ಅನಾದಿ ಕಾಲದಿಂದಲೂ ಕುಷ್ಠರೋಗವನ್ನು ಒಂದು ಶಾಪವೆಂದು ಪರಿಗಣಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕುಷ್ಠರೋಗವನ್ನು "ಬಹುಔಷಧಿ ಚಿಕಿತ್ಸಾ ಪದ್ಧತಿ" ಯಂತಹ ಚಿಕಿತ್ಸೆಯಿಂದ ಗುಣಪಡಿಸುವುದಷ್ಟೇ ಅಲ್ಲ, ಅದರಿಂದ ಉಂಟಾಗುವ ಅಂಗವೈಕಲ್ಯವನ್ನೂ ತಡೆಯಬಹುದು...
ಕುಷ್ಠರೋಗ ಎಂದರೇನು?
ಕುಷ್ಠರೋಗವು "ಮೈಕೋಬ್ಯಾಕ್ಟೀರಿಯಂ ಲೆಪ್ರೇ" ಎಂಬ ಸೂಕ್ಷ್ಮ ಜೀವಾಣುವಿನಿಂದ ಬರುವ ರೋಗ.
ಇದು ಮುಖ್ಯವಾಗಿ ಚರ್ಮ ಮತ್ತು ನರಗಳ ಮೇಲೆ ಪ್ರಭಾವ ಬೀರುತ್ತದೆ. ಲಿಂಗ, ವಯಸ್ಸಿನ ಭೇದಭಾವವಿಲ್ಲದೆ ಯಾರಿಗಾದರೂ ಬರಬಹುದು. ಸಕಾಲದಲ್ಲಿ ಚಿಕಿತ್ಸೆ ನೀಡದಿದ್ದರೆ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಆರಂಭದಲ್ಲಿಯೇ ರೋಗ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಅಂಗವೈಕಲ್ಯವನ್ನು ತಡೆಗಟ್ಟಬಹುದು.
ಕುಷ್ಠರೋಗ ಪತ್ತೆ ಹೇಗೆ?
* ಸ್ಪರ್ಶ ಜ್ಞಾನವಿಲ್ಲದ ಚರ್ಮದ ಮೇಲಿನ ಮಚ್ಚೆ (ಶೀತ, ಉಷ್ಣ, ಸ್ಪರ್ಷ, ಅಥವಾ ನೋವಿನ ಅರಿವು ಆಗದು)
* ಈ ಮಚ್ಚೆಗಳು ತಿಳಿ ಬಿಳಿ ಅಥವಾ ಕೆಂಪು ಇಲ್ಲವೇ ತಾಮ್ರ ವರ್ಣದ್ದಾಗಿದ್ದು, ಯಾವುದೇ ಗಾತ್ರದಲ್ಲಿರಬಹುದು. ಕೆಲವೊಮ್ಮೆ ಉಬ್ಬಿದಂತೆಯೂ ಕಾಣಬಹುದು.
ಇವುಗಳಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದರೂ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೊಳಪಡಬೇಕು.
ನಿರ್ಲಕ್ಷಿಸಲಾಗದ ಲಕ್ಷಣಗಳು ಯಾವವು?
ತಕ್ಷಣ ಕಾಣಿಸಿಕೊಳ್ಳುವ ಆಯಾಸ, ಅಶಕ್ತ ಸ್ನಾಯುಗಳು, ಅಸಮರ್ಥ ಕೈಕಾಲುಗಳು; ಹೊರಮೈಮೇಲಿನ ನರಗಳು ಮೆದುವಾಗಿ, ಬಾತುಕೊಂಡು ನೋವಾಗುವುದು, ಕೀಲುಗಳಲ್ಲಿ ನೋವು; ಕೆಂಪಾಗಿರುವ, ನೋವಿರುವ ಅಥವಾ ನೀರಾಡುವ ಕಣ್ಣುಗಳು, ಜೊತೆಗೆ ದೃಷ್ಟಿ ಮಂಜಾಗುವುದು; ಕೈ ಕಾಲುಗಳು, ಬೆರಳುಗಳಲ್ಲಿ ಬಾವು ಕಾಣಿಸಿಕೊಳ್ಳುವುದು ಇತ್ಯಾದಿ.
ಹೊರ ಮೈಮೇಲಿನ ನರಗಳ ತೊಂದರೆಯನ್ನು ವಿವರಿಸಿ.
* ಹೊರಮೈಮೇಲಿನ ನರಗಳು ಮೆದುವಾಗಿ, ಬಾತುಕೊಂಡು ನೋವಾಗಬಹುದು (ಹಗ್ಗದ ಹಾಗೆ) ಸಾಮಾನ್ಯವಾಗಿ ಕಿವಿಯ ಹಿಂದೆ, ಕೈ ಮತ್ತು ಕಾಲುಗಳಲ್ಲಿನ ನರಗಳು ಬಾತುಕೊಳ್ಳಬಹುದು.
* ಬೆರಳುಗಳ ತುದಿ ಮತ್ತು ಪಾದಗಳಲ್ಲಿ ಸ್ಪರ್ಷಜ್ಞಾನ ಇಲ್ಲದಿರುವುದು.
* ಸ್ನಾಯುಗಳ ದೌರ್ಬಲ್ಯ
* ಚರ್ಮದಲ್ಲಿ ತದ್ದು, ಚರ್ಮ ದಪ್ಪಗಾಗುವಿಕೆ
* ಮರುಕಳಿಸುವ ಗಾಯ /ಸುಟ್ಟ ಗಾಯದ ಗುರುತುಗಳು; ಅಂಗೈ ಹಾಗೂ ಅಂಗಾಲುಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ನೋವಿಲ್ಲದ ಹುಣ್ಣುಗಳು
ಇದಕ್ಕೆ ಚಿಕಿತ್ಸೆ ಏನು?
ಎಂ.ಡಿ.ಟಿ ಕುಷ್ಠ ರೋಗಕ್ಕೆ ಸೂಕ್ತ ಚಿಕಿತ್ಸೆ. ಎಂ.ಡಿ.ಟಿ (ಬಹು ಔಷಧಿ ಚಿಕಿತ್ಸೆ) ಯನ್ನು ೪ ರೀತಿಯಲ್ಲಿ ನೀಡಲಾಗುತ್ತದೆ. ಕುಷ್ಠ ರೋಗಿಗೆ ನಿಯಮಿತವಾಗಿ, ತಪ್ಪದೇ ಸಂಪೂರ್ಣ ಚಿಕಿತ್ಸೆ ತೆಗೆದುಕೊಳ್ಳುವಂತೆ ಉತ್ತೇಜನ ನೀಡುವುದು ಬಹಳ ಮುಖ್ಯ. ಒಮ್ಮೆ ಒಬ್ಬ ವ್ಯಕ್ತಿಗೆ ವೈದ್ಯರು ಕುಷ್ಠರೋಗವಿದೆ ಎಂದು ಖಚಿತವಾದ ನಂತರ ಚಿಕಿತ್ಸೆಯನ್ನು ಹೀಗೆ ನಿರ್ಧರಿಸಬಹುದು:
ಕುಷ್ಠರೋಗಕ್ಕೆ ತುತ್ತಾದ ಮೇಲೆಯೂ ಸಾಮಾನ್ಯ ಜೀವನ ನಡೆಸಬಹುದೆ?
ಕುಷ್ಠರೋಗಕ್ಕೆ ತುತ್ತಾದ ವ್ಯಕ್ತಿಯು ಚಿಕಿತ್ಸೆ ಪಡೆಯುವಾಗ ಮನೆಯಲ್ಲಿಯೇ ಇರಬಹುದು ಹಾಗೂ ಮಾಮೂಲಿ ಜೀವನ ನಡೆಸಬಹುದು. ಉದಾ: ಶಾಲೆಗೆ ಹೋಗುವುದು, ಕೆಲಸಕ್ಕೆ ಹೋಗುವುದು, ಆಟವಾಡುವುದು, ಮದುವೆಯಾಗುವುದು ಮಕ್ಕಳನ್ನು ಪಡೆಯುವುದು. ಬಹುಔಷಧಿ ಚಿಕಿತ್ಸೆಯನ್ನು ಸರಿಯಾಗಿ ಪಡೆಯದೇ ಇರುವ ರೋಗಿಯು ಈ ಸೋಂಕನ್ನು ಇತರರಿಗೆ, ವಿಶೇಷವಾಗಿ ಮನೆಯಲ್ಲಿರುವ ಮಕ್ಕಳಿಗೆ ಹರಡಬಹುದು. ಬಹುಔಷಧಿ (ಎಂ.ಡಿ.ಟಿ) ಚಿಕಿತ್ಸೆಯು ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ದೊರೆಯುತ್ತದೆ. ಇದು ಸುರಕ್ಷಿತ ಹಾಗೂ ಪರಿಣಾಮಕಾರಿ. ಚಿಕಿತ್ಸೆ ಪಡೆದ ರೋಗಿಯು ಸೋಂಕನ್ನು ಹರಡುವುದಿಲ್ಲ. ಬಹು ಔಷಧಿ ಚಿಕಿತ್ಸೆಯು ಗರ್ಭಿಣಿಯರಿಗೂ ಸುರಕ್ಷಿತ.
ಕುಷ್ಠರೋಗದಿಂದ ಅಂಗವೈಕಲ್ಯ ಆಗುವುದು ಯಾವ ಹಂತದಲ್ಲಿ?
ಕುಷ್ಠರೋಗಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಚಿಕಿತ್ಸೆ ತಡವಾಗಿ ಪ್ರಾರಂಭಿಸಿದರೆ, ನಿಯಮಿತವಾಗಿ ಚಿಕಿತ್ಸೆ ನೀಡದಿದ್ದರೆ, ಚಿಕಿತ್ಸೆ ಸಂಪೂರ್ಣಗೊಳ್ಳದಿದ್ದರೆ, ಸ್ಪರ್ಷಜ್ಞಾನವಿಲ್ಲದ ಜಾಗಗಳನ್ನು ಸಂರಕ್ಷಿಸದಿದ್ದರೆ ಅಂಗವೈಕಲ್ಯ ಅಥವಾ ನ್ಯೂನತೆಗಳು ಉಂಟಾಗಬಹುದು.
ಕೊನೆಯ ಮಾರ್ಪಾಟು : 5/28/2020