ಹೂರಣಕ್ಕೆ ನೇರ ಹೋಗಿ | Skip to navigation

ವಿಕಾಸ್‌ಪಿಡಿಯಾ

ಮೂಲನೆಲೆ / ಆರೋಗ್ಯ / ರೋಗಗಳು / ಕ್ಯಾನ್ಸರ್ ಅರಿವಿನ ‘ಪ್ರಣತಿ’
ಹಂಚಿಕೊಳ್ಳಿ
ನೋಟಗಳು
  • ಸ್ಥಿತಿ : ಪರಿಷ್ಕರಣೆಗೆ ಮುಕ್ತ ವಾಗಿದೆ

ಕ್ಯಾನ್ಸರ್ ಅರಿವಿನ ‘ಪ್ರಣತಿ’

ಜನರು ಕ್ಯಾನ್ಸರ್‌ ಹೆಸರು ಕೇಳಿದ ಕೂಡಲೇ ಬೆಚ್ಚಿ ಬೀಳುವುದು ಸಾಮಾನ್ಯ. ಚಿಕಿತ್ಸೆಯ ವಿಧಾನ, ಅದರಿಂದಾಗುವ ಅಡ್ಡ ಪರಿಣಾಮಗಳು, ನೋವು, ಯಾತನೆಯ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ.

ಜನರು ಕ್ಯಾನ್ಸರ್‌ ಹೆಸರು ಕೇಳಿದ ಕೂಡಲೇ ಬೆಚ್ಚಿ ಬೀಳುವುದು ಸಾಮಾನ್ಯ. ಚಿಕಿತ್ಸೆಯ ವಿಧಾನ, ಅದರಿಂದಾಗುವ ಅಡ್ಡ ಪರಿಣಾಮಗಳು, ನೋವು, ಯಾತನೆಯ ಬಗ್ಗೆ ಸಾಕಷ್ಟು ತಪ್ಪು ಕಲ್ಪನೆಗಳಿವೆ.

ಕ್ಯಾನ್ಸರ್‌ಗಾಗಿ ನೀಡುವ ಕಿಮೋಥೆರಪಿ ಹಾಗೂ ರೇಡಿಯೇಷನ್‌ ಚಿಕಿತ್ಸೆಯಿಂದ ದೇಹ ಬಸವಳಿದು ಹೋಗುತ್ತದೆ, ಈ ಚಿಕಿತ್ಸೆಯ ಪರಿಣಾಮವಾಗಿ ತಲೆ ಕೂದಲು ಉದುರುವುದು ಸೇರಿದಂತೆ ದೇಹದ ಮೇಲೆ ಸಾಕಷ್ಟು ಅಡ್ಡ ಪರಿಣಾಮ ಉಂಟಾಗುತ್ತದೆ ಎಂಬ ಕಲ್ಪನೆಯೂ ರೋಗಿಗಳ ಕಳವಳಕ್ಕೆ ಕಾರಣ. ಆದರೆ ಕಾಲ ಬದಲಾಗಿದೆ. ಈಗ ಕಿಮೋಥೆರಪಿ ಮಾಡುವ ಬಗೆ ಹಾಗೂ ಬಳಸುವ ಔಷಧಗಳನ್ನು ಮತ್ತಷ್ಟು ಉತ್ತಮಪಡಿಸಿಲಾಗಿದೆ. ಇದರಿಂದಾಗಿ ಕ್ಯಾನ್ಸರ್‌ ಚಿಕಿತ್ಸೆ ಮೊದಲಿನಷ್ಟು ಯಾತನಾದಾಯಕ ಅಲ್ಲ ಎಂಬುದು ತಜ್ಞರ ಅಭಿಪ್ರಾಯ.

ಕ್ಯಾನ್ಸರ್‌ ಸಹ ರಕ್ತದೊತ್ತಡ, ಸಕ್ಕರೆ ಕಾಯಿಲೆಯಷ್ಟೇ ಸಾಮಾನ್ಯವಾಗಿದೆ. 2 ವರ್ಷದ ಮಕ್ಕಳಿಂದ ಹಿಡಿದು 70ರ ವೃದ್ಧರಿಗೂ ಈ ಕಾಯಿಲೆ ಬರುತ್ತದೆ. ಕ್ಯಾನ್ಸರ್ ದೇಹದ ಯಾವುದೇ ಅಂಗಗಳನ್ನು ಆಕ್ರಮಿಸಿಕೊಳ್ಳಬಹುದು. ಆದರೆ ಮೊದಲ ಹಂತದಲ್ಲೇ ಕ್ಯಾನ್ಸರ್‌ ಪತ್ತೆಯಾದರೆ, ಅದಕ್ಕೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಯಶಸ್ವಿಯಾಗಿ ನಿಭಾಯಿಸಬಹುದು.

ಮರು ಜೀವ ಪಡೆದ ಅನುಭವ
ಕ್ಯಾನ್ಸರ್ ಬದುಕಿನ ಅಂತ್ಯ ಅಲ್ಲ ಎಂಬುದಕ್ಕೆ ಕ್ಯಾನ್ಸರ್ ನಿಂದ ಗುಣಮುಖರಾಗಿ ಮರುಜೀವ ಪಡೆದು ಮತ್ತೆ ಸ್ವಾಭಾವಿಕ ಬದುಕಿಗೆ ಹಿಂತಿರುಗಿದ ಬೆಂಗಳೂರಿನ ಲತಾ ಪೈ ಅವರೇ  ನಿದರ್ಶನ. ಮೂರು ವರ್ಷದ ಹಿಂದೆ ಶ್ವಾಸಕೋಶದ ಕ್ಯಾನ್ಸರ್‌ ಪತ್ತೆಯಾದಾಗ ಲತಾ ಅವರು ಅನುಭವಿಸಿದ ನೋವು, ಮಾನಸಿಕ ತೊಳಲಾಟ ಪದಗಳಲ್ಲಿ ಹೇಳಲಾಗದು. ರೋಗದ ಬಗ್ಗೆ ಅರಿವು ಮೂಡಿಸಿಕೊಳ್ಳುವುದೇ ಈ ತೊಳಲಾಟದಿಂದಾಚೆ ಬರುವ ಉಪಾಯವೆಂದು ಅರಿತರು..

ಪುಸ್ತಕ ಓದಿ, ವೈದ್ಯರೊಂದಿಗೆ ಚರ್ಚಿಸಿ, ಸಮಾಲೋಚಿಸಿ, ಕ್ಯಾನ್ಸರ್‌ ಬಗ್ಗೆ ಎಲ್ಲವನ್ನೂ ಅರಿಯಲು ಪ್ರಯತ್ನಿಸಿದರು.  ವೈದ್ಯರನ್ನು ಭೇಟಿ ಮಾಡಿ ತಿಳಿವಳಿಕೆ ಪಡೆಯುವ ಮೂಲಕ ಕ್ಯಾನ್ಸರ್‌ ಬಗ್ಗೆ ಇದ್ದ ತಪ್ಪು ಕಲ್ಪನೆ ಹಾಗೂ ಭಯದಿಂದ ಮುಕ್ತರಾದರು. ತಮ್ಮನ್ನು  ಎಲ್ಲಾ ಪರೀಕ್ಷೆಗಳಿಗೆ ನಿರಾತಂಕವಾಗಿ ಒಡ್ಡಿಕೊಂಡರು. ವೈದ್ಯರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರು. ಸದ್ಯ ಕ್ಯಾನ್ಸರ್‌ ಅವರ ಬದುಕನ್ನು ಮುಗಿಸಲಿಲ್ಲ. ಬದಲಾಗಿ ಅದು ಅವರ ಬದುಕಿನಲ್ಲಿ ಮುಗಿದು ಹೋದ ಅಧ್ಯಾಯವಾಗಿದೆ. ಇಷ್ಟಕ್ಕೇ ನಿಟ್ಟುಸಿರು ಬಿಟ್ಟು ಸುಮ್ಮನಾಗದೇ ತಾವು ಹಾಗೂ ತಮ್ಮಂತೆ ಕ್ಯಾನ್ಸರ್‌ ಗೆದ್ದವರ ಅನುಭವವನ್ನು ಸಾಮಾನ್ಯರ ಮುಂದೆ ಬಿಚ್ಚಿಡಲು ಸಿದ್ಧರಾಗಿದ್ದಾರೆ ಲತಾ.

ಕ್ಯಾನ್ಸರ್‌ ಕುರಿತ  ಮಾಹಿತಿ ನೀಡುವ ಸರಣಿ ಕಾರ್ಯಕ್ರಮವನ್ನು ದೂರದರ್ಶನಕ್ಕೆ ಸಿದ್ಧಪಡಿಸಿದ್ದಾರೆ. ವೈದ್ಯರಿಂದ ಮಾಹಿತಿ, ಕ್ಯಾನ್ಸರ್‌ ಜೊತೆಗೆ ಹೋರಾಡಿದವರ ಅನುಭವ ಎಲ್ಲವೂ ರೋಗಿಗಳಿಗೆ ಸ್ಥೈರ್ಯ ತುಂಬುವಂತಿದ್ದರೆ, ಉಳಿದವರಿಗೆ ಮಾಹಿತಿ ನೀಡುವಂತಿವೆ.

‘ಕ್ಯಾನ್ಸರ್ ಎಂಬ ಪದವನ್ನು ಕೇಳುತ್ತಿದ್ದಂತೆಯೇ ಜನ ಅರ್ಧ ಸತ್ತು ಹೋಗಿ ಬಿಡುತ್ತಾರೆ. ಇನ್ನು ಕ್ಯಾನ್ಸರ್ ಬಗೆಗಿನ ಊಹಾಪೂಹಗಳನ್ನು ಕೇಳುತ್ತ ಅನುದಿನವೂ ಸಾಯುತ್ತಾರೆ. ಪ್ರತಿ ಬಾರಿ ಆಸ್ಪತ್ರೆಗೆ ಹೋಗುವಾಗಲೂ ಆಗಲಿರುವ ನೋವನ್ನು ನೆನೆ-ನೆನೆದು ಅಳುಕುತ್ತಲೇ ಹೆಜ್ಜೆ ಇಡುತ್ತಾರೆ. ಇದೆಲ್ಲ ಮಾನಸಿಕವಾಗಿಯೂ ನಮ್ಮನ್ನು ಕುಗ್ಗುವಂತೆ ಮಾಡುತ್ತದೆ ಅಲ್ಲದೇ, ನೋವಿನ ತೀವ್ರತೆಯನ್ನೂ ಹೆಚ್ಚಿಸುತ್ತದೆ. ಇಂತಹ ಜನರಿಗೆ ಕ್ಯಾನ್ಸರ್ ಎಂದರೆ ಏನು, ಅದು ನಮ್ಮ ದೇಹದ ಮೇಲೆ, ಮನಸ್ಸಿನ ಮೇಲೆ ಹಾಗೂ ಆರೋಗ್ಯದ ಮೇಲೆ ಹೇಗೆ ಸವಾರಿ ಮಾಡುತ್ತದೆ, ಅದರ ತೀವ್ರತೆಯನ್ನು ದುರ್ಬಲಗೊಳಿಸುತ್ತ ನಾವು ಹೆಚ್ಚು ಹೆಚ್ಚು ಪ್ರಬಲರಾಗುವುದು ಹೇಗೆ ಎಂಬ ಬಗ್ಗೆ ಎಲ್ಲ ರೋಗಿಗಳಲ್ಲಿ ತಿಳಿವಳಿಕೆ ಮೂಡಿಸುವುದು ನಮ್ಮ ಮುಂದಿರುವ ಗುರಿ’ ಎನ್ನುತ್ತಾರೆ ಲತಾ.

ಕೆಲವರು ಚಿಕಿತ್ಸೆ ಹಾಗೂ ರೋಗದ ಲಕ್ಷಣಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲದೆ ರೋಗದ ಕೊನೆ ಹಂತದವರೆಗೂ ಮನೆಯಲ್ಲೇ ಉಳಿಯುತ್ತಾರೆ. ಇನ್ನೂ ಕೆಲವರು ಈ ಕಾಯಿಲೆಯಿಂದ ಸಾವು ಖಚಿತ ಚಿಕಿತ್ಸೆ ಏಕೆ ಎಂದು ಸುಮ್ಮನಾಗುತ್ತಾರೆ. ಇಂತಹವರಿಗಾಗಿ ಕ್ಯಾನ್ಸರ್‌ ಬಗ್ಗೆ ಅರಿವು ಮೂಡಿಸಲು ಕಿರುತೆರೆಯನ್ನು ಬಳಸಿಕೊಳ್ಳಲು ನಿರ್ಧರಿಸಿ, ಕ್ಯಾನ್ಸರ್‌ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ 8 ಕಂತುಗಳ ಕಾರ್ಯಕ್ರಮವನ್ನು ನಿರ್ಮಿಸಿದ್ದಾರೆ. ತಮ್ಮ ಕ್ಯಾನ್ಸರ್‌ ಕಾಯಿಲೆ ಗುಣವಾದ ನಂತರ ಒಂದು ವರ್ಷ ಈ ಕಾರ್ಯದಲ್ಲಿ ತೊಡಗಿದ್ದ ಲತಾ, ಬೆಂಗಳೂರು, ಉಡುಪಿ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಸುತ್ತಾಡಿದ್ದಾರೆ. ನೂರಾರು ಮಂದಿ ಕ್ಯಾನ್ಸರ್‌ ಬಾಧಿತರನ್ನು ಹಾಗೂ ಕ್ಯಾನ್ಸರ್‌ ರೋಗಿಗಳನ್ನು ಭೇಟಿ ಮಾಡಿದ್ದಾರೆ. ಅವರ ಅನುಭವ, ವೈದ್ಯರ ಸಲಹೆ ಹಾಗೂ ಚಿಕಿತ್ಸಾ ವಿಧಾನಗಳ ಬಗ್ಗೆ ಚಿತ್ರೀಕರಣ ಮಾಡಿದ್ದಾರೆ.

ಈ  ಕಾರ್ಯಕ್ರಮ ‘ಪ್ರಣತಿ’ ಎಂಬ ಹೆಸರಿನಲ್ಲಿ ಚಂದನದಲ್ಲಿ ಫೆ ೨೧ರಿಂದ, ರಾತ್ರಿ ೮ ರಿಂದ ೮.೩೦ಕ್ಕೆ ಚಂದನದಲ್ಲಿ ಮೂಡಿ ಬರುತ್ತಿದೆ. ‘ಪ್ರಣತಿ’ ಕಾರ್ಯಕ್ರಮದ ಮೊದಲ ಭಾಗ ೨೧ರಂದು ಯಶಸ್ವಿಯಾಗಿ ಪ್ರಸಾರಗೊಂಡಿದ್ದು, ಇನ್ನು ೭ ಭಾಗಗಳು ಮುಂದಿನ ಪ್ರತಿ ಶುಕ್ರವಾರ ಮೂಡಿ ಬರಲಿವೆ.

ಪ್ರತಿ ಕಂತು  ಕ್ಯಾನ್ಸರ್ ನ ಒಂದೊಂದು ಆಯಾಮಗಳನ್ನು ಪರಿಚಯಿಸುತ್ತದೆ. ಕ್ಯಾನ್ಸರ್‌ನಲ್ಲಿ ಎಷ್ಟು ವಿಧಗಳಿವೆ. ಯಾವ ವಯಸ್ಸಿನವರಲ್ಲಿ ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಅಂದರೆ ಮಹಿಳೆಯಲ್ಲಿ, ಮಕ್ಕಳಲ್ಲಿ, ವೃದ್ಧರಲ್ಲಿ ಹಾಗೂ ತಂಬಾಕು ಸೇವಿಸುವವರಲ್ಲಿ ಯಾವ ಯಾವ ರೀತಿಯ ಕ್ಯಾನ್ಸರ್‌ ಬರುತ್ತವೆ. ಅದರ ಲಕ್ಷಣಗಳು, ಅದನ್ನು ಪತ್ತೆ ಹಚ್ಚುವ ವಿಧಾನ ಹಾಗೂ ಅದಕ್ಕಾಗಿ ಅಭಿವೃದ್ಧಿಪಡಿಸಲಾಗಿರುವ ಅತ್ಯಾಧುನಿಕ ತಂತ್ರಜ್ಞಾನದ ಉಪಕರಣಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ.

ಕ್ಯಾನ್ಸರ್ ಬಾಧಿತರಿಗೆ ಲಭ್ಯವಿರುವ ಚಿಕಿತ್ಸೆ ಅಂದರೆ ಆರ್ಯುವೇದ, ಹೋಮಿಯೋಪಥಿ, ಯುನಾನಿ, ಟಿಬೆಟಿಯನ್ ವೈದ್ಯ ಪದ್ಧತಿ ಹಾಗೂ ಆಲೋಪಥಿಯಲ್ಲಿ ಯಾವ ಯಾವ ರೀತಿಯ ಚಿಕಿತ್ಸೆ ಲಭ್ಯವಿದೆ. ಅದಕ್ಕಾಗಿ ಸರ್ಕಾರದಿಂದ ದೊರೆಯುವ ಸವಲತ್ತುಗಳು, ವಿಮೆ ಸೌಲಭ್ಯ, ಚಿಕಿತ್ಸೆಗೆ ತಗುಲುವ ಅಂದಾಜು ವೆಚ್ಚ, ಮಧ್ಯಮ ವರ್ಗದವರು ಹಾಗೂ ಬಡತನ ರೇಖೆಗಿಂತ ಕೆಳಗಿನವರು ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯುವ ದಾರಿ ಹಾಗೂ ಬಾಧಿತರನ್ನು ಕುಟುಂಬದವರು ನೋಡಿಕೊಳ್ಳಬೇಕಾದ ರೀತಿಯ ಬಗ್ಗೆ ಸಂಪೂರ್ಣ ಮಾಹಿತಿ ಇದೆ.

ಕ್ಯಾನ್ಸರ್‌ ಚಿಕಿತ್ಸೆ ಪಡೆದ ನಂತರ ಆಗುವ ಅಡ್ಡ ಪರಿಣಾಮಗಳು, ಅವುಗಳು ಬಾರದಂತೆ ತಡೆಯುವ ವಿಧಾನ, ಅದಕ್ಕೆ ಪಡೆಯಬೇಕಾದ ಬೇರೆ ಚಿಕಿತ್ಸೆಗಳು, ಚಿಕಿತ್ಸಾ ಪದ್ಧತಿ. ಈ ಪದ್ಧತಿಗಳನ್ನು ಬಳಸಿಕೊಂಡು ಆರೋಗ್ಯವಂತರಾಗಿ ಜೀವನ ಸಾಗಿಸುತ್ತಿರುವ ಉದಾಹರಣೆಗಳನ್ನು ವೀಕ್ಷಕರಿಗಾಗಿ ನೀಡಲಾಗಿದೆ.

ಗೃಹಿಣಿಯಾಗಿರುವ ಲತಾ ಅವರು ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಿರುತೆರೆ ಕಲಾವಿದರಾಗಿದ್ದಾರೆ. ಜತೆಗೆ ಬುದ್ಧಿಮಾಂದ್ಯ ಮಕ್ಕಳ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಾರೆ. ಈ ಸಂಬಂಧ ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿದ್ದಾರೆ. ‘ಕ್ಯಾನ್ಸರ್‌ಗೆ ತುತ್ತಾದಾಗ ನಾನು ಎದುರಿಸಿದ ಸಮಸ್ಯೆ ಹಾಗೂ ಮಾನಸಿಕ ಹಿಂಸೆಯನ್ನು ಯಾರೂ ಅನುಭವಿಸ ಬಾರದು. ಅದಕ್ಕಾಗಿ ಈ ಅರಿವು ನೀಡುವ ಕಾರ್ಯಕ್ರಮವನ್ನು ನಿರ್ಮಿಸಿದ್ದೇನೆ’ ಎಂದು ಹೇಳುವಾಗ ಅವರ ಕಣ್ಣಲ್ಲಿ ಆತ್ಮವಿಶ್ವಾಸ ಹಾಗೂ ಭರವಸೆ ತುಳುಕುತ್ತಿತ್ತು.

2.9262295082
ಟಿಪ್ಪಣಿ ಸೇರಿಸು

(ಮೇಲಿನ ವಿಷಯದ ಬಗ್ಗೆ ಟಿಪ್ಪಣಿ/ ಸಲಹೆಗಳಿದ್ದರೆ, ದಯವಿಟ್ಟು ಅದನ್ನು ಇಲ್ಲಿ ಹಂಚಿಕೊಳ್ಳಿ)

Enter the word
ನೇವಿಗೇಶನ್‌
Back to top