ಉತ್ತಮವಾಗಿ ಬದುಕಿ ಆರೋಗ್ಯದಿಂದ ಬದುಕಿ ೨೪ ಗಂಟೆಯೂ ಅಗೋಚರ ಕಿರೀಟ ಧರಿಸಿರುವ ಚಕ್ರವರ್ತಿಯಂತೆ ಬದುಕಿ. ನಿಮ್ಮ ಅಹಂಕಾರ ಮತ್ತು ಹೆಮ್ಮೆಯನ್ನು ತೋರಿಸಲು ಹೀಗೆ ಬದುಕಬೇಕಿಲ್ಲ. ನಿಮ್ಮ ಗುಣ, ಭಾವನೆಗಳನ್ನು ಅಭಿವ್ಯಕ್ತಿಗೊಳಿಸುವುದಕ್ಕಾಗಿ ಸುತ್ತಲಿನ ಪ್ರಪಂಚವಿದೆ ಎಂಬಂತೆ ಬದುಕಿ. ಪ್ರತಿ ಬಾರಿಯೂ ಸುಂದರವಾದುದ್ದು, ದೈವಿಕವಾದುದ್ದನ್ನು ವ್ಯಕ್ತಪಡಿಸಿದಾಗಲೆಲ್ಲ ನೀವು ಗೆದ್ದಿರುತ್ತೀರಿ. ಅನ್ಯರ ಬಗ್ಗೆ ಪ್ರೀತಿ, ಆದರ ತೋರುತ್ತ ಸಹಾನುಭೂತಿಯ ಮಾತನಾಡಿದಾಗಲೆಲ್ಲ ಗೆಲುವು ಸಾಧಿಸಿರುತ್ತೀರಿ.
ಅಪಾರವಾದ ಪ್ರಾಣಶಕ್ತಿ ನಮಗೆ ಲಭ್ಯವಿರುತ್ತದೆ. ಅದು ಅದ್ಭುತವಾದ ಶಕ್ತಿ. ಆ ಶಕ್ತಿ ಇಡೀ ವಿಶ್ವವನ್ನು ನಡೆಸುವ ಶಕ್ತಿ. ಇದೇ ವೈವಿಧ್ಯಮಯ ಶಕ್ತಿ ಗಿಡಗಳನ್ನು ಬೆಳೆಸುತ್ತದೆ. ಹೂಗಳನ್ನು ಅರಳಿಸುತ್ತದೆ. ಗಾಯವಾದಾಗ ನಾವು ರಕ್ತಸ್ರಾವದಿಂದ ಸಾಯದಂತೆ ರಕ್ತವನ್ನು ಹೆಪ್ಪುಗಟ್ಟಿಸುತ್ತದೆ. ನಮ್ಮ ಅಭ್ಯುದಯಕ್ಕಾಗಿ ದಣಿವಿಲ್ಲದಂತೆ ಈ ಶಕ್ತಿ ಕೆಲಸ ಮಾಡುತ್ತಿರುತ್ತದೆ. ನಮಗಾಗಿ ವಿಶ್ವಶಕ್ತಿ ಅಷ್ಟೆಲ್ಲ ಕೆಲಸ ಮಾಡುತ್ತ ಇರುವಾಗ ಸಂತಸದಿಂದ, ಆರೋಗ್ಯದಿಂದ ಇರುವುದು ಅಷ್ಟೊಂದು ಕಷ್ಟವೇ?
ಎಡಿತ್ ಆರ್ಮಸ್ಟ್ರಾಂಗ್ ಯಾವಾಗಲೂ ಖುಷಿ, ಖುಷಿಯಾಗಿ ಇರಲು ತಾವು ಅನುಸರಿಸುವ ತಂತ್ರವನ್ನು ಹೇಳುತ್ತಾರೆ. ‘ನನ್ನ ಮನಸ್ಸಿನ ದೂರವಾಣಿ ಶಾಂತಿ, ಸೌಹಾರ್ದ, ಆರೋಗ್ಯ, ಪ್ರೀತಿ ಮತ್ತು ಸಮೃದ್ಧಿಗಾಗಿ ಯಾವಾಗಲೂ ತೆರೆದಿರುತ್ತದೆ. ಅನುಮಾನ, ಆತಂಕ, ಭಯ, ಉದ್ವೇಗ ಇತ್ಯಾದಿಗಳು ಕರೆ ಮಾಡಲು ಯತ್ನಿಸಿದಾಗ ಅವುಗಳಿಗೆ ಬ್ಯುಸಿ ಎಂಬ ಸಂದೇಶ ಹೋಗುತ್ತದೆ. ಕಾಲಕ್ರಮೇಣ ಅವು ನನ್ನ ದೂರವಾಣಿ ಸಂಖ್ಯೆಯನ್ನು ಮರೆತುಬಿಡುತ್ತವೆ’
ಪೂರ್ಣತ್ವವನ್ನು ಸಾಧಿಸಲು ನಾವು ಏನು ಮಾಡುತ್ತಿದ್ದೇವೆ ಎಂದು ಕೇಳಿಕೊಳ್ಳೋಣ.
ನಾವು ಸಂಪರ್ಕ ಮಾಡುವ ಎಲ್ಲರನ್ನೂ ಒಂದೇ ರೀತಿಯಾಗಿ ನೋಡುತ್ತೇವೆಯೇ? ಗೆಳೆಯ, ಗೆಳತಿಯ ಕೆಲಸದ ಬಗ್ಗೆ ಟೀಕಿಸಿದ ಘಟನೆಯನ್ನು ನೆನಪಿಸಿಕೊಳ್ಳಿ. ನೀವು ಹೇಳುವಷ್ಟು ಅವರ ಕೆಲಸ ಕಳಪೆಯಾಗಿತ್ತೆ ಅಥವಾ ನಿಮ್ಮ ಗೆಳೆಯ, ಗೆಳತಿ ನಿಮ್ಮನ್ನು ಮೀರಿಸಿ ಹೋಗಬಾರದು ಎಂಬ ಗುಪ್ತ ಭಾವ ನಿಮ್ಮೊಳಗಿತ್ತೆ?
ನೀವು ಮಹತ್ವದ್ದಲ್ಲದ್ದು ಎಂದು ಭಾವಿಸಿದ ವಿಚಾರದಲ್ಲಿ ಸ್ನೇಹಿತರೋ, ಜೀವನ ಸಂಗಾತಿಯೋ ಅಥವಾ ಸಹೋದ್ಯೋಗಿಗಳೋ ಕೇಳಿದ ನೆರವನ್ನು ಅಹಂಕಾರದಿಂದ ತಳ್ಳಿಹಾಕಿದ್ದೀರಾ? ನೀವು ಖಡಾಖಂಡಿತವಾಗಿ ನಿರಾಕರಿಸಿರದಿದ್ದರೂ ನಿಮ್ಮ ದನಿ, ಆಗ ಬಳಸಿದ ಶಬ್ದ, ನಿಮ್ಮ ನೋಟ ಎಲ್ಲವೂ ಅಭಿವ್ಯಕ್ತಿಯ ಭಾಗವಾಗಿರುತ್ತವೆ. ಅವು ನಿಮ್ಮ ಸುತ್ತಲಿನ ಪರಿಸರ ಮತ್ತು ಸಂಬಂಧಗಳ ಮೇಲೆ ಪ್ರಭಾವ ಬೀರುತ್ತವೆ.
ಮುಂದಿನ ಪ್ರಶ್ನೆ, ನೀವು ಸೌಹಾರ್ದ ಮತ್ತು ಪ್ರೀತಿಯಿಂದ ತುಂಬಿದ ಜಗತ್ತನ್ನು ಸೃಷ್ಟಿಸಬಯಸುತ್ತೀರಾ ಅಥವಾ ಯಾಂತ್ರಿಕವಾದ ನಿತ್ಯದ ಜಗತ್ತಿನಲ್ಲೇ ಇರಬಯಸುತ್ತೀರಾ? ಸೌಹಾರ್ದ, ಪ್ರೀತಿ ತುಂಬಿದ ಜಗತ್ತು ನಿಮ್ಮದಾಗಬೇಕು ಅಂದಲ್ಲಿ ನೀವು ಬಳಸುವ ಶಬ್ದ, ದನಿ, ನೋಟ ಎಲ್ಲವೂ ಪ್ರೋತ್ಸಾಹ ತುಂಬುವಂತೆ ಇರಬೇಕು. ಧ್ವನಿಯಲ್ಲಿ ಗಡಸುತನ, ಮೇಲರಿಮೆ ಇಣುಕದಂತೆ ನೋಡಿಕೊಳ್ಳಿ. ದೈವಿಕವಾದ ಶಕ್ತಿಯನ್ನು ಹೊರಹೊಮ್ಮಿಸುವಂತೆ ನಿಮ್ಮ ಅಭಿವ್ಯಕ್ತಿ ಇರಲಿ. ನಿಮ್ಮ ಮುಕುಟ ಸದಾ ಹೊಳೆಯುತ್ತಿರಲಿ.
ನನ್ನ ದೇಹ, ಮನಸ್ಸು, ಚೈತನ್ಯವನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆಯೇ ಎಂಬ ಪ್ರಶ್ನೆಯನ್ನೂ ಹಾಕಿಕೊಳ್ಳಿ. ಭಾವನೆಗಳನ್ನು, ಅಸಹನೆಯನ್ನು ಬಹಳ ಕಾಲ ಅದುಮಿಟ್ಟಾಗ ಅದು ದೇಹದಲ್ಲಿ ಅಸಮತೋಲನ ಹುಟ್ಟುಹಾಕುತ್ತದೆ. ರೋಗಕ್ಕೆ ಕಾರಣವಾಗುತ್ತದೆ.
ನಾನೇ ಮೇಲು ಎಂಬ ಅಹಂಕಾರ ಭಾವ ನಾವು ಬದುಕನ್ನು, ಇತರರನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸುತ್ತದೆ. ರಕ್ತದೊತ್ತಡ, ಮೂತ್ರಪಿಂಡ ಸಮಸ್ಯೆ, ಕೂದಲಿನ ಸಮಸ್ಯೆ ಇತ್ಯಾದಿಗಳು ಆರಂಭವಾಗುತ್ತವೆ. ಈ ಅಹಂಕಾರ ಭಾವ ಎಲ್ಲವನ್ನೂ ತುಳಿದು ಹಾಕುತ್ತದೆ. ‘ನಾನು’, ‘ಅವರು’ ಎಂಬ ಭಾವದಿಂದಾಗಿ ಪೂರ್ಣತ್ವ ಸಾಧಿಸಲು ಸಾಧ್ಯವಾಗುವುದಿಲ್ಲ.
ನಮ್ಮ ಅಂತಃಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸಿಕೊಂಡಾಗ ಆರೋಗ್ಯವಂತ ದೇಹ ನಮ್ಮದಾಗುತ್ತದೆ. ಅಂತಃಪ್ರಜ್ಞೆಯನ್ನು ಉನ್ನತ ಮಟ್ಟಕ್ಕೆ ಏರಿಸುವುದು ಅಂದರೆ ಸೂಕ್ಷ್ಮವಾಗಿ ಆಲೋಚಿಸುವುದು. ಆಗ ನಮ್ಮ ದೇಹ ಮತ್ತು ಮನಸ್ಸಿನ ನಡುವೆ ಸೌಹಾರ್ದ ಮೂಡುತ್ತದೆ. ಹಾಗೆ ಆಗಬೇಕಾದರೆ ಎಲ್ಲ ರೀತಿಯ ಅಹಂಕಾರವನ್ನು ನಾವು ಬಿಟ್ಟುಬಿಡಬೇಕು. ಎಲ್ಲ ಕೃತಕ ವರ್ತನೆಗಳನ್ನು ಬಿಟ್ಟು ಸರಳವಾಗಿ ಬದುಕಬೇಕು. ವಿನಮ್ರವಾಗಿಯೂ ಇರಬೇಕಿಲ್ಲ. ಏಕೆಂದರೆ ಎಷ್ಟೋ ಸಲ ಅದು ಸಹ ಕೃತಕವಾಗಿರುತ್ತದೆ. ಯಾರು ಕೆಳಗಿದ್ದಾರೆ, ಯಾರು ಮೇಲಿದ್ದಾರೆ ಎಂಬಂತಹ ವಿಚಾರಗಳನ್ನೆಲ್ಲ ತಲೆಯಿಂದ ತೆಗೆದುಹಾಕಿ. ಸ್ಥಾನಮಾನ, ಪ್ರತಿಷ್ಠೆ, ಮಾನದ ಬಗ್ಗೆ ತಲೆಕೆಡಿಸಿಕೊಳ್ಳದ ವ್ಯಕ್ತಿ ನಿಜವಾಗಿಯೂ ಎಲ್ಲದರಿಂದ ಮುಕ್ತವಾಗಿರುತ್ತಾನೆ.
ಪ್ರಾಣ ಶಕ್ತಿ ಮುಕ್ತವಾಗಿ ಹರಿಯುವಲ್ಲಿ ಇಂತಹ ವಿಚಾರಗಳೆಲ್ಲ ಅಡ್ಡಿಯಾಗುತ್ತವೆ. ಆರೋಗ್ಯವಂತನಾಗಿ, ಪೂರ್ಣವಾಗಿ ಇರುವ ವ್ಯಕ್ತಿ ಎಲ್ಲ ರೀತಿಯಲ್ಲೂ ಸಮತೋಲನ ಹೊಂದಿರುತ್ತಾನೆ. ಯಾವುದೇ ಕಿರಿಕಿರಿ ಮಾಡುವುದಿಲ್ಲ. ತನ್ನ ಅಹಂಕಾರ ತನ್ನನ್ನು ಆಳಲು ಬಿಡುವುದಿಲ್ಲ. ತನ್ನ ಜತೆ ಮತ್ತು ಇತರರ ಜತೆ ಸೌಹಾರ್ದದಿಂದ ಇರುತ್ತಾನೆ. ತನ್ನ ಜ್ಞಾನ ಮತ್ತು ಬುದ್ಧಿಮತ್ತೆಯನ್ನು ಗೌರವಿಸುವ ಆ ವ್ಯಕ್ತಿ ಇತರರನ್ನೂ ಹಾಗೆಯೇ ಗೌರವಿಸುತ್ತಾನೆ. ಬೇರೆಯವರ ಬಗ್ಗೆ ಕೀಳಾಗಿ ಯೋಚಿಸುವುದಿಲ್ಲ. ತನ್ನ ಪ್ರಾಮಾಣಿಕ ಪ್ರಯತ್ನದಿಂದ ಅವರನ್ನು ಮೇಲಕ್ಕೆ ಎತ್ತಲು ಬಯಸುತ್ತಾನೆ. ತಾನು ಎಷ್ಟೇ ತಿಳಿದುಕೊಂಡಿದ್ದರೂ ತಾನು ತಿಳಿದುಕೊಂಡಿದ್ದು ಕಡಿಮೆ ಎಂದುಕೊಳ್ಳುತ್ತಾನೆ. ತಾನು ಆರೋಗ್ಯವಂತನಾಗಿ, ಸಂತೃಪ್ತಿಯಿಂದ ಇದ್ದೇನೆ ಅಂದುಕೊಳ್ಳುತ್ತಾನೆ.
ಆಂತರಿಕ ಮತ್ತು ಬಾಹ್ಯ ಸೌಹಾರ್ದ ಬದುಕಿನ ರೀತಿಯಾಗಬೇಕು. ದೈಹಿಕ ವ್ಯಾಯಾಮ, ಇತರರ ಬಗ್ಗೆ ಚೆನ್ನಾಗಿ ಅಂದುಕೊಳ್ಳುವುದು, ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುವುದು, ನಿಮ್ಮನ್ನು ಪ್ರೀತಿಸಿಕೊಳ್ಳುವುದು, ಧ್ಯಾನಸ್ಥರಾಗಿ ಬದುಕುವುದು ಜೀವನದ ರೀತಿಯಾಗ ಬೇಕು.ನಿಮ್ಮ ಮನೋಭಾವ, ಬಾಹ್ಯ ನಿಲುವು ಮತ್ತು ಪ್ರಾಣದ ಹರಿವು ಎಲ್ಲವೂ ಒಂದಕ್ಕೊಂದು ಹೊಂದಿಕೆಯಾಗುವಂತೆ ಭುಜಗಳನ್ನು ಅಗಲವಾಗಿಸಿ, ಬೆನ್ನು ನೆಟ್ಟಗಾಗಿಸಿ ನಡೆಯಿರಿ.
ಅಂತಿಮವಾಗಿ ನಿಮ್ಮ ಮನಸ್ಸಿನ ದೂರವಾಣಿಯ ಮೂಲಕ ಉತ್ತಮವಾದುದ್ದನ್ನಷ್ಟೇ ಸ್ವೀಕರಿಸಿ. ಅಹಂಕಾರದ ಮೂಲಕ ನಿಮ್ಮ ದೂರವಾಣಿಯನ್ನು ಚಾರ್ಜ್ ಮಾಡಿಕೊಳ್ಳಬೇಡಿ. ಹೃದಯದ ದಾರಿಗಳು ಅಹಂಕಾರ ಮತ್ತು ದೈವಿಕತೆ ಒಟ್ಟೊಟ್ಟಾಗಿ ಸಾಗಲು ಸಾಧ್ಯವಾಗದಷ್ಟು ಕಿರಿದಾಗಿವೆ. ಯಾರು ಹೊರಗೆ ಇರಬೇಕು ಎಂಬುದನ್ನು ನಿರ್ಧರಿಸುವುದು ನಿಮ್ಮ ಕೈಯಲ್ಲಿದೆ.
ಮೂಲ :ಭರತ್ ಮತ್ತು ಶಾಲನ್ ಸವೂರ್ ಪ್ರಜಾವಾಣಿ
ಕೊನೆಯ ಮಾರ್ಪಾಟು : 6/4/2020