮಂಡಳಿಯು ಈ ಕಾಯಿದೆಯು ಜಾರಿಯಾಗುವುದನ್ನು ಖಚಿತಪಡಿಸಿಕೊಳ್ಳುವ ಹೊಣೆಯನ್ನು ಹೊಂದಿದೆ. ಜೊತೆಗೆ ಒಂದು ಔಷಧಿ ಸಮಲೋಚನಾ ಸಮತಿಯೂ ಇದೆ. ಈ ಸಮಿತಿಯು ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ/ಮಂಡಲಿಗಳಿಗೆ, ಔಷಧಗಳಿಗೆ ಸಂಬಂಧಪಟ್ಟಂತೆ ದೇಶದಲ್ಲಿ ಸಮಾನತೆ ತರಲು ಅಗತ್ಯವಿರುವ ಔಷಧ ಮತ್ತು ಸೌಂದರ್ಯವರ್ಧಕಗಳ ಕಾಯಿದೆಯನ್ನು ಸರಿಯಾಗಿ ಪಾಲನೆ ಮಾಡುವಲ್ಲಿ ಸಲಹೆ ನೀಡುತ್ತದೆ.

ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಯೂನಾನಿ ಸೂತ್ರ ಸಂಹಿತೆ ಸಮಿತಿಯನ್ನು ರಚಿಸಿ ಯೂನಾನಿಯ ಸಂಯುಕ್ತ ಔಷಧಿಗಳ ತಯಾರಿಗೆ ದೇಶದೆಲ್ಲೆಡೆ ಒಂದೇ ರೀತಿಯಾದ ಸಮಾನ ಮಾನದಂಡಗಳ ರಚನೆಗೆ ನೆರವಾಗಿದೆ. ಈ ಸಮಿತಿಯು ಯೂನಾನಿ ವೈದ್ಯ ಪದ್ಧತಿ, ರಸಾಯನ ಶಾಸ್ತ್ರ, ಸಸ್ಯಶಾಸ್ತ್ರ ಮತ್ತು ಔಷಧ ಶಾಸ್ತ್ರದ ಕ್ಷೇತ್ರದಿಂದ ವಿವಿಧ ಪರಿಣತರನ್ನು ಒಳಗೊಂಡಿದೆ.

ಯೂನಾನಿ ಔಷಧದ ಸೂತ್ರ ಸಂಹಿತೆ

ಔಷಧೀಯ ದ್ರವ್ಯಗಳ ಗುಣಮಟ್ಟದ ನಿರ್ವಹಣೆಗೆ ಅಗತ್ಯವಾದ, ತಪಾಸಣೆ ಹಾಗೂ ವಿಶ್ಲೇಷಣೆಯ ಪ್ರೊಟೋಕಾಲ್ ಗಳಿಗೆ ಅನುಸಾರವಾಗಿರುವ ನಿರ್ಧರಿತ ಗುಣಮಟ್ಟವನ್ನು ಒಳಗೊಂಡಿರುವ ಪುಸ್ತಕವೇ ಸೂತ್ರ ಸಂಹಿತೆ. ಗುಣಮಟ್ಟದ ಮಾನದಂಡವನ್ನು ನಿಗದಿ ಪಡಿಸುವುದು ಯೂನಾನಿ ಪದ್ಧತಿಯ ಔಷಧ ಸೂತ್ರ ಸಂಹಿತೆಯ ಸಮಿತಿ. ಪ್ರಯೋಗಾತ್ಮಕವಾಗಿ ಈ ಮಾನದಂಡಗಳನ್ನು ನಿರ್ಧರಿಸುವ ಪ್ರಯೋಗಾತ್ಮಕ ಕೆಲಸಗಳನ್ನು ಭಾರತೀಯ ವೈದ್ಯ ಪದ್ಧತಿಯ ಔಷಧ ಸೂತ್ರ ಸಂಹಿತೆಯ ಪ್ರಯೋಗಾಲಯಕ್ಕೆ ವಹಿಸಲಾಗಿದೆ.

1091 ಸೂತ್ರಗಳನ್ನು ಒಳಗೊಂಡಿರುವ ರಾಷ್ಟ್ರೀಯ ಯೂನಾನಿ ವೈದ್ಯಪದ್ಧತಿಯ ಸೂತ್ರ ಸಂಹಿತೆ (N.F.U.M)ಯ ಐದು ಭಾಗಗಳು, ಮೂಲದಲ್ಲಿ ಏಕ ದ್ರವ್ಯವನ್ನು ಹೊಂದಿರುವ ಔಷಧಿಗಳ 298 ಏಕ ಪ್ರಬಂಧಗಳನ್ನು ಒಳಗೊಂಡಿರುವ ಭಾರತೀಯ ಯೂನಾನಿ ಔಷಧ ಯಾದಿಯ ಆರು ಸಂಪುಟಗಳು, ಮತ್ತು 50 ಸಂಯುಕ್ತ ವಸ್ತುಗಳ ತಯಾರಿಯನ್ನು ಒಳಗೊಂಡಿರುವ ಭಾರತದ ಯೂನಾನಿ ಔಷಧಗಳ ಪಟ್ಟಿ- ಭಾಗ II, ಸಂ. I- ಇವುಗಳು ಪ್ರಕಟಿಸಲ್ಪಟ್ಟಿವೆ.

ಔಷಧಶಾಸ್ತ್ರದ ಪ್ರಯೋಗಾಲಯ

ಗಾಝಿಯಾಬಾದಿನಲಿರುವ ಭಾರತೀಯ ವೈದ್ಯ ಪದ್ಧತಿಯ ಔಷಧೀಯ ಶಾಸ್ತ್ರದ ಪ್ರಯೋಗಾಲಯ (PLIM)ವು ಆಯುರ್ವೇದ, ಯೂನಾನಿ, ಮತ್ತು ಸಿದ್ಧ ಔಷಧಗಳಿಗೆ ಗುಣಮಟ್ಟದ ಹಾಗೂ ಔಷಧಿಗಳ ಪರೀಕ್ಷಾ ಪ್ರಯೋಗಾಲಯವಾಗಿದೆ. 1979 ರಲ್ಲಿ ಸ್ಥಾಪಿತವಾಗಿರುವ ಈ ಪ್ರಯೋಗಾಲಯವು ರಾಷ್ಟ್ರ ಮಟ್ಟದಲ್ಲಿ, ಔಷಧಿ ಮತ್ತು ಸೌಂದರ್ಯವರ್ದಕ ಸಾಧನಗಳ ಕಾಯಿದೆ, 1940ರ ಅಡಿಯಲ್ಲಿ ಬರುತ್ತದೆ. ಪ್ರಯೋಗಾಲಯವು ಈ ವರೆಗೆ ನಿರ್ವಹಿಸಿದ ಕೆಲಸಗಳ ದತ್ತಾಂಶಗಳು ಆಯುರ್ವೇದ, ಯೂನಾನಿ ಮತ್ತು ಸಿದ್ಧ ಪದ್ಧತಿಗಳ ಔಷಧ ಶಾಸ್ತ್ರ ಸಮಿತಿಗಳ ಅನುಮೋದನೆಯ ಬಳಿಕ ಅನುಕ್ರಮವಾಗಿ ಆಯುರ್ವೇದ, ಯೂನಾನಿ, ಮತ್ತು ಸಿದ್ಧ ಔಷಧಗಳ ಪಟ್ಟಿಯಾಗಿ ಪ್ರಕಟಗೊಳ್ಳುತ್ತವೆ.

ಯೂನಾನಿಯಲ್ಲಿ ಸಂಶೋಧನೆ

  • ಮಸೀಹ್-ಉಲ್-ಮುಲ್ಕ್ ಹಕೀಮ್ ಅಜ್ಮಾಲ್ ಖಾನ್ ಅನ್ನುವವರು 1920ರಲ್ಲಿಯೇ ಯೂನಾನಿ ಪದ್ಧತಿಯಲ್ಲಿ ಸಂಶೋಧನೆಯ ಪರಿಕಲ್ಪನೆಯನ್ನು ಹುಟ್ಟುಹಾಕಿದರು. ತನ್ನ ಸಮಯದ ಅತಿ ದೊಡ್ಡ ಪಂಡಿತರಾಗಿದ್ದ ಇವರು, ಸಂಶೋಧನೆಯ ಮಹತ್ವವನ್ನು ಬಹಳ ಬೇಗನೇ ಅರಿತುಕೊಂಡರಲ್ಲದೆ, ಅವರ ಕುತೂಹಲ ಭರಿತ ಸ್ವಭಾವವು ದೆಹಲಿಯ ಆಯುರ್ವೇದ ಮತ್ತು ಯೂನಾನೀ ಟಿಬ್ಬಿಯಾ ಕಾಲೇಜಿನಲ್ಲಿ ಸಂಶೋಧನಾ ವೃತ್ತಿಯಲ್ಲಿ ತೊಡಗಿದ್ದ ಡಾ. ಸಲೀಮುಝ್ಝಮಾನ್ ಸಿದ್ದೀಕಿಯವರನ್ನು ಗುರುತುಹಿಡಿಯಿತು.
  • ಡಾ. ಸಿದ್ದೀಕಿಯವರ ಸಂಶೋಧನೆಯು ಅರ್ಸೋಲ್ (ಪಾಗಲ್ ಬೂಟಿ) ಎನ್ನುವ ಸಸ್ಯದ ಔಷಧೀಯ ಗುಣಗಳ ಕಂಡುಹುಡುಕುವಿಕೆಗೆ ಕಾರಣವಾಯಿತಲ್ಲದೆ, ನರ ರಕ್ತನಾಳ ಹಾಗೂ ರಕ್ತನಾಳಗಳ ತೊಂದರೆಗಳಾದ, ಅಧಿಕ ರಕ್ತದೊತ್ತಡ, ಬುದ್ಧಿವಿಕಲತೆ, ಛಿದ್ರಮನಸ್ಕತೆ, ಉನ್ಮಾದ, ನಿದ್ರಾಹೀನತೆ, ಮತ್ತು ಮನೋದೈಹಿಕ ಸ್ಥಿತಿಗಳಿಗೆ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವಂತಹ, ವಿಶ್ವದೆಲ್ಲೆಡೆ, ರಾವೋಲ್ಫಿಯಾ ಸರ್ಪೆಂಟೈನಾ ಎಂದು ಜನಜನಿತವಾಗಿರುವ ಈ ಸಸ್ಯದ ಔಷಧೀಯ ಗುಣಗಳ ಮೇಲೆ ಸಹ್ಯ ಸಂಶೋಧನೆಗೂ ಕಾರಣವಾಯಿತು. ಯೂನಾನಿ ಪದ್ಧತಿಯೂ ಸೇರಿದಂತೆ, ಭಾರತೀಯ ವೈದ್ಯಪದ್ಧತಿಯಲ್ಲಿ ಕ್ರಮಬದ್ಧವಾದ ಸಂಶೋಧನಾ ಅಧ್ಯಯನಗಳು ಆರಂಭವಾದುದು 1969ರಿಂದ, ಅದೂ ಭಾರತ ಸರಕಾರದ ಕೇಂದ್ರ ಮಂಡಲಿಯ ಸ್ಥಾಪನೆಯೊಂದಿಗೆ.
  • ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪತಿ (CCRIMH) ಯಲ್ಲಿ ಸಂಶೋಧನೆ ನಡೆಸಲು, ಸುಮಾರು ಒಂದು ದಶಕದ ವರೆಗೆ, ಯೂನಾನಿ ಪದ್ಧತಿಯಲ್ಲಿ ಸಂಶೋಧನೆಗಳು ಈ ಮಂಡಲಿಯ ಒಳಗೆಯೇ ನಡೆಸಲಾಯಿತು. 1978ರಲ್ಲಿ, CCRIMH ಯನ್ನು ನಾಲ್ಕು ಪ್ರತ್ಯೇಕ ಭಾಗಗಳಾಗಿ ವಿಭಜಿಸಲಾಯಿತು; ಆಯುರ್ವೇದ ಹಾಗೂ ಸಿದ್ಧಕ್ಕಾಗಿ ತಲಾ ಒಂದು, ಯೂನಾನಿ ವೈದ್ಯ ಪದ್ಧತಿ, ಹೋಮಿಯೋಪತಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗಾಗಿ.

ಕೇಂದ್ರ ಯೂನಾನಿ ವೈದ್ಯಕೀಯ ಸಂಶೋಧನಾ ಮಂಡಲಿ

1979ರ ಜನವರಿಯಿಂದ ಕೇಂದ್ರ ಯೂನಾನಿ ವೈದ್ಯಕೀಯ ಸಂಶೋಧನಾ ಮಂಡಲಿಯು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ, ಸ್ವಾಯತ್ತ ಸಂಸ್ಥೆಯಾಗಿ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಲಾರಂಭಿಸಿತು.

ಯೂನಾನಿ ಆಸ್ಪತ್ರೆಗಳು ಮತ್ತು ಔಷಧಾಲಯಗಳು

ಯೂನಾನಿ ವೈದ್ಯಕೀಯ ಪದ್ಧತಿಯು ಜನತೆಯಲ್ಲಿ ಸಾಕಷ್ಟು ಜನಜನಿತವಾಗಿದೆ. ಯೂನಾನಿ ಪದ್ಧತಿಯನ್ನು ಬಳಸುತ್ತಿರುವ ವೈದ್ಯರು ದೇಶದ ವಿವಿಧೆಡೆಗಳಲ್ಲಿ ಚದುರಿಕೊಂಡಿದ್ದಾರೆ. ಹಾಗೂ ಅದು ದೇಶದ ಆರೋಗ್ಯ ಶುಶ್ರೂಷಾ ವಿಧಾನದ ಅವಿಭಾಜ್ಯ ಅಂಗವಾಗಿದೆ. ಅಧಿಕೃತ ಅಂಕಿಸಂಖ್ಯೆಗಳಿಗೆ ಅನುಸಾರವಾಗಿ, ದೇಶದಲ್ಲಿ 47963 ಮಂದಿ ನೋಂದಾಯಿತ ಯೂನಾನಿ ವೈದ್ಯರಿದ್ದಾರೆ.

ಪ್ರಸ್ತುತ 15 ರಾಜ್ಯಗಳಲ್ಲಿ ಯೂನಾನಿ ಆಸ್ಪತ್ರೆಗಳಿವೆ. ವಿವಿಧ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಯೂನಾನಿ ಆಸ್ಪತ್ರೆಗಳ ಒಟ್ಟು ಸಂಖ್ಯೆಯು 263. ಈ ಎಲ್ಲಾ ಆಸ್ಪತ್ರೆಗಳ ಹಾಸಿಗೆ ಸಾಮರ್ಥ್ಯ 4686.

ದೇಶದ ಇಪ್ಪತ್ತು ರಾಜ್ಯಗಳಲ್ಲಿ ಒಟ್ಟು 1028 ಯೂನಾನಿ ಔಷಧಾಲಯಗಳಿವೆ. ಅಲ್ಲದೆ, ಹತ್ತು ಔಷಧಾಲಯಗಳು – ಆಂಧ್ರ ಪ್ರದೇಶದಲ್ಲಿ ಎರಡು, ಉತ್ತರ ಪ್ರದೇಶ, ಕರ್ನಾಟಕ ಮತ್ತು ಪಶ್ಚಿಮ ಬಂಗಾಳಗಳಲ್ಲಿ ತಲಾ ಒಂದು ಹಾಗೂ ದೆಹಲಿಯಲ್ಲಿ ಐದು ಔಷಧಾಲಯಗಳು ಕೇಂದ್ರ ಸರಕಾರದ ಆರೋಗ್ಯ ಯೋಜನೆ(CGHS)ಯಡಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಯೂನಾನಿಯಲ್ಲಿ ಶಿಕ್ಷಣ

ಯೂನಾನಿ ಪದ್ಧತಿಯಲ್ಲಿ ಶಿಕ್ಷಣ ಹಾಗೂ ತರಬೇತಿ ಸೌಲಭ್ಯಗಳು ಪ್ರಸ್ತುತ ಕೇಂದ್ರ ಭಾರತೀಯ ವೈದ್ಯಕೀಯ ಪದ್ಧತಿ ಮಂಡಲಿಯಿಂದ ಪರಿವೀಕ್ಷಣೆಗೆ ಒಳಗಾಗುತ್ತಿದೆ. ಈ ಮಂಡಲಿಯನ್ನು ಸಂವಿಧಾನದ ಕಾಯಿದೆ, 1970ರಡಿಯಲ್ಲಿ ಒಂದು ಶಾಸನೋಕ್ತವಾದ, ಕೇಂದ್ರ ಭಾರತೀಯ ವೈದ್ಯಕೀಯ ಪದ್ಧತಿ ಮಂಡಲಿ ಎಂಬ ಹೆಸರಿನ ಸಂಸ್ಥೆಯಾಗಿ ಸ್ಥಾಪಿಸಲಾಯಿತು. ಪ್ರಸ್ತುತ, ದೇಶದಲ್ಲಿ 40 ಅಂಗೀಕೃತ ಯೂನಾನಿ ವೈದ್ಯಕೀಯ ಕಾಲೇಜುಗಳಿವೆ. ಇವು ಈ ಪದ್ಧತಿಯ ಶಿಕ್ಷಣ ಮತ್ತು ತರಬೇತಿಯ ಸೌಲಭ್ಯಗಳನ್ನು ಒದಗಿಸುತ್ತಿವೆ. ಈ ಕಾಲೇಜುಗಳಿಗೆ ಪ್ರತಿವರ್ಷ ಒಟ್ಟಾಗಿ 1,770 ಪದವಿ ಶಿಕ್ಷಣದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸಾಮರ್ಥ್ಯವಿದೆ. ಅವುಗಳು ಸರಕಾರಿ ಅಥವಾ ಸ್ವಯಂ ಸೇವಾ ಸಂಸ್ಥೆಗಳಿಂದ ಸ್ಥಾಪಿಸಲ್ಪಟ್ಟಿವೆ. ಈ ಎಲ್ಲಾ ವಿದ್ಯಾ ಸಂಸ್ಥೆಗಳು ವಿಭಿನ್ನ ವಿಶ್ವವಿದ್ಯಾಲಯಗಳ ಅಂಗಸಂಸ್ಥೆಗಳಾಗಿವೆ. ಈ ಎಲ್ಲಾ ಸಂಸ್ಥೆಗಳಲ್ಲೂ ಕೇಂದ್ರ ಭಾರತೀಯ ವೈದ್ಯಕೀಯ ಪದ್ಧತಿ ಮಂಡಲಿ ಸೂಚಿತ ಪಠ್ಯಕ್ರಮವನ್ನೇ ಅನುಸರಿಸಲಾಗುತ್ತಿದೆ.

ಇಲ್ಮುಲ್ ಅಡ್ಯಿಯಾ (ಔಷಧಶಾಸ್ತ್ರ), ಮೋವಾಲಿಜತ್ ( ವೈದ್ಯಕೀಯ), ಕುಲ್ಲಿಯತ್ (ಮೂಲಭೂತ ನಿಯಮಗಳು), ಹಿಫ್ಝಾನ್ –ಎ-ಸೆಹತ್ (ಶುಚಿತ್ವ), ಜರ್ರಾಹಿಯತ್ (ಶಸ್ತ್ರಚಿಕಿತ್ಸೆ), ತಹಾಫುಝೀ ವಾ ಸಮಜಿ ತಿಬ್, ಅಮ್ರಾಝ್-ಎ- ಅಫ್ತಲ್, ಮತ್ತು ಖಬಾಲಾ- ವಾ- ಅಮ್ರಾಝ್- ಎ-ನಿಸ್ವಾಂನ್ (ಸ್ತ್ರೀರೋಗ ಶಾಸ್ತ್ರ) ಗಳಲ್ಲಿ ಸ್ನಾತಕೋತ್ತರ ಶಿಕ್ಷಣ ಮತ್ತು ಸಂಶೋಧನೆಯ ಸೌಲಭ್ಯಗಳು ಲಭ್ಯವಿದೆ. ಈ ಶಿಕ್ಷಣಗಳಿಗೆ ಒಟ್ಟು ಪ್ರವೇಶಾರ್ಥಿಗಳ ಸಂಖ್ಯೆಯು 79.

ರಾಷ್ಟ್ರೀಯ ಯೂನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು

ರಾಷ್ಟ್ರೀಯ ಯೂನಾನಿ ವೈದ್ಯಕೀಯ ಸಂಸ್ಥೆ, ಬೆಂಗಳೂರು ಅನ್ನು 1984 ರ ನವೆಂಬರ್ 19 ರಂದು ಸೊಸೈಟೀಸ್ ರಿಜಿಸ್ಟ್ರೇಶನ್ ಕಾಯಿದೆಯಡಿ, ಯೂನಾನಿ ವೈದ್ಯಕೀಯ ಪದ್ಧತಿಯ ಅಭಿವಿದ್ಧಿ ಮತ್ತು ಪ್ರಚಾರದ ಸಂಸ್ಥೆಯಾಗಿ ನೋಂದಾಯಿಸಲಾಯಿತು. ಇದು ಭಾರತ ಸರಕಾರ ಹಾಗೂ ಕರ್ನಾಟಕ ರಾಜ್ಯ ಸರಕಾರದ ಜಂಟಿ ವ್ಯವಹಾರವಾಗಿದೆ ಹಾಗೂ ಕರ್ನಾಟಕದ ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ಸಂಸ್ಥೆಯ ಅಂಗಸಂಸ್ಥೆಯಾಗಿದೆ.

ವಸ್ತು

ಪ್ರಕೃತಿ

ವಾಯು

ಬಿಸಿ ಮತ್ತು ತೇವಾಂಶಭರಿತ

ಭೂಮಿ

ಶೀತಲ ಮತ್ತು ಶುಷ್ಕ

ಅಗ್ನಿ

ಬಿಸಿ ಮತ್ತು ಶುಷ್ಕ

 


ಮೂಲ:  ಪೋರ್ಟಲ್ ತಂಡ

ಕೊನೆಯ ಮಾರ್ಪಾಟು : 4/18/2020



© C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate