অসমীয়া   বাংলা   बोड़ो   डोगरी   ગુજરાતી   ಕನ್ನಡ   كأشُر   कोंकणी   संथाली   মনিপুরি   नेपाली   ଓରିୟା   ਪੰਜਾਬੀ   संस्कृत   தமிழ்  తెలుగు   ردو

ಹೋಮಿಯೋಪತಿ

ಹೋಮಿಯೋಪತಿಯ ಒಂದು ಕಿರುಪರಿಚಯ

ಇಂದು ಹೋಮಿಯೋಪತಿಯು ತ್ವರಿತವಾಗಿ ಪ್ರಗತಿಹೊಂದುತ್ತಿರುವ ಒಂದು ವೈದ್ಯಕೀಯ ಪದ್ಧತಿಯಾಗಿದ್ದು, ಸಾಧಾರಣವಾಗಿ ವಿಶ್ವದ ಎಲ್ಲೆಡೆಗಳಲ್ಲೂ ಆಚರಣೆಯಲ್ಲಿದೆ. ಗುಳಿಗೆಗಳ ಸುರಕ್ಷೆ ಮತ್ತು ತನ್ನ ಚಿಕಿತ್ಸೆಯ ಸೌಮ್ಯತೆಯಿಂದಾಗಿ ಭಾರತದಲ್ಲಿ ಈ ಪದ್ಧತಿಯು ಮನೆಮಾತಾಗಿದೆ. ಒಂದು ಅಧ್ಯಯನವು ಹೇಳುವ ಪ್ರಾಕಾರ, ಭಾರತೀಯ ಜನಸಂಖ್ಯೆಯ ಶೇ.10 ಭಾಗ ತನ್ನ ಆರೋಗ್ಯ ಶುಶ್ರೂಶೆಯ ಅಗತ್ಯಗಳಿಗೆ ಕೇವಲ ಹೋಮಿಯೋಪತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಹಾಗೂ ಈ ಪದ್ಧತಿಯು ದೇಶದ ಅತ್ಯಂತ ಜನಜನಿತ ವೈದ್ಯಕೀಯ ಪದ್ಧತಿಗಳಲ್ಲಿ ಎರಡನೆಯ ಸ್ಥಾನವನ್ನು ಪಡೆದಿದೆ ಎಂದು ಪರಿಗಣಿಸಲಾಗಿದೆ.

ಭಾರತದಲ್ಲಿ ಹೋಮಿಯೋಪತಿ ವೈದ್ಯಕೀಯ ಪದ್ಧತಿಯು ಜಾರಿಗೆ ಬಂದು ನೂರ ಐವತ್ತು ವರುಷಗಳೇ ಸಂದಿವೆ. ಅದು ಎಷ್ಟು ಚೆನ್ನಾಗಿ ಭಾರತೀಯ ಸಂಸ್ಕೃತಿಯ ಬೇರು ಹಾಗೂ ಸಂಪ್ರದಾಯಗಳೊಳಗೆ ಅಂತರ್ಗತಗೊಳಿಸಲ್ಪಟ್ಟಿದೆಯೆಂದರೆ, ಅದನ್ನು ಭಾರತದ ರಾಷ್ಟ್ರೀಯ ವೈದ್ಯಕೀಯ ಪದ್ಧತಿಯೆಂದು ಗುರುತಿಸಲಾಗಿದೆ. ಜೊತೆಗೆ ಅದು ದೇಶದ ಹಲವಾರು ಜನರ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಅದರ ಪ್ರಮುಖ ಶಕ್ತಿಯೆಂದರೆ, ಅದು ವ್ಯಕ್ತಿಯ ಆರೋಗ್ಯ ಸಮಸ್ಯೆಗಳ ಪರಹಾರಕ್ಕೆ ಮಾನಸಿಕ, ಆಧ್ಯಾತ್ಮಿಕ, ಭಾವನಾತ್ಮಕ, ಭೌತಿಕ ಕಾಯದ ಮಟ್ಟದ ಎಲ್ಲವನ್ನೂ ಸಮಗ್ರವಾಗಿ ಪರಿಶೀಲಿಸಿ ಪರಿಹಾರೋಪಾಯದ ಮಾರ್ಗವನ್ನು ಸೂಚಿಸುತ್ತದೆ.

ಹೋಮಿಯೋಪತಿ ಎನ್ನುವ ಪದವು ಗ್ರೀಕ್ ಭಾಷೆಯ ಎರಡು ಪದಗಳಿಂದ ಮಾಡಲ್ಪಟ್ಟಿದೆ. “ಹೊಮೋಯ್ಸ್” ಅಂದರೆ, “ಸಮನಾದ”; “ಪ್ಯಾತೋಸ್” ಅಂದರೆ “ನರಳುವಿಕೆ”. ಹೋಮಿಯೋಪತಿ ಎಂದರೆ, ಸರಳವಾಗಿ ಹೇಳುವುದಾದರೆ, ಆರೋಗ್ಯಕರ ವ್ಯಕ್ತಿಗಳು ಸೇವಿಸಿದಲ್ಲಿ ಅವರಲ್ಲಿ ಅದೇ ಖಾಯಿಲೆಯನ್ನು ತರುವ ಸಾಮರ್ಥ್ಯವುಳ್ಳ ಔಷಧಗಳನ್ನು ಅತ್ಯಲ್ಪ ಪ್ರಮಾಣದಲ್ಲಿ ನೀಡುವುದರ ಮೂಲಕ ಚಿಕಿತ್ಸೆ ಮಾಡುವುದು ಎಂದು ಅರ್ಥ. ಅದು ಗುಣಪಡಿಸುವ ಸ್ವಾಭಾವಿಕ ನಿಯಮದ ಮೇಲೆ ಆಧಾರಿತವಾಗಿದೆ- “ಸಿಮಿಲಿಯಾ ಸಿಮಿಲಿಬಸ್ ಕ್ಯುರೇನ್ಟರ್” ಅಂದರೆ, “ಸಮಾನವಾದುದು ಸಮಾನವಾದುದರಿಂದಲೇ ಗುಣಮುಖವಾಗುತ್ತದೆ”. ಅದಕ್ಕೆ 19ನೆಯ ಶತಮಾನದ ಆದಿಯಲ್ಲಿ ವೈಜ್ಞಾನಿಕ ತಳಹದಿಯನ್ನು ನೀಡಿದವರು ಡಾ| ಸಾಮ್ಯುಯೆಲ್ ಹಾನ್ಮನ್ (1755-1843). ಎರಡು ಶತಮಾನಗಳಿಂದಲೂ ಹೆಚ್ಚು ಕಾಲ ಇದು ನರಳುತ್ತಿರುವ ಜನರಿಗೆ ನೆಮ್ಮದಿಯನ್ನು ತಂದುಕೊಡುತ್ತಾ ಬಂದಿದೆ. ಅಲ್ಲದೆ ಕಾಲದ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ, ಚಿಕಿತ್ಸಾ ವಿಧಾನವಾಗಿ ಹೊರಹೊಮ್ಮಿದೆ. ಯಾಕೆಂದರೆ, ಹಾನ್ಮನ್ ಹೇಳಿದ ವೈಜ್ಞಾನಿಕ ನಿಯಮಗಳು ಸ್ವಾಭಾವಿಕವಾಗಿದ್ದು, ಮತ್ತು ನಿಶ್ಚಿತವಾಗಿ ವಿಷದೀಕರಿಸಲ್ಪಟ್ಟಿವೆ. ಜೊತೆಗೆ ಈ ವಿಧಾನವು ಇಂದಿಗೂ ಯಶಸ್ವಿಯಾಗಿ ಅನುಸರಿಸಲ್ಪಡುತ್ತಿದೆ.

ಹೋಮಿಯೋಪತಿ ಗುಳಿಗೆಗಳು

ಚಿಕಿತ್ಸೆಗಳು/ ರೋಗ ನಿವಾರಣಾ ಔಷಧ

“ರೆಮೆಡಿ” ಎನ್ನುವುದು ಹೋಮಿಯೋಪತಿಯಲ್ಲಿ ಒಂದು ತಾಂತ್ರಿಕ ಪದವಾಗಿದ್ದು, ಅದು ಒಂದು ನಿರ್ದಿಷ್ಟ ಕ್ರಿಯಾವಿಧಾನವನ್ನು ಆಧರಿಸಿ ತಯಾರಿಸಿದ ಪದಾರ್ಥವಾಗಿದೆ ಮತ್ತು ರೋಗಿಗಳ ಬಳಕೆಗಾಗಿ ಉದ್ದೇಶಿಸಿಲಪಟ್ಟಿದೆ. ಈ ಪದವನ್ನು ಸಾಮಾನ್ಯವಾಗಿ ಬಳಸುವ “ರೋಗವನ್ನು ಗುಣಪಡಿಸುವ ಅಥವಾ ನೋವು ನಿವಾರಣೆ ಮಾಡುವ ಚಿಕಿತ್ಸೆ ಅಥವಾ ಔಷಧಿ” ಎಂಬ ಅರ್ಥದೊಂದಿಗೆ ಗೊಂದಲ ಮಾಡಿಕೊಳ್ಳಬಾರದು. ಹೋಮಿಯೋಪತಿ ಚಿಕಿತ್ಸಕರು ಔಷಧಿಯನ್ನು ಸೂಚಿಸುವಾಗ ಎರಡು ರೀತಿಯ ಉಲ್ಲೇಖಗಳ ಬಳಕೆ ಮಾಡುತ್ತಾರೆ. ಮೆಟೀರಿಯಾ ಮೆಡಿಕಾ ಮತ್ತು ದಾಖಲೆಗಳ ಸಂಗ್ರಹಗಳು. ಹೋಮಿಯೋಪತಿಯ “ಮೆಟೀರಿಯಾ ಮೆಡಿಕಾ”ವು “ಔಷಧಿ ಚಿತ್ರ”ಗಳ ಸಂಗ್ರಹವಾಗಿದೆ. ಇವುಗಳನ್ನು ರೆಮೆಡಿಯ ಆಧಾರದಲ್ಲಿ, ವರ್ಣಮಾಲೆಯ ಅಕ್ಷರಗಳಿಗನುಗುಣವಾಗಿ ಜೋಡಿಸಲಾಗಿದ್ದು, ಅವುಗಳು ಪ್ರತಿಯೊಂದು ರೆಮೆಡಿಯ ಜೊತೆ ತಾಳೆಹಾಕಿರುವ ರೋಗಲಕ್ಷಣಗಳನ್ನು ವಿವರಿಸುತ್ತದೆ. ಹೋಮಿಯೋಪತಿ ದಾಖಲೆಗಳ ಸಂಗ್ರಹವು ರೋಗಲಕ್ಷಣಗಳ ಸೂಚಿಯಾಗಿದ್ದು, ಅದು ನಿರ್ದಿಷ್ಟ ರೋಗ ಲಕ್ಷಣಗಳಿಗೆ ರೆಮೆಡಿ(ಔಷಧಿ)ಯನ್ನು ಪಟ್ಟಿಮಾಡುತ್ತದೆ.

ಹೋಮಿಯೋಪತಿಯು ಹಲವಾರು ಪ್ರಾಣಿ, ಸಸ್ಯ, ಖನಿಜ ಮತ್ತು ಕೃತಕ ವಸ್ತುಗಳನ್ನು ಔಷಧಿ (ರೆಮೆಡಿ)ಯಲ್ಲಿ ಬಳಸುತ್ತದೆ. ಉದಾಹರಣೆಗೆ, ಆರ್ಸೆನಿಕಮ್ ಆಲ್ಬಮ್ (ಆರ್ಸೆನಿಕ್ ಆಕ್ಸೈಡ್), ನೇಟ್ರಮ್ ಮ್ಯುರಿಯಾಟಿಕಮ್ ( ಸೋಡಿಯಮ್ ಕ್ಲೋರೈಡ್ ಅಥವಾ ಉಪ್ಪು), ಲಕೇಸಿಸ್ ಮ್ಯೂಟಾ (ಬುಶ್ ಮಾಸ್ಟರ್ ಎನ್ನುವ ಹಾವಿನ ವಿಷ) ಅಫೀಮು ಮತ್ತು ಥೈರಾಯ್ಡಿನಮ್ (ಥೈರಾಯ್ಡ್ ಹಾರ್ಮೋನು). ಹೋಮಿಯೋಪತಿಯ ವೈದ್ಯರು ನೋಸೋಡಸ್ (ಗ್ರೀಕ್ ಪದ ನೋಸೋಸ್ ಅಂದರೆ, ಖಾಯಿಲೆ), ಎನ್ನುವ ಚಿಕಿತ್ಸೆಯನ್ನೂ ಬಳಸುತ್ತಾರೆ. ಇದರಲ್ಲಿ, ರೋಗಕಾರಕ ಉತ್ಪನ್ನಗಳಾದ ಮಲ, ಮೂತ್ರ ಮತ್ತು ಉಸಿರಾಟದ ತ್ಯಾಜ್ಯಗಳು, ರಕ್ತ, ಮತ್ತು ಅಂಗಾಂಶಗಳನ್ನು ಬಳಸುತ್ತಾರೆ. ಆರೋಗ್ಯವಂತ ಮಾದರಿಗಳಿಂದ ತಯಾರಿಸಿದ ಹೋಮಿಯೋಪತಿಯ ಔಷಧಿ (ರೆಮೆಡಿ)ಗಳನ್ನು ಸಾರ್ಕೋಡಸ್ ಎನ್ನುತ್ತಾರೆ.

ತಯಾರಿ

ಕರಗದ ಘನಪದಾರ್ಥಗಳಾದ ಸ್ಫಟಿಕ ಶಿಲೆ (ಕ್ವಾರ್ಟ್ಸ್) ಮತ್ತು ಸಿಂಪಿ ಚಿಪ್ಪು ಮೊದಲಾದವುಗಳನ್ನು ಹೋಮಿಯೋಪತಿಯ ಔಷಧಿ (ರೆಮೆಡಿ)ಯಾಗಿ ಪರಿವರ್ತಿಸಲು ಒರಳು ಮತ್ತು ಕುಟ್ಟಣಿಯನ್ನು ಬಳಸಲಾಗುತ್ತದೆ.

ಖಾಯಿಲೆಗಳಿಗೆ ಔಷಧಿಯನ್ನು ತಯಾರಿಸುವಾಗ, ಹೋಮಿಯೋಪತಿ ಚಿಕಿತ್ಸಕರು ಡೈನಮೈಸೇಶನ್ ಅಥವಾ ಪೋಟೆಂಟೈಸೇಶನ್ ಎನ್ನುವ ಪ್ರಕ್ರಿಯೆಯನ್ನು ಬಳಸುತ್ತಾರೆ. ಇಲ್ಲಿ ಒಂದು ದ್ರವ್ಯವನ್ನು ಆಲ್ಕೋಹಾಲ್ (ಮದ್ಯಸಾರ) ಅಥವಾ ಆಸವಿತ ನೀರನ್ನು ಬಳಸಿ ದುರ್ಬಲಗೊಳಿಸಲಾಗುತ್ತದೆ ಮತ್ತು ಒಂದು ಸ್ಥಿತಿಸ್ಥಾಪಕತ್ವ (ಇಲಾಸ್ಟಿಕ್)ದ ಕಾಯಕ್ಕೆ ಹತ್ತು ಬಾರಿ ಗಾಢವಾಗಿ ತಗಲಿಸಿ ಬಲವಾಗಿ ಅಲುಗಾಡಿಸಲಾಗುತ್ತದೆ. ಈ ಪ್ರಕ್ರಿಯೆಯನ್ನು ಸಕ್ಯೂಶನ್ ಎಂದು ಕರೆಯುತ್ತಾರೆ. ಹಾನ್ಮನ್ನನು ಚಿಕಿತ್ಸೆ ನೀಡುತ್ತಿರುವ ಖಾಯಿಲೆಗಳು ತೋರಿಸುವ ಲಕ್ಷಣಗಳನ್ನೇ ಉಂಟುಮಾಡುವ ಪದಾರ್ಥಗಳನ್ನು ಬಳಸುವುದನ್ನು ಸಮರ್ಥಿಸಿದ್ದನು. ಆದರೆ, ಪದಾರ್ಥದ ಪ್ರಮಾಣವು ಕೆಲವೊಮ್ಮೆ ಲಕ್ಷಣಗಳನ್ನು ತೀವ್ರಗೊಳಿಸುತ್ತದೆ, ಮತ್ತು ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಹಾಗೂ ಕೆಲವೊಮ್ಮೆ ವಿಷಕಾರಕ ಪ್ರತಿಕ್ರಿಯೆಯನ್ನು ಹುಟ್ಟುಹಾಕುತ್ತದೆ ಎಂಬುದನ್ನು ಆತ ಕಂಡುಕೊಂಡನು. ಆದುದರಿಂದ ಆತ ದ್ರವ್ಯವನ್ನು ಬಳಕೆಗೆ ಮುನ್ನ ದುರ್ಬಲಗೊಳಿಸಬೇಕೆಂದು ಸಲಹೆ ನೀಡಿದನು. ಸಕ್ಯೂಶನ್ ಕ್ರಿಯೆಯು ದ್ರವ್ಯದ ಜೀವತತ್ವವನ್ನು ಕ್ರಿಯಾಶೀಲವನ್ನಾಗಿಸಿ ಪ್ರಬಲಗೊಳಿಸುತ್ತದೆ ಎಂದು ಹಾನ್ಮನ್ನನು ನಂಬಿದ್ದನು. ಸಕ್ಯೂಶನ್ ಪ್ರಕ್ರಿಯೆಯನ್ನು ಸುಗಮಗೊಳಿಸಲು ಒಂದು ಬದಿಯಲ್ಲಿ ಚರ್ಮದಿಂದ ಆವೃತವಾದ ಮತ್ತು ಕುದುರೆಯ ಕೂದಲಿನಿಂದ ತುಂಬಲ್ಪಟ್ಟ ಹೊಡೆಯುವ ಮರದ ಹಲಗೆಯನ್ನು ಒಬ್ಬ ತಡಿ (ಜೀನು) ಮಾಡುವಾತನಿಂದ ರಚಿಸಿಕೊಂಡಿದ್ದನು. ಕರಗದ, ವಿಲಯನವಾಗದ ಘನಪದಾರ್ಥಗಳಾದ ಸ್ಫಟಿಕದ ಶಿಲ್, ಸಿಂಪಿ ಚಿಪ್ಪು ಮೊದಲಾದುವುಗಳನ್ನು ಲಾಕ್ಟೋಸ್ ಜೊತೆಗೆ ಅರೆಯುವುದರ ಮೂಲಕ ದುರ್ಬಲಗೊಳಿಸಲಾಗುತ್ತದೆ (ಟ್ರೈಟುರೇಶನ್).

ದುರ್ಬಲಗೊಳಿಸುವ ಕ್ರಮಗಳು

ಹೋಮಿಯೋಪತಿಯಲ್ಲಿ ಸಾಮಾನ್ಯವಾಗಿ ಮೂರು ವಿಘಾತ (ಲಾಗರಿದಮ್) ಪ್ರಬಲತೆಯ ಅಳತೆಯ ಮಾನಗಳು ಬಳಕೆಯಲ್ಲಿದೆ. ಹಾನ್ಮನ್ನನು ಸೆಂಟಿಸಿಮಲ್ ಅಥವಾ ಸಿ ಅಳತೆಯನ್ನು ಹುಟ್ಟುಹಾಕಿದನು. ಅಂದರೆ ಒಂದು ದ್ರವ್ಯ ಅಥವಾ ಪದಾರ್ಥವನ್ನು ಪ್ರತಿ ಹಂತದಲ್ಲಿ 100 ಪಟ್ಟು ದುರ್ಬಲಗೊಳಿಸುವುದು. ತನ್ನ ಜೀವಮಾನದುದ್ದಕ್ಕೂ ಹಾನ್ಮನ್ನನು ಹೆಚ್ಚು ಬಳಸಿಲಿಚ್ಚಿಸುತ್ತಿದ್ದುದು ಸಿ ಅಳತೆಯನ್ನು. 2ಸಿ ದುರ್ಬಲತೆ ಎಂದರೆ, ಒಂದು ವಸ್ತುವನ್ನು ನೂರರಲ್ಲಿ ಒಂದು ಅಂಶದಷ್ಟು ದುರ್ಬಲಗೊಳಿಸುವುದು ಎಂದು ಅರ್ಥ. ಮತ್ತೆ ಇದರಲ್ಲಿ ಅಂದು ಅಂಶವನ್ನು ಇನ್ನು ನೂರರಲ್ಲಿ ಒಂದು ಪಾಲು ತೆಗೆದುಕೊಳ್ಳುವುದು, ಹೀಗೆ. ಇದು ಅಂತಿಮವಾಗಿ ದ್ರಾವಣದ 10,000 ಪಾಲಿನಲ್ಲಿ ಮೂಲವಸ್ತುವಿನ ಒಂದು ಪಾಲು ಉಳಿಯುವಂತೆ ಮಾಡುತ್ತದೆ. 6ಸಿ ದುರ್ಬಲತೆಯು ಈ ಪ್ರಕ್ರಿಯೆಯನ್ನು ಆರು ಸಲ ಪುನರಾವರ್ತಿಸುತ್ತದೆ ಹಾಗೂ ಅಂತಿಮವಾಗಿ ಮೂಲದ್ರವ್ಯವು 100−6=10−12 (ಅಂದರೆ ಒಂದು ಟ್ರಿಲಿಯದಲ್ಲಿ ಒಂದು ಪಾಲು ಆಗುವಷ್ಟು ಅಥವಾ 1/1,000,000,000,000) ದಷ್ಟು ದುರ್ಬಲಗೊಳ್ಳುತ್ತದೆ. ಹೆಚ್ಚಿನ ದುರ್ಬಲತೆಗಳೂ ಇದೇ ವಿನ್ಯಾಸವನ್ನು ಅನುಸರಿಸುತ್ತವೆ. ಹೆಚ್ಚು ದುರ್ಬಲ ಔಷಧಿಗಳು ಹೆಚ್ಚು ಪರಿಣಾಮಕಾರಿ ಮತ್ತು ಹೆಚ್ಚು ಆಳವಾಗಿ ಕೆಲಸ ಮಾಡುತ್ತವೆ ಎನ್ನುವುದು ಹೋಮಿಯೋಪತಿ ವೈದ್ಯರ ಅಭಿಪ್ರಾಯ. ಅಂತಿಮ ಉತ್ಪನ್ನವು ಎಷ್ಟು ದುರ್ಬಲವಾಗಿರುತ್ತದೆಯೆಂದರೆ, ಅದನ್ನು ದುರ್ಬಲಕಾರಿಯಿಂದ ಪ್ರತ್ಯೇಕವಾಗಿ ಗುರುತಿಸಲು ಸಾಧ್ಯವಾಗುವುದಿಲ್ಲ (ಶುದ್ಧ ಜಲ, ಸಕ್ಕರೆ ಅಥವಾ ಮದ್ಯಸಾರ).

ಹೆಚ್ಚಿನ ಉದ್ದೇಶಗಳಿಗೆ ಹಾನ್ಮನ್ನನು 30 ಸಿ ದುರ್ಬಲತೆಯ ಸಲಹೆ ನೀಡುತ್ತಿದ್ದನು (ಅಂದರೆ 1060 ಯಷ್ಟು ದುರ್ಬಲಗೊಳಿಸುವಿಕೆ). ಅತನ ಕಾಲದಲ್ಲಿ ಔಷಧಿಗಳನ್ನು ಈ ರೀತಿಯಾಗಿ ಅಪರಿಮಿತವಾಗಿ ದುರ್ಬಲಗೊಳಿಸಲು ಸಾಧ್ಯವಿದೆ ಎಂದು ನಂಬುವುದರಲ್ಲಿ ಅರ್ಥವಿತ್ತು. ಆಗ ಒಂದು ರಾಸಾಯನಿಕ ವಸ್ತುವಿನ ಅತ್ಯಂತ ಸಣ್ಣ ಅಂಶವೆಂದರೆ ಅಣು ಅಥವಾ ಪರಮಾಣು ಎಂಬ ತತ್ವವು ಆಗ ತಾನೇ ಗುರುತಿಸಲ್ಪಡುತ್ತಿತ್ತು. ಒಂದು ಮೂಲ ವಸ್ತುವಿನ ಒಂದು ಅಣುವನ್ನಾದರೂ ಹೊಂದಿರಬಹುದಾದ ಅತ್ಯಂತ ಹೆಚ್ಚಿನ ಪ್ರಮಾಣದ ದುರ್ಬಲಗೊಳಿಸುವಿಕೆಯೆಂದರೆ 12ಸಿ.

ಪುರಾವೆಗಳು

ಹಾನ್ಮನ್ನನು ತನ್ನ ಮೇಲೆ ಹಾಗೂ ಇತರರ ಮೇಲೆ ಹಲವಾರು ವರ್ಷಗಳು ಪ್ರಯೋಗಗಳನ್ನು ನಡೆಸಿದ ಮೇಲಷ್ಟೆ ರೋಗಿಗಳ ಮೇಲೆ ಔಷಧಿಗಳನ್ನು ಬಳಸುತ್ತಿದ್ದನು. ಆತನ ಪ್ರಯೋಗಗಳು ಆರಂಭದಲ್ಲಿ ರೋಗಿಗಳಿಗೆ ಔಷಧಿಯನ್ನು ಕೊಡುವುದಾಗಿರಲಿಲ್ಲ. ಯಾಕೆಂದರೆ, ಅತ್ಯಂತ ಹತ್ತಿರದ ಔಷಧಿಯು, ರೋಗಕ್ಕೆ ಅತ್ಯಂತ ಸಮೀಪದ ಲಕ್ಷಣಗಳನ್ನು ಉಂಟುಮಾಡುವ ತನ್ನ ಸ್ವಭಾವದಿಂದ, ಯಾವ ಲಕ್ಷಣಗಳು ರೋಗದಿಂದ ಉಂಟಾದವು ಮತ್ತು ಯಾವುವು ಔಷಧಿಯಿಂದ ಉಂಟಾದವು ಎಂದು ನಿರ್ಧರಿಸುವಲ್ಲಿ ಅಡ್ಡಿಯುಂಟುಮಾಡಬಹುದು ಎಂದು ಆತ ಯೋಚಿಸಿದನು. ಆದುದರಿಂದ, ರೋಗಿಗಳನ್ನು ಈ ಪ್ರಯೋಗಗಳಿಂದ ಹೊರಗಿಡಲಾಯಿತು. ಯಾವ ಔಷಧಿಗಳು ನಿರ್ದಿಷ್ಟ ರೋಗಕ್ಕೆ ಸೂಕ್ತ ಎಂದು ನಿರ್ಧರಿಸುವುದನ್ನು “ಸಾಧನೆ” ಎಂದು ಕರೆಯಲಾಗಿದೆ. ಇದರ ಮೂಲಪದ ಜರ್ಮನ್ ಭಾಷೆಯ “ಪ್ರಿಫಂಗ್” (Prüfung) ಅಂದರೆ, ಪರೀಕ್ಷೆ. ಹೋಮಿಯೋಪತಿಯ ಪುರವೆಯೆಂದರೆ, ಹೋಮಿಯೋಪತಿ ಔಷಧಿಯ ನಿರೂಪಣೆಯನ್ನು ನಿರ್ಧರಿಸುವುದು ಎಂದು ಅರ್ಥ.

“ಕ್ರಿಯಾಶೀಲ”ಸಾಮಗ್ರಿಗಳು

ಔಷಧಿಗಳಲ್ಲಿ ಪಟ್ಟಿಮಾಡಿರುವ ಸಾಮಗ್ರಿಗಳು ಉತ್ಪನ್ನಗಳಲ್ಲಿ ಒಳಗೊಂಡಿವೆ ಎಂಬ ಭ್ರಮೆಗೆ ಗ್ರಾಹಕರನ್ನು ಒಳಪಡಿಸಬಹುದು. ಸಾಮಾನ್ಯವಾದ ಹೋಮಿಯೋಪತಿ ಪದ್ಧತಿಗಳಿಗೆ ಅನುಸಾರವಾಗಿ ಔಷಧಿಗಳನ್ನು ತಯಾರಿ ಮಾಡುವ ಪ್ರಥಮ ಹಂತದಲ್ಲಿ ಕ್ರಿಯಾಶೀಲ ಸಾಮಗ್ರಿಗಳನ್ನು ಸರಣಿಯಲ್ಲಿ ದುರ್ಬಲಗೊಳಿಸಿ ಅಂತಿಮವಾಗಿ, ವಾಸ್ತವವಾಗಿ ಆ ಜೈವಿಕ ಕ್ರಿಯಾಶೀಲ ಸಾಮಗ್ರಿಗಳು ಇರದಿರುವ ಹಂತಕ್ಕೆ ಬರುವಷ್ಟು ದುರ್ಬಲಗೊಳಿಸಲಾಗುತ್ತದೆ. ಸಾಮಗ್ರಿಗಳ ಪಟ್ಟಿಯು ಔಷಧಿಯ ತಯಾರಿಯ ಮೂಲದಲ್ಲಿ ಬಳಸಿದ ಕ್ರಿಯಾಶೀಲ ಸಾಮಗ್ರಿಗಳ ಹೆಸರನ್ನು ಮಾತ್ರ ಸೂಚಿಸುತ್ತದೆ. ಈ ಕೆಳಗಿನದು ಪ್ರಯೋಗಾತ್ಮಕ ಉದಾಹರಣೆಯನ್ನು ನೀಡುತ್ತದೆ:

ಸಂಬಂಧಿತ ಪದ್ಧತಿಗಳು

ಐಸೋಪತಿ

ಹೋಮಿಯೋಪತಿಯಿಂದ ಪಡೆದ ಒಂದು ಪದ್ಧತಿಯೇ ಐಸೋಪತಿ. 1830ರ ಅವಧಿಯಲ್ಲಿ ಇದನ್ನು ಹುಟ್ಟುಹಾಕಿದವರು ಜೊಹಾನ್ ಜಾಸೆಫ್ ವಿಲ್ಹೆಮ್ ಲಕ್ಸ್. ಐಸೋಪತಿಯು ಹೋಮಿಯೋಪತಿಯಿಂದ ಸಾಮಾನ್ಯವಾಗಿ ಭಿನ್ನವಾಗಿರುವುದು, “ನೋಸೋಡ್ಸ್”ಗಳಿಂದ. ಇಲ್ಲಿ “ನೋಸೋಡ್ಸ್”ಗಳು ರೋಗಕಾರಕ ವಸ್ತುಗಳಿಂದ ಅಥವಾ ರೋಗಗಳ ಉತ್ಪನ್ನಗಳಿಂದ, ಉದಾಹರಣೆ ಸೋಂಕು ದ್ರವ ಇವೇ ಮೊದಲಾದುವುಗಳಿಂದ ಹಲವಾರು “ಹೋಮಿಯೋಪತಿ ಲಸಿಕೆ”ಗಳು ವಿವಿಧ ಬಗೆಯ ಐಸೋಪತಿಯಾಗಿದೆ

ಪುಷ್ಪ ಚಿಕಿತ್ಸೆ (ರೆಮೆಡೀಸ್)

ಪುಷ್ಪ ಔಷಧಿ (ರೆಮೆಡಿ)ಯನ್ನು ಹೂವುಗಳನ್ನು ನೀರಿನಲ್ಲಿಟ್ಟು ಅವುಗಳನ್ನು ಸೂರ್ಯನ ಬಿಸಿಲಿಗೆ ಒಡ್ಡುವುದರ ಮೂಲಕ ಪಡೆಯಬಹುದಾಗಿದೆ. ಇವುಗಳಲ್ಲಿ ಅತ್ಯಂತ ಪ್ರಖ್ಯಾತವಾದವುಗಳೆಂದರೆ ಬಾಕ್ ಹೂವುಗಳ ಔಷಧಿ ರೆಮೆಡಿ,ಇವುಗಳನ್ನು ವೃದ್ಧಿಪಡಿಸಿದವರು ಶಸ್ತ್ರಚಿಕಿತ್ಸಕರೂ ಹೋಮಿಯೋಪತಿಯ ವೈದ್ಯರೂ ಆಗಿದ್ದ ಎಡ್ವರ್ಡ್ ಬಾಕ್ ಅನ್ನುವವರು. ಈ ಪದ್ಧತಿಯನ್ನು ಸೂಚಿಸುವವರೂ ಹೋಮಿಯೋಪತಿಯ ವೈದ್ಯರಂತೆಯೇ ನಮ್ಮಲ್ಲಿರುವ ಒಂದು ಜೀವತತ್ವದ ಕುರಿತು ಹೇಳುತ್ತಾರಾದರೂ, ಔಷಧಿ(ರೆಮೆಡಿ)ಗಳು ಅದೇ ಜೀವತತ್ವದ ಮೂಲಕ ಕೆಲಸಮಾಡುತ್ತದೆ ಎನ್ನುತ್ತಾರಾದರೂ, ಅವರು ಔಷಧಿ(ರೆಮೆಡಿ)ಗಳನ್ನು ತಯಾರಿಸುವ ವಿಧಾನ ಭಿನ್ನವಾದುದು. ಬಾಕ್ ಪುಷ್ಪ ಔಷಧಿ (ರೆಮೆಡಿ)ಗಳನ್ನು ಹೆಚ್ಚು ನುಣುಪಾದ, ಅಂದರೆ, ಹೂವುಗಳನ್ನು ಬೋಗುಣಿಯಲ್ಲಿಟ್ಟು ಸೂರ್ಯನ ಬೆಳಕಿಗೆ ಒಡ್ಡುವುದು, ಮೊದಲಾದ ರೀತಿಯಲ್ಲಿ ತಯಾರಿಸುತ್ತಾರೆ ಮತ್ತು ಔಷಧಿಗಳನ್ನು ಸಕ್ಯೂಸ್ ಮಾಡಲಾಗುವುದಿಲ್ಲ. ಪುಷ್ಪಚಿಕಿತ್ಸೆಯು ಪರಿಣಾಮಕಾರಿಯಾಗಿದೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ವೈದ್ಯಕೀಯ ಅಥವಾ ವೈಜ್ಞಾನಿಕ ಪುರಾವೆಗಳಿಲ್ಲ.

ಎಲೆಕ್ಟ್ರೋಹೋಮಿಯೋಪತಿ

ಎಲೆಕ್ಟ್ರೋಹೋಮಿಯೋಪತಿಯು 19ನೇ ಶತಮಾನದಲ್ಲಿ ಚಾಲ್ತಿಯಲ್ಲಿದ್ದ ಪದ್ಧತಿಯಾಗಿದ್ದು, ಇಲ್ಲಿ ಹೋಮಿಯೋಪತಿ ಚಿಕಿತ್ಸೆ ಹಾಗೂ ವಿದ್ಯುತ್ ಚಿಕಿತ್ಸೆಯನ್ನು ಜೊತೆಯಾಗಿ ನೀಡಲಾಗುತ್ತಿತ್ತು.

ರಾಷ್ಟ್ರೀಯ ಹೋಮಿಯೋಪತಿ ಸಂಸ್ಥೆ

ಕಲ್ಕತ್ತಾ ರಾಷ್ಟ್ರೀಯ ಹೋಮಿಯೋಪತಿ ಸಂಸ್ಥೆ (NIH) ಯು ಡಿಸೆಂಬರ್ 10, 1975 ರಂದು ಕಲ್ಕತ್ತಾದಲ್ಲಿ, ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಅಡಿಯಲ್ಲಿ ಒಂದು ಸ್ವಾಯತ್ತ ಸಂಸ್ಥೆಯಾಗಿ ಸ್ಥಾಪಿಸಲ್ಪಟ್ಟಿತು. 1987 ನೇ ಇಸವಿಯಿಂದ ಈ ಸಂಸ್ಥೆಯು ಹೋಮಿಯೋಪತಿ ವಿಷಯದಲ್ಲಿ ಸ್ನಾತಕ ಪದವಿ ಶಿಕ್ಷಣವನ್ನೂ, 1998-99 ರಿಂದ ಸ್ನಾತಕೋತ್ತರ ಪದವಿ ಶಿಕ್ಷಣವನ್ನೂ ನೀಡುತ್ತಿದೆ. ಈ ಸಂಸ್ಥೆಯು 2003-04 ರವರೆಗೆ ಕಲ್ಕತ್ತಾ ವಿಶ್ವವಿದ್ಯಾನಿಲಯದ ಅಧೀನದಲ್ಲಿದ್ದು, 2004-05 ರ ನಂತರ ಪಶ್ಚಿಮ ಬಂಗಾಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಅಧೀನಕ್ಕೆ ಒಳಪಟ್ಟಿದೆ. ಜೊತೆಗೆ NIH ಯು ಅಧ್ಯಾಪಕ ವೃಂದದವರಿಗೆ ಮತ್ತು ವೈದ್ಯರಿಗೆ ನಿಯಮಿತವಾದ ಪರಿಚಯ ಶಿಕ್ಷಣವನ್ನು ಕೂಡಾ ನೀಡುತ್ತಾ ಬಂದಿದೆ.

ಬಿ.ಹೆಚ್.ಎಂ.ಎಸ್. ಶಿಕ್ಷಣವು 5 ½ ವರ್ಷಗಳ ಅವಧಿಯದಾಗಿದ್ದು (ಒಂದು ವರ್ಷದ ಖಡ್ಡಾಯವಾದ ಇಂಟರ್ನ್ ಶಿಪ್ ಸೇರಿದಂತೆ), ಎಂ.ಡಿ.(ಹೋಮಿಯೋಪತಿ) ಶಿಕ್ಷಣವು ಮೂರು ವಿಷಯಗಳಲ್ಲಿ ಲಭ್ಯವಿದೆ. ಅವುಗಳೆಂದರೆ ವೈದ್ಯಕೀಯದ ಜ್ಞಾನಸಾಧನ (ಒರ್ಗನಾನ್ ಆಫ್ ಮೆಡಿಸಿನ್), ದಾಖಲೆ ಸಂಗ್ರಹ (ರೆಪರ್ಟರಿ) ಮತ್ತು ಮೆಟಿರಿಯಾ ಮೆಡಿಕಾ. ಪ್ರತಿಯೊಂದು ವಿಷಯದಲ್ಲೂ ಆರು ಸೀಟುಗಳು ಲಭ್ಯವಿವೆ.

 

ಆಕರ:ಆಯುಶ್ ಇಲಾಖೆ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯ, ಭಾರತ ಸರಕಾರ© 2006–2019 C–DAC.All content appearing on the vikaspedia portal is through collaborative effort of vikaspedia and its partners.We encourage you to use and share the content in a respectful and fair manner. Please leave all source links intact and adhere to applicable copyright and intellectual property guidelines and laws.
English to Hindi Transliterate