ಆರೋಗ್ಯದ ಬಗ್ಗೆ ಕಾಳಜಿ ಇರುವ ಯಾವುದೇ ವ್ಯಕ್ತಿ ಆಹಾರ ಪದಾರ್ಥ ಸೇವನೆಗೂ ಮೊದಲು ಯೋಚಿಸುವ ವಿಷಯವೆಂದರೆ ಈ ಪದಾರ್ಥದಲ್ಲಿ ಯಾವ ಜೀವಸತ್ವ(ವಿಟಾಮಿನ್)ವಿದೆ ಎಂದೇ. ನಮ್ಮ ದೇಹಕ್ಕೆ ಶಕ್ತಿ, ಸೌಂದರ್ಯ ನೀಡುವಲ್ಲಿ ಜೀವಸತ್ವಗಳ ಪಾತ್ರ ಅಪಾರ. ದೇಹಕ್ಕೆ ಎಲ್ಲ ಜೀವಸತ್ವಗಳೂ ನಿರ್ದಿಷ್ಟ ಪ್ರಮಾಣದಲ್ಲಿ ಅಗತ್ಯ. ಯಾವುದೇ ಒಂದರಲ್ಲಿ ವ್ಯತ್ಯಯವಾದರೂ ಸಮಸ್ಯೆ ಆರಂಭವಾಗುತ್ತದೆ.
ಅದರಲ್ಲೂ ವಿಟಾಮಿನ್‌ಗಳ ಕೊರತೆಯೇ ವ್ಯಕ್ತಿಯ ಸೌಂದರ್ಯವನ್ನು ಹಾಳುಗೆಡವಲು ಕಾರಣವಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯ. ಅಗತ್ಯ ವಿಟಾಮಿನ್‌ಗಳನ್ನು ಪಡೆದಲ್ಲಿ ದೇಹ ವಯಸ್ಸಿಗೆ ತಕ್ಕಷ್ಟು ತೂಕವನ್ನೂ, ಶಕ್ತಿಯನ್ನೂ ಪಡೆದಿರುತ್ತದೆ.
ಎ ವಿಟಾಮಿನ್ ದೇಹ ಸುಕ್ಕಾಗುವುದನ್ನು ತಪ್ಪಿಸಬಲ್ಲುದು. ಎ ವಿಟಾಮಿನ್ ಹೇರಳವಾಗಿರುವ ಕ್ಯಾರೆಟ್, ಮಾವಿನಹಣ್ಣು, ಪಪ್ಪಾಯ, ಟೊಮ್ಯಾಟೋ, ಕ್ಯಾಬೇಜ್, ಬಸಳೆ ಮುಂತಾದ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಚರ್ಮ ಕೋಮಲವಾಗಿಯೇ ಇರುತ್ತದೆ. ಯೌವನವನ್ನು ಕಳೆದುಕೊಳ್ಳದಿರುವುದಕ್ಕೆ ಇದೊಂದು ಉತ್ತಮ ದಾರಿ.
ಬಿ ಜೀವಸತ್ವ ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. ಬಿ ಕಾಂಪ್ಲೆಕ್ಸ್‌ನಲ್ಲಿರುವ ಬೇರೆ ಬೇರೆ ಜೀವಸತ್ವಗಳಾದ ಬಿ 1 ಬಿ 2 ಬಿ 6 ಮತ್ತು ಬಿ 16 ಇವು ಹೇರಳವಾಗಿರುವ ಆಹಾರ ಸೇವನೆಯಿಂದ ಕೂದಲಿನ ಆರೋಗ್ಯ ಮತ್ತು ದೇಹದ ಆರೋಗ್ಯವೂ ಸುಧಾರಿಸುತ್ತದೆ. ಮೊಟ್ಟೆ, ಬೀನ್ಸ್, ಹಾಲು ಮತ್ತು ಹಾಲಿನ ಉತ್ಪನ್ನಗಳಲ್ಲಿ ಬಿ ಜೀವಸತ್ವ ಹೆಚ್ಚಾಗಿರುತ್ತದೆ.
ಸಿ ಜೀವಸತ್ವ ಹೆಚ್ಚಾಗಿರುವ ಆಹಾರ ಪದಾರ್ಥ ಸಹ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಲಿಂಬು, ಕಿತ್ತಳೆ, ದ್ರಾಕ್ಷಿ, ನೆಲ್ಲಿಕಾಯಿ ಮುಂತಾದ ಹುಳಿ ಪದಾರ್ಥಗಳಲ್ಲಿ ಸಿ ಜೀವಸತ್ವ ಹೆಚ್ಚಾಗಿರುತ್ತದೆ.
ಇ ಜೀವಸತ್ವವೂ ಸಹ ಚರ್ಮಕ್ಕೆ ಸಂಬಂಧಿಸಿದ ಜೀವಕೋಶಗಳ ಬೆಳವಣಿಗೆಗೆ ಸಹಕಾರಿಯಾಗಿದೆ.ಬಾದಾಮಿ, ಟೊಮ್ಯಾಟೊ, ಮಾವಿನ ಹಣ್ಣು ಮುಂತಾದ ಪದಾರ್ಥಗಳಲ್ಲಿ ಇ ವಿಟಾಮಿನ್ ಹೇರಳವಾಗಿರುತ್ತದೆ.
ಅಂದರೆ ಸೌಂದರ್ಯ ವೃದ್ಧಿ ಕೇವಲ ಸೌಂದರ್ಯ ಪ್ರಸಾಧನಗಳಿಂದ ಮಾತ್ರ ಸಾಧ್ಯವಾಗುವುದಲ್ಲ. ಅದು ನೈಸರ್ಗಿಕ ಆಹಾರ ಪದಾರ್ಥಗಳಿಂದಲೇ ವೃದ್ಧಿಸುವಂಥದು. ಸರಿಯಾದ ಆಹಾರ ಪದಾರ್ಥ ಸೇವಿಸದೆ ಕೇವಲ ಸೌಂದರ್ಯ ಪ್ರಸಾಧನಗಳನ್ನು ಹಚ್ಚಿಕೊಳ್ಳುವುದರಿಂದ ಸುಂದರವಾಗಿ ಕಾಣುತ್ತೇವೆ ಎಂದುಕೊಳ್ಳುವುದು ಮೂರ್ಖತನವಾದೀತು.
ಮೂಲ: ವಿಕ್ರಮ
ಕೊನೆಯ ಮಾರ್ಪಾಟು : 5/3/2020